ಅಂಕಣ

ಸಮಷ್ಠಿ ಹಿತ ಮುಖ್ಯ: ಮನೋಲ್ಲಾಸ

Webdesk - Ravikanth
| ರಾಮಸುಬ್ರಾಯ ಶೇಟ್ 
ಕಾಲವು ಎಲ್ಲವನ್ನೂ ನಿರ್ಣಯಿಸುತ್ತದೆ. ಅಂತೆಯೇ ಶ್ರೀರಾಮಾವತಾರದ ಅಂತ್ಯವಾಗಬೇಕು. ಆದರೆ, ಪ್ರತಿಯೊಬ್ಬರೂ ಶ್ರೀರಾಮನ ಆಡಳಿತವನ್ನೇ ಬಯಸುತ್ತಿದ್ದರು. ಏನೇ ಆದರೂ ವಿಧಿನಿಯಮವನ್ನು ಮೀರುವಂತಿಲ್ಲ. ಒಂದು ದಿನ ಕಾಲಪುರುಷನು ಶ್ರೀರಾಮನ ಬಳಿಗೆ ಬಂದು, ‘ಏಕಾಂತದಲ್ಲಿ ಮಾತನಾಡಬೇಕೆಂದೂ, ಅದಕ್ಕೆ ಅವಕಾಶ ಮಾಡಿಕೊಡಬೇಕೆಂದೂ, ಯಾವುದೇ ಕಾರಣದಿಂದ ಏಕಾಂತ ಭಂಗವಾಗಬಾರದು’ ಎಂದು ಹೇಳುತ್ತಾನೆ. ಅದಕ್ಕೆ ಒಪ್ಪಿದ ಶ್ರೀರಾಮನು ಶ್ರದ್ಧಾಳು ಲಕ್ಷ್ಮಣನನ್ನೇ ಕಾವಲುಗಾರನನ್ನಾಗಿ ನೇಮಿಸಿ, ‘ಯಾರೇ ಬಂದರೂ ಒಳಕ್ಕೆ ಬಿಡಬಾರದೆಂದೂ, ನಿಯಮ ಉಲ್ಲಂಘನೆಯಾದರೆ ಗಡಿಪಾರಿನ ಶಿಕ್ಷೆ’ ಎಂದು ಕಟ್ಟಪ್ಪಣೆ ಮಾಡಿ ಕಾಲಪುರುಷನೊಂದಿಗೆ ಏಕಾಂತದಲ್ಲಿರುತ್ತಾನೆ.

ಅದೇ ಸಮಯಕ್ಕೆ ದೂರ್ವಾಸಮುನಿಗಳು ಬಂದು ತಾನು ಶ್ರೀರಾಮನನ್ನು ಈಗಲೇ ಕಾಣಬೇಕೆಂದು ಹೇಳುತ್ತಾರೆ. ಆಗ ಅಣ್ಣನು ಏಕಾಂತದಲ್ಲಿರುವುದಾಗಿಯೂ, ಯಾರನ್ನೂ ಒಳಗೆ ಬಿಡದಂತೆ ಕಟ್ಟಪ್ಪಣೆ ಮಾಡಿದ್ದಾನೆಂದೂ, ಇನ್ನು ಕೆಲವೇ ಕ್ಷಣಗಳಲ್ಲಿ ಆತ ಹೊರಗೆ ಬರುತ್ತಾನೆಂದೂ, ಅಲ್ಲಿಯವರೆಗೆ ವಿಶ್ರಾಂತಿ ಪಡೆಯಬೇಕೆಂದು ಹೇಳುತ್ತಾನೆ. ಲಕ್ಷ್ಮಣನ ಯಾವ ಮಾತಿಗೂ ಒಪ್ಪದ ದೂರ್ವಾಸ ಮುನಿಯು ತನಗೆ ತಕ್ಷಣ ರಾಮನ ದರ್ಶನವಾಗಬೇಕೆಂದು ಆಗ್ರಹಿಸುತ್ತಾನೆ. ಅಣ್ಣನು ಹೊರಗೆ ಬರುವವರೆಗೂ ತಾನೇ ಮುನಿಗಳ ಸೇವೆ ಮಾಡುವುದಾಗಿ ಲಕ್ಷ್ಮಣನು ಪರಿಪರಿಯಾಗಿ ಕೇಳಿಕೊಂಡರೂ ಕೇಳದ ದೂರ್ವಾಸರು ಶಾಪ ನೀಡುವುದಾಗಿ ಹೇಳುತ್ತಾರೆ. ಆ ಶಾಪವು ಸಂಪೂರ್ಣವಾಗಿ ಕುಲಕ್ಷಯವಾಗುವಂತಾಗಿರುತ್ತದೆ. ಲಕ್ಷ್ಮಣನ ತಳಮಳ ಮಿತಿಮೀರುತ್ತದೆ. ಅತ್ತ ದರಿ ಇತ್ತ ಪುಲಿ. ಒಂದೆಡೆ ಅಣ್ಣನ ಆದೇಶ; ಇನ್ನೊಂದೆಡೆ ಋಷಿಶಾಪ. ಲಕ್ಷ್ಮಣನು ಕೊನೆಯ ತೀರ್ವನಕ್ಕೆ ಬಂದನು. ಲೋಕದಲ್ಲಿ ಘನತೆವೆತ್ತ ಇಕ್ಷ್ವಾಕು ವಂಶದ ಉಳಿವಿಗಾಗಿ ತಾನು ಅಳಿದರೂ ಚಿಂತೆ ಇಲ್ಲ, ಅಣ್ಣನ ಆಜ್ಞೆ ಮೀರಿದರೂ, ತನ್ನ ಬಲಿದಾನವಾದರೂ ಆಗಲಿ ಎಂದು ದೂರ್ವಾಸರನ್ನು ಒಳಕ್ಕೆ ಬಿಡುತ್ತಾನೆ. ಏಕಾಂತ ಭಂಗವಾಗುತ್ತದೆ, ಕಾಲಪುರುಷನು ಹೊರಟುಹೋಗುತ್ತಾನೆ.

ಲಕ್ಷ್ಮಣನಿಲ್ಲದಿದ್ದರೆ ತಾನು ಬದುಕುವುದಿಲ್ಲವೆಂಬ ಸತ್ಯ ರಾಮನಿಗೆ ಸ್ಪಷ್ಟವಾಗಿತ್ತು. ಆದರೆ, ಶ್ರೀರಾಮನ ಮಾತು ಒಂದೇ, ಬಾಣ ಒಂದೇ. ಆದ್ದರಿಂದ ತಪ್ಪಿಗೆ ಶಿಕ್ಷೆ ಆಗಲೇಬೇಕಿತ್ತು. ಆದರೂ ಭಾರವಾದ ಮನಸ್ಸಿನಿಂದ ಕಾರಣ ಕೇಳಿದ. ತನ್ನ ಬಲಿದಾನದಿಂದ ಕುಲವನ್ನು ಕಾಪಾಡಿದ ತಮ್ಮನ ಮೇಲೆ ಇನ್ನಷ್ಟು ಹೆಮ್ಮೆ ಉಂಟಾಯಿತು. ಲಕ್ಷ್ಮಣನಿಗೆ ಗಡಿಪಾರಿನ ಶಿಕ್ಷೆಯಾಯಿತು.

ಅಂದು ಭಾರತಾಂಬೆಯ ದಾಸ್ಯದ ನೊಗ ಬಿಡಿಸಲು ಭಗತ್​ಸಿಂಗ್, ಚಂದ್ರಶೇಖರ ಆಜಾದ್, ಉದಾಮ್ಂಗ್, ಮದನ್​ಲಾಲ್ ಧಿಂಗ್ರಾ, ಸಾವರ್ಕರ್ ಮುಂತಾದ ಮಹಾಪುರುಷರು ರಾಷ್ಟ್ರಕ್ಕಾಗಿ ಹುತಾತ್ಮರಾದದ್ದು ಶಾಶ್ವತ ಇತಿಹಾಸ. ಇಂದೂ ನಮ್ಮ ಯೋಧರು ಗಡಿರಕ್ಷಣೆಗೆ ಜೀವವನ್ನು ಪಣಕ್ಕಿಟ್ಟು ಹೋರಾಡುತ್ತಿದ್ದಾರೆ. ಸತಿಸುತರನ್ನು ಮರೆತು ಮನೆ ಸಂಪತ್ತನ್ನು ಬಿಟ್ಟು ದೇಶರಕ್ಷಣೆಗೆ ಕಟಿಬದ್ಧರಾಗಿದ್ದಾರೆ. ಕುಟುಂಬ ಕಾಪಾಡಲು ಒಬ್ಬನ ಬಲಿ, ನಾಡಿಗಾಗಿ ಒಂದು ಕುಟುಂಬದ ಬಲಿ, ದೇಶಕ್ಕಾಗಿ ಅನೇಕರ ಬಲಿ. ಇದು ಭಾರತೀಯ ಭವ್ಯ ಪರಂಪರೆ. ಹೀಗೆ ಸಂಕುಚಿತತೆಯನ್ನು ತ್ಯಜಿಸಿ ರಾಷ್ಟ್ರದ ಒಳಿತಿಗೆ ತ್ಯಾಗಿಗಳಾಗಲು ಪ್ರಯತ್ನಿಸೋಣ.

(ಲೇಖಕರು ನಿವೃತ್ತ ಉಪನ್ಯಾಸಕ, ಗಮಕಿ)