ಅಂಕಣ

ಲೋಕಹಿತದ ಬೆಳಕು ತರಲಿ ಈ ದೀಪಾವಳಿ

ಬದುಕನ್ನು ಸುಖಮಯಗೊಳಿಸಿ ಸುಂದರವಾಗಿ ಜೀವಿಸುವುದು ಅಥವಾ ನರಕವಾಗಿಸಿಕೊಳ್ಳುವುದು ಎರಡೂ ನಮ್ಮ ಕೈಯಲ್ಲಿದೆ. ನಮ್ಮ ಬದುಕು ನರಕವಾಗಿದ್ದರೆ ಅದಕ್ಕೆ ನಾವೇ ಹೊಣೆ. ಸಂಜೆ ಹೊತ್ತು ಅಂಧಕಾರ ವ್ಯಾಪಿಸುತ್ತಿದ್ದಂತೆ ದೀಪ ಬೆಳಗಿಸಿ ಕತ್ತಲನ್ನು ಹೋಗಲಾಡಿಸಿದಂತೆ, ಮನಸ್ಸಿನ ಅಂಧಕಾರವನ್ನು ಸುಜ್ಞಾನ ದೀಪದ ಮೂಲಕ ಹೋಗಲಾಡಿಸಬೇಕು.

ದೀಪಾವಳಿ ದೀಪಗಳ ಹಬ್ಬ. ಎಲ್ಲೆಲ್ಲೂ ದೀಪಗಳದ್ದೇ ಆವಳಿ, ಸಂಭ್ರಮ, ಸಡಗರ. ಇದು ನಮ್ಮ ಸನಾತನ ಸಂಸ್ಕ ೃಯ ಪ್ರತೀಕವಾಗಿದೆ. ನಮ್ಮ ಸಂಸ್ಕ ೃಯ ಪ್ರಕಾರ ಚೈತ್ರ ವೈಶಾಖಗಳ ವಸಂತವನ್ನು ಋತುರಾಜ ಎಂದು ಕರೆಯುತ್ತೇವೆ. ಆಶ್ವಿಜ-ಕಾರ್ತಿಕಗಳ ಶರದೃತು ಹಬ್ಬ ಹರಿದಿನಗಳ ಕಾಲ. ಶರದೃತುವಿನಲ್ಲಿ ಪ್ರಕೃತಿ ಹಚ್ಚ ಹಸಿರಾಗಿ ನಳನಳಿಸುವ ಕಾಲ. ಅಂತೆಯೇ ಸಂಪತ್ತನ್ನು ಸೂಚಿಸುವ ಕಾಲ. ಅಂಧಕಾರ ಹೋಗಲಾಡಿಸಿ ಬೆಳಕನ್ನು ಚೆಲ್ಲುವ ಕಾಲ. ಶರದೃತುವಿನ ಆಶ್ವಿಜದಲ್ಲಿ ದೀಪಾವಳಿ ಹಬ್ಬ ಹರಿದಿನಗಳು ಮೊದಲ್ಗೊಂಡು ಕಾರ್ತಿಕ ಮಾಸದಲ್ಲಿ ದೀಪೋತ್ಸವದ ಪರ್ವಕಾಲ. ದೀಪಾವಳಿ ಹಬ್ಬವನ್ನು ದೇಶದೆಲ್ಲೆಡೆ ವಿವಿಧ ರೂಪದಲ್ಲಿ ಬಹಳ ಶ್ರದ್ಧಾ-ಭಕ್ತಿಯಿಂದ ಆಚರಿಸಲಾಗುತ್ತದೆ. ವಿಶ್ವದಾದ್ಯಂತವೂ ದೀಪಾವಳಿಯನ್ನು ಅರ್ಥಪೂರ್ಣವಾಗಿ ಸಂಭ್ರಮದಿಂದ ಆಚರಿಸುವ ಸಂಪ್ರದಾಯ ಬೆಳೆದಿದೆ.

ಪುರಾಣೇತಿಹಾಸದ ಪ್ರಕಾರ ದೌರ್ಜನ್ಯ, ದುಷ್ಟತ್ವ, ರಾಕ್ಷಸೀ ಪ್ರವೃತ್ತಿಗಳ ಪ್ರತಿನಿಧಿಯಾದ ರಾವಣಾಸುರನನ್ನು ಭಗವಾನ್ ಶ್ರೀರಾಮಚಂದ್ರನು ಸಂಹರಿಸಿದ ಬಳಿಕ ಅಯೋಧ್ಯೆಗೆ ಹಿಂದಿರುಗಿದಾಗ, ಜನರು ಸಂಭ್ರಮದಿಂದ ದೀಪಗಳ ಸರಮಾಲೆಯನ್ನು ಹಚ್ಚಿಡುವ ಸಂಪ್ರದಾಯವನ್ನು ಆರಂಭಿಸಿ ದೀಪಾವಳಿ ಆಚರಿಸಿದರು. ಈ ಮೂಲಕ ದುಷ್ಟ ನಿಗ್ರಹದ, ಶಿಷ್ಟ ರಕ್ಷಣೆಯ ಬೆಳಕು ಹೊಮ್ಮಿತು. ಸಜ್ಜನರೆಲ್ಲರನ್ನೂ ಕಾಡುತ್ತಿದ್ದ ನರಕಾಸುರನನ್ನು ಭಗವಾನ್ ಶ್ರೀಕೃಷ್ಣನು ನಿಗ್ರಹಿಸಿದ ಕೃತಜ್ಞತೆಯ ದ್ಯೋತಕವಾಗಿ ಮನೆ-ಮನೆಗಳನ್ನು ಸಿಂಗರಿಸಿ, ಸಾಲು-ದೀಪಗಳನ್ನು ಬೆಳಗಿಸಿ ಸಂಭ್ರಮಿಸುವ ಪರಂಪರೆ ಆರಂಭವಾಯಿತು ಎನ್ನಲಾಗಿದೆ. ಅಲ್ಲದೆ ಭಾಗವತ ಪುರಾಣದ ಪ್ರಕಾರ ಕಾರ್ತಿಕ ಶುಕ್ಲಪಾಡ್ಯಮಿಯಂದು ಶ್ರೀಕೃಷ್ಣನು ಗೋವರ್ಧನ ಗಿರಿಯನ್ನು ಎತ್ತಿ ಹಿಡಿದು ಬೃಂದಾವನದ ನಿವಾಸಿಗಳನ್ನು, ಗೋಪಾಲಕರನ್ನು, ಗೋವುಗಳನ್ನು ರಕ್ಷಿಸಿ ಇಂದ್ರನ ಸೊಕ್ಕಡಗಿಸಿದ ದಿನ ಎಂದು ಹೇಳಲಾಗಿದೆ. ಭಗವಾನ್ ಶ್ರೀಮಹಾವೀರ ತೀರ್ಥಂಕರರು ವಿರಕ್ತರಾದ ಬಳಿಕ ಸುದೀರ್ಘಕಾಲ ತಪಗೈದು, ‘ಕೇವಲ ಜ್ಞಾನ’ವನ್ನು ಪಡೆದು ಇಡೀ ಪ್ರಪಂಚಕ್ಕೇ ಕರ್ಮಬಂಧನದಿಂದ ಮುಕ್ತರಾಗುವ ದಾರಿಯನ್ನು ತೋರಿಸಿ, ಬಿಹಾರದ ಪಾವಾಪುರಿಯಲ್ಲಿ ಮುಕ್ತರಾದಾಗ: ‘ನಿರ್ವಾಣ ಕಲ್ಯಾಣ’ ಪಡೆದ ಸಂತಸ-ಸಂಭ್ರಮಗಳ ಸಂಕೇತವಾಗಿ ದೀಪಗಳ ಸಾಲು-ಸಾಲು ಹಚ್ಚಿಟ್ಟು ಕತ್ತಲೆಯನ್ನು ನಿವಾರಿಸಿ, ಪುನೀತ-ಪ್ರಕಾಶದ ದಿವ್ಯಕಿರಣಗಳನ್ನು ವಿಸ್ತರಿಸುವ ಪುಣ್ಯಕರ ಸಂಪ್ರದಾಯ ಆರಂಭವಾಯಿತೆನ್ನಲಾಗಿದೆ.

‘ಧರ್ಮ ಸಂಸ್ಥಾಪನಾರ್ಥಾಯ ಸಂಭವಾಮಿ ಯುಗೇ ಯುಗೇ’ ಎಂದು ಭಗವಂತನ ಊವಾಚದಂತೆ ಕಷ್ಟ-ಸಂಕಟ-ವಿಪತ್ತುಗಳು ಬಂದಾಗಲೆಲ್ಲ ಸಜ್ಜನರೂ, ಸಾತ್ವಿಕರೂ ಸಂಪೂರ್ಣ ಶರಣಾಗತಿಯಿಂದ ಭಗವಂತನಿಗೆ ಮೊರೆಯಿಟ್ಟಾಗ ಭಗವಂತನು ಯಾವುದೋ ಒಂದು ರೂಪದಿಂದ ಅನುಗ್ರಹಿಸಿ ಕಷ್ಟ ನಿವಾರಣೆ ಮಾಡಿ ಸಜ್ಜನರ ಬದುಕಿಗೆ ಬೆಳಕಾಗಿದ್ದಾನೆ ಎಂಬ ಗಾಢವಾದ ನಂಬಿಕೆಯೇ ನಮ್ಮ ಬದುಕಿಗೆಲ್ಲ ನೆರವಾಗಿದೆ. ಮುಂದೆಯೂ ನೆರವಾಗಲೆಂಬ ಹಂಬಲದಿಂದ, ಕೃತಜ್ಞತೆಯ ಪ್ರತೀಕವಾಗಿ ಭಗವಂತನ ಸನ್ನಿಧಿಯಲ್ಲಿ ಲಕ್ಷ-ಕೋಟಿ-ಜನರ ಪರವಾಗಿ ಲಕ್ಷ-ಲಕ್ಷ ದೀಪಗಳನ್ನು ಭಕ್ತಿಯಿಂದ ಹಚ್ಚಿಟ್ಟು ಸಂಭ್ರಮಿಸುವ ಪರಂಪರೆ ನಮ್ಮಲ್ಲಿ ನಡೆದುಕೊಂಡು ಬಂದಿದೆ. ಕತ್ತಲೆ ಎಂಬ ಭಯ ಹೋಗಲಾಡಿಸಿ ಬೆಳಕೆಂಬ ಆಶಾಕಿರಣದ ಅಭಯ ನೀಡುವ ಹಬ್ಬವೇ ದೀಪಾವಳಿ.

ಇನ್ನು ಜಾನಪದೀಯವಾಗಿ ದೀಪಾವಳಿಯನ್ನು ವಿಭಿನ್ನವಾಗಿ ನಾಡಿನೆಲ್ಲೆಡೆ ಆಚರಿಸುತ್ತಾರೆ. ಆದಿ ಮಾನವನಾಗಿದ್ದ ಮನುಷ್ಯ ಆಧುನಿಕ ಮಾನವನಾಗಿ ಬೆಳೆದು ಬಂದ ಬಗೆ ವಿಸ್ಮಯ. ನಿಸರ್ಗದೊಂದಿಗೆ ಬದುಕುತ್ತ, ಬದಲಾವಣೆಯ ಗಾಳಿ ಬೀಸುತ್ತ, ಅನೇಕ ಮಾರ್ಪಾಡುಗಳನ್ನು ಕಂಡು ನಿಸರ್ಗದ ಆಗು-ಹೋಗುಗಳಿಗೆ ಕಾರಣಗಳೇನು, ಧಾರ್ವಿುಕ ಹಾಗೂ ವೈಜ್ಞಾನಿಕ ಕಾರಣಗಳನ್ನು ಕಂಡುಕೊಳ್ಳುವ ಮನುಷ್ಯನ ನಂಬಿಕೆಯಿಂದ ಹುಟ್ಟಿಕೊಂಡ ಹಬ್ಬಗಳು ಇಂದು ಜನಜೀವನದಲ್ಲಿ ಹಾಸುಹೊಕ್ಕಾಗಿವೆ. ದೀಪಾವಳಿ ಇಂತಹ ಹಬ್ಬಗಳಲ್ಲಿ ಒಂದಾಗಿದೆ.

ಗ್ರಾಮೀಣ ಸೊಗಡಿನ ದೀಪಾವಳಿಯಿಂದ ಆಧುನಿಕ ಕಾಲದ ಆಚರಣೆ, ಸುಡುಮದ್ದು ಪ್ರದರ್ಶನದವರೆಗೆ ದೀಪಾವಳಿ ಹಬ್ಬದ ಆಚರಣೆ ಬದಲಾಗಿದೆ. ಆದಿ ಮಾನವನಾಗಿ ಜೀವಿಸುತ್ತಿದ್ದ ಮನುಷ್ಯನು ಗೆಡ್ಡೆ-ಗೆಣಸುಗಳನ್ನು ತಿಂದು ಬದುಕುತ್ತಿದ್ದ ಸಂದರ್ಭದಲ್ಲಿ ಮೊದಲಿಗೆ ಬೆಂಕಿ ಆವಿಷ್ಕರಿಸಿದ. ಬೆಂಕಿಯನ್ನು ಕಂಡು ಹಿಡಿದ ಬಳಿಕ ಆದಂತಹ ಬದಲಾವಣೆ ಮತ್ತು ಬೆಳಕನ್ನು ಆವಿಷ್ಕರಿಸಿದ ನೆನಪಿಗಾಗಿ ದೀಪಾವಳಿ ಆಚರಣೆಗೆ ಬಂತು ಎನ್ನುವುದು ಒಂದು ಪ್ರತಿಪಾದನೆಯಾಗಿದೆ.

ಭೂಮಿಗೆ ಸಂಬಂಧಿಸಿ ದೀಪಾವಳಿಯನ್ನು ಹಬ್ಬವಾಗಿ ಆಚರಿಸುತ್ತಾರೆ. ಆ ಆಚರಣೆಗೆ ‘ಕೌಮುದ ಮಹೋತ್ಸವ’ ಎಂದು ಹೆಸರಿಟ್ಟಿದ್ದಾರೆ. ‘ಕೌ’ ಎಂದರೆ ‘ಭೂಮಿ’- ‘ಮುದ’ ಎಂದರೆ ‘ಸಂತೋಷದ ಸಮಯ’ ಎಂದರ್ಥ, ಆಶ್ವಿಜ ಮಾಸ ಈ ಸಮಯದಲ್ಲಿ ಭೂಮಿ ತಾಯಿಯು ದವಸ-ಧಾನ್ಯಗಳಿಂದ ಮೈದುಂಬಿ ರೈತರ ಬಾಳಿಗೆ ಬೆಳಕಾಗುತ್ತಾಳೆ. ರೈತರ ಶ್ರಮಕ್ಕೆ ಫಲ ದೊರೆಯುವ ಸಂತೋಷದ ಸಮಯ ಎಂಬ ಸಂಕೇತದೊಂದಿಗೆ ‘ಭೂ’ತಾಯಿಯನ್ನು ಪೂಜಿಸುವ ಹಬ್ಬ ದೀಪಾವಳಿ.

ದೀಪಾವಳಿ ಹಬ್ಬದ ಸಂದರ್ಭ ತಿಪ್ಪೇದೇವರನ್ನು ಪೂಜಿಸುವ ವಿಶಿಷ್ಟ ಸಂಪ್ರದಾಯ ಕೆಲವು ಗ್ರಾಮೀಣ ಪ್ರದೇಶದಲ್ಲಿದೆ. ಮುಸ್ಸಂಜೆ ವೇಳೆ ‘ತಿಪ್ಪೆ ಪೂಜೆ’ ಮಾಡುತ್ತಾರೆ. ತಿಪ್ಪೆ ಅಂದರೆ ಗೊಬ್ಬರ ಗುಂಡಿ. ಇದನ್ನು ತಿಪ್ಪೇದೇವರು ಎಂದು ಕರೆದು ಗೌರವಿಸುತ್ತಾರೆ. ಈ ತಿಪ್ಪೆ ಗುಂಡಿಗೆ ಹೂವು, ಮಂತ್ರಾಕ್ಷತೆಗಳನ್ನು ಇಟ್ಟು ಮಂಗಳಾರತಿ ಎತ್ತಿ ಪೂಜಿಸುತ್ತಾರೆ. ಹೊಲಗದ್ದೆಗಳಲ್ಲಿ ಬಳಸುವ ಪರಿಕರಗಳನ್ನು ತೊಳೆದು ಶುಚಿ ಮಾಡಿ ಪೂಜೆ ಸಲ್ಲಿಸಲಾಗುತ್ತದೆ. ಗೋಪೂಜೆಯನ್ನು ಮಾಡಲಾಗುತ್ತದೆ.

ದಕ್ಷಿಣ ಕನ್ನಡ, ಉಡುಪಿ ಕಡೆಗಳಲ್ಲಿ ದೀಪಾವಳಿಯನ್ನು ‘ಬಲಿಪಾಡ್ಯ ಹಬ್ಬ’ ಎಂದು ಕರೆಯುತ್ತಾರೆ. ಪಾತಾಳದಲ್ಲಿರುವ ಬಲೀಂದ್ರನನ್ನು ಭೂಮಿಗೆ ಆಹ್ವಾನಿಸುವ ಹಬ್ಬವಾಗಿದೆ. ಮಲೆನಾಡಿನಲ್ಲಿ ‘ಅಂಟಿಗೆ-ಪಿಂಟಿಗೆ’ ಎಂಬ ಹೆಸರಲ್ಲೂ, ಕೆಲವು ಜನಾಂಗದವರು ‘ಬೂರೆ ಹಬ್ಬ’ ಎಂದೂ ಆಚರಿಸುತ್ತಾರೆ. ಹಬ್ಬದ ದಿನದ ಕೆಲವೆಡೆ ಅನೇಕ ಕ್ರೀಡಾಕೂಟಗಳನ್ನು ಆಯೋಜಿಸುತ್ತಾರೆ. ನೂತನ ವಧು-ವರರಿಗೆ ಮೊದಲ ವರ್ಷದ ದೀಪಾವಳಿ ಹಬ್ಬವನ್ನು ಮಾವನ ಮನೆಯಲ್ಲಿ ಆಚರಿಸುವ ಪದ್ಧತಿಯೂ ಇದೆ. ಹೊಸ ಅಳಿಯಂದಿರಿಗೆ ‘ಅಳಿಯನ ಹಬ್ಬ’ವೇ ಆಗಿರುವ ದೀಪಾವಳಿ ಹಬ್ಬದಂದು ಅಳಿಯಂದಿರನ್ನು ‘ಬಲೀಂದ್ರ’ರೆಂದೇ ಪರಿಗಣಿಸಿ ಸ್ವಾಗತಿಸುವ ಪದ್ಧತಿಯೂ ಇದೆ. ಮನೆಗೆ ಬರುವ ಅಳಿಯ ಮತ್ತು ಮಗಳನ್ನು ಮುಂಬಾಗಿಲಿನಲ್ಲಿ ನಿಲ್ಲಿಸಿ ದೃಷ್ಟಿ ತೆಗೆದು, ಆರತಿ ಮಾಡಿ ‘ಬಲೀಂದ್ರ’ ತಮ್ಮ ಮನೆಗೆ ಬಂದನೆಂದು ಭಾವಿಸಿ ಮನೆಮಂದಿ ಎಲ್ಲ ‘ಹಾಲು ಹಳ್ಳವಾಗಲಿ, ಬೆಣ್ಣೆ ಬೆಟ್ಟವಾಗಲಿ...’ ಎಂದು ಹಾಡಿ ಅಳಿಯಂದಿರು-ಮಗಳನ್ನು ವಿಶೇಷವಾಗಿ ಸತ್ಕರಿಸುವ ಪ್ರತೀತಿ ಇದೆ.

ಹೀಗೆ ದೀಪಾವಳಿಯ ಮೂರು ದಿನಗಳ ಕಾಲವನ್ನು ಆಯಾಯ ಪ್ರಾಂತ್ಯದ ಜನಜೀವನ, ಸಂಸ್ಕ ೃ, ಸಂಪ್ರದಾಯದಂತೆ ನಾಡಿನೆಲ್ಲೆಡೆ ಆಚರಿಸುತ್ತಾರೆ. ಬಹು ಸಂಸ್ಕ ೃಯ ಹಬ್ಬವಾಗಿ ಮೇಳೈಸಿದೆ. ಒಟ್ಟಿನಲ್ಲಿ ಸಂತೋಷ, ಸುಖ, ನೆಮ್ಮದಿ, ಶಾಂತಿಗೆ ದ್ಯೋತಕವಾದ ಈ ಹಬ್ಬ ತನ್ನ ವಿಶಿಷ್ಟತೆ ಮೂಲಕ ಜನಪ್ರಿಯಗೊಂಡಿವೆ.

‘ಅಪರಿಮಿತದ ಕತ್ತಲೆಯೊಳಗೆ ವಿಪರೀತದ ಬೆಳಗನಿಕ್ಕಿದವರಾರೋ? ಬೆಳಗೂ ಅದೆ, ಕತ್ತಲೆಯೂ ಅದೆ ಇದೇನು ಚೋದ್ಯವೋ?’ ಎಂದು ಅಲ್ಲಮಪ್ರಭು ತಮ್ಮ ವಚನವೊಂದರಲ್ಲಿ ಉಲ್ಲೇಖಿಸಿದ್ದಾರೆ. ಈ ವಚನದಲ್ಲಿ ಕತ್ತಲೆ ಮತ್ತು ಬೆಳಕಿನ ಬಗ್ಗೆ ಒಂದು ವಿಶೇಷವಾದ ಚಿಂತನೆ ಮಾಡಿದ್ದಾರೆ. ಕತ್ತಲೆ ಒಳಗೆ ಬೆಳಕನ್ನಿಟ್ಟ ಬಗ್ಗೆ ನುಡಿದಿದ್ದಾರೆ. ‘ಕತ್ತಲೆಯಲಿ ಬೆಳಕೋ-ಬೆಳಕಲ್ಲಿ ಕತ್ತಲೋ’ ಎಂದು ಹೇಳಿದ್ದನ್ನು ನಮ್ಮನ್ನು ಚಿಂತನೆಗೆ ಎಡೆ ಮಾಡಿಕೊಡುತ್ತದೆ.

ದುಷ್ಟಶಕ್ತಿಯ ಸಂಕೇತವಾದ ಕತ್ತಲೆಯನ್ನು ಜಯಿಸಿ ಬೆಳಕನ್ನು ಹರಿಸುವ ದೀಪವನ್ನು ಬೆಳಗುವುದು ನಮ್ಮ ಸಂಸ್ಕ ೃಯಲ್ಲಿ ಮಿಳಿತವಾಗಿದೆ. ದೀಪವನ್ನು ಶುದ್ಧ ಮನಸ್ಸಿನಿಂದ ಹಚ್ಚಿ ದೇವರಿಗೆ ಕೈ ಮುಗಿದು ದೀಪಕ್ಕೂ ನಮಸ್ಕರಿಸುತ್ತೇವೆ. ‘ತಮಸೋ ಮಾ ಜ್ಯೋತಿರ್ಗಮಯ ಮೃತ್ಯೋರ್ವ ಅಮೃತಂಗಮಯ!’ ಎಂದೇ ಬೆಳಕನ್ನು ಆರಾಧಿಸುತ್ತೇವೆ. ಬೆಳಕು ಹರಿದ ಮೇಲೆ ಕತ್ತಲೆ, ಕತ್ತಲೆಯಾದ ಮೇಲೆ ಮತ್ತೆ ಬೆಳಕು. ಇದು ಜಗದ ನಿಯಮ. ಕೆಲವರಿಗೆ ಇದು ನಿತ್ಯದ ಸ್ವಾಭಾವಿಕ ಪ್ರಕ್ರಿಯೆಯಾದರೆ ಕೆಲವರು ಇದರಲ್ಲಿ ದೈವತ್ವವನ್ನು ಕಾಣುತ್ತಾರೆ. ಹೀಗೆ ಮನುಷ್ಯರಲ್ಲೂ ನಾವು ದೈವತ್ವವನ್ನು ಕಾಣುತ್ತೇವೆ. ಕೆಲವರನ್ನು ದುರಳರು, ಅಸುರಿ ಸ್ವಭಾವದವರು ಎನ್ನುತ್ತೇವೆ. ಇನ್ನೂ ಕೆಲವರು ದೇವತಾ ಮನುಷ್ಯರು, ದೈವತ್ವಕ್ಕೆ ಏರಿದವರು ಎಂದು ಪೂಜಿಸುತ್ತೇವೆ. ಮನುಷ್ಯನ ಮನಸ್ಸಿನಲ್ಲಿ ಸುವಿಚಾರವೂ ಅಡಗಿದೆ, ಕೆಟ್ಟ ಆಲೋಚನೆಗಳೂ ಅಡಗಿವೆ. ಅಂತರಂಗವನ್ನು ಸರಿಯಾಗಿ ಅರಿಯಲು ನಮಗೆ ಏಕಾಗ್ರತೆ ಎಂಬ ಚಿತ್ತ ಬೇಕು. ಬದುಕನ್ನು ಸುಖಮಯಗೊಳಿಸಿ ಸುಂದರವಾಗಿ ಜೀವಿಸುವುದು ಅಥವಾ ನರಕವಾಗಿಸಿಕೊಳ್ಳುವುದು ಎರಡೂ ನಮ್ಮ ಕೈಯಲ್ಲಿದೆ. ನಮ್ಮ ಬದುಕು ನರಕವಾಗಿದ್ದರೆ ಅದಕ್ಕೆ ನಾವೇ ಹೊಣೆಯೇ ಹೊರತು ಬೇರೆ ಯಾರೂ ಅಲ್ಲ. ಸಂಜೆ ಹೊತ್ತು ಅಂಧಕಾರ ವ್ಯಾಪಿಸುತ್ತಿದ್ದಂತೆ ದೀಪ ಬೆಳಗಿಸಿ ಕತ್ತಲನ್ನು ಹೋಗಲಾಡಿಸಿದಂತೆ, ಮನಸ್ಸಿನ ಅಂಧಕಾರವನ್ನು ಸುಜ್ಞಾನ ದೀಪದ ಮೂಲಕ ಹೋಗಲಾಡಿಸಬೇಕು.

ಸುಖ, ಸಂತೋಷ, ನೆಮ್ಮದಿ, ಪ್ರೀತಿ-ವಾತ್ಸಲ್ಯ ತುಂಬಿದ್ದರೆ ನಿತ್ಯವೂ ಬದುಕಿನಲ್ಲಿ ಹಬ್ಬವೇ ಆಗಿರುತ್ತದೆ. ಇಂತಹ ಹಬ್ಬ ಆಚರಣೆಗಳು ನಮ್ಮ ಯಾಂತ್ರಿಕ ಜೀವನಕ್ಕೆ ಚೈತನ್ಯವನ್ನು ಒಗಿಸುತ್ತವೆ. ಇಂದಿನ ದಿನಗಳಲ್ಲಿ ಹಬ್ಬವೆಂದರೆ ಕೆಲವರಿಗೆ ಮೋಜು, ಮಸ್ತಿ, ಪಾರ್ಟಿ ಎಂಬಂತಾಗಿದೆ. ಹಿರಿಯರು ಪ್ರತಿಯೊಂದು ಹಬ್ಬ, ಆಚರಣೆಗಳನ್ನು ಒಂದು ಹಿನ್ನೆಲೆ, ಮಹತ್ವ, ಉದ್ದೇಶವನ್ನಿಟ್ಟುಕೊಂಡೇ ಆರಂಭಿಸಿ ಇಂದಿನವರೆಗೂ ಮುಂದುವರಿಸಿಕೊಂಡು ಬಂದಿದ್ದಾರೆ. ಅವುಗಳ ಮಹತ್ವವನ್ನು ಅರಿತುಕೊಂಡು ಸನಾತನ ಪರಂಪರೆ ಸಂಸ್ಕೃತಿಯನ್ನು ಮುಂದಿನ ಪೀಳಿಗೆಗೆ ತಿಳಿಸಿಕೊಡುವ ಕಾರ್ಯವೂ ಆಗಬೇಕಾಗಿದೆ. ಇದು ಹಿರಿಯರು ಕಿರಿಯರಿಗೆ ನೀಡಬೇಕಾದ ಬಳುವಳಿ.

ಒಂದೊಮ್ಮೆ ನಮ್ಮ ಕ್ಷೇತ್ರದ ಶ್ರೀಮಂಜುನಾಥ ಸನ್ನಿಧಿಯಲ್ಲಿ ಮಹಿಳೆಯೋರ್ವಳನ್ನು ಆಕೆಯ ಹತ್ತರ ಹರೆಯದ ಮಗ ಅಲ್ಲಿ ಇಲ್ಲಿ ಓಡುತ್ತ ತಂಟೆ ಮಾಡುತ್ತಿದ್ದ, ಮೊಬೈಲ್ ಫೋನ್ ಕೊಡು ಎಂದು ಕಾಡಿಸುತ್ತಿದ್ದ. ಆಗ ಆಕೆ ಆತನನ್ನು ಗದರಿಸುವಂತೆ ಮಾಡಿ, ತನ್ನ ಬಳಿ ನಿಲ್ಲಿಸಿಕೊಂಡು ‘ಇದು ದೇವಸ್ಥಾನ. ಸುಮ್ಮನೆ ಇರಬೇಕು’ ಎಂದಳು. ಬಳಿಕ ಆತನ ಕಿವಿಯ ಬಳಿ ಬಗ್ಗಿ ‘ಓಂ ನಮಃ ಶಿವಾಯ ಎಂದು ಹೇಳು, ಅಲ್ಲಿ ನೋಡು ದೇವರಿಗೆ ಕೈ ಮುಗಿ, ಅಡ್ಡ ಬಿದ್ದು ನಮಸ್ಕರಿಸು’ ಎಂದು ಹೇಳುತ್ತ ತಾನು ಅದೇ ರೀತಿ ಮಾಡುತ್ತ ತನ್ನನ್ನು ಅನುಕರಿಸುವಂತೆ ತಿಳಿಸುತ್ತಿದ್ದಳು. ಇದು ನನಗೆ ಬಹಳ ಖುಷಿ ನೀಡಿತು. ಈಗೆಲ್ಲ ಮಕ್ಕಳನ್ನು ಸುಮ್ಮನಿರಿಸುವ ಸುಲಭ ಉಪಾಯವೆಂದರೆ ಮಕ್ಕಳ ಕೈಗೆ ಮೊಬೈಲನ್ನು ನೀಡುವುದು. ಅದರಲ್ಲಿ ಆಟವಾಡುತ್ತಲೋ, ರೀಲ್ಸ್, ವಿಡಿಯೋಗಳನ್ನು ನೋಡುತ್ತಲೋ ಯಾವ ತಂಟೆ-ತಕರಾರು ಮಾಡದೆ ಮಕ್ಕಳು ತಮ್ಮ ಲೋಕದಲ್ಲಿ ಕಳೆದುಹೋಗುತ್ತಾರೆ. ಅಗತ್ಯಕ್ಕೆ ಅನುಗುಣವಾಗಿ ಮೊಬೈಲ್ ಬಳಸುವಂತೆ ತಿಳಿಸಬೇಕೇ ಹೊರತು ಮೊಬೈಲ್ ಗೀಳಿಗೆ ತುತ್ತಾಗದಿರುವಂತೆ ಎಚ್ಚರವಹಿಸಬೇಕು. ನಾವು ಮಕ್ಕಳಿಗೆ ಬಾಲ್ಯದಿಂದಲೇ ಸಂಸ್ಕಾರ, ಸಂಪ್ರದಾಯವನ್ನು ತಿಳಿಸುವುದು ಮುಖ್ಯ. ಅದರಲ್ಲೂ ತಾಯಂದಿರು ಪ್ರೀತಿ, ಅಕ್ಕರೆಯಿಂದ ತಿಳಿಸಿಕೊಟ್ಟಾಗ ಮಕ್ಕಳು ಅದನ್ನು ಬಹಳ ಇಷ್ಟಪಟ್ಟು ಮಾಡುತ್ತಾರೆ, ಕಲಿಯುತ್ತಾರೆ. ಅದನ್ನೇ ಹಿರಿಯರು ‘ಜನನಿಯೇ ಮೊದಲ ಗುರು, ಮನೆಯೇ ಪಾಠ ಶಾಲೆ’ ಎಂದಿರುವುದು. ಹೀಗೆ ಎಲ್ಲ ತಾಯಂದಿರ, ಹಿರಿಯರ ಮೂಲಕ ನಮ್ಮ ಆಚಾರ-ವಿಚಾರ, ಪರಂಪರೆ, ಧರ್ಮದ ಜ್ಞಾನವು ಮುಂದಿನ ಪೀಳಿಗೆಗೆ ದಾಟಲಿ.

ಕವಿ ಬೇಂದ್ರೆಯವರು ‘ದೀಪಾವಳಿ’ ಕುರಿತು ‘ಇದು ಬರೀ ಬೆಳಕಲ್ಲೋ ಅಣ್ಣಾ?’ ಎಂದಿದ್ದಾರೆ. ಹೌದು ಇದು ಬರಿಯ ಬೆಳಕಲ್ಲ. ಶಾಂತಿ, ಸೌಹಾರ್ದದ ಸಂಕೇತ. ಬದುಕಿನ ದಾರಿದೀಪ. ಹಾಗಾಗಿ ದೀಪಾವಳಿ ದಿನದಂದು ಒಳ್ಳೆಯತನ ರೂಢಿಸಿಕೊಂಡರೆ ಸಾಲದು. ಪ್ರತಿ ದಿನವೂ ನಮ್ಮ ತನುಮನದಲ್ಲಿ ದೀಪಾವಳಿ ತುಂಬಿರಬೇಕು. ದೀಪ ಪರಿಶುದ್ಧದ ಸಂಕೇತವಾಗಿರುವಂತೆ ಮನಸ್ಸೂ ಪರಿಶುದ್ಧವಾಗಿ, ನಮ್ಮ ನಡೆ-ನುಡಿ, ಆಚಾರ ವಿಚಾರಗಳೆಲ್ಲವೂ ಶುದ್ಧವಾಗಿರಬೇಕು. ಬಾಹ್ಯ ದೀಪ ಬೆಳಗಿಸುವುದು ಮಾತ್ರವಲ್ಲ ಆಂತರಿಕ ದೀಪ ಬೆಳಗಿಸಿದಾಗ ಮಾತ್ರ ಲೋಕಕ್ಕೆ ಹಿತವಾಗುವುದು. ಮನ-ಮನಗಳಲ್ಲಿ ಭಕ್ತಿಭಾವದ ದೀಪಗಳ ಪ್ರಜ್ವಲನೆಯು ಪ್ರತಿಯೊಬ್ಬರಿಗೂ ಒಳಿತನ್ನುಂಟು ಮಾಡಲಿ. ಜಗತ್ತನ್ನು ಕಾಡುತ್ತಿರುವ, ಯುದ್ಧಭೀತಿ, ಭಯೋತ್ಪಾದನೆ, ಆಂತರಿಕ ಪ್ರಕ್ಷುಬ್ಧ ವಾತಾವರಣವೆಲ್ಲ ತಿಳಿಯಾಗಿ ಎಲ್ಲರೂ ಶಾಂತಿ, ಸೌಹಾರ್ದ, ನೆಮ್ಮದಿಯಿಂದ ಬದುಕುವಂತೆ ಭಗವಂತನು ಅನುಗ್ರಹಿಸಲಿ ಎಂದು ಪ್ರಾರ್ಥಿಸೋಣ.

(ಲೇಖಕರು ಶ್ರೀಕ್ಷೇತ್ರ ಧರ್ಮಸ್ಥಳದ ಧರ್ವಧಿಕಾರಿಗಳು)