ಅಂಕಣ

ನಿಂದಕರಿರಬೇಕು ಜಗದೊಳು: ಮನೋಲ್ಲಾಸ

| ಮಹಾದೇವ ಬಸರಕೋಡ

ರಾಜನೊಬ್ಬ ಮಂತ್ರಿಯನ್ನು ಕರೆದು ರಾಜ್ಯದ ತುಂಬೆಲ್ಲ ಮಾರುವೇಷದಲ್ಲಿ ಸಂಚಾರ ಮಾಡಿ ತನ್ನನ್ನು ಅತ್ಯಂತ ಕೆಟ್ಟದಾಗಿ ಬಿಂಬಿಸುವ, ತನ್ನ ಕಾರ್ಯಚಟುವಟಿಕೆಗಳನ್ನು ನಿರ್ದಯವಾಗಿ ಟೀಕಿಸುವ, ತನ್ನ ದೌರ್ಬಲ್ಯವನ್ನು ಕುರಿತು ಮಾತನಾಡುವ, ಮುಜುಗರ ಉಂಟು ಮಾಡುವ, ತನ್ನ ವ್ಯಕ್ತಿತ್ವಕ್ಕೆ ಮಸಿಬಳಿಯುವ ಜನರ ಪಟ್ಟಿಯನ್ನು ತಯಾರಿಸಿ ತರುವಂತೆ ತಿಳಿಸಿದ. ಮಂತ್ರಿ ಸುಮಾರು ದಿನಗಳ ಕಾಲ ಸಂಚರಿಸಿ ಅಂಥವರ ಹೆಸರನ್ನೆಲ್ಲ ದೊಡ್ಡದಾಗಿ ಪಟ್ಟಿ ಮಾಡಿ ತಂದು ರಾಜನಿಗೆ ಸಲ್ಲಿಸಿದ. ಪಟ್ಟಿ ಬಹಳಷ್ಟು ದೊಡ್ಡದಿದ್ದ ಕಾರಣ ಅದರಲ್ಲಿ ತುಂಬಾ ಕಟುವಾಗಿ ಟೀಕೆ ಮಾಡುವವರನ್ನು ಗುರುತಿಸಿ ಕಿರುಪಟ್ಟಿಯನ್ನು ತಯಾರಿಸಿ ತರಲು ತಿಳಿಸಿದ. ಮತ್ತೆ ಪಟ್ಟಿಯನ್ನು ಕಿರುದುಗೊಳಿಸಿ ತಂದಾಗ ರಾಜ, ಅತ್ಯಂತ ನಿರ್ದಯವಾಗಿ ಟೀಕಿಸುವ, ಅವಹೇಳನ ಮಾಡುವ ಸದಾ ನನ್ನನ್ನು ನಿಂದಿಸುವ ವ್ಯಕ್ತಿಗಳನ್ನು ಮಾತ್ರ ಗುರುತಿಸಿ ಇನ್ನಷ್ಟು ಕಿರಿದುಗೊಳಿಸಿ ಪಟ್ಟಿಯನ್ನು ತಯಾರಿಸಿ ತರುವಂತೆ ತಿಳಿಸಿದ.

ಹೀಗೆಯೇ ಹಲವಾರು ಬಾರಿ ಪಟ್ಟಿಯನ್ನು ಸಾಧ್ಯವಾದಷ್ಟು ಕಿರಿದುಗೊಳಿಸಿ ಮಂತ್ರಿ ರಾಜನ ಕೈಗೆ ಪಟ್ಟಿಯನ್ನು ಕೊಟ್ಟಾಗ ರಾಜ ಮತ್ತೆ ಇದರಲ್ಲಿ ಅತ್ಯಂತ ಸೂಕ್ತವಾದ ಒಂದು ಹೆಸರನ್ನು ಮಾತ್ರ ಹೆಸರನ್ನು ಹೇಳು ಎಂದ. ಆಗ ಬಹಳಷ್ಟು ಯೋಚನೆ ಮಾಡಿ, ಕೆಲವು ದಿನಗಳ ನಂತರ ಮಂತ್ರಿ ಒಬ್ಬ ವ್ಯಕ್ತಿಯ ಹೆಸರನ್ನು ರಾಜನಿಗೆ ತಿಳಿಸಿದ. ಮಂತ್ರಿ ಅವನಿಗೆ ಮರಣ ದಂಡನೆ ನಿಶ್ಚಿತವೆಂದು ಭಾವಿಸಿ ‘ರಾಜರೇ, ಇವನಿಗೆ ಗಲ್ಲು ಶಿಕ್ಷೆ ನೀಡಲು ವ್ಯವಸ್ಥೆ ಮಾಡಲೇ?’ ಎಂದು ಕೇಳಿದ. ಆಗ ರಾಜ ‘ಇಲ್ಲ ! ಅವನಿಗೆ ಅಂಥ ಯಾವುದೇ ಶಿಕ್ಷೆ ಕೊಡುವುದಿಲ್ಲ. ಅವನನ್ನು ಇಂದಿನಿಂದ ನನ್ನ ಆಪ್ತ ಸಲಹೆಗಾರನನ್ನಾಗಿ ನೇಮಕ ಮಾಡಿಕೊಳ್ಳುತ್ತೇನೆ. ಅವನಿಗೆ ಎಲ್ಲ ಸಹಾಯ, ಸೌಲಭ್ಯಗಳನ್ನು, ಕೈತುಂಬ ಸಂಬಳವನ್ನು ನೀಡಿ ಗೌರವಿಸುತ್ತೇನೆ. ಈಗಲೇ ಹೋಗಿ ಅವನನ್ನು ರಾಜಮರ್ಯಾದೆಯಿಂದ ಅರಮನೆಗೆ ಕರೆದುಕೊಂಡು ಬನ್ನಿ’ ಎಂದು ಹೇಳಿದ. ಮಂತ್ರಿ ಏನೊಂದು ತೋಚದೇ ಪ್ರಶ್ನಾರ್ಥಕವಾಗಿ ರಾಜನ ಮುಖವನ್ನು ನೋಡಿದಾಗ ರಾಜ, ‘ಅತ್ಯಂತ ಕಟುವಾಗಿ ಟೀಕೆ ಮಾಡುವ, ನನ್ನ ಮನಸ್ಸಿಗೆ ಕಿರಿಕಿರಿಯುಂಟು ಮಾಡುವ ವ್ಯಕ್ತಿ ನಿಜ ಅರ್ಥದಲ್ಲಿ ನನ್ನ ದೌರ್ಬಲ್ಯಗಳನ್ನು ಎತ್ತಿ ತೋರಿಸುವವ. ಅವನೇ ನನ್ನ ನಿಜವಾದ ಹಿತೈಷಿ, ನನ್ನ ದೌರ್ಬಲ್ಯಗಳನ್ನು ನಾನು ಮೀರಿ ನಿಲ್ಲಬಲ್ಲ, ನನ್ನಲ್ಲಿ ಅಡಗಿದ ನೈಜ ಸಾಮರ್ಥ್ಯ ಗಳಿಸಲು ದಾರಿ ತೋರಿಸಬಲ್ಲ ಮಾರ್ಗದರ್ಶಿ. ಹಾಗಾಗಿ ಅವನನ್ನು ಗೌರವಿಸುತ್ತೇನೆ’ ಎಂದ.

ನಮ್ಮ ಸಮಸ್ಯೆಗಳನ್ನು ಗುರುತಿಸಿ ನಮಗೆ ತೋರಿಸುವ, ವಿಶದೀಕರಿಸುವ, ಟೀಕೆಗಳನ್ನು, ಕಿರಿಕಿರಿಗಳನ್ನು ಮುಕ್ತ ಮನಸ್ಸಿನಿಂದ ಸ್ವೀಕರಿಸಬೇಕು. ಜರಿದವರೆನ್ನ ಜನ್ಮಬಂಧುಗಳೆಂಬೆ ಎಂಬ ಬಸವಣ್ಣನವರ ಮಾತು ಕೂಡ ತೆಗಳಿದವರು ನಮ್ಮ ಅಂತಃಪ್ರತಿಭೆಯನ್ನು ಅನಾವರಣಗೊಳಿಸುತ್ತಾರೆ ಎಂಬ ಸತ್ಯವನ್ನು ಪುಷ್ಟೀಕರಿಸುತ್ತದೆ. ನಮ್ಮ ಅಂತರಂಗದಲ್ಲಿನ ಪ್ರತಿಭೆಯನ್ನು ಪುಟಕ್ಕಿಕ್ಕಲು ನಿಂದಕರು ನಿಜಕ್ಕೂ ಕಾರಣರಾಗಬಲ್ಲರು ಎಂಬ ಸತ್ಯದ ಹಿನ್ನೆಲೆಯಲ್ಲಿಯೇ ದಾಸರು ನಿಂದಕರಿರಬೇಕು ಜಗದೊಳು ಎಂಬ ಮಾತು ಅರ್ಥಪೂರ್ಣವೆನಿಸುತ್ತದೆ.

(ಲೇಖಕರು ಹವ್ಯಾಸಿ ಬರಹಗಾರರು)