‘ಎಲ್ಲಿ ಶಿವರಾಮಣ್ಣಂಗೆ ಫೋನ್ ಮಾಡು ...’
ಶುಭ ಸಮಾರಂಭಗಳಿರಲಿ, ನೋವಿನ ಸಮಾಚಾರಗಳಿರಲಿ ... ಚಿತ್ರರಂಗದಲ್ಲಿ ಏನೇ ಆಗಲೀ, ಜನ ಮೊದಲು ನೆನಪಿಸಿಕೊಳ್ಳುತ್ತಿದ್ದುದು ಹಿರಿಯ ನಟ ಶಿವರಾಂ ಅವರನ್ನು. ಅವರು ಹಿರಿಯರು, ಮುಂದೇನು ಮಾಡಬೇಕು ಎಂದು ಚೆನ್ನಾಗಿ ಗೊತ್ತಿರುವವರು ಎಂಬುದಕ್ಕಿಂತ ಯಾವ ಕೆಲಸವನ್ನಾದರೂ ಅವರು ಚೆನ್ನಾಗಿ ನಿಭಾಯಿಸುತ್ತಾರೆ. ಅದ್ಭುತವಾಗಿ ಸಂಘಟನೆ ಮಾಡುತ್ತಾರೆ ಎಂಬ ಕಾರಣಕ್ಕೆ ಶಿವರಾಮಣ್ಣ ಮೊದಲು ನೆನಪಾಗುತ್ತಿದ್ದರು.
ಹಿರಿಯ ನಟಿ ಬಿ. ಸರೋಜಾದೇವಿ ಅವರ ಮನೆಯ ಸತ್ಯನಾರಾಯಣ ಪೂಜೆಯಾಗಲಿ, ಶಿವರಾಜಕುಮಾರ್ ಅವರ ಮನೆಯಲ್ಲಿ ಪ್ರತೀವರ್ಷ ನಡೆಯುವ ಸ್ವಾಮಿ ಅಯ್ಯಪ್ಪ ಪೂಜೆಯಾಗಲಿ, ವಿಷ್ಣುವರ್ಧನ್ ಅವರ ಮನೆಯ ಕಾರ್ಯಕ್ರಮಗಳಿರಲಿ, ಕಲಾವಿದರ ಸಂಘದ ಸಮಾರಂಭಗಳು ಮತ್ತು ಸಭೆಗಳಿರಲಿ ... ಅಲ್ಲೆಲ್ಲ ಶಿವರಾಮಣ್ಣ ಬೇಕೇ ಬೇಕು. ಈಗಷ್ಟೇ ಅಲ್ಲ, ದಿಗ್ಗಜ ನಿರ್ದೇಶಕರಾದ ಪುಟ್ಟಣ್ಣ ಕಣಗಾಲ್, ಕೆ.ಎಸ್.ಎಲ್. ಸ್ವಾಮಿ ಮುಂತಾದವರು ಶಿವರಾಮಣ್ಣ ಇದ್ದರೆ ಧೈರ್ಯ ಎಂದು ಅವರು ತಮ್ಮ ಚಿತ್ರಗಳ ಮೇಲುಸ್ತುವಾರಿಯನ್ನು ಅವರಿಗೆ ವಹಿಸುತ್ತಿದ್ದರು. ಅದನ್ನು ಶಿವರಾಮಣ್ಣ ಅಷ್ಟೇ ಸಮರ್ಥವಾಗಿ ಯಾವುದೇ ಕುಂದು ಬರದೆ ನಿರ್ವಹಿಸುತ್ತಿದ್ದರು. ಅದೇ ಕಾರಣಕ್ಕೆ ಅವರನ್ನು ಚಿತ್ರರಂಗದ ಆಪ್ತಮಿತ್ರ ಎಂದೇ ಕರೆಯಲಾಗುತ್ತಿತ್ತು.
ಬರೀ ನಟನೆಯಷ್ಟೇ ಅಲ್ಲ, ತಮ್ಮ ಹಿರಿಯ ಸಹೋದರ ಮತ್ತು ನಿರ್ವಪಕ-ನಿರ್ದೇಶಕರಾದ ಎಸ್. ರಾಮನಾಥ್ ಅವರೊಂದಿಗೆ ಸೇರಿ ಚಿತ್ರಜ್ಯೋತಿ ಕಂಬೈನ್ಸ್, ರಾಶಿ (ರಾಮನಾಥ್-ಶಿವರಾಂ) ಪಿಕ್ಚರ್ಸ್ ಮುಂತಾದ ಸಂಸ್ಥೆಗಳನ್ನು ಹುಟ್ಟುಹಾಕಿ ಹಲವು ಚಿತ್ರಗಳನ್ನು ನಿರ್ವಿುಸಿದರು. ಪುಟ್ಟಣ್ಣ ಕಣಗಾಲ್ ನಿರ್ದೇಶನದ ‘ಗೆಜ್ಜೆಪೂಜೆ’ ಚಿತ್ರದಿಂದ ನಿರ್ಮಾಣ ಪ್ರಾರಂಭಿಸಿದ ಅವರು, ನಂತರದ ವರ್ಷಗಳಲ್ಲಿ ‘ಉಪಾಸನೆ’, ‘ನಾನೊಬ್ಬ ಕಳ್ಳ’, ‘ಡ್ರೖೆವರ್ ಹನುಮಂತು’, ‘ಧರ್ಮದುರೈ’ ಮತ್ತು ‘ಬಹಳ ಚೆನ್ನಾಗಿದೆ’ ಚಿತ್ರಗಳನ್ನು ನಿರ್ವಿುಸಿದರು. ಅಷ್ಟೇ ಅಲ್ಲ, ರಾಮನಾಥ್ ಅವರ ಜತೆಗೆ ಸೇರಿ ಡಾ. ರಾಜಕುಮಾರ್ ಮತ್ತು ಭಾರತಿ ಅಭಿನಯದ ‘ಹೃದಯ ಸಂಗಮ’ ಚಿತ್ರವನ್ನು ನಿರ್ದೇಶಿಸಿದ್ದ ಅವರು, ‘ಡ್ರೖೆವರ್ ಹನುಮಂತು’ ಚಿತ್ರದಲ್ಲಿ ಮೊದಲ ಬಾರಿಗೆ ನಾಯಕನಾಗಿ ಕಾಣಿಸಿಕೊಂಡಿದ್ದರು. ಈ ಚಿತ್ರದಲ್ಲಿ ವಿಷ್ಣುವರ್ಧನ್ ಮತ್ತು ಅಂಬರೀಷ್ ಅತಿಥಿ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದು ವಿಶೇಷವಾಗಿತ್ತು.
50ರ ದಶಕದ ಕೊನೆಗೆ ಕನ್ನಡ ಚಿತ್ರರಂಗಕ್ಕೆ ಸಹಾಯಕ ನಿರ್ದೇಶಕರಾಗಿ ಕಾಲಿಟ್ಟ ಅವರು, 1965ರಲ್ಲಿ ಬಿಡುಗಡೆಯಾದ ‘ಬೆರೆತ ಜೀವ’ ಚಿತ್ರದ ಮೂಲಕ ನಟರಾದರು. ನಂತರದ ವರ್ಷಗಳಲ್ಲಿ ‘ಲಗ್ನಪತ್ರಿಕೆ’, ‘ಶರಪಂಜರ’ ಮುಂತಾದ ಚಿತ್ರಗಳಲ್ಲಿ ನಟಿಸಿದರು. ‘ಶರಪಂಜರ’ ಚಿತ್ರದ ಅಡುಗೆಭಟ್ಟನ ಪಾತ್ರ , ‘ನಾಗರಹಾವು’ ಚಿತ್ರದ ವರದನ ಪಾತ್ರ ಅವರಿಗೆ ದೊಡ್ಡ ಜನಪ್ರಿಯತೆ ತಂದುಕೊಟ್ಟಿತು. ಅದರಲ್ಲೂ, ‘ನಾಗರಹಾವು’ ಚಿತ್ರದಲ್ಲಿ ‘ಅದೇ ನನ್ನ ಸ್ಪೆಷಾಲಿಟಿ ...’ ಎಂಬ ಅವರ ಡೈಲಾಗು ಬಹಳ ಜನಪ್ರಿಯವಾಯಿತು. ಈ ಚಿತ್ರಗಳ ಯಶಸ್ಸಿನ ನಂತರ ಬೇಡಿಕೆಯ ನಟರಾದ ಶಿವರಾಮಣ್ಣ, ನಂತರದ ದಿನಗಳಲ್ಲಿ ‘ಎಡಕಲ್ಲು ಗುಡ್ಡದ ಮೇಲೆ’, ‘ಶುಭಮಂಗಳ’, ‘ಹೊಂಬಿಸಿಲು’, ‘ಗುರು ಶಿಷ್ಯರು’, ‘ಶ್ರಾವಣ ಬಂತು’, ‘ಹೊಸ ಬೆಳಕು’, ‘ತಾಯಿ ಸಾಹೇಬ’, ‘ಗಣೇಶನ ಮದುವೆ’, ‘ಯಜಮಾನ’, ‘ಆಪ್ತಮಿತ್ರ’, ‘ಬಂಗಾರ ಸನ್ ಆಫ್ ಬಂಗಾರದ ಮನುಷ್ಯ’ ಸೇರಿ 100ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದರು.
ರಾಜ್ಯೋತ್ಸವ ಪ್ರಶಸ್ತಿ: ಶಿವರಾಮಣ್ಣ ನಿರ್ವಿುಸಿದ ‘ಗೆಜ್ಜೆಪೂಜೆ’, ‘ಉಪಾಸನೆ’ ಮುಂತಾದ ಚಿತ್ರಗಳಿಗೆ ರಾಜ್ಯ ಸರ್ಕಾರದಿಂದ ಹಲವು ಪ್ರಶಸ್ತಿಗಳು ಸಿಕ್ಕಿವೆ. ಕನ್ನಡ ಚಿತ್ರರಂಗಕ್ಕೆ ಅವರು ಸಲ್ಲಿಸಿರುವ ಸೇವೆಯನ್ನು ಗುರುತಿಸಿ ಅವರಿಗೆ 2010-11ನೇ ಸಾಲಿನ ಡಾ. ರಾಜಕುಮಾರ್ ಪ್ರಶಸ್ತಿ, 1992ರಲ್ಲಿ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ಗಿರೀಶ್ ಕಾಸರವಳ್ಳಿ ನಿರ್ದೇಶನದ ‘ತಾಯಿ ಸಾಹೇಬ’ ಚಿತ್ರದಲ್ಲಿನ ಅಭಿನಯಕ್ಕಾಗಿ ಅತ್ಯುತ್ತಮ ಪೋಷಕ ನಟ ಪ್ರಶಸ್ತಿ ಸಹ ಅವರಿಗೆ ಸಿಕ್ಕಿತ್ತು.
ಶ್ರೇಷ್ಠ ಕಲಾವಿದ ಹಾಗೂ ಆದರ್ಶ ವ್ಯಕ್ತಿತ್ವ ಹೊಂದಿದ್ದ ಶಿವರಾಂ ಅವರ ನಿಧನದ ಸುದ್ದಿ ತಿಳಿದು ವಿಷಾದವಾಯಿತು. ಸರಳ ಸಜ್ಜನಿಕೆಯ ಕಲಾವಿದನನ್ನು ಕಳೆದುಕೊಂಡು ನಾಡು ಬಡವಾಗಿದೆ. ಶಿವರಾಂ ಧರ್ಮಸ್ಥಳದ ಅಭಿಮಾನಿ ಭಕ್ತರಾಗಿದ್ದು, ಅನೇಕ ಬಾರಿ ಕ್ಷೇತ್ರಕ್ಕೆ ಬಂದಿದ್ದಾರೆ. ಅವರ ಮನೆಯಲ್ಲಿನ ಬೃಹತ್ ಗ್ರಂಥಾಲಯ ನೋಡಿ ಅವರ ಸಾಹಿತ್ಯಾಸಕ್ತಿ ಹಾಗೂ ಪುಸ್ತಕ ಪ್ರೀತಿ ಬಗ್ಗೆ ನನಗೆ ಅಭಿಮಾನ ಮೂಡಿತ್ತು. | ಡಾ.ಡಿ.ವೀರೇಂದ್ರ ಹೆಗ್ಗಡೆ ಶ್ರೀಕ್ಷೇತ್ರ ಧರ್ಮಸ್ಥಳ ಧರ್ಮಾಧಿಕಾರಿ
ಪುಸ್ತಕಗಳೆಂದರೆ ಅಪಾರ ಪ್ರೀತಿ: ಶಿವರಾಮಣ್ಣ ಬರೀ ಚಿತ್ರೋದ್ಯಮಿಯಷ್ಟೇ ಅಲ್ಲ, ಹಲವು ಹವ್ಯಾಸಗಳನ್ನು ರೂಢಿಸಿಕೊಂಡಿದ್ದರು. ಸ್ಟಾಂಪ್, ನಾಣ್ಯ, ಪುಸ್ತಕ ಮತ್ತು ಫೋಟೋಗಳನ್ನು ಸಂಗ್ರಹಿಸಿದ್ದರು. ಕೆಲವು ವರ್ಷಗಳ ಹಿಂದೆ ಆ ಸಂಗ್ರಹದ ಪ್ರದರ್ಶನವನ್ನೂ ಏರ್ಪಡಿಸಿದ್ದರು. ತಮ್ಮ ಬಳಿ ಇರುವ ಅಪರೂಪದ ಪುಸ್ತಕದ ಭಂಡಾರವು, ನಾಲ್ಕು ಜನರಿಗೆ ಅನುಕೂಲವಾಗಲಿ ಎಂಬ ನಿಟ್ಟಿನಲ್ಲಿ ಬನಶಂಕರಿಯಲ್ಲಿರುವ ತಮ್ಮ ಅಪಾರ್ಟ್ವೆುಂಟ್ನ ಒಂದು ಕೋಣೆಯಲ್ಲಿ ಗ್ರಂಥಾಲಯ ಮತ್ತು ವಾಚನಾಲಯವನ್ನು ಕೆಲವು ವರ್ಷಗಳ ಹಿಂದೆ ಆರಂಭಿಸಿದ್ದರು.
ಅಯ್ಯಪ್ಪನ ಪರಮಭಕ್ತ: ಶಬರಿಮಲೈ ಸ್ವಾಮಿ ಅಯ್ಯಪ್ಪನ ಪರಮ ಭಕ್ತರಾಗಿದ್ದ ಶಿವರಾಮಣ್ಣ, ಪ್ರತೀ ವರ್ಷ ತಪ್ಪದೆ ಶಬರಿಮಲೈಗೆ ಭೇಟಿ ಕೊಟ್ಟು ಅಯ್ಯಪ್ಪನ ದರ್ಶನ ಮಾಡುವ ಪರಿಪಾಠ ಇಟ್ಟುಕೊಂಡಿದ್ದರು. ಹಲವು ವರ್ಷಗಳ ಕಾಲ ಸತತ ದರ್ಶನ ಮಾಡುವ ಮೂಲಕ ಗುರುಸ್ವಾಮಿಯಾಗಿದ್ದರು. ಡಾ. ರಾಜಕುಮಾರ್ ಸೇರಿ ಹಲವು ನಟರ ಜತೆಗೆ ಶಬರಿಮಲೈಗೆ ಹೋಗಿ ತಪ್ಪದೇ ದರ್ಶನ ಮಾಡುತ್ತಿದ್ದ ಅವರು, ಶಿವರಾಜಕುಮಾರ್ ಅವರ ಮನೆಯಲ್ಲಿ ಪ್ರತೀ ವರ್ಷ ನಡೆಯುವ ಪೂಜೆಯ ನೇತೃತ್ವ ವಹಿಸುತ್ತಿದ್ದರು.
ಶಿವರಾಂ ಅವರ ನಿಧನ ತುಂಬಾ ದುಃಖದ ವಿಷಯ. ಅವರ ಅಗಲಿಕೆಯಿಂದ ಕನ್ನಡ ಚಿತ್ರರಂಗಕ್ಕೆ ತುಂಬಲಾರದ ನಷ್ಟವಾಗಿದೆ. ದೇವರು ಅವರ ಆತ್ಮಕ್ಕೆ ಶಾಂತಿ ನೀಡಲಿ, ಅವರ ಕುಟುಂಬಕ್ಕೆ ನೋವನ್ನು ಭರಿಸುವ ಶಕ್ತಿಯನ್ನು ಕರುಣಿಸಲೆಂದು ಪ್ರಾರ್ಥಿಸುತ್ತೇನೆ. | ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿ
ಆಸ್ಪತ್ರೆಯಲ್ಲಿ ಅವರನ್ನು ನೋಡಿದಾಗ, ಅವರು ನಮ್ಮ ಜತೆಗೆ ಇರುತ್ತಾರೆ ಎಂಬ ನಂಬಿಕೆ ಇತ್ತು. ಈಗ ಇಲ್ಲ ಎಂದು ಹೇಳುವುದಕ್ಕೆ ನೋವಾಗುತ್ತಿದೆ. ಅವರು ನಮ್ಮ ಕುಟುಂಬದ ಸದಸ್ಯರಾಗಿದ್ದರು. ನಮ್ಮ ಕುಟುಂಬದ ಎಲ್ಲರ ಜತೆಗೆ ಅವರ ಒಡನಾಟ ಇತ್ತು. ಎಲ್ಲರನ್ನೂ ಒಟ್ಟಾಗಿ ಶಬರಿಮಲೈಗೆ ಅವರು ಕರೆದುಕೊಂಡು ಹೋಗುತ್ತಿದ್ದನ್ನು ಮರೆಯುವುದಕ್ಕೆ ಸಾಧ್ಯವೇ ಇಲ್ಲ. | ಶಿವರಾಜಕುಮಾರ್ ನಟ
ಪದ್ಮನಾಭನಗರದ ಕ್ಷೇತ್ರದ ಅಭಿವೃದ್ಧಿಗೆ ಸಲಹೆ ಕೊಡುವುದರ ಜತೆಗೆ, ಸಾಕಷ್ಟು ಕೆಲಸ ಮಾಡಿದ್ದಾರೆ. ಅವರ ಹೆಸರು ಚಿರಸ್ಥಾಯಿಯಾಗಿ ಉಳಿಯಬೇಕು ಎಂಬ ನಿಟ್ಟಿನಲ್ಲಿ ಯಾವುದಾದರೂ ಕಟ್ಟಡಕ್ಕೆ ಅಥವಾ ರಸ್ತೆಗೆ ಅವರ ಹೆಸರನ್ನು ಇಡುವ ಯೋಚನೆ ಇದೆ. | ಆರ್.ಅಶೋಕ್ ಸಚಿವರು
ಆರಂಭದಿಂದಲೂ ಪೋಷಕ ಪಾತ್ರಗಳಲ್ಲೇ ಕಾಣಿಸಿಕೊಳ್ಳುತ್ತಿದ್ದ ಶಿವರಾಮಣ್ಣ, 90ರ ದಶಕದ ನಂತರ ಕ್ರಮೇಣ ನಟನೆ ಕಡಿಮೆ ಮಾಡಿದರು. ಈ ಸಂದರ್ಭದಲ್ಲೇ ಅವರು ಸಂಘಟನೆಯಲ್ಲಿ ಹೆಚ್ಚುಹೆಚ್ಚು ತೊಡಗಿಸಿಕೊಂಡರು. ಕನ್ನಡ ಚಲನಚಿತ್ರ ಕಲಾವಿದರ ಸಂಘದ ಕಾರ್ಯಕಾರಿ ಸಮಿತಿಯಲ್ಲಿ ಹಲವು ವರ್ಷಗಳ ಕಾಲ ಕೆಲಸ ಮಾಡಿದ ಅವರು, ಪ್ರತೀ ವರ್ಷ ನವೆಂಬರ್ 1ರಂದು ರಾಜ್ಯೋತ್ಸವ ಕಾರ್ಯಕ್ರಮಗಳನ್ನು ಆಯೋಜಿಸುವಲ್ಲಿ ಮಹತ್ವದ ಪಾತ್ರವನ್ನು ವಹಿಸುತ್ತಿದ್ದರು. ಬರೀ ಚಿತ್ರರಂಗದ ಕಾರ್ಯಕ್ರಮಗಳಷ್ಟೇ ಅಲ್ಲ, ಹಲವು ಸಂಘ-ಸಂಸ್ಥೆಗಳ ಸದಸ್ಯರಾಗಿದ್ದ ಅವರು, ಹಲವು ಸಂಘಟನೆಗಳೊಂದಿಗೆ ಗುರುತಿಸಿಕೊಂಡಿದ್ದರು. ಸಮರ್ಥನಂ ಅಂಗವಿಕಲರ ಸಂಸ್ಥೆಯ ಸದಸ್ಯರ ಶ್ರೇಯೋಭಿವೃದ್ಧಿಗೆ ಅನುಕೂಲವಾಗುವ ನಿಟ್ಟಿನಲ್ಲಿ, ಎಸ್.ಪಿ. ಬಾಲಸುಬ್ರಹ್ಮಣ್ಯಂ ಸೇರಿ ಹಲವರ ನೆನಪಿನಲ್ಲಿ ಸಂಗೀತ ಸಂಜೆಗಳನ್ನು ಆಯೋಜಿಸಿ ಹಣ ಸಂಗ್ರಹಿಸಿದ್ದರು.
ಶಿವರಾಮಣ್ಣ ಅವರು ಒಬ್ಬ ಐಕಾನ್ ಅಷ್ಟೇ ಅಲ್ಲ, ಅದ್ಭುತ ಪರಂಪರೆಯನ್ನು ಬಿಟ್ಟು ಹೋಗಿದ್ದಾರೆ. ಅವರ ನಿಧನದಿಂದ ಕನ್ನಡ ಚಿತ್ರರಂಗಕ್ಕೆ ಅಪಾರ ನಷ್ಟವಾಗಿದೆ. | ಅನಿಲ್ ಕುಂಬ್ಳೆ ಕ್ರಿಕೆಟಿಗ
ನನ್ನ ಮತ್ತು ಶಿವರಾಮಣ್ಣ ಅವರ ಗೆಳೆತನ 40 ವರ್ಷಗಳದ್ದು. ನನ್ನ ಎರಡನೆಯ ಚಿತ್ರ ‘ಬಾಳಿನ ಗುರಿ’ಯಲ್ಲಿ ಅವರ ಪರಿಚಯವಾಗಿತ್ತು. ಅಲ್ಲಿಂದ ನನಗೆ ಅವರ ಸಾಂಗತ್ಯ ದೊರಕಿತ್ತು. ಆ ನಂತರ ನಾವಿಬ್ಬರೂ ಹಲವು ಸಿನಿಮಾ, ನಾಟಕ ಮತ್ತು ಧಾರಾವಾಹಿಗಳಲ್ಲಿ ಜತೆಯಾಗಿ ನಟಿಸಿದ್ದೆವು. ಕಳೆದ ತಿಂಗಳು ಸಹ ‘ಸತ್ಯ’ ಧಾರಾವಾಹಿಯ ಚಿತ್ರೀಕರಣ ಮೇಲುಕೋಟೆಯಲ್ಲಿ ನಡೆದಿತ್ತು. ಅದರಲ್ಲೂ ನಾವಿಬ್ಬರೂ ಒಟ್ಟಿಗೆ ನಟಿಸಿದ್ದಷ್ಟೇ ಅಲ್ಲ, ಜತೆಗೇ ಹೋಗಿ ಬಂದೆವು. ನಿಜ ಹೇಳಬೇಕೆಂದರೆ, ಅವರಿಗೆ 83 ವರ್ಷ ಎಂದರೆ ನಂಬುವುದು ಕಷ್ಟ. ಲಿಫ್ಟ್ ಬಳಸದೆ ಮೆಟ್ಟಿಲು ಹತ್ತಿಕೊಂಡೇ ನಡೆದು ಹೋಗುತ್ತಿದ್ದರು. ಅವರು ಯಾವುದೇ ಕೆಲಸಕ್ಕೆ ಹೋಗಲಿ, ಅದು ಶುಭಕಾರ್ಯವಿರಲಿ ಅಥವಾ ದುಃಖದ ವಿಷಯವೇ ಆಗಲೀ, ಮೊದಲು ಕೇಳುತ್ತಿದ್ದ ಪ್ರಶ್ನೆಯೆಂದರೆ, ತಾನೇನು ಮಾಡಬೇಕು ಎಂದು. ಅವರು ಯಾವುದೇ ಕಾರ್ಯಕ್ರಮಕ್ಕೆ ಅತಿಥಿಯಾಗಿ ಬಂದಿದ್ದರೂ ಹುಡುಕಿಕೊಂಡು ಕೆಲಸ ಮಾಡುತ್ತಿದ್ದರು. ಕನ್ನಡ ಚಲನಚಿತ್ರ ಕಲಾವಿದರ ಸಂಘದ ಕಾರ್ಯದರ್ಶಿಯಾಗಿದ್ದಾಗ ಅವರು ಹಲವು ಒಳ್ಳೆಯ ಕೆಲಸಗಳನ್ನು ಮಾಡಿದ್ದರು. ಇತ್ತೀಚೆಗೆ, ಸಂಘದ ಬೈಲಾಗೆ ತಿದ್ದುಪಡಿ ತರುವ ನಿಟಿನಲ್ಲಿ ಒಂದು ಸಮಿತಿ ಮಾಡಲಾಗಿತ್ತು. ಅದರಲ್ಲಿ ಶಿವರಾಮಣ್ಣ, ನಾನು, ರಮೇಶ್ ಭಟ್, ಸುಂದರ್ ರಾಜ್ ಹಲವು ವಿಷಯಗಳನ್ನು ರ್ಚಚಿಸಿ, ವರದಿ ನೀಡಿದ್ದೆವು. ಎಲ್ಲಕ್ಕಿಂತ ಹೆಚ್ಚಾಗಿ, ಅವರಿಗೆ ಓದು ಎಂದರೆ ಬಹಳ ಇಷ್ಟ ಮತ್ತು ಮನೆಯ ಕೆಳಗೆ ಒಂದು ಗ್ರಥಾಲಯ ಸ್ಥಾಪಿಸಿದ್ದರು. ಅಲ್ಲಿ ಇಂತಹ ಪುಸ್ತಕ ಇಲ್ಲ ಎಂಬಂತೆ ಹಲವು ಪುಸ್ತಕಗಳನ್ನು ಸಂಗ್ರಹಿಸಿದ್ದರು. ಹೀಗೆ ಹಲವು ರೀತಿಗಳಲ್ಲಿ ಎಲ್ಲರಿಗೂ ಸ್ಪೂರ್ತಿ, ಮಾದರಿಯಾಗಿದ್ದ ಶಿವರಾಮಣ್ಣ ಇನ್ನಿಲ್ಲ ಎಂದು ನಂಬುವುದು ಕಷ್ಟವಾಗುತ್ತಿದೆ.
| ಜಿ.ಕೆ.ಶ್ರೀನಿವಾಸ ಮೂರ್ತಿ (ಹಿರಿಯ ನಟ)