ಈ ಘಟನೆ ಜರುಗಿದ್ದು ನಾನು ಕಾಲೇಜ್ ಓದುವ ಸಮಯದಲ್ಲಿ. ಪರಸ್ಥಳದಲ್ಲಿ ಓದುತ್ತಿದ್ದ ಕಾರಣಕ್ಕೆ ಕಾಲೇಜಿನ ಹತ್ತಿರದಲ್ಲಿದ್ದ ಕೊಠಡಿಗಳ ಸಂಕೀರ್ಣವೊಂದರಲ್ಲಿ ಬಾಡಿಗೆಗಿದ್ದೆವು. ಅಲ್ಲಿದ್ದವರ ಪೈಕಿ ಎಲ್ಲರೂ ನಮ್ಮ ಕಾಲೇಜಿನ ವಿದ್ಯಾರ್ಥಿಗಳೇ. ಅದು ಪರೀಕ್ಷೆಯ ಸಮಯವಾದುದರಿಂದ ಎಲ್ಲ ಕೊಠಡಿಗಳಲ್ಲಿಯೂ ಪೂರ್ಣ ಹಾಜರಿಯಿತ್ತು. ತಾಂತ್ರಿಕ ಬೋರ್ಡ್ ಪರೀಕ್ಷೆಗಳು ಮೇ ತಿಂಗಳಿನಲ್ಲಿಯೇ ನಡೆಯುತ್ತಿದ್ದುದರಿಂದ ಸೆಖೆ, ಸೊಳ್ಳೆಕಾಟದ ನಡುವೆ ವಿದ್ಯುತ್ ಕಣ್ಣಾಮುಚ್ಚಾಲೆಯ ತೊಂದರೆಯನ್ನೂ ಸಹಿಸಿಕೊಳ್ಳಬೇಕಾಗುತ್ತಿತ್ತು. ನಾವಿದ್ದ ಜಾಗದ ಸಮೀಪದಲ್ಲಿಯೇ ವಿದ್ಯುತ್ ಸಬ್ ಸ್ಟೇಷನ್ ಒಂದಿತ್ತು. ಪರೀಕ್ಷೆ ಸಮಯದಲ್ಲಿ ವಿದ್ಯುತ್ ಕಡಿತದಿಂದ ವಿನಾಯಿತಿ ಕೊಡಲು ಕಾಲೇಜಿನ ಪ್ರಾಂಶುಪಾಲರು ವಿದ್ಯುತ್ ಇಲಾಖೆಯವರಿಗೆ ಪತ್ರವನ್ನೂ ಬರೆದಿದ್ದರು.
ಅದು ಕೊನೆಯ ವರ್ಷದ ವಾರ್ಷಿಕ ಪರೀಕ್ಷೆಯ ಸಮಯ, ಅಂದು ಆ ವರ್ಷದ ಕಬ್ಬಿಣದ ಕಡಲೆಯೆಂದೇ ಕುಖ್ಯಾತಿ ಪಡೆದಿದ್ದ ಸಬ್ಜೆಕ್ಟು. ಈ ಆತಂಕದ ನಡುವೆ ಬೆಳಿಗಿನಿಂದ ವಿದ್ಯುತ್ ಬೇರೆ ಕಣ್ಣಾಮುಚ್ಚಾಲೆಯಾಡುತ್ತಿತ್ತು. ಸಾಯಂಕಾಲವಂತೂ ಅದು ವಿಪರೀತಕ್ಕೆ ಹೋಗಿ ಹೋದ ವಿದ್ಯುತ್ ಮತ್ತೆ ಬರಲೇ ಇಲ್ಲ. ಇತ್ತ ಕತ್ತಲಾಗುತ್ತಿದ್ದಂತೆಯೇ ನನ್ನಂತಹ ಸ್ಲಾ್ಯಗ್ ಓವರ್ ಬ್ಯಾಟರ್ಗಳಿಗೆ ಉದ್ವೇಗ. ಈ ಪರಿಸ್ಥಿತಿಯಲ್ಲಿ ಬೆಳಗ್ಗೆಯಿಂದ ಓದುವುದರಲ್ಲಿ ತಲ್ಲೀನರಾಗಿದ್ದ ಓದುಬಾಕ ಹುಡುಗರ ತಂಡವೊಂದು ಸಬ್ ಸ್ಟೇಷನ್ಗೆ ಹೋಗಿ ವಿಚಾರಿಸಿ ಬರುತ್ತೇವೆಂದು ಹೊರಟಿತು. ಅವರು ಹೋದ ಒಂದು ಗಂಟೆಯ ನಂತರ ವಿದ್ಯುತ್ತೇನೋ ಬಂತು. ಆದರೆ ವಿದ್ಯುತ್ ಬಗ್ಗೆ ವಿಚಾರಿಸಹೋದ ತಂಡ ವಾಪಸ್ ಬರದೇ ಇರುವ ಕಾರಣಕ್ಕೆ ನಾವೆಲ್ಲ ಸಬ್ ಸ್ಟೇಷನ್ ಕಡೆ ಹೊರಟಾಗ ಆ ಕಡೆಯಿಂದ ನಿಧಾನವಾಗಿ ಆ ಹುಡುಗರು ಬರುತ್ತಿರುವುದು ಕಂಡಿತು. ನಿಸ್ತೇಜವಾಗಿದ್ದ ಅವರ ಮುಖ ಕಂಡ ನಮಗೆ ಅದೇನೋ ಎಡವಟ್ಟಾಗಿರುವುದಂತೂ ಖಾತ್ರಿಯಾಯ್ತು. ಆಮೇಲೆ ತಿಳಿದುಬಂದಿದ್ದು ನಮಗೆಲ್ಲರಿಗೂ ಇನ್ನೂ ಜೀರ್ಣವಾಗದ ವಿಷಯ. ಸಬ್ ಸ್ಟೇಷನ್ ಬಳಿ ನಮ್ಮ ಸ್ನೇಹಿತರ ತಂಡ ಹೋದಾಗ ಅದಾಗಲೇ ಮತ್ತೊಂದು ಹಾಸ್ಟೆಲ್ನ ತಂಡವು ಅಲ್ಲಿ ನೆರೆದಿತ್ತು. ಬೆಳಗಿನಿಂದ ಆಗುತ್ತಿದ್ದ ಕಿರಿಕಿರಿಯ ಕುರಿತು ಅಲ್ಲಿದ್ದ ಸಿಬ್ಬಂದಿಗೆ ಸ್ವಲ್ಪ ಜೋರಾಗಿಯೇ ಆವಾಜ್ ಹಾಕಿ ಹುಡುಗರು ಅಲ್ಲಿಂದ ವಾಪಸ್ಸು ಹೋಗುವಾಗ ಅವರಲ್ಲೊಬ್ಬ ಸಬ್ ಸ್ಟೇಷನ್ ಕಿಟಕಿಗೆ ಕಲ್ಲೆಸೆದದ್ದೇ ನೆಪ, ಹೋಗುತ್ತಿದ್ದ ಇನ್ನೂ ಕೆಲವರು ಬಂದು ಕಲ್ಲು ತೂರಲು ಆರಂಭಿಸಿದರು, ಅಂತಹವರಲ್ಲಿ ನಮ್ಮ ಸ್ನೇಹಿತರೂ ಸೇರಿದ್ದರು. ಪರಿಸ್ಥಿತಿ ವಿಕೋಪಕ್ಕೆ ಹೋಗುತ್ತಿರುವುದನ್ನು ಗಮನಿಸಿದ ಅಲ್ಲಿನ ಸಿಬ್ಬಂದಿ ಪೊಲೀಸರಿಗೆ ತಿಳಿಸಿದರು. ತಕ್ಷಣ ಧಾವಿಸಿದ ಪೊಲೀಸ್ ಕಲ್ಲು ತೂರುತ್ತಿರುವವರಿಗೆ ಛಡಿಯೇಟು ನೀಡಿ ಸ್ಟೇಷನ್ಗೆ ಕರೆದೊಯ್ದು ಅಲ್ಲಿ ಮಂಗಳಾರತಿ ಎತ್ತಿ ವಿದ್ಯಾರ್ಥಿಗಳೆಂಬ ಕಾರಣಕ್ಕೆ ತಪ್ಪೊಪ್ಪಿಗೆ ಪತ್ರವನ್ನು ಬರೆಸಿಕೊಂಡು ಬಿಟ್ಟರು. ಆಶ್ಚರ್ಯದ ವಿಷಯವೆಂದರೆ ಅಪರೂಪಕ್ಕೂ ಯಾರ ಮೇಲೂ ಗದರದ ಶಾಂತಮೂರ್ತಿಯಂತಿದ್ದು ತಮ್ಮಪಾಡಿಗೆ ತಾವಿರುತ್ತಿದ್ದ ಆ ನಮ್ಮ ಸ್ನೇಹಿತರು ಅಂದು ಅಲ್ಲಿ ಕಲ್ಲು ತೂರಿ ಪೊಲೀಸರ ಆತಿಥ್ಯ ಸ್ವೀಕರಿಸಿ ಬಂದಿದ್ದರು. ನಮ್ಮ ಮಿತ್ರಮಂಡಳಿಯಲ್ಲಿ ಬಹಳ ಕಾಲ ಚರ್ಚೆಯಾದ ಈ ಪ್ರಶ್ನೆಗೆ ಉತ್ತರ ನಮಗೆ ಕೊನೆಗೂ ಸಿಗಲಿಲ್ಲ.
ಕೋವಿಡ್ ಸಮಯದಲ್ಲಿ ನೀವು ಗಮನಿಸಿರಬಹುದು- ಲಾಕ್ಡೌನ್ ಘೊಷಿಸುತ್ತಿದ್ದಂತೆಯೇ ಜನ ಅಂಗಡಿಗಳಿಗೆ ನುಗ್ಗಿ ಸಿಕ್ಕಸಿಕ್ಕ ಸಾಮಾನುಗಳನ್ನೆಲ್ಲ ಖರೀದಿಸಿ ಕೊಂಡೊಯ್ಯುತ್ತಿದ್ದರು. ಅವುಗಳಲ್ಲಿ ಅರ್ಧದಷ್ಟೂ ಜರೂರತ್ತಿಲ್ಲದ ಸರಂಜಾಮುಗಳೆಂಬುವುದು ಅವರಿಗೂ ಗೊತ್ತಿರುವ ವಿಷಯವಾದರೂ ಬಾಕಿ ಸಮಯದಲ್ಲಿ ಅವರೆಲ್ಲರೂ ಕೊಂಡೊಯ್ಯುತ್ತಿದ್ದ ವಿವೇಚನೆಯ ಗೈರು ಅಲ್ಲಿ ಎದ್ದು ಕಾಣುತ್ತಿತ್ತು. ಅಷ್ಟಕ್ಕೂ ಗುಂಪಿನಲ್ಲಿ ಸೇರಿಕೊಂಡಾಗ ನಾವು ಏಕೆ ಹಾಗೆ ನಮ್ಮತನವನ್ನು ಕಳೆದುಕೊಳ್ಳುತ್ತೇವೆ. ಇದೊಂದು ಮನಶಾಸ್ತ್ರದ ಬಹುರ್ಚಚಿತ ವಿಷಯ. ಏಛ್ಟಿಛ ಞಛ್ಞಿಠಿಚ್ಝಜಿಠಿಢ ಎಂದೂ ಮನಶಾಸ್ತ್ರದಲ್ಲಿ ಹೇಳಲಾಗುವ ಇಂತಹ ಪರಿಸ್ಥಿತಿಯಲ್ಲಿ ಮನುಷ್ಯ ಗುಂಪಿನಲ್ಲಿ ಗೋವಿಂದನಾಗುತ್ತಾನೆ. ತನ್ನ ಸ್ವಂತಿಕೆ , ವಿಚಾರಶಕ್ತಿ ಕಳೆದುಕೊಂಡು ತನ್ನ ನಡವಳಿಕೆಯನ್ನು, ವಿಚಾರಗಳನ್ನು ಗುಂಪಿನ ಬಹುಮತದಂತೇ ಬದಲಿಸಿಕೊಳ್ಳುತ್ತಾನೆ.
ದೈನಂದಿನ ಜೀವನದಲ್ಲಿ ಹಿಂಡು ಮನೋಸ್ಥಿತಿಯನ್ನು ದಿನವೂ ಕಾಣುತ್ತಿರುತ್ತೇವೆ. ಅಷ್ಟೇ ಏಕೆ ನಾವು ಖುದ್ದು ಇದಕ್ಕೆ ಎಷ್ಟೋ ಬಾರಿ ನಮಗರಿವಿಲ್ಲದೆ ಒಳಗಾಗಿರುತ್ತೇವೆ. ಅಂತಹ ಕೆಲವು ಸ್ಯಾಂಪಲ್ಗಳನ್ನು ನೋಡೋಣ. ಯಾವುದೋ ಒಂದು ಫ್ಯಾಶನ್ ಟ್ರೆಂಡು ಮಾರುಕಟ್ಟೆಗೆ ಹೊಸದಾಗಿ ಬಂದಿರುತ್ತದೆ. ಅದು ಜನಪ್ರಿಯತೆ ಗಳಿಸುತ್ತಿರುವುದನ್ನು ಗಮನಿಸುತ್ತಿದ್ದಂತೆಯೇ ಅದು ತನಗೆ ಹೊಂದುತ್ತದೆಯೋ ಇಲ್ಲವೋ ಎಂಬುದನ್ನೂ ಯೋಚಿಸದೆ ಅದನ್ನು ಅಪ್ಪಿಕೊಳ್ಳುವುದು. ಕೆಲ ವರ್ಷಗಳ ಹಿಂದೆ ಶುರುವಾದ ಪುರುಷರಲ್ಲಿ ಗಡ್ಡಬಿಡುವ ಟ್ರೆಂಡಿನ ಪರಿಣಾಮ, ಕ್ಲೀನ್ಶೇವ್ನ ಚಾಕೋಲೇಟ್ ಬಾಯ್ಸ್ಗಳೆಲ್ಲ ರಾತ್ರಿ ಹಗಲಾಗುವುದರಲ್ಲಿ ಗಡ್ಡಧಾರಿಗಳಾಗಿ ಬದಲಾಗಿರುವುದನ್ನು ಗಮನಿಸಿದ್ದೇವೆ. ಷೇರು ಮಾರುಕಟ್ಟೆಯಂತೂ ಮುಕ್ಕಾಲು ಈ ಹಿಂಡು ಮನೋಸ್ಥಿತಿ ಮೇಲೆಯೇ ನಿಂತಿದೆ. ಇನ್ನು ಸಾಮಾಜಿಕ ಮಾಧ್ಯಮಗಳಲ್ಲಂತೂ ದಿನನಿತ್ಯ ಟ್ರೆಂಡಿಂಗ್ ಆದ ವಿಷಯಗಳನ್ನು ಸತ್ಯಾಸತ್ಯತೆ ಪರಿಶೀಲಿಸದೆ ಜನ ಎರಾ›ಬಿರ್ರಿ ಹಂಚಿಕೊಂಡು ಇಲಿಯನ್ನೂ ಹುಲಿ ಮಾಡಿರುವ ಪ್ರಸಂಗಗಳನ್ನು ಆಗಾಗ ಕಾಣುತ್ತೇವೆ. ರಾಜಕೀಯದಲ್ಲಂತೂ ಇದು ತುಸು ಹೆಚ್ಚೇ. ತನ್ನ ಖುದ್ದು ರಾಜಕೀಯ ನಿಲುವುಗಳು, ಅಭಿಪ್ರಾಯಗಳೇನಿದ್ದರೂ ಅವುಗಳನ್ನು ತಾನು ಅಡಗಿಸಿಟ್ಟು ಅಲ್ಪಮತದವನಾಗಬಹುದೆಂಬ ಭಯದಿಂದ ಬಹುಮತದಂತೇ ಜನರು ಬದಲಿಸಿಕೊಳ್ಳುವುದನ್ನು ನಾವು ನೋಡುತ್ತಿರುತ್ತೇವೆ. ಮೇಲಿನ ಎಲ್ಲ ಉದಾಹರಣೆಗಳಲ್ಲಿ ತಾನು ಆ ಟ್ರೆಂಡ್ ಅನ್ನು ಒಪ್ಪುತ್ತೇನೆ ಅನ್ನುವುದಕ್ಕಿಂತಲೂ ಅದರ ಜೊತೆ ಹೋಗದಿದ್ದರೆ ಕಳೆದು ಹೋಗಬಹುದು ಎಂಬ ಭಯವೇ ಜನರನ್ನು ಹೀಗೆ ಮಾಡಲು ಪ್ರೇರೇಪಿಸುತ್ತದೆ. ಇದಕ್ಕೆ ಮನಶಾಸ್ತ್ರದಲ್ಲಿ ಫೋಲೊ (ಊಣಔಣ ್ಛಚ್ಟ ಟ್ಛ ್ಝಟಠಜ್ಞಿಜ ಟ್ಠಠಿ) ಕಳೆದು ಹೋಗುವ ಭಯ ಎಂದು ಹೇಳಲಾಗುತ್ತದೆ. ಜನರ ಈ ಮನೋಸ್ಥಿತಿಯನ್ನು ಚೆನ್ನಾಗಿ ಅರಿತಿದ್ದ ಹಿಟ್ಲರ್ ಅದನ್ನು ಸಮರ್ಪಕವಾಗಿ ಬಳಸಿಕೊಂಡು ಪೂರ್ತಿ ಜರ್ಮನಿಯನ್ನು ತನ್ನ ತೆಕ್ಕೆಗೆ ತೆಗೆದುಕೊಂಡನೆಂದು ಇತಿಹಾಸ ಹೇಳುತ್ತದೆ. ಈಗಿನ ದಿನಗಳಲ್ಲಂತೂ ಸಾಮಾಜಿಕ ಮಾಧ್ಯಮಗಳೇ ನಮ್ಮ ಅಭಿಪ್ರಾಯಗಳನ್ನು ರೂಪಿಸುವ ಮಟ್ಟಿಗೆ ನಾವು ಅವುಗಳಿಗೆ ಶರಣಾಗಿದ್ದೇವೆ.
ಆದರೆ ಎಲ್ಲ ಸಂದರ್ಭಗಳಲ್ಲಿಯೂ ಹಿಂಡು ಮನೋಸ್ಥಿತಿ ತಪ್ಪು ಎಂದು ಹೇಳಲಾಗದು. ಒಂದು ಗುಂಪು ತಂಡದಂತೆ ಕೆಲಸ ಮಾಡುವ ಸನ್ನಿವೇಶದಲ್ಲಿ ಅಥವಾ ತೀವ್ರ ಒತ್ತಡದ ಪರಿಸ್ಥಿತಿಯಲ್ಲಿ, ಮಾಹಿತಿಯ ಕೊರತೆಯಿರುವ ಸಂದರ್ಭದಲ್ಲಿ ಕೆಲವು ಜನರು ನಾಯಕತ್ವ ವಹಿಸಿಕೊಂಡು ನಿರ್ಧಾರಗಳನ್ನು ತೆಗೆದುಕೊಂಡಾಗ ಉಳಿದವರು ಅದನ್ನು ಅನುಸರಿಸುವುದೇ ಜಾಣತನ. ಬಹುಶಃ ಇಂತಹುದಕ್ಕೆ ಇದೀಗ ಜರುಗುತ್ತಿರುವ ರಷ್ಯಾ, ಯೂಕ್ರೇನ್, ಹಮಾಸ್-ಇಸ್ರೇಲ್ ಯುದ್ಧಗಳಿಗಿಂತ ಉತ್ತಮ ಉದಾಹರಣೆ ದೊರಕಲಾರದು. ಮನಶಾಸ್ತ್ರಜ್ಞರು ಹೇಳುವಂತೆ ಹಿಂಡು ಮನೋಸ್ಥಿತಿಯು ಪರಿಸ್ಥಿತಿಯಲ್ಲಿ ಹಿಂಡಿನ ಕೇವಲ ಐದು ಪ್ರತಿಶತ ಸದಸ್ಯರು ತೆಗೆದುಕೊಳ್ಳುವ ನಿರ್ಧಾರಗಳಿಗೆ ಉಳಿದವರು ಹೌದು ಎಂದು ತಲೆಯಾಡಿಸುತ್ತಾರಂತೆ. ಈ ಮನೋಸ್ಥಿತಿಯ ಹೆಸರೇ ಪ್ರಾಣಿಗಳಿಂದ ಹುಟ್ಟಿರುವುದರಿಂದ ಅವುಗಳಲ್ಲಿಯೇ ಬಹಳಷ್ಟು ಉದಾಹರಣೆ ನಮಗೆ ನೋಡಸಿಗುತ್ತವೆ. ಪಕ್ಷಿಗಳನ್ನೇ ನೋಡಿ ಆಗಸದಲ್ಲಿ ಹಾರುವ ಖಗಗಳು ಎಲ್ಲಿ ಇಳಿಯಬೇಕು, ಯಾವ ದಾರಿ ಹಿಡಿಯಬೇಕು ಎಂಬ ನಿರ್ಧಾರ ಪ್ರಕಟಿಸಲು ಅಲ್ಲಿ ಯಾವ ರಾಜನೂ ಇರುವುದಿಲ್ಲ. ಅಲ್ಲಿಯೂ ಈ ಐದು ಪ್ರತಿಶತ ತರ್ಕ ಕೆಲಸಮಾಡುತ್ತದೆ. ಅವರು ಹಿಡಿದ ದಾರಿಯನ್ನು ಉಳಿದ ಸದಸ್ಯರು ಬೇಷರತ್ ಫಾಲೋ ಮಾಡುತ್ತವೆ. ಇದೇ ಸೂತ್ರ ಗುಂಪಿನಲ್ಲಿ ವಾಸಿಸುವ ಜಿಂಕೆ, ಮೀರ್ ಕ್ಯಾಟ್ಗಳಂತಹ ಪ್ರಾಣಿಗಳಿಗೂ ಅನ್ವಯವಾಗುತ್ತದೆ.
ಮನಶಾಸ್ತ್ರದ ಪ್ರಕಾರ ನಮ್ಮ ಮಿದುಳು ಯೋಚನೆ ಮಾಡುವ ಪ್ರಯಾಸದ ಬದಲಿಗೆ ಸುಲಭವಾದ ಶಾರ್ಟ್ಕಟ್ಗಳನ್ನು ಹುಡುಕುತ್ತಿರುತ್ತದೆ. ಹಿಂಡು ಮನೋಸ್ಥಿತಿ ಈ ರೀತಿಯ ಒಂದು ಶಾರ್ಟ್ಕಟ್. ಆದರೆ ಇದು ಅತಿಯಾದರೆ ನಮ್ಮ ಯೋಚನಾಶಕ್ತಿಯನ್ನೇ ಕುಗ್ಗಿಸಿ ಆತ್ಮವಿಶ್ವಾಸ ತಗ್ಗಿಸುವ ಜೊತೆಗೆ ಖಿನ್ನತೆಗೆ ಕಾರಣವಾಗಬಲ್ಲದು. ಹೀಗಾಗಿ ಎಲ್ಲ ಪರಿಸ್ಥಿತಿಯಲ್ಲೂ ನಮ್ಮ ನಿರ್ಧಾರಗಳಿಗೆ ಬೇರೆಯವರ ಮೇಲೆ ನಿರ್ಭರವಾಗದೆ ಸ್ವಯಂ ನಿರ್ಧರಿಸುವುದು ಒಳ್ಳೆಯದು. ಹಾಗೆಯೇ ಗುಂಪಿನಲ್ಲಿ ಗೋವಿಂದರಾಗುವಿರೋ ಇಲ್ಲ ಆತ್ಮವಿಶ್ವಾಸದ ಪ್ರತೀಕರಾಗುವಿರೋ ಎಂಬ ಆಯ್ಕೆ ಸಹ ನಿಮ್ಮದೇ.
(ಲೇಖಕರು ವಿಜ್ಞಾನ, ತಂತ್ರಜ್ಞಾನ ಬರಹಗಾರರು)