ಹಬ್ಬಗಳು ಸುಖಾಸುಮ್ಮನೆ ಆಚರಿಸುವಂಥದ್ದೇನಲ್ಲ. ಅವುಗಳ ಹಿಂದೆ ಪೌರಾಣಿಕ, ವೈಜ್ಞಾನಿಕ ಮಹತ್ವವಿದೆ. ಈ ಭೂಮಿಯನ್ನು ರಕ್ಷಿಸುವ, ಪರಿಸರಕ್ಕೆ ಕೃತಜ್ಞತೆ ಸಲ್ಲಿಸುವ ಭಾವವಿದೆ. ಅದೆಲ್ಲವನ್ನೂ ಅರ್ಥ ಮಾಡಿಕೊಂಡು, ಹೊಸ ಪೀಳಿಗೆಗೆ ಆ ಬಗ್ಗೆ ಅರಿವು ಮೂಡಿಸಿದರೆ ಹಬ್ಬಗಳ ಆಚರಣೆ ನಿಜಕ್ಕೂ ಸಾರ್ಥಕ ಎಂಬುದರಲ್ಲಿ ಎರಡು ಮಾತಿಲ್ಲ.
ಹಿಂದೂ ಹಬ್ಬಗಳ ಆಚರಣೆ, ಅವುಗಳ ಪದ್ಧತಿ ಇವೆಲ್ಲ ಹೊರಗಿನವರಿಗೆ ಅನೇಕ ಬಾರಿ ಗೊಂದಲ ಸೃಷ್ಟಿಸುವುದೂ ಉಂಟು, ಅವರ ಕಣ್ಣಲ್ಲಿ ಕೆಲವೊಮ್ಮೆ ಮೂಢನಂಬಿಕೆಯಂತೆ, ಮಗದೊಮ್ಮೆ ಹಾಸ್ಯಾಸ್ಪದವಾಗಿ ಕಾಣುತ್ತವೆ. ಅದಕ್ಕೆ ಎಷ್ಟೋ ಬಾರಿ ಪ್ರಶ್ನೆಗಳು ಉದ್ಭವವಾಗುತ್ತವೆ. ‘ನೀವು ಏಕೆ ಹೀಗೆ ಆಚರಿಸುತ್ತೀರಿ?, ಇದರ ಹಿಂದಿನ ಉದ್ದೇಶವೇನು ಅಥವಾ ಮಹತ್ವವೇನು?’ ಎಂದು ಕೇಳಿದಾಗ ಎಷ್ಟೋ ಜನರು ಉತ್ತರಿಸಲು ತಡಕಾಡುವ, ತಡವರಿಸುವ ಪ್ರಸಂಗಗಳನ್ನು ಕಾಣುತ್ತೇವೆ. ಹಬ್ಬಗಳೇನೋ ವೇದಗಳ ಕಾಲದಿಂದಲೂ, ಸಾವಿರಾರು ವರ್ಷಗಳ ಪರಂಪರೆಯಂತೆ ಆಚರಿಸಿಕೊಂಡು ಬರುತ್ತಿದ್ದೇವೆ. ಯಾವ ಹಬ್ಬವೂ ಸುಮ್ಮನೇ ರೂಪಿಸಿದ್ದಲ್ಲ. ಪ್ರತಿಯೊಂದು ಆಚರಣೆಯ ಹಿಂದೆಯೂ ಇತಿಹಾಸ, ಮಹತ್ವ, ಕಳಕಳಿಯಂಥ ಮೌಲ್ಯಗಳಿವೆ. ಆದರೆ, ಸಮಸ್ಯೆ ಆಗಿರುವುದು ಎಲ್ಲಿ ಎಂದರೆ ಅವುಗಳ ಮಹತ್ವ ಅರಿತುಕೊಳ್ಳದೆ, ವೈಶಿಷ್ಟ್ಯ ತಿಳಿಯದೆ, ಮೂಲ ತಿರುಳನ್ನು ಮನನ ಮಾಡಿಕೊಳ್ಳದೆ; ನಮ್ಮ ಹಿರಿಯರು ಆಚರಿಸಿದ್ದಾರೆ ಎಂಬ ಕಾರಣಕ್ಕೆ ನಾವುಗಳೂ ಅದನ್ನು ಆಚರಿಸಿಕೊಂಡು ಬರುತ್ತಿರುವುದು. ಇದನ್ನೂ ಓದಿ: ತೇಜಸ್ವಿನಿ ಅನಂತಕುಮಾರ್ ಅವರ ಹಲೋ ಒಂದ್ನಿಮಿಷ ಅಂಕಣ: ಪ್ಲಾಸ್ಟಿಕ್ ಎಂದು ಮೂಗು ಮುರಿಯದಿರಿ…!
ಕಾಲಘಟ್ಟ ಬದಲಾದಂತೆ ಆಚರಣೆಗಳಲ್ಲಿ ಒಂದಷ್ಟು ಮಾರ್ಪಾಡುಗಳೂ ಮಾಡಿಕೊಂಡಿದ್ದೇವೆ. ಈಗಿನ ಕರೊನಾ ಕಾಲದಲ್ಲಿ ಮತ್ತೊಮ್ಮೆ ಅಂಥ ಬದಲಾವಣೆಗಳನ್ನು ಅನಿವಾರ್ಯವಾಗಿ ಮಾಡಿಕೊಂಡಿದ್ದೇವೆ. ಹಬ್ಬ-ಹರಿದಿನ ಎಂದರೆ ಸಂಬಂಧಿಗಳು, ಆತ್ಮೀಯರೆಲ್ಲ ಒಟ್ಟಾಗಿ ಸೇರಬೇಕು, ಸಂಭ್ರಮಿಸಬೇಕು, ದೈನಂದಿನ ಜಂಜಾಟಗಳನ್ನು ಮರೆತು ಸಂತೋಷದ ಕ್ಷಣಗಳನ್ನು ಅನುಭವಿಸಬೇಕು ಎಂಬುದು ನಿಜವೇ. ಆದರೆ, ಕರೊನಾ ಸೋಂಕಿನ ಪ್ರಕರಣಗಳು ಹೆಚ್ಚುತ್ತಲೇ ಇರುವುದರಿಂದ ಮತ್ತು ಸೋಂಕು ಪ್ರಸರಣದ ವೇಗ ಇನ್ನೂ ತಗ್ಗದಿರುವುದರಿಂದ ಯಾರನ್ನೂ ಮನೆಗೆ ಆಹ್ವಾನಿಸುವಂತಿಲ್ಲ, ನಾವು ಎಲ್ಲೂ ಹೋಗುವಂತಿಲ್ಲ. ಆದರೂ, ಹಬ್ಬಗಳ ಆಚರಣೆಯೇನೂ ಬಿಟ್ಟಿಲ್ಲ. ಮನೆಗೆ ಸೀಮಿತವಾಗಿ ಅತ್ಯಂತ ಸರಳವಾಗಿ ಆಚರಿಸುತ್ತಿದ್ದೇವೆ. ಅದೇನೆ ಇದ್ದರೂ, ಹಬ್ಬದ ಮೂಲಸ್ವರೂಪ ಗೌಣವಾಗದ ಹಾಗೆ ಹಬ್ಬಗಳನ್ನು ಆಚರಿಸಬೇಕು. ಅವುಗಳ ಅರ್ಥ ಅರಿಯದೆ ಆಚರಣೆಗಳಲ್ಲಿ ಮಾರ್ಪಾಡು ಮಾಡಿಕೊಂಡರೆ ಅದು ಬರೀ ಕೃತಕ ಆಚರಣೆ ಎನಿಸಿಕೊಳ್ಳುತ್ತದೆ ಅಷ್ಟೇ.
ಇತ್ತೀಚಿನ ವರ್ಷಗಳಲ್ಲಿ ಹಬ್ಬಗಳಿಗೆ ಕೆಲ ದಿನಗಳು ಇರುವಂತೆಯೇ ಮತ್ತು ಹಬ್ಬ ಆಚರಣೆ ಹೊತ್ತಲ್ಲೂ ಮಾಧ್ಯಮಗಳು ಮತ್ತು ಸಾಮಾಜಿಕ ಮಾಧ್ಯಮಗಳು, ಅವುಗಳ ವೈಜ್ಞಾನಿಕ ಹಿನ್ನಲೆ, ಮಹತ್ವವನ್ನು ಬರಹ, ವಿಡಿಯೋಗಳ ಮುಖಾಂತರ ಜನರನ್ನು ತಲುಪಿಸುತ್ತಿವೆ. ಇಂಥ ಅರಿವು ಮತ್ತು ಜಾಗೃತಿ ಅವಶ್ಯ ಕೂಡ ಹೌದು. ಒಟ್ಟಾರೆ ಹಬ್ಬಗಳ ಆಶಯ ಮತ್ತು ಅವುಗಳ ಮುಖ್ಯ ತಿರುಳನ್ನು ಗಮನಿಸಿದರೆ ಅವುಗಳ ಮೂಲಕ ಪ್ರಕೃತಿಯ ಆರಾಧನೆಯೇ ನಡೆಯುತ್ತದೆ. ನಮಗೆ ಬದುಕು ಸಾಗಿಸಲು ಎಲ್ಲ ಅನಕೂಲ ಮಾಡಿಕೊಟ್ಟಿರುವ ಪ್ರಕೃತಿಗೆ ಕೃತಜ್ಞತೆ ಸಲ್ಲಿಸುವ ಈ ಬಗೆಯನ್ನು ನಮ್ಮ ಹಿರಿಯರು ವೈಶಿಷ್ಟ್ಯಪೂರ್ಣವಾಗಿ ಹಾಕಿಕೊಟ್ಟಿದ್ದಾರೆ. ಇದನ್ನೂ ಓದಿ: ಕಾಗದ ಬಳಕೆಗೆ ಇರಲಿ ಕಡಿವಾಣ…: ಹಲೋ ಒಂದ್ನಿಮಿಷ ಅಂಕಣದಲ್ಲಿ ವಿವರಿಸಿದ್ದಾರೆ ತೇಜಸ್ವಿನಿ ಅನಂತಕುಮಾರ್
ಕೆಲ ದಿನಗಳ ಹಿಂದೆ ನಾಗರಪಂಚಮಿಯನ್ನು ಆಚರಿಸಿದ್ದಾಯಿತು. ‘ನಾಡಿಗೇ ದೊಡ್ಡದು ನಾಗರಪಂಚಮಿ’ ಎಂಬ ಮಾತು ಇದರ ಮಹತ್ವವನ್ನು ಸಾರುತ್ತದೆ. ನಾಗರ ಪಂಚಮಿಗೆ ಸಂಬಂಧಿಸಿಯೂ ಅನೇಕ ನಂಬಿಕೆ ಮತ್ತು ಹಲವು ಬಗೆಯ ಆಚರಣೆಗಳು ನಮ್ಮಲ್ಲಿ ಪ್ರಚಲಿತದಲ್ಲಿವೆ. ನಾಗರಪಂಚಮಿ ಮೂರ್ನಾಲ್ಕು ದಿನ ಇರುವಂತೆಯೇ ಹೆಣ್ಣುಮಕ್ಕಳು ಸಿದ್ಧತೆಗಳನ್ನು ಆರಂಭಿಸುತ್ತಾರೆ. ಅಂದು, ಮನೆಗಳಲ್ಲಿ ಇಳಿಗೆ, ಚಾಕು ಯಾವುದನ್ನೂ ಉಪಯೋಗಿಸುವಂತಿಲ್ಲ. ಕುಟ್ಟುವಂತಿಲ್ಲ, ರುಬ್ಬುವಂತಿಲ್ಲ. ತರಕಾರಿ ಹೆಚ್ಚುವಂತಿಲ್ಲ. ಎಣ್ಣೆಯಲ್ಲಿ ಯಾವುದನ್ನೂ ಕರಿಯಬಾರದು. ಹಾಗಾಗಿ ಎಣ್ಣೆಕಡುಬಿನ ಬದಲಾಗಿ ಹಬೆಕಡಬು. ಹೊಲಗಳಲ್ಲಿ ಉತ್ತುವಂತೆ, ಬಿತ್ತುವಂತೆ ಇಲ್ಲ. ಹಾಗಾಗಿ, ಅರಳು, ಮೆತ್ತನೆಯ ತಂಬಿಟ್ಟು, ತಣ್ಣನೆಯ ಹಾಲು ನಾಗಪ್ಪನಿಗೆ ನೈವೇದ್ಯ. ಇದೆಲ್ಲ ಸರಿಯೇ. ಆದರೆ ಅಂದು ನಾಗಪ್ಪನನ್ನು ಏಕೆ ಪೂಜಿಸುತ್ತೇವೆ? ಈ ಪ್ರಶ್ನೆಗೆ ನಿಖರ ಉತ್ತರ ಹುಡುಕಿಕೊಂಡು ಹೊರಟರೆ ಅಲ್ಲಿ ಕಾಣ ಸಿಗುವುದು-ನಾಗನ ಬಗೆಗಿನ ಕೃತಜ್ಞತಾ ಭಾವವೇ. ನಾಗರಹಾವಿನ ಕೊಡುಗೆಯನ್ನು ಸ್ಮರಿಸಲು, ಗೌರವಿಸಲು, ನಾಗಪ್ಪನಿಗೆ ಇಷ್ಟವಾದ ವಸ್ತು/ಖಾದ್ಯಗಳನ್ನು ನೀಡಲು ಈ ದಿನ ಮೀಸಲು. ಇಷ್ಟೆಲ್ಲ ಮಾಡುವ ಮೂಲಕ ‘ನಾಗಪ್ಪ ನಿನಗೆ ತೊಂದರೆ ಆಗದಂತೆ ನೋಡಿಕೊಳ್ಳುತ್ತೇವೆ’ ಎಂದು ಸಂಕಲ್ಪಿಸುವುದು. ನಮ್ಮಿಂದ ತಪ್ಪಾಗಿದ್ದರೆ, ಗೊತ್ತಿಲ್ಲದೆ ಹಾನಿ ಮಾಡಿದ್ದರೆ ಕ್ಷಮಿಸು ಎಂದು ಕೇಳಿಕೊಳ್ಳುವುದು.
ನಾಗಪಂಚಮಿ ಶ್ರಾವಣ ಮಾಸದಲ್ಲಿ ಬರುತ್ತದೆ. ಈ ಹೊತ್ತಲ್ಲಿ ಮಳೆ ಚೆನ್ನಾಗಿ ಸುರಿದು ಹೊಲಗದ್ದೆಗಳಲ್ಲಿ ಕೃಷಿ ಚಟುವಟಿಕೆಗಳು ವೇಗ ಪಡೆದುಕೊಂಡಿರುತ್ತವೆ. ಬಿತ್ತನೆ ಸಮಯದಲ್ಲಿ ಅಥವಾ ಕಳೆ ತೆಗೆಯುವ ಸಮಯದಲ್ಲಿ ಹಾವಿಗೆ ಹಾನಿ ಆಗದಿರಲಿ ಎಂಬ ಕಳಕಳಿಯೂ ಇದರ ಹಿಂದಿದೆ. ಹಾವು ರೈತಮಿತ್ರ ಕೂಡ ಹೌದು. ಹೊಲದಲ್ಲಿನ ಇಲಿ ಮತ್ತು ಬೆಳೆ ಭಕ್ಷಿಸುವ ಇತರ ಕೀಟಗಳನ್ನು ಹಾವು ತಿನ್ನುತ್ತದೆ. ಆ ಮೂಲಕ ರೈತನ ಬೆಳೆಗಳನ್ನು ಸಂರಕ್ಷಿಸುತ್ತದೆ. ಪರಿಸರದ ಸಮತೋಲನ ಕಾಪಾಡುವಲ್ಲಿಯೂ ಸರ್ಪಗಳ ಕೊಡುಗೆ ಮಹತ್ವದ್ದು, ಪ್ರಕೃತಿಗೆ ಅದರ ಕೊಡುಗೆ ಮಹತ್ವದ್ದಾಗಿರುವುದರಿಂದಲೇ ಹಿರಿಯರು ನಾಗನಿಗೆ ದೇವರು ಅಂತ ಗೌರವಿಸಿದ್ದಾರೆ. ಆ ಮೂಲಕ ಹಾವುಗಳನ್ನು ಕೊಲ್ಲಬಾರದು, ಹೊಡೆಯಬಾರದು ಎಂಬ ಸಂದೇಶವನ್ನು ನೀಡಿದ್ದಾರೆ. ಪ್ರಕೃತಿಗೆ ಕೊಡುಗೆ ನೀಡುವ ಎಲ್ಲ ಪ್ರಾಣಿಗಳ ಬಗ್ಗೆಯೂ ಗೌರವವಿದೆ. ಹಾಗೇ ನಾಗನ ಬಗ್ಗೆಯೂ. ಅದಕ್ಕೆ ಸಾಂಕೇತಿಕವಾಗಿ ಮಹತ್ವವನ್ನು ತಿಳಿಸಿ ಕೊಡುತ್ತ, ಕರಿಯುವುದು, ಕುಟ್ಟುವುದು, ಬಿತ್ತುವುದು ಮಾಡುವುದಿಲ್ಲ. ಇಂಥ ನೈಜ ಸಂಗತಿಗಳನ್ನು ಇಂದಿನ ಪೀಳಿಗೆ ಅರಿಯಬೇಕು. ಬದಲಾಗಿ, ಬರೀ ಸಿಹಿ ತಿಂಡಿ ಮಾಡಿ, ಅದನ್ನು ವಾಟ್ಸ್ಆಪ್ ಸ್ಟೇಟಸ್ನಲ್ಲಿಟ್ಟು ಸಂಭ್ರಮಿಸಿದರೆ ಸಾಕಾಗುವುದಿಲ್ಲ. ಅದು ಬರೀ ತೋರಿಕೆ ಆಗುತ್ತದೆ. ಪ್ರಾಣಿಗಳು, ಸರ್ಪಗಳು ಪ್ರಕೃತಿ ಸಮತೋಲನ ಕಾಯ್ದುಕೊಳ್ಳಲು ನೀಡುತ್ತಿರುವ ಕೊಡುಗೆಯನ್ನು ಅರಿಯುವ ಜತೆಗೆ ನಾವುಗಳು ಪ್ರಕೃತಿಗೆ ಇನ್ನೂ ಹತ್ತಿರವಾಗಿ, ಸಾಮರಸ್ಯದಿಂದ ಬದುಕಲು ಕಲಿಯಬೇಕು. ಆಗಲೇ ಬದುಕು ಕೂಡ ‘ಹಬ್ಬ’ ಎನಿಸಿಕೊಳ್ಳಲು ಸಾಧ್ಯ ಎಂಬುದನ್ನು ಮರೆಯಬಾರದು.
ಇತಿಹಾಸದ ಪುಟಗಳನ್ನು ತಿರುವಿದರೆ, ಮೊದಲು ಮಾನವ ಕಾಡಿನ ಮಡಿಲಿನಲ್ಲೇ ವಾಸಿಸುತ್ತಿದ್ದ ಎಂಬ ಸಂಗತಿ ಸ್ಪಷ್ಟಗೋಚರ. ಭಾರತ ಹೆಚ್ಚು ಕಾಡು ಮತ್ತು ಜೀವವೈವಿಧ್ಯ ಹೊಂದಿರುವ ದೇಶವಾಗಿದೆ. ಬಹುಶಃ ಆರಂಭಿಕ ನಾಗರಿಕತೆಯೂ ಕಾಡಿನಲ್ಲೇ ಶುರುವಾಗಿರಬೇಕು. ಕಾಡನ್ನು ಸಮತಟ್ಟು ಮಾಡಿ, ಉಳುವುದು, ಬಿತ್ತುವುದು ಮಾನವ ಕಲಿತಿದ್ದು ಇಲ್ಲೇ. ಆದರೆ, ಆನೆಗಳು, ಸರ್ಪಗಳು ಓಡಾಡುವ ಜಾಗದಲ್ಲಿ ಇಂಥ ಚಟುವಟಿಕೆ ನಡೆಸುತ್ತಿರಲಿಲ್ಲ. ಕೃಷಿ ಚಟುವಟಿಕೆ ಕೈಗೊಂಡ ಸ್ಥಳದಲ್ಲೂ, ‘ನಿಮ್ಮ ಜಾಗವನ್ನು ನಾವು ಆಹಾರಕ್ಕಾಗಿ ಆಕ್ರಮಿಸುತ್ತಿದ್ದೇವೆ. ನಿಮ್ಮ ವಾಸಸ್ಥಾನಕ್ಕೆ ತೊಂದರೆಯಾದರೆ, ಇರುವಿಕೆಗೆ ಅಡ್ಡಿ ಒದಗಿಬಂದರೆ ಕ್ಷಮೆ ಇರಲಿ’ ಎಂಬ ಭಾವವೂ ಪ್ರಧಾನವಾಗಿ ನೆಲೆಸಿರುತ್ತಿತ್ತು.
ಡಾ.ರಾಜಾರಾಂ ಅವರು ಬರೆದ ‘ವೇದಿಕ್ ಫಿಸಿಕ್ಸ್’ ಪುಸ್ತಕವನ್ನು ಇತ್ತೀಚೆಗೆ ಓದುತ್ತಿದ್ದೆ. ವೇದದಲ್ಲಿ ಉಪಯೋಗಿಸುವ ಮಂತ್ರ, ಶಬ್ದಗಳಿಗೆ ಮೂರ್ನಾಲ್ಕು ಬಗೆಯ ಅರ್ಥಗಳಿವೆ. ಒಂದು ನೇರವಾಗಿ ಕಣ್ಣಿಗೆ ಕಾಣುವ ಅರ್ಥವಾದರೆ, ಇನ್ನೊಂದು ವೈಜ್ಞಾನಿಕ ಅರ್ಥ, ಮತ್ತೊಂದು ವ್ಯಾವಹಾರಿಕ ಅರ್ಥ. ಹೀಗೆ ನಾಗರಹಾವಿಗೂ ಇನ್ನೊಂದು ಹೆಸರು -‘ಮೇಲ್ಮೈ ಸೆಳೆತ’ (Surface tension).
ವಿಜ್ಞಾನದಲ್ಲಿ Surface tensionಗೆ ಎಷ್ಟೊಂದು ಮಹತ್ವವಿದೆ ಎಂಬುದು ಗೊತ್ತು. ಭೂಮಿ ಈ ಆಕಾರದಲ್ಲಿರಲು, ಬ್ರಹ್ಮಾಂಡಕ್ಕೆ ಮೂಲಾಧಾರವೇ ಈ surface tension theory of emulsion ಕೂಡ ಭೂಮಿ ಅಂಡಾಕಾರದಲ್ಲಿದೆ ಎಂದು ಹೇಳಿದ್ದು, ಆಧುನಿಕ ವಿಜ್ಞಾನಿಗಳೂ ಒಪ್ಪಿಕೊಂಡಿದ್ದಾರೆ. ಈ ಅಂಡಾಕಾರಕ್ಕೆ ಮೇಲು ಪದರವಾಗಿ ಸುತ್ತಿಕೊಂಡಿರುವುದೇ ನಾಗಸರ್ಪ. ಬ್ರಹ್ಮಾಂಡವನ್ನು ಬ್ರಹ್ಮಾಂಡವಾಗಿಯೇ ಉಳಿಸಿರುವುದು ನಾಗಸರ್ಪ ಎಂಬುದನ್ನು ಪುರಾಣಗಳು ಕೂಡ ಹೇಳಿವೆ. ಸಾಕ್ಷಾತ್ ಶಿವ ಸರ್ಪವನ್ನು ಕೊರಳಿನಲ್ಲೇ ಧರಿಸಿದ್ದರೆ, ವಿಷ್ಣು ಶೇಷಶಯನನಾಗಿದ್ದಾನೆ. ಇದನ್ನೆಲ್ಲ ನೋಡಿದಾಗ Surface tension ಥೇರಿ ನಿಜವೆನಿಸುತ್ತದೆ. ನಮ್ಮ ಹಿರಿಯರು ಇದನ್ನೇ ಬೇರೆ ಬೇರೆ ಸ್ವರೂಪ, ಆಯಾಮದಲ್ಲಿ ತಿಳಿಸಿ ಕೊಡುವ ಪ್ರಯತ್ನವನ್ನು ನಮಗೆ ಮಾಡಿದ್ದಾರೆ. ಈ ಮೂಲಆಶಯವನ್ನೇ ಬದಿಗಿಟ್ಟು, ಬರೀ ತೋರಿಕೆಗೆ ಹಬ್ಬ ಆಚರಿಸಿದರೆ ಏನು ಅರ್ಥ ಇದೆ ಹೇಳಿ?
ಮುಂಬರುವ ದಿನಗಳಲ್ಲೂ ಅನೇಕ ದೊಡ್ಡ ಹಬ್ಬಗಳಿವೆ. ಮುಖ್ಯವಾಗಿ ಗಣೇಶ ಚತುರ್ಥಿ. ಕರ್ನಾಟಕ ಸೇರಿ ದೇಶದಾದ್ಯಂತ ಇದರ ಆಚರಣೆ ಇದೆ. ಸಂಕಷ್ಟ ಕಳೆಯುವ ಗಣೇಶ ಗರಿಕೆಪ್ರಿಯ ಏಕೆ? ಇದರ ಹಿಂದೆಯೂ ಸ್ವಾರಸ್ಯಕರವಾದ ವಿವರಗಳಿವೆ. ಶಿವನಿಗೆ ಬಿಲ್ವಪತ್ರೆ, ಶ್ರೀಕೃಷ್ಣನಿಗೆ ತುಳಸಿ, ಆದರೆ ಗಣೇಶನಿಗೇಕೆ ಯಃಕಶ್ಚಿವಾದ ಗರಿಕೆ ಹುಲ್ಲು? ಮೊದಲನೆಯದಾಗಿ, ಆನೆಗೆ ಹುಲ್ಲು ಪ್ರೀತಿ. ಎರಡನೆಯದಾಗಿ, ಗರಿಕೆ ಹುಲ್ಲು ನೆಲವನ್ನು ಕಚ್ಚಿ ಹಿಡಿದು ಮಣ್ಣಿನ ರಕ್ಷಣೆ ಮಾಡುತ್ತದೆ. ಎಲ್ಲಿ ಚೆಲ್ಲಿದರೂ ತುಸು ತೇವಾಂಶ ಇದ್ದಲ್ಲಿ ಬೆಳೆಯುತ್ತ, ಟಿಸಿಲುಗಳ ಮೂಲಕ ಬೇರುಗಳನ್ನು ಇಳಿಸುತ್ತ, ಸುತ್ತೆಲ್ಲ ವಿಸ್ತರಿಸುತ್ತದೆ. ಅಸಂಖ್ಯ ಕಿರುಕೀಟಗಳಿಗೆ, ಪ್ರಾಣಿಗಳಿಗೆ ಆಹಾರ, ಆಸರೆ ಒದಗಿಸುತ್ತದೆ. ಗಾಳಿಯಲ್ಲಿ ಹಾರಿ ಬಂದ ಬೀಜಗಳನ್ನು ಸೆರೆ ಹಿಡಿದು, ತೇವವನ್ನು ನೀಡಿ, ಹೊಸ ಸಸ್ಯ ಚಿಗುರುವಂತೆ ಮಾಡುತ್ತದೆ. ಅದನ್ನು ಗಣೇನಿಗೆಂದು ಕೀಳುವಾಗ ನಮಗೆ ಅದರ ಮಹತ್ವ ತನ್ನಿಂದ ತಾನೇ ಅರಿವಿಗೆ ಬರುತ್ತದೆ. ಗಣೇಶನೊಂದಿಗೆ ಅದನ್ನು ನೀರಿಗೆ ವಿಸರ್ಜಿಸಿದಾಗ ಜಲಚರಗಳಿಗೂ, ಪೋಷಕಾಂಶ ಸಿಗುತ್ತದೆ.
ಹೀಗೆ ಸಣ್ಣ ಹುಲ್ಲುಕಡ್ಡಿಯಿಂದ ಹಿಡಿದು, ಬಹುತೇಕ ಪ್ರಾಣಿ-ಪಕ್ಷಿಗಳು ಪ್ರಕೃತಿಯ ಸಮತೋಲನವನ್ನು ಕಾಯ್ದುಕೊಳ್ಳಲು ನೆರವಾಗುತ್ತಿವೆ. ಹಬ್ಬಗಳ ರೂಪದಲ್ಲಿ ಅವುಗಳಿಗೆ ಧನ್ಯವಾದ ಹೇಳುವುದಷ್ಟೇ ಅಲ್ಲ, ಅವುಗಳ ರಕ್ಷಣೆಯ ಹೊಣೆಯನ್ನೂ ನಿರ್ವಹಿಸುತ್ತೇವೆ ಎಂಬ ಸಂಕಲ್ಪ ಜಾಗೃತವಾಗಬೇಕು, ಜೀವವೈವಿಧ್ಯದ ರಕ್ಷಣೆಯ ಮೂಲಕ ಇಡೀ ಪರಿಸರವನ್ನು ಉಳಿಸಲು ನಮ್ಮದೊಂದು ಅಳಿಲುಸೇವೆ ಇರಲಿ.