ಅಂಕಣ

ಮಕ್ಕಳೊಂದಿಗೆ ನಾವೂ ಮಕ್ಕಳಾಗೋಣ..; ಮಕ್ಕಳಿಗೆ ಮೌಲ್ಯ ಕಲಿಸೋಣ..

Webdesk - Ravikanth
ನಮ್ಮ ಸನಾತನ ಧರ್ಮದಲ್ಲಿ ಮಕ್ಕಳನ್ನು ದೇವರ ಸಮಾನ ಎನ್ನುತ್ತಾ ಭಗವಂತನ ಸ್ಥಾನವನ್ನು ನೀಡಿದ್ದೇವೆ. ಮನೆಯಲ್ಲಿ ಮಕ್ಕಳಿದ್ದರೆ ಗುಡಿಸಲಾದರೂ ಸರಿ, ಅರಮನೆಯಾದರೂ ಸರಿ, ಸದಾ ನಳನಳಿಸುತ್ತಿರುತ್ತದೆ. ಅದೇ, ಮಕ್ಕಳಿಲ್ಲದ ಮನೆ ಮಾತ್ರ ಬಿಕೋ ಎನ್ನುತ್ತದೆ. ಮಕ್ಕಳ ಕುರಿತಾಗಿ, ಅವರ ಆಟ, ಪಾಠ, ತುಂಟಾಟಗಳ ಕುರಿತಾಗಿ ನಮ್ಮ ಹಿರಿಯರು ಸಾಕಷ್ಟು ಅನುಭವದ ನುಡಿಗಳನ್ನು, ಕತೆ, ಕವನಗಳ ಮೂಲಕ ಪ್ರಕಟಪಡಿಸಿದ್ದಾರೆ. ಶ್ರೀಕೃಷ್ಣ, ಗಣೇಶ, ಷಣ್ಮುಖ, ಶ್ರೀರಾಮ ಲಕ್ಷ್ಮಣ, ಕೌರವರು-ಪಾಂಡವರು ಹೀಗೆ ವಿವಿಧ ಪಾತ್ರಗಳನ್ನು ಬಾಲ್ಯಕಾಲದ ಅವರ ಜೀವನ ಕತೆಗಳ ಮೂಲಕ ನ್ಯಾಯ, ನೀತಿ, ಧರ್ಮ, ಸತ್ಯ, ಜಾಣ್ಮೆ, ಶೌರ್ಯ, ಧೈರ್ಯ, ಸಾಹಸ, ವೀರ ಮುಂತಾದ ಹಲವಾರು ವಿಷಯಗಳ ಬಗ್ಗೆ ಪುರಾಣ ಕತೆಗಳ ಮೂಲಕ ಪ್ರಸ್ತುತಪಡಿಸಲಾಗಿದೆ. ಈಗ ಟಿ.ವಿ.ಗಳಲ್ಲಿ ಬರುವ ಸೂಪರ್ ಮ್ಯಾನ್, ಬ್ಯಾಟ್​ವ್ಯಾನ್, ಶಕ್ತಿಮಾನ್​ನಂತಹ ಸೂಪರ್ ಹೀರೋಗಳ ಕಾರ್ಟೂನ್​ನಂತೆಯೇ ಶ್ರೀಕೃಷ್ಣ, ಗಣೇಶ, ಭೀಮ, ಹನುಮಾನ್ ಇತ್ಯಾದಿ ಅನೇಕ ಕಾರ್ಟೂನ್​ಗಳ ಮೂಲಕ ಅವರ ಸಾಹಸ ಶೌರ್ಯವನ್ನು ಅಭಿವ್ಯಕ್ತಿಸುತ್ತಾರೆ. ಅದರ ಜತೆಗೆ ನ್ಯಾಯ, ನೀತಿ, ಧರ್ಮದ ಪಾಠ ತಿಳಿಸಿಕೊಡುತ್ತಾರೆ. ಹೀಗೆ ಅನೇಕ ಪೌರಾಣಿಕ ಕಥೆಗಳ ಮೂಲಕ ಮೌಲ್ಯಗಳನ್ನು ಪ್ರೇರೇಪಿಸುತ್ತಾರೆ.

ಸುಧಾಮ ಮತ್ತು ಕೃಷ್ಣನ ಕಥೆಯು ಪ್ರೀತಿ ಮತ್ತು ಸ್ನೇಹದ ಬಗ್ಗೆ ತಿಳಿಸುತ್ತದೆ. ಸುಧಾಮನು ಬಡವನಾಗಿದ್ದರೂ ಕೃಷ್ಣ-ಸುಧಾಮರಲ್ಲಿ ಸಿರಿತನ-ಬಡತನದ ಭೇದವಿರಲಿಲ್ಲ. ಅವರ ಸ್ಥಾನಮಾನದ ನಡುವಿನ ವ್ಯತ್ಯಾಸವು ಅವರ ಸ್ನೇಹ ಅಥವಾ ಬಂಧಕ್ಕೆ ಅಡ್ಡಿಯಾಗಲಿಲ್ಲ. ಈ ಗೆಳತನದ ಬಗ್ಗೆ ಲೋಕವೇ ಮಾತನಾಡುತ್ತದೆ. ಎಲ್ಲಾ ಕಾಲಕ್ಕೂ ಇದು ಮಾದರಿಯಾದ ಸ್ನೇಹ. ಹೀಗೆ ಅನೇಕ ಪುರಾಣ ಕಥೆಗಳು ಇವೆ.

ಇಂದಿನ ಮಕ್ಕಳೇ ನಾಳಿನ ಪ್ರಜೆಗಳು ಎಂಬ ಮಾತು ಎಷ್ಟು ಅರ್ಥಪೂರ್ಣವಾದುದು. ಯಾಕೆಂದರೆ ಮಕ್ಕಳಿಗೆ ಸಣ್ಣ ಪ್ರಾಯದಲ್ಲೇ ಶಿಸ್ತುಬದ್ಧವಾಗಿ, ಜೀವನ ಮೌಲ್ಯ, ಸಂಸ್ಕಾರಗಳನ್ನು ಹೇಳಿ ಕೊಟ್ಟಾಗ ಅದನ್ನವರು ಜೀವನದ ಉದ್ದಕ್ಕೂ ಪಾಲಿಸುತ್ತಾರೆ. ಅಲ್ಲದೆ, ತಾನು ಹೋದ ಕಡೆಗಳಲ್ಲಿ ತನ್ನ ಸಂಸ್ಕಾರ, ಮೌಲ್ಯಗಳನ್ನು ಪಸರಿಸುತ್ತಾರೆ. ಗಿಡವನ್ನು ನೆಟ್ಟು, ಅದಕ್ಕೆ ಕಾಲ ಕಾಲಕ್ಕೆ ನೀರು, ಗೊಬ್ಬರ ಕೊಟ್ಟು ಆರೈಕೆ ಮಾಡಿ ಬೆಳೆಸುತ್ತೇವೆಯೋ ಹಾಗೆಯೇ ಮಕ್ಕಳನ್ನು ಬಾಲ್ಯದಲ್ಲೇ ತಿದ್ದಿ ತೀಡಿ ಬೆಳೆಸಬೇಕು ಎಂದಿದ್ದಾರೆ ಹಿರಿಯರು. ಬಾಲ್ಯದಲ್ಲಿ ನ್ಯಾಯ, ನೀತಿ, ಸದ್ಗುಣಗಳನ್ನು ಕಲಿಯದವರು ದೊಡ್ಡವರಾದ ಮೇಲೆ ಕಲಿಯುತ್ತಾರೆಯೇ? ಎಂಬುದನ್ನು ಗಿಡವಾಗಿ ಬಗ್ಗದ್ದು, ಮರವಾಗಿ ಬಗ್ಗಿತೇ ಎಂಬುದಾಗಿ ಹೇಳಿದ್ದಾರೆ.

ಮಕ್ಕಳನ್ನು ಸರಿಯಾದ ಮಾರ್ಗದಲ್ಲಿ ಬೆಳೆಸದೇ ಇದ್ದರೆ ಮುಂದೆ ಅವರು ದೊಡ್ಡವರಾದ ಮೇಲೆ ಪಶ್ಚಾತ್ತಾಪ ಪಡುವವರು ಹೆತ್ತವರೇ ಎಂಬುದನ್ನು ಮರೆಯಬಾರದು. ಇಂದಿನ ದಿನಗಳಲ್ಲಿ ವೃದ್ಧಾಶ್ರಮಗಳು, ಹಿರಿಯರ ಆರೈಕೆ ಕೇಂದ್ರಗಳು ಹೆಚ್ಚಾಗುತ್ತಿರುವುದಕ್ಕೆ ಹೆತ್ತವರೇ ಕಾರಣ ಎಂದರೆ ತಪ್ಪಾಗಲಾರದು. ಯಾಕೆಂದರೆ ಮಕ್ಕಳಿಗೆ ಸರಿಯಾದ ಸಂಸ್ಕಾರ, ಜ್ಞಾನ, ಅರಿವನ್ನು ಮೂಡಿಸಿದ್ದರೆ ಅವರು ಹೆತ್ತ-ತಂದೆ ತಾಯಿಯರನ್ನು ಖಂಡಿತಾ ವೃದ್ಧಾಶ್ರಮಕ್ಕೆ ಬಿಟ್ಟು ಬರಲಾರರು. ಕೆಲವು ಸಲ ಹೊಂದಾಣಿಕೆಯ ಕೊರತೆ ಹಾಗೂ ಮನಸ್ತಾಪಗಳಿಂದ ಇಂತಹ ಘಟನೆಗಳು ಸಂಭವಿಸುವುದುಂಟು. ಅಜ್ಜ ಮತ್ತು ಮೊಮ್ಮಕ್ಕಳ ತಲೆಮಾರಿನ ನಡುವೆ ಅಂತರವಿರುತ್ತದೆ. ಜೀವನ ಶೈಲಿಯಲ್ಲೂ ಸಾಕಷ್ಟು ವ್ಯತ್ಯಾಸವಿರುತ್ತದೆ. ಅವರು ಅವರ ಹಳೆಯ ಜೀವನ ಶೈಲಿಯ ಅಭ್ಯಾಸವನ್ನೇ ಹೊಂದಿರುತ್ತಾರೆ. ಬದಲಾವಣೆ ಆಗಲು ಬಯಸುವುದಿಲ್ಲ. ಹೇಗೆಂದರೆ ನಾನೊಂದು ಹಿಂದಿ ಸಿನಿಮಾ ನೋಡಿದ್ದೆ. ಅದರಲ್ಲಿ ಅಜ್ಜನೊಬ್ಬ ಅಚಾನಕ್ಕಾಗಿ ಇನ್ನೊಂದು ಮನೆಗೆ ಹೋಗಿ ಅಲ್ಲಿ ಮಗುವಿನೊಂದಿಗೆ ಆಟವಾಡುತ್ತ ಉಳಿದುಬಿಡುತ್ತಾನೆ. ಕೆಲವು ದಿವಸದ ಮಟ್ಟಿಗೆ ಅಲ್ಲಿಯೇ ಇರುವ ಆತನ ವರ್ತನೆ, ಚಟುವಟಿಕೆಗಳು ಮಗುವಿಗೆ, ಮನೆಯವರಿಗೆ ಸಹ್ಯವೆನಿಸುವುದಿಲ್ಲ. ಮನೆಯಲ್ಲಿರುವಾಗ ಲಂಗೋಟಿಯಲ್ಲಿರುವುದು, ಲಂಗೋಟಿಯನ್ನು ಒಗೆದು ಹಾಲ್​ನಲ್ಲೇ ಒಣಗಲು ಹಾಕುವುದು. ಹೀಗೆಲ್ಲ ಇದ್ದಾಗ ಮನೆ-ಮಂದಿಗೆ ತೊಂದರೆಯಾಗಿ ಸಮಸ್ಯೆಗಳು ಎದುರಾಗುತ್ತವೆ. ಮದುವೆಯಾದ ಗಂಡ-ಹೆಂಡತಿಗೆ ಹೊಂದಿಕೊಳ್ಳಲು ಕಷ್ಟವಿರುವಾಗ ತಲೆಮಾರಿನ ಜನರ ನಡುವೆ ಹೊಂದಿಕೊಳ್ಳುವುದು ಮತ್ತಷ್ಟು ಕಷ್ಟವೇ. ಈಗಿನ ಮಕ್ಕಳು ಮೊಬೈಲ್, ಟಿವಿಗಳ ಬಳಕೆಯಿಂದ ಸಾಕಷ್ಟು ಮಾಹಿತಿ ಪಡೆದು ಬುದ್ಧಿವಂತಿಕೆ ಹಾಗೂ ಆಧುನಿಕತೆ ರೂಢಿಸಿಕೊಂಡಿರುತ್ತಾರೆ. ಅವರಿಗೆ ಹಿಂದಿನ ಕಾಲದ ರೀತಿಯ ಶಿಕ್ಷಣದ ಅಗತ್ಯವಿರುವುದಿಲ್ಲ. ಪ್ರೀತಿಯಿಂದ ಮನ ಮುಟ್ಟುವಂತೆ ಮಕ್ಕಳೊಂದಿಗೆ ಮಕ್ಕಳಾಗಿ ಶಿಕ್ಷಣ ಹೇಳಿ ಕೊಡಬೇಕಾಗಿದೆ. ಕೆಲವು ವಿದೇಶಗಳಲ್ಲಿ ಮಕ್ಕಳ ಬಗ್ಗೆ ಅತೀವ ಕಾಳಜಿ ವಹಿಸಲಾಗುತ್ತದೆ. ಮಕ್ಕಳಿಗೆ ಇತರರಿಂದ ಅಥವಾ ಹೆತ್ತವರಿಂದಲೇ ಮಾನಸಿಕ, ದೈಹಿಕ ಹಿಂಸೆಗಳಾದರೆ ಕಾನೂನು ಕ್ರಮ ಕೈಗೊಳ್ಳುತ್ತಾರೆ. ಮಕ್ಕಳಿಗೆ ಶಿಕ್ಷೆಯಿಂದ ಶಿಕ್ಷಣ ನೀಡುವುದಲ್ಲ. ಬದಲಾಗಿ ಅವರಲ್ಲಿರುವ ಪ್ರತಿಭೆ ಗುರುತಿಸಿ ಬೆನ್ನುತಟ್ಟಿ ಹಿರಿಯ ರೊಂದಿಗೆ ಸಮಾಜದಲ್ಲಿ ಉತ್ತಮ ರೀತಿಯಲ್ಲಿ ಬೆರೆತು ಬಾಳುವ ಮೌಲ್ಯಯುತ ಶಿಕ್ಷಣವನ್ನು ನೀಡಲು ಪೋ›ತ್ಸಾಹಿಸಲಾಗುತ್ತದೆ.

ವೃದ್ಧಾಶ್ರಮದಲ್ಲಿರುವವರು ತಮ್ಮ ಮಕ್ಕಳು ಚೆನ್ನಾಗಿ ಓದಿ ಡಾಕ್ಟರ್, ಇಂಜಿನಿಯರ್, ಕಂಪೆನಿಯಲ್ಲಿ ಕೆಲಸ ಮಾಡುವವರು ಎಂದು ಹೇಳುತ್ತಾರೆಯೇ ಹೊರತು ಯಾರೊಬ್ಬರೂ ಕೂಡ ನನ್ನ ಮಗ/ಮಗಳು ಓದಿಲ್ಲ, ಕೃಷಿ ಮಾಡುತ್ತಿದ್ದಾಳೆ, ಕೂಲಿ ಮಾಡುತ್ತಾರೆ ಎಂದು ಹೇಳಿದ ಉದಾಹರಣೆಗಳು ಇಲ್ಲವೇ ಇಲ್ಲ ಎನ್ನಬಹುದು. ಅವರೆಲ್ಲ ಪಡೆದ ವಿದ್ಯೆ ಕೇವಲ ಅಕ್ಷರ ಜ್ಞಾನವೇ ಅಥವಾ ಮೌಲ್ಯಗಳನ್ನು ಒಳಗೊಂಡಿರುವ ಜೀವನ ಶಿಕ್ಷಣವೇ ಎಂದು ಸುಲಭವಾಗಿ ಅರ್ಥ ಮಾಡಿಕೊಳ್ಳಬಹುದು. ಹಾಗಾದರೆ ಮಕ್ಕಳಿಗೆ ಯಾವ ರೀತಿಯ ಶಿಕ್ಷಣ ಬೇಕು? ಯಾವ ರೀತಿಯ ಶಿಕ್ಷಣ ಪಡೆದರೆ ಮಕ್ಕಳು ಸತ್ಪ್ರಜೆಗಳಾಗಬಹುದು ಎಂಬುದನ್ನು ಗಂಭೀರವಾಗಿ ಚಿಂತಿಸುವ, ಅದಕ್ಕೆ ಪರಿಹಾರೋಪಾಯ ಕಂಡುಕೊಳ್ಳುವ ಅಗತ್ಯವಿದೆ ಎಂಬುದು ನನ್ನ ಭಾವನೆ. ಇಲ್ಲದೇ ಇದ್ದಲ್ಲಿ ಮುಂದಿನ ದಿನಗಳಲ್ಲಿ ಶಿಕ್ಷಣವು ಮಾರಾಟದ ವಸ್ತುವಿನಂತಾಗ ಬಹುದೇ ಹೊರತು, ಅದರಿಂದ ಬದುಕು ರೂಪಿಸಿಕೊಳ್ಳಲು ಸಾಧ್ಯವಾಗದು.

ಒಂದು ದೇಶವನ್ನು ನಾಶ ಮಾಡಬೇಕೆಂದರೆ ಬಹಳ ಕಷ್ಟವೇನಿಲ್ಲ. ಅಲ್ಲಿನ ಶಿಕ್ಷಣ ವ್ಯವಸ್ಥೆಯನ್ನು ಹಾಳು ಮಾಡಿ ಮಕ್ಕಳಿಗೆ ಸರಿಯಾದ ಶಿಕ್ಷಣ ನೀಡದಿದ್ದರೆ ಆಯಿತು. ಬಳಿಕ ಅದು ಕೆಲವೇ ಕೆಲವು ವರ್ಷಗಳಲ್ಲಿ ಯಾವುದೇ ಯುದ್ಧ, ಬಲಾತ್ಕಾರ, ಬೆದರಿಕೆ ಇತ್ಯಾದಿಗಳಿಲ್ಲದೆ ತನ್ನಿಂದ ತಾನೇ ನಾಶವಾಗುವುದು ಎಂಬ ಮಾತನ್ನು ಎಲ್ಲೋ ಓದಿದ ನೆನಪು. ಅದು ಅಕ್ಷರಶಃ ಸತ್ಯ. ಯಾಕೆಂದರೆ ನಮ್ಮ ರಾಷ್ಟ್ರ ಇಷ್ಟೊಂದು ಅಭಿವೃದ್ಧಿಯಾಗಿರುವುದಕ್ಕೆ ಇಲ್ಲಿರುವ ಶಿಕ್ಷಣ ಹಾಗೂ ಜ್ಞಾನ ಸಂಪತ್ತೇ ಕಾರಣ. ಮೊನ್ನೆಯಷ್ಟೇ ನಮ್ಮ ರಾಷ್ಟ್ರದ ಹೆಮ್ಮೆಯ ವಿಜ್ಞಾನಿಗಳು ಚಂದ್ರಗ್ರಹದ ದಕ್ಷಿಣ ದಿಕ್ಕಿನಲ್ಲಿ ವಿಕ್ರಮ್ ಲ್ಯಾಂಡರನ್ನು ಇಳಿಸುವ ಮೂಲಕ ಭಾರತದ ಹೆಜ್ಜೆ ಗುರುತನ್ನು ಚಂದ್ರನ ನೆಲದಲ್ಲಿ ಅಚ್ಚೊತ್ತುವಂತೆ ಮಾಡಿದ್ದಾರೆ. ಮಾತ್ರವಲ್ಲದೆ, ಬಾಹ್ಯಾಕಾಶ ವಲಯದಲ್ಲಿ ಯಾರೂ ಮಾಡಿರದಂತಹ ಸಾಧನೆಯನ್ನು ಭಾರತವು ಮಾಡಿದೆ ಎಂಬುದು ನಮ್ಮೆಲ್ಲರಿಗೂ ಹೆಮ್ಮೆಯ ಸಂಗತಿ.

ಇಷ್ಟೆಲ್ಲ ಆಗಿದ್ದು, ಶಿಕ್ಷಣ ಹಾಗೂ ಇಚ್ಛಾಶಕ್ತಿಯ ಮೂಲಕ. ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕಿದ ಬಳಿಕ ಶಿಕ್ಷಣವನ್ನು ಸಾರ್ವತ್ರೀಕರಣಗೊಳಿಸಲಾಯಿತು. ಆ ಮೂಲಕ ದೇಶದ ಎಲ್ಲರೂ ಶಿಕ್ಷಣವನ್ನು ಪಡೆಯುವಂತಾಯಿತು. ಶಿಕ್ಷಣವು ಇತರ ಕ್ಷೇತ್ರಗಳಿಗೆ ಮೆಟ್ಟಿಲಾಗಿ ಅಭಿವೃದ್ಧಿಗೆ ಬುನಾದಿಯಾಯಿತು. ಒಂದು ಕಾಲದಲ್ಲಿ ಹಾವಾಡಿಸುವವರ, ಅನಕ್ಷರಸ್ಥ ದೇಶವೆಂದು ಕರೆಯುತ್ತಿದ್ದ ಭಾರತವನ್ನು ಇಂದು ವಿಶ್ವ ಗುರು ಎಂದು ಕರೆಯುವಷ್ಟರ ಮಟ್ಟಿಗೆ ಭಾರತ ಅಭಿವೃದ್ಧಿಯಾಗಿದೆ ಎಂದರೆ ಅದಕ್ಕೆ ಮೂಲ ಕಾರಣ ಶಿಕ್ಷಣ. ಪರಿಸ್ಥಿತಿ ಮತ್ತು ಕಾಲಕ್ಕೆ ಸರಿಯಾಗಿ ಹೊಂದಾಣಿಕೆ ಆಗುವಂತೆ ಶಿಕ್ಷಣ ವ್ಯವಸ್ಥೆಯಲ್ಲೂ ಸಾಕಷ್ಟು ಅಭಿವೃದ್ಧಿಗಳಾಗಿವೆ. ಶಿಕ್ಷಣ ವ್ಯವಸ್ಥೆಯಲ್ಲಿ ಅದೆಷ್ಟೇ ಬದಲಾವಣೆ, ಅಭಿವೃದ್ಧಿಗಳಾದರೂ ಮೂಲ ಹಾಗೂ ಅಗತ್ಯವಾಗಿ ಬೇಕೇ ಬೇಕಾಗಿರುವ ಮೌಲ್ಯ, ಜೀವನ ಶಿಕ್ಷಣವನ್ನು ಮರೆಯಲೇ ಬಾರದು. ಶಿಕ್ಷಣವು ಉದ್ಯೋಗ ಪಡೆಯಲು, ವ್ಯಾಪಾರ-ವ್ಯವಹಾರ ಮಾಡಲು, ಕೆಲಸ ನಿರ್ವಹಿಸಲು ಮಾತ್ರವಲ್ಲ ಅದು ನಮ್ಮ ಜೀವನವನ್ನು ಉತ್ತಮವಾಗಿ ರೂಪಿಸಿಕೊಳ್ಳಲು ನೆರವಾಗಬೇಕು. ಅಂತಹ ಶಿಕ್ಷಣಕ್ಕೆ ನಾವೆಲ್ಲ ಒತ್ತು ನೀಡಬೇಕು. ಇಂದಿನ ಮಕ್ಕಳು ಬಹಳ ಸೂಕ್ಷ್ಮ ಮನಸ್ಸಿನವರು. ಹಿಂದಿನ ಕಾಲದಂತೆ ಹೊಡೆದು, ಬಡಿದು, ಗದರಿಸಿ ಹೇಳಿದರೆ ಆಗದು. ಬದಲಾಗಿ ಪ್ರೀತಿಯಿಂದ ಸಂಸ್ಕಾರ, ಗುಣನಡತೆಗಳನ್ನು, ಗುರುಹಿರಿಯರಲ್ಲಿ ಗೌರವ, ಕಿರಿಯರಲ್ಲಿ ಪ್ರೀತಿ, ಜೀವನ ಮೌಲ್ಯಗಳನ್ನು ಕಲಿಸಿಕೊಡಬೇಕು. ತಪ್ಪಾದಾಗ ತಿದ್ದಬೇಕು. ಅಗತ್ಯಬಿದ್ದಲ್ಲಿ ಶಿಕ್ಷಿಸುವುದೂ ತಪ್ಪಲ್ಲ. ನಮ್ಮ ಹಿರಿಯರ ಕಾಲದಲ್ಲಿ ಮನೆ ತುಂಬಾ ಮಕ್ಕಳಿರುತ್ತಿದ್ದರು. ಓದದಿದ್ದರೂ ಪರವಾಗಿಲ್ಲ ಹೊಲ, ಜಮೀನು ನೋಡಿಕೊಂಡಿರಲಿ ಎಂದು ಶಿಕ್ಷಣಕ್ಕೆ ಒತ್ತು ನೀಡುತ್ತಿರಲಿಲ್ಲ. ಇಂದು ಮನೆಯಲ್ಲಿ ಎರಡು ಅಥವಾ ಒಂದೇ ಮಕ್ಕಳು ಇರುವುದರಿಂದ ಅವರ ಬಗ್ಗೆ ಕಾಳಜಿ ವಹಿಸಿ, ಉತ್ತಮ ಮಕ್ಕಳನ್ನಾಗಿ ರೂಪಿಸುವುದು ತಂದೆ-ತಾಯಿಯರಿಗೆ ಕಷ್ಟವಾಗಲಾರದು.

ಹಿಂದೆಲ್ಲ ಮನೆಯಲ್ಲೇ ಮೌಲ್ಯ ಶಿಕ್ಷಣಗಳು ಮಕ್ಕಳಿಗೆ ದೊರೆಯುತ್ತಿದ್ದವು. ಕಾಲ ಸರಿದಂತೆ ಶಾಲೆಗಳಲ್ಲಿ ಪಠ್ಯದ ಜತೆ ಮೌಲ್ಯ ಶಿಕ್ಷಣವನ್ನು ಕಲಿಸಿಕೊಡುವಂತಹ ಪರಿಸ್ಥಿತಿ ಬಂದಿದೆ. ಮಕ್ಕಳಲ್ಲಿ ಮೌಲ್ಯಗಳು ಕಡಿಮೆಯಾಗುತ್ತಿರುವುದನ್ನು ಕಂಡು ಶ್ರೀಕ್ಷೇತ್ರ ಧರ್ಮಸ್ಥಳದ ಶಾಂತಿವನ ಟ್ರಸ್ಟ್​ನ ಯೋಗ-ನೈತಿಕ ಶಿಕ್ಷಣ ಯೋಜನೆಯಡಿ ಆಸಕ್ತ ಶಿಕ್ಷಕರಿಗೆ ಸನಿವಾಸ ಯೋಗ ಮತ್ತು ಮೌಲ್ಯ ತರಬೇತಿ ನೀಡುವ ಕಾರ್ಯಕ್ರಮವನ್ನು 1991ರಲ್ಲಿ ಆರಂಭಿಸಲಾಗಿದೆ. ಇದೀಗ ಪ್ರತಿವರ್ಷ 4 ಲಕ್ಷಕ್ಕೂ ಅಧಿಕ ಯೋಗ ತರಬೇತಿ ಪಡೆದ ಶಿಕ್ಷಕರು ಅವರವರ ಶಾಲೆಗಳಲ್ಲಿ ಯೋಗ ತರಬೇತಿ ನೀಡುತ್ತಿದ್ದಾರೆ. ಪ್ರಾಥಮಿಕ ಹಾಗೂ ಪ್ರೌಢಶಾಲಾ ಮಕ್ಕಳಿಗೆ ಶಾಲಾ ವಿದ್ಯಾಭ್ಯಾಸದೊಂದಿಗೆ ಯೋಗ ಮತ್ತು ನೈತಿಕ ಶಿಕ್ಷಣ ನೀಡಲಾಗುತ್ತಿದೆ. ಪ್ರತಿವರ್ಷ ವಿವಿಧ ಲೇಖಕದಿಂದ ನೈತಿಕ ಮೌಲ್ಯಾಧಾರಿತ ಪುಸ್ತಕಗಳನ್ನು ಬರೆಸಿ, ಶಾಂತಿವನ ಟ್ರಸ್ಟ್ ಮೂಲಕ ಪ್ರಕಟಿಸಿ ಶಾಲೆಗಳಿಗೆ ಕೊಂಡುಹೋಗಿ ವಿದ್ಯಾರ್ಥಿಗಳಿಗೆ ನೀಡುವ ಮೂಲಕ ಪ್ರೋತ್ಸಾಹಿಸಲಾಗುತ್ತಿದೆ. ಅಲ್ಲದೆ, ಶಾಲೆ, ತಾಲೂಕು ಹಾಗೂ ಜಿಲ್ಲಾ ಮಟ್ಟದಲ್ಲಿ ಪುಸ್ತಕಗಳನ್ನು ಆಧರಿಸಿ ಭಾಷಣ, ಪ್ರಬಂಧ, ಶ್ಲೋಕ ಕಂಠಪಾಠ ಹಾಗೂ ಚಿತ್ರಕಲಾ ಸ್ಪರ್ಧೆಗಳನ್ನು ಹಮ್ಮಿಕೊಂಡು ಭಾಗವಹಿಸುವ ಎಲ್ಲಾ ವಿದ್ಯಾರ್ಥಿಗಳಿಗೆ ಪ್ರಮಾಣಪತ್ರ ನೀಡುವುದರ ಜತೆಗೆ ಶಾಲಾ ಮಟ್ಟದಿಂದಲೇ ವಿಜೇತರಿಗೆ ಬಹುಮಾನ ನೀಡಿ ಪ್ರೋತ್ಸಾಹಿಸಲಾಗುತ್ತಿದೆ. ಕಳೆದ 29 ವರ್ಷಗಳಲ್ಲಿ ಈವರೆಗೆ ಇಪ್ಪತ್ತೊಂದು ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಮೌಲ್ಯ ಶಿಕ್ಷಣವನ್ನು ನೀಡಲಾಗಿದೆ. ರಾಜ್ಯದ ಕೆಲವೇ ಜಿಲ್ಲೆಗಳಿಗೆ ಸೀಮಿತವಾಗಿರುವ ಈ ಯೋಜನೆಯ ಮೂಲಕ ಬಾಲ್ಯದಲ್ಲಿಯೇ ಮಕ್ಕಳಿಗೆ ಯೋಗ ಮತ್ತು ನೈತಿಕ ಶಿಕ್ಷಣ ನೀಡುವುದರ ಮೂಲಕ ಭವಿಷ್ಯದಲ್ಲಿ ಸದೃಢ ಹಾಗೂ ಸಂಸ್ಕಾರವಂತ ಯುವ ಜನಾಂಗವನ್ನು ನಿರ್ಮಾಣ ಮಾಡುವ ಸಣ್ಣ ಪ್ರಯತ್ನವನ್ನು ಶ್ರೀ ಕ್ಷೇತ್ರದಿಂದ ಮಾಡಲಾಗುತ್ತಿದೆ.

ಮೌಲ್ಯವೆನ್ನುವುದು ಎಳೆವೆಯಲ್ಲೇ ಕಲಿತರೆ ಅದು ಜೀವನದ ಔನ್ನತ್ಯಕ್ಕೆ ಮೆಟ್ಟಿಲಾಗಿರುತ್ತದೆ. ಹಣ ಆಸ್ತಿ ಸಂಪತ್ತಿಗಿಂತ ಜೀವನ ಮೌಲ್ಯವೇ ಬೆಳೆ ಬಾಳುವಂತಹದ್ದು. ಮಾನವೀಯ ಗುಣಗಳಿಲ್ಲದ ವ್ಯಕ್ತಿಯಲ್ಲಿ ಹಣ, ಆಸ್ತಿ ಎಷ್ಟಿದ್ದರೇನು ಪ್ರಯೋಜನ. ಇನ್ನೊಬ್ಬರ ಕಷ್ಟಕ್ಕಾಗಿ ಮಿಡಿಯುವ, ಸ್ಪಂದಿಸುವ, ಸಹಾಯ ಮಾಡುವ ಗುಣವಿಲ್ಲದಿದ್ದರೆ ಆತ ಇದ್ದೂ ಇಲ್ಲದವನಾಗುತ್ತಾನೆ. ಹೆತ್ತವರನ್ನು ಕಡೆಗಾಲದಲ್ಲಿ ನೋಡಿಕೊಳ್ಳದ ಮಕ್ಕಳು ಅದೆಷ್ಟು ತೀರ್ಥಕ್ಷೇತ್ರಗಳಿಗೆ ಹೋದರೇನು ಫಲ ಎಂಬಂತೆ ಮೌಲ್ಯವಿಲ್ಲದ ಬದುಕು ಸದಾ ಬರಡಾಗಿರುತ್ತದೆ ಎನ್ನುವುದು ಸತ್ಯ.

ಮಕ್ಕಳನ್ನು ನಿಂತುಕೊ, ಕೂತುಕೊ, ಹೋಮ್ರ್ಕ್ ಮಾಡು, ಚೆನ್ನಾಗಿ ಮಾರ್ಕ್ಸ್ ತೆಗಿ, ಆಟವಾಡಬೇಡ, ಪಕ್ಕದ ಮನೆಗೆ ಹೋಗಬೇಡ, ಟಿ.ವಿ. ನೋಡಬೇಡ, ತರಲೆ ಮಾಡಬೇಡ ಹೀಗೆ ನಮಗೆ ಬೇಕಾದ ಹಾಗೆ ಅವರನ್ನು ವರ್ತಿಸುವಂತೆ ಮಾಡಿ ರೋಬೋಟ್​ನಂತೆ ಮಾಡುವುದು ಸಮಂಜಸವಲ್ಲ. ಮಕ್ಕಳು ಮಕ್ಕಳಾಟವಾಡುತ್ತಲೇ ಬೆಳೆಯಬೇಕು. ನಾವು ಕೂಡ ಮಕ್ಕಳೊಂದಿಗೆ ಮಕ್ಕಳಾಗಬೇಕು. ಅವರಲ್ಲೂ ಬೇಕು-ಬೇಡಗಳು, ಆಕಾಂಕ್ಷೆಗಳು ಇರುತ್ತವೆ. ಅವುಗಳನ್ನು ಗಮನಿಸಿಕೊಂಡು ಅವರ ಮಾತುಗಳಿಗೂ ಮನ್ನಣೆ ನೀಡಿ ಅವರ ಇಷ್ಟಗಳಿಗೂ ಸ್ಪಂದಿಸುವುದು ಅತಿಮುಖ್ಯ. ಅವರ ಭಾವನೆಗಳಿಗೆ ಬೆಲೆ ಕೊಟ್ಟು ಸ್ವಾತಂತ್ರ್ಯಕ್ಕೆ ಬೇಲಿ ಹಾಕದೆ ಸ್ವಚ್ಛಂದವಾಗಿ ಬದುಕಲು, ಸ್ವಸ್ಥ ಜೀವನ ನಡೆಸಲು ಅನುವು ಮಾಡಿಕೊಡಬೇಕಾದುದು ನಮ್ಮೆಲ್ಲರ ಕರ್ತವ್ಯ. ಹಾಗಾಗಿ ಮಕ್ಕಳಿಗೆ ಮೌಲ್ಯವನ್ನು ಕಲಿಸುವ ಮೂಲಕ ಅವರನ್ನು ದೇಶದ ಸಂಪತ್ತನ್ನಾಗಿ ರೂಪಿಸುವ ಜವಾಬ್ದಾರಿ, ಕರ್ತವ್ಯ ನಮ್ಮದಾಗಲಿ.

(ಲೇಖಕರು ಶ್ರೀಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿಗಳು)