ಅಂಕಣ

ಸಾವಯವ ಉತ್ತೇಜನಕ್ಕೆ ಬಹುರಾಜ್ಯ ಸಹಕಾರ

Webdesk - Ravikanth

ಕೇಂದ್ರ ಸರ್ಕಾರವು 2021ರ ಜುಲೈನಲ್ಲಿ ಸಹಕಾರ ಸಚಿವಾಲಯವನ್ನು ರಚಿಸಿತು. ಈ ಮೂಲಕ ರೈತರ ಉನ್ನತಿಗೆ ಸಾಕಷ್ಟು ಯೋಜನೆಗಳನ್ನು ರೂಪಿಸುತ್ತಿದೆ. ಮುಂದುವರಿದು, ದೇಶದಲ್ಲಿ ಸಾವಯವ ಕೃಷಿ ಉತ್ಪನ್ನಗಳ ವೃದ್ಧಿ ಹಾಗೂ ಅವುಗಳಿಗೆ ಸೂಕ್ತ ಮಾರುಕಟ್ಟೆ ವ್ಯವಸ್ಥೆ ಕಲ್ಪಿಸುವ ದೃಷ್ಟಿಕೋನದೊಂದಿಗೆ ಬಹುರಾಜ್ಯ ಸಹಕಾರ ಸಾವಯವ ಸಂಘವನ್ನು ಸ್ಥಾಪಿಸಿದೆ. ಈ ಮಹತ್ವಾಕಾಂಕ್ಷಿ ಯೋಜನೆಯ ಅಗತ್ಯ ಮತ್ತು ಪ್ರಯೋಜನಗಳೇನೆಂದರೆ...

| ಡಾ.ಎಂ. ಜಯಪ್ರಕಾಶ್ ಬೆಂಗಳೂರು

ಭಾರತವು ತನ್ನ ವೈವಿಧ್ಯಮಯ ಕೃಷಿ ಹಮಾಮಾನ ಪರಿಸ್ಥಿತಿಗಳಿಂದಾಗಿ ಎಲ್ಲ ವಿಧದ ಸಾವಯವ ಉತ್ಪನ್ನಗಳನ್ನು ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ. ದೇಶದ ಹಲವು ಭಾಗಗಳಲ್ಲಿ ಸಾವಯವ ಕೃಷಿಯ ಅನುವಂಶಿಕ ಸಂಪ್ರದಾಯವು ವಿಶೇಷವಾಗಿ ಈಶಾನ್ಯ ಪ್ರದೇಶದಲ್ಲಿ ಹೆಚ್ಚಿನ ರೀತಿಯಲ್ಲಿ ಪ್ರಯೋಜನಕಾರಿಯಾಗಿದೆ. ಅದರಂತೆ, ಸಿಕ್ಕಿಂ ಅನ್ನು 2016ರಲ್ಲಿ ಸಂಪೂರ್ಣ ಸಾವಯವ ರಾಜ್ಯವೆಂದು ಘೊಷಿಸಲಾಗಿತ್ತು. 9 ರಾಜ್ಯಗಳು ತಮ್ಮ ನಿವ್ವಳ ಬಿತ್ತನೆ ಪ್ರದೇಶದ ಶೇ.5ಕ್ಕಿಂತ ಹೆಚ್ಚಿನ ಕೃಷಿ ಪ್ರದೇಶದಲ್ಲಿ ಸಾವಯವ ಕೃಷಿ ಚಟುವಟಿಕೆ ನಿರ್ವಹಿಸುತ್ತಿವೆ. ಇವುಗಳಲ್ಲಿ 6 ರಾಜ್ಯಗಳು ಈಶಾನ್ಯ ಪ್ರಾಂತೀಯದ್ದಾಗಿದ್ದರೆ, ಉಳಿದವು ಮಧ್ಯಪ್ರದೇಶ, ಉತ್ತರಾಖಂಡ ಮತ್ತು ಗೋವಾಗಳಾಗಿವೆ.

ಪ್ರಮುಖ ಕೊರತೆಗಳು: ಸುಸ್ಥಿರ ಆಧಾರದ ಮೇಲೆ ಸಾವಯವ ಉತ್ಪನ್ನಗಳನ್ನು ಉತ್ತೇಜಿಸಲು ಪರಿಣಾಮಕಾರಿ ಸಾಂಸ್ಥಿಕ ಕಾರ್ಯವಿಧಾನದ ಕೊರತೆ, ಕೈಗೆಟುಕುವ ವೆಚ್ಚದಲ್ಲಿ ಪರೀಕ್ಷೆ ಮತ್ತು ಪ್ರಮಾಣೀಕರಣ ಸೌಲಭ್ಯ ಇಲ್ಲದಿರುವುದು, ಚದುರಿದ ಮತ್ತು ವಿಭಜಿತ ಉತ್ಪಾದನಾ ಮೂಲ, ಅಸಮರ್ಪಕ ಮೂಲಸೌಕರ್ಯ ಸೌಲಭ್ಯಗಳು, ಜ್ಞಾನ ಬಂಡಾರ ಹಾಗೂ ಹೊಸ ಆವಿಷ್ಕಾರದ ಸಂಶೋಧನೆ ಅಭಿವೃದ್ಧಿ ಕೊರತೆ, ಅಖಿಲ ಭಾರತ ಆಧಾರದ ಮೇಲೆ ಸಾವಯವ ಕೃಷಿಯ ಯಶಸ್ವಿ ಮಾದರಿಗಳನ್ನು ಪುನರಾವರ್ತಿಸಲು ಸಂಘಟಿತ ಪ್ರಯತ್ನ ಮತ್ತು ಸಾವಯವ ಕೃಷಿ ಸಮೂಹಗಳ ಗುರುತಿಸುವಿಕೆ ಕೊರತೆ, ಮಾರುಕಟ್ಟೆಗಳೊಂದಿಗೆ ಅದನ್ನು ಜೋಡಿಸುವುದು ಮುಖ್ಯ ಸವಾಲುಗಳಾಗಿವೆ.

ಸಾವಯವದಲ್ಲಿ ಭಾರತ 4ನೇ ಸ್ಥಾನ: ಭಾರತವು 27 ಲಕ್ಷ ಹೆಕ್ಟೇರ್ ಸಾವಯವ ಭೂಮಿಯೊಂದಿಗೆ ವಿಶ್ವದಲ್ಲಿ 4ನೇ ಸ್ಥಾನದಲ್ಲಿದೆ. ಅದರಲ್ಲಿ 7.6 ಲಕ್ಷ ಹೆಕ್ಟೇರ್ ಮಧ್ಯಪ್ರದೇಶ, 3.5 ಲಕ್ಷ ಹೆಕ್ಟೇರ್ ರಾಜಸ್ಥಾನ ಮತ್ತು 2.8 ಲಕ್ಷ ಹೆಕ್ಟೇರ್ ಮಹಾರಾಷ್ಟ್ರದಲ್ಲಿದೆ. ಪ್ರಮಾಣೀಕೃತ ಭಾರತೀಯ ಸಾವಯವ ಉತ್ಪನ್ನ ಚಿಲ್ಲರೆ ಮಾರಾಟ ಮಾರುಕಟ್ಟೆಯು 7000 ಕೋಟಿ ರೂ. ರಫ್ತು ಸೇರಿ ಸುಮಾರು 27 ಸಾವಿರ ಕೋಟಿ ರೂ.ಗಳಷ್ಟಿದೆ. ವಿಶ್ವದ ಸಾವಯವ ಮಾರುಕಟ್ಟೆಯಲ್ಲಿ ಭಾರತವು ಶೇ.2.70 ಭಾಗ ಮತ್ತು ದೊಡ್ಡಮಟ್ಟದಲ್ಲಿ ಮಾರಾಟ ವ್ಯವಸ್ಥೆ ವಿಸ್ತರಿಸುವ ಸಾಮಥ್ಯ ಹೊಂದಿದೆ.

ಬಹುರಾಜ್ಯ ಸಹಕಾರಿ ಸಂಘ: ದೇಶದಲ್ಲಿ 8.54 ಲಕ್ಷ ನೋಂದಾಯಿತ ಸಹಕಾರಿ ಸಂಘಗಳು ಕಾರ್ಯನಿರ್ವಹಿಸುತ್ತಿದ್ದು, 29 ಕೋಟಿಗೂ ಹೆಚ್ಚು ಸದಸ್ಯರನ್ನು ಹೊಂದಿವೆ. ವಿಶೇಷವಾಗಿ ಗ್ರಾಮೀಣ ಪ್ರದೇಶಗಳಲ್ಲಿ ಕೃಷಿ ಹಾಗೂ ಕೃಷಿ ಸಂಬಂಧಿತ ವಲಯಕ್ಕೆ ಸಂಘಗಳು ಸಹಕಾರ ನೀಡುತ್ತಿವೆ. ಮೂರು ಪ್ರಮುಖ ಸಹಕಾರಿ ಸಂಸ್ಥೆಗಳಾದ ಗುಜರಾತ್ ಸಹಕಾರ ಹಾಲು ಮಾರಾಟ ಒಕ್ಕೂಟ, ಭಾರತ ರಾಷ್ಟ್ರೀಯ ಕೃಷಿ ಸಹಕಾರ ಮಾರಾಟ ಒಕ್ಕೂಟ, ಭಾರತ ರಾಷ್ಟ್ರೀಯ ಸಹಕಾರ ಗ್ರಾಹಕ ಒಕ್ಕೂಟ ಮತ್ತು ಇತರ ಎರಡು ರಾಷ್ಟ್ರೀಯ ಮಟ್ಟದ ಸಂಸ್ಥೆಗಳಾದ ರಾಷ್ಟ್ರೀಯ ಡೇರಿ ಅಭಿವೃದ್ಧಿ ಮಂಡಲಿ (ಎನ್​ಡಿಡಿಬಿ) ಮತ್ತು ರಾಷ್ಟ್ರೀಯ ಸಹಕಾರಿ ಅಭಿವೃದ್ಧಿ ನಿಗಮ (ಎನ್​ಸಿಡಿಸಿ) ಸಾವಯವ ಉತ್ಪನ್ನಗಳಿಗಾಗಿ ರಾಷ್ಟ್ರೀಯ ಮಟ್ಟದ ಬಹುರಾಜ್ಯ ಸಹಕಾರಿ ಸಂಘ ಸ್ಥಾಪಿಸಲು ತಲಾ 20 ಕೋಟಿ ರೂ. ಕೊಡುಗೆ ನೀಡಲು ಮತ್ತು ಪ್ರವರ್ತಕ ಸದಸ್ಯರಾಗಲು ಒಪ್ಪಿಗೆ ನೀಡಿವೆ. ಪ್ರಸ್ತಾವಿತ ಸೊಸೈಟಿಯು 500 ಕೋಟಿ ರೂ.ಗೂ ಅಧಿಕೃತ ಷೇರು ಬಂಡವಾಳ ಹೊಂದಿರುತ್ತದೆ ಹಾಗೂ 100 ಕೋಟಿ ರೂ. ಆರಂಭಿಕ ಪಾವತಿಸಿದ ಷೇರು ಬಂಡವಾಳದೊಂದಿಗೆ ಸ್ಥಾಪಿಸಲ್ಪಡುತ್ತದೆ. ಇದು ದೇಶಾದ್ಯಂತ ಕಾರ್ಯಾಚರಣೆ ಪ್ರದೇಶ ಹೊಂದಿರುತ್ತದೆ. ಆರಂಭದಲ್ಲಿ ನೋದಾಯಿತ ಕಚೇರಿಯು ಗುಜರಾತ್​ನ ಆನಂದ್ ನಗರದ ಎನ್​ಡಿಡಿಬಿಯ ಪ್ರಧಾನ ಕಚೇರಿಯಲ್ಲಿರಲಿದೆ.

ಕಾರ್ಯನಿರ್ವಹಣೆ ಹೇಗೆ?: ಪ್ರಸ್ತಾವಿತ ಸೊಸೈಟಿಯು ಪ್ರಾಥಮಿಕ ಕೃಷಿ ಸಾಲ ಸಂಘಗಳು, ರೈತ ಉತ್ಪಾದನಾ ಸಂಸ್ಥೆಗಳು ಸೇರಿ ತನ್ನ ಸದಸ್ಯ ಸಹಕಾರ ಸಂಸ್ಥೆಗಳಿಗೆ ಸಮಷ್ಠೀಕರಣ, ಪ್ರಾಮಾಣೀಕರಣ, ಪರೀಕ್ಷೆ, ಸಂಗ್ರಹಣೆ, ಸಂಸ್ಕರಣೆ, ಬ್ರಾ್ಯಂಡಿಂಗ್, ಪ್ಯಾಕೇಜಿಂಗ್, ಲಾಜಿಸ್ಟಿಕ್ ಸೌಲಭ್ಯ, ಸಾವಯವ ಉತ್ಪನ್ನಗಳ ಮಾರುಕಟ್ಟೆ ಮತ್ತು ಸಾವಯವ ರೈತರಿಗೆ ಆರ್ಥಿಕ ಸಹಾಯ ಒದಗಿಸುವ ಸಾಂಸ್ಥಿಕ ಬೆಂಬಲ ಒದಗಿಸುತ್ತದೆ. ಸರ್ಕಾರದ ವಿವಿಧ ಯೋಜನೆಗಳು ಮತ್ತು ಏಜೆನ್ಸಿಗಳ ಸಹಾಯದಿಂದ ಸಾವಯವ ಉತ್ಪನ್ನಗಳ ಎಲ್ಲ ರೀತಿಯ ಪ್ರಚಾರ ಮತ್ತು ಅಭಿವೃದ್ದಿಗೆ ಸಂಬಂಧಿತ ಚಟುವಟಿಕೆಗಳ ಜವಾಬ್ದಾರಿ ಇದರದ್ದಾಗಿರುತ್ತದೆ. ಪರೀಕ್ಷೆ ಮತ್ತು ಪ್ರಮಾಣೀಕರಣ ವೆಚ್ಚವನ್ನು ತಗ್ಗಿಸಲು ಈ ಸಂಘವು ನಿರ್ದಿಷ್ಟಪಡಿಸಿದ ಮಾನದಂಡಗಳೊಂದಿಗೆ ಮಾನ್ಯತೆ ಪಡೆದ ಸಾವಯವ ಪರೀಕ್ಷಾ ಪ್ರಯೋಗಾಲಯ ಮತ್ತು ಪ್ರಮಾಣೀಕರಣ ಸಂಸ್ಥೆಗಳನ್ನು ಸ್ಥಾಪಿಸುವ ನಿಟ್ಟಿನಲ್ಲಿ ಕೆಲಸ ನಿರ್ವಹಿಸುತ್ತದೆ. ಸೊಸೈಟಿಯು ಸದಸ್ಯ ಸಹಕಾರಿಗಳ ಮೂಲಕ ಸಹಕಾರ ಸಂಸ್ಥೆಗಳು ಮತ್ತು ಸಂಬಂಧಿತ ಘಟಕಗಳು ಉತ್ಪಾದಿಸುವ ಸಾವಯವ ಉತ್ಪನ್ನಗಳ ಸಂಪೂರ್ಣ ನಿರಂತರ ಪೂರೈಕೆಯ ಕಾರ್ಯ ಚಟುವಟಿಕೆಗಳನ್ನು ನಿರ್ವಹಿಸುತ್ತದೆ.

ಸಹಕಾರ್-ಸೇ-ಸಮೃದ್ಧಿ: ಬಹುರಾಜ್ಯ ಸಹಕಾರಿ ಸಂಘವು ಸಾವಯವ ಕ್ಷೇತ್ರಕ್ಕೆ ಸಂಬಂಧಿಸಿದ ವಿವಿಧ ಚಟುವಟಿಕೆಗಳನ್ನು ನಿರ್ವಹಿಸಲು ಒಂದು ಉತ್ಪನ್ನ ಮಟ್ಟದ ಸಂಸ್ಥೆಯಾಗಿ ಕಾರ್ಯನಿರ್ವಹಿಸುವ ಮೂಲಕ ಸಹಕಾರ ವಲಯದಿಂದ ಸಾವಯವ ಉತ್ಪನ್ನಗಳಿಗೆ ಹೆಚ್ಚು ಒತ್ತು ನೀಡುತ್ತದೆ. ಪ್ರಮಾಣೀಕೃತ ಮತ್ತು ಅಧಿಕೃತ ಸಾವಯವ ಉತ್ಪನ್ನಗಳನ್ನು ಒದಗಿಸುವ ಮೂಲಕ ದೇಶೀಯ ಮತ್ತು ಜಾಗತಿಕ ಮಾರುಕಟ್ಟೆಗಳಲ್ಲಿ ಸಹಾಯ ಮಾಡುತ್ತದೆ. ವಿವಿಧ ಸಚಿವಾಲಯಗಳ ಹಲವು ಯೋಜನೆಗಳು ಮತ್ತು ನೀತಿಗಳ ಸದ್ಬಳಕೆಯೊಂದಿಗೆ ಕೈಗೆಟುಕುವ ವೆಚ್ಚದಲ್ಲಿ ಪರೀಕ್ಷೆ ಮತ್ತು ಪ್ರಮಾಣೀಕರಣವನ್ನು ಸುಗಮಗೊಳಿಸುವ ಮೂಲಕ ದೊಡ್ಡ ಪ್ರಮಾಣದಲ್ಲಿ ಸಾವಯವ ಉತ್ಪನ್ನಗಳ ಒಟ್ಟುಗೂಡುಸುವಿಕೆ, ಬ್ರಾ್ಯಂಡಿಂಗ್ ಮತ್ತು ಮಾರುಕಟ್ಟೆಯ ಮೂಲಕ ಹೆಚ್ಚಿನ ಲಾಭ ಪಡೆಯಲು ಸಹಾಯ ಮಾಡುತ್ತದೆ. ಸಹಕಾರಿ ಸಂಸ್ಥೆಗಳ ಆಂತರಿಕ ಬೆಳವಣಿಗೆಯ ಮಾದರಿಯ ಮೂಲಕ ‘ಸಹಕಾರ್-ಸೇ-ಸಮೃದ್ಧಿ‘ ಗುರಿ ಸಾಧಿಸಲು ಸಹಾಯ ಮಾಡುತ್ತದೆ. ಸದಸ್ಯರು ತಮ್ಮ ಸಾವಯವ ಉತ್ಪನ್ನಗಳಿಗೆ ಉತ್ತಮ ಬೆಲೆ ಮತ್ತು ಹೆಚ್ಚುವರಿ ಲಾಭ ಪಡೆಯಲು ಸಹಕಾರಿಯಾಗಲಿದೆ.

(ಲೇಖಕರು- ಪ್ರಾದೇಶಿಕ ಸಹಕಾರ ನಿರ್ವಹಣಾ ಸಂಸ್ಥೆ ಉಪನ್ಯಾಸಕರು)