ಅಂಕಣ

ಸಮಾಜದ ಒಳಿತಿಗೆ ಬೇಕು ನೈತಿಕ ಮೌಲ್ಯಗಳ ಶಿಕ್ಷಣ

ಇಂದಿನ ದಿನಗಳಲ್ಲಿ ದ್ವೇಷ, ಕೊಲೆ, ಸುಲಿಗೆಗಳು ಮನೆಯೊಳಗೂ ಬಂದು ಸೇರಿಕೊಂಡಿವೆ. ಆಸ್ತಿ, ಹಣಕ್ಕಾಗಿ ಮನೆಯವರೇ ಹೊಡೆದಾಡಿಕೊಳ್ಳುವಂಥ ಸ್ಥಿತಿ ನಿರ್ವಣವಾಗಿದೆ. ಇವುಗಳಿಗೆ ಮುಖ್ಯಕಾರಣ ನೈತಿಕ ಮೌಲ್ಯಗಳ ಶಿಕ್ಷಣದ ಕೊರತೆ. ಇದರಿಂದ ಸಮಾಜದಲ್ಲಿ ಅಶಾಂತಿಗಳು ಸೃಷ್ಟಿಯಾಗುತ್ತಿವೆ.

ನಾನೊಮ್ಮೆ ಪ್ರಯಾಣದಲ್ಲಿ ಇರಬೇಕಾದರೆ ಅಲ್ಲಿ ನಡೆದ ಘಟನೆಯೊಂದು ನನ್ನನ್ನು ಅಚ್ಚರಿಯನ್ನಾಗಿಸಿತು. ಅದೇನೆಂದರೆ ಅದೊಂದು ಮೈದಾನ ರೀತಿಯ ಬಯಲು ಪ್ರದೇಶ. ಸಾಕಷ್ಟು ಜನರು ಸಂಜೆಯಾದಾಗ ಕುಳಿತು ವಿಶ್ರಮಿಸಲು, ಮಕ್ಕಳು ಕ್ರಿಕೆಟ್ ಆಡಲು ವಾಕಿಂಗ್ ಮಾಡಲು ಅಲ್ಲಿ ಸೇರುತ್ತಾರೆ. ಎಳೆಸೌತೇಕಾಯಿ, ಕಡ್ಲೆಪುರಿ, ಐಸ್​ಕ್ಯಾಂಡಿ ಮಾರುವವರೂ ಅಲ್ಲಿ ಇರುತ್ತಾರೆ. ಅಲ್ಲೊಮ್ಮೆ ಐಸ್​ಕ್ಯಾಂಡಿ ಮಾರುವಾತ ಮಾಡಿದ ಗಂಟೆಯ ಸದ್ದು ಕೇಳಿದ ಕೂಡಲೇ ಆಟವಾಡುತ್ತಿದ್ದ ಐದು ವರ್ಷದೊಳಗಿನ ಮಗು ನಿಂತಲ್ಲೇ ಒಂದು ಸುತ್ತು ತಿರುಗಿ ಕೈ ಮುಗಿದು ನೆಲಕ್ಕೆ ಅಡ್ಡಬಿತ್ತು. ಆಗ ಅಲ್ಲೇ ಇದ್ದ ಮಗುವಿನ ತಾಯಿ, ‘ಏ.. ಮರೀ ಅದು ದೇವಸ್ಥಾನವಲ್ಲಪ್ಪಾ.. ಚಾಮೀ (ಸ್ವಾಮಿ ಮಕ್ಕಳ ಬಾಯಲ್ಲಿ ಚಾಮೀ ಆಗುತ್ತದೆ) ಅನ್ಕೊಂಡಿಯಾ, ಅದು ಐಸ್​ಕ್ಯಾಂಡಿ ಗಂಟೆ, ದೇವಸ್ಥಾನದ ಗಂಟೆ ಅಲ್ಲ ಅದು’ ಎನ್ನುತ್ತ, ಅಡ್ಡಬಿದ್ದು ಎದ್ದ ಮಗುವಿನ ಕೈ-ಕಾಲುಗಳಲ್ಲಾದ ಮಣ್ಣನ್ನು ಜಾಡಿಸತೊಡಗಿದಳು.

ಆ ಮಗುವನ್ನೂ, ಅದರ ಮುಗ್ಧತೆಯನ್ನೂ ಕಂಡು ಸಂತೋಷವಾಯಿತು. ಮನೆಯಲ್ಲಿ ಪೂಜೆ ಮಾಡುವಾಗಲೋ, ದೇವಸ್ಥಾನದಲ್ಲಿ ಗಂಟೆ ಬಾರಿಸುವಾಗಲೋ ಅಮ್ಮ ದೇವರಿಗೆ ಕೈ ಮುಗಿದು ಅಡ್ಡ ಬೀಳು ಎನ್ನುತ್ತಾಳೆ. ಅಂತೆಯೇ ಮಗು ಮಾಡುತ್ತದೆ. ಇಲ್ಲಿಯೂ ಅಷ್ಟೇ, ಬಯಲಲ್ಲಿ ಐಸ್​ಕ್ಯಾಂಡಿ ಮಾರುವವವ ಗಂಟೆ ಅಲ್ಲಾಡಿಸಿದ್ದರಿಂದ ಮಗು ತಾನು ದೇವಸ್ಥಾನದಲ್ಲಿ ಇದ್ದೇನೆಂದು ಭಾವಿಸಿ ನಮಸ್ಕರಿಸಿತ್ತು. ಅದು ಐಸ್​ಕ್ಯಾಂಡಿ ಗಂಟೆ ಎಂದು ತಿಳಿಯುವಷ್ಟು ಅದು ಬೆಳೆದಿಲ್ಲ. ಹಾಗಾಗಿ ಮುಂದೆ ಬೆಳೆಯುತ್ತ ಹೋದ ಹಾಗೆ ಯಾವುದು? ಏನು? ಎತ್ತ ಎಂಬಿತ್ಯಾದಿ ವಿಷಯಗಳನ್ನು ಅರ್ಥೈಸಿಕೊಂಡು ಕಲಿಯುತ್ತ ಬೆಳೆಯುತ್ತದೆ. ಮಕ್ಕಳೆಂದರೆ ಹಾಗೆಯೇ ಎಲ್ಲವನ್ನೂ ಕುತೂಹಲದಿಂದ ನೋಡುತ್ತಾರೆ. ನೋಡಿದ್ದು, ಕೇಳಿದ್ದು, ಸುತ್ತಮುತ್ತಲಿನ ಪರಿಸರದಲ್ಲಿ ಇರುವುದನ್ನು ಗಮನಿಸುತ್ತ ಕಲಿಯುತ್ತ ಇರುತ್ತಾರೆ. ಮಗು ಮಾತನಾಡಲು ಆರಂಭಿಸಿತೆಂದರೆ ಸಾಕು.. ‘ಅದೇನು? ಅದು ಯಾಕೆ ಹಾಗೆ? ಏನಾಗುತ್ತೆ? ಏನು ಮಾಡುತ್ತಾರೆ...’ ಹೀಗೆ ಪ್ರತಿಯೊಂದು ವಿಷಯವನ್ನೂ ಪ್ರಶ್ನಿಸುತ್ತದೆ. ದಿನದ ಹೆಚ್ಚಿನ ಹೊತ್ತು ಅಮ್ಮನೊಂದಿಗೆ ಇರುವುದರಿಂದ ಅಮ್ಮ ಹೇಳಿದ ಎಲ್ಲ ವಿಚಾರವನ್ನು ತಿಳಿದುಕೊಳ್ಳಲು ಪ್ರಯತ್ನಿಸುತ್ತದೆ. ನನಗನಿಸಿದಂತೆ 90ರ ದಶಕದ ಹಿಂದಿನ ಮಕ್ಕಳೆಲ್ಲ ಬಾಲ್ಯದಲ್ಲಿ ಅಮ್ಮನೋ, ಅಜ್ಜಿ-ಅಜ್ಜನೋ ಹೇಳುವ ಕತೆಗಳನ್ನು ಕೇಳಿಕೊಂಡು ಬೆಳೆದವರು. ಪಂಚತಂತ್ರದ ಕತೆಗಳು, ಚಾಣಾಕ್ಷ ಬೀರಬಲ್, ಈಸೋಪನ ಕತೆಗಳು ಹೀಗೆ ವಿವಿಧ ಕತೆಗಳನ್ನು ಕೇಳುವ ಮೂಲಕ ನೀತಿಪಾಠಗಳನ್ನೂ ಅರಿತು ಬೆಳೆದವರು. ಆಗ ಕೇಳಿದ ಕತೆಗಳು ಈಗಲೂ ಮನದಲ್ಲಿ ಅಚ್ಚಾಗಿ ಕುಳಿತಿವೆ. ಮಕ್ಕಳ ಮನಸ್ಸು ಮಣ್ಣಿನಿಂದ ಮಾಡಿದ ಹಸಿಗೋಡೆಯಂತೆ. ಆ ಗೋಡೆಗೆ ಏನೇ ಎಸೆದರೂ ಅದಕ್ಕೆ ಅಂಟಿಕೊಳ್ಳುತ್ತದೆ. ಮಕ್ಕಳೂ ಅಷ್ಟೇ ಒಳ್ಳೆಯದು, ಕೆಟ್ಟದ್ದು ಎಂಬ ವ್ಯತ್ಯಾಸ ಅರಿಯದೆ ಎಲ್ಲವನ್ನೂ ಕಲಿಯುತ್ತಾರೆ. ಹಾಗಾಗಿ ಮಕ್ಕಳಿಗೆ ತಿಳಿಹೇಳುವಾಗ ಹಾಗೂ ಮಕ್ಕಳ ಎದುರಿನಲ್ಲಿ ಕೆಲವೊಂದು ವಿಚಾರ ಮಾತನಾಡುವಾಗ ಬಹಳಷ್ಟು ಎಚ್ಚರ ವಹಿಸಬೇಕಾಗುತ್ತದೆ. ಉದಾಹರಣೆಗೆ, ‘ನಮ್ಮ ಪಕ್ಕದ ಮನೆಯವ ಹಾಗೆ ಮಾಡಿದ, ಅನ್ಯಾಯ ಮಾಡಿದ, ಜಗಳ ಮಾಡಿದ’ ಎಂದು ಮಕ್ಕಳ ಎದುರು ಪಕ್ಕದ ಮನೆಯವರನ್ನು ದ್ವೇಷಿಸಿ ಮಾತನಾಡುತ್ತಲೇ ಇದ್ದರೆ ನಮ್ಮ ಮಕ್ಕಳೂ ಪಕ್ಕದ ಮನೆಯವರನ್ನು ದ್ವೇಷ ಮಾಡತೊಡಗುತ್ತಾರೆ. ಬದಲಾಗಿ ಪಕ್ಕದ ಮನೆಯವರ ಒಳ್ಳೆಯತನ, ನಾವು ಕಷ್ಟದಲ್ಲಿದ್ದಾಗ ಅವರು ಮಾಡಿದ ಸಹಾಯವನ್ನು ಹೇಳಿ ಕೃತಜ್ಞತೆ ಭಾವವನ್ನು ಮಕ್ಕಳ ಮುಂದೆ ಹೇಳಿದರೆ, ಪಕ್ಕದ ಮನೆಯವರು ದ್ವೇಷ ಮಾಡಿದರೂ ನಮ್ಮ ಮಕ್ಕಳು ಅವರನ್ನು ಪ್ರೀತಿಯಿಂದಲೇ ಕಾಣುತ್ತಾರೆ.

ಬಾಲ್ಯಾವಸ್ಥೆಯಲ್ಲಿರುವ ಮಕ್ಕಳ ಮನಸ್ಸಿನಲ್ಲಿ ನಾವು ಏನನ್ನು ಬಿತ್ತುತ್ತೇವೆಯೋ ಮುಂದೆ ಅದೇ ಹೆಮ್ಮರವಾಗುತ್ತದೆ. ಪ್ರೀತಿ ಬಿತ್ತಿದರೆ ಸ್ನೇಹ, ಮಮತೆ, ಅನುಕಂಪ, ವಾತ್ಸಲ್ಯ ಇತ್ಯಾದಿಗಳ ಫಲ ದೊರೆಯಬಹುದು, ದ್ವೇಷ ಬಿತ್ತಿದರೆ ಕೋಪ, ದುರಾಸೆ, ಮೋಹ, ಅಹಂಕಾರ, ದರ್ಪ ಮುಂತಾದ ಫಲಗಳೂ ದೊರೆಯಬಹುದು.

ಪತ್ರಿಕೆಯಲ್ಲಿ ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದುತ್ತಿದ್ದಾಗ ಯೂಕ್ರೇನ್ ಮತ್ತು ರಷ್ಯಾ ಕುರಿತಾದ ವಿಷಯ ಗಮನ ಸೆಳೆಯಿತು. ರಷ್ಯಾವು ಹಣ, ಆರ್ಥಿಕತೆ, ಭೂಪ್ರದೇಶ ಹೀಗೆ ಎಲ್ಲ ರೀತಿಯಲ್ಲಿ ಬಲಶಾಲಿಯಾಗಿದ್ದರೂ ಯೂಕ್ರೇನ್​ನನ್ನು ಸೋಲಿಸಲು ಸಾಧ್ಯವಾಗಿಲ್ಲ. ಯೂಕ್ರೇನ್ ಕೂಡ ಬಲಶಾಲಿಯಾಗಿ ಇರದಿದ್ದರೂ, ರಷ್ಯಾದ ಎದುರು ಸೋತಿಲ್ಲ. ಆದರೆ ರಷ್ಯಾದಲ್ಲಿನ ಕೆಲ ಬೆಳವಣಿಗೆಗಳು ನನ್ನನ್ನು ಆತಂಕಕ್ಕೀಡು ಮಾಡಿದ್ದು ಸುಳ್ಳಲ್ಲ. ರಷ್ಯಾದಲ್ಲಿ ಯುವಜನತೆ ಸೇನೆ ಸೇರಲು ಹಿಂಜರಿಯುತ್ತಿದ್ದಾರಂತೆ. ಬಲವಂತವಾಗಿ ಸೇನೆ ಸೇರಿಸಿಕೊಳ್ಳುತ್ತಾರೆ ಎಂದು ಹೆದರಿ ಅನೇಕ ಯುವಕರು ಬೇರೆ-ಬೇರೆ ದೇಶಗಳಿಗೆ ಪಲಾಯನ ಮಾಡುತ್ತಿದ್ದಾರಂತೆ. ಮುಖ್ಯವಾಗಿ ಪಠ್ಯಪುಸ್ತಕಗಳಲ್ಲಿ ರಷ್ಯಾ ಸೈನಿಕರ ಸಾಹಸಗಾಥೆಗಳು ಹಾಗೂ ಯೂಕ್ರೇನ್ ಬಗ್ಗೆ ದ್ವೇಷಪೂರಿತ ಪಠ್ಯಗಳ ಅಳವಡಿಕೆಯಾಗುತ್ತಿದೆ ಎಂದು ವರದಿಯಲ್ಲಿ ವಿವರಿಸಲಾಗಿತ್ತು. ಈ ರೀತಿಯಾಗಿ ಮಕ್ಕಳಲ್ಲಿ ದ್ವೇಷ-ರೋಷಗಳನ್ನು ತುಂಬುತ್ತ ಹೋದರೆ ಮುಂದಿನ ಪೀಳಿಗೆಗೆಗಳು ಹೇಗೆ ತಾನೆ ಸುಖ-ಶಾಂತಿಯಿಂದ ಬಾಳಲು ಸಾಧ್ಯ ಎಂಬುದೇ ದೊಡ್ಡಪ್ರಶ್ನೆಯಾಗಿದೆ. ಬದಲಾಗಿ ಸ್ನೇಹ, ಸೌಹಾರ್ದದ ಪಾಠ ಹೇಳಿಕೊಟ್ಟರೆ ವಿಶ್ವದಲ್ಲಿ ಶಾಂತಿ ನೆಲೆಗೊಳ್ಳಬಹುದು.

ಇಂದಿನ ಮಕ್ಕಳೇ ಮುಂದಿನ ಪ್ರಜೆಗಳು ಎಂಬ ಮಾತು ನಮ್ಮಲ್ಲಿ ಸರ್ವೆಸಾಮಾನ್ಯ. ಹಾಗೆಯೇ ಬೆಳೆಯುವ ಮಕ್ಕಳಿಗೆ ಮದ್ದು-ಗುಂಡುಗಳ, ಯುದ್ಧ ಮಾಡುವ, ಇನ್ನೊಬ್ಬರನ್ನು ಹತ್ಯೆ ಮಾಡುವ, ಇನ್ನೊಂದು ರಾಷ್ಟ್ರವನ್ನು ದ್ವೇಷಿಸುವ ಪಠ್ಯಗಳನ್ನು ಹೇಳಿಕೊಟ್ಟರೆ ಭವಿಷ್ಯದ ದಿನಗಳು ಎಷ್ಟು ಘೊರವಾಗಬಹುದು. ನಾವೂ ಅಷ್ಟೇ ನಮ್ಮ ಮಕ್ಕಳಿಗೆ ಬಾಲ್ಯದಲ್ಲಿ ಉತ್ತಮ ವಿಚಾರ ಹೇಳಿಕೊಡುತ್ತ, ಕೆಟ್ಟ ವಿಚಾರಗಳ ಬಗ್ಗೆ ಎಚ್ಚರಿಕೆಯಿಂದ ಇರುವಂತೆ ತಿಳಿಹೇಳಬೇಕು. ಮುಖ್ಯವಾಗಿ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣವು ಪಠ್ಯ ಸೇರಿ ಎಲ್ಲ ವಿಷಯಗಳಲ್ಲೂ ಉತ್ಕೃಷ್ಟವಾಗಿರಬೇಕು. ಮಕ್ಕಳು ತಾಯಿ-ತಂದೆಯ ಮಾತನ್ನು ಬಿಟ್ಟರೆ ಕಣ್ಣುಮುಚ್ಚಿ ನಂಬುವುದು ಪ್ರಾಥಮಿಕ

ಶಾಲಾ ಶಿಕ್ಷಕರ ಮಾತನ್ನು. ಅನೇಕ ಸಲ ಮಕ್ಕಳ ಸಲುವಾಗಿ ತಾಯಿ ಮತ್ತು ಟೀಚರ್​ಗಳು ಜಗಳವಾಡುವ ಸಂದರ್ಭಗಳೂ ಇವೆ. ಮನೆಯಲ್ಲಿ ಹೋಮ್ರ್ಕ್ ಮಾಡುವಾಗ ಮಗುವಿಗೆ, ‘ಹಾಗಲ್ಲ ಹೀಗೆ ಬರಿ’ ಎಂದು ಅಮ್ಮ ಹೇಳಿದರೆ, ಆ ಮಗು, ‘ಇಲ್ಲ... ಟೀಚರ್ ನಮಗೆ ಹೀಗೇನೆ ಹೇಳ್ ಕೊಟ್ಟಿರೋದು, ನಾನು ಹಂಗೇನೇ ಬರಿಯೋದು’ ಎನ್ನುತ್ತದೆ. ಮಗು ತನ್ನ ಮಾತು ಕೇಳದೆ ಟೀಚರ್ ಹೇಳಿದ್ದೇ ಸರಿ ಎಂದೆನ್ನುತ್ತದಲ್ಲ ಎಂಬುದು ಅಸೂಯೆಗೂ ಕಾರಣವಾಗಿ ಟೀಚರ್​ಗೆ ಫೋನ್ ಮಾಡಿ ಜೋರು ಮಾಡುವುದೂ ಇದೆ. ಬಾಲ್ಯದಿಂದ ಪ್ರೌಢರಾಗುವವರೆಗೆ ತಾಯಿ-ತಂದೆ, ಶಿಕ್ಷಕರು, ನೆರೆ-ಹೊರೆಯವರು, ಸಂಬಂಧಿಕರು ಎಲ್ಲರೂ ಮಕ್ಕಳ ವ್ಯಕ್ತಿತ್ವ ರೂಪುಗೊಳ್ಳಲು ಕಾರಣರಾಗುತ್ತಾರೆ.

ಪರಿಸರ ಸಂರಕ್ಷಣೆ ಮಾಡಬೇಕಾದರೆ ಮೊದಲು ಆ ಜಾಗೃತಿ ಮೂಡಿಸುವ ಕೆಲಸವನ್ನು ಮಕ್ಕಳಲ್ಲಿ ಮಾಡಬೇಕು. ಯಾಕೆಂದರೆ ಹಿರಿಯರಾದವರು ‘ನಮ್ಮ ಕಾಲ ಆಗಿ ಹೋಯ್ತಲ್ಲ’ ಎನ್ನಬಹುದು. ಯುವಜನತೆ ನಮಗೆ ಇದ್ದಷ್ಟು ಸಾಕು ಎನ್ನುತ್ತ ಪರಿಸರ ಸಂರಕ್ಷಣೆ ಬಗ್ಗೆ ಹೆಚ್ಚಿನ ಕಾಳಜಿ ತೋರಲಾರರು. ತೋರಿದರೂ ಕೆಲ ಸಮಯಕ್ಕಷ್ಟೇ ಸೀಮಿತವಾಗಬಹುದು. ಆದರೆ ಮಕ್ಕಳಿಗೆ ಪರಿಸರ ಕಾಳಜಿ, ಸ್ವಚ್ಛತೆ, ಪ್ಲಾಸ್ಟಿಕ್ ನಿಷೇಧ- ಇಂಥ ಸಂಗತಿಗಳನ್ನು ಬಾಲ್ಯದಲ್ಲೇ ತಿಳಿಸಿಕೊಟ್ಟರೆ ಅವರು ನಿತ್ಯಜೀವನದಲ್ಲಿ ರೂಢಿಸಿಕೊಳ್ಳುತ್ತಾರೆ. ಬೋರ್ಡ್ ನೋಡಿ ಸ್ವಚ್ಛತೆ ಕಾಪಾಡುವ ಜನರಿಗಿಂತ ಭಿನ್ನವಾಗಿದ್ದಕೊಂಡು ಹೋದಲ್ಲಿ, ಬಂದಲ್ಲಿ ಎಲ್ಲ ಕಡೆಗಳಲ್ಲಿಯೂ ಸ್ವಚ್ಛತೆ, ಪರಿಸರ ಕಾಳಜಿಯಲ್ಲಿ ತೊಡಗಿಕೊಳ್ಳುತ್ತಾರೆ.

ಮಂಗಳೂರಿನ ಪರಿಚಯಸ್ಥ ಮಹಿಳೆಯೊಬ್ಬರು ಮಾತನಾಡುತ್ತಿರುವಾಗ, ಅವರ ಮಗಳ ಕುರಿತ ಕತೆಯೊಂದನ್ನು ಹೇಳಿದರು. ಅವರೊಮ್ಮೆ ಸಣ್ಣ ಅಂದರೆ 3-4 ವಯಸ್ಸಿನ ಮಗುವಿನೊಡನೆ ರಸ್ತೆ ಬದಿಯ ಪಾದಚಾರಿಮಾರ್ಗದಲ್ಲಿ ನಡೆದು ಹೋಗುತ್ತಿದ್ದರಂತೆ. ಆಗ ಅವರ ಎದುರುಗಡೆ ನಡೆಯುತ್ತಿದ್ದ ವ್ಯಕ್ತಿಯೊಬ್ಬರು ತಿಂಡಿ ತಿಂದು ಪ್ಲಾಸ್ಟಿಕ್ ಕವರನ್ನು ರಸ್ತೆಯಲ್ಲೇ ಹಾಕಿದರಂತೆ. ಅದನ್ನು ಕಂಡ ಮಗಳು, ‘ಅಂಕಲ್.. ಅಂಕಲ್..’ ಎಂದು ಕೂಗಿ, ‘ನೀವು ರಸ್ತೆಯಲ್ಲಿಯೇ ಕಸ ಹಾಕಬಹುದೇ? ಕಸದ ಬುಟ್ಟಿಗೆ ಹಾಕಬೇಕಲ್ಲವೇ?’ ಎಂದಳಂತೆ. ಆ ವೇಳೆ ಮಗುವಿನ ತಾಯಿಗೆ ಭಯವುಂಟಾಗಿ ಮಗಳ ಕೈ ಹಿಡಿದು ಹಿಂದಕ್ಕೆ ನಿಲ್ಲಿಸಲು ಯತ್ನಿಸಿದರು. ಯಾಕೆಂದರೆ ಆ ವ್ಯಕಿ ್ತ ಬಯ್ಯಬಹುದೇನೋ ಎಂದು ಗಾಬರಿಗೊಂಡರು. ಮಾತ್ರವಲ್ಲದೆ, ‘ಸ್ಸಾರಿ.. ಸರ್, ಮಗು ಏನೋ ಗೊತ್ತಿಲ್ಲದೆ ಹೇಳಿದೆ’ ಎಂದರಂತೆ. ಆಗ ಕಸ ಹಾಕಿದ ವ್ಯಕ್ತಿ, ‘ಛೆ.. ಛೆ.. ಮಗು ಸರಿಯಾಗಿಯೇ ಹೇಳಿದೆ. ತಪ್ಪು ನನ್ನದೇ. ಮಗುವಿಗೆ ಇರುವ ತಿಳಿವಳಿಕೆ ನನಗೆ ಇಲ್ಲದೆ ಹೋಯಿತಲ್ಲ’ ಎಂದು ಹೇಳಿ ಕೆಳಗೆ ಹಾಕಿದ್ದ ಪ್ಲಾಸ್ಟಿಕ್ ಕವರನ್ನು ಎತ್ತಿ ದೂರದಲ್ಲಿದ್ದ ಕಸದಬುಟ್ಟಿಗೆ ಹಾಕಿ ಮುನ್ನಡೆದರು. ಹಿರಿಯರು ಹೇಳಿದ್ದನ್ನು ಮಕ್ಕಳು ಬಲು ಬೇಗನೆ ಕಲಿಯುತ್ತಾರೆ ಹಾಗೂ ಬದುಕಿನಲ್ಲಿ ಅಳವಡಿಸಿಕೊಳ್ಳುತ್ತಾರೆ, ಇತರರಿಗೂ ತಿಳಿಸುತ್ತಾರೆ ಎಂಬುದನ್ನು ಈ ಸನ್ನಿವೇಶದ ಮೂಲಕ ತಿಳಿದುಕೊಳ್ಳಬಹುದು. ಹೀಗೆ ಮಕ್ಕಳಿಗೆ ಬಾಲ್ಯದಲ್ಲಿಯೇ, ಸದ್ವಿಚಾರಗಳನ್ನು ತಿಳಿಸಿಕೊಟ್ಟಲ್ಲಿ ಅವರು ಜೀವನದುದ್ದಕ್ಕೂ ಪಾಲಿಸುವ ಮುಂದಿನ ಪೀಳಿಗೆಗೂ ಸಂಸ್ಕೃತಿ, ಸಂಪ್ರದಾಯ, ಪರಂಪರೆ ಜ್ಞಾನ ಇತ್ಯಾದಿಗಳನ್ನು ಪಸರಿಸುತ್ತಾರೆ. ಪರಿಸರ ಸಂರಕ್ಷಣೆ, ಜಾಗೃತಿ ಕಾಳಜಿಯನ್ನು ತೋರುತ್ತಾರೆ. ಕೆಲವು ತಲೆಮಾರುಗಳ ಬಳಿಕ ಆ ಜಾಗೃತಿ ಹಾಗೂ ಕಾಳಜಿ ಎಲ್ಲರಲ್ಲೂ ಇರುತ್ತದೆ.

ಹುಟ್ಟುತ್ತ ಮಕ್ಕಳು, ಬೆಳೆಯುತ್ತ ದಾಯಾದಿಗಳು ಎಂಬ ಮಾತನ್ನು ಸಹೋದರ-ಸಹೋದರಿಯರ ಕಲಹಗಳ ಸಂದರ್ಭ ಹೆಚ್ಚಾಗಿ ಬಳಸಲಾಗುತ್ತದೆ. ಮಹಾಭಾರತದ ಪಾಂಡವರು ಮತ್ತು ಕೌರವರ ಜೀವನವನ್ನಾಧರಿಸಿ ಈ ಗಾದೆಮಾತು ಹುಟ್ಟಿರಬಹುದು. ಬಾಲ್ಯದಲ್ಲಿ ಆಟ-ತುಂಟಾಟಗಳನ್ನು ಮಾಡುತ್ತ ಪಾಂಡವರು-ಕೌರವರ ಬೆಳೆದ ಮಕ್ಕಳು ಪ್ರೌಢರಾದಾಗ ಬದ್ಧ ದ್ವೇಷಿಗಳಂತೆ ಭೂಮಿಗಾಗಿ ಕಾದಾಡುವಂತಾಯಿತು. ಮೋಹ, ಮದ, ಮತ್ಸರದಿಂದ ಕೌರವರು ಭೂಮಿ ಮಾತ್ರವಲ್ಲ ಜೀವವನ್ನೇ ಕಳೆದುಕೊಳ್ಳಬೇಕಾಗಿ ಬಂತು. ಈ ಮಾತು ಆ ಕಾಲಕ್ಕೆ ಮಾತ್ರ ಸೀಮಿತಗೊಳ್ಳದೆ ಈಗಿನ ಕಾಲಕ್ಕೂ ಅನ್ವಯವಾಗುವಂತೆ ಆಗಿದೆ. ಯಾಕೆಂದರೆ ಇಂದಿನ ದಿನಗಳಲ್ಲಿ ದ್ವೇಷ, ಕೊಲೆ, ಸುಲಿಗೆಗಳು ಮನೆಯೊಳಗೂ ಬಂದು ಸೇರಿಕೊಂಡಿವೆ. ಆಸ್ತಿ, ಹಣಕ್ಕಾಗಿ ಮನೆಯವರೇ ಹೊಡೆದಾಡಿಕೊಳ್ಳುವಂಥ ಸ್ಥಿತಿ ನಿರ್ವಣವಾಗಿದೆ. ಇವುಗಳಿಗೆ ಮುಖ್ಯಕಾರಣ ಶಿಕ್ಷಣ. ಶಿಕ್ಷಣವೆಂದರೆ ಪಠ್ಯಪುಸ್ತಕದ ಶಿಕ್ಷಣವಲ್ಲ. ಜೀವನ, ನೈತಿಕ ಮೌಲ್ಯಗಳ ಶಿಕ್ಷಣ ಕೊರತೆಯಿಂದಾಗಿ ಸಮಾಜದಲ್ಲಿ ಅಶಾಂತಿಗಳು ಸೃಷ್ಟಿಯಾಗುತ್ತಿವೆ ಎನ್ನಬಹುದು.

ಇತಿಹಾಸವನ್ನು ಅವಲೋಕಿಸಿದರೆ ಎಲ್ಲ ರೀತಿಯಲ್ಲೂ ನಾವಿಂದು ಬಹಳಷ್ಟು ಹಾದಿ ಕ್ರಮಿಸಿದ್ದೇವೆ. ಆದಿಮಾನವನಿಂದ ಮೊದಲುಗೊಂಡು ಇದೀಗ ಆಧುನಿಕ ಮಾನವರಾಗಿದ್ದೇವೆ. ಈ ಪಯಣ ಇನ್ನು ಮುಂದೆಯೂ ಬಹಳಷ್ಟು ಸಾಗಬೇಕಿದೆ. ನಮ್ಮೆಲ್ಲರ ಪಯಣ ಸುಖಮಯವಾಗಬೇಕಾದರೆ ನಾವು ಮಾತ್ರವಲ್ಲದೆ ನಮ್ಮ ಪರಿಸರವೂ ಸ್ವಸ್ಥವಾಗಿರಬೇಕು. ನಮ್ಮ ನಾಡು ಮಾತ್ರವಲ್ಲದೆ ನೆರೆ-ಹೊರೆಯ ರಾಷ್ಟ್ರಗಳೂ ಉತ್ತಮ ರೀತಿಯಲ್ಲಿ ಇರಬೇಕು. ಬಾಂಧವ್ಯಗಳು ಚೆನ್ನಾಗಿರಬೇಕು. ಹಾಗಾದಾಗ ಮಾತ್ರ ಅನಾಯಾಸವಾಗಿ ಮುನ್ನಡೆಯಬಹುದು. ಇಲ್ಲವಾದಲ್ಲಿ ಪರಿಸರ ಮಾಲಿನ್ಯ, ಯುದ್ಧ, ಆಕ್ರಮಣ ಇತ್ಯಾದಿಗಳೆಲ್ಲ ಮತ್ತೆ ಮತ್ತೆ ನಮ್ಮನ್ನು ಅವನತಿಯತ್ತ ಕೊಂಡೊಯ್ಯಬಹುದಾಗಿದ್ದು, ಸಾಕಷ್ಟು ಜಾಗೃತರಾಗಿ ಇರುವುದು ಅವಶ್ಯ. ವಿಪರೀತ ವಾಯುಮಾಲಿನ್ಯದಿಂದಾಗಿ ದೆಹಲಿಯಲ್ಲಿ ಎರಡು ದಿನಗಳ ಕಾಲ ಶಾಲೆಗಳಿಗೆ ರಜೆ ಸಾರಿದ್ದಾರೆ ಎಂಬ ಸುದ್ದಿಯನ್ನು ಓದಿ ನಿಜಕ್ಕೂ ಸಂಕಟವಾಯಿತು. ಮಾಲಿನ್ಯಗಳು ವಿಪರೀತವಾಗುತ್ತ ಹೋದರೆ ನಾವು, ನಮ್ಮ ಮುಂದಿನ ಪೀಳಿಗೆಗಳು ಈ ಭೂಮಿಯಲ್ಲಿ ಜೀವಿಸುವುದಾದರೂ ಹೇಗೆ? ಈ ಪರಿಸರ ಮಾನವ ಸಮೂಹಕ್ಕೆ ಮಾತ್ರವಲ್ಲ ಇಡೀ ಜೀವಸಂಕುಲಗಳಿಗೆ ಸೇರಿದ್ದು ಎಂಬುದನ್ನು ನೆನಪಿನಲ್ಲಿಟ್ಟುಕೊಂಡು ಪರಿಸರ ಸಂರಕ್ಷಣೆಗೆ ಒತ್ತು ನೀಡೋಣ. ಮಕ್ಕಳನ್ನು ಪರಿಸರ ಸಂರಕ್ಷಣಾ ಯೋಧರನ್ನಾಗಿಸೋಣ. ಸದ್ವಿಚಾರಗಳನ್ನು ತಿಳಿಸಿಕೊಟ್ಟು ಅವರನ್ನೇ ಅಮೂಲ್ಯ ಸಂಪತ್ತಾಗಿ ಮಾಡೋಣ.

(ಲೇಖಕರು ಶ್ರೀಕ್ಷೇತ್ರ ಧರ್ಮಸ್ಥಳದ ಧರ್ವಧಿಕಾರಿಗಳು)