ಅಂಕಣ

ತಂಬಾಕುಮುಕ್ತ ಸಮಾಜ ಕಟ್ಟೋಣ…: ಧರ್ಮದರ್ಶನ

ಪ್ರತಿ ವರ್ಷ ಮೇ 31ರಂದು ತಂಬಾಕುಮುಕ್ತ ದಿನ ಅಥವಾ ತಂಬಾಕುವಿರೋಧಿ ದಿನ ಎಂದು ಆಚರಿಸಲಾಗುತ್ತದೆ. ವಿಶ್ವಾದ್ಯಂತ ಈ ಕಾರ್ಯಕ್ರಮ ಆಚರಿಸಲಾಗುತ್ತಿದ್ದು, ಯಾರು ತಂಬಾಕು ಸೇವನೆ ಮಾಡುತ್ತಾರೋ, ಸಿಗರೇಟು, ಬೀಡಿಗಳ ಧೂಮಪಾನ ಮಾಡುತ್ತಾರೋ ಅವರನ್ನು ದುಶ್ಚಟಗಳ ದಾಸರಾಗದಂತೆ ಎಚ್ಚರಿಸಲಾಗುತ್ತದೆ. ಜನರಲ್ಲಿ ದುಶ್ಚಟಗಳು ಹೆಚ್ಚಳವಾದಾಗ ಅವುಗಳನ್ನು ನಿಯಂತ್ರಿಸಲು ಸರ್ಕಾರವು ಜಾಗೃತಿ, ಮನವರಿಕೆ, ಎಚ್ಚರಿಕೆ, ದಂಡ, ತೆರಿಗೆ ಹೆಚ್ಚಳ ಹೀಗೆ ವಿವಿಧ ಯೋಜನೆ ಹಮ್ಮಿಕೊಳ್ಳುತ್ತದೆ. ಮದ್ಯ, ಹೊಗೆಸೊಪ್ಪು ಹಾಗೂ ಅದರ ಉತ್ಪನ್ನಗಳ ಮೇಲೆ ತೆರಿಗೆ ಹೆಚ್ಚಿಸಿದರೆ ಜನರಿಗೆ ಅದನ್ನು ಕೊಂಡುಕೊಳ್ಳಲು ಕಷ್ಟವಾಗುತ್ತದೆ. ಈ ಮೂಲಕ ಮದ್ಯಪಾನ, ಧೂಮಪಾನದಿಂದ ಜನರನ್ನು ದೂರ ಮಾಡಬಹುದು ಎಂದು ಸರ್ಕಾರಗಳು ಅಂದುಕೊಳ್ಳುತ್ತಿದ್ದವು. ಆದರೆ ಜಾಗೃತಿ, ದಂಡಗಳ ಜತೆಗೆ ಸರ್ಕಾರದ ತೆರಿಗೆ ಹೆಚ್ಚಳದ ಪ್ರಯತ್ನವು ಹೆಚ್ಚು ಫಲಪ್ರದವಾಗಲಿಲ್ಲ. ದುರಭ್ಯಾಸಗಳಿಗೆ ಶರಣಾದ ವ್ಯಕ್ತಿಗಳು, ಮಾದಕ ವಸ್ತುಗಳ ಸೇವನೆಯಿಂದ ವಿಚಿತ್ರ ಅನುಭವ ಪಡೆಯುವ ವ್ಯಕ್ತಿಗಳು ಚಟ ಬಿಡಲು ತಯಾರಾಗದೆ ಎಷ್ಟೇ ದುಬಾರಿಯಾದರೂ ತಂಬಾಕು ಪದಾರ್ಥಗಳನ್ನು ಕೊಂಡುಕೊಳ್ಳುತ್ತಿದ್ದರು.

ಜನರಿಗೆ ಅರಿವು-ಜಾಗೃತಿ ಮೂಡಿಸಬೇಕು ಎಂಬ ಉದ್ದೇಶದಿಂದ ಸಿಗರೇಟು ಪ್ಯಾಕ್​ಗಳಲ್ಲಿ ‘ಧೂಮಪಾನ ಆರೋಗ್ಯಕ್ಕೆ ಹಾನಿಕಾರಕ’ ಎಂದು ದೊಡ್ಡ ಅಕ್ಷರಗಳಲ್ಲಿ ಮುದ್ರಿಸಲಾಯಿತು. ಇನ್ನೂ ಮುಂದುವರಿದು ಧೂಮಪಾನದಿಂದಾಗಿ ಕ್ಯಾನ್ಸರ್​ಗೆ ಒಳಗಾಗಿರುವ ರೋಗಿಯ ಚಿತ್ರವನ್ನು ಕೂಡ ಸಿಗರೇಟ್, ತಂಬಾಕು ಪ್ಯಾಕ್​ಗಳ ಮೇಲೆ ಮುದ್ರಿಸಲಾಯಿತು. ಈ ಚಿತ್ರವನ್ನು ನೋಡಿ ಭಯಪಟ್ಟಾದರೂ ಧೂಮಪಾನ, ತಂಬಾಕು ಸೇವನೆ ಬಿಡಬಹುದು ಎಂಬ ಸರ್ಕಾರದ ಆಲೋಚನೆಯಾಗಿತ್ತು. ಆದರೆ ಬರಹದ ಬಗ್ಗೆ ಲಕ್ಷ್ಯ ಮಾಡದೆ, ಕ್ಯಾನ್ಸರ್​ನ ಚಿತ್ರಗಳನ್ನು ನೋಡಿ ಮಾಮೂಲಿಯಂತೆ ಭಾಸವಾಯಿತೇ ಹೊರತು ದುಶ್ಚಟಗಳನ್ನು ದೂರಮಾಡುವಲ್ಲಿ ಈ ಪ್ರಯತ್ನ ಸಂಪೂರ್ಣ ಯಶಸ್ವಿಯಾಗಿಲ್ಲ.

ನ್ಯಾಯಾಲಯದಲ್ಲಿ ಕಟೆಕಟೆಯನ್ನು ಹತ್ತಿದಾಗ ಸಾಕ್ಷಿ ಅಥವಾ ಅಭಿಪ್ರಾಯಗಳನ್ನು ತಿಳಿಸುವ ಮೊದಲು ಧರ್ಮಗ್ರಂಥಗಳ ಮೇಲೆ ಪ್ರಮಾಣ ಮಾಡಿ ‘ನಾನು ಸತ್ಯವನ್ನೇ ಹೇಳುತ್ತೇನೆ. ಸತ್ಯವನ್ನಲ್ಲದೆ ಬೇರೇನೂ ಹೇಳುವುದಿಲ್ಲ’ ಎಂದು ಹೇಳುವ ಕ್ರಮವಿದೆ. ಆದರೆ ಬರಬರುತ್ತಾ ಪ್ರಮಾಣ ಮಾಡಿದರೂ ಅದರಂತೆ ನಡೆದುಕೊಳ್ಳಲೇಬೇಕಿಲ್ಲ ಎಂಬ ಸಂಗತಿ ಜನಮನದಲ್ಲಿ ಬೇರೂರಿದ ಮೇಲೆ ಪ್ರಮಾಣ ಮಾಡುವ ಪ್ರಕ್ರಿಯೆ ವಾಡಿಕೆಯಂತೆ ನಡೆಯತೊಡಗಿತೇ ಹೊರತು ಅದು ಧಾರ್ವಿುಕವಾಗಿ ಬಹಳ ಪರಿಣಾಮ ಬೀರುವುದಿಲ್ಲ ಎಂಬುದು ಗೋಚರವಾಗುತ್ತದೆ. ಹೀಗೆ ಪ್ಯಾಕೆಟ್​ಗಳ ಮೇಲೆ ಆರೋಗ್ಯಕ್ಕೆ ಹಾನಿಕರ ಎಂದು ಬರೆಸಿದರೂ, ರೋಗಿಯ ಚಿತ್ರ ಮುದ್ರಿಸಿದರೂ ಅವನ್ನೆಲ್ಲ ಲೆಕ್ಕಿಸದೆ ಕೊಂಡುಕೊಂಡು ಸೇವನೆ ಮಾಡುತ್ತಾರೆ. ಸಿನಿಮಾ ಟಾಕಿಸ್​ಗಳಲ್ಲಿ ಧೂಮಪಾನ, ಮದ್ಯಪಾನ ಆರೋಗ್ಯಕ್ಕೆ ಹಾನಿಕರ ಎಂದು ಜಾಗೃತಿಯ ಜಾಹೀರಾತು ಪ್ರಕಟಿಸಲಾಗುತ್ತದೆ. ಟಿವಿ ಧಾರಾವಾಹಿ, ಸಿನಿಮಾಗಳಲ್ಲಿ ಮದ್ಯಪಾನ, ಧೂಮಪಾನ ದೃಶ್ಯಗಳು ಬಂದಾಗ ಎಚ್ಚರಿಕೆಯ ಸೂಚನೆ ಪ್ರಕಟಪಡಿಸಲಾಗುತ್ತಿದೆ. ಹೀಗೆ ಸಾಕಷ್ಟು ರೀತಿಯಲ್ಲಿ ಅರಿವು ಮೂಡಿಸುವ ಪ್ರಯತ್ನ ಮಾಡಲಾಗುತ್ತದೆ.

ಚಟಗಳೆಂದರೆ ಹಾಗೆಯೇ, ಅದು ಒಳ್ಳೆಯದಿರಬಹುದು ಅಥವಾ ಕೆಟ್ಟದ್ದಿರಬಹುದು, ಅಭ್ಯಾಸವಾಗಿ ಬಿಟ್ಟರೆ ಅದರಿಂದ ಹೊರಬರಲು ಬಹಳ ಕಷ್ಟವಾಗುತ್ತದೆ. ನಿತ್ಯವೂ ವಾಕಿಂಗ್ ಹೋಗುವ ಅಭ್ಯಾಸ ಬೆಳೆಸಿಕೊಂಡವರಿಗೆ ಒಂದು ದಿನ ವಾಕಿಂಗ್ ತಪ್ಪಿಸಿದರೆ ಏನೋ ಕಳೆದುಕೊಂಡ ಹಾಗೆ, ಮೈಮನ ಉತ್ಸಾಹವಿಲ್ಲದಂತೆ ಆಗುತ್ತದೆ. ದುಶ್ಚಟಗಳು ಇದಕ್ಕಿಂತ ಒಂದು ಕೈ ಹೆಚ್ಚೇ. ಯಾಕೆಂದರೆ ಇಲ್ಲಿ ವ್ಯಕ್ತಿ ತನ್ನ ನಿಯಂತ್ರಣದಲ್ಲಿ ತಾನಿರುವುದಿಲ್ಲ. ಮದ್ಯವರ್ಜನ ಶಿಬಿರಗಳಲ್ಲಿ ನಾನು ಒಂದು ಮಾತು ಹೇಳುತ್ತಿರುತ್ತೇನೆ= ‘ಒಮ್ಮೆ ದುಶ್ಚಟಕ್ಕೆ ಒಳಗಾದರೆ ಆ ಚಟ ಬಿಡಲು ಪ್ರಯತ್ನಿಸಬಹುದು. ಆದರೆ ಆ ಚಟ ನಿಮ್ಮನ್ನು ಬಿಡಲಾರದು.’ ಅಂದರೆ ದುಶ್ಚಟಗಳ ವ್ಯಸನವುಳ್ಳವರ ಮನಸ್ಸಿನಲ್ಲಿ ಖಂಡಿತ ಇದು ಒಳ್ಳೆಯದಲ್ಲ, ಇದು ನನ್ನ ಸಂಸಾರಕ್ಕೆ ಕೇಡು ತರುತ್ತದೆ, ನನ್ನ ಪ್ರಾಣಕ್ಕೆ ಸಂಚಕಾರವಾಗಬಹುದು, ಕ್ಯಾನ್ಸರ್​ನಂತಹ ಅಪಾಯಕಾರಿ ಕಾಯಿಲೆ ಬರಬಹುದು, ಶ್ವಾಸಕೋಶಗಳು ಕೆಟ್ಟುಹೋಗಿ ಟಿ.ಬಿ ಕಾಯಿಲೆ ಬರಬಹುದು. ಅನೇಕ ರೋಗಗಳು ಅಂಟಬಹುದು ಎಂದು ಗೊತ್ತಿರುತ್ತದೆ. ಹಾಗಾಗಿ ಚಟ ತ್ಯಜಿಸುವ ಸಂಕಲ್ಪ ಮಾಡುತ್ತಾರೆ. ಆದರೆ ಆ ಚಟ ಅವರನ್ನು ಮತ್ತೆ ಮತ್ತೆ ತನ್ನತ್ತ ಸೆಳೆಯುತ್ತದೆ. ಹೀಗಾಗಿ ಮದ್ಯಪಾನಿಗಳು ಮತ್ತು ಧೂಮಪಾನಿಗಳು ಎಷ್ಟೇ ಪ್ರಯತ್ನಪಟ್ಟರೂ ಮಾನಸಿಕ ಪರಿವರ್ತನೆ ಆಗದಿದ್ದಲ್ಲಿ ಸುಲಭವಾಗಿ ತ್ಯಜಿಸಲು ಆಗುವುದಿಲ್ಲ. ಹೀಗಾಗಿ ಒತ್ತಾಯದಿಂದ, ಇಂಜೆಕ್ಷನ್, ಮಾತ್ರೆಗಳ ಮೂಲಕ ದುಶ್ಚಟ ತ್ಯಜಿಸಲು ಮುಂದಾಗಿ ಅಪಾಯಗಳು ಎದುರಾಗಿರುವುದನ್ನೂ ಕಂಡಿದ್ದೇವೆ. ಸ್ವಯಂಪ್ರೇರಣೆ ಹಾಗೂ ಇಚ್ಛಾಶಕ್ತಿ ಇದ್ದಾಗ ಅವೆಲ್ಲದರಿಂದ ಹೊರಬರಲು ಖಂಡಿತಾ ಸಾಧ್ಯ.

ವೈದ್ಯರು ತಪಾಸಣೆ ಮಾಡಿ ‘ನೋಡಿ ನಿಮ್ಮ ಶ್ವಾಸಕೋಶ ಬಹಳಷ್ಟು ಕೆಟ್ಟುಹೋಗಿದೆ. ನೀವು ಬೀಡಿ, ಸಿಗರೇಟ್ ಸೇವಿಸೋದನ್ನು ಬಿಡದಿದ್ದರೆ ಕೆಲವೇ ದಿನಗಳಲ್ಲಿ ಕ್ಯಾನ್ಸರ್ ಉಲ್ಬಣಗೊಂಡು ಪ್ರಾಣಕ್ಕೂ ಸಂಚಕಾರ’ ಎನ್ನುತ್ತಾರೆ. ಆ ಕ್ಷಣಕ್ಕೆ ವ್ಯಕ್ತಿಯೂ ತೀರ್ಮಾನ ಮಾಡುತ್ತಾನೆ- ದುಶ್ಚಟ ಬಿಡುತ್ತೇನೆ ಎಂದು. ನಾನು ಇನ್ನಷ್ಟು ದಿನ ಬದುಕಬೇಕು, ಸಂಸಾರವನ್ನು ಚೆನ್ನಾಗಿ ನೋಡಿಕೊಳ್ಳಬೇಕು ಎಂದುಕೊಳ್ಳುತ್ತಾನೆ. ಆದರೆ ಮನೆಗೆ ಬಂದು ಕೆಲ ದಿನಗಳ ಬಳಿಕ ಎಲ್ಲವೂ ಸರಿ ಆಗುತ್ತಿದೆ ಎಂದು ಅನಿಸಿದಾಗ ಮತ್ತೆ ಆ ಚಟ ಅವನನ್ನು ಸೆಳೆದುಕೊಳ್ಳುತ್ತದೆ. ಇದರಿಂದಾಗಿ ರೋಗ ಉಲ್ಬಣಗೊಂಡು ಮತ್ತೆ ಆರೋಗ್ಯ ಏರುಪೇರಾಗಿ ಪ್ರಾಣ ಕಳೆದುಕೊಂಡ ಅನೇಕ ದೃಷ್ಟಾಂತಗಳಿವೆ.

ನಾನು ಒಮ್ಮೆ ಧಾರವಾಡದಲ್ಲಿರುವ ಎಸ್​ಡಿಎಂ ದಂತ ವೈದ್ಯ ಕಾಲೇಜಿಗೆ ಹೋದಾಗ ಅಲ್ಲಿ ವೈದ್ಯರು ಒಂದು ಎಕ್ಸ್​ರೇ ಫೋಟೊ ತೋರಿಸಿದರು. ಗುಟ್ಖಾ ಅಭ್ಯಾಸವಿದ್ದ ಒಬ್ಬ ವ್ಯಕ್ತಿಯ ಗಲ್ಲದ ಚಿತ್ರವಾಗಿತ್ತು ಅದು. ನೋಡಿದಾಗ ಭೀತಿ ಹುಟ್ಟಿಸುವಂತಿತ್ತು. ಗಲ್ಲದ ಬಳಿ ದೊಡ್ಡ ರಂಧ್ರವಾಗಿತ್ತು. ಎಷ್ಟೊಂದು ತಂಬಾಕು, ಗುಟ್ಖಾ ಸೇವನೆಯನ್ನು ಮಾಡಿದ್ದ ಎಂದು ಚಿತ್ರವೇ ಹೇಳುತ್ತಿತ್ತು. ಆತನ ಬಾಯಿಯ ಎರಡೂ ಕಡೆಯ ಚರ್ಮಗಳು ತೂತಾಗಿತ್ತು.

‘ಗುಟ್ಖಾದಿಂದ ಆದ ಪರಿಣಾಮ ವಿವರಿಸಿ ಚಿಕಿತ್ಸೆ ಕೊಟ್ಟು ಕಳುಹಿಸಿದೆವು. ಮನೆಗೆ ಹೋದ ಮೇಲೆ ಚಟ ಬಿಡಲಾರದೆ ಮತ್ತೆ ಗುಟ್ಖಾ ಸೇವಿಸಿದ್ದಾನೆ’ ಎಂದು ವೈದ್ಯರು ಮತ್ತೆ ಮಾಡಿದಂತಹ ಸ್ಕಾ್ಯನ್ ರಿಪೋರ್ಟ್ ತೋರಿಸಿದರು. ಆತನ ಗಲ್ಲದಲ್ಲಿದ್ದ ರಂಧ್ರ ಮೊದಲಿಗಿಂತ ದೊಡ್ಡದಾಗಿತ್ತು. ಅದು ಕ್ಯಾನ್ಸರ್ ಆಗಿ ಪರಿವರ್ತನೆಯಾಗಿದೆ. ಇವನು ಇನ್ನು ಹೆಚ್ಚು ದಿನ ಬದುಕಲಾರ ಎಂದು ವೈದ್ಯರು ವಿವರಿಸಿದರು. ವ್ಯಸನ ಅಷ್ಟು ಹಾನಿಕಾರಕವಾಗಿದ್ದರೂ ಮತ್ತೆ ಮುಂದುವರಿಸುವಷ್ಟು ಮನಸ್ಸು ದುರ್ಬಲವಾದರೆ ಹೇಗೆ ಈ ದುಶ್ಚಟಗಳು ಆತನ ಮೇಲೆ ಸವಾರಿ ಮಾಡಬಹುದು ಎನ್ನುವುದಕ್ಕೆ ಇದೊಂದು ಉತ್ತಮ ಉದಾಹರಣೆ. ವ್ಯಸನಗಳು ನನಗೆ, ನನ್ನ ದೇಹಕ್ಕೆ ಹಾನಿಕರ. ನನ್ನ ದೇಹಕ್ಕೆ ಹಾನಿಯಾದರೆ ಹೆಂಡತಿ ಮಕ್ಕಳು ನನ್ನಿಂದ ದೂರಾಗುತ್ತಾರೆ ಮತ್ತು ಅವರಿಗೆ ಕಷ್ಟಗಳು ಎದುರಾಗುತ್ತವೆ ಎಂದರಿತು ದುಶ್ಚಟಗಳನ್ನು ಬಿಡುತ್ತೇನೆ ಎಂದು ಮನಸ್ಸಿನಲ್ಲಿ ದೃಢ ಸಂಕಲ್ಪ ಮಾಡಿದರೆ ಯಾರು ಬೇಕಾದರೂ ದುಶ್ಚಟಗಳಿಂದ ಮುಕ್ತರಾಗಬಹುದು.

ಶ್ರೀಕ್ಷೇತ್ರ ಧರ್ಮಸ್ಥಳದಲ್ಲಿ 1982ರಲ್ಲಿ ಬಾಹುಬಲಿ ಸ್ವಾಮಿಯ ಪ್ರತಿಷ್ಠಾಪನೆ ಮತ್ತು ಮಹಾಮಸ್ತಕಾಭಿಷೇಕವಾಯಿತು. ಆ ಸಂದರ್ಭದಲ್ಲಿ ಧರ್ಮಸ್ಥಳ ಗ್ರಾಮದ ಅಂಗಡಿ ಮಾಲಿಕರೆಲ್ಲ ಸ್ವಯಂಪ್ರೇರಿತರಾಗಿ ಒಟ್ಟಾಗಿ ಸಭೆ ನಡೆಸಿ ಒಂದು ನಿರ್ಧಾರಕ್ಕೆ ಬಂದರು. ಧರ್ಮಸ್ಥಳದ ಅಂಗಡಿ ಮುಂಗಟ್ಟುಗಳಲ್ಲಿ ಬೀಡಿ, ಸಿಗರೇಟು ಗುಟ್ಖಾ ಮಾರಾಟ ಮಾಡುವುದಿಲ್ಲ ಎಂಬ ಪ್ರತಿಜ್ಞೆ ತೆಗೆದುಕೊಂಡರು. ಅಂದಿನಿಂದ ಇಲ್ಲಿಯವರೆಗೂ ಧರ್ಮಸ್ಥಳದಲ್ಲಿ ಯಾವುದೇ ಅಂಗಡಿಗಳಲ್ಲೂ ತಂಬಾಕು, ಧೂಮಪಾನ ವಸ್ತುಗಳ ಮಾರಾಟಕ್ಕೆ ಅವಕಾಶಗಳಿಲ್ಲ. ಇಂತಹ ತೀರ್ವನಗಳು ಶ್ರೀಕ್ಷೇತ್ರ ಧರ್ಮಸ್ಥಳಕ್ಕೆ ಬರುವ ಅನೇಕರಿಗೆ ಧೂಮಪಾನ, ತಂಬಾಕು ಸೇವನೆಯಿಂದ ಮುಕ್ತರಾಗಲು ಪ್ರೇರಣೆಯಾಗಬಹುದು.

ರಾಜ್ಯದ ಎಲ್ಲ ಅಂಗಡಿ ಮುಂಗಟ್ಟುಗಳಲ್ಲಿ ವ್ಯಾಪಾರಸ್ಥರು ಸ್ವಯಂಪ್ರೇರಿತವಾಗಿ ಸಂಕಲ್ಪ ತೆಗೆದುಕೊಂಡು, ತಂಬಾಕು ಮಾರಾಟದಿಂದ ಬರುವ ಆದಾಯ ನಮಗೆ ಬೇಡ, ಅದರಿಂದ ವ್ಯಕ್ತಿಗಳಿಗೆ ಆಗುವ ಆರೋಗ್ಯ ಸಮಸ್ಯೆ, ಅವರ ಕುಟುಂಬ ಕಣ್ಣೀರಿನಲ್ಲಿ ಕೈತೊಳೆಯುವಂತಹ ಪಾಪಕ್ಕೆ ನಾವು ಈಡಾಗುವುದು ಬೇಡ ಎಂದು ಆಲೋಚಿಸಿ ಕಾರ್ಯಪ್ರವೃತ್ತರಾದರೆ ಖಂಡಿತವಾಗಿ ತಂಬಾಕಿನಿಂದ ಜನ ದೂರ ಉಳಿಯುತ್ತಾರೆ. ಇದಕ್ಕಾಗಿ ಒಂದು ಮಾರ್ಗವಿದೆ. ‘ನಮ್ಮ ಅಂಗಡಿಯಲ್ಲಿ ತಂಬಾಕು ಮೂಲದ ಯಾವುದೇ ವಸ್ತುಗಳನ್ನು ಮಾರಾಟ ಮಾಡುವುದಿಲ್ಲ’ ಎಂದು ಸೂಚನಾಫಲಕ ಅಳವಡಿಸಿದರೆ ಅಂಗಡಿ ಮಾಲೀಕರಿಗೆ ಹೆಮ್ಮೆ, ಹೆಗ್ಗಳಿಕೆ, ಗೌರವ ಮತ್ತು ಪುಣ್ಯ ಎಲ್ಲವೂ ಪ್ರಾಪ್ತಿಯಾಗುತ್ತದೆ.

ತಂಬಾಕನ್ನು ಸೇವಿಸುವ ವ್ಯಕ್ತಿಯ ಮೇಲಷ್ಟೇ ಅಲ್ಲದೆ ಆತನ ಜೊತೆಗೆ ಇರುವವರ ಮೇಲೆಯೂ ಪರಿಣಾಮ ಬೀರಿ ಅನಾರೋಗ್ಯ ಉಂಟು ಮಾಡುತ್ತದೆ. ಅಪ್ಪ ಸಿಗರೇಟು ಸೇದಿ ಬಿಟ್ಟ ಹೊಗೆಯನ್ನು ಮನೆಯಲ್ಲಿರುವ ಹೆಂಡತಿ ಮಕ್ಕಳು ಕೂಡ ಉಸಿರಾಡುತ್ತಾರೆ. ಕೆಮ್ಮು, ದಮ್ಮು, ಅಲರ್ಜಿ, ಉಸಿರಾಟದ ತೊಂದರೆ ಹೀಗೆ ಹಲವು ಸಮಸ್ಯೆಗಳು ಎದುರಾಗುವುದಂಟು. ಎಷ್ಟೆಂದರೆ ಮನೆಯಲ್ಲಿನ ವ್ಯಕ್ತಿಗಳು ಮಾತ್ರವಲ್ಲದೆ ನಾಯಿ, ಬೆಕ್ಕುಗಳಿಗೂ ತಂಬಾಕಿನಿಂದ ಅಪಾಯವಿದೆ ಎಂಬುದನ್ನು ಇತ್ತೀಚೆಗೆ ಪತ್ರಿಕೆಯಲ್ಲಿ ಓದಿದ್ದೆ. ತಂಬಾಕು, ಬೀಡಿ, ಸಿಗರೇಟು ಇತ್ಯಾದಿಗಳ ತುಂಡನ್ನು ಗೊತ್ತಿದ್ದೋ, ಗೊತ್ತಿಲ್ಲದೆಯೋ ಪ್ರಾಣಿಗಳು ಸೇವಿಸಿದಾಗ ಅವುಗಳು ವಾಂತಿ, ಭೇದಿ, ಅಪಸ್ಮಾರದಂತಹ ಕಾಯಿಲೆಗಳಿಗೆ ಒಳಗಾಗುತ್ತವೆ.

ಹಿಂದೆ ವೀಳ್ಯದೆಲೆ ಜತೆಗೆ ಹೆಚ್ಚಾಗಿ ತಂಬಾಕು ಸೇವನೆ ಮಾಡುತ್ತಿದ್ದರು. ಆಗ ಇದೊಂದು ಚಟವೇ ಆಗಿತ್ತು ಮತ್ತು ಗ್ರಾಮೀಣ ಪ್ರದೇಶದಲ್ಲಿ ತಂಬಾಕು ಸೇವನೆ ಮಾಡದಿರುವವರು ತೀರ ವಿರಳ ಎನ್ನುವ ಸನ್ನಿವೇಶ ಇತ್ತು. ಆದರೆ ಪ್ರಸ್ತುತ ನಮ್ಮಲ್ಲಿ ಹೊಗೆಸೊಪ್ಪಿನ ನೇರ ಸೇವನೆಯ ಅಭ್ಯಾಸ ಶೇ.90 ಕಡಿಮೆಯಾಗಿದೆ ಎನ್ನಬಹುದು. ಉತ್ತರ ಭಾರತದಲ್ಲಿ ಮಾತ್ರ ಹೊಗೆಸೊಪ್ಪಿನ ನೇರ ಸೇವನೆ ಅಧಿಕವಾಗಿದೆ. ತಂಬಾಕನ್ನು ನೇರವಾಗಿ ಸೇವನೆ ಮಾಡದೆ ಗುಟ್ಕಾ, ಪಾನ್, ಪಾನ್ ಮಸಾಲಾ ಹೀಗೆ ವಿವಿಧ ರೂಪದಲ್ಲಿ ಸೇವಿಸುತ್ತಾರೆ. ತಂಬಾಕು ಒಂದು ಬಾರಿ ನಾಲಗೆಗೆ ಸ್ಪರ್ಶವಾದರೆ ಚಟವಾಗಿ ಪರಿವರ್ತನೆಗೊಂಡು ಅದನ್ನು ಬಿಡದಕ್ಕಾಗದಷ್ಟು ಆಳವಾಗಿ ಸಂಬಂಧವನ್ನು ಬೆಳೆಸಿಕೊಳ್ಳುತ್ತದೆ. ತಂಬಾಕುಮುಕ್ತ ದಿನ ಎನ್ನುವುದು ಒಂದು ದಿವಸದ ಕಾರ್ಯಕ್ರಮವಾಗದೆ ಪ್ರತಿದಿನವೂ ತಂಬಾಕುಮುಕ್ತ ದಿನವಾಗಬೇಕು. ನಮ್ಮ ಇಡಿಯ ಆಯುಷ್ಯದಲ್ಲಿ ತಂಬಾಕು ಸೇವನೆ ಮಾಡುವುದಿಲ್ಲ ಎನ್ನುವ ಸಂಕಲ್ಪ ಮಾಡಿದರೆ ಆರೋಗ್ಯವನ್ನು ಸುಧಾರಿಸಿಕೊಳ್ಳಬಹುದು. ಮತ್ತು ಅನಿರೀಕ್ಷಿತ ಆರೋಗ್ಯ ಸಮಸ್ಯೆಗಳನ್ನು ತಡೆಗಟ್ಟಬಹುದು. ಆರೋಗ್ಯಕ್ಕಿಂತ ದೊಡ್ಡ ಸಂಪತ್ತು ಬೇರೊಂದಿಲ್ಲ. ತಂಬಾಕುಮುಕ್ತ ಬದುಕನ್ನು ರೂಪಿಸೋಣ. ತಂಬಾಕು ಸೇವಿಸುವ ಎಲ್ಲರನ್ನೂ ಅದರಿಂದ ಮುಕ್ತರಾಗುವಂತೆ ಪ್ರೇರೇಪಿಸೋಣ.

(ಲೇಖಕರು ಶ್ರೀಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿಗಳು)