ಭಾರತೀಯ ಸಂಸ್ಕೃತಿಯಲ್ಲಿ ವ್ಯಕ್ತಿಯೊಬ್ಬನ ಆಧ್ಯಾತ್ಮಿಕ ಜೀವನ ಪ್ರಾರಂಭವಾಗುವುದೇ ಹಬ್ಬಗಳಿಂದ. ಏಕೆಂದರೆ ಬಾಲ್ಯಾವಸ್ಥೆಯಲ್ಲಿ ಇದೇ ಆಕರ್ಷಣೆ. ಪ್ರತಿ ಪಕ್ಷದಲ್ಲೂ ಒಮ್ಮೆಯೋ ಹಲವುಸಲವೋ ಬರುವ ಈ ಹಬ್ಬಗಳು ನಮ್ಮ ಪ್ರಜ್ಞೆಯನ್ನು ಹಲವು ಮುಖ್ಯವಿಷಯಗಳೆಡೆಗೆ ಸೆಳೆಯುವ, ತನ್ಮೂಲಕ ಉದಾತ್ತತೆಯನ್ನು ಬೆಳೆಸಿಕೊಳ್ಳುವ ಜೀವನವಿಧಾನಕ್ಕೆ ನಿರಂತರತೆ ಮತ್ತು ಮನನಶೀಲತೆಯನ್ನು ಕೊಡುವ ಸೂತ್ರಬಂಧಗಳೆನ್ನಬಹುದು.
ಭಾರತೀಯ ಸಂಸ್ಕೃತಿ ಜೀವನದ ಅರ್ಥ ಮತ್ತು ಮೌಲ್ಯಗಳನ್ನು ನಮಗೇ ಗೊತ್ತಿಲ್ಲದಂತೆ ನಮ್ಮ ಸ್ವಭಾವಕ್ಕೆ ಸೇರ್ಪಡಿಸಿಕೊಂಡು ಹೋಗುತ್ತದೆ. ಅದಕ್ಕೆ ಅದು ಬಳಸಿಕೊಂಡ ಉಪಾಯಗಳು ಎಷ್ಟು ಪ್ರಬುದ್ಧವೋ ಅಷ್ಟು ಆಕರ್ಷಣೀಯ. ಎಷ್ಟು ಸಹಜವೋ ಅಷ್ಟು ಮನರಂಜಕ. ಈ ಕಾರಣಕ್ಕಾಗಿಯೇ ಹುಟ್ಟಿಕೊಂಡಿದ್ದು ದಿಗ್ಭŠಮೆಗೊಳಿಸುವ ದೇವಾಲಯಗಳು ಮತ್ತು ಅವುಗಳ ವಾಸ್ತುಶಿಲ್ಪ, ಮೈ ನವಿರೇಳಿಸುವ ಶಾಸ್ತ್ರೀಯ ಸಂಗೀತ ಮತ್ತು ಕಣ್ಣಿಗೆ ಹಬ್ಬವಾಗಿಸುವ ಹಲವು ರೀತಿಯ ನೃತ್ಯ ಪ್ರಾಕಾರಗಳು, ಜಾನಪದ ಕಲೆಗಳು, ರಥ, ಉತ್ಸವ, ಹಬ್ಬ, ಹರಿದಿನ, ಹರಿಕಥೆ, ತಾಳಮದ್ದಳೆ ಇತ್ಯಾದಿ ಮನಸ್ಸಿಗೆ ಮುದನೀಡುವ ಯಾರನ್ನೂ ಆಕರ್ಷಿಸುವ, ಧರ್ಮ, ಜಾತಿ, ಭಾಷೆ, ಎಲ್ಲೆಗಳನ್ನೂ ಮೀರಿದ ಅದ್ಭುತ ಮೌಲ್ಯಗಳನ್ನು, ವ್ಯಕ್ತಿ ಮತ್ತು ಸಮಾಜಕ್ಕೆ ಭದ್ರ ಬುನಾದಿಯನ್ನು ಒದಗಿಸುವ ಹತ್ತು ಹಲವು ಮಾಧ್ಯಮಗಳು ಮತ್ತು ಪ್ರಕ್ರಿಯೆಗಳು. ಇಂತಹ ಪ್ರಕ್ರಿಯೆಗಳಲ್ಲಿ ಅತ್ಯಂತ ರಂಜನೀಯ ಮತ್ತು ಆಕರ್ಷಣೀಯವಾದದ್ದೇ ಹಬ್ಬಗಳು.
ಪ್ರತಿ ಪಕ್ಷದಲ್ಲೂ ಒಮ್ಮೆಯೋ ಹಲವುಸಲವೋ ಬರುವ ಈ ಹಬ್ಬಗಳು ನಮ್ಮ ಪ್ರಜ್ಞೆಯನ್ನು ಹಲವು ಮುಖ್ಯವಿಷಯಗಳೆಡೆಗೆ ಸೆಳೆಯುವ, ತನ್ಮೂಲಕ ಉದಾತ್ತತೆಯನ್ನು ಬೆಳೆಸಿಕೊಳ್ಳುವ ಜೀವನವಿಧಾನಕ್ಕೆ ನಿರಂತರತೆ ಮತ್ತು ಮನನಶೀಲತೆಯನ್ನು ಕೊಡುವ ಸೂತ್ರಬಂಧಗಳೆನ್ನಬಹುದು. ಈ ಹಬ್ಬಗಳು ವಿವಿಧ. ಆರಾಧನೆಗೊಳ್ಳುವ ದೇವತೆ, ಉದ್ದೇಶ್ಯ ಮತ್ತು ಪೂಜಾಪದ್ಧತಿಯೂ ವಿವಿಧ. ಇಲ್ಲಿ ಏಕತಾನತೆ ಎಂಬುದೇ ಇಲ್ಲ. ಒಂದಲ್ಲ ಒಂದು ರೀತಿಯ ಮನರಂಜನೆಯಿಲ್ಲದ ಹಬ್ಬವೇ ಇಲ್ಲ. ಜಪ, ಧ್ಯಾನ ಎಲ್ಲರಿಗೂ ಸಾಧ್ಯವಿಲ್ಲ. ಆದರೆ ಹಬ್ಬ , ತತ್ಸಂಬಂಧದ ಮನರಂಜನೆ ಎಲ್ಲರನ್ನೂ ಆಕರ್ಷಿಸಬಲ್ಲದು. ಭಾರತೀಯ ಸಂಸ್ಕೃತಿಯಲ್ಲಿ ವ್ಯಕ್ತಿಯೊಬ್ಬನ ಆಧ್ಯಾತ್ಮಿಕ ಜೀವನ ಪ್ರಾರಂಭವಾಗುವುದೇ ಈ ಹಬ್ಬಗಳಿಂದ. ಏಕೆಂದರೆ ಬಾಲ್ಯಾವಸ್ಥೆಯಲ್ಲಿ ಇದೇ ಆಕರ್ಷಣೆ. ಆದರೆ ಈ ಆಚರಣೆಗಳ ಮತ್ತು ಈ ಆರಾಧನೆಗಳ ಹಿಂದಿರುವ ತತ್ವವನ್ನು ತಿಳಿದರೆ ಅದೆಷ್ಟು ಅದ್ಭುತ ಎಂದು ಸೋಜಿಗವಾಗದಿರದು.
ಉದಾಹರಣೆಗೆ ಕೆಲವೇ ದಿನಗಳ ದೂರದಲ್ಲಿರುವ ಕಾಮದಹನ ಹಬ್ಬವನ್ನೇ ತೆಗೆದುಕೊಳ್ಳೋಣ. ಹಲವು ಕಟ್ಟಿಗೆಗಳು ಮತ್ತು ಉರುವಲುಗಳ ನಡುವೆ ರತಿ, ಮನ್ಮಥರ ಚಿತ್ರವನ್ನಿಟ್ಟು ಸಾರ್ವಜನಿಕ ಸ್ಥಳವೊಂದರಲ್ಲಿ ಸ್ಥಳೀಯ ಹುಡುಗರು ಈ ಉರುವಲುಗಳಿಗೆ ಬೆಂಕಿಹಚ್ಚಿ ಅದು ಪ್ರಖರ ಜ್ವಾಲೆಗಳಿಂದ ಉರಿಯುತ್ತಿರುವಾಗ ಕೇಕೆಹಾಕಿಕೊಂಡು ಅದರ ಸುತ್ತ ಕುಣಿಯುವುದೇ ಕಾಮದಹನ. ಅತ್ಯಂತ ಸಾಮಾನ್ಯ, ಏನೇನೂ ವಿಶೇಷತೆಯಿಲ್ಲದ ಇನ್ನೂ ಬುದ್ಧಿ ಬೆಳೆಯದ ಹುಡುಗರ ಆಟವೇನೋ ಎಂಬಂತೆ ಕಾಣುವ ಈ ಆಚರಣೆಯಲ್ಲಿ ಮನಸೂರೆಗೊಳಿಸುವ ತತ್ತ್ವ ಅಡಗಿದೆ. ಕಾಮ, ಪ್ರತಿಯೊಂದು ಜೀವಿಯಲ್ಲೂ ಅದರ ಸಂತತಿ, ಸಂಖ್ಯೆ ಹೆಚ್ಚಾಗಲು ಪ್ರಕೃತಿ ಇಟ್ಟಿರುವ ಒಂದು ಪ್ರಬಲ ತೃಷೆ, ಪ್ರಚೋದನೆ. ಇದರ ಆಟಾಟೋಪ ಸ್ವಲ್ಪವಲ್ಲ . ಎಂತಹ ಚಕ್ರವರ್ತಿ, ಅಧಿಕಾರಿ, ವಿದ್ವಾಂಸ, ಸಾಹಸಿಯನ್ನೂ ಸುಲಭವಾಗಿ ಕೆಳಗೆಳೆದು ಮಣ್ಣುಮುಕ್ಕುವಂತೆ ಮಾಡಿದೆ ಇದು. ಇತಿಹಾಸದ ಸೀಸರ್ಗಳನ್ನೂ, ನೆಪೋಲಿಯನ್ಗಳನ್ನೂ, ಉಗ್ರ ತಪಸ್ಸನ್ನೇ ಮಾಡಿದ ರಾವಣನನ್ನೂ, ಮುಂದೆ ಮಹರ್ಷಿ ವಿಶ್ವಾಮಿತ್ರನಾದ ರಾಜಾ ಕೌಶಿಕನನ್ನೂ ಸುಂಟರಗಾಳಿಗೆ ಸಿಕ್ಕಿ ತರಗೆಲೆಗಳಂತೆ ಮಾಡಿದ್ದು ಈ ಎರಡಕ್ಷರದ ದೌರ್ಬಲ್ಯ. ‘ಜಹಿಶತೃಂ ಮಹಾಬಾಹೋ ಕಾಮರೂಪಂ ದುರಾಸದಂ’, ‘ಜ್ಞಾನಿಗಳ ಶತ್ರುವಾದ ಈ ಕಾಮವನ್ನು ಕೊಲ್ಲು ಅರ್ಜುನ’ ಎಂದು ಕೃಷ್ಣ ಸ್ಪಷ್ಟವಾಗಿ ಗೀತೆಯಲ್ಲಿ ಹೇಳುತ್ತಾನೆ. ಇದು ಪ್ರಕೃತಿಯ ಒಂದು ಅಂಗವಾದ ರಜೋಗುಣದ ಬತ್ತಳಿಕೆಯಲ್ಲಿನ ಪ್ರಬಲ ಅಸ್ತ್ರ. ಉದಾತ್ತೀಕರಿಸಲ್ಪಟ್ಟಾಗ ಅರ್ಥಾತ್ ಜಪ, ಧ್ಯಾನ ಮತ್ತು ಭಗವದ್ವಾ್ಯಕುಲತೆಗಳನ್ನು ಸತ್ಕಾರಪೂರ್ವಕವಾಗಿ ವ್ಯಕ್ತಿತ್ವಕ್ಕೆ ಸಂಯೋಜಿಸಿಕೊಂಡಾಗ ಈ ಕಾಮದ ಮಾಧ್ಯಮವಾದ ಶುಕ್ಲ ಹಾಗೂ ಶೋಣಿತಗಳು (ಕ್ರಮವಾಗಿ ಪುರುಷ ಹಾಗೂ ಸ್ತ್ರೀ ಶರೀರಗಳಲ್ಲಿನ ಸಂತಾನೋತ್ಪತ್ತಿಗೆ ಕಾರಣವಾಗುವ ದ್ರವ್ಯ). ಓಜಸ್ ಎಂಬ ಅತ್ಯುನ್ನತ ಶಕ್ತಿಯಾಗಿ ಮಾರ್ಪಟ್ಟು ವ್ಯಕ್ತಿಯೊಬ್ಬನನ್ನು ಮಹಾನ್ ಆಕರ್ಷಣೀಯ, ಆಯಸ್ಕಾಂತೀಯ, ಪ್ರಭಾವಪೂರ್ಣನನ್ನಾಗಿ ಪರಿವರ್ತಿಸುತ್ತದೆ. ಇದರ ಮೇಲೆ ನಿಯಂತ್ರಣವಿಲ್ಲದಿದ್ದಲ್ಲಿ ದುರ್ಬಲ, ಕಳಾಹೀನ, ನಿಷ್ಪ್ರಯೋಜಕನನ್ನಾಗಿಸುತ್ತದೆ. ತಪಸ್ವಿಯಾಗಬೇಕೆಂದಿರುವ ಯಾವುದೇ ವ್ಯಕ್ತಿ ಗಮನಕೊಡಬೇಕಾದ್ದೇ ಮೊದಲು ಭಗವದ್ದರ್ಶನಕ್ಕೆ. ಆಳವಾಗಿ ಜಪಧ್ಯಾನಗಳಲ್ಲಿ ನಿರತನಾಗಬೇಕಾದ್ದಕ್ಕೇ. ಏಕೆಂದರೆ ಇವುಗಳು ಕಾಮವನ್ನು ಸುಲಭವಾಗಿ ಸಾಯಿಸಿಬಿಡಬಲ್ಲದು. ನೇರವಾಗಿಯೇ ಕಾಮನೊಡನೆ ಸೆಣಸುವುದು ಅಷ್ಟೇನೂ ಪ್ರಯೋಜನಕಾರಿಯಲ್ಲ. ಶ್ರೀರಾಮಕೃಷ್ಣರು ಹೇಳುವಂತೆ ಪೂರ್ವಕ್ಕೆ ಪಯಣಿಸುತ್ತಿದ್ದರೆ ಪಶ್ಚಿಮದಿಂದ ತಾನಾಗಿಯೇ ದೂರಸರಿಯುತ್ತಿರುತ್ತೇವೆ. ಆದ್ದರಿಂದಲೇ ಗಾಯತ್ರಿ ಮಂತ್ರೋಪದೇಶದ ಕಾಲದಲ್ಲಿ ದೀಕ್ಷೆಗೊಳಗಾದ ವಟುವಿಗೆ ಈ ಮಂತ್ರವನ್ನು ಜಪಿಸಿ, ‘ಅಗ್ನಿಯಂತೆ ತೇಜಸ್ವಿಯಾಗು, ಓಜಸ್ವಿಯಾಗು, ವರ್ಚಸ್ವಿಯಾಗು, ಆಯುಷ್ಮಂತನಾಗು’ ಎಂದು ನೆರೆದ ಹಿರಿಯರು ಆಶೀರ್ವದಿಸುತ್ತಾರೆ. ಯಾವುದೇ ಗುರುವೂ ಶಿಷ್ಯನಿಗೆ ಮಂತ್ರಕೊಟ್ಟು ಹೀಗೆಯೇ ಉಪದೇಶಿಸುತ್ತಾನೆ. ಇದು ಮನಸ್ಸನ್ನು ಗೆಲ್ಲುವುದಕ್ಕೆ ವೇದಕಾಲದ ಋಷಿ ಕಂಡುಹಿಡಿದ ಉಪಾಯ.
ವೇದದಲ್ಲಿ ಪ್ರಸ್ತಾಪಿಸಲ್ಪಟ್ಟಂತೆ ಮತ್ತು ಶ್ರೀ ರಾಮಕೃಷ್ಣರಿಂದ ಪುನರುಧೃತ ವಾದಂತೆ ಯುವಕನೊಬ್ಬ ಅಥವಾ ವಿದ್ಯಾರ್ಥಿಯೊಬ್ಬ ಹನ್ನೆರಡು ವರ್ಷಗಳ ಕಾಲ ಕಟ್ಟುನಿಟ್ಟಾಗಿ ಬ್ರಹ್ಮಚರ್ಯವನ್ನು ಪಾಲನೆ ಮಾಡಿದರೆ ಶರೀರದ ಒಳಗೆ ಮೇಧಾನಾಡಿ ಎಂಬ ಹೊಸನಾಡಿಯೇ ನಿರ್ವಣವಾಗುತ್ತದೆ. ಇದರ ಪ್ರಭಾವದಿಂದ ಸಾಮಾನ್ಯವಾಗಿ ಇಂದ್ರಿಯ ಮತ್ತು ಮನಸ್ಸುಗಳಿಗೆ ಗೋಚರವಾಗದ ಎಷ್ಟೋ ವಿಷಯಗಳು ಗೋಚರಿಸುವುದಕ್ಕಾರಂಭಿಸುತ್ತವೆ. ವಿದ್ಯಾರ್ಥಿ ಎಷ್ಟೇ ಗ್ರಹಣ ಸಾಮರ್ಥ್ಯದಲ್ಲಿ ಹಿಂದೆ ಬಿದ್ದಿದ್ದರೂ ಈ ಮೇಧಾನಾಡಿಯನ್ನು ಜಾಗೃತಗೊಳಿಸಿ ಅವನನ್ನು ಬುದ್ಧಿವಂತನನ್ನಾಗಿಸಬಹುದು ಎಂಬ ಅಂಶ ಭಾರತೀಯರು ಮನಗಂಡು ನಮ್ಮ ಶಿಕ್ಷಣ ಪದ್ಧತಿಯಲ್ಲಿ ಈಗಾಗಲೇ ಅಳವಡಿಸಿಕೊಂಡಿದ್ದರೆ ಏನೆಲ್ಲ ಆಗಬಹುದಿತ್ತು! ಹಾಗೆಯೇ ಅವನಿಗಿರಬೇಕಾದ ಮತ್ತೊಂದು ವ್ರತ ಸತ್ಯನಿಷ್ಠೆ. ಸತ್ಯನಿಷ್ಠೆ ಮತ್ತು ಬ್ರಹ್ಮಚರ್ಯವೇ ಒಬ್ಬ ಋಷಿ ಅಥವಾ ಮಂತ್ರಗಳನ್ನು ಕಂಡು ಹಿಡಿಯಬಲ್ಲ ಸಾಮರ್ಥ್ಯವುಳ್ಳ ವ್ಯಕ್ತಿಯ ಪ್ರಧಾನ ಲಕ್ಷಣಗಳು. ಇವೆರಡು ವ್ರತಗಳಲ್ಲಿ ನಿಷ್ಣಾತನಾದವನು ಮನಸ್ಸಿನ ಮೇಲೆ ಪೂರ್ತಿ ನಿಗ್ರಹವನ್ನು ಸಾಧಿಸಿದಂತೆ. ಇಂದ್ರಿಯಗಳ ನಿಯಂತ್ರಣದಿಂದ ಮನಸ್ಸಿನ ಶಕ್ತಿಗಳು ಹೇಗೆ ಜಾಸ್ತಿಯಾಗುತ್ತವೆಯೋ ಹಾಗೆಯೇ ಮನಸ್ಸಿನ ನಿಯಂತ್ರಣದಿಂದ ಬುದ್ಧಿಶಕ್ತಿಯೂ ಉತ್ತಮಗೊಳ್ಳುತ್ತದೆ. ನಿಗ್ರಹಸಾಮರ್ಥ್ಯವೇ ಮನುಷ್ಯ ಮತ್ತು ಮೃಗಕ್ಕಿರುವ ಪ್ರಮುಖ ವ್ಯತ್ಯಾಸ.
ಮನಸ್ಸನ್ನು ಗೆಲ್ಲದೆ ಕೇವಲ ಹೊರಜಗತ್ತನ್ನು ಗೆಲ್ಲುವುದು ಹೆಣಕ್ಕೆ ಶೃಂಗಾರ ಮಾಡಿದಂತೆ. ಸನಾತನ ಸಂಸ್ಕೃತಿಯಲ್ಲಿ ಐದು ವರ್ಷದ ಹಸುಳೆ ನಚಿಕೇತನೇ ಈ ಮಾತನ್ನು ಯಮನಿಗೆ ಹೇಳಿದ್ದನ್ನು ನೋಡುತ್ತೇವೆ. ಜಪಧ್ಯಾನಗಳು ಕ್ರಮೇಣ ಮನಸ್ಸಿನಲ್ಲಿ ಆತ್ಮಜ್ಞಾನ ಅಥವಾ ಭಗವದ್ಭಕ್ತಿಯನ್ನು ಜಾಗೃತಗೊಳಿಸಿ ಕಾಮನಿಗೆ ಉಸಿರುಗಟ್ಟುವಂತೆ ಮಾಡುತ್ತವೆ. ಕಾಮನ ಉಪಟಳ ಅಜ್ಞಾನಿಗಳ ಮನಸ್ಸುಗಳಲ್ಲಿ ಮಾತ್ರ. ಮನಸ್ಸಿನ ತಮಸ್ಸೇ ಅವನಿಗೆ ರೆಕ್ಕೆ, ಪುಕ್ಕಗಳು. ಆದ್ದರಿಂದಲೇ ಅವನು ರಾತ್ರಿಸಂಚಾರಿ. ಕತ್ತಲೆಯನ್ನು ಪ್ರೀತಿಸುವವನು. ಆದ್ದರಿಂದಲೇ ಬಹಳಷ್ಟು ಯೋಗಿಗಳು ರಾತ್ರಿ ನಿದ್ದೆ ಮಾಡುವುದಿಲ್ಲ. ಶ್ರೀರಾಮಕೃಷ್ಣರು ಹೇಳುತ್ತಿದ್ದಂತೆ ಯೋಗಿ, ಭೋಗಿ, ರೋಗಿ ರಾತ್ರಿ ನಿದ್ದೆ ಮಾಡುವುದಿಲ್ಲ. ‘ಯೋಗಿಗೆ ರಾತ್ರಿಯೇ ಹಗಲು, ಹಗಲೇ ರಾತ್ರಿ’ ಎಂದು ಶ್ರೀಕೃಷ್ಣ ಗೀತೆಯಲ್ಲಿ ಹೇಳುತ್ತಾನೆ. ಶ್ರೀರಾಮಕೃಷ್ಣರು ಅವರ ಸಂನ್ಯಾಸಿ ಶಿಷ್ಯರು ಹಾಗೂ ಬಹಳಷ್ಟು ಜನ ಅವರ ಗೃಹಸ್ಥ ಶಿಷ್ಯರೂ ಕೂಡ ರಾತ್ರಿ ಹೊತ್ತು ಮಲಗುತ್ತಿರಲಿಲ್ಲ. ಮುಂದೆ ಸಂನ್ಯಾಸಿಗಳಾದ ಅವರ ಯುವ ಶಿಷ್ಯರಿಗಂತೂ ಅವರು ರಾತ್ರಿ ಮಲಗಲು ಬಿಡುತ್ತಲೇ ಇರಲಿಲ್ಲ. ಸಂನ್ಯಾಸಿಗಳ ರಾಜ ಶಿವನೂ ಹಾಗೆಯೇ. ಆದ್ದರಿಂದಲೇ ಅವನಿಗಾಗಿ ಮೀಸಲಾದ ಹಬ್ಬವನ್ನು ರಾತ್ರಿಯಂದೇ ನಾವು ಆಚರಿಸುವುದು. ಅದೇ ಶಿವರಾತ್ರಿ. ಹೇಳಬೇಕೆಂದರೆ ಈ ಸಂನ್ಯಾಸಿಗಳ ರಾಜ ಶಿವ ಕಾಮವನ್ನು ಸುಟ್ಟು ಬೂದಿಮಾಡಿ ತನ್ನ ವೈರಾಗ್ಯದ ಸಾರ್ವಭೌಮತ್ವವನ್ನು ಮೆರೆದ ಮಹಾತ್ಮ . ಆದ್ದರಿಂದಲೇ ಅವನು ದೇವಾದಿದೇವ, ಮಹಾದೇವ. ದೇವತೆಗಳನ್ನೇ ಲೆಕ್ಕಕಿಟ್ಟುಕೊಳ್ಳದ ಕಾಮ ಶಿವನ ಹತ್ತಿರ ನುಸುಳಿದ್ದೇ ತಡ, ಸುಟ್ಟು ಬೂದಿಯಾದ. ಮಹಾ ಶಿವರಾತ್ರಿಯಂದು ಇಡೀ ರಾತ್ರಿ ಜಾಗರಣೆ ಮಾಡಿ ಜಾಗೃತ ರಾತ್ರಿಗಳನ್ನು ನಿರ್ವಿುಸಿಕೊಳ್ಳುವ ತರಬೇತಿಯನ್ನು ಪ್ರಾರಂಭಿಸಿ, ಒಂದು ಪಕ್ಷ ಕಾಲ ಅದನ್ನು ನಿಷ್ಠೆಯಿಂದ ನಡೆಸಿ ‘ಶಿವನೇ ನಿನ್ನಂತೆ ನಾವೂ ಕಾಮವನ್ನು ದಹಿಸಿದ್ದೇವೆ’ ಎಂದು ಅವನ ಆವಗಾಹನೆಗೆ ಶಿವಭಕ್ತ ತರುತ್ತಿದ್ದಾನೇನೋ ಎನ್ನುವಂತಿದೆ ಶಿವರಾತ್ರಿಯಿಂದ ಒಂದು ಪಕ್ಷದಷ್ಟೇ ದೂರವಿರುವ ಕಾಮನ ಹುಣ್ಣಿಮೆಯನ್ನು ನೋಡಿದರೆ. ಸನಾತನ ಸಂಸ್ಕೃತಿಯೇ ಹಾಗೆ. ಅದರ ಸಂಕೇತಗಳೂ ಅತ್ಯಂತ ಅರ್ಥಪೂರ್ಣ ಹಾಗೂ ಕಾವ್ಯಮಯ.
ಕಾಮನನ್ನು ಸುಟ್ಟೇ ಹಾಕಿದರೆ ಮನುಷ್ಯ ಸಂತತಿ ಬೆಳೆಯುವುದು ಹೇಗೆ? ಪ್ರಪಂಚ ನಡೆಯುವುದು ಹೇಗೆ? ಎಂಬ ಪ್ರಶ್ನೆ ಏಳಬಹುದು. ಆದರೆ ನೆನಪಿಡಿ ಒಂದು ಪರಿಪೂರ್ಣ ಸಂಸ್ಕೃತಿ ಇದನ್ನೆಲ್ಲ ಸಾಕಷ್ಟು ಗಮನಿಸಿಯೇ ಇರುತ್ತದೆ. ಪ್ರಜ್ಞಾವಂತನ ಆರು ಶತ್ರುಗಳಾದ ಕಾಮ, ಕ್ರೋಧ, ಲೋಭ, ಮೋಹ, ಮದ, ಮಾತ್ಸರ್ಯಗಳಲ್ಲಿ ಕಾಮಕ್ಕೆ ಮೊದಲನೇ ಸ್ಥಾನವೇ ಇದ್ದರೂ ಪ್ರತಿಯೊಬ್ಬ ಮನುಷ್ಯನೂ ಜೀವನದಲ್ಲಿ ಪಡೆಯಲೇಬೇಕಾದ ಪುರುಷಾರ್ಥಗಳಲ್ಲಿ ಕೂಡ ಅದಕ್ಕೆ ಒಂದು ಸ್ಥಾನವನ್ನು ನೀಡಲಾಗಿದೆ. ಅದೇ ಧರ್ಮ, ಅರ್ಥ, ಕಾಮ, ಮೋಕ್ಷಗಳು. ಆದರೆ ಪುರುಷಾರ್ಥಗಳಲ್ಲಿ ಬರುವ ಕಾಮದ ಲಕ್ಷಣವೇ ಬೇರೆ. ಅದು ಉದಾತ್ತಗೊಂಡ ಕಾಮ; ನಿಗ್ರಹಿಸಲ್ಪಟ್ಟ , ಮಾನವೀಯತೆಯ ಚೌಕಟ್ಟಿನಿಂದ ದಿವ್ಯತೆಗೇರುವ ಸೇತುವೆಗೆ ಸಂಬಂಧಿಸಿದ್ದು. ಅರಿಷಡ್ವರ್ಗಗಳಲ್ಲಿ ಬರುವಂಥದ್ದು ಮೃಗೀಯ, ಎಗ್ಗಿಲ್ಲದ, ಸ್ವಚ್ಛಂದತೆ. ಈ ಮೃಗೀಯ ತೃಷೆಗೆ ನಿಯಂತ್ರಣ ನೀಡಲೆಂದೇ ವಿವಾಹ ಎಂಬ ಷೋಡಷ ಸಂಸ್ಕಾರಗಳಲ್ಲಿ ಒಂದು ನಿರ್ವಿುತವಾದದ್ದು. ಒಟ್ಟಿನಲ್ಲಿ ಈ ಕಾಮದಹನ ಜೀವನದ ವಸಂತಕಾಲಕ್ಕೆ ಒಂದು ಪೂರ್ವ ಸಿದ್ಧತೆಯಾಗಿರುವುದು ಭಾರತೀಯ ಸಂಸ್ಕೃತಿ ನಮ್ಮನ್ನು ಯಾವ ದಿಕ್ಕಿನಲ್ಲಿ ಪಯಣಿಸಲು ಪ್ರೇರೇಪಿಸುತ್ತಿದೆ ಎಂಬುದನ್ನು ಸ್ಪಷ್ಟವಾಗಿ ಸೂಚಿಸುತ್ತದೆ. ಶಿವರಾತ್ರಿಯಿಂದ ಒಂದು ಪಕ್ಷದಷ್ಟು ದೂರವಿರುವ ಕಾಮದಹನ ಮುಂದೆ ಒಂದೇ ಪಕ್ಷಕ್ಕೇ ನಮ್ಮನ್ನು ಯುಗಾದಿಗೆ ಅಥವಾ ವಸಂತ ಋತುವಿಗೆ ಕೊಂಡೊಯ್ಯುವುದು ಎಷ್ಟು ಯೋಜನಾಬದ್ಧ ಎನ್ನುವುದನ್ನು ಯೋಚಿಸಿಯೇ ತಿಳಿಯಬೇಕು. ಇದೇ ನಮ್ಮ ಸಂಸ್ಕೃತಿಯ ಹೆಗ್ಗಳಿಕೆ. ಆದ್ದರಿಂದಲೇ ನೊಬೆಲ್ ವಿಜೇತರೂ ಕೂಡ ಅದಕ್ಕೆ ಮಾರು ಹೋಗಿರುವರು.