ಸನಾತನ ಸಂಸ್ಕೃತಿಯೇ ಹಾಗೆ. ಅತ್ಯದ್ಭುತ ವಿಚಾರಗಳನ್ನು, ಆಳವಾದ ತಾತ್ವಿಕ ಮಜಲುಗಳನ್ನು, ರ್ತಾಕ ವಿಶ್ಲೇಷಣೆಗಳನ್ನು ಸಾಮಾನ್ಯರಿಗೂ ಅರ್ಥವಾಗುವಂತೆ, ಕೈಗೆಟಕುವಂತೆ ಪ್ರಸ್ತುತ ಪಡಿಸುವಲ್ಲಿ ಸಿದ್ಧಹಸ್ತ ಅದರದ್ದು. ಮನುಷ್ಯನ ಇತಿಮಿತಿ, ಮಾನುಷ ಶಕ್ತಿಗಳ ವ್ಯಾಪ್ತಿ, ಬೌದ್ಧಿಕ ಸಾಮರ್ಥ್ಯಗಳ ವಿವಿಧ ಸ್ತರಗಳು ಇವುಗಳನ್ನೆಲ್ಲ ಆಮೂಲಾಗ್ರವಾಗಿ ಅರ್ಥ ಮಾಡಿಕೊಂಡು ವಿಕಾಸವೆಂಬ ಏಣಿಯಲ್ಲಿ ವಿವಿಧ ಹಂತಗಳಲ್ಲಿರುವ ಪ್ರತಿಯೊಬ್ಬರಿಗೂ ಪ್ರತಿಯೊಂದೂ ಸಿಗುವ ರೀತಿಯಲ್ಲಿ ವೈಶಿಷ್ಟ್ಯಗಳನ್ನು ನಿರ್ವಿುಸಿ ಯಾರೂ ಯಾವುದರಿಂದಲೂ ವಂಚಿತರಾಗದಂತೆ ನೋಡಿಕೊಂಡ ಪರಿಪೂರ್ಣ, ನ್ಯಾಯಸಮ್ಮತ, ನಿಷ್ಪಕ್ಷಪಾತ ವ್ಯವಸ್ಥೆಯೊಂದಿದ್ದರೆ ಅದು ಸನಾತನ ಧರ್ಮ. ಉನ್ನತ ಮಟ್ಟದ ಮನುಷ್ಯನ ರ್ತಾಕ ವಿಶ್ಲೇಷಣಾ ಸಾಮರ್ಥ್ಯಕ್ಕೆ ಸವಾಲೆಸೆಯುವಂತೆ ಇರುವ ಬ್ರಹ್ಮಸೂತ್ರ ಅಥವಾ ಬಾದರಾಯಣಸೂತ್ರದಿಂದ ಹಿಡಿದು ಪುರಾಣಗಳವರೆಗೆ ಇಲ್ಲಿ ಪ್ರತಿಯೊಂದಕ್ಕೆ ಪಾತ್ರವಿದೆ, ಸ್ಥಾನವಿದೆ.
ಸ್ವಾಮಿ ವಿವೇಕಾನಂದರು ಚಿಕಾಗೋ ಸಮ್ಮೇಳನದಲ್ಲಿ ಇದನ್ನೇ ಪ್ರಸ್ತಾಪಿಸುತ್ತ, ‘ಅಮಾನುಷ ಪದ್ಧತಿಗಳಿಂದ ಹಿಡಿದು ಅತ್ಯುನ್ನತ ಆಚರಣೆಗಳವರೆಗೂ ಎಲ್ಲಕ್ಕೂ ಹಿಂದೂ ಧರ್ಮದಲ್ಲಿ ಸ್ಥಾನವಿದೆ’ ಎಂದು ಹೇಳುತ್ತಾರೆ. ಧರ್ಮವೊಂದು ಇರಬೇಕಾದ್ದೇ ಹೀಗೆ. ಗ್ರೀಕರಲ್ಲಿ ಕಥೆಯೊಂದು ಪ್ರಚುರದಲ್ಲಿದೆ. ಅಲ್ಲಿಯ ನಾಯಕನೊಬ್ಬ ಹಾಸಿಗೆಯೊಂದನ್ನು ನಿರ್ವಿುಸಿ ಪ್ರತಿಯೊಬ್ಬರೂ ಅದರಲ್ಲಿ ಮಲಗುವಂತೆ ಮಾಡುತ್ತಿದ್ದ. ಯಾರ ಶರೀರ ಹಾಸಿಗೆಗಿಂತ ಉದ್ದವೋ ಅವರ ಕಾಲುಗಳನ್ನು ಕತ್ತರಿಸಿ ಹಾಸಿಗೆಯ ಉದ್ದಕ್ಕೆ ಸಮವಾಗಿಸುತ್ತಿದ್ದ. ಯಾರ ಶರೀರ ಉದ್ದದಲ್ಲಿ ಕಡಿಮೆ ಬೀಳುತ್ತಿತ್ತೋ ಅದನ್ನು ಎಳೆದೆಳೆದು ಹಾಸಿಗೆಯ ಉದ್ದಕ್ಕೆ ಹೊಂದಿಸುವಂತೆ ತನ್ನ ಸೇವಕರಿಗೆ ಆಜ್ಞಾಪಿಸುತ್ತಿದ್ದ. ಇಂದು ಬಹಳಷ್ಟು ಧರ್ಮಗಳು ಈ ಗ್ರೀಕ್ ನಾಯಕನ ಪಲ್ಲವಿಯನ್ನೇ ಹಾಡುತ್ತಿರುವುದು. ಬಹಳಷ್ಟು ಸ್ವಯಂಘೊಷಿತ ದಿಗ್ಧಂತಿಗಳು ಕೂಡ ಧರ್ಮವೆಂದರೆ ಹಾಗೆಯೇ ಇರಬೇಕೆಂತಲೇ ತಮ್ಮ ‘ವ್ಯಾಖ್ಯಾನ ’ಗಳನ್ನು ಮಾಡುತ್ತಿರುವುದು. ಆದರೆ ಈ ವ್ಯಾಖ್ಯಾನಗಳಿಗೆ ಹೊಂದುವ ಧರ್ಮಗಳಲ್ಲಿ ಮನುಷ್ಯನ ಸ್ವಾತಂತ್ರ್ಯ, ಸಹಜಪ್ರವೃತ್ತಿ, ಸ್ವಾಭಾವಿಕ ಸಾಮರ್ಥ್ಯಗಳಿಗೆ ತಿಲಾಂಜಲಿಯಿತ್ತಿದ್ದಾರೆ ಎನ್ನುವುದನ್ನು ಇವರು ಅನುಕೂಲಕರವಾಗಿಯೇ ಗಮನಕ್ಕೆ ತೆಗೆದುಕೊಂಡಿರುವುದಿಲ್ಲ. ಈ ಕಾರಣದಿಂದಲೇ ವಿಶ್ವದ ಯಾವ ಮೂಲೆಯಲ್ಲೂ ಯಾವುದೇ ಪ್ರಲೋಭನೆಗಳಿಲ್ಲದಿದ್ದರೂ, ಬಲವಂತಗಳಿಲ್ಲದಿದ್ದರೂ ಸನಾತನ ಧರ್ಮ ದಾಪುಗಾಲು ಹಾಕಿಕೊಂಡು ಮುನ್ನಡೆಯುತ್ತಿದೆ.
ಕಳೆದ 15 ದಿನಗಳಿಂದ ವಿದೇಶಗಳ ಪ್ರವಾಸದಲ್ಲಿರುವ ನನಗೆ ಅದು ನಿಚ್ಚಳವಾಗಿ ಕಾಣುತ್ತಿದೆ. ಅದು ಮುಸ್ಲಿಂ ಪ್ರಾಬಲ್ಯವಿರುವ ಕೊಲ್ಲಿ ರಾಷ್ಟ್ರಗಳಲ್ಲಾಗಲಿ ಇಲ್ಲವೇ ಕ್ರಿಶ್ಚಿಯನ್ ಪ್ರಾಬಲ್ಯದ ಯುರೋಪಿಯನ್ ರಾಷ್ಟ್ರಗಳಲ್ಲಾಗಲಿ! ಬಹುಶಃ ಈ ವೈವಿಧ್ಯ, ಈ ಸಹಜತೆ ತಮ್ಮ ಧರ್ಮದಲ್ಲಿ ಇಲ್ಲದ ಕಾರಣದಿಂದಲೇ ಇರಬಹುದು ಇಂದು ನೆದರ್ಲ್ಯಾಂಡ್ನಲ್ಲಿ ಶೇಕಡ 67ರಷ್ಟು ಜನ ‘ಧರ್ಮಹೀನ’ (No religion) ಗುಂಪಿನಲ್ಲಿ ತಮ್ಮನ್ನು ಗುರುತಿಸಿಕೊಂಡಿದ್ದಾರೆ. ಇದರ ಪರಿಣಾಮವಾಗಿ ಎಷ್ಟೋ ಚರ್ಚುಗಳು ಖಾಲಿ ಬೀಳುತ್ತಿವೆ ಮತ್ತು ಅವುಗಳ ಜಾಗದಲ್ಲಿ ಹಿಂದೂ ದೇವಾಲಯಗಳು ತಲೆ ಎತ್ತುತ್ತಿವೆ ಎಂಬುದು ಗಮನೀಯ! ಇದನ್ನು ಅಮೆರಿಕದಲ್ಲಿ ಮಾತ್ರ ಕಂಡಿದ್ದ ನನಗೆ ಜರ್ಮನಿಯ ಹ್ಯಾಂಬರ್ಗ್ ಮತ್ತೊಂದು ಸೇರ್ಪಡೆಯಾಯ್ತು. ಯಾರು ಎಷ್ಟೇ ಕೂಗಾಡಲಿ ಸನಾತನ ತತ್ತ ್ವ ಮೌನವಾಗಿ ವಿಶ್ವದಾದ್ಯಂತ ಜನರನ್ನು ಸೆಳೆಯುತ್ತಿದೆ ; ತನ್ನ ಸಾಮರ್ಥ್ಯವನ್ನು ವಿಸ್ತರಿಸುತ್ತಿದೆ. ಸಹಜವೇ! ಸತ್ಯಗಳು ಯಾರ ಹಂಗಿನಲ್ಲೂ ಬದುಕುವುದಿಲ್ಲ. ತಮ್ಮದೇ ದಾರಿಗಳನ್ನು ಸೃಷ್ಟಿಸಿಕೊಂಡು ತಾವು ಬೆಳೆಯುತ್ತಿರುತ್ತವೆ.
ಈ ಸನಾತನ ಸಂಸ್ಕೃತಿಯಲ್ಲಿ ಹಬ್ಬಗಳಿಗೆ ವಿಶೇಷ ಸ್ಥಾನವಿದೆ. ಸತ್ಯಕ್ಕೆ ಆಕರ್ಷಣೆಯನ್ನು, ಸತ್ಯಾನ್ವೇಷಣೆಗೆ ಉತ್ಸಾಹವನ್ನು, ಸತ್ಯಾನುಷ್ಠಾನಕ್ಕೆ ಸಂಭ್ರಮವನ್ನು ನೀಡಲೆಂದೇ ಹುಟ್ಟಿಕೊಂಡಿದ್ದು ಹಬ್ಬಗಳು. ಚರಮಸತ್ಯ, ಮಹಾಸತ್ಯ ಅದ್ಭುತವೇನೋ ಹೌದು! ಆದರೆ ಪ್ರತಿಯೊಬ್ಬರಿಗೂ ಆಕರ್ಷಣೀಯವಲ್ಲ. ಆದ್ದರಿಂದಲೇ ಉಪನಿಷತ್ಕಾಲದ ಮಂತ್ರದ್ರಷ್ಟಾರರೇ ಮುಂದೆ ಅವತಾರ ಪುರುಷರಾಗಿ ಆವಿರ್ಭವಿಸಿದರು. ನಿರಂತರ ತಪಸ್ಸಿನಲ್ಲೇ ಕುಳಿತ, ತ್ಯಾಗ ವೈರಾಗ್ಯಗಳನ್ನೇ ಉಸಿರಾಗಿಸಿಕೊಂಡ, ನಾಡನ್ನು ತ್ಯಜಿಸಿ ಕಾಡನ್ನು ಆವಾಸಸ್ಥಾನವಾಗಿಸಿಕೊಂಡ ಋಷಿ ಸಮಾಜದ ಎಲ್ಲ ವರ್ಗಗಳಿಗೂ ಅಪ್ಯಾಯಮಾನವಲ್ಲ. ಅದರ ಬದಲು ಅವನು ಎಲ್ಲರಂತೆ ಆಡಿ, ಹಾಡಿ, ಕುಣಿದು, ಕುಪ್ಪಳಿಸಿ, ನಕ್ಕು, ಅತ್ತು, ಇದರೆಲ್ಲದರ ನಡುವೆಯೂ ತನ್ನ ಭವ್ಯತೆ, ಅಮೋಘತೆಗಳನ್ನು ಉಳಿಸಿಕೊಂಡೇ ಬದುಕಿದಾಗ ಆ ಬದುಕೇ ಸರ್ವವರ್ಗಗಳಿಗೂ ಎಟಕುವಂಥದ್ದು. ಏಕೆಂದರೆ ಜನಸಾಮಾನ್ಯರಿಗೆ ಕಣ್ಣಿಗೆ ಆಕರ್ಷಣೀಯವಾದ ರೂಪ, ಕಿವಿಗೆ ಮಾಧುರ್ಯ, ಮನಸ್ಸಿಗೆ ಆಶ್ಚರ್ಯಗಳನ್ನು ಉಂಟುಮಾಡಲಾರದ ಯಾವುದೂ ಎಷ್ಟೇ ಅದ್ಬುತವಾಗಿದ್ದರೂ, ಪ್ರಯೋಜನಕಾರಿಯಾಗಿದ್ದರೂ ಆಪ್ಯಾಯಮಾನವಲ್ಲ. ಇದನ್ನರಿತ ಸ್ವಯಂ ಚರಮ ಸತ್ಯವೇ ತನ್ನನ್ನು ವೇದಾಂತದ ಬ್ರಹ್ಮನ ಸ್ಥಾನದಿಂದ ಯೋಗದ ಪರಮಾತ್ಮನ ಸ್ಥಿತಿಗೂ ಹಾಗೂ ಪುರಾಣ, ಇತಿಹಾಸಗಳ ‘ಭಗವಾನ್’ ಸ್ಥಿತಿಗೂ ಇಳಿಸಿಕೊಳ್ಳುತ್ತದೆ. ಇದು ಸಾರ್ವಕಾಲಿಕ ಸತ್ಯವೊಂದು ತಾತ್ಕಾಲಿಕ ಉದ್ದೇಶಕ್ಕಾಗಿ. ಪ್ರಾದೇಶಿಕ ಉಪಯೋಗಕ್ಕಾಗಿ ತನ್ನನ್ನೇ ಮಾರ್ಪಾಡು ಮಾಡಿಕೊಂಡ ಒಂದು ಅದ್ಭುತ ವ್ಯವಸ್ಥೆ. ಈ ಮಹಾಸತ್ಯವನ್ನು ಕಂಡುಹಿಡಿದು ಧೈರ್ಯವಾಗಿ ಪ್ರಪಂಚದ ಮುಂದಿಟ್ಟ ಸಂಸ್ಕೃತಿಯೇ ಸನಾತನಸಂಸ್ಕೃತಿ. ಇದನ್ನು ಗ್ರಹಿಸಿ ಮುಕ್ತಕಂಠದಿಂದ ಶ್ಲಾಘಿಸಿದ ವ್ಯಕ್ತಿ
ಪೊ›. ಮ್ಯಾಕ್ಸ್ಮುಲ್ಲರ್. ಯಾವಾಗ ಬ್ರಹ್ಮವೇ ಪರಮಾತ್ಮ ಮತ್ತು ಭಗವಾನ್ ಆಯಿತೋ ಅದಕ್ಕೆ ಹೊಂದಿಕೊಂಡೇ ತತ್ತ ್ವ ಕೂಡ ವೇದಾಂತ ಭೂಮಿಕೆಯಿಂದ ಯೋಗ ಭೂಮಿಕೆಗೂ ಅಲ್ಲಿಂದ ಪೌರಾಣಿಕ ಭೂಮಿಕೆಗೂ ಇಳಿಸಲ್ಪಟ್ಟಿತು. ಹಾಗೆಯೇ ಆರಾಧನಾ ಪದ್ಧತಿ ಬ್ರಹ್ಮಭಾವದಿಂದ ಧ್ಯಾನಸ್ಥಿತಿಗೂ ಮತ್ತು ಅಲ್ಲಿಂದ ಸ್ತುತಿ, ಬಾಹ್ಯಪೂಜೆಗಳಿಗೂ ಇಳಿಯಿತು. ಇಲ್ಲಿ ಗಮನಿಸಬೇಕಾದ್ದು ಸನಾತನಸಂಸ್ಕೃತಿಯ ದೈವ, ಅದು ಅನುಮೋದಿಸುವ, ಉಪದೇಶಿಸುವ ದೇವರು ಬ್ರಹ್ಮವೇ! ಏಕಮೇವ ಅದ್ವಿತೀಯವಾದ ಬ್ರಹ್ಮವೇ! ಅದರ ಪ್ರಧಾನ ಆರಾಧನಾ ಪದ್ಧತಿಯು ಬ್ರಹ್ಮ ಭಾವವೇ! ಅದರ ಪ್ರಧಾನ ತತ್ತ ್ವ ವೇದಾಂತವೇ! ಬೇರೆಲ್ಲ ತಾತ್ಕಾಲಿಕ ಮತ್ತು ಪ್ರಾದೇಶಿಕ ಅವಶ್ಯಕತೆಗಳಿಗೆ ಅನುಗುಣವಾಗಿ ಅದು ಅಳವಡಿಸಿಕೊಂಡ ಮಾರ್ಪಾಟುಗಳು (Modifications) ಮಾತ್ರ. ಇದನ್ನು ಅರಿಯದೇ ಸನಾತನಿಗಳದ್ದು ಬಹುದೇವೋಪಾಸನೆಯೆಂದೂ ಅವರ ಆರಾಧನಾಪದ್ಧತಿ ಮೂರ್ತಿಪೂಜೆಯೆಂದೂ ಕೂಗಾಡುವ ಅಜ್ಞಾನಿಗಳಿಗೆ ಆ ವೇದಾಂತದ ಬ್ರಹ್ಮ ಬೇಗನೆ ಬುದ್ಧಿಕೊಡಲಿ ಎಂದು ನವರಾತ್ರಿಯಂದು ಪ್ರಾರ್ಥಿಸಬೇಕಾದ್ದು ನಮ್ಮೆಲ್ಲರ ಕರ್ತವ್ಯವೇ ಆಗಿದೆ. ಶಾಸ್ತ್ರವಾಕ್ಯವೊಂದು ಇದನ್ನು ಸ್ಪಷ್ಟವಾಗಿ ತಿಳಿಸುತ್ತದೆ.
ಉತ್ತಮೋ ಬ್ರಹ್ಮ ಸದ್ಭಾವೋ ಧ್ಯಾನ ಭಾವಸ್ತು ಮದ್ಯಮಃ|
ಸ್ತುತಿರ್ಜಪಾ ಅಧಮೋ ಭಾವೋ ಬಹಿಃ ಪೂಜಾ ಅಧಮಾಧಮ||
ಇಲ್ಲಿ ಉತ್ತಮ, ಮಧ್ಯಮ ಮತ್ತು ಅಧಮ ಅಧಮಾಧಮ ಎಂದರೆ ಶ್ರೇಷ್ಠತೆಯ ತರತಮ ಎಂದು ಭಾವಿಸಬಾರದು ಅದು ಸಾಮರ್ಥ್ಯಗಳ ತರತಮವನ್ನು ಸೂಚಿಸುವಂಥದ್ದು. ಸಾಮರ್ಥ್ಯಗಳು ಎಲ್ಲರಿಗೂ ಒಂದೇ ಸಮವಾಗಿ ಇರುವುದಿಲ್ಲವಲ್ಲ.
ಕೊನೆಯ ಎರಡಾದ ಸ್ತುತಿ, ಜಪ, ಬಹಿಃ ಪೂಜೆಗಳಿಗೆ ಅವಕಾಶವನ್ನೀಯುವುದೇ ಹಬ್ಬಗಳು, ಹಾಡು, ಕುಣಿತ, ಹರಿಕಥೆ, ರಥೋತ್ಸವ, ಜಾತ್ರೆ ಇತ್ಯಾದಿ ಸಮಾಜವನ್ನೇ ಒಳಗೊಳ್ಳುವಂತೆ ಮಾಡುವ ಅದ್ಭುತ ವ್ಯವಸ್ಥೆ ಇದು. ಪೂಜೆಗೊಳ್ಳುವ ಮೂರ್ತಿಯ ನಿರ್ವಣ, ಪೂಜಾಸಾಮಗ್ರಿ, ವ್ರತವನ್ನು ನಡೆಸಿಕೊಡುವ ಪುರೋಹಿತ, ವ್ರತಕ್ಕಾಗಿ ನಿರ್ವಣವಾಗಬೇಕಾದ ಶಾಸ್ತ್ರಸಮ್ಮತ ನೈವೇದ್ಯಗಳು, ವ್ರತವನ್ನು ಕಾತುರತೆಯಿಂದ ಎದುರು ನೋಡುವ ವ್ರತಧಾರಕ ಇವರೆಲ್ಲರೂ ಹಲವು ದಿನಗಳ ಪೂರ್ವಸಿದ್ಧತೆಯಲ್ಲಿ ತೊಡಗಿರಬೇಕಾಗುತ್ತದೆ. ಇಲ್ಲಿ ಗಮನಿಸಬೇಕಾದ ಅಂಶವೆಂದರೆ ಈ ಕಾತುರತೆ, ಭಾವ ಮತ್ತು ಆಸಕ್ತಪೂರ್ಣ ಮನೋಭೂಮಿಕೆ ಸಾಮಾನ್ಯವಲ್ಲ. ಇವೇ ಮುಂದಿನ ಹಂತವಾದ ಧ್ಯಾನಜೀವನದ ಪ್ರಾರಂಭಿಕ ಮಜಲುಗಳು! ಭಕ್ತಿಯ ಪೂರ್ವಭಾವಿ ಸಿದ್ಧತೆಯಾದ ಭಾವ ಸೃಜಿಸಲು ಅವಶ್ಯಕವಾದ ಕೆಳಮಜಲುಗಳು. ಭಕ್ತಿಶಾಸ್ತ್ರಗಳು ಇದನ್ನು ‘ವೈಧೀಭಕ್ತಿ’ ಎಂದು ಕರೆಯುತ್ತವೆ. ಈ ಹಬ್ಬಗಳಲ್ಲಿ ಸಂಗೀತ, ನೃತ್ಯಾದಿಗಳಿಗೂ ವಿಶೇಷಸ್ಥಾನವಿರುವುದರಿಂದ ಈ ಮಹಾನ್ ಕಲೆಗಳು ಅದ್ಭುತವಾಗಿ ಬೆಳೆದು ದೇಶದ ಮೂಲೆಮೂಲೆಗೂ ವ್ಯಾಪಿಸುವುದಕ್ಕೆ ಸಾಧ್ಯವಾಯಿತು. ಬೆಂಗಳೂರಿನ ರಾಮೋತ್ಸವ, ಮೈಸೂರಿನ ದಸರಾ ಅದೆಷ್ಟು ಲಲಿತಕಲೆಗಳಿಗೆ, ಪ್ರತಿಭೆಗಳಿಗೆ ಪ್ರೋತ್ಸಾಹ, ಪುರಸ್ಕಾರಗಳನ್ನು ನೀಡಿತು ಎಂಬುದು ಇಲ್ಲಿ ಗಮನಾರ್ಹ. ಇದೇ ಸಂಸ್ಕೃತಿಯೇ ದೇವಾಲಯಗಳ ನಿರ್ಮಾಣ ಮತ್ತು ಶಿಲ್ಪಕಲೆಗಳೊಂದಿಗೆ ಹಾಸುಹೊಕ್ಕಾಗಿದೆ.
ಸನಾತನ ಸಂಸ್ಕೃತಿಯ ಪ್ರಧಾನ ಲಕ್ಷಣವೇ ಉನ್ನತ ಆಚರಣೆಗಳ ಉಗಮ ಹಾಗೂ ಗಮ್ಯಸ್ಥಾನಗಳನ್ನು ಆಧ್ಯಾತ್ಮೀಕರಿಸಿದ್ದು. ಅಷ್ಟೇ ಅಲ್ಲ! ಎಷ್ಟು ರೀತಿಯಲ್ಲಿ ವೈವಿಧ್ಯಗಳನ್ನು ತರಬಹುದೋ, ಎಷ್ಟು ರೀತಿಯಲ್ಲಿ ಅದನ್ನು ಆಕರ್ಷಣೀಯವಾಗಿಸಬಹುದೋ, ಎಷ್ಟು ರೀತಿಯಲ್ಲಿ ಎಲ್ಲರಿಗೂ ಸ್ವೀಕೃತವಾಗಿಸಬಹುದೋ ಅಷ್ಟನ್ನೂ ಅದು ಮಾಡಿಕೊಂಡೇ ಬರುತ್ತಿದೆ ತನ್ನನ್ನು ನವೀಕರಿಸಿಕೊಂಡೇ ಬರುತ್ತಿದೆ. ಇದನ್ನು ಗಮನಿಸಿದ ಸ್ವಾಮಿ ವಿವೇಕಾನಂದರು- ‘ಹೊಸ ಹೊಸ ಪಂಥಗಳು ತಲೆಯೆತ್ತದ ಒಂದು ದಶಕವೂ ಇಲ್ಲಿ ಕಳೆಯುವುದಿಲ್ಲ. ಪ್ರತಿಯೊಬ್ಬರಿಗೂ ಒಂದು ಪಂಥವಿರಬೇಕಾದ್ದೇ. ಹಾಗೆಂದು ಯಾರೂ ‘ಪಾಂಥಿಕ’ (Sectarian)ನಾಗಬೇಕಿಲ್ಲ,’ ಎಂದಿದ್ದಾರೆ.
ಭಾರತೀಯ ಹಬ್ಬಗಳ ಕ್ರಮದಲ್ಲೂ ಅದ್ಭುತ ವಿಜ್ಞಾನವಿದೆ. ಎರಡು ಸಂದರ್ಭಗಳು ‘ರಾತ್ರಿ’ಯಿಂದ ಸೂಚಿಸಲ್ಪಡುತ್ತವೆ. ಒಂದು ನವರಾತ್ರಿ, ಇನ್ನೊಂದು ಶಿವರಾತ್ರಿ. ಈ ನವರಾತ್ರಿಯಲ್ಲಿ ಮತ್ತೆ ಎರಡು ವಿಧ ; ವಸಂತ ನವರಾತ್ರಿ ಮತ್ತು ಶರನ್ನವರಾತ್ರಿ. ಚೈತ್ರಶುದ್ಧಪಾಡ್ಯಮಿ- ಯುಗಾದಿಯಂದು ಪ್ರಾರಂಭವಾಗಿ ಶ್ರೀರಾಮನವಮಿಗೆ ಮುಗಿಯುವುದು ವಸಂತ ನವರಾತ್ರಿಯಾದರೆ, ಅಶ್ವಯುಜ ಪಾಡ್ಯಮಿಯಿಂದ ನವಮಿಯವರೆಗೆ ಶರನ್ನವರಾತ್ರಿ. ವಸಂತ ನವರಾತ್ರಿ ದಕ್ಷಿಣ ಭಾರತದಲ್ಲಿ ಪ್ರಚುರದಲ್ಲಿರುವುದು ಕಡಿಮೆ. ಶರನ್ನವರಾತ್ರಿಯ ವಸ್ತು ಜಗನ್ಮಾತೆಯಾದ ದೇವಿ ಮಾನುಷ ಲೋಕದ ಕಂಟಕಗಳಾದ ಅಜ್ಞಾನ, ಅವಿವೇಕಗಳ ಪ್ರತೀಕಗಳೇ ಆದ ರಾಕ್ಷಸರನ್ನು ಸಂಹರಿಸಿ ಸಾತ್ವಿಕರೂ, ತಪೋನಿರತರಾದ ತನ್ನ ಮಕ್ಕಳಿಗೆ ಅಭಯವನ್ನು ನೀಡಿ ಕೃಪೆಗೈಯುವ ದಿನಗಳಿವು. ಈ ರಾಕ್ಷಸರ ಸಂಖ್ಯೆಯೂ ಒಂಬತ್ತೇ; ಮಧು, ಕೈಟಭ, ಮಹಿಷ, ಧೂಮ್ರಲೋಚನ, ರಕ್ತಬೀಜ, ಚಂಡ, ಮುಂಡ, ಶುಂಭ, ನಿಶುಂಭರೇ ಇವರು. ಈ ರಾಕ್ಷಸರೆಲ್ಲ ಪರಮ ಶಕ್ತಿವಂತರು! ದೇವತೆಗಳಿಗಿಂತಲೂ ಶಕ್ತಿವಂತರು! ಭಗವತ್ಕೃಪೆಯಿಂದಲೇ, ದೇವಿ ಅನುಗ್ರಹದಿಂದಲೇ, ಸಾತ್ವಿಕರಾದ ದೇವತೆಗಳು ಇವರ ಉಪಟಳದಿಂದ ಪಾರಾಗಬೇಕು! ಇಲ್ಲಿ ಪೌರಾಣಿಕ ಅರ್ಥಕ್ಕೆ ಮೂಗು ಮುರಿಯುವವರು ಯೌಗಿಕ ಅರ್ಥವನ್ನೋ, ವೈದಿಕ ಅರ್ಥವನ್ನೋ ತೆಗೆದುಕೊಳ್ಳಬಹುದು. ಎಲ್ಲ ಪ್ರಜ್ಞಾಮಜಲುಗಳಿಗೆ ಅದರಲ್ಲೂ ಅಧ್ಯಾತ್ಮಚಿಂತನೆಯ ಪ್ರಜ್ಞಾಮಜಲುಗಳಿಗೆ ಮೊದಲಿಂದಲೂ ಲೀಲಾಕ್ಷೇತ್ರವನ್ನು ನಿರ್ವಿುಸಿಕೊಟ್ಟ ಮಹಾನ್ ಆಶ್ರಯತಾಣ ಈ ಭರತಭೂಮಿ. ಭರತ ಭೂಮಿಯಿಲ್ಲದಿದ್ದಲ್ಲಿ, ಧರ್ಮ, ಸತ್ಯ, ಸಾಕ್ಷಾತ್ಕಾರ, ಅಂತಮುಖತೆ, ನಿರ್ವಾಣ ಈ ಪದಗಳು ಅನುಭಾವಿಕ ವಿಷಯಗಳಾಗುವುದು ಒತ್ತಟ್ಟಿಗಿರಲಿ ಅವುಗಳಿಗೆ ಹುಟ್ಟು ಕೂಡ ಇರುತ್ತಿರಲಿಲ್ಲ. ಪ್ರತಿಹಂತದಲ್ಲೂ ಆಧ್ಯಾತ್ಮಿಕತೆಯ ತೊಟ್ಟಿಲು ನಮ್ಮ ಭವ್ಯ ಭಾರತ. ಈ ರಾಕ್ಷಸರು ತಮೋಗುಣ ಮತ್ತು ರಜೋಗುಣಗಳ ಮೂರ್ತರೂಪಗಳು. ಅವಿದ್ಯೆಯನ್ನು ಆರಾಧಿಸಿ, ಕಾಮ ಕ್ರೋಧಾದಿಗಳನ್ನೇ ಪುರುಷಾರ್ಥಗಳು ಹಾಗೂ ಜೀವನ ಪಲ್ಲವಿಯನ್ನಾಗಿಸಿಕೊಂಡವರು, ಆಧುನಿಕ ಗ್ರೀಕ್ ಮತ್ತು ರೋಮನ್ನರಂತೆ! ಇಂದಿಗೂ ಬಹಳಷ್ಟು ವಿವೇಕಹೀನ ಮನಸ್ಸುಗಳಿಗೆ ಕಾಮಪ್ರಚೋದಕ , ಕ್ರೋಧ (ಹಿಂಸಾ) ಪ್ರಚೋದಕ ದೃಶ್ಯಾವಳಿ ಇಲ್ಲದಿದ್ದಲ್ಲಿ ಅದು ಮನರಂಜನೆಯೇ ಅಲ್ಲ. ಇಂಥ ಮನರಂಜನೆಗಳು ತಾತ್ಕಾಲಿಕ ಉಲ್ಲಾಸ ಆದರೆ ಪರಿಣಾಮ ಭಯಾನಕ. ಇವು ಮನಸ್ಸು, ಬುದ್ಧಿಗಳ ಗ್ರಹಿಕಾಸಾಮರ್ಥ್ಯವನ್ನೇ ಕೊಂದು ಚಿಂತನಸಾಮರ್ಥ್ಯವನ್ನು ಹೊಸಕಿಹಾಕುತ್ತವೆ. ಕೃಷ್ಣ ಗೀತೆಯಲ್ಲಿ ಕಾಮವನ್ನು ಜ್ಞಾನದ ಶತ್ರು (ಜ್ಞಾನಿನೋ ನಿತ್ಯ ವೈರಿಣಾ) ಎಂದು ಕರೆಯುತ್ತಾನೆ. ನವರಾತ್ರಿಯಂದು ಆರಾಧನೆಗೊಳ್ಳುವ ಪ್ರತಿ ದೇವತೆಯು ನಮ್ಮಲ್ಲೇ ಇರುವ ಈ ರಾಕ್ಷಸರನ್ನೆಲ್ಲ ಗೆಲ್ಲುವುದಕ್ಕೆ ಸಜ್ಜಾಗಿರುವವಳು. ಅದೇ ಜೀವನದ ಅರ್ಥ; ಅದೇ ಗುರಿ. ಈ ಪ್ರತಿಬಂಧಕಗಳೇ ನಮ್ಮನ್ನು ಸಾಮಾನ್ಯರಾಗಿಸಿವೆ. ಅವುಗಳ ವಿನಾಶವೇ ನಮ್ಮ ಉದ್ಧಾರದ ಹೆಬ್ಬಾಗಿಲು. ಶ್ರೀ ಶಂಕರಚಾರ್ಯರು, ‘ಅಮ್ಮ ಮೋಕ್ಷದ್ವಾರವನ್ನು ತೆರೆಯುವವಳೇ ನೀನು (ಮೋಕ್ಷದ್ವಾರ ಕಪಾಟ ಪಾಟನಕರೀ)’ ಎಂದು ಕಾಶಿಯ ಅನ್ನಪೂರ್ಣೆಯನ್ನು ಸ್ತುತಿಸುತ್ತಾರೆ. ಅದೇ ನಿಜವಾದ ವಿಜಯ ; ಆ ದಿನವೇ ವಿಜಯದಶಮಿ!
(ಲೇಖಕರು ಖ್ಯಾತ ಪ್ರವಚನಕಾರರು, ಗದಗ ಮತ್ತು ವಿಜಯಪುರ ರಾಮಕೃಷ್ಣ-ವಿವೇಕಾನಂದ ಆಶ್ರಮದ ಅಧ್ಯಕ್ಷರು)