ಅಂಕಣ

ಯಾರದೋ ದಾಳವಾಗಿ ದಂಡ ತೆರುತ್ತಿರುವ ಟ್ರೂಡೋ: ಟ್ರೂಡೋ ತರಲೆಯಾಟ ಭಾಗ 3

Ravikanth Kundapura
ಉತ್ತರ ಅಮೆರಿಕದಲ್ಲಿ ಸಕ್ರಿಯವಾಗಿರುವ ‘ಪೊಯೆಟಿಕ್’ ಜಸ್ಟಿಸ್ ಸೇರಿದಂತೆ ಹಲವಾರು ಖಲಿಸ್ತಾನಿ ಉಗ್ರಗಾಮಿ ಸಂಘಟನೆಗಳು ಬೆನ್ನಿಗಿದ್ದ, ದೇಶದಲ್ಲೇ ಇದ್ದ ಖಲಿಸ್ತಾನಿ ಉಗ್ರರು ದೊಡ್ಡದಾಗಿ ಭಾಗಿಯಾಗಿದ್ದ ತಥಾಕಥಿತ ರೈತ ಆಂದೋಲನದ ಪರವಾಗಿ (2020-21ರಲ್ಲಿ ನಡೆದ) ಹೇಳಿಕೆ ನೀಡಿದ ಜಸ್ಟಿನ್ ಟ್ರೂಡೋ, ಭಾರತ ಸರ್ಕಾರ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಮಾನ್ಯ ಮಾಡಬೇಕು ಮತ್ತು ಶಾಂತಿಯುತ ಆಂದೋಲನಗಳನ್ನು ಹಿಂಸೆಯ ಮೂಲಕ ಹತ್ತಿಕ್ಕಬಾರದು ಎಂದು ಉಪದೇಶ ನೀಡಿದರು! ತಮ್ಮ ಅಲ್ಪಸಂಖ್ಯಾತ ಲಿಬರಲ್ ಪಾರ್ಟಿ ಸರ್ಕಾರದ ಉಳಿವಿಗಾಗಿ ಖಲಿಸ್ತಾನಿ ಸಮರ್ಥಕ ಜಗ್​ವಿುೕತ್ ಸಿಂಗ್ ಧಾಲಿವಾಲ್​ನ ನ್ಯೂ ಡೆಮೋಕ್ರಾಟಿಕ್ ಪಾರ್ಟಿಯ ಮೇಲೆ ಅವಲಂಬಿತರಾಗಿರುವ ಪ್ರಧಾನಿ ಟ್ರೂಡೋ ಖಲಿಸ್ತಾನಿಗಳ ಪರವಾಗಿ ಯಾವ ಮಟ್ಟಕ್ಕೆ ಹೋಗಬಲ್ಲವರಾಗಿದ್ದರು. ಜತೆಗೆ, ಮೋದಿ-ವಿರೋಧಿಗಳು ಜಾಗತಿಕ ಮಟ್ಟದಲ್ಲಿ ಮೋದಿ-ವಿರೋಧಿ ಅಲೆಯೆಬ್ಬಿಸಲು ತಮ್ಮನ್ನು ‘ಬಳಸಿಕೊಳ್ಳಬಹುದು’ ಎಂದೂ ಟ್ರೂಡೋ ತೋರಿಸಿಕೊಟ್ಟಂತೆಯೂ ಆಗುತ್ತದೆ.

ರಾಜಕೀಯ ಸ್ವಾರ್ಥಕ್ಕಾಗಿ ಭಾರತದ ಆಂತರಿಕ ವಿಷಯದಲ್ಲಿ ಮಧ್ಯಪ್ರವೇಶಿಸುವ ಈ ಕೃತ್ಯದಿಂದ ಭಾರತದೊಂದಿಗೆ ಕೆನಡಾದ ಸಂಬಂಧವಷ್ಟೇ ಅಲ್ಲ, ಆ ದೇಶದ ಅಂತಾರಾಷ್ಟ್ರೀಯ ಸ್ಥಾನಮಾನಕ್ಕೂ ಧಕ್ಕೆಯಾಗುತ್ತಿದೆ ಎಂದು ಗುರುತಿಸಲು ಅವರು ವಿಫಲವಾದರು. ಇಂತಹ ಟ್ರೂಡೋರನ್ನು ಮೋದಿ-ವಿರೋಧಿಗಳು ಮತ್ತೊಮ್ಮೆ ಬಳಸಿಕೊಳ್ಳಲು ಪ್ರಯತ್ನಿಸಿದರೆ ಅಚ್ಚರಿಯೇನಿಲ್ಲ. ಆ ಪ್ರಯತ್ನ ಸಂಸತ್​ನ ವಿಶೇಷ ಅಧಿವೇಶನದ ಘೊಷಣೆ ಆಗಸ್ಟ್ ಅಂತ್ಯದಲ್ಲಿ ಹೊರಬರುತ್ತಿದ್ದಂತೇ ಆರಂಭವಾಯಿತು. ಎರಡು ತಿಂಗಳಿಗೂ ಹಿಂದೆ ನಡೆದಿದ್ದ ನಿಜ್ಜರ್ ಹತ್ಯೆಯ ಕುರಿತಾಗಿ ಯಾವ ಗಂಭೀರ ತನಿಖೆಯಾಗಿರದಿದ್ದರೂ, ಹತ್ಯಾಕಾರಿಗಳ ಗುರುತಾಗಲೀ, ಅವರ ವಾಹನದ ಗುರುತಾಗಲೀ ಸಿಕ್ಕಿರದಿದ್ದರೂ ಆ ಹತ್ಯೆಯಲ್ಲಿ ಭಾರತ ಸರ್ಕಾರ ಭಾಗಿಯಾಗಿದೆಯೆಂದು ಅಮೆರಿಕ ಮತ್ತು ಬ್ರಿಟಿಷ್ ಸರ್ಕಾರಗಳಿಗೆ ಹೇಳಲು ಟ್ರೂಡೋ ಏಕಾಏಕಿ ಆರಂಭಿಸಿದ್ದಾರೆ. ಅಂದರೆ ಜಿ-20 ಸಮ್ಮೇಳಕ್ಕೆ ಮೊದಲೇ ಮೋದಿ ಸರ್ಕಾರದ ಮೇಲೆ ಪ್ರಮುಖ ರಾಷ್ಟ್ರಗಳ ಸಂಶಯದ ದೃಷ್ಟಿಯನ್ನು ತಿರುಗಿಸುವ ಪ್ರಯತ್ನವಿದು.

ಈ ಪ್ರಾಥಮಿಕ ತಯಾರಿಯೊಂದಿಗೆ ಮೋದಿ-ವಿರೋಧಿಗಳ ತಾಳಕ್ಕೆ ಟ್ರೂಡೋ ಕುಣಿಯುವ ಸಂಚು ಅಂತಿಮವಾಗಿ ಪೂರ್ಣಗೊಂಡದ್ದು ಬಹುಶಃ ಜಿ-20 ಸಮಾವೇಶಕ್ಕಾಗಿ ಕೆನಡಾದ ಈ ಭೋಳೆ ಪ್ರಧಾನಿ ನವದೆಹಲಿಗೆ ಆಗಮಿಸಿದಾಗ. ಮೊದಲಿಗೆ ಭಾರತ ಸರ್ಕಾರ ಏರ್ಪಡಿಸಿದ ಔತಣಕೂಟದಲ್ಲಿ ಅವರು ಭಾಗಿಯಾಗಲಿಲ್ಲ. ಭಾರತ ಸರ್ಕಾರ ನೀಡುತ್ತಿದ್ದ ಔತಣಕ್ಕಿಂತ ‘ಮತ್ತಾರೋ’ ನೀಡಬಯಸಿದ ಔತಣ ಅವರಿಗೆ ಹೆಚ್ಚು ಮುಖ್ಯ ಅನಿಸಿತೇ? ಉಳಿದೆಲ್ಲ ಅತಿಥಿಗಳು ಮತ್ತು ಭಾರತದ ಗಣ್ಯರು ರಾಸ್ಟ್ರಪತಿ ಭವನದಲ್ಲಿ ಔತಣ ಸವಿಯುತ್ತಿದ್ದಾಗ ಟ್ರೂಡೋ ಸಾರ್ವಜನಿಕ ಕಣ್ಣಿನಿಂದ ದೂರವಾಗಿ ‘ರಹಸ್ಯ ಮಾತುಕತೆ’ಯಲ್ಲಿ ತೊಡಗಿದ್ದರೇ?

ಆ ‘ಮಾತುಕತೆ’ ಅದೊಂದೇ ಭೇಟಿಯಲ್ಲಿ ಪೂರ್ಣವಾಗಲಿಲ್ಲವೇ? ಮುಂದಿನ ಎರಡು ದಿನ ಜಿ-20 ಸಮಾವೇಶದಲ್ಲಿ ಸಾರ್ವಜನಿಕವಾಗಿ ಕಾಣಿಸಿಕೊಳ್ಳಲೇಬೇಕಾದ್ದರಿಂದ ಟ್ರೂಡೋ ಆ ‘ಮಾತುಕತೆ’ಗಳನ್ನು ಸೆಪ್ಟೆಂಬರ್ 11-12ಕ್ಕೆ ಮುಂದೂಡಿದರೇ? ಅದಕ್ಕಾಗಿ ತಮ್ಮ ವಿಮಾನ ತಾಂತ್ರಿಕ ತೊಂದರೆಗೊಳಗಾಗಿದೆ ಎಂಬ ನೆಪ ಸೃಷ್ಟಿಸಿದರೇ? ಸ್ವದೇಶಕ್ಕೆ ಹಿಂತಿರುಗಲೇಬೇಕಾಗಿದ್ದರೆ ಅವರಿಗೆ ಬೇರೆ ಮಾರ್ಗಗಳಿದ್ದವು. ಅವರದೇ ರಾಷ್ಟ್ರೀಯ ಸುರಕ್ಷಾ ಸಲಹೆಗಾರ್ತಿ ಜೋಡಿ ಥಾಮಸ್ ಆರಾಮವಾಗಿ ಲಂಡನ್​ಗೆ ತೆರಳುತ್ತಿದ್ದಾಗ ಅವರೊಂದಿಗೆ ಟ್ರೂಡೋ ಸಹ ಹೊರಟುಬಿಡಬಹುದಿತ್ತು. ಅಥವಾ ಭಾರತ ಸರ್ಕಾರ ತನ್ನ ಅತಿ ಸುರಕ್ಷಿತ ಏರ್ ಇಂಡಿಯಾ ಒನ್ ವಿಮಾನವನ್ನು ನೀಡಲು ಮುಂದೆ ಬಂದಾಗ ಅದನ್ನು ಹತ್ತಿ ಆರಾಮವಾಗಿ ಆಟ್ಟವಾ ತಲುಪಿಬಿಡಬಹುದಿತ್ತು. ಆದರೆ ಟ್ರೂಡೋರಿಗೆ ದೆಹಲಿಯಲ್ಲೇ ‘ಗುಪ್ತಸಮಾಲೋಚನೆ’ ಮುಖ್ಯವೆನಿಸಿದ್ದಿರಬಹುದು.

ಆ ‘ಗುಪ್ತಸಮಾಲೋಚನೆ’ಗೆ ಟ್ರೂಡೋ ತಯಾರಾಗಿಯೇ ಬಂದಿದ್ದಂತಿದೆ. ಅವರಿಗಾಗಿ ಭಾರತ ಸರ್ಕಾರ ಹೋಟೆಲ್ ಲಲಿತ್​ನಲ್ಲಿ ಸಿದ್ಧಪಡಿಸಿದ್ದ ಸುವ್ಯವಸ್ಥಿತ ನಿವಾಸವನ್ನು ಅವರು ನಿರಾಕರಿಸಿದ್ದೇಕೆ? ಆ ನಿವಾಸದಲ್ಲಿ ತಮ್ಮ ಮಾತುಗಳನ್ನು ಕದ್ದಾಲಿಸುವ ವ್ಯವಸ್ಥೆಯನ್ನು ಭಾರತ ಸರ್ಕಾರ ಮಾಡಿರಬಹುದು ಎಂದವರು ಶಂಕಿಸಿದರೇ? ಹೀಗಾಗಿಯೇ ಅವರು ರಹಸ್ಯ ಮಾತುಕತೆಗಳನ್ನು ತಾವು ನಿರಾತಂಕವಾಗಿ ನಡೆಸಬಹುದು ಎಂದು ತಮಗೆ ನಂಬಿಕೆಯಾದ ಸಾಮಾನ್ಯ ಕೋಣೆಯನ್ನು ಆಯ್ದುಕೊಂಡರೇ?

ನವದೆಹಲಿಯಲ್ಲಿ ನಡೆದ ತಯಾರಿ ಅಂತಿಮರೂಪ ಪಡೆದದ್ದು ವ್ಯಾಂಕ್ಯೂವರ್ ಮತ್ತು ಆಟ್ಟವಾದಲ್ಲಿ. ಒಂದು ವರದಿಯ ಪ್ರಕಾರ ಸೆ .16ರ ಸಂಜೆ ವ್ಯಾಂಕೂವರ್ ನಗರದ ಹೋಟೆಲ್ ಒಂದರ ಕಾಫಿ ಕ್ಲಬ್​ನಲ್ಲೊಂದು ಸಭೆ ಜರುಗಿತು. ಅದರಲ್ಲಿ ಭಾಗಿಯಾಗಿದ್ದವರಲ್ಲಿ ಮೂವರ ಹೆಸರುಗಳು ನಮಗೆ ಮುಖ್ಯವಾಗುತ್ತವೆ. ಅವರಲ್ಲಿ ಇಬ್ಬರು ಕೆನಡಾದಲ್ಲಿರುವ ಪಾಕ್ ಐಎಸ್​ಐ ಹಸ್ತಕರಾದ ರಾಹತ್ ರಾವ್ ಮತ್ತು ತಾರಿಖ್ ಕಯಾನಿ. ಮೂರನೆಯ ವ್ಯಕ್ತಿ ಕೆನಡಾ ಸಂಸದ ಮತ್ತು ಟ್ರೂಡೋರಿಗೆ ಹತ್ತಿರವಾಗಿರುವ ಸುಖ್ ಧಾಲಿವಾಲ್. ಈತ ಪಾಕ್ ಐಎಸ್​ಐ ಜತೆ ಸಂಬಂಧ ಹೊಂದಿದ್ದಾನೆ ಎನ್ನಲಾಗಿದ್ದು, ಆ ದೇಶಕ್ಕೆ ಹಲವು ಬಾರಿ ಭೇಟಿ ನೀಡಿದ್ದಾನೆ. ತೀರಾ ಇತ್ತೀಚಿನ ಭೇಟಿ ಇದೇ ಮೇ ತಿಂಗಳಲ್ಲಿ ನಡೆದಿದೆ. ಈ ಹಿನ್ನೆಲೆಯುಳ್ಳ ಈತ ಕೆನಡಾದಲ್ಲಿರುವ ಐಎಸ್​ಐ ಏಜೆಂಟರಾದ ರಾಹತ್ ರಾವ್ ಮತ್ತು ತಾರಿಖ್ ಕಯಾನಿ ಜತೆಗೂ ಘನಿಷ್ಟ ಸಂಬಂಧ ಹೊಂದಿರುವುದು ಸಹಜ.

ಸುಖ್ ಧಾಲಿವಾಲ್ ‘ನ್ಯೂ ಡೆಮೋಕ್ರಾಟಿಕ್ ಪಾರ್ಟಿ’ಯ ಅಧ್ಯಕ್ಷ ಜಗ್​ವಿುೕತ್ ಸಿಂಗ್ ಧಾಲಿವಾಲ್​ಗೂ ನಿಕಟ ಸಂಬಂಧ ಹೊಂದಿರುವ ವ್ಯಕ್ತಿ. ಟ್ರೂಡೋ ತಮ್ಮ ಸರ್ಕಾರದ ಉಳಿವಿಗಾಗಿ ಧಾಲಿವಾಲ್​ರ ಮೇಲೆ ಅವಲಂಬಿತರಾಗಿದ್ದಾರೆ.

ಕಾಫಿ ಕ್ಲಬ್ ಸಭೆಯ ನಂತರ ಅದೇ ಜಗ್​ವಿುೕತ್ ಸಿಂಗ್ ಧಾಲಿವಾಲ್​ಗೆ ಸುಖ್ ಧಾಲಿವಾಲ್ ಪೂರ್ಣ ವಿವರ ರವಾನಿಸಿ ಟ್ರೂಡೋರ ಸೆಪ್ಟೆಂಬರ್ 18ರ ನಾಟಕದ ಅಂತಿಮ ತಯಾರಿ ಪೂರ್ಣಗೊಳಿಸಿದ್ದಾನೆ. ಆಮೇಲೆ ಸೆಪ್ಟೆಂಬರ್ 18ರಂದು ಟ್ರೂಡೋ ಹೇಳಿದ್ದು, ಅವರ ಮಾತುಗಳನ್ನು ವಿದೇಶ ಮಂತ್ರಿ ಮೆಲೋನಿ ಜೋಲಿ ಗಿಳಿಪಾಠದಂತೆ ಪುನರುಚ್ಚರಿಸಿದ್ದು ಗೊತ್ತೇ ಇದೆ. ಆದರೆ, ಇಷ್ಟೆಲ್ಲ ಹಗರಣ ಆದಮೇಲೆ ಧಾಲಿವಾಲ್ ಕೆನಡಿಯನ್ ಸಂಸತ್​ನ ಕೆಳಮನೆಯ ‘ವಲಸೆ’ ವಿಷಯಗಳಿಗಾಗಿ ಇರುವ ಸ್ಥಾಯಿ ಸಮಿತಿಯ ಚೇರ್ಮನ್ ಆಗಿ ನೇಮಕಗೊಂಡಿದ್ದಾನೆ.

ಜಸ್ಟಿನ್ ಟ್ರೂಡೋ ಮತ್ತಾರದೋ ಕೈಗೊಂಬೆಯಾಗಿ ತನ್ನ ಯೋಜನೆಗಳಿಗೆ ಕಲ್ಲು ಹಾಕಿದ್ದು, ಅದಕ್ಕಾಗಿ ಸೆಪ್ಟೆಂಬರ್ 8-12ರಂದು ನವದೆಹಲಿಯಲ್ಲಿ ನಡೆದಿರುವ ‘ತಯಾರಿಗಳು’ ಭಾರತ ಸರ್ಕಾರದ ಗಮನಕ್ಕೆ ಬಂದೇ ಇರುತ್ತದೆ. ಟ್ರೂಡೋ ಸರ್ಕಾರದ ವಿರುದ್ಧ ಮೋದಿ ಸರ್ಕಾರ ತೆಗೆದುಕೊಳ್ಳುತ್ತಿರುವ ಕಠಿಣ ಕ್ರಮಗಳು ಅದರ ಪಿತ್ತ ಯಾವ ಮಟ್ಟಕ್ಕೆ ಕದಡಿರಬಹುದೆನ್ನುವುದನ್ನು ಸೂಚಿಸುವಂತಿವೆ. ಟ್ರೂಡೋ ಮಾಡಿದ ಆಪಾದನೆಯನ್ನು ಭಾರತೀಯ ವಿದೇಶಾಂಗ ಇಲಾಖೆ ಬಣ್ಣಿಸಿದ್ದು ಅರ್ಥಹೀನ ಮತ್ತು ದುರುದ್ದೇಶಪೂರಿತ ಎಂಬ ಕಟುನುಡಿಗಳ ಮೂಲಕ ಅಷ್ಟೇ ಅಲ್ಲ, ತನ್ನ ಅಸಮಾಧಾನವನ್ನು ರಾಜತಾಂತ್ರಿಕವಾಗಿ ತಲುಪಿಸಲು ಅದು ನವದೆಹಲಿಯಲ್ಲಿನ ಕೆನಡಾದ ರಾಯಭಾರಿಯನ್ನು ತನ್ನ ಕಚೇರಿಗೆ ಕರೆಯಿತು. ಆಗಮಿಸಿದ ರಾಯಭಾರಿ ಕ್ಯಾಮೆರಾನ್ ಮ್ಯಾಕೆ ನಮ್ಮ ವಿದೇಶ ಸಚಿವಾಲಯದಲ್ಲಿ ಕಳೆದದ್ದು ನಾಲ್ಕೇ ನಿಮಿಷಗಳು! ಅಂದರೆ ಅವರಿಗೆ ಅಲ್ಲಿ ಅವರಿಗೆ ಔಪಚಾರಿಕ ಚಹಾಪಾನವೂ ಆಗಿಲ್ಲ, ಬಹುಶಃ ರಾಜತಾಂತ್ರಿಕ ಗೌರವವೂ ದೊರೆತಿಲ್ಲ. ಇದು ಗೊತ್ತಾಗುವುದು ಸಚಿವಾಲಯದಿಂದ ಹೊರಗೆ ಬಂದ ಅವರು ಪತ್ರಕರ್ತರ ಪ್ರಶ್ನೆಗಳನ್ನು ನಿರ್ಲಕ್ಷಿಸಿ ತಮ್ಮ ಕಾರ್​ನ ಬಾಗಿಲನ್ನು ದಢಾರನೆ ಮುಚ್ಚಿಕೊಂಡು ಜಾಗ ಖಾಲಿಮಾಡಿದ ಬಗೆಯಿಂದ.

ತನ್ನ ವಾಗ್ದಾಳಿಯನ್ನು ಮುಂದುವರಿಸಿದ ಭಾರತ ಸರ್ಕಾರ, ‘ಕೆನಡಾದಲ್ಲಿ ಭಯೋತ್ಪಾದನೆ ಮತ್ತು ಸಂಘಟಿತ ಅಪರಾಧಗಳು ನಡೆಯುತ್ತಿವೆ; ಭಾರತೀಯರ ವಿರುದ್ಧ ರಾಜಕೀಯ ಪ್ರೇರಿತ ದಾಳಿಗಳು ನಡೆಯುತ್ತಿವೆ’ ಎಂದು ಹೇಳಿ ಕೆನಡಾದಲ್ಲಿರುವ ಭಾರತೀಯ ನಾಗರಿಕರು ಎಚ್ಚರಿಕೆಯಿಂದಿರಬೇಕೆಂದು ಪ್ರಕಟಣೆ ಹೊರಡಿಸಿತು. ಇಂತಹ ಪ್ರಕಟಣೆಯನ್ನು ಭಾರತ ಸರ್ಕಾರ ಪಾಕಿಸ್ತಾನದ ಕುರಿತಾಗಿ ಹೊರಡಿಸಿಲ್ಲ ಎಂಬ ವಾಸ್ತವ ಇಂದು ಕೆನಡಾದ ಟ್ರೂಡೋ ಸರ್ಕಾರದ ಬಗ್ಗೆ ಭಾರತ ಸರ್ಕಾರದ ಅಸಹನೆ ಅದೆಷ್ಟು ಮಟ್ಟಕ್ಕೇರಿದೆ ಎನ್ನುವುದನ್ನು ಸೂಚಿಸುತ್ತದೆ. ಜತೆಗೆ ಭಾರತಕ್ಕೆ ಬರಲು ಕೆನಡಾದ ನಾಗರಿಕರಿಗೆ ಕೆನಡಾದಲ್ಲಾಗಲೀ, ಇತರ ಯಾವುದೇ ಮೂರನೆಯ ದೇಶದಲ್ಲಾಗಲೀ ವೀಸಾ ನೀಡುವುದನ್ನೂ ಭಾರತ ನಿಲ್ಲಿಸಿದೆ.

ತಪ್ಪು ತಿದ್ದಿಕೊಳ್ಳುವಂತೆ ಕಂಡ ಟ್ರೂಡೋ ಭಾರತದೊಂದಿಗೆ ತಾವು ರಚನಾತ್ಮಕ ಸಂಬಂಧಗಳನ್ನು ಹೊಂದುವ ಮಾತುಗಳನ್ನಾಡಿದರು. ಅವರ ವಿದೇಶಮಂತ್ರಿ ಜೋಲಿ ಬಾಯಿ ಹಾಕಿ, ಭಾರತದೊಂದಿಗೆ ಖಾಸಗಿಯಾಗಿ ಮಾತಾಡಲು ತಮ್ಮ ಸರ್ಕಾರ ಬಯಸುತ್ತದೆ ಎಂದು ಹೇಳಿದರು! ಸಾರ್ವಜನಿಕವಾಗಿ ಆಪಾದನೆ ಮಾಡಿ ಈಗ ಖಾಸಗಿಯಾಗಿ ಮಾತಾಡಬಯಸುವ ಈ ಪ್ರಸ್ತಾಪಕ್ಕೆ ಭಾರತ ಪ್ರತಿಕ್ರಿಯಿಸಿದ್ದು ಭಾರತದಲ್ಲಿ ಹೆಚ್ಚುವರಿಯಾಗಿರುವ ತನ್ನ 41 ರಾಜತಂತ್ರಜ್ಞರನ್ನು ಕೆನಡಾ ಹಿಂದಕ್ಕೆ ಕರೆಸಿಕೊಳ್ಳುವಂತೆ ಆದೇಶ ನೀಡಿ! ತರಾತುರಿಯಲ್ಲಿ ಟ್ರೂಡೋ ಸರ್ಕಾರ ಕಾರ್ಯಪ್ರವೃತ್ತವಾಗಿ ತನ್ನ ಹೆಚ್ಚುವರಿ ರಾಜತಂತ್ರಜ್ಞರನ್ನು ಮಲೇಷ್ಯಾ ಮತ್ತು ಸಿಂಗಾಪುರಗಳಿಗೆ ಕಳಿಸಿದೆ.

ಮೋದಿ ಸರ್ಕಾರದ ಯಾವುದೇ ಯೋಜನೆಯನ್ನು ಅವರ ವಿರೋಧಿಗಳ ದಾಳವಾಗಿ ಟ್ರೂಡೋ ತಡೆದಿದ್ದರೆ ಅದು ತಾತ್ಕಾಲಿಕವಷ್ಟೇ. ತನ್ನ ಯೋಜನೆಗಳನ್ನು ಮೋದಿ ಸರ್ಕಾರ ಸೂಕ್ತ ಸಮಯದಲ್ಲಿ ಜಾರಿಗೆ ತಂದೇ ತರುತ್ತದೆ. ಆದರೆ ಈ ಕೃತ್ಯದಿಂದಾಗಿ ಟ್ರೂಡೋ ರಾಜಕೀಯ ಭವಿಷ್ಯಕ್ಕೆ ಶಾಶ್ವತವಾಗಿ ಕಲ್ಲುಹಾಕಿಕೊಂಡಿದ್ದಾರೆ. ಅವರ ಈ ಬಾಲಿಶ ಕೃತ್ಯದಿಂದಾಗಿ ಸ್ವದೇಶದಲ್ಲೇ ಅವರ ಜನಪ್ರಿಯತೆ ಇಳಿದುಹೋಗಿದೆ. ಮುಂದಿನ ಎರಡು ವರ್ಷಗಳಲ್ಲಿ ನಡೆಯಲಿರುವ ಚುನಾವಣೆಗಳಲ್ಲಿ ಅವರು ಅಧಿಕಾರ ಕಳೆದುಕೊಳ್ಳಬಹುದು ಅಥವಾ ಚುನಾವಣೆಗಳಿಗೆ ಮೊದಲೇ ಅವರನ್ನು ಅವರದೇ ಪಕ್ಷ ನಾಯಕನ ಸ್ಥಾನದಿಂದ ಕೆಳಗಿಳಿಸಬಹುದು ಎಂಬ ಮಾತುಗಳು ಕೇಳಿಬರುತ್ತಿವೆ.

ತನ್ನ ಕೃತ್ಯಕ್ಕೆ ಅಮೆರಿಕ ಸೇರಿ ಯಾವುದೇ ಮಿತ್ರರಾಷ್ಟ್ರದಿಂದ ಬೆಂಬಲ ಸಿಗದೇ ಹೋದಾಗ ಅದನ್ನು ಬೇರೆಡೆ ಪಡೆಯುವ ಮೂರ್ಖತನಕ್ಕೆ ಟ್ರೂಡೋ ತೊಡಗಿದ ವರದಿಗಳು ಬಂದಿವೆ. ಭುಗಿಲೆದ್ದ ಹಮಾಸ್ -ಇಸ್ರೇಲ್ ಕದನದ ಬಗ್ಗೆ ಮಾತಾಡುವ ನೆಪದಲ್ಲಿ ಯುಎಇ ಅಧ್ಯಕ್ಷರು ಮತ್ತು ಜೋರ್ಡಾನ್​ನ ಅರಸರಿಗೆ ಕರೆ ಮಾಡಿ ನಿಜ್ಜರ್ ಹತ್ಯೆ ವಿಷಯವನ್ನು ಅವರೊಂದಿಗೆ ಪ್ರಸ್ತಾಪಿಸಿದಾರೆ! ವರದಿಗಳ ಪ್ರಕಾರ ಅವರ ಪ್ರಯತ್ನಕ್ಕೆ ಆ ಪಶ್ಚಿಮ ಏಷ್ಯಾ ನಾಯಕರಿಂದ ಯಾವ ಸಂವೇದನೆಯೂ ವ್ಯಕ್ತವಾಗಿಲ್ಲ.

ಈ ನಡುವೆ ಕೆನಡಾ ಸೇರಿದಂತೆ ವಿದೇಶಗಳಲ್ಲಿದ್ದುಕೊಂಡು ಭಾರತ-ವಿರೋಧಿ ಚಟುವಟಿಕೆಗಳಲ್ಲಿ ತೊಡಗಿರುವ 385 ಭಾರತೀಯ ಮೂಲದ ಜನರಿಗೆ ನೀಡಲಾಗಿದ್ದ ಭಾರತದ ಸಾಗರೋತ್ತರ ಪ್ರಜೆ ಮತ್ತು ಭಾರತೀಯ ಮೂಲದ ವ್ಯಕ್ತಿ ಗುರುತುಪತ್ರಗಳನ್ನು ಭಾರತ ಸರ್ಕಾರ ರದ್ದುಮಾಡಿದೆ. ಅಂದರೆ ಇನ್ನು ಮುಂದೆ ಆ ಜನ ಬೇಕೆಂದಾಗ ಭಾರತಕ್ಕೆ ಬರುವ ಹಾಗಿಲ್ಲ. ಅಂತಹ ಕೆಲವರು ಭಾರತದಲ್ಲಿ ಹೊಂದಿರುವ ಆಸ್ತಿಪಾಸ್ತಿಗಳನ್ನು ಮಟ್ಟುಗೋಲು ಹಾಕಿಕೊಳ್ಳುವ ಕೆಲಸವೂ ಆರಂಭವಾಗಿದೆ.

ಇಲ್ಲಿ ಕುತೂಹಲ ಮೂಡಿಸುವ ಇನ್ನೊಂದು ವಿಷಯವೆಂದರೆ, ಮೋದಿ ಸರ್ಕಾರದ ಎಲ್ಲ ನಡೆಗಳನ್ನೂ ಪ್ರಶ್ನಿಸಿ ಸುದ್ದಿ ಮಾಡುವ ಇಲ್ಲಿನ ಮೋದಿ-ವಿರೋಧಿಗಳು ಪ್ರಸಕ್ತ ಭಾರತ-ಕೆನಡಾ ವಿರಸದ ಬಗ್ಗೆ ಬಾಯಿಯನ್ನೇ ತೆರೆಯದಿರುವುದು! ಟ್ರೂಡೋರನ್ನು ಬಳಸಿಕೊಂಡಿರಬಹುದಾದವರ ಸುಳಿವು ಇದರಿಂದ ನಮಗೆ ದೊರೆಯಬಹುದು. ಮೋದಿ ಸರ್ಕಾರಕ್ಕಂತೂ ಸ್ಪಷ್ಟವಾಗಿಯೇ ತಿಳಿದಿರಲೂ ಸಾಧ್ಯ ಇವರಿಗೇನು ಗತಿ ಕಾದಿದೆ? ಟ್ರೂಡೋ ಸರ್ಕಾರದ ಮತ್ತು ಕೆನಡಾದಲ್ಲಿರುವ ಭಾರತ-ವಿರೋಧಿಗಳ ಬಗ್ಗೆ ಅಭೂತಪೂರ್ವ ಕಠಿಣ ಕ್ರಮಗಳಿಗೆ ಮುಂದಾಗುತ್ತಿರುವ ಮೋದಿ ಸರ್ಕಾರ ಇವರ ರೆಕ್ಕೆಪುಕ್ಕಗಳನ್ನು ಯಾವಾಗ, ಹೇಗೆ ಕತ್ತರಿಸಬಹುದು?

(ಲೇಖಕರು ರಾಜಕೀಯ ವಿಶ್ಲೇಷಕರು, ಕನ್ನಡ ಕತೆಗಾರರು)