ಅಂಕಣ

ಸ್ವರ್ಗ ಎಂಬ ಮರೀಚಿಕೆ: ಮನೋಲ್ಲಾಸ

| ಬೇಲೂರು ರಾಮಮೂರ್ತಿ

ಅಂದಿನ ಗುರುಕುಲದಲ್ಲಿ ಪಾಠದ ನಡುವೆ ಗರುಗಳು ಶಿಷ್ಯರನ್ನುದ್ದೇಶಿಸಿ ‘ನಿಮ್ಮಲ್ಲಿ ಯಾರ್ಯಾರಿಗೆ ಸ್ವರ್ಗದಲ್ಲಿರಲು ಇಷ್ಟ’ ಅಂತ ಕೇಳಿದಾಗ ಶಿಷ್ಯರಿಗೆಲ್ಲ ಅಚ್ಚರಿ. ಸ್ವರ್ಗವನ್ನು ಬಯಸದವರಾರು? ನರಕವನ್ನು ಯಾರಾದರೂ ಇಚ್ಛಿಸುತ್ತಾರೆಯೇ? ಎಲ್ಲರಿಗೂ ಸ್ವರ್ಗ ಬೇಕಲ್ಲವೇ ಅಂತ ಮನಸಿನಲ್ಲಿಯೇ ಅಂದುಕೊಳ್ಳುತ್ತಿರುವಾಗ ಒಬ್ಬ ಶಿಷ್ಯ ‘ಗುರುಗಳೇ ನನಗೇನೋ ಸ್ವರ್ಗದಲ್ಲಿರಲು ಇಷ್ಟ. ಆದರೆ ಅದು ಸತ್ತ ಮೇಲಲ್ಲವೇ. ಸತ್ತ ಮೇಲೆ ನಾನು ಸ್ವರ್ಗದಲ್ಲಿದ್ದೇನೋ ನರಕದಲ್ಲಿದ್ದೇನೋ ಅಂತ ಇಲ್ಲಿನವರಿಗೆ ಹೇಗೆ ಹೇಳುವುದು’ ಅಂದ. ಆಗ ಗುರುಗಳು ‘ನೀವು ಸ್ವರ್ಗದಲ್ಲಿರಲು ಸಾಯಲೇಬೇಕು ಎಂದು ಯಾರು ಹೇಳಿದರು’ ಎಂದು ಕೇಳಿದಾಗ ಶಿಷ್ಯರಿಗೆ ಮತ್ತಷ್ಟು ಅಚ್ಚರಿ.

ಗುರುಗಳಿಂದ ಸ್ವರ್ಗದ ವಿಳಾಸ ತಿಳಿದು ನೇರ ಅಲ್ಲಿಗೆ ಹೊರಟುಬಿಡೋಣ, ಮತ್ತೆ ಈ ಗುರುಕುಲಕ್ಕೂ ಬರುವುದು ಬೇಡ ಅಂತ ಅನೇಕ ಶಿಷ್ಯರ ಮನಸಿನಲ್ಲಿ ಮೂಡಿತು. ಎಲ್ಲ ಶಿಷ್ಯರ ಮುಖದಲ್ಲಿದ್ದ ಕುತೂಹಲವನ್ನು ಗಮನಿಸಿದ ಗುರುಗಳು ‘ನೋಡಿ, ಸ್ವರ್ಗ ಅಲ್ಲೆಲ್ಲೋ ದೂರದಲ್ಲಿದೆ ಅಂದುಕೊಂಡರೆ ಅದು ದೂರದಲ್ಲೇ ಇರುತ್ತದೆ. ಸ್ವರ್ಗ ಇಲ್ಲೇ ಇದೆ ಎಂದುಕೊಂಡರೆ ಅದು ಇಲ್ಲೇ ಇರುತ್ತದೆ. ಅಷ್ಟಕ್ಕೂ ಸ್ವರ್ಗ ಅಂದರೆ ಏನೆಂದುಕೊಂಡಿರಿ. ಮನಸಿನ ಸಂತೋಷದ ಭಾವನೆಯೇ ಸ್ವರ್ಗ. ನಿಮ್ಮ ಆಸೆ, ದುರಾಸೆ, ದುಗುಡ, ಕೋಪ, ಸಿಟ್ಟು, ದ್ವೇಷ ಇವೆಲ್ಲಾ ನರಕಗಳು. ಮನಸು ಸಂತೋಷವಾಗಿರಬೇಕು ಎಂದರೆ ಮೊದಲು ಮನಸು ತಿಳಿಯಾಗಿರಬೇಕು. ಅದು ತಿಳಿಯಾಗಿರುವಂತಹ ಆಲೋಚನೆಗಳನ್ನೇ, ಮತ್ತು ಕೆಲಸಗಳನ್ನೇ ನಾವು ಮಾಡಬೇಕು. ಸದಾ ಸಮಾಜಮುಖಿ ಚಿಂತನೆಗಳನ್ನು ಅಳವಡಿಸಿಕೊಳ್ಳಿ, ದಿನಕ್ಕೆ ಒಬ್ಬರಿಗಾದರು ಉಪಕಾರ ಮಾಡಿ, ಒಂದು ಹಸಿದ ಹೊಟ್ಟೆಯನ್ನಾದರೂ ತುಂಬಿಸಿ, ಒಂದು ಹುಡುಗನ ಓದಿಗೆ ಸಹಾಯ ಮಾಡಿ, ಬೇಡಿ ಬಂದವರನ್ನು ಬರಿಗೈಯಲ್ಲಿ ಕಳಿಸಬೇಡಿ. ಇಂಥಾ ಕೆಲಸಗಳನ್ನೆಲ್ಲಾ ಮಾಡುವಾಗ ನೀವು ಸತ್ಪಾತ್ರರಿಗೇ ಸಹಾಯ ಮಾಡುತ್ತಿದ್ದೀನಿ ಎನ್ನುವುದನ್ನು ಖಚಿತಪಡಿಸಿಕೊಳ್ಳಿ. ನಿಮ್ಮ ಸಹಾಯ ಇನ್ನೊಬ್ಬರಲ್ಲಿ ಸೋಮಾರಿತನವನ್ನು ಹುಟ್ಟುಹಾಕಬಾರದು. ಎಲ್ಲರೂ ಕಷ್ಟಪಟ್ಟು ದುಡಿಯಬೇಕು. ಆದರೆ, ಕಷ್ಟಪಟ್ಟು ದುಡಿದರೂ ನೆಮ್ಮದಿಯ ಬಾಳು ಸಿಗದವರಿಗೆ ನಿಮ್ಮ ಸಹಾಯ ಅಗತ್ಯ.

ಎಲ್ಲಕ್ಕಿಂತ ಮುಖ್ಯವಾಗಿ ಅವರಿವರನ್ನು ನೋಡಿ, ಅವರ ಅಂತಸ್ತು, ಕೀರ್ತಿ, ಶ್ರೀಮಂತಿಕೆಯನ್ನು ಕಂಡು ಅಸೂಯೆ ಪಡುವುದನ್ನು ಬಿಡಿ. ಆಗ ನೋಡಿ ಸ್ವರ್ಗ ನಿಮ್ಮ ಕಾಲಡಿಯಲ್ಲೇ ಇರುತ್ತದೆ. ನಿಮ್ಮ ನಾಳೆ ಪ್ರಾರಂಭವಾಗಬೇಕಾಗಿರುವುದು ಇಂಥಾ ಚಿಂತನೆಗಳಿಂದ’ ಎಂದು ಗುರುಗಳು ಅಂದಿನ ಪಾಠವನ್ನು ಮುಗಿಸಿದರು. ಸ್ವರ್ಗ ಎಲ್ಲೋ ಇದೆ ಅಂದುಕೊಂಡಿದ್ದ ಶಿಷ್ಯರಿಗೆ ಗುರುಗಳು ಸ್ವರ್ಗ ಎಲ್ಲೂ ಇಲ್ಲ ಇಲ್ಲೇ ಇದೆ ಎಂದು ತೋರಿಸಿಕೊಟ್ಟಿದ್ದು ಸಂತೋಷ ತಂದಿತ್ತು. ಗುರುಗಳು ಹೇಳಿದ ಆದರ್ಶಗಳ ದಾರಿಯಲ್ಲಿ ಹೆಜ್ಜೆಯಿಡಲು ನಿರ್ಧರಿಸಿದರು.

(ಲೇಖಕರು ಸಾಹಿತಿ)