ಅಂತಹ ವಿದ್ಯೆಯೇ ವೇದವಿದ್ಯೆ, ಅಧ್ಯಾತ್ಮ. ಇಂತಹ ಒಂದು ವಿದ್ಯೆಯು ಯಾವುದೇ ಒಂದು ವ್ಯಕ್ತಿ, ಸಮಾಜ, ಪಂಗಡ, ಮತ, ಧರ್ಮಕ್ಕೆ ಅಥವಾ ರಾಷ್ಟ್ರಕ್ಕೆ ಸೀಮಿತವಾದದ್ದಲ್ಲ. ಯೋಗ ಸಕಲರಿಗೆ ಸೇರಿದ್ದು. ಹಾಗಾದರೆ ಈ ಮಹಾವಿದ್ಯೆಯು ಬೆಳೆದು ಬಂದ ದಾರಿ ಯಾವುದು? ಸಹಸ್ರಾರು ವರ್ಷಗಳಿಂದಲೂ ಅದು ಉಳಿದು ಬೆಳಗಿ ನಿಲ್ಲಬೇಕಾದರೆ ಅದರಲ್ಲಿರುವ ಅಂತಃಶಕ್ತಿ ಏನು?
ಇಂದು ನಮಗೆ ಪರಿಚಿತವಾಗಿರುವ ಯೋಗವು ಸುಮಾರು ಹತ್ತುಸಾವಿರ ವರ್ಷಗಳಿಗೂ ಹಿಂದೆ ಭಾರತದಲ್ಲಿ ಹಾಗೂ ಜಗತ್ತಿನ ಎಲ್ಲ ಭಾಗಗಳಲ್ಲಿ ಪ್ರಚಲಿತವಿದ್ದ ತಾಂತ್ರಿಕ ನಾಗರಿಕತೆಯ ಅಂಗವಾಗಿ ಬೆಳೆದು ಬಂದಿದೆ. ಈಗಿನ ಪಾಕಿಸ್ತಾನದಲ್ಲಿರುವ ಹರಪ್ಪ, ಮೊಹೆಂಜೋದಾರೋಗಳ ಸಿಂಧೂ ಕಣಿವೆಯಲ್ಲಿ ಪುರಾತತ್ವ ಉತ್ಖನನಗಳನ್ನು ಮಾಡಿದಾಗ ಶಿವ-ಪಾರ್ವತಿಯರನ್ನು ಹೋಲುವ ಅನೇಕ ವಿಗ್ರಹಗಳು ದೊರೆತಿದ್ದು, ಈ ಮೂರ್ತಿಗಳ ವಿವಿಧ ಭಂಗಿಗಳು ಯೋಗಾಸನಗಳನ್ನು ಹಾಗೂ ಧ್ಯಾನ ಭಂಗಿಗಳನ್ನು ನಿರೂಪಿಸುತ್ತವೆ. ಈ ಅವಶೇಷಗಳು ದೊರೆತಂಥ ಸಿಂಧೂ ಉಪಖಂಡದಲ್ಲಿ ಆರ್ಯ ಸಂಸ್ಕೃತಿಯು ಪ್ರವರ್ಧಮಾನಕ್ಕೆ ಬರುವ ಮೊದಲೇ ಅಂದರೆ ವೇದಪೂರ್ವಕಾಲದಲ್ಲಿ ಇದ್ದಂಥ ಜನರಿಗೆ ಈ ಸಂಸ್ಕೃತಿಯು ಸಂಬಂಧಿಸಿದೆ. ನಮ್ಮ ಪುರಾಣಶಾಸ್ತ್ರಗಳ ಪ್ರಕಾರ ಯೋಗವಿದ್ಯೆಯ ಪ್ರವರ್ತಕ ಶಿವ. ಪಾರ್ವತಿ ಆತನ ಪ್ರಥಮ ಶಿಷ್ಯೆ.
ಶಿವನನ್ನು ಎಲ್ಲೆಡೆಯೂ ಅತಿ ಪ್ರಜ್ಞೆಯ ಸಂಕೇತ ಅಥವಾ ಸ್ವರೂಪವೆಂದು ಭಾವಿಸಲಾಗಿದೆ. ಪಾರ್ವತಿಯು ಪರಮೋಚ್ಚ ಜ್ಞಾನ, ಮನಸ್ಸು ಹಾಗೂ ಕ್ರಿಯೆಗಳ ಪ್ರತೀಕವಾಗಿದ್ದು, ಎಲ್ಲ ಸೃಷ್ಟಿಯ ಮೂಲಕರ್ತಳಾಗಿದ್ದಾಳೆ. ಈ ಶಕ್ತಿ ಅಥವಾ ಚೈತನ್ಯವನ್ನು ಕುಂಡಲಿನೀ ಶಕ್ತಿ ಎಂದು ಕರೆಯಲಾಗುತ್ತದೆ. ಇದು ಎಲ್ಲ ಜೀವಿಗಳಲ್ಲೂ ಸುಪ್ತವಾಗಿರುವ ವಿಶ್ವಚೈತನ್ಯ. ಪಾರ್ವತಿಯನ್ನು ಜಗನ್ಮಾತೆ ಎಂದೂ ಪರಿಗಣಿಸಲಾಗಿದೆ. ವ್ಯಕ್ತಿಯ ಆತ್ಮವು ಪ್ರಾಪಂಚಿಕ ಬಂಧನದಲ್ಲಿ ಸಿಲುಕಿಕೊಂಡಿರುತ್ತದೆ. ಜಗನ್ಮಾತೆ ಅನುಗ್ರಹದಿಂದ ಈ ಬಂಧನದಿಂದ ಬಿಡುಗಡೆ ಹೊಂದಿ, ವಿಶ್ವಾತ್ಮನಲ್ಲಿ ಲೀನವಾಗುತ್ತದೆ. ಪಾರ್ವತಿ ಪ್ರೀತಿ ಹಾಗೂ ಅನುಕಂಪದಿಂದ ಗುಪ್ತ ವಿದ್ಯೆಯಾದ ವಿಮುಕ್ತಿಯ ಜ್ಞಾನವನ್ನು ತನ್ನ ಮಕ್ಕಳಿಗೆ ತಂತ್ರದ ರೂಪದಲ್ಲಿ ತಿಳಿಸಿಕೊಟ್ಟಿದ್ದಾಳೆ. ಯೋಗಪದ್ಧತಿಗಳಿಗೆ ಮೂಲತಂತ್ರದಲ್ಲಿದೆ. ಹೇಗೆ ಆತ್ಮರೂಪನಾದ ಶಿವನನ್ನು ಶಕ್ತಿಸ್ವರೂಪಿಣಿಯಿಂದ ಬೇರ್ಪಡಿಸಲು ಸಾಧ್ಯವಿಲ್ಲವೋ ಹಾಗೆ ಯೋಗವನ್ನು ತಂತ್ರದಿಂದ ತಂತ್ರದಿಂದ ಬೇರ್ಪಡಿಸಲೂ ಸಾಧ್ಯವಿಲ್ಲ. ‘ತನೋತಿ ಮತ್ತು ತ್ರಯಾತಿ’ ಎಂಬ ಎರಡು ಪದಗಳ ಸಂಯೋಜನೆಯಿಂದ ತಂತ್ರ ಎಂಬ ಪದ ರೂಪಗೊಂಡಿದೆ. ‘ವಿಕಾಸ’ ಹಾಗೂ ‘ವಿಮೋಚನೆ’ ಎಂಬುದು ಅನುಕ್ರಮವಾಗಿ ಈ ಎರಡು ಪದಗಳ ಅರ್ಥ. ಆದ್ದರಿಂದ ತಂತ್ರ ಎಂದರೆ ಪ್ರಜ್ಞೆಯ ವಿಕಸನ ಮತ್ತು ಇತಿಮಿತಿಗಳಿಂದ ಬಿಡುಗಡೆ ಮಾಡುವ ವಿಜ್ಞಾನ.
ಈ ಪ್ರಪಂಚದಲ್ಲಿ ಜೀವಿಸಿರುವಾಗಲೇ ಪ್ರಾಪಂಚಿಕ ಬಂಧನಗಳಿಂದ ವಿಮುಕ್ತಿ ಪಡೆಯುವ ಮಾರ್ಗವೇ ತಂತ್ರ. ದೇಹ-ಮನಸ್ಸಿನ ಇತಿಮಿತಿಗಳನ್ನು ಹಾಗೂ ಸಾಮರ್ಥ್ಯವನ್ನು ಅರಿವಿಗೆ ತಂದುಕೊಳ್ಳುವುದು ತಂತ್ರದ ಮೊದಲ ಸೋಪಾನ. ಎರಡನೇ ಹಂತದಲ್ಲಿ ಇದು ಪ್ರಜ್ಞೆಯ ವಿಕಸನ ಹಾಗೂ ವಿಮುಕ್ತಿಯ ವಿಧಾನಗಳನ್ನು ತಿಳಿಸುತ್ತದೆ. ಹೀಗೆ ಇಲ್ಲಿ ವ್ಯಕ್ತಿಯ ಪರಿಮಿತಿಗಳನ್ನು ದಾಟಿ ಅದನ್ನು ಮೀರಿದ ಸತ್ಯವನ್ನು ಕಂಡುಕೊಳ್ಳುವುದು ಸಾಧ್ಯವಾಗುತ್ತದೆ.
ಮಾನವ ನಾಗರಿಕತೆಯ ಮೊದಲ ಹಂತದಲ್ಲಿ, ಮಾನವನು ತನ್ನ ಆಧ್ಯಾತ್ಮಿಕ ಅಂತಃಶಕ್ತಿಯನ್ನು ಅರಿತು ಅದನ್ನು ಅಭಿವೃದ್ಧಿಪಡಿಸುವ ವಿಧಾನಗಳನ್ನು ರೂಪಿಸಿಕೊಳ್ಳತೊಡಗಿದಾಗ ಯೋಗಪದ್ಧತಿ ಆರಂಭವಾಯಿತು. ಕ್ರಮೇಣ ಯೋಗವಿಜ್ಞಾನ ವಿಕಾಸಗೊಂಡಿತು. ಜಗತ್ತಿನಾದ್ಯಂತ ಪ್ರಾಚೀನ ಋಷಿಮುನಿಗಳು ಇದರ ಬೆಳವಣಿಗೆಗೆ ಕಾರಣರಾದರು. ಯೋಗದ ಸಾರವನ್ನು ವಿವಿಧ ಪ್ರತೀಕಗಳು, ಸಾದೃಶ್ಯಗಳು ಹಾಗೂ ಭಾಷೆಗಳಲ್ಲಿ ಗೋಪ್ಯವಿಧಾನದಲ್ಲಿ ವಿವರಿಸಲಾಗಿದೆ. ಮಾನವ ಕುಲವು ತನ್ನ ದೈವಿ ಸ್ವರೂಪವನ್ನು ಸಾಕ್ಷಾತ್ಕರಿಸಿಕೊಳ್ಳಲು ಅನುಕೂಲವಾಗುವಂತೆ ಪ್ರಾಚೀನ ಋಷಿವರ್ಯರಿಗೆ ಇದು ದೈವಿಕ ಬಳುವಳಿಯಾಗಿ ಬಂದಿತು ಎಂದು ಕೆಲವು ಸಂಪ್ರದಾಯಗಳು ಭಾವಿಸುತ್ತವೆ.