ಅಂಕಣ

ಈ ಕ್ಷೇತ್ರದಲ್ಲಿ ನೀರಿನಲ್ಲೂ ಬೆಳಗುತ್ತೆ ದೀಪ!: ಉರಿಯುವ ವಿಸ್ಮಯ

Mandara

ಜಗತ್ತು ಎಷ್ಟೇ ಮುಂದುವರಿದರೂ ಗ್ರಾಮೀಣ ಜನರು ತಮ್ಮ ಆಚರಣೆ, ಸಂಸ್ಕೃತಿ, ಸಂಪ್ರದಾಯಗಳನ್ನು ಮರೆಯುವುದಿಲ್ಲ ಎಂಬುದಕ್ಕೆ ಈಗಲೂ ಗ್ರಾಮಗಳಲ್ಲಿ ಜರುಗುವ ಹಬ್ಬ-ಹರಿದಿನಗಳೇ ಸಾಕ್ಷಿ.

ವರ್ಷಕ್ಕೊಮ್ಮೆ ತಮ್ಮ ಗ್ರಾಮ ದೇವರ ಹಬ್ಬವನ್ನು ಜಾತಿ ಭೇದವಿಲ್ಲದೆ ಎಲ್ಲರೂ ಒಗ್ಗೂಡಿ ಶ್ರದ್ಧಾಭಕ್ತಿಯಿಂದ ಆಚರಿಸುತ್ತಾರೆ. ಇದಕ್ಕೆ ಒಂದು ನಿದರ್ಶನ ಎಂದರೆ ತಿರುಮಕೂಡಲು ನರಸೀಪುರ ತಾಲೂಕಿನ ಮಾದಾಪುರ ಗ್ರಾಮ. ಗ್ರಾಮದಲ್ಲಿ ಶ್ರೀ ಮರುಡೇಶ್ವರ ಸ್ವಾಮಿ ದೇವಸ್ಥಾನ, ಶ್ರೀ ಮಹದೇಶ್ವರ ದೇವಸ್ಥಾನ ಸೇರಿದಂತೆ ಹತ್ತಾರು ದೇಗುಲಗಳಿವೆ. ಅದರಲ್ಲಿ ಭಕ್ತರ ಆಕರ್ಷಿಸುವುದು ಶ್ರೀ ಮರುಡೇಶ್ವರಸ್ವಾಮಿ ಕ್ಷೇತ್ರ. ಮರಡಿಪುರದ ಎಲ್ಲೆಯಲ್ಲಿರುವ ಮಾದಾಪುರಕ್ಕೆ ಸೇರಿರುವ ಈ ದೇಗುಲ ಗಿರಿ-ನದಿ-ವನಗಳಿಂದ ಕೂಡಿದ ಪ್ರಶಾಂತ ವಾತಾವರಣದಲ್ಲಿದೆ.

ಹಲವು ಶತಮಾನಗಳ ಇತಿಹಾಸ ಹೊಂದಿರುವ ಈ ದೇಗುಲವನ್ನು ಚೋಳರ ಕಾಲದಲ್ಲಿ ನಿರ್ವಿುಸಲಾಯಿತು ಎನ್ನಲಾಗುತ್ತದೆ. ಗುಡ್ಡದ ಮೇಲಿರುವ ದೇವಾಲಯದ ಮೂರು ದಿಕ್ಕುಗಳಲ್ಲೂ ಕಾವೇರಿ-ಕಪಿಲಾ ನದಿಗಳ ಹರಿವಿದೆ. ವಿಶಾಲ ಪ್ರಾಂಗಣ, ಗರ್ಭಗುಡಿ, ಸುಕನಾಸಿ ಹೊಂದಿರುವ ದೇವಸ್ಥಾನವು ಕಲ್ಲಿನಿಂದ ನಿರ್ವಿುತವಾಗಿದೆ. ಗರ್ಭಗುಡಿಯಲ್ಲಿ ಗ್ರಾಮದ ಹಾಗೂ ಸುತ್ತಮುತ್ತಲ ಗ್ರಾಮಗಳ ಆರಾಧ್ಯದೈವ ಶ್ರೀ ಮರುಡೇಶ್ವರಸ್ವಾಮಿ ದೇವರು ವಿರಾಜಮಾನರಾಗಿದ್ದಾರೆ. ನಿತ್ಯವೂ ದೇವರಿಗೆ ಪೂಜೆ-ಅಭಿಷೇಕ ನೆರವೇರುತ್ತದೆ. ಹಬ್ಬ-ಹರಿದಿನಗಳಲ್ಲಿ ವಿಶೇಷ ಪೂಜೆ ಇರುತ್ತದೆ. ಪತ್ರಿವರ್ಷ ಏಪ್ರಿಲ್-ಮಾರ್ಚ್​ನಲ್ಲಿ ಜರುಗುವ ಕೊಂಡೋತ್ಸವ ಗ್ರಾಮದ ದೊಡ್ಡ ಹಬ್ಬ.

ಈ ವರ್ಷ ಹಬ್ಬವು ಮಾರ್ಚ್ 16ರಿಂದ ಆರಂಭವಾಗಲಿದ್ದು, ಐದು ದಿನಗಳ ಕಾಲ ಅದ್ದೂರಿಯಾಗಿ ನೆರವೇರಲಿದೆ. 16ರಂದು ಕಾವೇರಿ ನದಿಯಿಂದ ಹೊಸ ನೀರು ತರುವುದು, 17ರಂದು ಕೊಂಡೋತ್ಸವ, 18ರಂದು ಶ್ರೀ ಮರುಡೇಶ್ವರಸ್ವಾಮಿ ರಥೋತ್ಸವ, 19ರಂದು ತೆಪ್ಪೋತ್ಸವ ಹಾಗೂ 20ರಂದು ಕುಜೋತ್ಸವ ಜರುಗಲಿದೆ.

ಕೊಂಡ ಹಾಯುವ ಸಪ್ತ ದೇವತೆಗಳು: ಮಾದಾಪುರದ ಮಾರಮ್ಮನ ಜಾತ್ರಾ ಮಹೋತ್ಸವ ಎಂದೇ ಪ್ರಸಿದ್ಧಿ ಪಡೆದಿರುವ ಈ ಹಬ್ಬದಲ್ಲಿ ಕೊಂಡೋತ್ಸವವೇ ಪ್ರಮುಖವಾದುದು. ಶ್ರೀ ಮರುಡೇಶ್ವರ, ಶ್ರೀ ಮಹದೇಶ್ವರ, ಮಾರಮ್ಮ, ಪಾತಾಳೇಶ್ವರ, ಲಕ್ಷ್ಮೀದೇವಿ, ಕಾಳಿಕಾದೇವಿ, ಸಿದ್ದಪ್ಪಾಜಿ ಸೇರಿ ಏಳು ದೇವತೆಗಳು ಆವಾಹನೆಯಾಗುವ ಅರ್ಚಕರು ಕೊಂಡ ಹಾಯಲಿದ್ದಾರೆ. ಅಂದು ಜಾತ್ರೆಮಾಳದಲ್ಲಿ ವಿವಿಧ ಊರುಗಳಿಂದ ಆಗಮಿಸುವ ಭಕ್ತ ಸಾಗರವೇ ಸೇರಿರುತ್ತದೆ.

ಮಲ್ಲಿಕಾರ್ಜುನ ಸ್ವಾಮೀಜಿ ಮಹಿಮೆ: ಮಾದಾಪುರ ಹೊರವಲಯದಲ್ಲಿರುವ ಶ್ರೀ ಮರುಡೇಶ್ವರ ಸ್ವಾಮಿ ದೇವಸ್ಥಾನವಿರುವ ಪುಣ್ಯಭೂಮಿಗೆ ನೂರಾರು ವರ್ಷಗಳ ಹಿಂದೆ ಶ್ರೀಶೈಲಕ್ಷೇತ್ರದಿಂದ ಶ್ರೀ ಮಲ್ಲಿಕಾರ್ಜುನ ಸ್ವಾಮೀಜಿ ಎನ್ನುವವರು ಆಗಮಿಸಿದ್ದರು. ದೇಗುಲದ ಬಳಿ ಕಾವೇರಿ-ಕಪಿಲ ನದಿಗಳು ತುಂಬಿ ಹರಿಯುತ್ತಿದ್ದವು. ಅವರು ನದಿ ದಾಟಿಸುವಂತೆ ದೋಣಿಯವನೊಬ್ಬನನ್ನು ಕೇಳಿದರು. ಅದಕ್ಕೆ ಆತ ಒಂದು ಆಣೆ ನೀಡಿದರೆ ಮಾತ್ರ ದಾಟಿಸುವುದಾಗಿ ಹೇಳಿದ. ಯಾವುದೇ ಹಣವನ್ನು ಹೊಂದಿರದ ಶ್ರೀಗಳು, ಬೇರೆ ದಾರಿ ಕಾಣದೆ ಸಮೀಪದ ತೋಟದಲ್ಲಿ ಬಾಳೆ ಎಲೆಯೊಂದನ್ನು ಕತ್ತರಿಸಿ ತಂದು ಅದರ ಮೇಲೆ ಪದ್ಮಾಸನ ಹಾಕಿ ಕುಳಿತು ಯೋಗಬಲದಿಂದ ಆಚೆ ದಡ ತಲುಪಿದರಂತೆ. ಗುರುಗಳ ಯೋಗಸಾಧನೆ ಕಂಡು ಬೆರಗಾದ ಗ್ರಾಮಸ್ಥರು ಅವರನ್ನು ಬಾಳೆಎಲೆ ಮಲ್ಲಿಕಾರ್ಜುನ ಶ್ರೀಗಳು ಎಂದೇ ಕರೆಯಲಾರಂಭಿಸಿದರು. ನಂತರ ಶ್ರೀಗಳು ಕ್ಷೇತ್ರದಲ್ಲಿ ನೆಲೆಯೂರಿ ಶ್ರೀಮಲ್ಲಿಕಾರ್ಜುನ ಮಠ ಸ್ಥಾಪಿಸಿ ಭಕ್ತರಿಗೆ ಹಿತವಚನ, ಆಶೀರ್ವಚನ ನೀಡುತ್ತ ಶ್ರೀ ಮರುಡೇಶ್ವರಸ್ವಾಮಿಯನ್ನು ಆರಾಧಿಸುತ್ತ ಜೀವಿಸಿ ಅಲ್ಲಿಯೇ ಲಿಂಗೈಕ್ಯರಾದರು. ಈಗಲೂ ದೇಗುಲದ ಬಳಿಯೇ ಅವರ ಗದ್ದುಗೆ ಇದೆ. ಇವರ ನಂತರ ಉದ್ದಂಡ ಉದ್ದಾನ ಸ್ವಾಮೀಜಿ ಹಾಗೂ ಭಸ್ಮೋದ್ದಂಡ ಸ್ವಾಮೀಜಿ ದೇವರ ಸೇವೆ ಮಾಡಿದರು. ನಂತರ ಮಠವು ಸಮೀಪದ ಚನ್ನಬಸವಯ್ಯನ ಹುಂಡಿಗೆ ಸ್ಥಳಾಂತರವಾಯಿತು. ಈಗ ಮಠವನ್ನು ಮಲ್ಲಾರಾಧ್ಯರು ಹಾಗೂ ಮಹಾದೇವಾರಾಧ್ಯರು ಮುನ್ನಡೆಸಿಕೊಂಡು ಹೋಗುತ್ತಿದ್ದಾರೆ.

ಮಾರಿಗುಡಿಯ ಮುಂದೆ ರಂಗಕುಣಿತ: ಹಬ್ಬದ ಆರಂಭದ ದಿನ ಅಂದರೆ ಮಾ. 16ರಂದು ಮಧ್ಯರಾತ್ರಿ 12ಗಂಟೆಗೆ ರಂಗಕ್ಕೆ ನುಗ್ಗಲಾಗುತ್ತದೆ. ಗ್ರಾಮದ ದಲಿತ ಸಮುದಾಯದವರು ಈ ಕಾರ್ಯವನ್ನು ನೆರವೇರಿಸುವುದು ಹಿಂದಿನಿಂದಲೂ ಬಂದ ಪದ್ಧತಿ. ಹರಳೆಣ್ಣೆ ದೀವಟಿಗೆಗಳನ್ನು ಹಿಡಿದು ಮನೆ ಜನರೆಲ್ಲ ಮಾರಿಗುಡಿಗೆ ಆಗಮಿಸಿ ರಂಗದ ಮುಂದೆ ದಿನವಿಡೀ ಕುಣಿಯುತ್ತಾರೆ. ಆ ಸಂದರ್ಭದಲ್ಲಿ ಯಾವುದೇ ಮನೆಗೆ ಬೀಗ ಹಾಕದೆ ಬಾಗಿಲುಗಳನ್ನು ತೆರೆದು ಬರುತ್ತಾರೆ. ಮಾರಿಗುಡಿಯಲ್ಲಿ ದೇವರಿಗೆ ಧೂಪ ಹಾಕಿ, ದೀಪ ಹಚ್ಚಿ ನಮಿಸಿ ತೆರಳುತ್ತಾರೆ.

ಜಲದೀಪ ಬೆಳಗುವ ವಿಸ್ಮಯ: ಕೊಂಡ ಹಾಯುವ ದಿನ ಮಧ್ಯಾಹ್ನ 12 ಗಂಟೆಗೆ ಸಪ್ತ ದೇವರುಗಳು ಮರುಡೇಶ್ವರಸ್ವಾಮಿ ದೇವಸ್ಥಾನದ ಹಿಂದಿನ ಹಾದಿಯಲ್ಲಿ ಕಾವೇರಿನದಿಗೆ ತೆರಳಿ ತೀರ್ಥಸ್ನಾನ ಮಾಡಿ ಭಕ್ತರ ಉದ್ಘೋಷ ಹಾಗೂ ಈಡುಗಾಯಿ ಒಡೆಯುವುದರ ನಡುನಡುವೆ ಮರುಡೇಶ್ವರ ಸ್ವಾಮಿ ದೇವಾಲಯವನ್ನು ಪ್ರವೇಶಿಸುತ್ತವೆ. ಅಲ್ಲಿ ದೇವರಿಗೆ ಪೂಜೆ ಸಲ್ಲಿಸಿ ಲಿಂಗಪ್ರಸಾದ ಕೇಳಲಾಗುತ್ತದೆ. ಲಿಂಗದಿಂದ ಎಸೆದಂತೆ ಹೂವಿನ ಪ್ರಸಾದ ಬರುವುದು ಇಲ್ಲಿನ ಮತ್ತೊಂದು ಅಚ್ಚರಿ. ಆ ಹೂವನ್ನು ಮರುಡೇಶ್ವರ ಸ್ವಾಮಿ ಆವಾಹನೆಯಾಗುವವರ ಪೇಟಕ್ಕೆ ಸಿಕ್ಕಿಸಲಾಗುತ್ತದೆ. ಈ ಸಂದರ್ಭದಲ್ಲಿ ದೇವರ ಮುಂದೆ ಕಾವೇರಿ ನದಿಯಿಂದ ಮೆರವಣಿಗೆಯಲ್ಲಿ ತಂದ ನೀರನ್ನು ದೀಪಕ್ಕೆ ಹಾಕಿ ಹಚ್ಚುವುದು ಇಲ್ಲಿನ ಇನ್ನೊಂದ ಅಚ್ಚರಿ. ಈ ದೀಪ ಕೊಂಡ ಹಾಯುವವರೆಗೆ ಅಂದರೆ ಸುಮಾರು ಒಂದು ಗಂಟೆಗೂ ಹೆಚ್ಚುಕಾಲ ಬೆಳಗುತ್ತದೆ.

ಕ್ಷೇತ್ರಕ್ಕೆ ಭೇಟಿ ನೀಡಿದ್ದ ಒಡೆಯರ್: ಮೈಸೂರು ಮಹಾರಾಜರಾಗಿದ್ದ ಮುಮ್ಮಡಿ ಕೃಷ್ಣರಾಜ ಒಡೆಯರ್ ದಂಪತಿ ಮರುಡೇಶ್ವರಸ್ವಾಮಿ ದೇವಸ್ಥಾನಕ್ಕೆ ಭೇಟಿ ನೀಡಿ, ದೇವರ ದರ್ಶನ ಪಡೆದು ಪೂಜೆ ಸಲ್ಲಿಸಿದ್ದರು. ಒಡೆಯರ್ ಅವರು ಕೇತ್ರದಲ್ಲಿ ವಾಸವಿದ್ದ ಜಡೆಸ್ವಾಮಿ ಎಂಬ ಸಂತರ ದರ್ಶನವನ್ನೂ ಮಾಡಿ ಆಶೀರ್ವಾದ ಪಡೆದಿದ್ದರಂತೆ.