2. ಸಾಮಾಜಿಕ ಮೌಲ್ಯ: ನಾವು ಎಷ್ಟು ಜನರಿಂದ ಉಪಕೃತರಾಗಿದ್ದೇವೆ ಅನ್ನುವುದಕ್ಕಿಂತ, ನಾವು ಎಷ್ಟು ಜನರಿಗೆ ಉಪಕಾರಿಗಳಾಗಿದ್ದೇವೆ ಅನ್ನುವುದು ನಮ್ಮ ಜೀವನದ ಸಾರ್ಥಕತೆಯ ಅಳತೆಗೋಲು. ಇದು ಮೌಲ್ಯಾಧಾರಿತ ಸಾಮಾಜಿಕ ಜೀವನವನ್ನು ನಡೆಸುವುದರಿಂದ ಮಾತ್ರ ಸಾಧ್ಯ. ಜಾತ್ಯತೀತ ಮನೋಭಾವ, ಪರಧರ್ಮ ಸಹಿಷ್ಣುತೆ, ಎಲ್ಲರ ಮೇಲೆ ಪ್ರೀತಿ, ಸಮದೃಷ್ಟಿ, ಪ್ರೇಮದೃಷ್ಟಿ, ವಿಶಾಲದೃಷ್ಟಿ, ಮುಂತಾದ ಸಾಮಾಜಿಕ ಕಳಕಳಿಯೇ ನಾವು ಅನುಸರಿಸಬೇಕಾದ ಸಾಮಾಜಿಕ ಮೌಲ್ಯಗಳು. ನಮಗೆ ಕೇಡು ಬಯಸುವವರ ಮೇಲೂ ಸೇಡು ತೀರಿಸಿಕೊಳ್ಳಬಾರದು. ಸಮಾಜದಲ್ಲಿ ಪರಸ್ಪರ ಪ್ರೀತಿ ವಿಶ್ವಾಸ-ಗೌರವದಿಂದ, ಸಹಕಾರ ಸಹಾಯಹಸ್ತದಿಂದ ನಡೆದುಕೊಳ್ಳುವುದೇ ನಮ್ಮ ಸಾಮಾಜಿಕ ಜೀವನವಾಗಿರಬೇಕು. ಈ ಹಿನ್ನೆಲೆಯಲ್ಲಿ ನಮ್ಮ ಸಾಮಾಜಿಕ ಮೌಲ್ಯ ಬಲವಾಗಿರಲಿ, ಭದ್ರವಾಗಿರಲಿ. ನಾವು ಗೈದ ಕೆಲಸಗಳಿಗೆ ಸಮಾಜದಿಂದ ಮೆಚ್ಚುಗೆ ಸಿಕ್ಕಿದರೆ ಅದು ಮಾನ್ಯತೆ. ಅದರಿಂದ ನಮಗೆ ಆತ್ಮಾನಂದವಾದರೆ ಅದು ಧನ್ಯತೆ.
3. ರಾಷ್ಟ್ರೀಯ ಮೌಲ್ಯ: ಯಾವ ಮಣ್ಣಿನಲ್ಲಿ ಜನನಕ್ಕೆ ಬಂದು, ಯಾವ ಮಣ್ಣಿನ ನೀರಿನಲ್ಲಿ ಮಿಂದು, ಯಾವ ಮಣ್ಣಿನ ಕೂಳನ್ನು ತಿಂದು, ಯಾವ ಮಣ್ಣಿನ ಕೃಪೆಯಿಂದ ಬಾಳಿ ಬೆಳೆದು ಬಂದು ಮತ್ತೆ ಯಾವ ಮಣ್ಣಲ್ಲೇ ಮಣ್ಣಾಗಲಿದ್ದೇವೋ ಒಂದು ದಿನದಂದು, ಅಂತಹ ಮಾತೃಭೂಮಿಯ ಋಣ ನಮ್ಮೆಲ್ಲರ ತಲೆಯ ಮೇಲಿದೆ. ಆದ್ದರಿಂದ ಪ್ರಶ್ನಾತೀತವಾದ ದೇಶಭಕ್ತಿ ನಮ್ಮದಾಗಲಿ- ದೇಶ ನಮಗೆ ಏನು ಕೊಟ್ಟಿದೆ ಎನ್ನುವ ಬದಲು ದೇಶಕ್ಕೆ ನಾವು ಏನು ಕೊಡಬಲ್ಲೆವು ಎನ್ನುವ ಚಿಂತನೆ ನಮ್ಮದಾಗಲಿ. ‘ಕಾರಣ ದೇಶವೊಂದಳಿಯೆ ಉಳಿದವರು ಯಾರು? ದೇಶವೊಂದುಳಿಯೆ ಅಳಿದವರು ಯಾರು?’ ‘ಮೂರು ಸಾಗರ, ನೂರು ಮಂದಿರ, ದೈವ ಸಾಸಿರವಿದ್ದರೂ ಗಂಗೆ ಗಿರಿ ಹಿಮಾಲಯ ವೇದ ಘನ ಪರಂಪರೆ ಎಲ್ಲ ಇದ್ದರೂ ಏನು ಪ್ರಯೋಜನ ಮನೆಯ ಮಕ್ಕಳೇ ನಿದ್ರಿಸುತ್ತಿದ್ದರೆ?’ ಎಂಬ ಕವಿಯ ಮಾತಲ್ಲೂ ರಾಷ್ಟ್ರದ ಬಗ್ಗೆ ಕಳಕಳಿ ಇದೆ. ಭಾರತವ ಉಳಿದೆನಗೆ ಅನ್ಯ ಜೀವನವಿಲ್ಲ...ಭಾರತವೇ ಎನಗಾಯ್ತು ಕಣ್ಣು ಕಿವಿ ಬಾಯಿ ಎಂಬ ರಾಷ್ಟ್ರಪ್ರೇಮ ನಮ್ಮದಾಗಲಿ, ಇದುವೇ ಭಾರತೀಯರೆಲ್ಲರಿಗೂ ಇರಬೇಕಾದ ರಾಷ್ಟ್ರೀಯಮೌಲ್ಯ. ಒಟ್ಟಿನಲ್ಲಿ ನಮ್ಮ ಸೌಕರ್ಯ ಸೌಲಭ್ಯಗಳು ಆಧುನಿಕವಾಗಿರಲಿ; ನವೀನವಾಗಿರಲಿ ಆದರೆ ನಮ್ಮ ಮೌಲ್ಯಗಳು ಮಾತ್ರ ಸನಾತನ ಧರ್ಮ ಮತ್ತು ಭಾರತೀಯ ಸಂಸ್ಕೃತಿಗೆ ಅನುಗುಣವಾಗಿರಲಿ.