ಅಂಕಣ

ಯೋಗಾಭ್ಯಾಸಕ್ಕೆ ಸೂಕ್ತ ಸಮಯ ಎಂಬುದಿದೆಯೇ?

Bengaluru - General - Rama Kishan K V
ಯೋಗಿಗಳು ದೇಹದ ಉಷ್ಣತೆಯನ್ನು ಸದಾಕಾಲ ಸ್ವಲ್ಪ ಹೆಚ್ಚಾಗಿ ಇಡಲು ಬಯಸುತ್ತಾರೆ. ಏಕೆಂದರೆ ಉಷ್ಣತೆಯು ಉತ್ಸಾಹ ಮತ್ತು ತೀವ್ರತೆಯನ್ನು ಸೂಚಿಸುತ್ತದೆ. ದೇಹ ಒಂದು ಮಟ್ಟಕ್ಕಿಂತ ತಣ್ಣಗಾದರೆ ಅದು ನಮ್ಮ ವ್ಯವಸ್ಥೆಯನ್ನು ಜಡವಾಗಿಸುತ್ತದೆ. ಎಲ್ಲಾ ಯೋಗಾಭ್ಯಾಸಗಳು, ಸಾಧಾರಣ ಜೀವನದ ಶೈಲಿಯಿಂದ ನಿಮ್ಮನ್ನು ಸ್ವಲ್ಪ ಮೇಲ್ಮಟ್ಟಕ್ಕೆ ಏರಿಸುತ್ತವೆ.

ಸೂರ್ಯ ನಮಸ್ಕಾರ ಮತ್ತು ಶಿವ ನಮಸ್ಕಾರದಂತಹ ಯೋಗಾಭ್ಯಾಸಗಳು, ಹಗಲು ಮತ್ತು ರಾತ್ರಿಯ ನಡುವಿನ ಸಮಯವಾದ ಸಂಧ್ಯಾಕಾಲದಲ್ಲಿ ನಡೆಯಬೇಕು. ಏಕೆಂದರೆ ಈ ಸಂಧಿಕಾಲದಲ್ಲಿ ಎಲ್ಲವೂ ನಿರಂತರವಾಗಿ ಬದಲಾಗುತ್ತಿರುತ್ತದೆ. ಈ ಸಮಯದಲ್ಲಿ ಯೋಗಸಾಧನೆ ಮಾಡಿದರೆ ನಿಮ್ಮ ಮಿತಿಗಳನ್ನು ಮೀರುವ ಸಾಧ್ಯತೆ ಜಾಸ್ತಿಯಾಗುತ್ತದೆ. ಏಕೆಂದರೆ ನಿಮ್ಮ ಪ್ರಾಣಶಕ್ತಿ ಈ ಸಮಯದಲ್ಲಿ ಸತತವಾಗಿ ಬದಲಾಗುತ್ತಿರುತ್ತದೆ. ಇದು ಒಂದು ಅಂಶ.

ಇನ್ನೊಂದು ಅಂಶವೆಂದರೆ, ಈ ಎಲ್ಲಾ ಯೋಗಾಭ್ಯಾಸಗಳು ಶರೀರದ ಉಷ್ಣತೆಯನ್ನು ಹೆಚ್ಚಿಸುತ್ತವೆ. ಉಷ್ಣವೆಂದರೆ ತಾಪಮಾನವಲ್ಲ, ಶರೀರದ ಮೂರು ಮೂಲ ಗುಣಗಳಾದ ವಾತ, ಪಿತ್ತ (ಉಷ್ಣ), ಕಫ- ಇವುಗಳಲ್ಲೊಂದು. ಉಷ್ಣತೆ ಜಾಸ್ತಿಯಾದರೆ ಅಥವಾ ಸಮತ್ ಪ್ರಾಣ ಹೆಚ್ಚಾದರೆ ದೇಹ ಬಿಸಿಯಾಗಿದೆ ಎನ್ನಿಸುತ್ತದೆ. ಆದರೆ, ಉಷ್ಣಾಂಶವನ್ನು ಅಳತೆ ಮಾಡಿದರೆ ಅದು ಸರಿಯಾಗಿಯೇ ಇರುತ್ತದೆ. ಉಷ್ಣವೆಂದರೆ ಜ್ವರವಲ್ಲ. ಅದು ನಮ್ಮ ಅನುಭವಕ್ಕೆ ಮಾತ್ರ ಬರುವಂತಹುದು.

ಸಮತ್ ಪ್ರಾಣ ಅಥವಾ ಸಮಾನ ವಾಯು ನಮ್ಮ ದೇಹದ ಉಷ್ಣತೆಯನ್ನು ನಿಭಾಯಿಸುತ್ತದೆ. ಯೋಗಿಗಳು ದೇಹದ ಉಷ್ಣತೆಯನ್ನು ಸದಾಕಾಲ ಸ್ವಲ್ಪ ಹೆಚ್ಚಾಗಿ ಇಡಲು ಬಯಸುತ್ತಾರೆ. ಏಕೆಂದರೆ ಉಷ್ಣತೆ ಉತ್ಸಾಹ ಮತ್ತು ತೀವ್ರತೆಯನ್ನು ಸೂಚಿಸುತ್ತದೆ. ದೇಹ ಒಂದು ಮಟ್ಟಕ್ಕಿಂತ ತಣ್ಣಗಾದರೆ ಅದು ನಮ್ಮ ವ್ಯವಸ್ಥೆಯನ್ನು ಜಡವಾಗಿಸುತ್ತದೆ. ನಿಮ್ಮ ಎಲ್ಲಾ ಯೋಗಾಭ್ಯಾಸಗಳು, ಸಾಧಾರಣ ಜೀವನದ ಶೈಲಿಯಿಂದ ನಿಮ್ಮನ್ನು ಸ್ವಲ್ಪ ಮೇಲ್ಮಟ್ಟಕ್ಕೆ ಏರಿಸುತ್ತವೆ. ಮೇಲ್ಮಟ್ಟದ ಶೈಲಿಯೆಂದರೆ ಜೀರ್ಣಕ್ರಿಯೆ ಹೆಚ್ಚಾಗಿದೆಯೆಂದಲ್ಲ; ಜೀರ್ಣಕ್ರಿಯೆ ಜಾಸ್ತಿಯಾದರೆ ದೇಹವು ಸುಸ್ತಾಗುತ್ತದೆ.

ಪ್ರಾಣಶಕ್ತಿ ಮೇಲ್ಮಟ್ಟದಲ್ಲಿದ್ದರೆ, ದೇಹದ ಕಾರ್ಯಗಳು ಸುಲಭವಾಗಿ ನಡೆಯುತ್ತವೆ. ಇದನ್ನು ನಾವು ಮೂರರಿಂದ ಆರು ವಾರಗಳಲ್ಲಿ ಸಾಬೀತುಪಡಿಸಬಹುದು. ನೀವು ಒಂದು ರೀತಿಯ ಯೋಗಾಭ್ಯಾಸಗಳನ್ನು ಮಾಡಿ ಪ್ರಾಣಶಕ್ತಿಯನ್ನು ಒಂದು ಮಟ್ಟಕೆ ಏರಿಸಿದರೆ ನಿಮ್ಮ ಶಾರೀರಿಕ ಕಾರ್ಯಗಳು ಸ್ಥಿರವಾಗಲ್ಪಟ್ಟು ಅತೀ ಸುಲಭವಾಗಿ ನಡೆಯುತ್ತದೆ. ಪ್ರಾಣಶಕ್ತಿಗಳು ಕಡಿಮೆ ಸ್ತರದಲ್ಲಿದ್ದಲ್ಲಿ, ನಿಮ್ಮ ಶಾರೀರಿಕ ಕಾರ್ಯಗಳನ್ನು ನಡೆಸಲು ಹೆಚ್ಚು ಶಕ್ತಿ ವ್ಯಯವಾಗುತ್ತದೆ ಮತ್ತೆ ಅದು ಬೇಗ ಕುಗ್ಗುತ್ತದೆ. ಶಾರೀರಿಕ ಕಾರ್ಯಗಳು ಬಹಳ ವೇಗವಾಗಿ ನಡೆದರೆ ಮನಸ್ಸು ಹತೋಟಿ ಮೀರುತ್ತದೆ ಮತ್ತು ಎಲ್ಲದಕ್ಕಿಂತ ಹೆಚ್ಚಾಗಿ ನಿಮ್ಮ ಆಯಸ್ಸು ಕಡಿಮೆಯಾಗುತ್ತದೆ.

ಯೋಗಾಭ್ಯಾಸಗಳು ದೇಹದ ಉಷ್ಣತೆಯನ್ನು ಹೆಚ್ಚಿಸುತ್ತದೆಯೆಂದು ನಮಗೆ ತಿಳಿದಿದೆ. ವಾತಾವರಣದಲ್ಲಿ ಉಷ್ಣತೆ ಜಾಸ್ತಿಯಿದ್ದು ನಿಮ್ಮ ದೇಹದ ಉಷ್ಣತೆಯನ್ನು ಒಂದು ಮಟ್ಟಕ್ಕಿಂತ ಹೆಚ್ಚಿಸಿದರೆ ಅದು ಜೀವಕೋಶಗಳನ್ನು ನಾಶಮಾಡುತ್ತದೆ. ಆದ್ದರಿಂದ ಯೋಗದ ಸಾಧನೆಗಳನ್ನು ದಿನದ ಉಷ್ಣತೆ ಕಡಿಮೆಯಿರುವಾಗ ಮಾಡಬೇಕು. ಹಗಲು ರಾತ್ರಿಗಳ ಸಂಧಿವೇಳೆಯಲ್ಲಿ ನಮ್ಮ ವ್ಯವಸ್ಥೆಯಲ್ಲಿ ಘರ್ಷಣೆಯನ್ನು ಕಡಿಮೆ ಮಾಡುತ್ತದೆ. ಹಾಗಾಗಿ ಯೋಗಾಭ್ಯಾಸವು ದೇಹದ ಉಷ್ಣತೆಯನ್ನು ಸ್ವಲ್ಪವೇ ಹೆಚ್ಚಿಸುತ್ತದೆ. ಯೋಗವನ್ನು ಭಾರತದ ಉಷ್ಣವಲಯದಲ್ಲಿ ಪ್ರಾರಂಭಿಸಿರುವುದರಿಂದ ನಾವು ಯಾವಾಗಲೂ ಹೇಳುವುದು ಯೋಗ ಸಾಧನೆಗಳು ಬೆಳಗ್ಗೆ 8:30 ಗಂಟೆಗೆ ಮುನ್ನ ಅಥವಾ ಸಾಯಂಕಾಲ 4:30ರ ನಂತರ ನಡೆಯಬೇಕು ಎಂದು.

ನಿಮ್ಮನ್ನು ನೀವು ಪುನಃ ರೂಪಿಸುವ ಸಮಯ: ಯೋಗಾಭ್ಯಾಸಗಳಿಂದ ನಿಮ್ಮನ್ನು ನೀವು ಪುನಃ ರೂಪಿಸುವುದಕ್ಕೆ ಪ್ರಯತ್ನಿಸುತ್ತಿದ್ದೀರಿ. ತಾಯಿ-ತಂದೆಗಳ ಮೇಲೆ ನಿಮಗೆ ಅತ್ಯಂತ ಗೌರವ ಮತ್ತು ಆದರವಿರಬಹುದು, ಆದರೆ, ಅವರು ನಿಮ್ಮನ್ನು ಹೆತ್ತ ಪರಿಸ್ಥಿತಿಯಲ್ಲೇ ಇರಲು ಅಥವಾ ಅವರ ತರಹ ಆಗಲು ನೀವು ಬಯಸದೆ, ಇನ್ನೇನೋ ಸ್ವಲ್ಪ ಬೇರೆಯಾಗಿ ಮತ್ತು ಉತ್ತಮವಾಗಿ ಇರಲು ಬಯಸುವಿರಿ. ನೀವು ನಿಮ್ಮನ್ನು ಮಾನಸಿಕವಾಗಿ ಮತ್ತು ಭಾವನೆಗಳನ್ನು ಮಾತ್ರ ಪುನಃ ರೂಪಿಸಿದರೆ ಯಾವುದೋ ಒಂದು ಸಮಯದಲ್ಲಿ ಹಿಂದಕ್ಕೆ ಬೀಳುವಿರಿ. ಹದಿನೆಂಟನೇ ವಯಸ್ಸಿನಲ್ಲಿ ಬಹಳ ಜನರು ತಮ್ಮ ತಂದೆ- ತಾಯಿಯರಂತೆ ಎಂದರೆ, ಸಾಧ್ಯವೇ ಇಲ್ಲ ಎನ್ನುತ್ತಾರೆ. ಆದರೆ, ಅವರೇ 45ನೆಯ ವಯಸ್ಸಿನಲ್ಲಿ ತಂದೆ -ತಾಯಿಯರ ಹಾಗೆ ನಡೆಯುವರು, ಕುಳಿತುಕೊಳ್ಳುವರು, ಮಾತನಾಡುವರು, ವರ್ತಿಸುವರು. ಏಕೆಂದರೆ, ಮಾನಸಿಕ ಬದಲಾವಣೆ ಅಷ್ಟರ ಮಟ್ಟಿಗೆ ಬೆಳೆದಿರುತ್ತದೆ.

ವರ್ತನೆಯಲ್ಲಿ ಮಾಡುವ ಬದಲಾವಣೆಗಳು ಬಹಳ ಕಾಲ ಉಳಿಯುವುದಿಲ್ಲ. ಸ್ವಲ್ಪ ಸಮಯದ ನಂತರ ಜೀವನದ ಪರಿಸ್ಥಿತಿಗಳು ಬದಲಾಗುತ್ತವೆ ಮತ್ತು ನೀವು ನಿಮ್ಮ ಪ್ರಜ್ಞೆಯನ್ನು ಕಳೆದುಕೊಂಡು ಹಿಂದಿನ ಪರಿಸ್ಥಿತಿಗೇ ಹೋಗುವಿರಿ. ನೀವೇನಾದರೂ ನಿಮ್ಮ ವರ್ತನೆಯನ್ನು ತಂದೆಯ ವರ್ತನೆಗೆ ಹೋಲಿಸಿದರೆ ಅಥವಾ ಇದು ವಂಶ ಪಾರಂಪರ್ಯವೆಂದು ಕಾರಣ ಕೊಟ್ಟರೆ, ನೀವು ಭೂತಕಾಲದ ಪ್ರಾಣಿಯೆಂದು ಅರ್ಥ. ಭವಿಷ್ಯದ ಜೀವಿಯಾಗಬೇಕೆಂದರೆ ನಿಮ್ಮ ಮೂಲಭೂತವನ್ನು ಪುನಃ ರೂಪಿಸುವುದು ಬಹಳ ಅವಶ್ಯಕ. ನಾವು ಯೋಗ ಸಾಧನೆಗಳಿಂದ ಇದನ್ನು ಮಾಡಲು ಪ್ರಯತ್ನಿಸುತ್ತೇವೆ. ನಾವು ನಮ್ಮನ್ನು ಸಂಪೂರ್ಣ ವಿಭಿನ್ನವಾಗಿ ಪುನಃ ರೂಪಿಸಿಕೊಳ್ಳಬೇಕು.

ಯೋಗ ಸಾಧನೆಗಳನ್ನು ಮಾಡಲು ಉತ್ತಮ ಸಮಯವೆಂದರೆ ಸಂಧ್ಯಾಕಾಲ. ಈ ಸಮಯದಲ್ಲಿ ಪ್ರಾಣಶಕ್ತಿಗಳು ಈ ಭೂಮಿಯ ಮೇಲೆ ಒಂದು ಮಟ್ಟಕ್ಕೆ ಬದಲಾಗುತ್ತಿರುತ್ತವೆ ಮತ್ತು ನಮ್ಮ ವ್ಯವಸ್ಥೆಯಲ್ಲಿ ಘರ್ಷಣೆ ಬಹಳ ಕಡಿಮೆಯಾಗುತ್ತದೆ. ಆಗ ಪುನಃ ರೂಪಣೆ ಸುಲಭವಾಗಿ ನಡೆಯುತ್ತದೆ. ಅದಕ್ಕೆ ಬೇರೆ ಅಂಶಗಳೂ ಇವೆ. ಆದರೆ, ಯೋಗ ಸಾಧನೆಯನ್ನು ಮುಂಜಾನೆ ಅಥವಾ ಸಂಜೆ ಮಾಡಲು ಇವೆರಡು ಮೂಲಭೂತವಾದ ಕಾರಣಗಳು.

ಬ್ರಹ್ಮ ಮುಹೂರ್ತ: ನೀವು ಆಧ್ಯಾತ್ಮಿಕ ಸಾಧನೆಯಲ್ಲಿ ಶೀಘ್ರವಾಗಿ ಮುನ್ನಡೆಯಲು ಬಯಸುತ್ತಿದ್ದರೆ, ಸಾಧನೆಗಳನ್ನು ಸೂರ್ಯೋದಯಕ್ಕೆ ಮುನ್ನ ಮಾಡಬೇಕು. ಅಂದರೆ ಸಾಧನೆಯನ್ನು ಬ್ರಹ್ಮ ಮುಹೂರ್ತದಲ್ಲಿ ಶುರು ಮಾಡಬೇಕು. ಅದು ಬೆಳಗ್ಗೆ 3:40ಕ್ಕೆ. ಆ ಸಮಯದಲ್ಲಿ ಒಂದು ರೀತಿಯ ಪ್ರಕ್ರಿಯೆ ಇರುತ್ತದೆ. ಹಾಗಾಗಿ, ನೀವು ಒಂದು ರೀತಿಯಲ್ಲಿ ಸಾಧನೆ ಮಾಡಿದರೆ ಸರ್ವೆ ಸಾಧಾರಣವಾಗಿ ಪ್ರಜ್ಞೆಯನ್ನು ಹೊಂದುವಿರಿ. ಆಸನಗಳನ್ನು ಮಾಡುತ್ತಿದ್ದರೆ ನಿಮ್ಮ ದೈಹಿಕ ವ್ಯವಸ್ಥೆಯ ಶಕ್ತಿಗಳು ಈ ಭೂಮಿಯ ಶಕ್ತಿಗಳಿಗೆ ಹೊಂದಿಕೊಂಡಾಗ, ಪ್ರತಿ ಮುಂಜಾನೆ 3:20 ಮತ್ತು 3:40 ಮಧ್ಯದಲ್ಲಿ ನಿಮ್ಮಷ್ಟಕ್ಕೆ ನೀವೇ ಎಚ್ಚರಗೊಳ್ಳುವಿರಿ.

ಬಹಳ ಚಿಕ್ಕವನಾಗಿದ್ದಾಗ ಮತ್ತು ಸ್ವಲ್ಪ ಬೆಳೆದ ಮೇಲೂ ನನಗೆ ಬೆಳಗ್ಗೆ ಏಳಲು ಸಾಧ್ಯವಾಗುತ್ತಿರಲಿಲ್ಲ. ಮನೆಯವರು ನನ್ನನ್ನು ಎಬ್ಬಿಸಲು ಒಂದು ಗಂಟೆ ಕಷ್ಟಪಟ್ಟು ಸುಮ್ಮನಾಗುತ್ತಿದ್ದರು. ನನ್ನನ್ನು ಕದಲಿಸಿದರೂ, ಕುಳ್ಳಿರಿಸಿದರೂ ಕುಳಿತಲ್ಲೇ ನಿದ್ದೆ ಮಾಡುತ್ತಿದ್ದೆ. ನನ್ನನ್ನು ಹಾಸಿಗೆಯಿಂದ ಹೊರಗೆಳೆದು ತಾಯಿ ಪೇಸ್ಟ್ ಹಾಕಿ ಬ್ರಷ್ ಕೊಟ್ಟರೆ ಅದನ್ನು ಬಾಯಲ್ಲಿ ಇಟ್ಟುಕೊಂಡೇ ಮಲಗುತ್ತಿದ್ದೆ. ಶಾಲೆಗೆ ಹೋಗುವ ಮುಂಚೆ ಸ್ನಾನ ಮಾಡೆಂದು ತಾಯಿ ಹೇಳುತ್ತಿದ್ದಳು. ನಾನು ಬಚ್ಚಲುಮನೆಯಲ್ಲೇ ಕುಳಿತು ಮಲಗಿಬಿಡುತ್ತಿದ್ದೆ. ಆದರೆ, ಒಂದು ಸಾರಿ ಎದ್ದ ಮೇಲೆ ನನ್ನನ್ನು ಯಾರೂ ತಡೆಯಲಾಗುತ್ತಿರಲಿಲ್ಲ. ಹೀಗೆ ಹೇಳುವ ಮೂಲಕ, ಇದು ನನ್ನ ತಪ್ಪನ್ನು ಒಪ್ಪಿಕೊಳ್ಳುತ್ತಿರುವೆ ಎಂದಲ್ಲ, ಇದು ನನಗೆ ಹೆಮ್ಮೆಯ ವಿಷಯ.

ನಾನು 11ನೇ ವಯಸ್ಸಿನಿಂದ ಯೋಗಾಭ್ಯಾಸ ಮಾಡಲು ಶುರು ಮಾಡಿದೆ. 12 ರಿಂದ 18 ತಿಂಗಳ ನಂತರ ಅದು ತನಗೆ ತಾನೇ ನಡೆಯಲು ಪ್ರಾರಂಭವಾಗಿ ಇಲ್ಲಿಯತನಕ ನಡೆಯುತ್ತಿದೆ. ನನಗೆ 3.40 ಗಂಟೆಯ ಅತ್ತಿತ್ತ ಎಚ್ಚರವಾಗುತ್ತದೆ, ನಾನು ಪೂರ್ತಿಯಾಗಿ ಏಳದಿದ್ದರೂ ಒಂದು ಕ್ಷಣವಾದರೂ ಎಚ್ಚರ ಹೊಂದುತ್ತೇನೆ. ಏಕೆಂದರೆ ಒಂದು ರೀತಿಯಲ್ಲಿ ಸಾಧನೆ ಮಾಡಿದರೆ ನಿಮ್ಮ ದೈಹಿಕ ವ್ಯವಸ್ಥೆಯ ಶಕ್ತಿಗಳು ಈ ಭೂಮಿಯ ಶಕ್ತಿಗಳೊಡನೆ ಹೊಂದಿಕೊಂಡಿರುತ್ತವೆ. 3.40 ಎನ್ನುವುದು ಯಾರೋ ಹೇಳಿ ಬಂದ ಸಮಯವಲ್ಲ. ಈ ಮಾನವ ಶರೀರದಲ್ಲಿರುವ ಏನೋ ಒಂದು ವ್ಯವಸ್ಥೆ, ಭೂಮಿಯ ಶಕ್ತಿಗಳ ಜೊತೆಗೆ ಸಂಪರ್ಕದಲ್ಲಿದೆ. ಆದ್ದರಿಂದ ಆ ಸಮಯದಲ್ಲಿ ಎಚ್ಚರಗೊಳ್ಳುವಿರಿ. ನಿಮ್ಮ ದೈಹಿಕ ಸ್ವರೂಪವನ್ನು ಮೀರಲು ಅಥವಾ ಆಧ್ಯಾತ್ಮಿಕ ಎಂದು ಕರೆಯುವ ಆಯಾಮಗಳನ್ನು ತಿಳಿದು ಕೊಳ್ಳಲು ನೀವು ಬಯಸಿದರೆ, ಯೋಗಾಭ್ಯಾಸಗಳನ್ನು ಮಾಡಲು ಬ್ರಹ್ಮ ಮುಹೂರ್ತ ಉತ್ತಮವಾದ ಸಮಯ. ಆದರೆ, ಕೇವಲ ದೈಹಿಕ ಆರೋಗ್ಯ ಬಯಸಿದರೆ, ಸೂರ್ಯೋದಯದ ಸಮೀಪದ ಸಂಧ್ಯಾಕಾಲವು ಉತ್ತಮ ಸಮಯ.

(ಸದ್ಗುರು ಅವರು ಯೋಗಿ, ದಾರ್ಶನಿಕ, ಆಧ್ಯಾತ್ಮಿಕ ನಾಯಕ.www.isha.sadhguru.org)