ಅಂಕಣ

ಚಾತಕ ಪಕ್ಷಿಯ ಸುತ್ತ ಅಪನಂಬಿಕೆಯ ಗೂಡು!

ಪ್ರಿಯ-ಪ್ರಿಯತಮೆಯರ ಪ್ರೇಮ ವಿರಹದ ಕಾಯುವಿಕೆಯ ಪ್ರತೀಕವಾಗಿ ಕಾವ್ಯಗಳಲ್ಲಿ ಚಾತಕ ಪಕ್ಷಿ ಬಿಂಬಿತವಾಗುತ್ತ ಬಂದಿದೆ. ಜಾನಪದ, ಪುರಾಣ, ಕಾವ್ಯಗಳಲ್ಲಿ ಉಲ್ಲೇಖವಿರುವ ಈ ಪಕ್ಷಿಯ ಕುರಿತು ಊಹಾಪೋಹಗಳೇ ಜಾಸ್ತಿ. ಈ ಪಕ್ಷಿಯು ಆಕಾಶದೆಡೆಗೆ ಬಾಯಿ ತೆರೆದು ನೇರವಾಗಿ ಸ್ವಾತಿ ಮಳೆಯ ನೀರನ್ನು ಮಾತ್ರ ಕುಡಿಯುತ್ತದೆ ಎಂಬುದು ಮಿಥ್ಯ. ಇದು ಕೂಡ ಇತರ ಪಕ್ಷಿಗಳಂತೆ ಬದುಕು ನಡೆಸುತ್ತದೆ ಎಂಬುದು ಸತ್ಯ.

ಹರೀಶಾ ಎ.ಎಸ್.

ಬಹುಶಃ ಚಾತಕ ಪಕ್ಷಿ ಮತ್ತು ಅಪನಂಬಿಕೆ ಅವಳಿ-ಜವಳಿಯೇ ಇರಬೇಕು. ಆದ್ದರಿಂದಲೇ ಸಾಕಷ್ಟು ಅಪನಂಬಿಕೆಗಳೇ ಸತ್ಯವೆನ್ನುವಂತೆ ಆ ಹಕ್ಕಿಗೆ ಅಂಟಿಕೊಂಡಿವೆ. ಚಾತಕ ಪಕ್ಷಿ, ಚೊಟ್ಟಿ ಕೋಗಿಲೆ, ಗಲಾಟೆ ಕೋಗಿಲೆ, ಮಾರುತಗಳ ಮುಂಗಾಮಿ, Pied cuckoo, Jacobin Cuckoo (Clamator jacobinus) ಎಂದು ನಾನಾ ಹೆಸರುಗಳಿಂದ ಕರೆಯಲ್ಪಡುವ ಈ ಪಕ್ಷಿ, ಪುರಾಣ ಕಾಲದಿಂದ ಪ್ರಸ್ತುತ ಕಾಲಘಟ್ಟದವರೆಗೂ ಕವಿ-ಪ್ರೇಮಿಗಳನ್ನು, ರೈತ-ವಿಜ್ಞಾನಿಗಳನ್ನು ತನ್ನತ್ತ ಆಕರ್ಷಿಸುತ್ತಾ ಬಂದಿರುವ ಅಪರೂಪದ ಹಕ್ಕಿ. ಕವಿ-ಪ್ರೇಮಿಗಳಿಗೆ ಪ್ರೀತಿ-ವಿರಹದ ಉತ್ಕಟತೆ ವ್ಯಕ್ತಪಡಿಸಲು ಸಾಂಪ್ರದಾಯಿಕವಾಗಿ ಬಳಸಿಕೊಂಡು ಬಂದ ಕವಿಸಮಯವಾದರೆ, ವಿಜ್ಞಾನಿ-ರೈತರಿಗೆ ಮುಂಗಾರು ಮಳೆ ಮುನ್ಸೂಚನೆಯ ಶುಭಸೂಚಕವಾಗಿ ‘ಮಾರುತಗಳ ಮುಂಗಾಮಿ’ಯಾಗಿದೆ.

ಜಾನಪದ, ಪುರಾಣ-ಕಾವ್ಯಗಳಲ್ಲಿ ಚಾತಕ ಪಕ್ಷಿಯ ಬಗ್ಗೆ ಉಲ್ಲೇಖಗಳಿವೆ. ಕಾಳಿದಾಸನ ಮೇಘದೂತದಲ್ಲಿ ಯಕ್ಷ - ಯಕ್ಷಿಯರ ಪ್ರೇಮ ಪ್ರಣಯಕ್ಕೆ ಸಂಬಂಧಿಸಿದಂತೆ ಶುರುವಾದ ಕವಿಸಮಯ ಅದೆಷ್ಟೋ ಪ್ರಿಯ-ಪ್ರಿಯತಮೆಯರ ಪ್ರೇಮ-ವಿರಹದ ಕಾಯುವಿಕೆಯ ಪ್ರತೀಕವಾಗಿದೆ. ತುಳಸೀದಾಸರಂತೂ ತಮ್ಮ ದೋಹಾವಳಿಯಲ್ಲಿ ಚಾತಕ ಪಕ್ಷಿಯನ್ನು ಮತ್ತು ಮೇಘವನ್ನು ಪ್ರಿಯ-ಪ್ರಿಯತಮೆಗೆ ಹೋಲಿಸಿ ಪ್ರೇಮದ ಉತ್ತುಂಗಕ್ಕೆ ಕೊಂಡೊಯ್ದಿದ್ದಾರೆ. ಪ್ರಾಚೀನ ಕಾಲದಿಂದ ಇಂದಿನ ಕುವೆಂಪು ಅವರ ರಾಮಾಯಣದವರೆಗೆ ಚಾತಕ ಪಕ್ಷಿಯು ಕಾವ್ಯ ಪರಂಪರೆಯಲ್ಲಿ ಅದೇ ಭಾವೋತ್ಕಟತೆ ಉಳಿಸಿಕೊಂಡು ಬಂದಿರುವುದು ಚಾತಕದ ಹಿರಿಮೆಯೆಂದೇ ಹೇಳಬಹುದು.

ಅನಾದಿ ಕಾಲದಿಂದ ಭಾರತದ ಸಂಸ್ಕೃತಿಯ ಅಂಗವಾಗಿ ಬಂದ ಪಕ್ಷಿಯಾದ್ದರಿಂದ ಅದರ ಸುತ್ತ ಕತೆಯನ್ನು ಕಟ್ಟಿ ವೈಭವೀಕರಿಸಿರುವ ಸಾಧ್ಯತೆಯೇ ಹೆಚ್ಚು. ಈಗಲೂ ಈ ಪಕ್ಷಿಯ ಬಗ್ಗೆ ಜನಸಾಮಾನ್ಯರಲ್ಲಿ ಅಪನಂಬಿಕೆಗಳೇ ಗೂಡು ಕಟ್ಟಿದೆ ಎಂದರೆ ತಪ್ಪಾಗಲಾರದು. ಪತ್ರಿಕೆಗಳಲ್ಲಿ, ಅಂತರ್ಜಾಲ ತಾಣಗಳಲ್ಲಿ, ಯೂಟ್ಯೂಬ್ ವಿಡಿಯೋಗಳಲ್ಲಿ ಅವನ್ನೇ ಸತ್ಯವೆಂದು ಬಿಂಬಿಸಲಾಗಿದೆ.

ಚಾತಕ ಪಕ್ಷಿಯು ಆಕಾಶದೆಡೆಗೆ ಬಾಯಿ ತೆಗೆದು ನೇರವಾಗಿ ಸ್ವಾತಿ ಮಳೆಯ ನೀರನ್ನು ಮಾತ್ರ ಕುಡಿಯುತ್ತದೆಂದು ಇಲ್ಲವಾದಲ್ಲಿ ಎಷ್ಟೋ ದಿನಗಳವರೆಗೆ ನೀರು ಕುಡಿಯದೇ ಬದುಕುತ್ತದೆ ಎಂದು ಹೇಳಲಾಗುತ್ತದೆ. ಮತ್ತೊಂದು ಅಪನಂಬಿಕೆ ಎಂದರೆ ಚಾತಕ ಪಕ್ಷಿಯ ತಲೆಯ ಮೇಲಿರುವ ಜುಟ್ಟಿನಲ್ಲಿ ಮಳೆಯ ನೀರನ್ನು ಸಂಗ್ರಹಿಸಿ ಕುಡಿಯುತ್ತದೆ ಎಂದು. ಒಂದೊಮ್ಮೆ ಚಾತಕವು ನಿಂತ ನೀರನ್ನು ಕುಡಿಯಲು ಪ್ರಯತ್ನಿಸಿದ ಸಂದರ್ಭದಲ್ಲಿ ಈ ಜುಟ್ಟು ನೀರು ಕುಡಿಯಲು ಅಡ್ಡ ಬರುವ ಕಾರಣದಿಂದ ಅದು ನಿಂತ ನೀರನ್ನು ಕುಡಿಯುವುದಿಲ್ಲ ಎಂದು ಹೇಳುತ್ತಾರೆ. ಇದರ ಜತೆಗೆ ಈ ಹಕ್ಕಿಯ ಕತ್ತಿನ ಭಾಗದ ಮೂಳೆಯು ನೇರವಾಗಿದ್ದು ಕತ್ತನ್ನು ಬಗ್ಗಿಸಿ ನಿಂತ ನೀರನ್ನು ಕುಡಿಯಲಾಗುವುದಿಲ್ಲ ಎಂದೂ ಹೇಳಲಾಗುತ್ತದೆ. ಇವೆಲ್ಲವೂ ಸತ್ಯಕ್ಕೆ ದೂರವಾದವು. ಕಾರಣ, ಅದೇನು ಮಳೆಯ ನೀರನ್ನೇ ಕುಡಿಯುವುದಿಲ್ಲ, ನಿಂತ ನೀರನ್ನೇ ಕುಡಿಯುವುದು. ಇನ್ನು ಮರಳುಗಾಡಿನಲ್ಲಿ ವಾಸಿಸುವ ಕೆಲವು ಜೀವಿಗಳು ಮಾತ್ರ ದೀರ್ಘ ಕಾಲದವರೆಗೆ ಆ ಹವಾಗುಣಕ್ಕೆ ಹೊಂದುವಂತೆ ವಿಶಿಷ್ಟ ಮಾರ್ಪಾಟುಗಳಿಂದ ಹೆಚ್ಚು ದಿನಗಳವರೆಗೆ ನೀರಿಲ್ಲದೆ ಬದುಕಬಲ್ಲವು, ಉಳಿದಂತೆ ಎಲ್ಲಾ ಜೀವಿಗಳಿಗೂ ನೀರು ಅತ್ಯವಶ್ಯಕ. ಹಕ್ಕಿಗಳಲ್ಲಿ ಜುಟ್ಟು ವಿಕಾಸವಾಗಲು ಕಾರಣ, ಅದು ತನ್ನ ಆಕ್ರಮಣಶೀಲತೆಯನ್ನು ಪ್ರತಿಸ್ಪರ್ಧಿಗಳಿಗೆ ವ್ಯಕ್ತಪಡಿಸುವುದರ ಸಲುವಾಗಿ. ಬಗ್ಗಿ ನೀರು ಕುಡಿಯಲು ಜುಟ್ಟು ಅಡ್ಡ ಬರುವ ಸಂಭವವೇ ಇಲ್ಲ, ಅಂದಾಜು ಐದುನೂರಕ್ಕೂ ಹೆಚ್ಚಿನ ಹಕ್ಕಿಗಳಲ್ಲಿ ಈ ಜುಟ್ಟು (ಇಛಿಠಠಿ) ಇದೆ, ಅಂದರೆ ಅವು ಯಾವುದಕ್ಕೂ ನೀರು ಕುಡಿಯಲು ಈ ಜುಟ್ಟು ಅಡ್ಡ ಬರುವುದಿಲ್ಲವೇ? ಎಲ್ಲಾ ಹಕ್ಕಿಗಳಿಗೆ ಇರುವಂತೆ ಈ ಹಕ್ಕಿಗೂ ಕತ್ತಿನ ಮೂಳೆಗಳಿವೆ ನೇರವಾಗಿ ಅಲ್ಲ, ಎಲ್ಲವಕ್ಕೂ ಇರುವಂತೆ.

ಭಾರತದಲ್ಲಿ ಕಂಡುಬರುವ ಚಾತಕ ಪಕ್ಷಿಗಳಲ್ಲಿ ಎರಡು ಗುಂಪುಗಳಿವೆ. ಕೇವಲ ದಕ್ಷಿಣ ಭಾರತಕ್ಕೆ ಸೀಮಿತವಾದ ಸ್ಥಳೀಯ ಸಣ್ಣ ಗುಂಪು ಮತ್ತು ಮುಂಗಾರಿಗಿಂತ ಮುಂಚಿತವಾಗಿ ಭಾರಿ ಸಂಖ್ಯೆಯಲ್ಲಿ ಆಫ್ರಿಕಾ ಖಂಡದಿಂದ ವಲಸೆ ಬರುವ ಮತ್ತೊಂದು ಗುಂಪು. ಈ ಸಣ್ಣ ಗುಂಪಿನ ಹಕ್ಕಿಗಳು ತೀರಾ ವಿರಳವಾದ ಕಾರಣ ಯಾರ ಗಮನಕ್ಕೂ ಹೆಚ್ಚು ಬರುವುದಿಲ್ಲ. ಆದರೆ, ಈ ವಲಸೆ ಬರುವ ಗುಂಪು ಭಾರಿ ಸಂಖ್ಯೆಯಲ್ಲಿ ಆಗಮಿಸುತ್ತವೆ. ನಮಗೆ ಇದು ತುಂಬಾ ಪ್ರತ್ಯೇಕವಾಗಿ ಕಾಣಲು ಕಾರಣ ಮೂರು ನಾಲ್ಕು ತಿಂಗಳುಗಳಿಂದ ಮಳೆಯಿಲ್ಲದೆ, ಬೇಸಿಗೆಯ ಧಗೆಗೆ ಬರಡಾದ ಭೂಮಿ, ಒಣಗಿದ ಮರಗಿಡಗಳು, ನೀರಿಲ್ಲದೆ ಬಳಲಿದ ಪ್ರಾಣಿ ಪಕ್ಷಿಗಳು. ಈ ಕಾಲಾವಧಿಯಲ್ಲಿ ಮನುಷ್ಯ ಕೃಷಿ ಚಟುವಟಿಕೆಗಳಿಲ್ಲದೆ ಸುಮ್ಮನಿರುತ್ತಾನೆ, ವ್ಯಾಪಾರ ವಹಿವಾಟುಗಳು ಬಿಸಿಲ ಧಗೆಗೆ ನಿಂತು ಹೋಗಿರುತ್ತವೆ, ಇಂತಹ ಸಮಯದಲ್ಲಿ ಮಾನವನ ಕುತೂಹಲವೆಲ್ಲ ಪ್ರಕೃತಿಯಲ್ಲಿ ಆಗುವ ಬದಲಾವಣೆಗಳ ಮೇಲೆ ಇರುತ್ತದೆ; ಚಿಕ್ಕ ಬದಲಾವಣೆಯೂ ಗಮನಸೆಳೆಯುತ್ತದೆ. ಇದ್ದಕ್ಕಿದ್ದಂತೆ ಎಲ್ಲಿಂದಲೋ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವ ಈ ಹಕ್ಕಿಗಳು ಪೀವ್ ಪಿಯು ಪಿಯು... ಪೀವ್ ಪಿಯು ಪಿಯು... ಪೀವ್ ಪಿಯು ಪಿಯು... ಎಂದು ಜೋರಾಗಿ ಲೋಹದ ಕಂಠದಲ್ಲಿ ಕೂಗುವುದರಿಂದ ಎಲ್ಲರ ಗಮನ ಅವುಗಳತ್ತ ಹರಿದಿರುತ್ತದೆ. ಜತೆಗೆ ಅವು ಬಂದ ಕೆಲವೇ ದಿನಗಳಲ್ಲಿ ಮಳೆಯೂ ಸುರಿಯಲಾರಂಭಿಸುತ್ತದೆ. ಇದನ್ನು ಗಮನಿಸಿದ ನಮ್ಮ ಹಿರಿಯರು ಚಾತಕ ಬಂದಿತೆಂದರೆ ಮಳೆ ಬಂದಿತು ಎಂಬರ್ಥದಲ್ಲಿ ಮಳೆಗೂ-ಚಾತಕಕ್ಕೂ ಸಮೀಕರಿಸುತ್ತಾರೆ, ಇದು ಸರಿಯಾದದ್ದೇ.

ಈ ಚಾತಕವು ಆಫ್ರಿಕಾ ಖಂಡದಿಂದ ಭಾರತಕ್ಕೆ ಸಮುದ್ರದ ಮೇಲೆ ಅಷ್ಟೊಂದು ದೂರ ಒಂದೇ ಸಮನೆ ಹಾರಿಕೊಂಡು ಬರುವುದು ಬಲು ಪ್ರಯಾಸದ ಪ್ರಯಾಣ. ಅದಕ್ಕೆಂದೇ ಅವು ಕಂಡುಕೊಂಡಿರುವ ದಾರಿ ಮೇ ತಿಂಗಳಲ್ಲಿ ಬೀಸುವ ಮುಂಗಾರು ಮಾರುತಗಳ ಸಹಾಯ ಪಡೆಯುವುದು. ಗಾಳಿಯ ಸಹಾಯದಿಂದ ಮಳೆಯ ಮೋಡಗಳಿಗಿಂತಲೂ ಮುಂಚಿತವಾಗಿ ಭಾರತ ಉಪಖಂಡವನ್ನು ಸೇರಿಕೊಳ್ಳುತ್ತವೆ, ಆದ್ದರಿಂದಲೇ ‘ಮುಂಗಾರು ಮುಂಗಾಮಿ’ ಎಂದು ಕರೆಯುವುದು. ಇದೇ ಸಮಯಕ್ಕೆ ಬರಲು ಇನ್ನೊಂದು ಮುಖ್ಯ ಕಾರಣ, ಭಾರತದಲ್ಲಿ ಸಂತಾನೋತ್ಪತ್ತಿ ವೃದ್ಧಿಸಿಕೊಳ್ಳುವ ಸಲುವಾಗಿ ಮತ್ತು ಅವು ಹಾಗೆ ಜೋರಾಗಿ ಕೂಗಲು ಕಾರಣ ಅದಕ್ಕೆ ಸಂತಾನೋತ್ಪತ್ತಿ ಕಾಲ ಸಮೀಪಿಸಿದ ಸೂಚನೆ. ಗಂಡು ಹೆಣ್ಣನ್ನು ಆಕರ್ಷಿಸುವ ಸಲುವಾಗಿ ಸುಮಧುರ ಗಾನ ಪ್ರಾರಂಭಿಸಿರುತ್ತದೆ. ಮುಂಗಾರು ಬಂತೆಂದರೆ ಆಹಾರ ಲಭ್ಯತೆ ಹೇರಳವಾಗಿ ಸಿಗುವುದರಿಂದ ಎಲ್ಲಾ ಸ್ಥಳೀಯ ಹಕ್ಕಿಗಳು ಸಂತಾನೋತ್ಪತ್ತಿಯಲ್ಲಿ ತೊಡಗುತ್ತವೆ, ಈ ಚಾತಕ ಪಕ್ಷಿಯ ಗೂಡು ಪರಾವಲಂಬಿಯಾಗಿದ್ದು (ಆಟಟಛ ಕಚ್ಟಚಠಜಿಠಿಛಿ) ಗೂಡು ಕಟ್ಟದೆಯೇ ಬೇರೊಂದು ಆತಿಥೇಯ ಹಕ್ಕಿಗಳ ಗೂಡಲ್ಲಿ ಮೊಟ್ಟೆ ಇಟ್ಟು ಮರಿ ಮಾಡಿಕೊಳ್ಳುತ್ತದೆ. ಅವು ಭಾರತದಲ್ಲಿ ಮೊಟ್ಟೆ ಇಡಲು ಹರಟೆ ಮಲ್ಲಗಳ ಗೂಡನ್ನೇ ಹೆಚ್ಚು ಅವಲಂಬಿಸುತ್ತವೆ. ಬಂದ ಕೆಲಸ ಮುಗಿದ ನಂತರ ಹೊಸ ಪೀಳಿಗೆಯ ಹಕ್ಕಿಗಳೊಂದಿಗೆ ಉತ್ತರ ಭಾರತದ ಮುಖೇನ ಮತ್ತೆ ಚಳಿಗಾಲದ ಸಮಯಕ್ಕೆ ಆಫ್ರಿಕಾ ಖಂಡವನ್ನು ಸೇರಿಕೊಳ್ಳುತ್ತವೆ.

ಕವಿಯ ಕಲ್ಪನೆಯಲ್ಲಿ ಸೃಷ್ಟಿಯಾದ ಕಾವ್ಯವನ್ನೇ ಸತ್ಯವೆಂದು ಪರಿಗಣಿಸಿ ಪಾರಂಪರಿಕವಾಗಿ ಮಿಥ್ಯವನ್ನೇ ಉಳಿಸಿಕೊಂಡು ಬರುತ್ತಿದ್ದೇವೆ. ಒಮ್ಮೆ ಆ ಕವಿಸಮಯದಿಂದ ಹೊರಗೆ ಬಂದು ವೈಜ್ಞಾನಿಕ ದೃಷ್ಟಿಕೋನದಲ್ಲಿ ಚಾತಕದ ಉಲಿಯನ್ನು ಕೇಳೋಣ..

(ಲೇಖಕರು ಹವ್ಯಾಸಿ ಬರಹಗಾರರು)