| ಹರ್ಷ ನ. ಪುರೋಹಿತ ದಾವಣಗೆರೆ
ಕಳೆದ ವರ್ಷ ಸರಿಸುಮಾರು ಇದೇ ಸಮಯ ಅಂದರೆ ಜುಲೈ 7. ಕರೊನಾ ಲಾಕ್ಡೌನ್ನಿಂದ ಇಡೀ ವಿಶ್ವದ ಜನರ ಬದುಕು ಅಲ್ಲೋಲ ಕಲ್ಲೋಲವಾಗಿತ್ತು. ಮಲೆನಾಡು ಮೂಲದ ಬೆಂಗಳೂರು ನಿವಾಸಿ ದಿವ್ಯಾ ನಿರಂಜನ್ ಅವರಿಗೆ ಏನಾದರೊಂದು ಹೊಸ ರೀತಿಯಲ್ಲಿ ಗಳಿಕೆಯ ಕಂಡುಹಿಡಿದು ಆ ಮೂಲಕ ಹಲವರಿಗೆ ನೆರವು ಕಲ್ಪಿಸುವ ಮನಸ್ಸಾಯಿತು. ಫ್ಯಾಷನ್ ಡಿಸೈನಿಂಗ್ ಓದಿ ಏಳು ವರ್ಷ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದ್ದ ದಿವ್ಯಾ ವೈಯಕ್ತಿಕ ಕಾರಣಕ್ಕೆ ಕೆಲಸ ತೊರೆಯಬೇಕಾಗಿತ್ತು. ಆದರೆ ಏನಾದರೂ ಸಾಧಿಸಬೇಕೆಂಬ ಇವರ ಕನಸಿಗೆ ನೆರವಾದದ್ದು ಫೇಸ್ಬುಕ್. ಜಾಲತಾಣದಲ್ಲಿ ದಿನವಿಡೀ ಕೂತು ಕಾಡಹರಟೆ ಮಾಡುವವರ ನಡುವೆ ವಿಭಿನ್ನವಾಗಿ ಹೊಸತನವನ್ನು ಮಾಡುವ ಯೋಚನೆ ಮಾಡಿದ ದಿವ್ಯಾ ಅವರಿಗೆ ಹೊಳೆದದ್ದು ಆನ್ಲೈನ್ ಮಾರುಕಟ್ಟೆ. ಅಂದು ಅವರು ಇಟ್ಟ ಚಿಕ್ಕದೊಂದು ಹೆಜ್ಜೆಯೇ ನಮ್ಮ ಮಲೆನಾಡ ಮಾರುಕಟ್ಟೆ ಎಂಬ ಫೇಸ್ಬುಕ್ ಗ್ರೂಪ್.
ಗೃಹೋದ್ಯಮಕ್ಕೆ ಒತ್ತು ಕೊಟ್ಟು ಆರಂಭಿಸಿದ ಗ್ರೂಪ್ ಒಂದೇ ವರ್ಷದ ಅವಧಿಯಲ್ಲಿ ಕರ್ನಾಟಕ ಮಾತ್ರವಲ್ಲದೇ ಮಹಾರಾಷ್ಟ್ರ, ಗುಜರಾತ್, ರಾಜಸ್ಥಾನ, ದೆಹಲಿ, ಕೋಲ್ಕತಾ ಹೀಗೆ ಭಾರತದ ಮೂಲೆಮೂಲೆಗಳಿಗಲ್ಲದೆ ಅಮೆರಿಕದವರೆಗೂ ತಲುಪಿದ್ದು, 10 ಸಾವಿರಕ್ಕೂ ಅಧಿಕ ಗ್ರಾಹಕರನ್ನು ಸೆಳೆದಿದೆ. ಈ ಗ್ರೂಪ್ನಲ್ಲಿ 200ಕ್ಕೂ ಅಧಿಕ ರೈತರು, ಗೃಹೋದ್ಯಮಿಗಳು ತಮ್ಮ ಉತ್ಪನ್ನಗಳನ್ನು ಗ್ರಾಹಕರಿಗೆ ತಲುಪಿಸುತ್ತಿದ್ದಾರೆ. ಪ್ಲಾಸ್ಟಿಕ್ ವಸ್ತು ಹಾಗೂ ಬೇರೆಡೆಯಿಂದ ತಂದ ವಸ್ತುಗಳ ಮಾರಾಟಕ್ಕೆ ಇಲ್ಲಿ ಅವಕಾಶ ಇಲ್ಲ. ಹೆಚ್ಚಿನ ಮಾರಾಟಗಾರರು ಹಳ್ಳಿಯಲ್ಲಿದ್ದು, ಸಣ್ಣ ಬಂಡವಾಳ ಹಾಕಿ ಜೀವನ ಮಾಡುತ್ತಿದ್ದಾರೆ. ವಿಶೇಷವಾಗಿ ಹೆಣ್ಣುಮಕ್ಕಳು ಸ್ವಾವಲಂಬಿ ಬದುಕು ಕಟ್ಟಿಕೊಂಡಿದ್ದಾರೆ. ಅನೇಕ ತರಹದ ಕುರುಕಲು ತಿಂಡಿಗಳಲ್ಲದೇ, ಉಪ್ಪಿನಕಾಯಿಗಳು, ಜೇನುತುಪ್ಪ, ನೆಲ್ಲಿಕಾಯಿ, ಬ್ರಾಹ್ಮಿಯಂತಹ ಜ್ಯೂಸ್ಗಳು, ಮಕ್ಕಳ ಬಟ್ಟೆ, ವಿವಿಧ ಆಭರಣಗಳು ಇಲ್ಲಿ ಲಭ್ಯ.
ಹಲ್ಲುಜ್ಜುವ ಪುಡಿ, ಧೂಪ, ಕೈಯಿಂದ ತಯಾರಿಸಿದ ಬಿದಿರಿನ ಉತ್ಪನ್ನಗಳು, ರುದ್ರಾಕ್ಷಿ ವಸ್ತುಗಳು, ಸಿರಿಧಾನ್ಯಗಳ ಮಾಲ್ಟ್, ಲೇಹ್ಯಗಳು, ಕೈಯಿಂದಲೇ ತಯಾರಿಸಿದ ಪೂಜಾ ಬತ್ತಿ ಹಾಗೂ ಪರಿಕರಗಳು, ಅಡಿಕೆ ಪುಡಿ, ಅಶೋಕ ಹನಿ ಆಂಡ್ ಫುಡ್ ಪೊ›ಡಕ್ಟ್ ಗೋಕರ್ಣ, ಮಿಲೆಟ್ ಮಿಕ್ಸ್, ಮಕ್ಕಳ ಕುಲಾವಿ ಬಟ್ಟೆಗಳು, ತೆಂಗಿನ ಎಣ್ಣೆ, ವಿಧವಿಧದ ತಿನಿಸುಗಳು, ವಿಶೇಷ ಚೇತನ ಮಕ್ಕಳ ತಾಯಂದಿರು ತಯಾರಿಸಿದ ಬಟ್ಟೆಯ ಬ್ಯಾಗ್ಗಳು, ಮಧುಮಕ್ಷಿಕಾ ಜೇನು ಇತ್ಯಾದಿ.
ನಾವು ಬೆಳೆಯುವುದರ ಜತೆಗೆ ಇತರರೂ ಬೆಳೆಯಬೇಕೆಂಬ ಪರಿಕಲ್ಪನೆಯೊಂದಿಗೆ ಕಾರ್ಯರೂಪಕ್ಕೆ ತಂದ ವಿಶಿಷ್ಟ ಯೋಜನೆಯೇ ಗ್ರೋ ವಿಥ್ ಮೀ (ನನ್ನೊಂದಿಗೆ ಬೆಳೆಯಿರಿ). ಈ ಯೋಜನೆಯಂತೆ ಪ್ರತಿದಿನ ಒಬ್ಬ ಮಾರಾಟಗಾರನ ಉತ್ಪನ್ನವನ್ನು ಜತೆಗಾರ ಮಾರಾಟಗಾರರು ತಮ್ಮ ತಮ್ಮ ವಾಟ್ಸ್ಆಪ್, ಫೇಸ್ಬುಕ್ನಲ್ಲಿ ಶೇರ್ ಮಾಡಬೇಕು. ಈ ಮೂಲಕ ಇನ್ನೂ ಹೆಚ್ಚು ಜನರನ್ನು ತಲುಪಲು ಸಾಧ್ಯವಾಗುತ್ತದೆ.
ವಿವಿಧ ಭಾಗಗಳಲ್ಲಿ ವಾಸವಿರುವ ಮಲೆನಾಡಿಗರು ಮಲೆನಾಡಿನ ಉತ್ಪನ್ನಗಳು ಸಿಗಬೇಕೆಂದರೆ ಎಲ್ಲೆಲ್ಲೋ ಹುಡುಕಾಡಬೇಕಾಗಿತ್ತು. ಅನೇಕ ಉತ್ಪನ್ನಗಳ ಅಲಭ್ಯತೆಯೂ ಇತ್ತು. ಇತ್ತ ಮಲೆನಾಡಿನ ಹಳ್ಳಿಗಳಲ್ಲಿದ್ದ ಗೃಹೋದ್ಯಮಿಗಳು, ಕೃಷಿಕರಿಗೆ ತಮ್ಮ ಉತ್ಪನ್ನವನ್ನು ನೇರವಾಗಿ ಮಾರಾಟ ಮಾಡಲು ಯಾವುದೇ ಮಾಧ್ಯಮವಿರಲಿಲ್ಲ. ಈ ಕೊರತೆ ನೀಗಲೆಂದು ಹುಟ್ಟಿದ್ದೇ ನಮ್ಮ ಮಲೆನಾಡ ಮಾರುಕಟ್ಟೆ ಫೇಸ್ಬುಕ್ ಗ್ರೂಪ್. ‘ಉತ್ಪನ್ನಗಳಿಗಾಗಿ ಗ್ರಾಹಕರನ್ನು ಹುಡುಕಬೇಡಿ, ಗ್ರಾಹಕರಿಗಾಗಿ ಉತ್ಪನ್ನ ತಯಾರಿಸಿ’ ಎಂಬ ಘೊಷವಾಕ್ಯದೊಂದಿಗೆ ಇದನ್ನು ಶುರುಮಾಡಿದೆ ಎನ್ನುತ್ತಾರೆ ದಿವ್ಯಾ. ‘ರಾಜಮುಡಿ ಅಕ್ಕಿ ಎಂದೇ ಪರಿಚಿತರಾದ ನಟರಾಜ್ ಮೈಸೂರು ಗುಂಪಿನ ಸ್ಥಾಪನೆ ಸಂದರ್ಭದಲ್ಲಿ ಜನರನ್ನು ಸೇರಿಸಲು ಶ್ರಮಿಸಿದರು. ಜೇನು ಕೃಷಿಕ ಶ್ಯಾಮಸುಂದರ್ ಭಟ್, ವಿಶೇಷ ಮಕ್ಕಳಿಗಾಗಿ ಸಂಸ್ಥೆ ನಡೆಸುತ್ತಿರುವ ಜಯಶ್ರೀ ಮುಳಿಯರಾವ್, ಪಾಕಪ್ರವೀಣ ಸಂದೇಶ್ ಪೆರ್ಲ, ಸಾಗರ ಹುಬ್ಳಿಕರ್, ಮಂಜುನಾಥ್ ಭಟ್ ಅವರ ಶ್ರಮ ಅಪಾರ’ ಎನ್ನುತ್ತಾರೆ ಅವರು.
ಅಪಘಾತದಿಂದಾದ ಮಾನಸಿಕ, ದೈಹಿಕ ಆಘಾತದಿಂದ ಚೇತರಿಸಿಕೊಂಡು ಮಕ್ಕಳಿಗೆ ವುಲನ್ ಸ್ವೆಟರ್, ಕಸೂತಿಯ ಕಾರ್ಯದಲ್ಲಿ ತೊಡಗಿಸಿಕೊಂಡೆ. ಈಗ ಮಲೆ ನಾಡ ಮಾರುಕಟ್ಟೆ ಸೇರಿದ್ದೇನೆ. ಉತ್ತಮ ಬೆಂಬಲ ಸಿಗುತ್ತಿದೆ.
| ಪೂರ್ಣಿಮಾ ಭಟ್ ಕಡಬ (ದ.ಕ.)