ಧಾರವಾಡದ ಪಂಡಿತ ನಾಗಭೂಷಣ ಶಾಸ್ತ್ರಿಗಳು ನಾಡಿನ ಪ್ರಮುಖ ಸಂಸ್ಕೃತ-ಕನ್ನಡ ವಿದ್ವಾಂಸರಲ್ಲಿ ಒಬ್ಬರು. ವೀರಶೈವ ಆಚಾರ-ವಿಚಾರಗಳನ್ನು ಸರಳ ಶೈಲಿಯಲ್ಲಿ ನಿರೂಪಿಸುವ 14 ಮೌಲಿಕ ಗ್ರಂಥಗಳ ಕರ್ತೃ. 35ಕ್ಕೂ ಹೆಚ್ಚು ಪ್ರಾಚೀನ ಗ್ರಂಥಗಳನ್ನು ಸಂಶೋಧಿಸಿದವರು. ನಾನಾ ಸಂಸ್ಥೆಗಳನ್ನು ಸ್ಥಾಪಿಸಿ ಆ ಮೂಲಕ ಧಾರ್ಮಿಕ ಕಾರ್ಯ ಕೈಗೊಂಡವರು. ಗುರುವಾರ ಅವರ 25ನೇ ಪುಣ್ಯಸ್ಮರಣೆ.
ವೀರಶೈವ ಧರ್ಮದ ತತ್ವ-ಸಿದ್ಧಾಂತಗಳನ್ನು ಬಲವಾಗಿ ಪ್ರತಿಪಾದಿಸಿ, ನಾಡಿನೆಲ್ಲೆಡೆ ಪ್ರಚಾರ ಮಾಡಲು ಶ್ರಮಿಸಿದ ಅನೇಕ ಮಹನೀಯರಲ್ಲಿ ಪಂಡಿತ ನಾಗಭೂಷಣ ಶಾಸ್ತ್ರಿಗಳೂ ಒಬ್ಬರು. ಅವರು ವೀರಶೈವ ಸಿದ್ಧಾಂತದ ಪ್ರತಿಪಾದಕರು ಮಾತ್ರವಲ್ಲ, ಅದಕ್ಕೆ ಸಂಬಂಧಿಸಿದ ಪ್ರಾಚೀನ ಗ್ರಂಥಗಳನ್ನು ಸಂಶೋಧಿಸಿ ಸಂಪಾದನೆ ಮಾಡಿದ ಪ್ರಮುಖರು.
ನಾಗಭೂಷಣ ಶಾಸ್ತ್ರಿಗಳು ಮೂಲತಃ ಕೊಪ್ಪಳ ಜಿಲ್ಲೆ ಯಲಬುರ್ಗಾ ತಾಲೂಕಿನ ಸಂಗನಾಳ ಗ್ರಾಮದವರು. ಪರ್ವತರಾಯಯ್ಯ ಹಾಗೂ ಲಿಂಗಮ್ಮ ದಂಪತಿಯ ಪುತ್ರನಾಗಿ 1908ರ ಏ. 8ರಂದು ಜನಿಸಿದರು. ಕನ್ನಡ ನಾಡಿನ ಪ್ರಸಿದ್ಧ ಸಾಹಿತಿ-ಕವಿ ಸಿದ್ದಯ್ಯ ಪುರಾಣಿಕರ ತಂದೆ ಕಲ್ಲಯ್ಯ ಪುರಾಣಿಕ ದ್ಯಾಮಪುರ ಅವರು ನಾಗಭೂಷಣ ಶಾಸ್ತ್ರಿಗಳ ಮೊದಲ ಗುರು. ಬಾಲ್ಯದಲ್ಲೇ ಅವರಿಂದ ಜ್ಯೋತಿಷ್ಯ ಬಾಲಬೋಧಿ, ಅಮರಕೋಶ ಮುಂತಾದವುಗಳನ್ನು ಕಲಿತರು. ಸಂಗನಾಳದ ನಾಗನಾಥಗುಡಿಯ ಗಾವಟಿ ಶಾಲೆಯಲ್ಲಿ ಅವರ ಶಾಲಾ ಶಿಕ್ಷಣ ಆರಂಭವಾಯಿತು. ಒಂದರಿಂದ 5ನೇ ತರಗತಿವರೆಗೆ ರೋಣ ತಾಲ್ಲೂಕಿನ ನಿಡಗುಂದಿಯಲ್ಲಿ ಶಿಕ್ಷಣ ಪೂರೈಸಿದ ಶಾಸ್ತ್ರಿಗಳಿಗೆ ಸೋದರತ್ತೆ ಮಗಳು ಶಿವಗಂಗಾ ಜತೆ ವಿವಾಹವಾಯಿತು. ಈ ಮಧ್ಯೆ, 1918ರಲ್ಲಿ ಹಾಲಕೆರೆ ಶ್ರೀ ಅನ್ನದಾನ ಸ್ವಾಮಿಗಳು ಸಂಸ್ಕೃತ ಪಾಠಶಾಲೆ ಆರಂಭಿಸಿದ್ದರು. ಅಲ್ಲಿ 1924ರವರೆಗೆ ಶಾಸ್ತ್ರಿಗಳು ಸಂಸ್ಕೃತ ಅಭ್ಯಾಸ, ಪಂಚ ಕಾವ್ಯಗಳ ಅಧ್ಯಯನ ಮಾಡಿದರು. ಬಳಿಕ, ಕಾಶಿಯಲ್ಲಿದ್ದು ಅಧ್ಯಯನ ಮಾಡಿ ಬಂದಿದ್ದ ಉಪ್ಪಿನಬೆಟಗೇರಿಯ ಶ್ರೀ ವಿಶ್ವನಾಥ ಶಾಸ್ತ್ರಿಗಳನ್ನು ಭೇಟಿಯಾದರು. ಅವರ ಅಧ್ಯಯನ ಮತ್ತು ಪಾಠ ಕ್ರಮ ನಾಗಭೂಷಣ ಶಾಸ್ತ್ರಿಗಳ ಮನಸ್ಸಿನ ಮೇಲೆ ಪ್ರಭಾವ ಬೀರಿದವು. ತಾವೂ ಕಾಶಿಗೆ ಹೋಗಬೇಕೆಂಬ ಬಯಕೆ ಆಯಿತು. ಶ್ರೀ ಅನ್ನದಾನ ಸ್ವಾಮಿಗಳೇ ತಮ್ಮ ಪಾಠಶಾಲೆಯಲ್ಲಿ ಅಧ್ಯಯನ ಮಾಡಿದ ಜಾಣ ವಿದ್ಯಾರ್ಥಿಗಳನ್ನು ಕಾಶಿಗೆ ಕಳಿಸುತ್ತಿದ್ದರು. ಹಾಗೆ ನಾಗಭೂಷಣ ಶಾಸ್ತ್ರಿಗಳೂ ಕಾಶಿಗೆ ಹೋದರು. ಅಲ್ಲಿರುವ ಪಂಚಾಚಾರ್ಯ ಪೀಠಗಳಲ್ಲಿ ಒಂದಾದ ವಿಶ್ವಾರಾಧ್ಯ ಪೀಠ ಜಂಗಮವಾಡಿ ಮಠದಲ್ಲಿದ್ದು ಸಾಹಿತ್ಯ, ನ್ಯಾಯ, ವೇದಾಂತ ಮುಂತಾದ ಪರೀಕ್ಷೆಗಳನ್ನು ಪ್ರಥಮ ದರ್ಜೆಯಲ್ಲಿ ಪಾಸು ಮಾಡಿದರು. ಅದಕ್ಕೆ ಪ್ರತಿಫಲವಾಗಿ ನಾಡಿನ ಅನೇಕ ಮಠಾಧೀಶರು ಶಿವಾದ್ವೈತ ಸಿದ್ಧಾಂತರತ್ನ, ದರ್ಶನಶಾಸ್ತ್ರ ವಿಶಾರದ, ಶಿವತತ್ವ ರತ್ನಾಕರ, ಶಿವಸಿದ್ಧಾಂತ ಶಿರೋಮಣಿ, ಶಿವಾದ್ವೈತ ವಿದ್ಯಾಭೂಷಣ ಮುಂತಾದ ಬಿರುದುಗಳನ್ನು ನೀಡಿ ಸನ್ಮಾನಿಸಿದರು. ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಗೂ ನಾಗಭೂಷಣ ಶಾಸ್ತ್ರಿಗಳು ಭಾಜನರಾಗಿದ್ದಾರೆ. ಕಾಶಿಯಲ್ಲಿ ಕೆಲಕಾಲ ಶಾಸ್ತ್ರಿಗಳು ಪ್ರವಚನ ಮಾಡಿದರು. 1931ರಲ್ಲಿ ಪುನಃ ಕರ್ನಾಟಕಕ್ಕೆ ಬಂದು ಕೆಲಕಾಲ ಗದುಗಿನಲ್ಲಿ, ನಂತರ ಧಾರವಾಡದಲ್ಲಿ ನೆಲೆಸಿ ಪ್ರವಚನ, ಬೋಧನೆ, ಸಾಹಿತ್ಯ ಕೃಷಿ ನಡೆಸಿದರು.
ನಾಗಭೂಷಣ ಶಾಸ್ತ್ರಿಗಳು 37ಕ್ಕೂ ಅಧಿಕ ಪ್ರಾಚೀನ ಗ್ರಂಥಗಳನ್ನು ಸಂಶೋಧಿಸಿ, ಸಂಪಾದನೆ ಮಾಡಿದ್ದಾರೆ. ವೀರಶೈವ ತತ್ವ, ಆಚಾರಗಳನ್ನು ಸರಳ ಸುಲಭ ಶೈಲಿಯಲ್ಲಿ ನಿರೂಪಿಸುವ ಗ್ರಂಥಗಳನ್ನು, ಪುಟ್ಟ ಹೊತ್ತಿಗೆಗಳನ್ನು ಪ್ರಕಟಿಸಿದ್ದಾರೆ. ಅವರು ಸಂಪಾದಿಸಿ ಪ್ರಕಟಿಸಿದ ಶಿವಯೋಗ ಪ್ರದೀಪಿಕಾ ಸಂಸ್ಕೃತ ಗ್ರಂಥವು ಈಗ ಪಾಶ್ಚಾತ್ಯ ಶಿವಯೋಗ ಸಾಧಕರಿಗೂ ಮಾರ್ಗದರ್ಶಿಯಾಗಿದೆ. ಶಾಸ್ತ್ರಿಗಳು ಗದಗಿನ ಭಕ್ತರ ನೆರವಿನಿಂದ ಅಖಿಲ ಭಾರತ ವೀರಶೈವ ವಿದ್ಯಾಪೀಠ ಸ್ಥಾಪಿಸಿದರು. ವೀರಶೈವಕ್ಕೆ ಸಂಬಂಧಿಸಿದ ಸಾಹಿತ್ಯ ಪ್ರವೇಶ, ಸಾಹಿತ್ಯ ಮಧುಕರ, ಸಾಹಿತ್ಯ ಭೂಷಣ, ಸಾಹಿತ್ಯ ಶಿರೋಮಣಿ ಎಂಬ ತರಗತಿಗಳನ್ನು ಏರ್ಪಡಿಸಿ ಅದಕ್ಕೆ ಬೇಕಿರುವ ಪಠ್ಯಗಳನ್ನು ತಾವೇ ಸಿದ್ಧಪಡಿಸಿದರು. ಒಟ್ಟು 14 ಮೌಲಿಕ ಗ್ರಂಥಗಳನ್ನು ರಚಿಸಿದ್ದಾರೆ.
ಧಾರವಾಡ ಮುರುಘಾಮಠದ ಶ್ರೀ ಮೃತ್ಯುಂಜಯ ಅಪ್ಪಗಳು 1940ರಲ್ಲಿ ಹಲವು ಪಂಡಿತರ ಮತ್ತು ಸ್ವಾಮಿಗಳ ಸಹಾಯದಿಂದ ಅಖಿಲ ಭಾರತ ಶಿವಾನುಭವ ಸಂಸ್ಥೆ ಸ್ಥಾಪಿಸಿದರು. ಇದರ ಮುಖವಾಣಿಯಾಗಿ ‘ಸಾವಧಾನ’ ಪತ್ರಿಕೆ 1947ರಲ್ಲಿ ಪಂ. ನಾಗಭೂಷಣ ಶಾಸ್ತ್ರಿಗಳ ಸಂಪಾದಕತ್ವದಲ್ಲಿ ಶುರುವಾಯಿತು. ಅದನ್ನು ಅವರು 1998ರಲ್ಲಿ ಕೊನೆ ಉಸಿರು ಎಳೆಯುವವರೆಗೂ (ಮೇ 25) ನಡೆಸಿದರು. ಅದರಲ್ಲಿ ಅವರು ಬರೆಯುತ್ತಿದ್ದ ‘ಸಾಧಕರಿಗೊಂದು ಕಿವಿಮಾತು’ ಅಂಕಣ ಬರಹಗಳು ಜನಮನದ ಕಣ್ಣು ತೆರೆಸುವಂತೆ ಇರುತ್ತಿದ್ದವು.
ರಚಿಸಿದ ಕೃತಿಗಳು: ಅಕ್ಕನ ಆದರ್ಶ ಜೀವನ, ಅಣ್ಣನ ಆದರ್ಶ ಜೀವನ, ಜೀವನ ಯಾತ್ರೆ ಭಾಗ 1, ವೀರಶೈವ ತತ್ವ ಪ್ರವೇಶ, ನಿಜಗುಣ ಶಿವಯೋಗಿಗಳು ಹಾಗೂ ಅವರ ಕೃತಿಗಳನ್ನು ಕುರಿತ ಉಪನ್ಯಾಸಗಳು, ವೀರಶೈವ ಧರ್ಮ ವಿವೇಚನೆ, ಸಂಕ್ಷಿಪ್ತ ಶಿವಪೂಜಾ ವಿಧಿ, ಅಷ್ಟಾವರಣಗಳು, ಪಾದೋದಕ, ಘನಮಠ ನಾಗಭೂಷಣ ಶಿವಯೋಗಿಗಳು, ಜಂಗಮ, ರುದ್ರಾಕ್ಷಿ ಪ್ರಭೆ, ಜ್ಞಾನ ಪ್ರಸಾದ, ಭಾರತೀಯ ದರ್ಶನ ಸಮೀಕ್ಷೆ ಮುಂತಾದುವು.
ಚೆನ್ನವೀರ ಕಣವಿ, ಗೊರುಚ, ಕೀರ್ತಿನಾಥ ಕುರ್ತಕೋಟಿ, ಚಂದ್ರಕಾಂತ ಬೆಲ್ಲದ್ ಅವರೊಂದಿಗೆ ಪಂ.ನಾಗಭೂಷಣ ಶಾಸ್ತ್ರಿಗಳು.
ಸಂಪಾದಿತ ಕೃತಿಗಳು
ಅಷ್ಟಾವರಣ ಮಹತ್ವ, ವಚನ ಮಧು ಭಾಗ 1, ವಚನ ಮಧು ಭಾಗ 2, ವೀರಶೈವ ತತ್ವ ಪ್ರವೇಶ- 1950, ಸನ್ಮಾರ್ಗ ದರ್ಶನ ತತ್ವಗೀತೆ, ಗದ್ಯ ಸಂಗ್ರಹ ಭಾಗ 3, ಪಂಚಾಚಾರ, ಸರ್ವಜ್ಞನ ವಚನ ಸಂಗ್ರಹ, ಧರ್ಮಾಚಾರ, ವಚನಸುಧೆ, ನಿಜಗುಣ ಶಿವಯೋಗಿಕೃತ ಕೈವಲ್ಯ ಪದ್ಧತಿ, ಷಟ್‌ಸ್ಥಲ ಚಕ್ರವರ್ತಿ, ಶ್ರೀ ಚನ್ನಬಸವಣ್ಣನವರ ನೂರೆಂಟು ವಚನಗಳು, ಮಿಶ್ರಾರ್ಪಣ, ಶ್ರೀ ಸರ್ಪಭೂಷಣ ಶಿವಯೋಗಿಕೃತ ಕೈವಲ್ಯ ಕಲ್ಪವಲ್ಲರಿ, ಪದ ಮಂತ್ರ ಗೋಪ್ಯ, ನೂರೆಂಟು ವಚನಗಳ ಸಂಗ್ರಹ, ಸೊಗಸಿನ ಬಾಳು, ಕರಣ ಹಸಿಗೆ, ಪಂಚಾಚಾರಗಳು, ಶಿವಯೋಗಿ, ಶಂಕರಲಿಂಗನ ಕಂದ, ಸರ್ವಜ್ಞನ ವಚನ ಸಂಗ್ರಹ, ಚನ್ನಬಸವಣ್ಣನವರ ವಚನ ಸಂಗ್ರಹ, ಅನುಭವ ಮುದ್ರೆ, ಹಿರಿಯ ಮಂತ್ರ ಗೋಪ್ಯ, ವಚನಾಮೃತ ಬಿಂದುಗಳು, ಪದ್ಯಸಂಗ್ರಹ, ಗುರು ಬಸವಕೃತ ಮನೋವಿಜಯಂ, ಶಂಕರ ಕವಿ ವಿರಚಿತ ಚೋರ ಬಸವೇಶ್ವರ ಕಾವ್ಯ, ಸ್ವರೂಪಾಮೃತ, ಅವಧೂತ ಗೀತೆ, ಯೋಗಾಂಗ ವಿಭೂಷಣ, ವೃಷಭ ಗೀತೆ ಗುರುಬಸವ ಕೃತ