ವರ್ಷಕ್ಕೆ ಎರಡೇ ದಿನ ವೇಷ.. ಹೀಗೆ 8 ವರ್ಷಗಳಿಂದ ವೇಷ ಹಾಕಿ ತಿರುಗಿ ಹಣ ಸಂಗ್ರಹಿಸಿ ಅನಾರೋಗ್ಯದಲ್ಲಿದ್ದ ಮಕ್ಕಳ ಚಿಕಿತ್ಸೆಗೆ ಪೂರ್ತಿಯಾಗಿ ಕೊಟ್ಟಿರುವ ಇವರು ಆ ಮಕ್ಕಳ ಪಾಲಿಗೆ ಆಪದ್ಬಾಂಧವ. ಇನ್ನೂ ಇರುವ ಅಂಥ ಇತರ ಮಕ್ಕಳ ಪಾಲಿಗೆ ಆಶಾಕಿರಣ.
| ರವಿಕಾಂತ ಕುಂದಾಪುರ
ಹೌದು.. ಹೊಟ್ಟೆಪಾಡಿಗಾಗಿ ಹಲವರು ನಾನಾ ವೇಷ ಹಾಕುತ್ತಾರೆ. ಆದರೆ ಇಲ್ಲೊಬ್ಬರು ನಾನಾ ವೇಷ ಹಾಕುತ್ತಾರಾದರೂ ಅದು ಹೊಟ್ಟೆಪಾಡಿಗಲ್ಲ. ಅವರ ವೇಷ ವಿಕಾರವಾಗಿ ಕಾಣಿಸುತ್ತಾದರೂ ಅವರೊಳಗೊಂದು ವಿಶಾಲಹೃದಯವಿದೆ. ಹೀಗೆ ವೇಷ ಹಾಕಿಯೇ ಇನ್ನೊಬ್ಬರ ಕಷ್ಟದ ಸನ್ನಿವೇಶದಲ್ಲಿ ಸಹಾಯ ಮಾಡಿರುವ ಅವರು ಒಂದು ರೀತಿಯಲ್ಲಿ ಕೋಟಿಗೊಬ್ಬ ಎಂದರೂ ತಪ್ಪೇನಲ್ಲ. ಏಕೆಂದರೆ ಇದುವರೆಗೂ ಅವರು ಒಂದು ಕೋಟಿ ರೂಪಾಯಿಗೂ ಅಧಿಕ ಮೊತ್ತವನ್ನು ಬರೀ ಈ ವೇಷಗಳಿಂದಾಗಿಯೇ ಸಂಗ್ರಹಿಸಿ ತೀವ್ರ ಅನಾರೋಗ್ಯ ಎದುರಿಸುತ್ತಿದ್ದ ಮಕ್ಕಳ ಚಿಕಿತ್ಸೆಗಾಗಿ ನೀಡಿದ್ದಾರೆ. ಮಾತ್ರವಲ್ಲ ಇಂಥ ಒಂದು ಸಹಾಯದ ಕಾರಣಕ್ಕೇ ಅವರನ್ನು ಹಿಂದಿ ರಿಯಾಲಿಟಿ ಶೋ ಕೌನ್ ಬನೇಗಾ ಕರೋಡ್ಪತಿಗೂ ಕರೆಸಿ ಗೌರವಿಸಿದ್ದಾರೆ. ಒಂದು ಕಟ್ಟುಪಾಡಿನೊಳಗೇ ಸಹಾಯ ಮಾಡುತ್ತಿರುವ ಅವರ ಹೆಸರು ರವಿ ಕಟಪಾಡಿ. ರವಿ ಕಟಪಾಡಿ ಎಂದಾಕ್ಷಣ ಅವರ ಬಗ್ಗೆ ಗೊತ್ತಿರುವವರಿಗೆ ಮೊದಲಿಗೆ ನೆನಪಾಗುವುದು ಬಣ್ಣಬಣ್ಣದ ವಿಚಿತ್ರ ವೇಷಗಳು, ಆ ಮೂಲಕ ಅವರು ಮಕ್ಕಳ ಚಿಕಿತ್ಸೆಗಾಗಿ ನೀಡಿದ ಧನಸಹಾಯಗಳು. ಪ್ರತಿ ವರ್ಷದ ಶ್ರೀಕೃಷ್ಣ ಜನ್ಮಾಷ್ಟಮಿಯ ಸಂದರ್ಭದಲ್ಲಿ ವೇಷ ಧರಿಸಿ ಊರೂರು ಸುತ್ತಿ ಹಣ ಸಂಗ್ರಹಿಸಿ ಅಷ್ಟೂ ಮೊತ್ತವನ್ನು ಸಂಕಷ್ಟದಲ್ಲಿ ಇರುವವರಿಗೆ ಕೊಟ್ಟು ಬಿಡುವ ರವಿ ಕಟಪಾಡಿ, ಮೂಲತಃ ಶ್ರಮಜೀವಿ, ಓದಿದ್ದು ಬರೀ 9ನೇ ತರಗತಿ. ಕಟ್ಟಡ ನಿರ್ವಣದಲ್ಲಿ ಸೆಂಟ್ರಿಂಗ್ ಕೆಲಸ ಮಾಡುವ ಇವರದ್ದು ಅಂಥ ಆದಾಯದ ಕೆಲಸವೇನಲ್ಲ. ಅದಾಗ್ಯೂ ಅವರು ಕೋಟ್ಯಧಿಪತಿಗಳಿಗೂ ಕಡಿಮೆ ಇರದಂಥ ಧನಸಹಾಯ ಮಾಡಿದ್ದಾರೆ.
ಈ ವರ್ಷದ ಕೃಷ್ಣ ಜನ್ಮಾಷ್ಟಮಿ ಸಂದರ್ಭದಲ್ಲಿ 3 ಮಕ್ಕಳಿಗೆ ಸಹಾಯ ಮಾಡುವುದು ಅಂತ ಅಂದುಕೊಂಡಿದ್ದೆವು. ಈ ಸಲ ಡೆಮೊನ್ ವೇಷ ಧರಿಸಿದ್ದೆ, ಅದರ ತಯಾರಿಗೇ 2 ಲಕ್ಷ ರೂ. ತಗುಲಿತ್ತು. ಆ ವೇಷವೇ 40 ಕೆ.ಜಿ. ಭಾರವಿತ್ತು. ಅದರಿಂದ 14,36,685 ರೂ. ಸಂಗ್ರಹವಾಗಿತ್ತು. ಕೊನೆಗೆ 11 ಮಕ್ಕಳಿಗೆ ಸಹಾಯ ಮಾಡಲಾಯಿತು. ಹೀಗೆ ಕಳೆದ 8 ವರ್ಷಗಳಲ್ಲಿ ಇದುವರೆಗೆ ಒಟ್ಟು ಸಂಗ್ರಹಿಸಿ ಸಹಾಯ ಮಾಡಿದ ಮೊತ್ತ 1,04,36,680 ರೂಪಾಯಿ. ಇದನ್ನು ಒಟ್ಟು 77 ಮಕ್ಕಳಿಗೆ ನೀಡಲಾಗಿದೆ. ವರ್ಷಕ್ಕೆ ಎರಡೇ ದಿನ ವೇಷ ಹಾಕಿ ಓಡಾಡುವುದು. ಆ ಲೆಕ್ಕದಲ್ಲಿ ನೋಡಿದರೆ ಇಷ್ಟು ದೊಡ್ಡ ಮೊತ್ತ ಬರೀ 16 ದಿನಗಳಲ್ಲೇ ಸಂಗ್ರಹವಾಗಿದ್ದು ಎನ್ನಬಹುದು. ಇನ್ನು ಸನ್ಮಾನಗಳಿಂದ ಬಂದ 30 ಸಾವಿರ ರೂ. ಕೂಡ ಮಕ್ಕಳಿಗೇ ನೀಡಿದ್ದೇನೆ. ಅದನ್ನು ಈ ಒಟ್ಟು ಮೊತ್ತದಲ್ಲಿ ಸೇರಿಸಿಲ್ಲ ಎಂದೂ ರವಿ ಹೇಳುತ್ತಾರೆ. ರವಿ ಅವರ ಕಾರ್ಯವನ್ನು ಮೆಚ್ಚಿ 2020ರಲ್ಲಿ ‘ಕೌನ ಬನೇಗಾ ಕರೋಡ್ಪತಿ’ ಕಾರ್ಯಕ್ರಮಕ್ಕೂ ಆಹ್ವಾನಿಸಿದ್ದರು. ಅಲ್ಲಿಗೆ ಹೋಗಿದ್ದ ರವಿಗೆ 12.5 ಲಕ್ಷ ರೂ. ಬಹುಮಾನ ಬಂದಿದ್ದು, ಅದನ್ನೂ ಮಕ್ಕಳ ಚಿಕಿತ್ಸೆಗೆ ನೀಡಿದ್ದಾರೆ. ಬರೀ ಮಲ್ಪೆ, ಉಡುಪಿ, ಉದ್ಯಾವರ, ಕೊಡವೂರು, ಪಡುಕರೆ ಇಷ್ಟೇ ಊರುಗಳಲ್ಲಿ ಸಂಚರಿಸಿ ಈ ಮೊತ್ತ ಸಂಗ್ರಹವಾಗಿದೆ. ಅಂದಹಾಗೆ ಸಂಗ್ರಹವಾದ ಮೊತ್ತವನ್ನು ಅವರು ಜಿಲ್ಲಾಧಿಕಾರಿ ಮತ್ತು ಎಸ್ಪಿ ಸಮ್ಮುಖದಲ್ಲಿ ಹಸ್ತಾಂತರಿಸುತ್ತಾರೆ ಹೊರತು ರಾಜಕೀಯದ ಯಾವ ವ್ಯಕ್ತಿಯನ್ನು ಕರೆಯುವುದಿಲ್ಲ. ಆ ಮಕ್ಕಳಿಗೆ ಸರ್ಕಾರದಿಂದ ಯಾವುದಾದರೂ ಸಹಾಯ ಸಿಗುವುದಿದ್ದರೆ ಸಿಗಲಿ ಎಂಬ ಕಾರಣಕ್ಕೆ ಜಿಲ್ಲಾಧಿಕಾರಿಯ ಸಮ್ಮುಖದಲ್ಲಿ ಹಸ್ತಾಂತರಿಸುವುದು ಎನ್ನುತ್ತಾರೆ ರವಿ.
ವೇಷ ಹಾಕಿ ಸಂಗ್ರಹಿಸಿದ ಹಣವನ್ನು ರವಿ ತೀವ್ರ ಅನಾರೋಗ್ಯದಲ್ಲಿರುವ 12 ವರ್ಷದ ಒಳಗಿನ ಮಕ್ಕಳಿಗೆ ಮಾತ್ರ ನೀಡುತ್ತಾರೆ. ದೊಡ್ಡವರಿಂದಲೂ ಕೆಲವೊಮ್ಮೆ ಬೇಡಿಕೆ ಬರುತ್ತದೆ. ಆದರೆ ಅವರ ಎಷ್ಟೋ ಅನಾರೋಗ್ಯಗಳು ಅವರೇ ಮಾಡಿ ಕೊಂಡಿರುವಂಥವು. ಮಕ್ಕಳು ಹಾಗಲ್ಲ, ಅಮಾಯಕರು, ಅವರು ದೇವರಂಥವರು, ಅವರದ್ದೇನೂ ತಪ್ಪಿರಲ್ಲ. ಆದರೆ ಬಾಲ್ಯದಲ್ಲೇ ದೊಡ್ಡ ರೋಗಕ್ಕೆ ತುತ್ತಾಗಿರುತ್ತಾರೆ. ಅವರು ಇನ್ನೂ ಬಾಳಿ ಬದುಕಬೇಕಾಗಿರುತ್ತದೆ, ಅದಕ್ಕೆ ನವಜಾತ ಶಿಶುವಿನಿಂದ ಹಿಡಿದು 12 ವರ್ಷದ ವರೆಗಿನ ಮಕ್ಕಳಿಗೆ ಮಾತ್ರ ಸಹಾಯ ಮಾಡುತ್ತೇನೆ ಎನ್ನುವ ರವಿ, ತಮ್ಮ ಜೀವನವನ್ನು ಇದಕ್ಕೆಂದೇ ಮುಡಿಪಾಗಿರಿಸಿದ್ದಾರೆ. ಮದುವೆಯಾದರೆ ಸ್ವಂತ ಬದುಕಿನ ಬಗ್ಗೆ ಹೆಚ್ಚು ಗಮನ ಕೊಡಬೇಕಾಗುತ್ತದೆ, ಆಗ ವೇಷ ಹಾಕಿ ಇದನ್ನೆಲ್ಲ ಮಾಡಲಿಕ್ಕೆ ಆಗುತ್ತದೋ ಇಲ್ಲವೋ ಎನ್ನುವ ಅವರು, ನನಗೀಗ 40 ವರ್ಷ, ನಾನಿನ್ನೂ ಅವಿವಾಹಿತ. ಇದಕ್ಕೆಂದೇ ಮದುವೆ ಆಗಿಲ್ಲ, ಆಗುವುದೂ ಇಲ್ಲ ಎಂದು ಹೇಳುತ್ತಾರೆ.