ಅಂಕಣ

ಕೂಡಿಟ್ಟಿದ್ದೆಲ್ಲಾ ಬರಿದಾದರೂ ಮನೆ ಕಟ್ಟಿ ಮುಗಿಯಲಿಲ್ಲ- ಆಗ ದುಡ್ಡು ಕೊಟ್ಟ ನಮ್‌ ನಾಲ್ಕು ವರ್ಷದ ಮಗ!

suchetana

ಮನೆ ಕಟ್ಟುವವರ ಬಹುತೇಕ ಮಂದಿಯ ಕಷ್ಟ ದೇವರಿಗೇ ಪ್ರೀತಿ. ಒಬ್ಬೊಬ್ಬರದ್ದು ಒಂದೊಂದು ತೆರನಾದ ಎಕ್ಸ್‌ಪೀರಿಯನ್ಸ್‌…. ಅದಕ್ಕೇ ತಾನೆ ಮನೆ ಕಟ್ಟಿನೋಡು, ಮದುವೆ ಮಾಡಿ ನೋಡು ಎನ್ನುವುದು… ಹೀಗೆ ಮನೆ ಕಟ್ಟಿರುವವರ ಅನುಭವಗಳನ್ನು ಹಂಚಿಕೊಳ್ಳುವಂತೆ ವಿಜಯವಾಣಿ ನೀಡಿದ ಕರೆಗೆ ಬಂದಿದ್ದ ಪತ್ರಗಳ ಪೈಕಿ ಆಯ್ದ ಕೆಲವು ಪತ್ರಗಳನ್ನು ಇಲ್ಲಿ ದಿನವೂ ಪ್ರಕಟಿಸಲಾಗುತ್ತಿದೆ….

| ನೂತನ ದೋಶೆಟ್ಟಿ, ಬೆಂಗಳೂರು

2003ನೇ ಇಸವಿ. ಅಕಸ್ಮಾತ್ತಾಗಿ ನನ್ನ ಪತಿಗೆ ಬೆಂಗಳೂರಿಗೆ ವರ್ಗವಾಯಿತು. ಕಾರವಾರದ ಕಡಲತೀರದಲ್ಲಿ ಹಾಯಾಗಿ ವಿಹರಿಸಿಕೊಂಡಿದ್ದ ಆ ದಿನಗಳಲ್ಲಿ ಹೀಗೆ ಬಂದೆರಗಿದ ವರ್ಗಾವಣೆಯಿಂದ ನಾವು ವಿಚಲಿತರಾದೆವು. ಅಂತೂ ಅನಿವಾರ್ಯವಾಗಿ ನಾನೂ ಬೆಂಗಳೂರಿಗೆ ವರ್ಗಾವಣೆ ಮಾಡಿಸಿಕೊಂಡು ಬರಬೇಕಾಯಿತು.

ಇಲ್ಲಿ ಬಾಡಿಗೆ ಮನೆಯಲ್ಲಿ ವಾಸ. ಬಾಡಿಗೆಯ ಹಣವನ್ನೇ ಬ್ಯಾಂಕಿನ ಸಾಲಕ್ಕೆ ಕಟ್ಟಿದರೆ ಸ್ವಂತ ಮನೆಯಾದರೂ ಆಗುತ್ತಿತ್ತು ಎಂಬ ಯೋಚನೆ ಹೊಳೆಯಿತು. ಹಾಗೆ ಆರಂಭವಾದದ್ದು ಸ್ವಂತ ಮನೆಯ ಕನಸು. ನನ್ನ ಮಗನಿಗೆ ನಾವಿದ್ದ ಮನೆಯಿಂದ 10 ಕಿ.ಮೀ. ದೂರದಲ್ಲಿರುವ ಶಾಲೆಯಲ್ಲಿ ಸೀಟ್​ ಸಿಕ್ಕಿತು. ಹಾಗಾಗಿ ಅಲ್ಲಿಯೇ ಸ್ವಂತ ಮನೆ ಇದ್ದರೆ ಒಳ್ಳೆಯದು ಎಂದು ಶಾಲೆಯ ಸುತ್ತ ಮುತ್ತಲೇ ಸೈಟ್​ ನೋಡಿದೆ.

ಅದೃಷ್ಟವಶಾತ್​ ಶಾಲೆಗೆ ಕಾಲುಹಾದಿ ದೂರದಲ್ಲಿ ಸಿದ್ಧ ಮನೆಯೇ ಸಿಕ್ಕಿತು! ಅದನ್ನೇ ಕೊಂಡು ನಮಗೆ ಬೇಕಾದಂತೆ ಸ್ವಲ್ಪ ಬದಲಾವಣೆ ಮಾಡಿಕೊಳ್ಳೋಣ ಎಂದು ತಕ್ಷಣ ಕಾರ್ಯಪ್ರವೃತ್ತರಾದೆವು.
ಯೋಜನೆಗಳೆಲ್ಲ ಸರಿಯಾಗಿದ್ದರೂ ಹಣ ಹೊಂದಿಸುವುದು ಸುಲಭವಲ್ಲ. ಬ್ಯಾಂಕ್​ ಸಾಲ, ಕೂಡಿಟ್ಟ ಹಣ ಎಲ್ಲ ಸೇರಿದರೂ ಇನ್ನೂ ಬೇಕು ಮತ್ತೂ ಬೇಕು ಎಂಬ ಪರಿಸ್ಥಿತಿ. ದಿನವೂ ಇದರ ಬಗ್ಗೆಯೇ ಮಾತು. ನನ್ನ ಮಗ ಆಗ 4 ವರ್ಷದವನು. ಅವನ ಬಳಿ ಪಿಗ್ಗಿ ಬ್ಯಾಂಕ್​ ಇತ್ತು. ಒಂದು ರಾತ್ರಿ ಅವನು ಅದನ್ನು ತೆಗೆದುಕೊಂಡು ಬಂದು ನನ್ನ ಮುಂದೆ ಇಟ್ಟು "ಇದರಲ್ಲಿರೋ ಅಷ್ಟೂ ತಗೋ. ಮನೆ ಕಟ್ಟೋಕೆ ಸಾಕು' ಎಂದು ಹೇಳಿದ.

ನನ್ನ ಕಣ್ಣಾಲಿಗಳು ತುಂಬಿ ಹೋದವು. ಅದರಲ್ಲಿ 3000 ರೂ. ಇದ್ದವು. ಅದು ಅವನನ್ನು ನೋಡಲು ಬಂದವರು, ಆಗಾಗ ನಾವು ಕೊಟ್ಟಿದ್ದು ಎಲ್ಲ ಸೇರಿ ಆದ ಇಡುಗಂಟು. ಅವನ ಕಣ್ಣುಗಳು ಸೂಸಿದ ಆ ವಿಶ್ವಾಸ ನನ್ನಲ್ಲಿ ಹೊಸ ಚೈತನ್ಯ ತುಂಬಿತು. ಹಣ ಹೊಂದಿಸಿ ಮನೆ ಕಟ್ಟಿಸಿದೆವು. ಕಟ್ಟುವ ಐದಾರು ತಿಂಗಳಿನಲ್ಲಿ ಸಾಕಷ್ಟು ಅಡೆತಡೆಗಳು ಬಂದವು. ಆಗೆಲ್ಲ ಹಣ ತುಂಬಿದ ಪಿಗ್ಗಿ ಬ್ಯಾಂಕ್​ ಹುರಿದುಂಬಿಸಿತು. ನನ್ನ ಮನೆ ದೊಡ್ಡದಿದ್ದರೂ ಆ ಪುಟ್ಟ ಪಿಗ್ಗಿ ಬ್ಯಾಂಕ್​ ಎದುರು ಬಹಳ ಸಣ್ಣದು ಅಂತ ಈಗಲೂ ಅನಿಸುತ್ತದೆ.