ಟಾಟಾ ಕಂಪನಿ ಯಾವಾಗಲೂ ನೈತಿಕ ಮೌಲ್ಯಗಳನ್ನು ಪಾಲಿಸಿತು. ಅಡ್ಡದಾರಿ ಹಿಡಿಯಲಿಲ್ಲ. ಕಪ್ಪುಹಣದಿಂದ ದೂರ ಉಳಿಯಿತು. ಲಂಚ ನೀಡಲು ನಿರಾಕರಿಸಿತು. ಜನರಿಗೆ ಹೇಗೆ ಒಳ್ಳೆಯದು ಮಾಡಬೇಕೆಂಬ ಯೋಚನೆ ಟಾಟಾ ಕಂಪನಿಯ ಎಲ್ಲ ಮುಖ್ಯಸ್ಥರದ್ದು! ಜೆಮ್ಷೆಡ್ಜಿ ಟಾಟಾ, ಜೆಆರ್ಡಿ ಮತ್ತು ರತನ್ ಟಾಟಾ ಇವರೆಲ್ಲ ಜನತಾ ಕಲ್ಯಾಣಕ್ಕಾಗಿ ತಮ್ಮನ್ನು ತಾವು ಮೀಸಲಾಗಿಟ್ಟವರು.
ಭಾರತದ ಮೊದಲ ವಾಣಿಜ್ಯೋದ್ಯಮಿಗಳಲ್ಲಿ ಒಬ್ಬರು ಜೆಮ್ೆಡ್ಜಿ ಟಾಟಾ. ಭಾರತವನ್ನು ಕೈಗಾರಿಕಾ ದೇಶಗಳ ಪಟ್ಟಿಯಲ್ಲಿ ಸೇರಿಸಿದ ಮಹತ್ವಾಕಾಂಕ್ಷಿ ಉದ್ಯಮಿ. ಜೆಮ್ೆಡ್ಜಿ ಎಷ್ಟು ಪ್ರಭಾವ ಶಾಲಿ ಆಗಿದ್ದರೆಂದರೆ ಜವಾಹರಲಾಲ್ ನೆಹರು ಅವರನ್ನು ‘ಏಕವ್ಯಕ್ತಿ ಯೋಜನಾ ಆಯೋಗ’ ಎಂದು ಕರೆದಿದ್ದರು! ಜೆಮ್ಷೆಡ್ಜಿ ಕೇವಲ ಒಬ್ಬ ಉದ್ಯಮಿಯಲ್ಲ, ಮಹಾನ್ ದೇಶಭಕ್ತ, ಮಾನವತಾವಾದಿ, ಬಹುದೊಡ್ಡ ದಾನಿಯೂ ಕೂಡ.
1839 ಮಾರ್ಚ್ 3ರಂದು ಬರೋಡಾದ ನವ್ಸಾರಿಯಲ್ಲಿ ಜೆಮ್ಷೆಡ್ಜಿ ಜನಿಸಿದರು. ಈಗ ನವ್ಸಾರಿ ಗುಜರಾತ್ನಲ್ಲಿದೆ. ತಂದೆ ನುಸರ್ವಾಂಜಿ ಟಾಟಾ ತಾಯಿ ಜೀವನ್ ಭಾಯಿ ಟಾಟಾ. ನುಸರ್ವಾಂಜಿ ಟಾಟಾ ಮುಂಬೈನಲ್ಲಿ ರಫ್ತು ಉದ್ಯಮ ನಡೆಸುತ್ತಿದ್ದರು. ಪಾರ್ಸಿ ಸಮುದಾಯದ ಪುರೋಹಿತ ವರ್ಗದಿಂದ ಬಂದ ನುಸರ್ವಾಂಜಿ, ಕುಟುಂಬದ ಸಾಂಪ್ರದಾಯಿಕ ಉದ್ಯೋಗ ಬಿಟ್ಟು ವ್ಯವಹಾರ ಆರಂಭಿಸಿದ ಮೊದಲಿಗರು. ಓದಿನಲ್ಲಿ ಚುರುಕಾಗಿದ್ದ ಜೆಮ್ೆಡ್ಜಿ ಹದಿನಾಲ್ಕರ ಎಳೆಯ ಪ್ರಾಯದಲ್ಲೇ ವಿದ್ಯಾಭ್ಯಾಸದ ಜತೆಗೆ ತಂದೆಯ ವ್ಯವಹಾರದಲ್ಲೂ ಸಹಾಯ ಮಾಡುತ್ತಿದ್ದರು. ಹತ್ತೊಂಬತ್ತನೆ ಶತಮಾನದ ಮಧ್ಯಭಾಗದಲ್ಲಿ ಬಾಲ್ಯವಿವಾಹ ಸಾಮಾನ್ಯವಾದ ಕಾರಣ ಓದುವಾಗಲೇ ಹದಿನಾರರ ಜೆಮ್ೆಡ್ಜಿಯವರ ವಿವಾಹ ಹತ್ತರ ಬಾಲೆ ಹೀರಾಬಾಯಿಯೊಡನೆ ನಡೆಯಿತು.
1858ರಲ್ಲಿ ಪದವಿ ಮುಗಿಸಿದ ಜೆಮ್ಷೆಡ್ಜಿ ಮರುವರ್ಷ ಹಾಂಗಕಾಂಗ್ಗೆ ಹೋದರು. ಅಲ್ಲಿಗೆ ಹೋದ ಮೇಲೆ ಕಂಪನಿಯ ರಫ್ತು ಉದ್ಯಮಕ್ಕೆ ವಿಶ್ವಮಟ್ಟದಲ್ಲಿ ಬೆಳೆಯಲು ಒಳ್ಳೆಯ ಅವಕಾಶ ಇದೆಯೆಂದು ಅವರಿಗೆ ಗೊತ್ತಾಯಿತು. ನಾಲ್ಕು ವರ್ಷ ಅಲ್ಲಿದ್ದ ಟಾಟಾ ಹಾಂಗಕಾಂಗ್ ಮಾತ್ರವಲ್ಲ, ಜಪಾನ್ ಮತ್ತು ಚೀನಾಗಳಲ್ಲೂ ವ್ಯವಹಾರ ನಡೆಸುವಲ್ಲಿ ಯಶಸ್ವಿಯಾದರು. ನಂತರ ಯುರೋಪಿನಲ್ಲಿ ವ್ಯವಹಾರ ವಿಸ್ತರಿಸುವ ಹಂಬಲದಿಂದ ಇಂಗ್ಲೆಂಡಿಗೆ ತೆರಳಿ ಅಲ್ಲಿ ಇಂಡಿಯನ್ ಬ್ಯಾಂಕ್ ಸ್ಥಾಪಿಸಿದರು. ದುರದೃಷ್ಟವಶಾತ್ ಬ್ಯಾಂಕಿಂಗ್ ಉದ್ಯಮಕ್ಕೆ ಸಮಯ ಪಕ್ವವಾಗಿರಲಿಲ್ಲ. ಹಣಕಾಸಿನ ದೊಡ್ಡ ನಷ್ಟವನ್ನು ಕಂಪನಿ ಅನುಭವಿಸಬೇಕಾಯಿತು.
1868ರಲ್ಲಿ ಜೆಮ್ಷೆಡ್ಜಿ ತಮ್ಮದೇ ಆದ ಒಂದು ರಫ್ತು ಕಂಪನಿ ಪ್ರಾರಂಭಿಸಿದರು. ಬಂದ ಲಾಭದಿಂದ ಬಟ್ಟೆಯ ಮಿಲ್ಗಳನ್ನು ಪ್ರಾರಂಭಿಸಿದರು. ಅತ್ಯುತ್ತಮ ದರ್ಜೆಯ ಬಟ್ಟೆಗಳು ಜಗತ್ತಿನ ಹಲವೆಡೆ ರಫ್ತಾಗುತ್ತಿದ್ದವು. ಭಾರತ ಸ್ವಾವಲಂಬಿ ಆಗಬೇಕೆಂಬ ಉದ್ದೇಶದಿಂದ ಸ್ವದೇಶೀ ಕಚ್ಚಾವಸ್ತುಗಳನ್ನೇ ಜವಳಿ ಉದ್ಯಮದಲ್ಲಿ ಬಳಸುತ್ತಿದ್ದರು. ಜಗತ್ತಿನ ಎಲ್ಲ ಕಡೆಗಳಲ್ಲಿ ನೋಡಿದ ಒಳ್ಳೆಯ ಅಂಶಗಳನ್ನು ಇಲ್ಲಿ ಅಳವಡಿಸಲಾರಂಭಿಸಿದರು. ಕಂಪನಿಯ ಉದ್ಯೋಗಿಗಳಿಗೆ ಕಡಿಮೆ ಕೆಲಸದ ಅವಧಿ, ಗಾಳಿ ಬೆಳಕು ಆಡುವಂತಹ ಕೆಲಸದ ವಾತಾವರಣ, ಆರೋಗ್ಯ ಸರಿ ಇಲ್ಲದಿದ್ದರೆ ಧನಸಹಾಯ, ಮಕ್ಕಳ ತಾಯಂದಿರಿಗೆ ಸೌಲಭ್ಯಗಳು, ನಿವೃತ್ತಿ ವೇತನ, ಅಪಘಾತ ವಿಮೆ, ಉದ್ಯೋಗ ತರಬೇತಿಯಂತಹ ಕಂಡುಕೇಳರಿಯದ ಸೌಲಭ್ಯಗಳನ್ನು ಭಾರತದಲ್ಲಿ ಮೊದಲಬಾರಿ ಪರಿಚಯಿಸಿದರು. ಇವುಗಳಲ್ಲಿ ಕೆಲವು ಸೌಲಭ್ಯಗಳಂತೂ ಪಾಶ್ಚಿಮಾತ್ಯ ದೇಶಗಳಲ್ಲೇ ಇನ್ನೂ ಕಡ್ಡಾಯವಾಗಿರಲಿಲ್ಲ ಎಂದರೆ ಎಂಥ ದೂರದೃಷ್ಟಿಯುಳ್ಳ ಮನುಷ್ಯ ಈ ಜೆಮ್ೆಡ್ಜಿ ಎಂಬುದನ್ನು ಅರ್ಥಮಾಡಿಕೊಳ್ಳಬಹುದು. ಇವರ ಈ ಅದ್ಭುತ ವಿಚಾರವನ್ನೇ ಮುಂದೆ ಸರ್ಕಾರವೂ ಮುಂದುವರಿಸಿ ಇಂದಿಗೂ ಉದ್ಯೋಗಿಗಳ ಭದ್ರತೆಗೆ ಕಾರಣವಾಗಿದೆ.
ಇದನ್ನೂ ಓದಿ ಬರಲಿದೆ ಆನ್ಲೈನ್ ಶೂಟಿಂಗ್ ಲೀಗ್…
ಕೇವಲ ಬಟ್ಟೆ ಉದ್ಯಮದಿಂದ ಜೆಮ್ಷೆಡ್ಜಿ ತೃಪ್ತರಾಗಲಿಲ್ಲ. ಯುರೋಪಿನಲ್ಲಿ ಕೈಗಾರಿಕಾ ಕ್ರಾಂತಿಯ ಔನ್ನತ್ಯವನ್ನು ನೋಡಿ ಅದನ್ನು ಭಾರತದಲ್ಲಿ ಏಕೆ ಸಾಧ್ಯವಾಗಿಸಬಾರದು ಎಂದು ಯೋಚಿಸಿದರು. ಒಂದು ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ, ಒಂದು ವಿಶ್ವದರ್ಜೆಯ ಶೈಕ್ಷಣಿಕ ಸಂಸ್ಥೆ, ಒಂದು ವಿಶಿಷ್ಟ ಹೋಟೆಲ್ ಮತ್ತು ಒಂದು ಜಲವಿದ್ಯುತ್ ಸ್ಥಾವರ ಈ ನಾಲ್ಕನ್ನು ಸ್ಥಾಪಿಸುವುದು ಅವರ ಬಹುದೊಡ್ಡ ಕನಸುಗಳಾಗಿದ್ದವು. ಬಟ್ಟೆಯ ಉದ್ಯಮಕ್ಕೆ ಯಂತ್ರೋಪಕರಣಗಳ ಖರೀದಿಗೆ ಮ್ಯಾಂಚೆಸ್ಟರ್ಗೆ ಹೋದಾಗ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆಯನ್ನು ಸ್ಥಾಪಿಸುವ ಯೋಚನೆ ಅವರಿಗೆ ಬಂತು. ಜರ್ಮನಿಯ ಮಾದರಿಯಲ್ಲಿ 1901ರಲ್ಲಿ ಈಗಿನ ಜಾರ್ಖಂಡ್ನಲ್ಲಿ ಆ ಕಾರ್ಖಾನೆಯನ್ನು ಸ್ಥಾಪಿಸಿದರು. ಕಾರ್ವಿುಕರಿಗೆ ಎಲ್ಲ ಸೌಲಭ್ಯಗಳೂ ಒಂದೇ ಕಡೆ ಸಿಗಬೇಕೆಂಬ ಉದ್ದೇಶ ಅವರದಾಗಿತ್ತು. ಆ ಟೌನ್ಶಿಪ್ ಜೆಮ್ೆಡ್ಪುರ ಎಂದು ಕರೆಸಿಕೊಂಡಿತು. ಭಾರತದ ಮೊದಲ ಕೈಗಾರಿಕಾ ನಗರಗಳಲ್ಲಿ ಜೆಮ್ೆಡ್ಪುರ ಒಂದು. ಜೆಮ್ೆಡ್ಪುರದ ಆ ಬೃಹತ್ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ (ಅದೇ ಕಂಪನಿ ಈಗ ಟಾಟಾ ಸ್ಟೀಲ್ ಎಂದು ಕರೆಸಿಕೊಳ್ಳುತ್ತಿದೆ.) ಭಾರತವಷ್ಟೇ ಅಲ್ಲದೇ ಏಷ್ಯಾದ ಬಹುದೊಡ್ಡ ಉದ್ಯಮವಾಗಿತ್ತು. ಜೆಮ್ೆಡ್ಪುರದ ತುಂಬ ಹರಡಿಕೊಂಡಿರುವ ಸ್ಟೀಲ್ ಪ್ಲಾಂಟ್ನಿಂದ ಅದಕ್ಕೆ ಟಾಟಾನಗರ, ಸ್ಟೀಲ್ ಸಿಟಿ ಎಂದೇ ಕರೆಯಲಾಗುತ್ತದೆ.
ಪ್ರವಾಸೋದ್ಯಮಕ್ಕಿರುವ ವಿಪುಲ ಅವಕಾಶಗಳನ್ನು ನೋಡಿ ಹೋಟೆಲ್ಗಳ ಸರಣಿಯನ್ನೇ ಪ್ರಾರಂಭಿಸಿದರು. ಇಂದಿಗೂ ಅತ್ಯುತ್ತಮ ಹೋಟೆಲ್ಗಳಲ್ಲಿ ಒಂದಾಗಿರುವ ಮುಂಬೈನ ತಾಜ್ ಮಹಲ್ ಪ್ಯಾಲೆಸ್ ಹೋಟೆಲ್ ಕೂಡ ಅದರಲ್ಲಿ ಸೇರಿದೆ. ಜೆಮ್ಷೆಡ್ಜಿ ಅಪ್ಪಟ ಉದ್ಯಮಿ. ಆದರೆ ಈ ಹೋಟೆಲ್ ನಿರ್ವಣದಲ್ಲಿ ಅವರು ವ್ಯವಹಾರಿಕ ಲಾಭಕ್ಕಿಂತ ದೇಶದ ಗೌರವವನ್ನು ಪ್ರಮುಖವಾಗಿ ಪರಿಗಣಿಸಿದರು. ನಮ್ಮ ದೇಶದಲ್ಲಿ ಅದರಲ್ಲೂ ಮುಂಬೈನಲ್ಲಿ ಅತ್ಯುತ್ತಮವಾದ ಹೋಟೆಲ್ ಅವಶ್ಯಕತೆ ಇದೆ ಎನ್ನುವ ಅವರ ಬಯಕೆಯೇ ಆ ಹೋಟೆಲ್ ನಿರ್ವಣಕ್ಕೆ ಕಾರಣವಾಯಿತು. ಅಷ್ಟೇ ಅಲ್ಲ, 1896ರಲ್ಲಿ ಮುಂಬೈ (ಆಗಿನ ಬಾಂಬೇ) ಭೀಕರ ಪ್ಲೇಗ್ ಕಾಯಿಲೆಗೆ ತುತ್ತಾದಾಗ ಸರ್ಕಾರದ ಜತೆ ಮುಂಚೂಣಿಯಲ್ಲಿ ನಿಂತು ಅದನ್ನು ತೊಲಗಿಸಲು ಪ್ರಯತ್ನಿಸಿದರು. ಬಾಂಬೆ ಸಂಪೂರ್ಣವಾಗಿ ಪ್ಲೇಗ್ವುುಕ್ತವಾಗಲು ನಾಲ್ಕು ವರ್ಷಗಳೇ ಬೇಕಾದವು. ಬಾಂಬೆಯನ್ನು ‘ಪ್ಲೇಗ್ ಸೋಂಕಿತ ನಗರ’ ಎಂಬ ಕೆಟ್ಟ ಹೆಸರಿನಿಂದ ಮುಕ್ತವಾಗಿಸಿ ಮತ್ತೆ ವಿದೇಶೀಯರು ಬರುವಂತಾಗಲು ತನ್ಮೂಲಕ ಪ್ರವಾಸೋದ್ಯಮವನ್ನು ಮರುಸ್ಥಾಪಿಸಲು ಕೂಡ ಹೋಟೆಲ್ ತಾಜ್ ನಿರ್ವಣವನ್ನು ಜೆಮ್ೆಡ್ಜಿ ತ್ವರಿತಗೊಳಿಸಿದರು!
ಶಿಕ್ಷಣಕ್ಕೆ ಮಹತ್ವ ಕೊಟ್ಟಿದ್ದ ಅವರು ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆಗೆ ಬೆಲೆಬಾಳುವ ಜಾಗ ಮತ್ತು ಕಟ್ಟಡ ಎರಡನ್ನೂ ದಾನವಾಗಿ ನೀಡಿದರು. 1892ರಲ್ಲಿ ಭಾರತದಲ್ಲೇ ಪ್ರಪ್ರಥಮವಾಗಿ ಜೆ ಎನ್ ಟಾಟಾ ಎಂಡೋಮೆಂಟ್ ಮೂಲಕ ಉನ್ನತ ಶಿಕ್ಷಣದ ಆಕಾಂಕ್ಷಿಗಳಿಗೆ ವಿದ್ಯಾರ್ಥಿ ವೇತನ ನೀಡಿ ಸಹಾಯಹಸ್ತ ಚಾಚಿದರು. ಇಂದು ಟಾಟಾದ ಹಲವಾರು ಟ್ರಸ್ಟ್ಗಳು (ಸರ್ ದೊರಾಬ್ಜಿ ಟಾಟಾ ಟ್ರಸ್ಟ್, ಸರ್ ರತನ್ ಟಾಟಾ ಟ್ರಸ್ಟ್, ಲೇಡಿ ಟಾಟಾ ಮೆಮೋರಿಯಲ್ ಟ್ರಸ್ಟ್, ಲೇಡಿ ಮೆಹರ್ ಬಾಯಿ ಡಿ. ಟಾಟಾ ಎಜುಕೇಶನ್ ಟ್ರಸ್ಟ್, ಜೆ ಆರ್ ಡಿ ಮತ್ತು ಥೆಲ್ಮಾ ಜೆ ಟಾಟಾ ಟ್ರಸ್ಟ್ ಇವುಗಳಲ್ಲಿ ಕೆಲವು) ಕಾರ್ಯ ನಿರ್ವಹಿಸುತ್ತಿವೆ. ಬಡ, ಸೌಲಭ್ಯವಂಚಿತರಿಗೆ ಈ ಮೂಲಕ ಸಹಾಯಹಸ್ತ ಚಾಚುತ್ತ ಶತಮಾನಕ್ಕೂ ಹೆಚ್ಚು ಸಮಯದಿಂದ ದೇಶದ ಬೆಳವಣಿಗೆಯಲ್ಲಿ ಇವು ಸಕ್ರಿಯ ಪಾತ್ರ ವಹಿಸಿವೆ.
ಒಂದು ಕಂಪನಿಯಾಗಿ ಇವೆಲ್ಲವನ್ನು ಮಾಡಬೇಕೆಂದೇನೂ ಇರಲಿಲ್ಲ. ಆದರೆ ಇಂತಹ ಕೆಲಸಗಳಿಗೆ ಜೆಮ್ೆಡ್ಜಿಯವರಂಥ ಒಂದು ಉದಾತ್ತ ವ್ಯಕ್ತಿತ್ವ ಹಾಕಿದ ಬಲಿಷ್ಠ ಅಡಿಪಾಯ ಎಲ್ಲವನ್ನೂ ಸಾಧ್ಯವಾಗಿಸಿತು. ಜೆಮ್ೆಡ್ಜಿ ಜನರಿಗೆ ಸಹಾಯಹಸ್ತ ಚಾಚುವ ಮಾನವತಾವಾದಿ. ಕಾಪೋರೇಟ್ ಸಾಮಾಜಿಕ ಜವಾಬ್ದಾರಿ ಎಂಬ ಯೋಚನೆ ಪ್ರಸಿದ್ಧವಾಗುವ ಮೊದಲೇ ಅದನ್ನು ಯಶಸ್ವಿಯಾಗಿ ನಿರ್ವಹಿಸಿದ ವಿಶೇಷತೆ ಟಾಟಾ ಕಂಪನಿಯದ್ದು. ಇದರ ಆದ್ಯ ಪ್ರವರ್ತಕ ಜೆಮ್ೆಡ್ಜಿ 1904 ಮೇ 19ರಂದು ಮೃತರಾದರು. ಅವರು ಹಾಕಿಕೊಟ್ಟ ಆದರ್ಶಗಳನ್ನು ಕಾಪಾಡಿಕೊಂಡು ಬಂದ ಟಾಟಾ ಕಂಪನಿ ದಶಕದಶಕಗಳಿಂದ ಆ ಮಹಾನ್ ವ್ಯಕ್ತಿಯ ನೆನಪನ್ನು ತಾಜಾ ಆಗಿರಿಸಿವೆ.
(ಲೇಖಕರು ಉಪನ್ಯಾಸಕರು, ಕವಯಿತ್ರಿ)