ಅಂಕಣ

ನಮ್ಮ ಮದ್ವೆ ಆಗಿ 20 ದಿನಗಳಾಗಿವೆ. ಕಳೆದ ವಾರ ಒಬ್ಳು ಬಂದು ತನಗೂ ನಮ್ಮೆಜಮಾನ್ರಿಗೂ 8 ವರ್ಷಗಳ ಹಿಂದೆಯೇ ಮದ್ವೆ ಆಗಿದ್ದ ದಾಖಲೆ ತೋರಿಸಿ ಹೋಗಿದ್ದಾಳೆ, ಈಗೇನು ಮಾಡ್ಲಿ?

Webdesk - Ravikanth
- ನಾವು ಮುಸಲ್ಮಾನರು. ನಮ್ಮ ತಂದೆಗೆ ಅವರ ತಂದೆಯಿಂದ ಇಪ್ಪತ್ತು ಅಂಗಡಿಗಳು ಬಂದಿದ್ದವು. ಅವುಗಳಲ್ಲಿ ಎರಡನ್ನು ಅವರು ಮಾರಾಟ ಮಾಡಿದರು. ನಮ್ಮ ತಂದೆಗೆ ನಾವು ಇಬ್ಬರು ಗಂಡು ಮಕ್ಕಳು. ಮಾರಾಟ ಮಾಡುವಾಗ ನಮ್ಮ ಸಹಿಯನ್ನೂ ಹಾಕಿಸಿಕೊಂಡರು. ಆ ಮಾರಾಟದಿಂದ ಬಂದ ಹಣವನ್ನು ನನ್ನ ಅಣ್ಣನಿಗೇ ಕೊಟ್ಟಿದ್ದಾರೆ. ಈಗ ಉಳಿದ ಹದಿನೆಂಟು ಅಂಗಡಿಗಳಲ್ಲಿ ನನಗೆ ನಾಲ್ಕು ಮಾತ್ರ ಕೊಡುತ್ತೇನೆ. ನಮ್ಮ ಅಣ್ಣನಿಗೆ ಹತ್ತು ಅಂಗಡಿ ಕೊಡುತ್ತೇನೆ ಮತ್ತು ನಾಲ್ಕು ಅಂಗಡಿ ನಾನೇ ಉಳಿಸಿಕೊಳ್ಳುತ್ತೇನೆ ಎನ್ನುತ್ತಿದ್ದಾರೆ. ಇದು ಯಾವ ನ್ಯಾಯ? ಪಿತ್ರಾರ್ಜಿತ ಆಸ್ತಿಯಲ್ಲಿ ಇಬ್ಬರು ಗಂಡು ಮಕ್ಕಳಿಗೂ ಸಮಭಾಗ ಇರುವುದಿಲ್ಲವೇ? ನಮಗೆ ಇಬ್ಬರು ತಂಗಿಯರು ಇದ್ದಾರೆ. ಅವರಿಗೂ ಭಾಗ ಕೊಡಬೇಕೇ? ನಾನು ಕೇಸು ಹಾಕಿದರೆ ಸಮಭಾಗ ಸಿಗಲು ಎಷ್ಟು ದಿನವಾಗುತ್ತದೆ?

ಮುಸಲ್ಮಾನರಲ್ಲಿ ಪಿತ್ರಾರ್ಜಿತ ಆಸ್ತಿ ಎನ್ನುವ ಪರಿಕಲ್ಪನೆಯೇ ಇಲ್ಲ. ಹೀಗಾಗಿ ನಿಮ್ಮ ತಂದೆಗೆ ಅವರ ತಂದೆಯಿಂದ ಆಸ್ತಿಗಳು ಬಂದಿದ್ದರೂ ಅದು ಅವರದ್ದೇ ಆಸ್ತಿ ಆಗಿರುತ್ತದೆ. ಅದನ್ನು ಅವರು ಹೇಗೆ ಬೇಕಾದರೂ ಪರಭಾರೆ ಮಾಡಬಹುದು . ಅವರ ಹಕ್ಕನ್ನು ಪ್ರಶ್ನೆ ಮಾಡಲು ನಿಮಗೆ ಕಾನೂನಿನಲ್ಲಿ ಅಧಿಕಾರವಿರುವುದಿಲ್ಲ. ನಿಮ್ಮ ತಂದೆ ಬದುಕಿರುವವರೆಗೆ ಅವರ ಯಾವ ಮಕ್ಕಳಿಗೂ ಆಸ್ತಿಗಳಲ್ಲಿ ಅಧಿಕಾರ ಬರುವುದಿಲ್ಲ. ನೀವು ಕೇಸು ಹಾಕಿದರೆ ಅದು ನಿಲ್ಲುವುದೇ ಇಲ್ಲ. ಪ್ರಾರಂಭದ ಹಂತದಲ್ಲಿಯೇ ಬಿದ್ದು ಹೋಗುತ್ತದೆ. ನಿಮ್ಮ ತಂದೆಯ ಜೊತೆ ರಾಜಿ ಮಾಡಿಕೊಂಡು ಅವರಿಂದ ಆಸ್ತಿಯನ್ನು ಹಿಬಾ ಮೂಲಕ ನಿಮ್ಮ ಹೆಸರಿಗೆ ಮಾಡಿಸಿಕೊಳ್ಳಬಹುದೇ ಎಂದು ಯೋಚಿಸುವುದು ಜಾಣತನ.

  • ನಮ್ಮ ಮದುವೆಯಾಗಿ ಇಪ್ಪತ್ತು ದಿನಗಳಾಗಿವೆ. ಕಳೆದ ವಾರ ಒಬ್ಬ ಹೆಂಗಸು ಬಂದು ತನಗೂ ನಮ್ಮ ಯಜಮಾನರಿಗೂ ಎಂಟು ವರ್ಷಗಳ ಹಿಂದೆಯೇ ಮದುವೆ ಆಗಿದ್ದ ದಾಖಲೆ ಎಲ್ಲಾ ತೋರಿಸಿ ಹೋಗಿದ್ದಾಳೆ. ಈಗ ನಾನು ಏನು ಮಾಡುವುದು. ನಾವಿಬ್ಬರೂ ಹಿಂದೂಗಳು. ಆ ಹೆಂಗಸು ಬೇರೆ ಧರ್ಮದವಳು. ಆದರೆ ನಮ್ಮ ಯಜಮಾನರನ್ನು ರಿಜಿಸ್ಟರ್ ಮದುವೆ ಆಗಿದ್ದಾಳೆ.

ನೀವು ಕೂಡಲೇ ( ಮದುವೆ ಆದ ಒಂದು ವರ್ಷದ ಒಳಗೆ) ನಿಮ್ಮ ವಿವಾಹವನ್ನು ಶೂನ್ಯವೆಂದು ರದ್ದು ಮಾಡಬೇಕೆಂದು ಪ್ರಕರಣವನ್ನು ದಾಖಲಿಸಿ. ಒಬ್ಬ ಪತ್ನಿ ಬದುಕಿರುವಾಗ, ಆಕೆಯಿಂದ ವಿಚ್ಛೇದನ ಪಡೆಯದೆ ಮತ್ತೊಬ್ಬ ಪತ್ನಿಯನ್ನು ಸ್ವೀಕರಿಸಲು ಹಿಂದೂ ವಿವಾಹ ಕಾಯ್ದೆಯಲ್ಲಿ ಅವಕಾಶವಿಲ್ಲ. ಇಂತಹ ವಿವಾಹ ಅಸಿಂಧುವಾಗಿರುತ್ತದೆ. ನಿಮಗೆ ಮೊದಲ ಮದುವೆಯ ವಿಷಯ ತಿಳಿದೆಯೇ, ನಿಮ್ಮನ್ನು ಮದುವೆ ಮಾಡಿಕೊಂಡಿದ್ದಾರೆ ಎಂದು ತಿಳಿಸಿ , ಪ್ರಕರಣ ದಾಖಲಿಸಿ, ನಿಮ್ಮ ಮದುವೆಯನ್ನು ರದ್ದು ಮಾಡಿಕೊಳ್ಳುವುದು ಒಳ್ಳೆಯದು.

(ಲೇಖಕರು ಕರ್ನಾಟಕ ಉಚ್ಚ ನ್ಯಾಯಾಲಯದ ಹಿರಿಯ ವಕೀಲರು ಹಾಗೂ ಹಿರಿಯ ಮಧ್ಯಸ್ಥಿಕೆಗಾರರು)