ಅಂಕಣ

ಕಾನೂನು ಈ ನೆಲದ ಪರಂಪರೆಗಳಿಗೆ ವಿರುದ್ಧವಾಗಿರಬೇಕೇ?

ರಾಜ್ಯದಲ್ಲಿ ಹೊಸ ಚರ್ಚೆ ಆರಂಭವಾಗಿದೆ. ಹುಲಿಯುಗುರು ಧರಿಸಿದ್ದ ವರ್ತರು ಸಂತೋಷ್ ಎಂಬ ರಿಯಾಲಿಟಿ ಶೋ ಸ್ಪರ್ಧಿಯನ್ನು ವನ್ಯಜೀವಿ ಕಾಯ್ದೆ ಉಲ್ಲಂಘನೆಯ ಕಾರಣದಿಂದ ಪೊಲೀಸರು ಬಂಧಿಸಿದ್ದರು. ಈಗ ಜಾಮೀನಿನ ಮೇಲೆ ಅವರ ಬಿಡುಗಡೆ ಆಗಿದೆ. ಇದಲ್ಲದೆ ಇನ್ನೂ ಅನೇಕ ಸಮಾಜದ ಗಣ್ಯರು, ದೇವಾಲಯದ ಅರ್ಚಕರು, ರಾಜಕೀಯದವರು, ಸಿನಿಮಾ ನಟರು, ವಿಜ್ಞಾನಿಗಳು ಬಂಧನದ ಭೀತಿಯನ್ನು ಎದುರಿಸುತ್ತಿದ್ದಾರೆ.

ಕೇವಲ ಹುಲಿಯುಗುರು ಧರಿಸಿದ್ದರೆ ಬಂಧನವಾಗುತ್ತದೆ ಎಂದು ತಿಳಿದಿದ್ದ ಜನರಿಗೆ ಈಗ ಇನ್ನೂ ಆ ಕಾಯ್ದೆಯ ಅಡಿಯಲ್ಲಿ ಬಹಳ ವಸ್ತುಗಳನ್ನು ಇಟ್ಟುಕೊಳ್ಳುವಂತಿಲ್ಲ ಎಂಬುದು ಗಮನಕ್ಕೆ ಬರುತ್ತಿದೆ. ವನ್ಯಜೀವಿ ಸಂರಕ್ಷಣಾ ಕಾಯ್ದೆ 1972ರಲ್ಲಿಯೇ ಅಂಗೀಕೃತವಾಗಿದ್ದರೂ ಇಲ್ಲಿಯವರೆಗೆ ಈ ಕಾಯ್ದೆ ಬಗ್ಗೆ ಬಹಳ ಜನರಿಗೆ ತಿಳಿದಿಲ್ಲ ಎಂಬುದು ಜನರ ಅಭಿಪ್ರಾಯಗಳನ್ನು ನೋಡುತ್ತಿದ್ದರೆ ತಿಳಿಯುತ್ತದೆ. ಅಂದರೆ ಇದರ ಬಗ್ಗೆ ಅರಣ್ಯ ಇಲಾಖೆ ವ್ಯಾಪಕವಾಗಿ ಪ್ರಚಾರವನ್ನು ಮಾಡಬೇಕಿತ್ತು, ಶಾಲಾ, ಕಾಲೇಜು ಪಠ್ಯಗಳಲ್ಲಿ ಇನ್ನಷ್ಟು ಪರಿಣಾಮಕಾರಿಯಾಗಿ ಅಳವಡಿಸಬೇಕಿತ್ತು.

ಇದರ ಮಧ್ಯೆ ಇನ್ನೊಂದು ಪ್ರಶ್ನೆ ಕಾಡುತ್ತದೆ. ಸಂಸ್ಕೃತಿ, ಪರಂಪರೆ, ಇತಿಹಾಸಗಳನ್ನು ಅಭ್ಯಾಸಿಸಿ, ಜನರ ನಡುವೆ ಜನಾಭಿಪ್ರಾಯ ಸಂಗ್ರಹಿಸಿ ಈ ಕಾನೂನು ಜಾರಿಯಾಗಿದೆಯೇ ಎಂಬುದು. ಏಕೆಂದರೆ ಈ ಕಾಯ್ದೆಯ ಪ್ರಕಾರ ವನ್ಯಜೀವಿಗಳ ವಸ್ತುಗಳನ್ನು ಅಂದರೆ ಚರ್ಮ, ಮೂಳೆ, ಉಗುರು, ಕೂದಲು ಇತ್ಯಾದಿ ಬಳಸಬಾರದು. ಪ್ರಾಣಿಗಳನ್ನು ಜೀವಂತವಾಗಿ ಅಥವಾ ಸತ್ತ ರೀತಿಯಲ್ಲಿ ಬಳಸಬಾರದು. ಅವುಗಳ ಸಂರಕ್ಷಣೆಗೆ ತೊಂದರೆ ಆಗುವಂತಹ ನಕಲಿ ವಸ್ತುಗಳನ್ನೂ ಬಳಸಬಾರದು. ಇದು ಕಾಯ್ದೆಯ ಉಲ್ಲಂಘನೆ ಮತ್ತು ಶಿಕ್ಷಾರ್ಹ ಅಪರಾಧವಾಗುತ್ತದೆ. ಅಲ್ಲದೆ, ಈ ಅಪರಾಧಗಳಿಗೆ ಜಾಮೀನು ದೊರಕುವುದು ಸಹ ಕಷ್ಟ. ಹಾಗಿದ್ದರೆ ಇದು ಧಾರ್ವಿುಕವಾಗಿ, ಸಾಂಸ್ಕೃತಿಕವಾಗಿ ಕೆಲವು ವಿಷಯಗಳನ್ನು ವಿರೋಧಿಸುತ್ತದೆಯೇ ಎಂಬ ಪ್ರಶ್ನೆ ಜನಸಾಮಾನ್ಯರಲ್ಲಿ ಮೂಡುತ್ತಿದೆ. ಇವುಗಳನ್ನು ಈ ಕೆಳಗಿನಂತೆ ವಿಶ್ಲೇಷಿಸಬಹುದು.

ಹಿಂದೂ ಸನಾತನ ಧರ್ಮದಲ್ಲಿ ನಂಬಿಕೆ, ಪರಂಪರೆ, ಧಾರ್ವಿುಕತೆ, ಇತಿಹಾಸ, ಸಂಸ್ಕೃತಿ ಇವುಗಳ ಆಧಾರದಲ್ಲಿ ಅನೇಕ ವನ್ಯಜೀವಿಗಳ ವಸ್ತುಗಳನ್ನು ಬಳಸಲಾಗುತ್ತಿದೆ. ಹಾಗಿದ್ದರೆ ಈ ವಸ್ತುಗಳನ್ನು ಬಳಸುವವರನ್ನು ಬಂಧಿಸಲಾಗುತ್ತದೆಯೇ? ಹಿಂದಿನಿಂದ ಬಂದ ಪರಂಪರೆಗಳನ್ನು ಬಿಟ್ಟುಬಿಡಬೇಕೆ? ಪಾರಂಪರಿಕವಾದ ವಸ್ತುಗಳನ್ನು ಸರ್ಕಾರಕ್ಕೆ ಒಪ್ಪಿಸಬೇಕೆ? ಮುಂತಾದ ಗೊಂದಲಗಳು ಜನಸಾಮಾನ್ಯರನ್ನು ಕಾಡುತ್ತಿವೆ. ದೇವಾಲಯಗಳಲ್ಲಿ ನವಿಲುಗರಿಯನ್ನು ಅಲಂಕಾರಕ್ಕೆ ಬಳಸಲಾಗುತ್ತದೆ. ಅಲ್ಲದೆ, ಕಾಶ್ಮೀರದಿಂದ ಹಿಡಿದು ಕನ್ಯಾಕುಮಾರಿಯ ತನಕ ಜನರು ಮಕ್ಕಳಿಗೆ ಶ್ರೀಕೃಷ್ಣನ ವೇಷಹಾಕಿ ನವಿಲುಗರಿಯಿಂದ ಅಲಂಕಾರ ಮಾಡುತ್ತಾರೆ. ಈಗ ಇದು ಶಿಕ್ಷಾರ್ಹ ಅಪರಾಧವೇ? ಇದನ್ನು ಬಿಟ್ಟು ಬಿಡಬೇಕೆ ಎಂಬ ಪ್ರಶ್ನೆ ಮೂಡುತ್ತದೆ.

ಜೈನ ಧರ್ಮದ ಸಂನ್ಯಾಸಿಗಳು ಸಹ ನವಿಲುಗರಿಯನ್ನು ಧರ್ಮದ ಒಂದು ಭಾಗವಾಗಿ ಇಟ್ಟುಕೊಳ್ಳುತ್ತಾರೆ. ಅನೇಕ ಇಸ್ಲಾಂ ಧರ್ಮೀಯರು ದರ್ಗಾಗಳಲ್ಲಿ ಧಾರ್ವಿುಕ ನಂಬಿಕೆಯ ಭಾಗವಾಗಿ ನವಿಲುಗರಿಯನ್ನು ಬಳಸುತ್ತಾರೆ. ಹಾಗಿದ್ದರೆ ಅವರೂ ಅಪರಾಧ ಮಾಡುತ್ತಿದ್ದಾರೆಯೇ? ಇವರನ್ನು ಕಾಯ್ದೆ ಅನುಸಾರ ಹೇಗೆ ತಡೆಯಲಾಗುತ್ತದೆ? ಭಾರತೀಯ ದೇವಾಲಯಗಳಲ್ಲಿ ಸಾವಿರಾರು ವರ್ಷಗಳಿಂದ ದೇವರ ಸೇವೆಗಾಗಿ ಚಾಮರಗಳನ್ನು ಬೀಸಲಾಗುತ್ತದೆ. ಇದನ್ನು ಚಮರೀ ಮೃಗದ ಕೂದಲಿನಿಂದ ಮಾಡಲಾಗಿದೆ. ಉದಾಹರಣೆಗೆ ತಿರುಪತಿ, ಮೇಲುಕೋಟೆ, ಚಾಮುಂಡಿಬೆಟ್ಟ ಇತ್ಯಾದಿ. ಇವುಗಳನ್ನು ಮುಂದೆ ಬಳಸುವಂತಿಲ್ಲವೇ?

ಬ್ರಾಹ್ಮಣರು, ಕ್ಷತ್ರಿಯರು, ವೈಶ್ಯರು ಮತ್ತು ಕೆಲವು ಇತರ ಸಮುದಾಯಗಳಲ್ಲೂ ಉಪನಯನದ ಪರಂಪರೆ ಇದ್ದು, ಇದರಲ್ಲಿ ಒಂದು ಚಿಕ್ಕ ಭಾಗವಾದರೂ ಜಿಂಕೆಯ ಚರ್ಮವನ್ನು ಅಜಿನ ಎಂದು ಬಳಸುವ ಪದ್ಧತಿಯಿದೆ. ಇದು ಅವರ ಧಾರ್ವಿುಕ ಆಚರಣೆಯ ಭಾಗವಾಗಿದೆ. ಇನ್ನು ಮುಂದೆ ಇದನ್ನೂ ನಿಲ್ಲಿಸಿದರೆ ಅವರ ಧಾರ್ವಿುಕ ಆಚರಣೆಯ ಹಕ್ಕು ಮೊಟಕಾಗುವುದಿಲ್ಲವೇ?

ದೇವಾಲಯ, ಅರಮನೆ, ಗುರುಮನೆಗಳಲ್ಲಿ ಸುಮಾನ ಗರಿ ಎಂಬ ದಂತದಿಂದ ಮಾಡಿದ ಕುಚ್ಚಿನ ರೀತಿಯ ದಂಡಗಳನ್ನು ಬಳಸಲಾಗುತ್ತದೆ. ದೇವಾಲಯಗಳಲ್ಲಿ, ಅರಮನೆಗಳಲ್ಲಿ, ಗುರುಮನೆಗಳಲ್ಲಿ ದಂತದ ಸಿಂಹಾಸನ, ದಂತದ ಪಲ್ಲಕ್ಕಿ, ದಂತದ ಬಾಚಣಿಗೆ, ದಂತದ ಕನ್ನಡಿ ಇತ್ಯಾದಿ ಸಾವಿರಾರು ವರ್ಷಗಳ ಪಾರಂಪರಿಕ ಇತಿಹಾಸ ಮೌಲ್ಯವುಳ್ಳ ವಸ್ತುಗಳನ್ನು ಧಾರ್ವಿುಕ ಪೂಜೆ, ಪುನಸ್ಕಾರಗಳಲ್ಲಿ ಬಳಸಲಾಗುತ್ತಿದೆ.

ಕೆಲವು ದೇವಾಲಯಗಳಲ್ಲಿ ಸುವಾಸನೆಗಾಗಿ ಪುನುಗು ಬೆಕ್ಕು ಬಳಸಲಾಗುತ್ತಿದೆ. ಇದನ್ನು ನಿಲ್ಲಿಸಬೇಕಾಗುತ್ತದೆಯೇ? ಪುಂಸವನ, ಸೀಮಂತದಂತಹ ಕೆಲವು ಧಾರ್ವಿುಕ ಸಂಸ್ಕಾರಗಳಲ್ಲಿ ಹಿಂದೂ ಸನಾತನ ಧರ್ವಿುಯರು ಮುಳ್ಳುಹಂದಿಯ ಮುಳ್ಳನ್ನು ಬಳಸುತ್ತಾರೆ. ಅದನ್ನೂ ಅವರು ವರ್ಜಿಸಬೇಕೆ? ಅನೇಕ ಮಠಗಳಲ್ಲಿ, ಪರಂಪರೆಗಳಲ್ಲಿ ಹಿಂದಿನಿಂದ ಬಂದ ಜಿಂಕೆಚರ್ಮ ಇಟ್ಟುಕೊಂಡಿರುತ್ತಾರೆ

ಹಿಂದೆ ಕಾಡುಗಳಲ್ಲಿ ಸಿಗುತ್ತಿದ್ದ ಜಿಂಕೆಯ ಕೊಂಬುಗಳನ್ನು ಜನಸಾಮಾನ್ಯರು ಔಷಧೀಯ ಕಾರಣಗಳಿಂದ ಮನೆಯಲ್ಲಿ ಇಟ್ಟುಕೊಂಡಿದ್ದರು. ಇಂತಹ ಸಾವಿರಾರು ಜನರನ್ನು ನಾವು ನೋಡಬಹುದು. ಇದು ಸಹ ಇಂದಿಗೆ ಅಪರಾಧದಂತೆ ಕಾಣುತ್ತದೆ. ಇದಲ್ಲದೆ ಅರಮನೆಗಳಲ್ಲಿ, ಗುರುಮನೆಗಳಲ್ಲಿ ಸಾಂಸ್ಕೃತಿಕ ಆಚರಣೆಯ ಭಾಗವಾಗಿ ಆನೆಗಳನ್ನು ಬಳಸಲಾಗುತ್ತಿದ್ದು, ಈ ಕಾಯ್ದೆ ಪ್ರಕಾರ ಅವುಗಳನ್ನು ನಿಲ್ಲಿಸಬೇಕೇ? ಅರಮನೆಗಳಲ್ಲಿ, ಹಳೆಯ ಮನೆಗಳಲ್ಲಿ ಇರುವ ಪ್ರಾಣಿಗಳ ಎಲ್ಲ್ಲ ಅವಶೇಷಗಳನ್ನೂ ತೆಗೆಸಬೇಕೇ? ಕಾಡಿನಿಂದ ಬರುವ ಜೇನುತುಪ್ಪ ಬಳಸುವುದು ಶಿಕ್ಷಾರ್ಹ ಅಪರಾಧವಾಗುತ್ತದೆಯೇ?

ಹಬ್ಬ, ಹರಿದಿನಗಳಲ್ಲಿ ಉಪಯೋಗಿಸುವ ಅನೇಕ ಚರ್ಮವಾದ್ಯ (ಉದಾ: ದಮ್ಮಡಿಯನ್ನು ಉಡದ ಚರ್ಮದಲ್ಲಿಯೇ ಮಾಡಿರುತ್ತಾರೆ)ಗಳನ್ನೂ ಹೊಂದಿರುವವರನ್ನೂ ಬಂಧಿಸಲಾಗುತ್ತದೇಯೇ? ಇಲ್ಲ 2003ಕ್ಕೆ ಮುಂಚೆ ಇವುಗಳು ತಮ್ಮ ಬಳಿ ಇರುವುದನ್ನು ಘೊಷಿಸಿಕೊಳ್ಳಬೇಕಿತ್ತು ಎಂದು ತಿಳಿಸಿದರೆ, ಇನ್ನೂ ಘೊಷಿಸಿಕೊಂಡಿಲ್ಲದವರ ಕತೆ ಏನು? ಅವರಿಗೆ ಕಾನೂನಿನ ರಕ್ಷೆ ಇದೆಯೇ? ದೇವಾಲಯಗಳಲ್ಲಿ ಇರುವ ವಸ್ತು ಅರಣ್ಯ ಇಲಾಖೆಯಲ್ಲಿ ನೋಂದಾಯಿತ ಅಲ್ಲದಿದ್ದರೆ ಅಧಿಕಾರಿಗಳನ್ನು ಬಂಧಿಸಲಾಗುತ್ತದೆಯೇ?

ಹೀಗೆ ನೋಡುತ್ತ ಹೋದರೆ ಇದು ಗೊಂದಲಮಯವಾಗಿ ಕಾಣುತ್ತದೆ. ಇವೆಲ್ಲವನ್ನೂ ನಿಷೇಧಿಸಿ ಹಿಂದೂ ಸನಾತನ ಧರ್ಮದ ನಂಬಿಕೆಗಳನ್ನು ಮಾತ್ರ ಅಲುಗಾಡಿಸುವರೆ? ಕಾನೂನು ಈ ನೆಲದ ಸಂಸ್ಕೃತಿ-ಪರಂಪರೆಗಳಿಗೆ ವಿರುದ್ಧವಾಗಿರಬೇಕೆ? ಎಲ್ಲ ಪರಂಪರೆಗಳನ್ನೂ ತಿರಸ್ಕರಿಸಬೇಕೇ? ಈ ರೀತಿಯ ಒಂದಲ್ಲ ಒಂದು ವಸ್ತು ಹೊಂದಿರುವ ಎಲ್ಲರನ್ನೂ ಬಂಧಿಸಬೇಕಾ? ಇದನ್ನು ತರುವವರಿಗೆ, ಪ್ರಾಣಿಗಳನ್ನು ಕೊಲ್ಲುವವರಿಗೆ, ಇದನ್ನು ಮಾರಾಟ ಮಾಡುವವರಿಗೆ ಶಿಕ್ಷೆ ಇಲ್ಲದೆ ನುಣುಚಿಕೊಳ್ಳುವಾಗ ಆಕರ್ಷಣೆಗೆ ಒಳಗಾಗಿ ಇಟ್ಟುಕೊಂಡಿರುವವನಿಗೆ ಮಾತ್ರ ಶಿಕ್ಷೆಯೇ?

ದಯವಿಟ್ಟು ಯೋಚಿಸಿ. ಕಾನೂನಿನ ಉದ್ದೇಶ ವನ್ಯಪ್ರಾಣಿಗಳನ್ನು ಸಂರಕ್ಷಿಸುವುದೇ ಹೊರತು ಎಲ್ಲ ನಾಗರಿಕರಿಗೆ ತೊಂದರೆ ಕೊಡುವುದು ಆದ್ಯತೆಯಾಗಬಾರದು. ಕಾಡು ಮತ್ತು ನಾಡಿನ ನಡುವೆ ಸಾಮರಸ್ಯ ಸಾಧಿಸುವುದೇ ಕಾನೂನಿನ ನಿಜವಾದ ಉದ್ದೇಶ. ಮೊದಲು ನಾಡಿನ ಜನರಿಗೆ ಕಾನೂನಿನ ಅರಿವು ಉಂಟು ಮಾಡಿ, ಆಗ ಜನರೇ ಸುಶಿಕ್ಷಿತರಾಗಿ ಈ ರೀತಿಯ ಪ್ರಾಣಿಗಳ ಹಿಂಸೆಗೆ ಕಾರಣವಾಗುವ ಅಂಶಗಳನ್ನು ನಿಲ್ಲಿಸುತ್ತಾರೆ. ಅಲ್ಲದೆ ಹಿಂದೂ ಧರ್ಮದ ಆಚರಣೆಗಳು ಪ್ರಕೃತಿಗೆ ಪೂರಕವಾಗಿರುತ್ತವೆ. ಮತ್ತು ಹಿಂದೂ ಸನಾತನ ಧರ್ಮವು ಪರಿವರ್ತನೆಯೇ ಜಗದ ನಿಯಮ ಎಂಬುದನ್ನು ಒಪ್ಪಿ ಜಗದ ಒಳಿತಿಗಾಗಿ ಸದಾ ಹೊಂದಾಣಿಕೆಗಳನ್ನು ಮಾಡಿಕೊಂಡು, ಹೊಸ ವಿಚಾರಗಳನ್ನು ಅಳವಡಿಸಿಕೊಳ್ಳುತ್ತದೆ ಎಂಬುದನ್ನು ಗಮನಿಸಬೇಕು.

(ಲೇಖಕರು ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಪ್ರಾಚೀನ ಇತಿಹಾಸ, ಪುರಾತತ್ವ ಅಧ್ಯಯನ ಮತ್ತು ಸಂಶೋಧನಾ ವಿಭಾಗದ ಮುಖ್ಯಸ್ಥರು)