| ಸಂದೀಪ್ ಸಾಲ್ಯಾನ್ ಬಂಟ್ವಾಳ
ಅಪ್ಪಟ ಭಾರತೀಯ ನಾರಿಯ ವಸ್ತ್ರ ತೊಟ್ಟು, ವೀರಗಚ್ಚೆ ಹಾಕಿ, ಕೈಯಲ್ಲಿ ಹರಿತವಾದ ಕತ್ತಿ ಹಿಡಿದು ನೆಲದಲ್ಲಿ ಪುಟಿಯುತ್ತ, ಕತ್ತಿ ತಿರುಗಿಸುತ್ತಿದ್ದರೆ ನೋಡುಗರ ಮೈ ಜುಮ್ಮೆನ್ನುತ್ತಿತ್ತು. ಒಂದು ಕ್ಷಣವಂತೂ ನಮ್ಮ ದೇಶದ ವೀರ ವನಿತೆಯರ ರಣರಂಗದಲ್ಲಿನ ಕಾದಾಟದ ದೃಶ್ಯಗಳು ಅಲ್ಲಿ ನೆರೆದಿದ್ದ ಪ್ರೇಕ್ಷಕರ ಕಣ್ಣ ಮುಂದೆ ಹಾದು ಹೋದವು. ಕರ್ನಾಟಕದ ಈ ಕುವರಿ ಇತ್ತೀಚೆಗೆ ಆಂಧ್ರಪ್ರದೇಶದ ವಿಶಾಖಪಟ್ಟಣದಲ್ಲಿ ನಡೆದ ರಾಷ್ಟ್ರೀಯ ಸಿಲಂಬಂ ಸ್ಪರ್ಧೆಯಲ್ಲಿ 2 ಚಿನ್ನದ ಪದಕ ಗೆದ್ದು ರಾಜ್ಯಕ್ಕೆ ಕೀರ್ತಿ ತಂದಿದ್ದಾರೆ.
ಬಂಟ್ವಾಳ ತಾಲೂಕಿನ ಕುರ್ನಾಡು ಗ್ರಾಮದ ನೀಲಕಂಠ - ಸುಮತಿ ದಂಪತಿ ಪುತ್ರಿ, 21 ವರ್ಷ ಪ್ರಾಯದ ವೆನಿಲ್ಲಾ ಮಣಿಕಂಠ ಈ ಸಾಧಕಿ. ಬಾಲ್ಯದಿಂದಲೇ ಕರಾಟೆ, ಜೂಡೋ ಮೊದಲಾದ ಮಾರ್ಷಲ್ ಆರ್ಟ್ಸ್ಗಳನ್ನು ಅಭ್ಯಸಿಸಿ ಕರಗತ ಮಾಡಿಕೊಂಡಿದ್ದ ಈಕೆ ನೋಡುಗರ ಮೈನವಿರೇಳಿಸುವಂತೆ ಲೀಲಾಜಾಲವಾಗಿ ಪ್ರದರ್ಶನ ನೀಡುತ್ತಾರೆ. ಇವರ ಆಸಕ್ತಿ, ಪ್ರತಿಭೆಯನ್ನು ಮನಗಂಡ ಕರಾಟೆ ಶಿಕ್ಷಕ ರಾಜೇಶ್ ಬ್ರಹ್ಮರಕೂಟ್ಲು ನಿರಂತರವಾಗಿ ವಿಶೇಷ ತರಬೇತಿ ನೀಡಿ ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಲು ಅವಕಾಶ ಒದಗಿಸಿದ್ದಾರೆ. ರಾಜ್ಯ, ರಾಷ್ಟ್ರಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸಿ ಬಹುಮಾನ ಗೆದ್ದಿರುವ ವೆನಿಲ್ಲಾ ಮಣಿಕಂಠ ತನ್ನ ಪರಿಶ್ರಮದ ಫಲವಾಗಿ ಅಂತಾರಾಷ್ಟ್ರೀಯ ಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸಲು ಆಯ್ಕೆಯಾಗಿದ್ದಾರೆ. ಜನವರಿಯಲ್ಲಿ ಸ್ಪರ್ಧೆ ನಡೆಯಲಿದ್ದು, ಯಾವ ದೇಶದಲ್ಲಿ ಎಂಬುದು ಇನ್ನಷ್ಟೇ ತಿಳಿಯಬೇಕಿದೆ.
ಮಾರ್ಷಲ್ ಆರ್ಟ್ಸ್ ಕರಗತ: ಕರಾಟೆ, ಜೂಡೋ, ಬಾಕ್ಸಿಂಗ್, ಸ್ಕೇಟಿಂಗ್, ಯೋಗ, ಬಿಲ್ವಿದ್ಯೆ, ಸಿಲಂಬಂನ ಕಸರತ್ತುಗಳು ವೆನಿಲ್ಲಾ ಮಣಿಕಂಠಗೆ ಕರಗತ. ಜೂಡೋದಲ್ಲಿ ಬ್ಲಾ್ಯಕ್ ಬೆಲ್ಟ್ ಪಡೆದ ದ.ಕ. ಜಿಲ್ಲೆಯ ಮೊದಲ ಮಹಿಳಾ ಸ್ಪರ್ಧಿ ಎನ್ನುವ ಹೆಗ್ಗಳಿಕೆ. ಯೋಗ ಹಾಗೂ ಮಾರ್ಷಲ್ ಆರ್ಟ್ಸ್ ಬಗ್ಗೆ ತರಬೇತಿ ಹಾಗೂ ಸೆಮಿನಾರ್ಗಳನ್ನು ವೆನಿಲ್ಲಾ ನೀಡುತ್ತಿದ್ದಾರೆ. ತಾನು ಕಲಿಯುತ್ತ, ಇತರರಿಗೂ ಕಲಿಸುತ್ತ ಕ್ರೀಡಾ ಕ್ಷೇತ್ರದಲ್ಲಿ ಭರವಸೆಯ ಕ್ರೀಡಾಪಟುವಾಗಿ ಗುರುತಿಸಿಕೊಂಡಿದ್ದಾರೆ. ಹವ್ಯಾಸಕ್ಕಾಗಿ ಕಲಿತ ವಿದ್ಯೆ ಇಂದು ಅವರ ಬದುಕಿಗೂ ದಾರಿದೀಪವಾಗಿದೆ. ತರಬೇತಿ ನೀಡಿ ಬರುವ ಆದಾಯದಿಂದ ತನ್ನ ವಿದ್ಯಾಭ್ಯಾಸ ನಡೆಸುತ್ತಿದ್ದು, ಮನೆಗೂ ಆಧಾರಸ್ತಂಭ ವಾಗಿದ್ದಾರೆ. ಪ್ರಸ್ತುತ ಪೊಳಲಿಯ ಶ್ರೀ ರಾಮಕೃಷ್ಣ ತಪೋವನದಲ್ಲಿ ವೆನಿಲ್ಲಾ ಮಣಿಕಂಠ ತನ್ನ ಗುರುಗಳಾದ ರಾಜೇಶ್ ಬ್ರಹ್ಮರಕೂಟ್ಲು ಅವರೊಂದಿಗೆ ವಿದ್ಯಾರ್ಥಿಗಳಿಗೆ ತರಬೇತಿ ನೀಡುತ್ತಿದ್ದಾರೆ.
ಭರತನಾಟ್ಯಕ್ಕೂ ಸೈ: ಕ್ರೀಡಾ ಕ್ಷೇತ್ರದಲ್ಲಿ ಸಾಧನೆ ಮಾಡುತ್ತಿರುವ ವೆನಿಲ್ಲಾ ನಾಟ್ಯಶಾಸ್ತ್ರದಲ್ಲೂ ಪ್ರವೀಣೆ. ಭರತನಾಟ್ಯದಲ್ಲೂ ಮಿಂಚುತ್ತಿರುವ ಈಕೆ ಭರತನಾಟ್ಯ ಜೂನಿಯರ್ ಪರೀಕ್ಷೆಯನ್ನು ಉನ್ನತ ಶ್ರೇಣಿಯಲ್ಲಿ ತೇರ್ಗಡೆ ಯಾಗಿದ್ದಾರೆ. ಪ್ರಸ್ತುತ ಮಂಗಳೂರಿನ ಎನ್ಐಟಿಕೆಯಲ್ಲಿ ಜಿಯೋ ಟೆಕ್ನಿಕಲ್ನಲ್ಲಿ ಇಂಜಿನಿಯರಿಂಗ್ ವಿದ್ಯಾರ್ಥಿನಿ.
ಏನಿದು ಸಿಲಂಬಂ?: ಸಿಲಂಬಂ ಅಥವಾ ಸಿಲಂಬಾಟ್ಟಮ್ ತಮಿಳುನಾಡಿನ ಆಯುಧ ಆಧಾರಿತ ದ್ರಾವಿಡ ಕದನ ಕಲೆ. ಹಿಂದೆ ರಾಜರ ಕಾಲದಲ್ಲಿ ಆಕ್ರಮಣಕ್ಕಾಗಿ, ಆತ್ಮರಕ್ಷಣೆಗಾಗಿ ಈ ಯುದ್ಧ ವಿದ್ಯೆಗಳನ್ನು ಕಲಿಯುತ್ತಿದ್ದರು. ಪ್ರಸ್ತುತ ಈ ಯುದ್ಧ ವಿದ್ಯೆ ಕ್ರೀಡೆಯ ಪಟ್ಟಿ ಸೇರಿದೆ. ಕ್ರಿ.ಪೂ. 4ನೇ ಶತಮಾನಗಳಷ್ಟು ಹಳೆಯದಾಗಿರುವ ಈ ಕ್ರೀಡೆ ಬಿದಿರಿನ ಬೊಂಬುಗಳನ್ನು ಹಿಡಿದು ಇಬ್ಬರು ವ್ಯಕ್ತಿಗಳು ಎದುರಾಳಿಗಳಾಗಿ ಆಡುವ ಕ್ರೀಡಾವರಸೆ. ಕೇರಳದ ಕುರುಂಜಿ ಮಲೆಯ ಸಿಲಂಬಂ ಎನ್ನುವ ಬಿದಿರನ್ನು ಈ ಆಟದಲ್ಲಿ ಬಳಸುತ್ತಿದ್ದುದರಿಂದ ಇದಕ್ಕೆ ಸಿಲಂಬಂ ಎನ್ನುವ ಹೆಸರು ಬಂದಿದೆ ಎನ್ನಲಾಗುತ್ತಿದೆ. ಹಿಂದಿನ ಕಾಲದಲ್ಲಿ ಅರಸರು ಪ್ರತ್ಯೇಕ ಸಿಲಂಬಂ ಸೇನಾ ತುಕಡಿ ಹೊಂದಿದ್ದರು ಎನ್ನುವ ಉಲ್ಲೇಖಗಳಿವೆ. ಪ್ರಸಕ್ತ ಸ್ಪರ್ಧೆಯಲ್ಲಿ ಬಿದಿರಿನ ಕೋಲು, ಕತ್ತಿ ಬಳಸಲಾಗುತ್ತಿದೆ.