ಅಂಕಣ

ಮೊಬೈಲ್ ಮಾಯೆಯೂ ನಾಯಿಯನ್ನು ಹೊತ್ತೊಯ್ದ ಚಿರತೆಯೂ

ವ್ಯಕ್ತಿಯೊಬ್ಬ ಮಂಚದ ಮೇಲೆ ಮಲಗಿಕೊಂಡು ತದೇಕಚಿತ್ತದಿಂದ ಮೊಬೈಲ್ ನೋಡುತ್ತಿದ್ದಾನೆ. ಮಂಚದ ಕೆಳಗೆ ಆ ಮನೆಯ ನಾಯಿ ಮಲಗಿತ್ತು. ಆಗ ಇದ್ದಕ್ಕಿದ್ದ್ದತೆ ಚಿರತೆಯೊಂದು ಕಳ್ಳಹೆಜ್ಜೆಗಳನ್ನಿಡುತ್ತ ಅತ್ತ ಬರುತ್ತದೆ. ಆ ವ್ಯಕ್ತಿಗೆ ಯಾವುದರ ಪರಿವೆಯೂ ಇಲ್ಲ. ಪಾಪ, ಮಲಗಿದ್ದ ನಾಯಿಗೆ ಅರೆನಿದ್ರೆ ಹತ್ತಿತ್ತೆಂದು ಕಾಣುತ್ತದೆ. ಚಿರತೆ ನಿಧಾನಕ್ಕೆ ಬಂದು ಒಂದು ಕ್ಷಣ ನಾಯಿಯನ್ನು ಎವೆಯಿಕ್ಕದೆ ನೋಡಿ ಕಚಕ್ಕನೆ ಅದರ ಕುತ್ತಿಗೆಗೆ ಬಾಯಿ ಹಾಕಿ ಎಳೆದೊಯ್ದೇಬಿಡುತ್ತದೆ. ನಾಯಿಗೆ ಕೂಗಲಿಕ್ಕೂ ಅವಕಾಶವಿಲ್ಲ. ಆಗ ಏನೋ ಸದ್ದಾದಂತಾಗಿ ವ್ಯಕ್ತಿ ನೋಡಿದರೆ ನಾಯಿ ಮಾಯ.

ಇದು ಮೊನ್ನೆ ಮೊನ್ನೆ ಪುಣೆಯ ಒಂದು ಪ್ರದೇಶದಲ್ಲಿ ನಡೆದ ಘಟನೆ. ಸಾಮಾಜಿಕ ಜಾಲತಾಣಗಳಲ್ಲಿ ಈ ವಿಡಿಯೋ ಭರ್ಜರಿ ವೀಕ್ಷಣೆಗೊಳಗಾಗಿ, ನಾನಾ ವಿಧದ ಕಮೆಂಟ್​ಗಳು ಸಹ ದಂಡಿಯಾಗಿ ಬಂದವು. ‘ಈಗಿನವರಿಗೆ ಮೊಬೈಲ್ ಒಂದಿದ್ರೆ ಸಾಕು. ಬೇರೇನೂ ಬೇಡ. ಆಕಾಶವೇ ತಲೆಮೇಲೆ ಬಿದ್ದರೂ ಅವರಿಗೆ ಗೊತ್ತಾಗಲ್ಲ’ ‘ಮೊಬೈಲ್ ಹಿಡಿದರೆ ಊಟ ನಿದ್ರೆಯೂ ಬೇಕಾಗಿಲ್ಲ. ಏನು ಹೇಳೋದು ಇವರಿಗೆ...’ ಇತ್ಯಾದಿ ಅಭಿಪ್ರ್ರಾಯಗಳು ವ್ಯಕ್ತವಾದವು.

ಈ ಮೇಲಿನ ಪ್ರಕರಣ ಮೊಬೈಲ್ ವ್ಯಸನದ ಕತೆಯನ್ನು ಹೇಳುತ್ತದೆ, ನಿಜ. ಹಾಗಂತ ಚಿರತೆಯ ಚಾಕಚಕ್ಯತೆಯನ್ನು ಕಡೆಗಣಿಸುವಂತಿಲ್ಲ. ನಮ್ಮ ಅನೇಕ ಗ್ರಾಮೀಣ ಪ್ರದೇಶಗಳಲ್ಲಿ ಚಿರತೆ ಹಾವಳಿ ದೊಡ್ಡ ತಲೆನೋವಾಗಿದೆ. ನಾಯಿ ಸಹಜವಾಗಿ ಬಹಳ ಚುರುಕು ಪ್ರಾಣಿ. ಬಹುದೂರದ ಸದ್ದನ್ನೂ ಅದು ಕೇಳಿಸಿಕೊಳ್ಳಬಲ್ಲದು. ಹಾಗೇ ನಾಯಿಯ ನಿದ್ರೆ ಕೂಡ ಕಡಿಮೆ. ಅದು ಮೈಮರೆತು ನಿದ್ರಿಸುವುದು ಅಪರೂಪ. ಹೀಗಿದ್ದರೂ, ಚೂರೂ ಪತ್ತೆಹಚ್ಚದಂತೆ ನಾಯಿಯನ್ನೇ ಕದ್ದೊಯ್ಯುತ್ತದೆ ಎಂದರೆ ಚಿರತೆಯ ಚುರುಕುತನ ಎಷ್ಟಿರಬೇಡ! ರೈತರ ಮನೆಯಲ್ಲಿ ಒಂದು ನಾಯಿ ಇದ್ದರೆ, ಮನೆಯ ರಕ್ಷಣೆಯ ಜವಾಬ್ದಾರಿ ಹೊರುತ್ತದೆ. ಒಮ್ಮೊಮ್ಮೆರಾತ್ರಿ ವೇಳೆ ಅದು ಕೂಗುವ ಪರಿ ಕಿರಿಕಿರಿ ಎನಿಸಿದರೂ ಏನೋ ಸುಳಿವು ಸಿಕ್ಕಿಯೇ ಅದು ಕೂಗುತ್ತದೆ. ಆದರೆ ಚಿರತೆಯ ಹಾವಳಿಯಿಂದಾಗಿ ನಾಯಿಯನ್ನು ಕಾಪಾಡಿಕೊಳ್ಳುವುದು ಸವಾಲಾಗಿದೆ. ಪಂಜರದಲ್ಲಿ ನಾಯಿ ಇಟ್ಟು ಸಾಕಿದರೂ ಸುರಕ್ಷಿತ ಎನ್ನುವಂತಿಲ್ಲ. ಕೆನರಾ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರ ಹಳ್ಳಿಯ ಮನೆಯ ಆಸುಪಾಸಿನಲ್ಲಿ ಚಿರತೆ ಸುಳಿದಾಡಿದ್ದು ಸಿಸಿಟಿವಿಯಲ್ಲಿ ಸೆರೆಯಾಗಿ, ಈಚೆಗೆ ಮಾಧ್ಯಮಗಳಲ್ಲಿ ಸುದ್ದಿಯಾಗಿತ್ತು. ಇದು ಒಂದು ಉದಾಹರಣೆಯಷ್ಟೆ. ಇಂಥದು ನಿತ್ಯಸಂಗತಿಯಾಗಿದೆ. ಕೃಷಿ ಬೆಳೆಗಳಿಗೆ ಮಂಗ, ನವಿಲು ಇತ್ಯಾದಿ ಪ್ರಾಣಿಗಳ ಕಾಟವಾದರೆ, ಮನೆಯನ್ನು ಕಾಯುವ ನಾಯಿಗೆ ಚಿರತೆ ಕಾಟ. ಒಟ್ಟಿನಲ್ಲಿ ಕೃಷಿಕರಿಗೆ ಒಂದಿಲ್ಲೊಂದು ಚಿಂತೆ ತಪ್ಪಿದ್ದಲ್ಲ.

ಚಿರತೆ ಸುದ್ದಿಯನ್ನು ತುಸು ಆಚೆಗಿಟ್ಟು ಮೊಬೈಲ್ ವಿಷಯಕ್ಕೇ ಮತ್ತೆ ಬರುವುದಾದರೆ, ವಿವಿಧ ರಂಗಗಳಲ್ಲಿ ದಾಪುಗಾಲು ಇಡುತ್ತಿರುವ ಭಾರತ ಮೊಬೈಲ್ ಫೋನ್ ಉತ್ಪಾದನೆಯಲ್ಲೂ ಭರ್ಜರಿ ಸಾಧನೆ ಮಾಡಿದೆ. ಅದೇ ಹೊತ್ತಿಗೆ, ಮೊಬೈಲ್ ಬಳಕೆ ಪ್ರಮಾಣ ದಿಗಿಲು ಮೂಡಿಸುವ ರೀತಿಯಲ್ಲಿ ಹೆಚ್ಚಿರುವುದು ಚಿಂತೆಗೂ ಕಾರಣವಾಗಿದೆ. ಮೊಬೈಲ್​ನಲ್ಲಿ ಮುಳುಗಿದ್ದ ಪುಣೆ ವ್ಯಕ್ತಿಯ ನಾಯಿಯನ್ನು ಚಿರತೆ ಹೊತ್ತೊಯ್ದಂತೆ, ತಮ್ಮ ಮಕ್ಕಳನ್ನು ಮೊಬೈಲ್ ಮಾಯೆ ಅಪಹರಿಸಿಬಿಟ್ಟಿದೆ ಎಂದು ಪಾಲಕರು ಕಂಗಾಲಾಗಿದ್ದಾರೆ.

ಅಂದಹಾಗೆ ಭಾರತದಲ್ಲಿ ಮೊದಲ ಮೊಬೈಲ್ ಫೋನ್ ಕಾಲ್ ರಿಂಗಣಿಸಿದ್ದು 30 ವರ್ಷಗಳ ಹಿಂದೆ. ಪಶ್ಚಿಮ ಬಂಗಾಳದ ಅಂದಿನ ಮುಖ್ಯಮಂತ್ರಿ ಜ್ಯೋತಿ ಬಸು ಹಾಗೂ ಕೇಂದ್ರ ದೂರಸಂಪರ್ಕ ಸಚಿವ ಸುಖರಾಮ್ ಅವರ ನಡುವೆ ಮೊದಲ ಮೊಬೈಲ್ ಫೋನ್ ಸಂಭಾಷಣೆ 1995ರ ಜುಲೈ 31ರಂದು ನಡೆಯಿತು. ಬಸು ಅವರು ಕೊಲ್ಕತಾದ ರೈಟರ್ಸ್ ಬಿಲ್ಡಿಂಗ್​ನಲ್ಲಿದ್ದರೆ (ಬಂಗಾಳದ ಸಚಿವಾಲಯ ಕಟ್ಟಡ) ಸುಖರಾಮ್ ಅವರು ದೆಹಲಿಯ ಸಂಚಾರ ಭವನದಲ್ಲಿದ್ದರು. ಆಗ ಅವರು ಬಳಸಿದ್ದು ನೋಕಿಯಾ ಮೊಬೈಲ್ ಹ್ಯಾಂಡ್​ಸೆಟ್. ಆಗೆಲ್ಲ ಜನಸಾಮಾನ್ಯರು ಮೊಬೈಲ್ ಬಳಸುವುದು ಸುಲಭವಿರಲಿಲ್ಲ. ಇನ್​ಕಮಿಂಗ್ ಹಾಗೂ ಔಟ್​ಗೋಯಿಂಗ್ ಕರೆಗಳಿಗೆ ನಿಮಿಷಕ್ಕೆ ಸರಿಸುಮಾರು 8.4 ರೂ. ಶುಲ್ಕ ಆಗುತ್ತಿತ್ತು. ಪೀಕ್ ಮೊಬೈಲ್ ಟ್ರಾಫಿಕ್ ಅವಧಿಯಲ್ಲಂತೂ ನಿಮಿಷದ ಶುಲ್ಕ 16 ರೂ.ವರೆಗೂ ಆಗುತ್ತಿತ್ತಂತೆ. ಆಗೇನಾದರೂ ನವಪ್ರೇಮಿಗಳು ಅಥವಾ ತಾಯಿ-ಮಗಳು ಮೊಬೈಲ್ ಮೂಲಕ ಈಗಿನ ಹಾಗೆ ಸಂಭಾಷಣೆ ನಡೆಸಿದ್ದರೆ ಎಷ್ಟು ಖರ್ಚಾಗುತ್ತಿತ್ತು ಲೆಕ್ಕಹಾಕಿ! ಆಗ ಮೊಬೈಲ್ ದರವೂ ದುಬಾರಿಯೇ ಇತ್ತೆನ್ನಿ. ಅದಕ್ಕಿಂತ ಮೊದಲು ಲ್ಯಾಂಡ್ ಲೈನ್ ಸಂಪರ್ಕ ಪಡೆಯುವುದು ಸಹ ಅಷ್ಟು ಸುಲಭವಿರಲಿಲ್ಲ. ಎಷ್ಟೋ ಜನ ಇದಕ್ಕಾಗಿ ತಮ್ಮ ಕ್ಷೇತ್ರದ ಸಂಸದರ ಪ್ರಭಾವ ಉಪಯೋಗಿಸಿದ್ದೂ ಇದೆ. ಕೆಲವು ಸವಲತ್ತು ಹಾಗೇ. ಎಲ್ಲೋ ಮೊಳಕೆಯೊಡೆದ ಆಲೋಚನೆಯ ಕುಡಿ ಮುಂದೆ ಭಾರಿ ಬದಲಾವಣೆಗಳಿಗೆ ಕಾರಣವಾಗುವುದಿದೆ. ಊರಿಗೆ ಮೊದಲ ರೇಡಿಯೊ ತಂದ ವ್ಯಕ್ತಿ ಅದನ್ನು ಹೆಗಲ ಮೇಲೆ ಇರಿಸಿಕೊಂಡು ಹೋಗುವಾಗ ಊರಿನ ಜನ ಕುತೂಹಲದಿಂದ ನೋಡುತ್ತಿದ್ದ ಘಟನೆಯನ್ನು ಪರಿಚಿತರೊಬ್ಬರು ಆಗೀಗ ನೆನಪಿಸಿಕೊಳ್ಳುತ್ತಾರೆ. ಸೈಕಲ್ಲು, ಬಣ್ಣದ ಟಿವಿ... ಹೀಗೆ ಯಾವುದೇ ವಸ್ತುವೂ ಮೊದಲು ಬಂದಾಗ ಅಚ್ಚರಿಯೇ. ಕ್ರಮೇಣ ಸಾರ್ವತ್ರಿಕವಾಗುತ್ತ ಹೋಗುತ್ತದೆ.

ಜಪಾನಿಗೆ ಹೋಗಿದ್ದಾಗ ತಮ್ಮನ್ನು ಕರೆದುಕೊಂಡು ಹೋಗಲು ಬಂದಿದ್ದ ಕಾರಿನ ಚಾಲಕ ಕಿಸೆಯಲ್ಲಿ ಮೊಬೈಲ್ ಫೋನ್ ಇಟ್ಟುಕೊಂಡಿದ್ದನ್ನು ನೋಡಿದ ಸಚಿವ ಸುಖ ರಾಮ್ೆ, ಜಪಾನ್ ಇಂಥ ತಂತ್ರಜ್ಞಾನ ಹೊಂದಬಲ್ಲದು ಎಂದಾದರೆ ಭಾರತದಲ್ಲೇಕೆ ಸಾಧ್ಯವಿಲ್ಲ ಎನಿಸಿತಂತೆ. ಈ ಬಗ್ಗೆ ಅವರು ರಿಲಯನ್ಸ್​ನ ಧೀರುಬಾಯಿ ಅಂಬಾನಿ ಜೊತೆ ರ್ಚಚಿಸಿದ್ದರಂತೆ. ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರು ತಂತ್ರಜ್ಞಾನಕ್ಕೆ ನೀಡಿದ ಒತ್ತನ್ನು ಸಹ ಸುಖ್ ರಾಮ್ ಸ್ಮರಿಸಿಕೊಂಡಿದ್ದರು.

ಒಮ್ಮೆ ಒಂದು ಸಾರ್ವಜನಿಕ ಸಭೆಯಲ್ಲಿ ಮಾತನಾಡುತ್ತ, ಮುಂದೊಂದು ದಿನ ನಿಮ್ಮೆಲ್ಲರ ಕಿಸೆಗಳಲ್ಲಿ ಮೊಬೈಲ್ ಫೋನ್ ಇರುತ್ತದೆ ಎಂದು ಸುಖ್ ರಾಮ್ ಹೇಳಿದ್ದರಂತೆ. ಆದರೆ ಕೆಲವರು ಈ ಮಾತನ್ನು ಒಪ್ಪದೆ, ‘ಸ್ವಾಮೀ, ಇನ್ನೂ ಎಷ್ಟೋ ಮನೆಗಳಲ್ಲಿ ಲ್ಯಾಂಡ್ ಲೈನ್ ಫೋನೇ ಇಲ್ಲ. ಇನ್ನು ಮೊಬೈಲ್ ಫೋನ್ ದೂರದ ಮಾತಾಯಿತು ಬಿಡಿ’ಎಂದಿದ್ದರಂತೆ. ನಂತರ ನಡೆದದ್ದು ಇತಿಹಾಸ. ‘ಟೆಲಿಫೋನ್ ಹಿಡಿದಿರುವ ವ್ಯಕ್ತಿಯು ತಾನು ಸಂಭಾಷಿಸುತ್ತಿರುವ ದೂರದ ವ್ಯಕ್ತಿಯನ್ನು ನೋಡುವ ಕಾಲ ಬರುತ್ತದೆ’ಎಂದು ಟೆಲಿಫೋನ್ ಅನ್ವೇಷಕ ಅಲೆಕ್ಸಾಂಡರ್ ಗ್ರಹಾಂ ಬೆಲ್ ಹೇಳಿದ್ದು, ಆ ವಿಜ್ಞಾನಿಯ ಮುನ್ನೋಟದ ದ್ಯೋತಕವೇ ಸರಿ.

ಮೊಬೈಲ್ ಬಳಕೆ ಅತಿಯಾಗಿದೆ ಎಂಬುದು ಎಲ್ಲರ ಕಳವಳ ಮತ್ತು ಆತಂಕ. ಮನೆಯಲ್ಲಿ ಮಕ್ಕಳನ್ನು ಕಂಟ್ರೋಲ್ ಮಾಡುವುದು ಕಷ್ಟ. ಹೀಗಾಗಿ ಶಾಲೆಗಳಲ್ಲಿಯೇ ಇದಕ್ಕೆ ಕಡಿವಾಣ ಹಾಕಿದರೆ ಒಳಿತು ಎಂದು ಕೆಲವರು ಪ್ರತಿಪಾದಿಸುವುದಂಟು. ಅದರಲ್ಲೂ ಕರೊನಾ ಅವಧಿಯಲ್ಲಿ ಆನ್ ಲೈನ್ ತರಗತಿಗಳು ನಡೆದ ತರುವಾಯ ಮಕ್ಕಳು ಪಕ್ಕಾ ಮೊಬೈಲ್​ದಾಸರೇ ಆಗಿದ್ದಾರೆ ಎಂಬುದು ಹೆಚ್ಚಿನ ಪಾಲಕರ ದೂರು. ಆಪ್ತ ಸಮಾಲೋಚಕರು ಹಾಗೂ ಮನೋವೈದ್ಯರ ಬಳಿ ಮಕ್ಕಳನ್ನು ಕರೆದುಕೊಂಡು ಬರುವ ಪಾಲಕರು ಹೆಚ್ಚಿನದಾಗಿ ಹೇಳುವುದು ಈ ಮೊಬೈಲ್ ವಿಷಯವನ್ನೇ. ದೆಹಲಿಯ ಬಾಲಕನೊಬ್ಬ ಮೊಬೈಲ್ ವಿಚಾರವಾಗಿ ಹೈಕೋರ್ಟ್ ಮೆಟ್ಟಿಲೇರಿದ್ದ. ಶಾಲೆಗಳಲ್ಲಿ ಮೊಬೈಲ್ ಫೋನ್ ಬಳಕೆ ಬಗ್ಗೆ ಮಾರ್ಗಸೂಚಿ ರಚಿಸಬೇಕು ಎಂಬುದು ಆತನ ಮನವಿಯಾಗಿತ್ತು. ಆತನ ಪರ ವಕೀಲರು ತಮ್ಮ ವಾದಕ್ಕೆ ಪೂರಕವಾಗಿ ವಿವರಗಳನ್ನು ನೀಡಿದರು.

ಮುಂದುವರಿದಿರುವ ಈ ತಂತ್ರಜ್ಞಾನ ಯುಗದಲ್ಲಿ ಶಾಲಾ ಮಕ್ಕಳು ಸ್ಮಾರ್ಟ್​ಫೋನ್ ಬಳಕೆ ಮಾಡದಂತೆ ನಿಷೇಧ ಹೇರುವುದು ಸಮಂಜಸವಲ್ಲ. ಬದಲಾಗಿ ಇದಕ್ಕೆ ಒಂದಿಷ್ಟು ಮಾರ್ಗಸೂಚಿಗಳನ್ನು ಶಾಲೆಗಳು ಅಳವಡಿಸಲಿ ಎಂದು ದೆಹಲಿ ಹೈಕೋರ್ಟ್ ಸೂಚನೆ ನೀಡಿರುವುದು ಎಲ್ಲರೂ ಗಮನಿಸಬೇಕಾದ ಸಂಗತಿ.

ಕಳೆದ ಹಲವು ವರ್ಷಗಳಿಂದ ಶಿಕ್ಷಣದಲ್ಲಿ ತಂತ್ರಜ್ಞಾನದ ಪಾತ್ರ ಗಮನಾರ್ಹವಾಗಿ ವಿಕಸನಗೊಂಡಿದೆ. ಶಾಲೆಗಳಲ್ಲಿ ಸ್ಮಾರ್ಟ್ ಫೋನ್​ಗಳ ಬಳಕೆ ಮಾಡಬಾರದು ಎಂದು ಸಂಪೂರ್ಣವಾಗಿ ನಿಷೇಧ ಹೇರುವುದು ಅವಾಸ್ತವಿಕ ನಡೆಯಾಗುತ್ತದೆ. ವಿದ್ಯಾರ್ಥಿಗಳು ಪಾಲಕರೊಂದಿಗೆ ಸಂಪರ್ಕ ಹೊಂದಲು ಫೋನ್ ಅಗತ್ಯ. ಇದಲ್ಲದೆ, ಮಕ್ಕಳ ಸುರಕ್ಷತೆ ವಿಷಯದಲ್ಲೂ ಸ್ಮಾರ್ಟ್​ಫೋನ್​ಗಳು ಪ್ರಮುಖ ಪಾತ್ರ ವಹಿಸುತ್ತವೆ ಎಂದು ದೆಹಲಿ ಹೈಕೋರ್ಟ್​ನ ನ್ಯಾ.ಅನುಪ್ ಜೈರಾಮ್ ಭಂಭಾನಿ ತೀರ್ಪಿನಲ್ಲಿ ಉಲ್ಲೇಖಿಸಿದ್ದರು. ಅದೇ ಹೊತ್ತಿಗೆ, ಸ್ಮಾರ್ಟ್​ಫೋನ್​ಗಳ ದುರುಪಯೋಗ, ಮಕ್ಕಳು ಫೋನ್​ಗೆ ವ್ಯಸನಿಗಳಾಗುತ್ತಿರುವುದು ಸೇರಿದಂತೆ ಇದರಿಂದಾಗುವ ಹಾನಿಗಳ ಬಗ್ಗೆಯೂ ಕೋರ್ಟ್ ಸಹಮತ ಸೂಚಿಸಿತು. ಸಂಪೂರ್ಣ ನಿಷೇಧದ ಬದಲಿಗೆ, ಶಾಲೆಗಳಲ್ಲಿ ಮಕ್ಕಳು ಜವಾಬ್ದಾರಿಯುತವಾಗಿ ಫೋನ್ ಬಳಕೆ ಮಾಡುವ ಬಗ್ಗೆ ಮಾರ್ಗಸೂಚಿಗಳನ್ನು ಅಳವಡಿಸಿಕೊಳ್ಳಬೇಕು ಎಂದು ಹೈಕೋರ್ಟ್ ನಿರ್ದೇಶಿಸಿತು.

ಹಾಗಂತ, ಮಕ್ಕಳು ಮಾತ್ರ ಮೊಬೈಲ್​ಪ್ರಿಯರು ಎಂದು ಹಣೆಪಟ್ಟಿ ಹಚ್ಚುವಂತಿಲ್ಲ. ದೊಡ್ಡವರೂ ಕಡಿಮೆಯಿಲ್ಲ! ಸುಮಾರು 146 ಕೋಟಿ ಜನಸಂಖ್ಯೆಯ ಭಾರತದಲ್ಲಿ ಈಗ 115 ಕೋಟಿಗಿಂತ ಹೆಚ್ಚಿನ ಸಂಖ್ಯೆಯ ಮೊಬೈಲ್ ನಂಬರ್ ಸಂಪರ್ಕಗಳು ಇವೆ. 141 ಕೋಟಿ ಜನಸಂಖ್ಯೆಯ ಚೀನಾದಲ್ಲಿ 180 ಕೋಟಿಯಷ್ಟು ಮೊಬೈಲ್ ಸಂಪರ್ಕಗಳು ಇವೆಯಂತೆ. ಅಮೆರಿಕದಲ್ಲಿ ಇರುವ ಮೊಬೈಲ್ ಫೋನ್ ಸಂಪರ್ಕ ಸುಮಾರು 38 ಕೋಟಿ. ಭಾರತದಲ್ಲಿ ಮೊಬೈಲ್ ಫೋನ್ ಉತ್ಪಾದನೆ ಕಳೆದ ಹತ್ತು ವರ್ಷಗಳಲ್ಲಿ 21 ಪಟ್ಟು ಹೆಚ್ಚಿದೆ ಎಂದು ಇಂಡಿಯಾ ಸೆಲ್ಯುಲಾರ್ ಆಂಡ್ ಎಲೆಕ್ಟ್ರಾನಿಕ್ ಅಸೋಸಿಯೇಷನ್ (ಐಸಿಇಎ) ಹೇಳಿದೆ. ಕೇಂದ್ರ ಸರ್ಕಾರವು ಪಿಎಲ್​ಐ (ಕ್ಟಟಛ್ಠ್ಚಜಿಟ್ಞ ಔಜ್ಞಿkಛಿಛ ಐ್ಚ್ಞಜಿಡಛಿ) ಯೋಜನೆ ಜಾರಿಗೆ ತಂದ ಮೇಲೆ ವಿದೇಶಿ ಮೊಬೈಲ್ ತಯಾರಕ ಕಂಪನಿಗಳೂ ಸಹ ಭಾರತದಲ್ಲಿ ಘಟಕ ಆರಂಭಕ್ಕೆ ಉತ್ಸುಕತೆ ತೋರಿಸುತ್ತಿವೆ. ಭಾರತವು ಈಗ ದೇಶೀಯವಾಗಿ ಬೇಕಾಗುವ ಶೇ.97ರಷ್ಟು ಮೊಬೈಲ್ ಫೋನುಗಳನ್ನು ಇಲ್ಲಿಯೇ ಉತ್ಪಾದಿಸುತ್ತಿದೆ. 2024ರಲ್ಲಿ ಒಟ್ಟು ಉತ್ಪಾದನೆಯಲ್ಲಿ ಶೇ.30ನ್ನು ರಫ್ತು ಉದ್ದೇಶದಿಂದ ತಯಾರಿಸಲಾಗಿತ್ತು. ಇದರಿಂದ ದೇಶಕ್ಕೆ ಸಾಕಷ್ಟು ಆದಾಯವೂ ಬರುತ್ತಿದೆ; ದೊಡ್ಡ ಸಂಖ್ಯೆಯ ಉದ್ಯೋಗಸೃಷ್ಟಿಯೂ ಆಗುತ್ತಿದೆ. 2014-15ರಲ್ಲಿ ಮೊಬೈಲ್ ಫೋನ್ ಉತ್ಪಾದನೆಯ ಒಟ್ಟು ಮೌಲ್ಯ 18 ಸಾವಿರ ಕೋಟಿ ರೂ. ಇದ್ದರೆ, 2024ರ ಆರ್ಥಿಕ ಸಾಲಿನಲ್ಲಿ ಇದು 4.1 ಲಕ್ಷ ಕೋಟಿ ರೂ.ಗಳಿಗೆ ಏರಿರುವುದು ಗಮನಾರ್ಹ. 2014-15ರಲ್ಲಿ ಮೊಬೈಲ್ ಫೋನುಗಳ ರಫ್ತು ಮೌಲ್ಯ 1556 ಕೋಟಿ ರೂ.ಗಳಷ್ಟಿದ್ದರೆ, 2024ರಲ್ಲಿ ಈ ಪ್ರಮಾಣ 1.20 ಲಕ್ಷ ಕೋಟಿ ರೂ. ಆಗಬಹುದೆಂದು ಐಸಿಇಎ ಅಂದಾಜಿಸಿದೆ. ಮಧ್ಯಪ್ರಾಚ್ಯ, ಉತ್ತರ ಆಫ್ರಿಕಾ, ದಕ್ಷಿಣ ಅಮೆರಿಕ ಮಾರುಕಟ್ಟೆಗಳ ಜೊತೆಗೆ, ಯುನೈಟೆಡ್ ಕಿಂಗ್​ಡಮ್ ನೆದರ್​ಲ್ಯಾಂಡ್, ಆಸ್ಟ್ರೇಲಿಯಾ ಮುಂತಾದ ದೇಶಗಳಿಗೆ ಭಾರತದಿಂದ ಮೊಬೈಲ್ ಫೋನುಗಳು ಹೆಚ್ಚಿನ ಪ್ರಮಾಣದಲ್ಲಿ ರಫ್ತಾಗುತ್ತವೆ.

ಕೊನೇ ಮಾತು: ಭಾರತದಲ್ಲಿ ಹೆಚ್ಚಿನ ಪ್ರಮಾಣದ ಮೊಬೈಲ್ ಫೋನುಗಳ ಉತ್ಪಾದನೆಯಿಂದ ಉದ್ಯೋಗಸೃಷ್ಟಿ ಹಾಗೂ ಆರ್ಥಿಕತೆ ಮೇಲೆ ಸಕಾರಾತ್ಮಕ ಪರಿಣಾಮ ಆಗುತ್ತದೆ ಎಂಬುದು ಖರೆ. ಅಭಿವೃದ್ಧಿಶೀಲ ದೇಶವೊಂದು ಅಭಿವೃದ್ಧಿ ಹೊಂದಿದ ದೇಶವಾಗುವ ಪ್ರಕ್ರಿಯೆಯಲ್ಲಿ ಇಂಥದೆಲ್ಲ ನಡೆಯುತ್ತಿರುತ್ತದೆ. ಆದರೆ ಅದೇ ಹೊತ್ತಿಗೆ, ಮೊಬೈಲ್ ಫೋನ್ ಬಳಕೆ ಮೇಲೆ ನಿಯಂತ್ರಣ ಆಗದಿದ್ದರೆ ನಕಾರಾತ್ಮಕ ಪರಿಣಾಮಗಳು ಕೂಡ ಉಂಟಾಗುತ್ತವೆಂಬುದು ಸ್ಪಷ್ಟ. ಏಕೆಂದರೆ ನಗರ-ಹಳ್ಳಿ ಭೇದವಿಲ್ಲದೆ ಈಗ ಎಲ್ಲೆಡೆ ಮೊಬೈಲ್ ಸಾಮ್ರಾಜ್ಯ ಆವರಿಸಿದೆ... ಸಂಬಂಧಗಳನ್ನು ಕಟ್ಟುವ ಹಾಗೆ ಮುರಿಯುವಲ್ಲಿಯೂ ಮೊಬೈಲ್ ವೇದಿಕೆಯಾಗುತ್ತಿದೆ. ‘ಮಾನವರ ನಡುವಣ ಸಂವಹನಕ್ಕಿಂತ ತಂತ್ರಜ್ಞಾನವೇ ಮೇಲುಗೈ ಸಾಧಿಸಿದಾಗ ಜಗತ್ತು ಮೂರ್ಖರ ಪೀಳಿಗೆಯಿಂದ ಕೂಡಿರುತ್ತದೆ ಎಂಬುದು ನನ್ನ ಭಯ’ ಎಂದು ವಿಖ್ಯಾತ ವಿಜ್ಞಾನಿ ಆಲ್ಬರ್ಟ್ ಐನ್​ಸ್ಟೀನ್ ಅಂದೇ ಹೇಳಿದ್ದನ್ನು ವರ್ತಮಾನದಲ್ಲಿ ಮತ್ತೆಮತ್ತೆ ನೆನಪಿಸಿಕೊಳ್ಳಬೇಕಿದೆ.

(ಲೇಖಕರು ‘ವಿಜಯವಾಣಿ’ ಡೆಪ್ಯೂಟಿ ಎಡಿಟರ್)