ಕೌಟುಂಬಿಕ ನ್ಯಾಯಾಲಯದ ಪ್ರಕರಣಗಳಲ್ಲಿ ನೀವು ವಕೀಲರನ್ನು ಇಟ್ಟುಕೊಳ್ಳಲೇ ಬೇಕು ಎನ್ನುವ ನಿಯಮವಿಲ್ಲ. ವಕೀಲರನ್ನು ಇಟ್ಟುಕೊಳ್ಳಬೇಕಾದಾಗ ಮಾತ್ರ ನ್ಯಾಯಾಲಯದ ಪೂರ್ವಾನುಮತಿಯನ್ನು ಕೌಟುಂಬಿಕ ನ್ಯಾಯಾಲಯಗಳ ಕಾಯ್ದೆಯ ಕಲಂ 13 ರ ಅಡಿಯಲ್ಲಿ ಕೇಳಬೇಕಿರುತ್ತದೆ. ಹೀಗಾಗಿ ನೀವು ವೈಯಕ್ತಿಕವಾಗಿ ಕೇಸನ್ನು ನಡೆಸಬಹುದು. ಪ್ರತಿ ವಾಯ್ದೆಯಲ್ಲೂ ನೀವು ಹಾಜರಿರಲೇಬೇಕು ಎನ್ನುವ ಅವಶ್ಯಕತೆ ಇರುವುದಿಲ್ಲ. ಆದರೆ ಪ್ರಕರಣದಲ್ಲಿ ಏನಾಯಿತು ಎನ್ನುವುದನ್ನು ನೀವು ಹೇಗೆ ತಿಳಿದುಕೊಳ್ಳುತ್ತೀರಿ ಮತ್ತು ಪ್ರಕರಣದಲ್ಲಿ ಎದುರು ಪಕ್ಷದವರು ಹಾಕಿರುವ ಅರ್ಜಿಯನ್ನು, ಸಲ್ಲಿಸುವ ವಾದವನ್ನು ನೀವು ಗಮನಿಸಬೇಕಾಗುತ್ತದೆ. ಹೀಗಾಗಿ ನೀವು ನೇರವಾಗಿ ನ್ಯಾಯಾಲಯದಲ್ಲಿ ಇದ್ದರೆ ಉತ್ತಮ. ಹಾಗೆ ಸಾಧ್ಯವೇ ಇಲ್ಲ ಎನ್ನುವುದಾದರೆ, ವಿಶೇಷ ಸನ್ನಿವೇಶಗಳನ್ನು ವಿವರಿಸಿ ನ್ಯಾಯಾಲಯದ ಪ್ರಕರಣಗಳಲ್ಲಿ ಕೆಲವು ಹಂತಗಳಿಗೆ ನೀವು ಆನ್ ಲೈನ್ ಮೂಲಕ ಭಾಗವಹಿಸಲು ಅವಕಾಶ ಮಾಡಿಕೊಡಬೇಕು ಎಂದು ನ್ಯಾಯಾಲಯವನ್ನು ಪ್ರಾರ್ಥಿಸಿ ಅರ್ಜಿ ಸಲ್ಲಿಸಿ. ಮಾನ್ಯ ನ್ಯಾಯಾಲಯ ನಿಮ್ಮ ಅರ್ಜಿಯನ್ನು ಪುರಸ್ಕರಿಸಿದರೆ, ನೀವು ಎಲ್ಲ ಡೇಟುಗಳಿಗೂ ಖುದ್ದಾಗಿ ಹೋಗಬೇಕಾದ ಅವಶ್ಯಕತೆ ಇರುವುದಿಲ್ಲ.
ನಿಮ್ಮ ತಂದೆಗೆ ಮರು ಕ್ರಯ ರಿಜಿಸ್ಟರ್ ಆಗಿದ್ದರೆ ನಿಮಗೆ ಹಕ್ಕು ಬರುತ್ತಿತ್ತು. ಈಗ ಮರು ಕ್ರಯ ರಿಜಿಸ್ಟರ್ ಆಗದಿರುವುದರಿಂದ ನಿಮಗೆ ಯಾವ ಹಕ್ಕೂ ಬರುವುದಿಲ್ಲ. ನೂರು ರೂಪಾಯಿಗಿಂತ ಹೆಚ್ಚಿನ ಮೌಲ್ಯದ ಸ್ಥಿರಾಸ್ಥಿಗೆ ಸಂಬಂಧಿಸಿದ ಯಾವುದೇ ವ್ಯವಹಾರವೂ (ವಿಲ್ ಹೊರತು ಪಡಿಸಿ) ನೋಂದಣಿ ಆಗಲೇಬೇಕು. ರೆವಿನ್ಯೂ ದಾಖಲೆಗಳೂ ನಿಮ್ಮ ಹೆಸರಿನಲ್ಲಿ ಇಲ್ಲದಿರುವುದರಿಂದ ನಿಮಗೆ ತುಂಬಾ ಕಷ್ಟವಿದೆ. ಸುತ್ತಲಿನವರು, ಆಜೂಬಾಜಿನ ರೈತರು ನಿಮಗೆ ಸಾಕ್ಷಿ ಹೇಳುವುದಾದರೆ ಅಡ್ವರ್ಸ್ ಪೊಸೆಷನ್ ಆಧಾರದ ಮೇಲೆ ದಾವೆಹಾಕ ಬಹುದೇ ಎಂದು ವಕೀಲರ ಸಲಹೆ ಪಡೆದು ನೋಡಿ. ದಾವೆ ಹಾಕಿದ ನಂತರ ಎದುರುದಾರರು ನ್ಯಾಯಾಲಯಕ್ಕೆ ಹಾಜರಾದರೆ, ಪ್ರಕರಣವನ್ನು ಮಧ್ಯಸ್ಥಿಕೆಗೆ ಕಳಿಸಲು ಕೇಳಿಕೊಳ್ಳಿ. ಅಲ್ಲಿ ರಾಜಿ ಮಾಡಿಕೊಳ್ಳುವ ಪ್ರಯತ್ನವನ್ನೂ ಮಾಡಿ.
(ಲೇಖಕರು ಕರ್ನಾಟಕ ಉಚ್ಚ ನ್ಯಾಯಾಲಯದ ಹಿರಿಯ ವಕೀಲರು ಮತ್ತು ಬೆಂಗಳೂರು ಮಧ್ಯಸ್ಥಿಕೆ ಕೇಂದ್ರದ ಹಿರಿಯ ಮಧ್ಯಸ್ಥಿಕೆಗಾರರು)