ಅಂಕಣ

ಮಾಂಡವ್ಯ ಋಷಿಯ ಆದರ್ಶ: ಮಾಡದ ತಪ್ಪಿಗೆ ಕೆಲವೊಮ್ಮೆ ಶಿಕ್ಷೆ!

ಮಾಡದಿರುವ ತಪ್ಪಿಗೆ ಕೆಲವೊಮ್ಮೆ ನಾವು ಶಿಕ್ಷೆ ಅನುಭವಿಸಬೇಕಾಗಿ ಬರುತ್ತದೆ. ಅಂತಹ ಸಂದರ್ಭದಲ್ಲಿ ನಮ್ಮ ಮನಸ್ಥಿತಿ ಹಾಗೂ ವರ್ತನೆ ಹೇಗಿರಬೇಕು ಎಂಬುದರ ಮೇಲೆ ಬೆಳಕು ಚೆಲ್ಲುವ ಕಥಾನಕ ಇದು.

| ವಾದಿರಾಜ ಪ್ರಸನ್ನ

ಒಮ್ಮೆ ಮಾಂಡವ್ಯ ಋಷಿಗಳು ತಮ್ಮಆಶ್ರಮದಲ್ಲಿ ಧ್ಯಾನ ಮಾಡುತ್ತಾ ಕುಳಿತಿದ್ದರು. ಆಗ ಅಲ್ಲಿಗೆ ಕೆಲವು ಕಳ್ಳರು ಕದ್ದ ವಸ್ತುಗಳೊಂದಿಗೆ ಓಡೋಡಿ ಬಂದು, ಆಶ್ರಮದ ಒಂದು ಜಾಗದಲ್ಲಿ ಬಚ್ಚಿಟ್ಟು, ಮತ್ತೊಂದು ಕಡೆ ಅವಿತುಕೊಂಡರು. ಕಳ್ಳರನ್ನು ಹಿಡಿಯಲು ಹಿಂಬಾಲಿಸಿದ್ದ ರಾಜಭಟರು ಆ ಆಶ್ರಮಕ್ಕೂ ಬಂದರು. ಕದ್ದ ವಸ್ತುಗಳನ್ನು ವಶಪಡಿಸಿಕೊಂಡು, ಕಳ್ಳರನ್ನು ಹಿಡಿದರು. ಈ ವಿಷಯವೇ ತಿಳಿಯದ ಮಾಂಡವ್ಯರನ್ನು ಸಹ ಕಳ್ಳರ ಗುರುವೆಂದು ಭಾವಿಸಿ, ರಾಜನ ಬಳಿಗೆ ಕರೆದುಕೊಂಡು ಹೋದರು. ಕದ್ದ ವಸ್ತುಗಳ ಸಮೇತ ಸಿಕ್ಕಿದ್ದರಿಂದ ರಾಜನು ಪ್ರತ್ಯೇಕವಾಗಿ ವಿಚಾರಣೆ ಮಾಡದೆ, ‘ಅವರನ್ನು ಶೂಲಕ್ಕೆ ಏರಿಸಿ’ ಎಂಬ ತೀರ್ಪು ನೀಡಿದ. ಅದರಂತೆ ರಾಜಭಟರು ಎಲ್ಲರನ್ನೂ ಶೂಲಕ್ಕೆ ಏರಿಸಿದರು. ಕಳ್ಳರೆಲ್ಲರೂ ಶೂಲದ ಯಾತನೆ ಅನುಭವಿಸುತ್ತ ಸತ್ತು ಹೋದರು. ಆದರೆ, ಮಾಂಡವ್ಯರು ಮಾತ್ರ ಯಾತನೆಯಿಂದ ಬಳಲದೆ ಶಾಂತ ಚಿತ್ತರಾಗಿ ಭಗವಂತನ ಸ್ಮರಣೆ ಮಾಡುತ್ತಿರುವುದನ್ನು ರಾಜಭಟರು ಗಮನಿಸಿದರು. ಈ ವಿಷಯವನ್ನು ರಾಜನಿಗೆ ತಿಳಿಸಿದಾಗ, ರಾಜನೂ ಅಲ್ಲಿಗೆ ಬಂದ. ಮಾಂಡವ್ಯರನ್ನು ಕಂಡು ಇವರು ಮಹಾತ್ಮರೇ ಇರಬೇಕೆಂದು ನಿಶ್ಚಯಿಸಿ ‘ನಾನು ನಿಮ್ಮನ್ನು ವಿಚಾರಣೆ ಮಾಡದೇ ಶಿಕ್ಷೆ ವಿಧಿಸಬಾರದಾಗಿತ್ತು, ನನ್ನದು ತಪ್ಪಾಗಿದೆ’ ಎಂದು ಪಶ್ಚಾತ್ತಾಪದಿಂದ ಕ್ಷಮೆ ಯಾಚಿಸಿದ.

ಮಾಂಡವ್ಯರು ಸ್ವಲ್ಪವೂ ವಿಕಾರಗೊಳ್ಳದೆ ಕ್ಷಮಿಸಿದರು. ಇನ್ನು ಶೂಲವನ್ನು ದೇಹದಿಂದ ಹೊರಗೆ ತೆಗೆಯಲು ಪ್ರಯತ್ನಪಟ್ಟರೂ ಅದು ಸಂಪೂರ್ಣವಾಗಿ ಬರಲಿಲ್ಲ. ಸ್ವಲ್ಪ ಭಾಗ ತುಂಡಾಗಿ ದೇಹದಲ್ಲೇ ಉಳಿದುಕೊಂಡಿತು. ಇದನ್ನು ಬಲವಂತವಾಗಿ ತೆಗೆದರೆ ಅವರ ಜೀವಕ್ಕೆ ತೊಂದರೆ ಆಗಬಹುದೆಂದು ಅಲ್ಲಿಯೇ ಬಿಟ್ಟುಬಿಟ್ಟರು. ಈ ಕಾರಣದಿಂದಲೇ ಅವರಿಗೆ ಮುಂದೆ ಅಣಿಮಾಂಡವ್ಯ ಮಹರ್ಷಿ ಎಂಬ ಹೆಸರು ಬಂತು.

ಈ ಮಧ್ಯೆ ಪಕ್ಷಿಗಳ ರೂಪದಲ್ಲಿ ಬಂದ ಋಷಿಗಳು ಇವರನ್ನು ಪ್ರಶ್ನೆ ಮಾಡಿದರು- ‘‘ತಪ್ಪುಗಳನ್ನೇ ಮಾಡದ ನಿಮಗೆ ಈ ಘೊರ ಶಿಕ್ಷೆ ಏಕೆ?’’. ‘‘ನನ್ನ ಬಳಿ ಉತ್ತರವಿಲ್ಲ, ಯಮಧರ್ಮನನ್ನೇ ಕೇಳಬೇಕು’’ ಎಂದರು ಮಾಂಡವ್ಯರು. ಅವರು ಸಶರೀರರಾಗಿಯೇ ಯಮನ ಲೋಕಕ್ಕೆ ಪ್ರಯಾಣ ಬೆಳೆಸಿ, ಯಮರಾಜನನ್ನು ಕೇಳಿದರು - ‘‘ನನಗೆ ಏಕೆ ಈ ಶೂಲದ ಶಿಕ್ಷೆ?’’

ಯಮಧರ್ಮರು, ‘‘ನೀವು ಬಾಲಕರಾಗಿದ್ದಾಗ ಚಿಟ್ಟೆಗಳ ಪೃಷ್ಠಭಾಗಕ್ಕೆ ಕಡ್ಡಿಯಿಂದ ಚುಚ್ಚುತ್ತಿದ್ದಿರಿ. ಆ ಪಾಪದ ಫಲವಾಗಿ ಈ ಶಿಕ್ಷೆಯನ್ನು ಅನುಭವಿಸಬೇಕಾಗಿ ಬಂದಿತು’’ ಎಂದರು. ಆಗ ಮಾಂಡವ್ಯರು ‘‘ಸಣ್ಣ ವಯಸ್ಸಿನಲ್ಲಿ ಅರಿಯದೆ ಮಾಡಿದ ತಪ್ಪನ್ನು ಅಪರಾಧವೆಂದು ಪರಿಗಣಿಸಬಾರದು; 12ನೇ ವಯಸ್ಸಿನವರೆಗೂ ಬಾಲಕರೆಂದು ಪರಿಗಣಿಸಿ ತಪ್ಪನ್ನು ಕ್ಷಮಿಸಬೇಕಾಗಿತ್ತು. ಯಮಧರ್ಮರೇ ನೀವು ತಪ್ಪನ್ನು ಮಾಡಿದ್ದೀರಿ! ಆದ್ದರಿಂದ ಭೂಲೋಕದಲ್ಲಿ ಮಾನವ ಜನ್ಮ ತಾಳಿ’’ ಎಂದು ಶಾಪ ಕೊಟ್ಟರು. ಮುಂದೆ ಆ ಶಾಪದ ಫಲವಾಗಿ ಯಮಧರ್ಮರಾಯರೇ ವಿದುರನಾಗಿ ಅವತರಿಸಿದರು ಎಂದು ಮಹಾಭಾರತದ ಆದಿಪರ್ವ ವಿವರಿಸುತ್ತದೆ.

ಈ ಪ್ರಸಂಗದಲ್ಲಿ ಅನೇಕ ಅಂಶಗಳು ಇಂದಿಗೂ ನಮಗೆ ಪ್ರಸ್ತುತ. ಮಾಂಡವ್ಯರು, ಯಾರೋ ಮಾಡಿದ ಕಳ್ಳತನದಿಂದಾಗಿ ಶಿಕ್ಷೆಗೆ ಒಳಗಾದರು. ದೇಹಕ್ಕೆ ಯಾತನೆಯಾದರೂ ಭಗವಂತನ ಸ್ಮರಣೆಯಲ್ಲಿದ್ದರು. ಶಾಂತ ಚಿತ್ತರಾಗಿಯೇ ಇದ್ದರು. ಶಾಪ ಕೊಡಲು ಶಕ್ತರಾಗಿದ್ದರೂ ರಾಜಭಟರಿಗಾಗಲಿ, ರಾಜನಿಗಾಗಲಿ ಶಾಪ ಕೊಡಲಿಲ್ಲ. ಆಮೂಲಾಗ್ರವಾಗಿ ವಿಷಯವನ್ನು ತಿಳಿದುಕೊಂಡು ಯಮರಾಜನಿಗೆ ಶಾಪವನ್ನು ಇತ್ತರು.

ತಮ್ಮ ಜೀವನದಲ್ಲಿ ದೇಹಕ್ಕಾದ ನೋವನ್ನು ಲೆಕ್ಕಿಸದೆ ಭಗವತ್ ಸ್ಮರಣೆ, ತಪಸ್ಸು, ಅನುಷ್ಠಾನಗಳನ್ನು ಎಂದೂ ಬಿಡದೆ ಸಾಧನೆ ಮಾಡಿ ಉತ್ತಮ ಲೋಕವನ್ನು ಪಡೆದರು. ನಮ್ಮ ಜೀವನದಲ್ಲಿ ಕೂಡ ಅನೇಕ ಕಷ್ಟ ಕಾರ್ಪಣ್ಯಗಳು ಬಂದರೂ, ಭಾರತೀಯ ಮಹರ್ಷಿ ಪ್ರಣೀತವಾದ ಆತ್ಮಸಾಧನೆಯ ಮಾರ್ಗವನ್ನು ಅವಲಂಬಿಸೋಣ.