More

    ಹಲೋ ಒಂದ್ನಿಮಿಷ|ಬೀಜಗಳ ಮಹತ್ವ, ಶಕ್ತಿಯನ್ನು ಮನಗಾಣೋಣ

    ಬೀಜಗಳ ಸದ್ಭಳಕೆ ಆಗಬೇಕಿದೆ. ಪ್ರಾಣಿ-ಪಕ್ಷಿಗಳು ಬೀಜಪ್ರಸಾರ ಮಾಡುತ್ತ, ಗಿಡ ಹಬ್ಬಲು ಕಾರಣವಾಗುತ್ತಿವೆ. ಮನುಷ್ಯ ತನ್ನಿಂದ ಸಾಧ್ಯವಾದ ಮಟ್ಟದಲ್ಲಾದರೂ ಬೀಜಗಳನ್ನು ಸದುಪಯೋಗ ಮಾಡಬೇಕು, ಆ ಮೂಲಕ ಹಸಿರು ಹೆಚ್ಚಿಸಲು ನೆರವಾಗಬೇಕು. ಈ ಆಶಯದಲ್ಲಿ ಮಕ್ಕಳು-ದೊಡ್ಡವರು ಎಲ್ಲರೂ ತೊಡಗಿಸಿಕೊಂಡರೆ ಅದ್ಭುತ ಫಲಿತಾಂಶ.

    ಪ್ರತಿ ವರ್ಷ ಅದಮ್ಯ ಚೇತನದಿಂದ ಬೆಂಗಳೂರಿನ ನ್ಯಾಶನಲ್ ಹೈಸ್ಕೂಲ್ ಮೈದಾನದಲ್ಲಿ ‘ಸೇವಾ ಉತ್ಸವ’ ಆಯೋಜಿಸುತ್ತೇವೆ. ಈ ಉತ್ಸವ ಹಲವು ವೈಶಿಷ್ಟ್ಯಗಳನ್ನು ಒಳಗೊಂಡಿರುತ್ತದೆ. ಮುಖ್ಯವಾಗಿ, ಸಾಮೂಹಿಕವಾಗಿ ವಂದೇಮಾತರಂ ಗಾಯನದಿಂದ ರಾಷ್ಟ್ರಭಕ್ತಿಯ ಸಿಂಚನ. ಜತೆಗೆ, ವಿವಿಧ ಸ್ಪರ್ಧೆಗಳನ್ನು ನಡೆಸುವ ಜತೆಗೆ ಸಂಕಲ್ಪ ಸ್ವೀಕಾರ ವಿಶೇಷವಾದದ್ದು. ಸಾರ್ವಜನಿಕರಿಗೆ, ಮಕ್ಕಳಿಗೆ ವಿವಿಧ ವಿಷಯಗಳ ಬಗ್ಗೆ ಹೊಸ ಹೊಸ ಬಗೆಯ ಸ್ಪರ್ಧೆಯನ್ನು ಆಯೋಜಿಸುತ್ತೇವೆ. ಹಲವು ಪ್ರಮುಖ ವಿಷಯಗಳ ಬಗ್ಗೆ ಅರಿವು ಮೂಡಬೇಕು ಎಂಬುದೇ ಈ ಸ್ಪರ್ಧೆಗಳ ಆಯೋಜನೆ ಹಿಂದಿನ ಉದ್ದೇಶ. ಈ ಬಾರಿಯೂ ಹೀಗೆ ಹೊಸದಾಗಿ ಸ್ಪರ್ಧೆ ನಡೆಸಲು ನಿರ್ಧರಿಸಿದೆವು; ಅದುವೇ ಬೀಜ ಗುರುತಿಸುವ ಸ್ಪರ್ಧೆ!

    ಹಲೋ ಒಂದ್ನಿಮಿಷ|ಬೀಜಗಳ ಮಹತ್ವ, ಶಕ್ತಿಯನ್ನು ಮನಗಾಣೋಣಇದೇನಪ್ಪ ಬೀಜ ಗುರುತಿಸುವ ಸ್ಪರ್ಧೆ ಅಂತೀರಾ! ಮಕ್ಕಳಿಗೆ ಹತ್ತುಹಲವು ಕಾರ್ಟೂನುಗಳು ಗೊತ್ತು, ಅವುಗಳಲ್ಲಿನ ಪಾತ್ರಗಳ ಬಗ್ಗೆಯೂ ಗೊತ್ತು. ದೊಡ್ಡವರಿಗೆ ರಾಜಕಾರಣ ಸೇರಿ ಬೇಕು-ಬೇಡದ ಹತ್ತಾರು ವಿಷಯಗಳು ಗೊತ್ತುಂಟು. ಆದರೆ, ನಮ್ಮ ಸುತ್ತಮುತ್ತಲೇ ಬೃಹತ್ತಾಗಿ ಬೆಳೆದು ನಿಂತಿರುವ ಮರ, ಈಗ ತಾನೇ ಬೆಳೆಯುತ್ತಿರುವ ಗಿಡಗಳ ಬಗ್ಗೆ ಯಾರಿಗೆ ಮಾಹಿತಿ ಇದೆ. ಪ್ರಯಾಣ, ಮತ್ತಿತರ ಸಂದರ್ಭದಲ್ಲಿ ಸುಮ್ಮನೇ ಮರಗಿಡಗಳನ್ನು ವೀಕ್ಷಿಸುತ್ತೇವೆಯೇ ಹೊರತು, ಅವುಗಳ ಹೆಸರೇನು, ಅವುಗಳ ಬೀಜ ಹೇಗಿರುತ್ತದೆ ಎಂಬ ಮಾಹಿತಿ ಇರುವುದಿಲ್ಲ. ರಸ್ತೆಬದಿಯಲ್ಲಿ ಹಲವು ವರ್ಷಗಳಿಂದ ನಿಂತಿರುವ, ನಾವು ನಿತ್ಯವೂ ನೋಡುವ ಮರಗಳ ಬಗ್ಗೆಯೂ ತಿಳಿದಿಲ್ಲ. ಅದರಲ್ಲೂ, ಬರೀ ಬೀಜಗಳನ್ನು ತೋರಿಸಿದರಂತೂ ಬಹುತೇಕರಿಂದ ‘ಗೊತ್ತಿಲ್ಲ’ ಎಂಬ ಉತ್ತರವೇ ಬರುತ್ತದೆ. ಅದಕ್ಕೆ ಕಾರಣ ಕೇಳಿದಾಗ ‘ನಾವು ಬಾಟನಿ (ಸಸ್ಯಶಾಸ್ತ್ರ)ಯ ವಿದ್ಯಾರ್ಥಿಗಳಲ್ಲ’ ಎಂಬ ಉತ್ತರ ಸಹಜವಾಗಿಯೇ ಬಂದುಬಿಡುತ್ತದೆ. ಹಾಗಾಗಿಯೇ, ಕುತೂಹಲದಿಂದಲೇ ಈ ಬೀಜ ಗುರುತಿಸುವ ಸ್ಪರ್ಧೆ ಹಮ್ಮಿಕೊಂಡೆವು.

    ಈ ನಿಟ್ಟಿನಲ್ಲಿ ಬೀಜ ಸಂಗ್ರಹಣೆ ಆರಂಭವಾಯಿತು. ಅತ್ತಿ, ಬಿದಿರು, ಹೊಳೆ ದಾಸವಾಳ, ತುಳಸಿ, ಹೊಂಗೆ, ಶಂಖಪುಷ್ಪಿ ಹೀಗೆ ಹಲವು. ಈ ನಿಟ್ಟಿನಲ್ಲಿ ಸ್ನೇಹಿತರೊಬ್ಬರಿಗೆ ಫೋನ್ ಮಾಡಿ ‘500 ಗ್ರಾಂ ತುಳಸಿ ಬೀಜ ಬೇಕು, ಅದನ್ನು ನೂರಾರು ಮಕ್ಕಳಿಗೆ ಪರಿಚಯಿಸಲಿದ್ದೇವೆ, ಆ ಬೀಜದಿಂದ ಸಸಿಯೂ ಮಾಡಲಿದ್ದೇವೆ’ ಅಂತ ಹೇಳಿದೆ. ಅವರು ನಗುತ್ತಲೇ ಪ್ರತಿಕ್ರಿಯಿಸಿ-‘ಸಾವಿರಾರು ಮಕ್ಕಳು ಬಂದರೂ ಬರೀ ಐವತ್ತು ಗ್ರಾಂ ಬೀಜ ಸಾಕು. ಐವತ್ತು ಗ್ರಾಂ ಬೀಜದಲ್ಲಿ ನಿಖರವಾಗಿ ಎಷ್ಟು ಸಸಿ ಹಾಕಬಹುದು ಅಂತ ನಾನು ಈವರೆಗೆ ಲೆಕ್ಕ ಹಾಕಿಲ್ಲ. ಆದರೆ, 50 ಗ್ರಾಂ ತುಳಸಿಬೀಜದಿಂದ ಕನಿಷ್ಠ 5-6 ಸಾವಿರ ಸಸಿಗಳಂತೂ ಹಾಕಬಹುದು’ ಎಂದರು. ನಾನು ಬೀಜಗಳ ಶಕ್ತಿಗೆ ಬೆರಗಾದೆ.

    ಕಡೆಗೂ, ಬೀಜಸಂಗ್ರಹಣೆ ಪ್ರಕ್ರಿಯೆ ಪೂರ್ಣಗೊಂಡಿತು. ಬೇರೆ-ಬೇರೆ ಕಡೆಯಿಂದ ಬೀಜಗಳನ್ನು ತರಿಸಿಕೊಂಡದ್ದಾಯಿತು. ಮೇಲೆ ಹೆಸರಿಸಿದ ಬೀಜಗಳು ಸೇರಿ ಮತ್ತೆ ಹಲವು ಹೂವು, ಹಣ್ಣಿನ ಬೀಜಗಳನ್ನು ಒಂದು ಟೇಬಲ್ಲಿನ ಮೇಲೆ ಜೋಡಿಸಿಟ್ಟೆವು. ನಮ್ಮ ಸಂಸ್ಥೆಯ ಕೆಲ ಕಾರ್ಯಕರ್ತರೇ, ‘ನೂರಾರು ಮಕ್ಕಳು, ಸಾರ್ವಜನಿಕರು ಬರುತ್ತಾರೆ ಇಷ್ಟೇ ಬೀಜ ಸಾಕಾಗುತ್ತಾ?’ ಎಂದು ಸಂಶಯದ ಧಾಟಿಯಲ್ಲಿ ಪ್ರಶ್ನಿಸಿದರು. ಆಗ ಬೀಜಗಳ ಬಗ್ಗೆ ಮಾಹಿತಿ ಇರುವ ಒಬ್ಬರು ಪ್ರತಿಕ್ರಿಯಿಸಿ, ‘ಇಷ್ಟು ಬೀಜದಿಂದ ಇಡೀ ಬೆಂಗಳೂರಿನಲ್ಲಿ ಹಸಿರು ಹರಡಬಹುದು. ಅದಮ್ಯ ಚೇತನದ ಗುರಿಯಾಗಿರುವ 1 ಕೋಟಿ ಮರಗಳನ್ನು ತಲುಪಬಹುದು’ ಎಂದು ಹೇಳಿದಾಗ ಮತ್ತೊಮ್ಮೆ ಅಚ್ಚರಿ. ಅಂದರೆ, ಒಂದು ಸಣ್ಣ ಟೇಬಲ್ಲಿನ ಮೇಲಿರುವ ಬೀಜಗಳಲ್ಲಿ ಇಡೀ ಬೆಂಗಳೂರನ್ನು ಹಸಿರು ಮಾಡುವ ಶಕ್ತಿ! ಒಂದು ಹಿಡಿ ಅತ್ತಿ (ಔದುಂಬರ) ಬೀಜದಿಂದ ಸಾವಿರಾರು ಅತ್ತಿ ಮರಗಳಾಗಬಹುದು. ಅದೇ ಒಂದು ಔದುಂಬರ ವೃಕ್ಷದಿಂದ ನನ್ನ ಅಂದಾಜಿನಂತೆ ಲಕ್ಷಾಂತರ ಬೀಜಗಳು ದೊರೆಯುತ್ತವೆ. ಹಾಗೇ ಯೋಚನೆ ಮಾಡಿ, ಪ್ರತೀ ಬೀಜ ಮತ್ತೆ ಲಕ್ಷ-ಲಕ್ಷ ಮರಗಳನ್ನು ಹುಟ್ಟುಹಾಕುವ ಶಕ್ತಿ ಹೊಂದಿರುತ್ತದೆ. ಮತ್ತೆ, ಪ್ರತೀ ಮರ ಲಕ್ಷ-ಲಕ್ಷ ಬೀಜಗಳನ್ನು ಹೊರಹಾಕುವ ಶಕ್ತಿ. ಇದೆಲ್ಲ ಶಕ್ತಿ ಎಲ್ಲಿಂದ ಬಂತು ಅಂತ ನೋಡಿದರೆ ಅದೆಲ್ಲವೂ ಪ್ರಕೃತಿಯ ಮಾಯೆ, ವಿಸ್ಮಯ!

    ಪ್ರತೀ ಬೀಜಕ್ಕೆ ಗಿಡ ಬೆಳೆಸುವ ಶಕ್ತಿಯಂತೂ ಇದ್ದೇ ಇದೆ. ಅಲ್ಲದೆ, ಬೀಜ ತಾನೇ ಪ್ರಸರಣವಾಗುವಂಥ ಸಾಮರ್ಥ್ಯವನ್ನೂ ಹೊಂದಿದೆ. ಎಷ್ಟೋ ಬೀಜಗಳು ಪುಟಿದು, ಹಾರಿ ಪ್ರಸರಣ ಮಾಡಿಕೊಳ್ಳುತ್ತವೆ. ಕೆಲವೆಡೆ ಮರವೇ ಆಶ್ರಯ ಒದಗಿಸಿ, ಮತ್ತೊಂದು ಬೀಜ ಅರಳಲು ಅನುವು ಮಾಡಿಕೊಡುತ್ತದೆ. ಕಾಡಿನ ಕೆಲ ಮರಗಳ ಬೀಜಗಳಿಗೆ ಸುಮಾರು 50 ಕಿಲೋಮೀಟರ್​ವರೆಗೆ ಹಾರುವ ಸಾಮರ್ಥ್ಯ ಇದೆಯಂತೆ. ಪುಟ್ಟ ಸಾಸಿವೆಯೇ ಎಷ್ಟು ವೇಗವಾಗಿ ಹಾರುತ್ತೆ. ನಮ್ಮ ವಿಜ್ಞಾನಿಗಳು ಲೆಕ್ಕ ಹಾಕಿರುವ ಪ್ರಕಾರ, ಹಲವು ಬೀಜಗಳು ಗಂಟೆಗೆ 65-70 ಕಿಲೋಮೀಟರ್ ವೇಗದಲ್ಲಿ ಪುಟಿಯುತ್ತವೆ. ಪಕ್ಷಿಗಳು, ಪ್ರಾಣಿಗಳು ಬೀಜ ತಿಂದು ಬಿಡುವುದರಿಂದಲೂ ಬೀಜ ಪ್ರಸರಣವಾಗುತ್ತದೆ. ಈ ಎಲ್ಲ ಪ್ರಕ್ರಿಯೆಗಳು ವಿಜ್ಞಾನದ ಸೀಮೆ, ಕಲ್ಪನೆಯನ್ನು ಮೀರಿರುವಂಥದ್ದು. ಕಾಡಿನಲ್ಲಾದರೆ, ಬೀಜ ಹಾರಿ ಹೋದರೂ ಅದೇ ಕಾಡಿನ ಮತ್ತೊಂದು ಭಾಗಕ್ಕೆ ಹೋಗಿ ಬೀಳುತ್ತದೆ. ಮಣ್ಣು, ನೀರಿನ ಆಶ್ರಯ ಸಿಕ್ಕಿ ಮತ್ತೆ ಅರಳುತ್ತದೆ. ಆದರೆ, ಬೇಸರದ ಸಂಗತಿಯೆಂದರೆ ಹೆದ್ದಾರಿ ಸೇರಿ ನಗರಪ್ರದೇಶಗಳಲ್ಲಿ ಈ ಬೀಜಗಳು ವಾಹನಗಳ ಅಡಿಗೆ ಸಿಕ್ಕು ಅಕಾಲಿಕವಾಗಿ ಸಾಯುತ್ತವೆ.

    ಸುಮ್ನೆ ಯೋಚಿಸೋಣ. ನಗರಗಳಿಗೆ ಪ್ರಸಕ್ತ ಸಾವಿರಾರು ಕೆಜಿ ಅಂದರೆ ಪ್ರತಿನಿತ್ಯ ಲಕ್ಷಾಂತರ ಹಣ್ಣುಗಳು ಬರುತ್ತವೆ. ನಾವು ಈ ಹಣ್ಣುಗಳನ್ನು ತಿಂದು ಬೀಜಗಳನ್ನು ನೇರ ಕಸದಬುಟ್ಟಿಗೆ ಹಾಕುತ್ತೇವೆ. ಯಾವ ಬೀಜಕ್ಕೆ ಗಿಡವಾಗಿ ಬೆಳೆದು, ಮತ್ತೆ ಸಾವಿರಾರು ಬೀಜಗಳನ್ನು ಉತ್ಪಾದಿಸುವ ಶಕ್ತಿ ಇದೆಯೋ ಅಂಥ ಬೀಜಗಳನ್ನು ನಾವು ಹಿಂದೆ-ಮುಂದೆ ಯೋಚಿಸದೆ ಎಸೆದು ಬಿಡುತ್ತೇವೆ. ಇದು ಬಹಳ ಖೇದದ ಸಂಗತಿ. ನಗರಗಳಲ್ಲಿ ಬೀಜಪ್ರಸರಣದ ಸಾಧ್ಯತೆ ತುಂಬ ಕ್ಷೀಣ. ರ್ಪಾನ ಮರಗಳ ಬೀಜ ಹಾರಿಬಂದರೂ ಅದು ಬೀಳುವುದು ಮತ್ತೊಂದು ಕಾಂಕ್ರಿಟ್ ರಸ್ತೆಯಲ್ಲೇ. ಬೀಜಗಳನ್ನು ತೆಗೆದುಕೊಂಡು ಹೋಗುವ ಪ್ರಾಣಿಗಳಂತೂ ಇಲ್ಲ, ಪಕ್ಷಿಗಳ ಸಂಖ್ಯೆಯೂ ಕಡಿಮೆಯಾಗಿದೆ. ಹಾಗಾಗಿ, ಬೀಜಪ್ರಸರಣದ ಪ್ರಾಕೃತಿಕ ಪದ್ಧತಿಗೆ ಪೆಟ್ಟು ಬಿದ್ದಿದೆ. ಆದರೆ, ಯಾರೂ ಈ ಸೂಕ್ಷ್ಮವನ್ನು ಗಮನಿಸುತ್ತಿಲ್ಲ. ಒಂದು ವೇಳೆ ಗಮನಿಸಿದರೂ ಅದನ್ನು ಗಂಭೀರವಾಗಿ ಪರಿಗಣಿಸಿಲ್ಲ.

    ನಾವೇನು ಮಾಡಬಹುದು?: ನೇರಳೆ, ಮಾವು, ಹಲಸು, ಮೊಸಂಬಿ ಸೇರಿ ಯಾವುದೇ ಹಣ್ಣುತಿಂದ ಮೇಲೂ ಅದರ ಬೀಜಗಳನ್ನು ಬಿಸಾಡದೆ ಸಸಿಗಳನ್ನು ಮಾಡಲು ಯತ್ನಿಸಬೇಕು. ರಸ್ತೆಮೇಲೆ ಬಿದ್ದ ಬೀಜಗಳನ್ನು ಸಂಗ್ರಹಿಸಿ ಸಸಿ ನೆಡೋಣ. ಪ್ರತಿ ವಾರ ‘ಹಸಿರು ಭಾನುವಾರ’ ಮೂಲಕ ಸಸಿಗಳನ್ನು ನೆಡುತ್ತಿರುವುದು ತಮಗೆಲ್ಲ ಗೊತ್ತೇ ಇದೆ. ಹೀಗೆ ತಯಾರಿಸಿದ ಸಸಿಗಳನ್ನು ಸಾಕಷ್ಟು ಜನ ನನಗೆ ತಂದು ತೋರಿಸಿದ್ದಾರೆ. ಸಣ್ಣ ಸಣ್ಣ ಸಸಿಗಳನ್ನೂ ಪೋಷಿಸಬಹುದು. ಸಸಿ ಕೆಲವೊಮ್ಮೆ ಸಾಯಬಹುದು. ಆದರೆ, ನಿರಾಶರಾಗುವುದು ಬೇಡ. ಸೂಕ್ತ ಜಾಗ ನೋಡಿ ಹಾಕಿದರೆ ಫಲಿತಾಂಶ ಸಿಕ್ಕೇ ಸಿಗುತ್ತದೆ.

    ಪ್ರಾಣಿ-ಪಕ್ಷಿಗಳು ಬೀಜಪ್ರಸರಣವನ್ನು ದೊಡ್ಡಪ್ರಮಾಣದಲ್ಲಿ ಮಾಡುತ್ತವೆ. ಅವುಗಳಷ್ಟು ಸಾಧ್ಯವಾಗದಿದ್ದರೂ, ನಾವುಗಳು ಸಾಧ್ಯವಾದ ಮಟ್ಟಿಗೆ ಈ ನಿಟ್ಟಿನಲ್ಲಿ ಪ್ರಯತ್ನಿಸೋಣ. ಹೆಚ್ಚೆಚ್ಚು ಸಸಿಗಳನ್ನು ಹಾಕೋಣ. ಮನೆಯಲ್ಲಿ ವ್ಯರ್ಥವಾಗಿ ಬಿದ್ದಿರುವ ಪ್ಲಾಸ್ಟಿಕ್ ಪೊಟ್ಟಣಗಳಲ್ಲೇ ಸ್ವಲ್ಪ ಮಣ್ಣು, ಗೊಬ್ಬರ ಹಾಕಿ ಈ ಬೀಜಗಳನ್ನು ನೆಡಬಹುದು. ಪಾಟ್​ಗಳಲ್ಲಿ ಹಾಕಬಹುದು. ಈ ಬೀಜ ಚಿಗುರಲು ಎಷ್ಟು ಸಮಯ ತೆಗೆದುಕೊಳ್ಳುತ್ತದೆ, ಎಲೆಗಳು ಹೇಗಿರುತ್ತವೆ, ಅವುಗಳ ಬೆಳವಣಿಗೆ ಹೇಗೆ… ಇದೆಲ್ಲವನ್ನು ಗಮನಿಸುತ್ತ ನಮ್ಮ ಕುತೂಹಲ ತಣಿಸಿಕೊಳ್ಳುವ ಜತೆಗೆ ಪ್ರಕೃತಿಗೆ ಮತ್ತಷ್ಟು ಸಮೀಪವಾಗಬಹುದು.

    ನಗರಗಳನ್ನು ಕಾಂಕ್ರಿಟ್ ಕಾಡುಗಳನ್ನಾಗಿಸಿದ್ದೇವೆ. ಇಲ್ಲೆಲ್ಲ ಮರ-ಗಿಡಗಳು ಬೆಳೆಯಲು ಆಸ್ಪದವೇ ಆಗುತ್ತಿಲ್ಲ. ಇರುವ ಮರಗಳ ಸಂಖ್ಯೆಯೂ ಕ್ಷೀಣಿಸುತ್ತಿದೆ. ಇಂಥ ಕಳವಳ, ಚಿಂತೆಗಳ ಮಧ್ಯೆಯೇ ಅತ್ಯಂತ ಸುಲಭವಾದ, ಪರಿಸರಸ್ನೇಹಿಯಾದ ಈ ಹೆಜ್ಜೆಯನ್ನು ಅನುಸರಿಸೋಣ. ಬೀಜಗಳನ್ನು ನಾಶ ಮಾಡದೆ, ಅವುಗಳ ಸದ್ಬಳಕೆಗೆ ಸಂಕಲ್ಪಿಸೋಣ. ಬೀಜದಿಂದ ಅರಳುವ ಪುಟ್ಟ ಸಸಿ ಮರವಾಗಿ ಮತ್ತೆ ಅಸಂಖ್ಯ ಬೀಜಗಳನ್ನು ನೀಡುತ್ತದೆ. ಪ್ರಕೃತಿಯ ಈ ದೊಡ್ಡಕಾರ್ಯದಲ್ಲಿ ನಮ್ಮ ಅಳಿಲುಸೇವೆ ಸಲ್ಲಿಸುವಂತಾದರೂ, ಎಷ್ಟೋ ಬದಲಾವಣೆ ತರಬಹುದು. ಹಾಗಾಗಿ, ಬೀಜಗಳನ್ನು ನಿರ್ಲಕ್ಷ್ಯದಿಂದ ಕಾಣದೆ ಅವುಗಳ ಶಕ್ತಿ ಅರಿಯೋಣ, ಹಸಿರು ಹರಡೋಣ. ಏನಂತೀರಿ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts