ಆಯುರ್ವೆದ ಅರುಹಿದ ದಿನಚರ್ಯು, ಋತುಚರ್ಯು, ಸ್ವಸ್ಥವೃತ್ತವೇ ಮೊದಲಾದ ಆಹಾರ-ವಿಹಾರ, ಆಚಾರ-ವಿಚಾರ, ನಡೆನುಡಿಗಳೂ ಸೇರಿದಂತೆ ಮಾನವ ಜೀವನ ಶೈಲಿಯ ವಿಶಿಷ್ಟವಾದ ವಿಚಾರಗಳು ವ್ಯಾಪಕವಾಗಿ ಪಸರಿಸುತ್ತಿದೆ. ಭಾರತದಲ್ಲೂ ಜನರು ಆಯುರ್ವೆದ ವೈದ್ಯರಲ್ಲಿ ಬಂದು ಪಂಚಕರ್ಮ ಚಿಕಿತ್ಸೆಯ ಬಗ್ಗೆ ಕುತೂಹಲದಿಂದ ಪ್ರಶ್ನಿಸುವುದಿದೆ. ದೇಹವನ್ನು ಶುದ್ಧಿಗೊಳಿಸುವ ಹಾಗೂ ದೃಢಗೊಳಿಸುವ ಐದು ವಿಧವಾದ ಪ್ರಧಾನ ಚಿಕಿತ್ಸೆಗಳನ್ನು ಒಳಗೊಂಡಿರುವುದರಿಂದ ಒಟ್ಟಾಗಿ ಪಂಚಕರ್ಮ ಚಿಕಿತ್ಸೆ ಎಂಬ ಹೆಸರಿನಿಂದ ಪ್ರಸಿದ್ಧವಾಗಿದೆ. ಆಯುರ್ವೆದದ ಈ ಚಿಕಿತ್ಸಾ ವಿಭಾಗದಲ್ಲಿ ಪ್ರಧಾನ ಕರ್ಮ, ಉಪಕರ್ಮ, ಕ್ರಿಯಾಕಲ್ಪಗಳೆಲ್ಲ ಸೇರಿ ಒಟ್ಟಾರೆಯಾಗಿ ಸುಮಾರು ನೂರು ವಿಧದ ಕ್ರಿಯಾಕರ್ಮಗಳಿವೆ! ಹಾಗಾಗಿ ಈ ಚಿಕಿತ್ಸಾ ವಿಭಾಗಕ್ಕೆ ಶತಕರ್ಮ ಎಂದೂ ಹೆಸರಿಸಬಹುದು! ದೀರ್ಘ ಕಾಲದಿಂದ ಬಳಲುತ್ತಿರುವ ಅಥವಾ ಪ್ರಬಲವಾದ ರೋಗಗಳು ಇರುವ ಸಂದರ್ಭದಲ್ಲಿ ಗುರುತರವಾದ ಕಾಯಿಲೆಗಳಲ್ಲಿ, ತೀವ್ರಗತಿಯ ರೋಗಗಳಿದ್ದಾಗ, ಶೀಘ್ರ ಪರಿಹಾರ ಅನಿವಾರ್ಯವಾದಾಗ ಇವುಗಳ ಬಳಕೆ ಒಂದೆಡೆಯಾದರೆ ಆರೋಗ್ಯವಂತರಿಗೆ ರೋಗ ಬರದಂತೆ ತಡೆಯಲು ಹಾಗೂ ಶರೀರದ ಸರ್ವಾಂಗೀಣ ಪುನರುಜ್ಜೀವನಕ್ಕೆ ಸೂಕ್ತವಾಗಿ ಉಪಯೋಗಿಸಲ್ಪಡುತ್ತದೆ.
ಆಯುರ್ವೆದದದಲ್ಲಿ ಎರಡು ವಿಧವಾದ ಚಿಕಿತ್ಸಾ ಸ್ವರೂಪಗಳಿವೆ. ಒಂದು ಸಂಶೋಧನ ಚಿಕಿತ್ಸೆ, ಇನ್ನೊಂದು ಸಂಶಮನ ಚಿಕಿತ್ಸೆ. ಸಂಶೋಧನ ಚಿಕಿತ್ಸೆಯೆಂದರೆ ಶರೀರವನ್ನು ಆಮೂಲಾಗ್ರವಾಗಿ ಶುದ್ಧಿಗೊಳಿಸುವ ಪ್ರಕ್ರಿಯೆ. ಇದರಲ್ಲಿ ಕ್ಷಾರಕರ್ಮ, ಅಗ್ನಿಕರ್ಮ, ಪ್ರಲೇಪ ಮೊದಲಾದ ಚಿಕಿತ್ಸೆಗಳು ಬಹಿ ಪರಿಮಾರ್ಜನ ಚಿಕಿತ್ಸಾ ವಿಧಾನಗಳು. ಎರಡನೆಯ ಪರಿಮಾರ್ಜನದಲ್ಲಿ ಮುಖ್ಯವಾಗಿ ಶರೀರದ ಸರ್ವಾಂಗಳನ್ನು ಶುದ್ಧಿ ಮಾಡುವ ಪಂಚಕರ್ಮ ಚಿಕಿತ್ಸೆಯಿದೆ. ಮೂರನೆಯದು ಶಸ್ತ್ರಕರ್ಮ ಚಿಕಿತ್ಸೆ. ಸಂಶೋಧನ ಚಿಕಿತ್ಸಾ ಪ್ರಕಾರದಲ್ಲಿ ಇವು ಮೂರೂ ಅಂತರ್ಗತವಾಗಿವೆ. ಸಂಶಮನ ಚಿಕಿತ್ಸೆಯಲ್ಲಿ ಪರಿಷೇಕ, ಅಭ್ಯಂಗ ಮೊದಲಾದ ಬಾಹ್ಯ ಚಿಕಿತ್ಸೆಗಳಿವೆ. ಆಭ್ಯಂತರ ಚಿಕಿತ್ಸೆಯಲ್ಲಿ ರಸಾಯನ, ವಾಜೀಕರ, ವಿಷಪ್ರಶಮನ, ದೋಷಪ್ರಶಮನ, ವ್ಯಾಧಿಪ್ರಶಮನ, ಸ್ವಸ್ಥವೃತ್ತಕರ ಔಷಧೋಪಚಾರಗಳಿವೆ. ಪೇಯ, ಲೇಹ್ಯ, ಭಕ್ಷ್ಯ ಮುಂತಾದ ಆಹಾರ ಕ್ರಮಗಳು, ಕಾಯಿಕ, ವಾಚಿಕ, ಮಾನಸಿಕ ನಡೆನುಡಿಗಳನ್ನು ಒಳಗೊಂಡ ವಿಹಾರ ಕ್ರಮಗಳು - ಹೀಗೆ ರೋಗ ನಿಮೂಲನೆಗೆ ಸಂಶಮನ ಚಿಕಿತ್ಸೆ ಬಹು ವಿಧವಾಗಿ ನಡೆಯುತ್ತದೆ.
ಸಂಶಮನ ಚಿಕಿತ್ಸೆಯಿಂದ ರೋಗ ಗುಣವಾದರೆ ಅದು ಶಾಶ್ವತ ಅಲ್ಲ, ಸಂಶೋಧನ ಚಿಕಿತ್ಸೆಯಿಂದ ಗುಣವಾದರೆ ಮಾತ್ರ ಶಾಶ್ವತ ಎಂಬ ಗ್ರಹಿಕೆ ಅನೇಕರಲ್ಲಿ ಇರುತ್ತದೆ. ನಿಜಕ್ಕೂ ಚಿಕಿತ್ಸಾ ಫಲಿತಾಂಶ ಈ ರೀತಿಯಾಗಿ ಇರುವುದಲ್ಲ. ರಸ್ತೆಯ ಮಧ್ಯದಲ್ಲಿ ಕಲ್ಲು ಬಿದ್ದಿದ್ದಾಗ ಅದನ್ನು ಬರಿಗೈಗಳಿಂದ ಪಕ್ಕಕ್ಕೆ ಸರಿಸುತ್ತೇವೆ. ಅಂತೆಯೇ ಸಂಶಮನ ಚಿಕಿತ್ಸೆ! ಸುಲಭದಲ್ಲಿ ಔಷಧ ಸೇವನೆಯಿಂದಲೇ ರೋಗವನ್ನು ಗುಣಪಡಿಸಿಕೊಳ್ಳಬಹುದಾದ ಚಿಕಿತ್ಸೆ. ರೋಗದ ಮೂಲಕ್ಕೇ ಚಿಕಿತ್ಸೆ ನೀಡಿದರೆ ಇದರ ಪರಿಣಾಮವೂ ಶಾಶ್ವತವೇ. ಕೆಲವು ವರ್ಷಗಳಿಂದ ಬಾಧಿಸಿದ ತಲೆನೋವಿಗೆ ಮಾತ್ರೆ ಕಷಾಯಗಳ ಶಮನ ಔಷಧ ನೀಡಿ ಗುಣಪಡಿಸಿ ಜೀವನದಲ್ಲಿ ಮತ್ತೆಂದೂ ತಲೆನೋವೇ ಬಾರದಿದ್ದರೆ ಅಲ್ಲಿ ನೀಡಲಾಗಿರುವುದು ಪ್ರಶಸ್ತ ಚಿಕಿತ್ಸೆ ಎನಿಸಿಕೊಳ್ಳುತ್ತದೆ. ಅದೇ ರಸ್ತೆಯಲ್ಲಿ ದೊಡ್ಡದಾದ ಬಂಡೆಕಲ್ಲು ಬಿದ್ದಿದ್ದಾಗ ನಾಲ್ಕಾರು ಜನರು ಕೈಜೋಡಿಸಿದರೂ ಬಂಡೆ ಕೊಂಚವೂ ಅಲುಗಾಡುವುದಿಲ್ಲ. ಆಗ ಬಂಡೆ ಸರಿಸಲು ಜೆಸಿಬಿಯಂತಹ ದೊಡ್ಡ ಯಂತ್ರಗಳು ಬೇಕಾಗುತ್ತವೆ. ಅಂತೆಯೇ ಸಂಶೋಧನ ಚಿಕಿತ್ಸೆ! ಪಂಚಕರ್ಮ ಚಿಕಿತ್ಸೆಗಳು, ಶಸ್ತ್ರಕರ್ಮಗಳು, ಕ್ಷಾರಕರ್ಮ, ಅಗ್ನಿಕರ್ಮ ಮುಂತಾದ ಚಿಕಿತ್ಸಾ ವಿಶೇಷಗಳು ವ್ಯಾಧಿಯ ಸ್ಥಿತಿ, ರೋಗಿಯ ಬಲ ಎರಡನ್ನೂ ಪರಿಗಣನೆಗೆ ತೆಗೆದುಕೊಂಡು ವೈದ್ಯರೇ ನಿರ್ಧರಿಸಬೇಕಾದವುಗಳು. ಸಂಶೋಧನ ಚಿಕಿತ್ಸೆಗೆ ಹೆಚ್ಚಿನ ಗಮನ, ಆರೈಕೆ, ಖರ್ಚುವೆಚ್ಚ ಹಾಗೂ ಸಮಯವನ್ನು ಮೀಸಲಿಡಬೇಕಾಗುತ್ತದೆ ಎಂಬುದಿಲ್ಲಿ ಗಣನೀಯ ಅಂಶ. ಬರಿಯ ಔಷಧೋಪಚಾರಗಳು ಸಾಕಾಗುತ್ತಿಲ್ಲವೆಂದು ವೈದ್ಯರಿಗೆ ಅನಿಸಿ ಪ್ರಯೋಗಿಸಿದರೆ ಸಂಶೋಧನ ಚಿಕಿತ್ಸೆಯು ನರಳುತ್ತಿರುವ ರೋಗಿಗಳ ಪಾಲಿಗದು ದಿವ್ಯವರ!