ಅಂಕಣ

ಕರ್ಮಧೀರತೆಯು ಸನಾತನ ಧರ್ಮದ ದೃಷ್ಟಿಕೋನ

ನಾವು ಜೀವಿಸುತ್ತಿರುವ ಈ ಭೂಮಿಯನ್ನು ಕರ್ಮಭೂಮಿಯೆಂದು ಕರೆಯಲಾಗಿದೆ. ಆದ್ದರಿಂದ, ಇಲ್ಲಿ ನಾವು ಅನಿವಾರ್ಯವಾಗಿ ಕರ್ಮಶೀಲರಾಗಿರಬೇಕಾಗಿರುತ್ತದೆ. ಅಲ್ಲದೆ, ನಾವು ಮಾಡುವ ಪ್ರತಿಯೊಂದು ಕರ್ಮದ ಫಲವು ನಮ್ಮನ್ನು ಜನ್ಮಜನ್ಮಗಳಲ್ಲಿಯೂ ಹಿಂಬಾಲಿಸುತ್ತದೆ.

ಪ್ರತಿಯೊಂದು ಕ್ರಿಯೆಯು ಸಮಾನವಾದ ಮತ್ತು ವಿರುದ್ಧವಾದ ಪ್ರತಿಕ್ರಿಯೆಯನ್ನು ಹೊಂದಿರುತ್ತದೆ ಎಂಬ ನ್ಯೂಟನ್​ನ ಮೂರನೇ ಚಲನೆಯ ನಿಯಮವು ಭೌತಿಕ ಜಗತ್ತಿಗೆ ಮಾತ್ರವಲ್ಲದೆ, ನಮ್ಮ ಪ್ರತಿಯೊಂದು ಕ್ರಿಯೆಗೂ ಅನ್ವಯಿಸುತ್ತದೆಯೆಂದು ಸನಾತನ ಧರ್ಮದ ಕರ್ಮ ಸಿದ್ಧಾಂತವು ಪ್ರತಿಪಾದಿಸುತ್ತದೆ. ನಾವು ಮಾಡುವ ಪ್ರತಿಯೊಂದು ಕ್ರಿಯೆಗೂ ಒಂದು ಪ್ರತಿಕ್ರಿಯೆಯಿದ್ದು, ಅದರ ಪರಿಣಾಮವನ್ನು ನಾವು ಒಂದಲ್ಲ ಒಂದು ದಿನ ಅನುಭವಿಸಲೇಬೇಕಾಗುತ್ತದೆ.

ಯಾವ ಕರ್ಮಗಳನ್ನೂ ಮಾಡದೇ ಇರುವ ಮೂಲಕ, ಕರ್ಮಗಳ ಪರಿಣಾಮಗಳಿಂದ ಪಾರಾಗಲು ನಮಗೆ ಸಾಧ್ಯವೇ? ಮರ್ತ್ಯ ಲೋಕವೆಂದೆನಿಸಿಕೊಂಡಿರುವ ಈ ಭೂಮಿಯಲ್ಲಿ ಯಾರೂ ಕರ್ಮಗಳನ್ನು ಮಾಡದೆ ಒಂದು ಕ್ಷಣವೂ ಇರಲು ಸಾಧ್ಯವಿಲ್ಲ. ಏನನ್ನೂ ಮಾಡದೆ ಸುಮ್ಮನೆ ಕುಳಿತಿರುವ ವ್ಯಕ್ತಿ ಕೂಡ ಕರ್ಮನಿರತನಾಗಿದ್ದಾನೆ. ಏಕೆಂದರೆ, ಅವನ ದೇಹದಲ್ಲಿ ಹಾಗೂ ಮನಸ್ಸುಗಳಲ್ಲಿ ಹಲವಾರು ಕ್ರಿಯೆಗಳು ನಡೆಯುತ್ತಲೇ ಇರುತ್ತವೆಯಲ್ಲವೇ? ಒಬ್ಬ ವ್ಯಕ್ತಿಯ ಅಸ್ತಿತ್ವವೇ ಸುತ್ತಮುತ್ತಲಿನ ವಸ್ತುಗಳ ಮತ್ತು ಜೀವಿಗಳ ಮೇಲೆ ಪರಿಣಾಮ ಬೀರಿ, ಅನೈಚ್ಛಿಕ ಕ್ರಿಯೆಗಳ ಹಾಗೂ ಪ್ರತಿಕ್ರಿಯೆಗಳ ಸರಣಿಗೆ ಕಾರಣವಾಗುತ್ತದೆ. ಅಷ್ಟಾವಕ್ರ ಗೀತೆಯಲ್ಲಿ ಹೇಳಿರುವಂತೆ, ಸಂಪೂರ್ಣ ವೈಯಕ್ತಿಕ ಅಹಂಕಾರರಹಿತನಾಗಿ ತನ್ನನ್ನು ತಾನು ಪರಮಾತ್ಮನೊಂದಿಗೆ ಗುರುತಿಸಿಕೊಂಡ ಜೀವನ್ಮುಕ್ತನು ಮಾತ್ರ ಎಲ್ಲಾ ಕರ್ಮಫಲಗಳಿಂದ ಪಾರಾಗಲು ಸಾಧ್ಯ. ಉಳಿದವರೆಲ್ಲರೂ ಬಾಹ್ಯದೃಷ್ಟಿಯಿಂದ ಯಾವುದೇ ಕ್ರಿಯೆಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳದೇ ಇದ್ದರೂ, ಅವರು ಕರ್ಮ ಮಾಡುತ್ತಿದ್ದಂತೆಯೇ ಸರಿ!

ಜೀವನ್ಮುಕ್ತರಿಗೆ ಯಾವ ಕರ್ಮಫಲವೂ ಅಂಟುವುದಿಲ್ಲ. ಏಕೆಂದರೆ ಅವರು, ಕೇವಲ ಧರ್ಮಸ್ಥಾಪನೆಗಾಗಿ ಕುರುಕ್ಷೇತ್ರ ಯುದ್ಧದಲ್ಲಿ ತನ್ನನ್ನು ತಾನು ತೊಡಗಿಸಿಕೊಂಡ ಭಗವಾನ್ ಶ್ರೀ ಕೃಷ್ಣನಂತೆ, ಕೇವಲ ಲೋಕಕಲ್ಯಾಣಕ್ಕಾಗಿ ಕರ್ಮಗಳಲ್ಲಿ ತೊಡಗುತ್ತಾರೆ.

ಯಸ್ಯಾಂತಃ ಸ್ಯಾದಹಂಕಾರೋ ನ ಕರೋತಿ ಕರೋತಿ ಸಃ || 18.29 ||

ನ ಮೇ ಪಾರ್ಥಾಸ್ತಿ ಕರ್ತವ್ಯಂ ತ್ರಿಷು ಲೋಕೇಷು ಕಿಂಚನ |

ಗೀತೆಯಲ್ಲಿ ಶ್ರೀ ಕೃಷ್ಣನು ವಿವರಿಸುವಂತೆ:

ಓ ಪಾರ್ಥಾ, ಮೂರು ಲೋಕಗಳಲ್ಲಿಯೂ ನಾನು ಮಾಡಬೇಕಾದ ಕರ್ತವ್ಯವೇನೂ ಇಲ್ಲ. ನಾನು ಗಳಿಸಬೇಕಾಗಿರುವುದಾಗಲೀ ಅಥವಾ ಗಳಿಸದೇ ಇರುವುದಾಗಲೀ ಏನೂ ಇಲ್ಲ. ಆದರೂ ನಾನು ಸದಾ ಕರ್ಮನಿರತನಾಗಿದ್ದೇನೆ.

ನಾನವಾಪ್ತಮವಾಪ್ತವ್ಯಂ ವರ್ತ ಏವ ಚ ಕರ್ಮಣಿ || 3.22 ||

ಲೋಕಸಂಗ್ರಹಮೇವಾಪಿ ಸಂಪಶ್ಯನ್ ಕರ್ತಮರ್ಹಸಿ || 3.20 ||

ಕರ್ಮಣೈವ ಹಿ ಸಂಸಿದ್ಧಿಮಾಸ್ಥಿತಾ ಜನಕಾದಯಃ |

ತಮ್ಮ ನಿಯಮಿತ ಕರ್ತವ್ಯಗಳನ್ನು ನಿರ್ವಹಿಸುವ ಮೂಲಕವೇ ಜನಕ ಮಹಾರಾಜ ಹಾಗೂ ಇತರರು ಜೀವನಸಾಫಲ್ಯತೆ ಕಂಡುಕೊಂಡರು. ಆದ್ದರಿಂದ ಲೋಕಕಲ್ಯಾಣಕ್ಕಾಗಿ ಒಂದು ಮೇಲ್ಪಂಕ್ತಿ ಹಾಕಿ ಸಮಾಜಕ್ಕೆ ತೋರಿಸಿ ಕೊಡಲು ನೀನು ನಿನ್ನ ಕರ್ತವ್ಯ ನಿರ್ವಹಿಸಬೇಕು.

ಅಧರ್ಮದ ವಿರುದ್ಧ ಹೋರಾಡಿ ಧರ್ಮಸ್ಥಾಪನೆ ಮಾಡಬೇಕಾಗಿದ್ದ ಅರ್ಜುನನ ಮನಸ್ಸು ವ್ಯಾಮೋಹದಿಂದಾಗಿ ಯುದ್ಧಭೂಮಿಯಲ್ಲಿ ಗೊಂದಲಕ್ಕೊಳಗಾಗಿತ್ತು. ಆ ಸಂದರ್ಭದಲ್ಲಿ ಶ್ರೀ ಕೃಷ್ಣನು, ಲೋಕಕಲ್ಯಾಣಕ್ಕಾಗಿ ತಾನು ನಡೆಯುತ್ತಿರುವ ಹಾಗೂ ಜನಕಾದಿ ಮಹಾರಾಜರು ನಡೆದು ತೋರಿಸಿದ ಈ ಹಾದಿಯನ್ನೇ ಅನುಸರಿಸಬೇಕೆಂದು ಅರ್ಜುನನಿಗೆ ಉಪದೇಶಿಸುತ್ತಾನೆ.

ಸಮಾಜದಲ್ಲಿ ಶ್ರೇಷ್ಠರು ನಡೆದ ದಾರಿಯು ಇತರರಿಗೆ ಆದರ್ಶವಾಗುತ್ತದೆ. ಆದ್ದರಿಂದ ನಾವು ಮಾಡುವ ಪ್ರತಿಯೊಂದು ಕರ್ಮವೂ ಇತರರಿಗೆ ಆದರ್ಶವಾಗುವಂತಿರಬೇಕು.

ಸ ಯತ್ಪ›ಮಾಣಂ ಕುರುತೇ ಲೋಕಸ್ತದನುವರ್ತತೇ || 3.21 ||

ಯದ್ಯದಾಚರತಿ ಶ್ರೇಷ್ಠಸ್ತತ್ತದೇವೇತರೋ ಜನಃ |

ಶ್ರೇಷ್ಠ ವ್ಯಕ್ತಿಗಳ ಆಚಾರವನ್ನು ಇತರ ಜನರು ಅನುಸರಿಸುತ್ತಾರೆ. ಲೋಕವು ಅವರು ನಡೆದ ದಾರಿಯನ್ನು ಅನುಸರಿಸುತ್ತದೆ. ಆದ್ದರಿಂದ, ಸರ್ವರ ಒಳಿತಿಗಾಗಿ ಕರ್ಮವನ್ನು ಮಾಡುವುದೇ ಈ ಪ್ರಪಂಚದಲ್ಲಿ ಸರ್ವರೂ ಅನುಸರಿಸಬೇಕಾದ ಧರ್ಮವಾಗಿದೆ. ಆದರೆ, ನಾವು ಆತ್ಮಜ್ಞಾನವನ್ನು ಪಡೆಯುವವರೆಗೆ ಮಾಡುವ ಪ್ರತಿಯೊಂದು ಕರ್ಮಕ್ಕೂ ಪ್ರತಿಫಲವೆಂಬುದು ಇದ್ದೇ ಇರುತ್ತದೆ. ಕೇವಲ ಆತ್ಮಜ್ಞಾನಿಗಳು ಮಾತ್ರವೇ ಕರ್ಮಪ್ರಭಾವದಿಂದ ಮುಕ್ತರಾಗಿರಲು ಸಾಧ್ಯ. ಏಕೆಂದರೆ, ಅವರಲ್ಲಿ ಕರ್ತೃತ್ವಭಾವವಾಗಲೀ, ಭೋಕೃ್ತ್ವಭಾವವಾಗಲೀ ಇರುವುದಿಲ್ಲ. ಅವರು ಸದಾ ತಾವು ಪರಮಾತ್ಮನ ಕೇವಲ ಉಪಕರಣಗಳೆಂಬ ಭಾವದೊಂದಿಗೆ ತಮ್ಮ ಕರ್ತವ್ಯಗಳನ್ನು ನಿರ್ವಹಿಸುತ್ತಿರುತ್ತಾರೆ. ಇದನ್ನೇ ಶ್ರೀ ಕೃಷ್ಣನು ಅರ್ಜುನನಿಗೆ ಹೀಗೆ ಬೋಧಿಸಿದ್ದಾನೆ:

ಓ ಶ್ರೇಷ್ಠ ಧನುರ್ಧಾರಿಯೇ, ನನ್ನ ಹಸ್ತದಲ್ಲಿ ನೀನು ಉಪಕರಣವಾಗು.

ನಿಮಿತ್ತಮಾತ್ರಂ ಭವ ಸವ್ಯಸಾಚಿನ್ || 11.33 ||

ಹೇಗೆ ಒಂದು ಉಪಕರಣವು ಕಾರ್ಯದ ಯಶಸ್ಸಿನ ಹೊಗಳಿಕೆಗೆ ಮತ್ತು ಸೋಲಿನ ತೆಗಳಿಕೆಗೆ ಪಾತ್ರವಾಗುವುದಿಲ್ಲವೋ, ಅದೇ ರೀತಿಯಲ್ಲಿಯೇ ಭಗವತ್ಸಂಕಲ್ಪದ ಉಪಕರಣದಂತಿರುವವರು ಕ್ರಿಯೆ-ಪ್ರತಿಕ್ರಿಯೆಗಳಿಂದ ಮುಕ್ತರಾಗಿರುತ್ತಾರೆ. ಆದರೆ, ಭಗವಂತನ ಹಸ್ತದಲ್ಲಿ ಉಪಕರಣವಾಗುವ ಪ್ರಕ್ರಿಯೆಯು, ಒಬ್ಬ ವ್ಯಕ್ತಿಯು ತನ್ನ ಅಹಂಕಾರವನ್ನು ಪರಮಾತ್ಮನಲ್ಲಿ ಸಂಪೂರ್ಣವಾಗಿ ಸಮರ್ಪಿಸಿಕೊಂಡು ಶರಣಾದಾಗ ಮಾತ್ರ ಪೂರ್ಣವಾಗುತ್ತದೆ. ಅಂತಹ ಜೀವನ್ಮುಕ್ತನಿಗೆ, ತಾನು ಕೇವಲ ಭಗವತ್ಸಂಕಲ್ಪದ ಉಪಕರಣವೆಂಬ ಸಂಪೂರ್ಣ ಅರಿವಿರುವುದರಿಂದ, ಅವನಿಗೆ ಯಾವುದೇ ಕರ್ಮವನ್ನು ಕೈಗೆತ್ತಿಕೊಳ್ಳಳಾಗಲೀ ಅಥವಾ ಅದನ್ನು ನಿಮೋಹದಿಂದ ಕೈಬಿಡಲಾಗಲೀ ಕಷ್ಟವೆನಿಸುವುದಿಲ್ಲ.

ಪ್ರವೃತ್ತೌ ವಾ ನಿವೃತ್ತೌ ವಾ ನೈವ ಧೀರಸ್ಯ ದುರ್ಗ್ರಹಃ |

ಆ ವ್ಯಕ್ತಿಯನ್ನು ಅಷ್ಟಾವಕ್ರ ಗೀತೆಯು ಈ ರೀತಿಯಲ್ಲಿ ಬಣ್ಣಿಸುತ್ತದೆ:

ಧೀರನಿಗೆ ಯಾವುದೇ ಕರ್ಮದಲ್ಲಿ ಪ್ರವೃತ್ತನಾಗುವುದಾಗಲೀ ಅಥವಾ ಅದರಿಂದ ನಿವೃತ್ತನಾಗುವುದಾಗಲೀ ಕಷ್ಟವೆನಿಸುವುದಿಲ್ಲ. ಅವನು ತನ್ನ ಪಾಲಿಗೆ ಬಂದ ಕಾರ್ಯಗಳನ್ನು ನಿರ್ವಹಿಸುತ್ತಾ ಸದಾ ಸುಖಿಯಾಗಿರುತ್ತಾನೆ.

ಯದಾ ಯತ್ಕರ್ತಮಾಯಾತಿ ತತ್ಕೃತ್ವಾ ತಿಷ್ಠತಃ ಸುಖಮ್ || 18.20 ||

ಮೇಲೆ ಹೇಳಿದ ರೀತಿಯಲ್ಲಿ, ಯಾವುದೇ ಫಲಾಪೇಕ್ಷೆಯಿಲ್ಲದೆ ಕರ್ಮ ಮಾಡುವವನು ಎಲ್ಲಾ ರೀತಿಯ ಕರ್ಮ ಪ್ರಭಾವಗಳಿಂದ ಮುಕ್ತನಾಗಿರುತ್ತಾನೆ. ಅವನನ್ನು ಅಷ್ಟಾವಕ್ರ ಗೀತೆಯು ಹೀಗೆ ವರ್ಣಿಸುತ್ತದೆ:

ಕ್ಷಿಪ್ತಃ ಸಂಸ್ಕಾರವಾತೇನ ಚೇಷ್ಟತೇ ಶುಷ್ಕಪರ್ಣವತ್ || 18.21 ||

ನಿರ್ವಾಸನೋ ನಿರಾಲಂಬಃ ಸ್ವಚ್ಛಂದೋ ಮುಕ್ತಬಂಧನಃ |

ಯಾರು ವಾಸನಾರಹಿತನಾಗಿ, ನಿರಾವಲಂಬಿಯಾಗಿ ಹಾಗೂ ಎಲ್ಲಾ ಬಂಧನ ಗಳಿಂದ ಮುಕ್ತನಾಗಿರುವನೋ, ಅಂತಹ ವ್ಯಕ್ತಿಯು, ಗಾಳಿಯು ಬೀಸಿದಂತೆ ತೇಲುವ ಒಣ ಎಲೆಯಂತೆ, ಪರಿಸ್ಥಿತಿಗನುಗುಣವಾಗಿ ಮುಂದೆ ಸಾಗುತ್ತಾ ಹೋಗುತ್ತಾನೆ.

ಪರಮ ಜ್ಞಾನ ಹೊಂದಿ, ಸಂಪೂರ್ಣವಾಗಿ ನಿಮಿತ್ತ ಮಾತ್ರವಾಗಿಯೇ ಜೀವಿಸುವುದು ಬಹು ಪಾಲಿನವರಿಗೆ ದೂರದ ಮಾತು. ಅವರು ಸದಾ ನಿಸ್ವಾರ್ಥ ಕರ್ಮಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳಲು ಪ್ರಯತ್ನಿಸಬೇಕು. ಸದಾ ನಿಸ್ವಾರ್ಥವಾದ ಕಾರ್ಯಗಳನ್ನೇ ಮಾಡುತ್ತಿದ್ದರೆ, ಒಂದಲ್ಲ ಒಂದು ದಿನ ನಾವು ಆತ್ಮಜ್ಞಾನ ಪಡೆಯುವುದು ನಿಶ್ಚಯ. ಶ್ರೀ ಆದಿಶಂಕರರು ಹೇಳಿರುವಂತೆ, ಕರ್ಮಣಿ ಚಿತ್ತ ಶುದ್ಧ್ಯರ್ಥಂ ನಾವು ಮಾಡುವ ಕರ್ಮಗಳು ನಮ್ಮ ಮನಸ್ಸನ್ನು ಶುದ್ಧಗೊಳಿಸಬೇಕು. ಆದರೆ, ನಿಸ್ವಾರ್ಥ, ಫಲಾಪೇಕ್ಷಾರಹಿತ ಕರ್ಮಗಳು ಮಾತ್ರ ನಮ್ಮ ಮನಸ್ಸನ್ನು ಶುದ್ದೀಕರಿಸಲು ಸಾಧ್ಯ. ಆದ್ದರಿಂದ ನಾವು ಸದಾ ಅಂತಹ ಕಾರ್ಯಗಳಲ್ಲಿಯೇ ನಿರತರಾಗಲು ಯತ್ನಿಸಬೇಕು. ಅದರಿಂದ ಮಾತ್ರ ನಮಗೆ ಆತ್ಮಜ್ಞಾನವು ಲಭಿಸುತ್ತದೆ.

ಕರ್ಮಣ್ಯೇವಾಧಿಕಾರಸ್ತೇ ಮಾ ಫಲೇಷು ಕದಾಚನ

ಇದನ್ನೇ ಗೀತೆಯಲ್ಲಿ ಶ್ರೀ ಕೃಷ್ಣನು ಹೀಗೆ ಘೊಷಿಸಿದ್ದಾನೆ:

ನಮಗೆ ಕರ್ಮಗಳನ್ನು ಆಚರಿಸುವುದರ ಮೇಲಷ್ಟೇ ಅಧಿಕಾರವಿದೆಯೇ ಹೊರತು, ಕರ್ಮಫಲಗಳ ಮೇಲಲ್ಲ. ನಮಗೆ ಲಭ್ಯವಾದ ಯಾವುದೇ ಕರ್ಮಫಲವನ್ನು ನಾವು ಭಗವತ್ಪ›ಸಾದವೆಂದು ಸ್ವೀಕರಿಸಬೇಕು.

ನಮ್ಮ ಸಂಸ್ಥೆಗಳಲ್ಲಿ, ಇಂತಹ ನಿಸ್ವಾರ್ಥ ಸೇವೆಯನ್ನು ಮಾಡುವ ಅವಕಾಶವು ಪ್ರತಿಯೊಬ್ಬರಿಗೂ ಪ್ರತಿನಿತ್ಯವೂ ಲಭ್ಯವಾಗಿದೆ. ಅಲ್ಲದೆ, ಹೀಗೆ ನಿಸ್ವಾರ್ಥ ಸೇವೆ ಮಾಡುವವರ ವೈಯಕ್ತಿಕ ಯೋಗ ಕ್ಷೇಮವನ್ನು ಸಂಸ್ಥೆಯೇ ನೋಡಿಕೊಳ್ಳುತ್ತಿದೆ. ಅವರ ಕರ್ಮವು ಕರ್ಮಯೋಗವಾಗಿ, ಕಾಯಕವು ಉಪಾಸನೆಯಾಗಿ, ಅವರನ್ನು ಆತ್ಮಜ್ಞಾನದೆಡೆಗೆ ಮುನ್ನಡೆಸುತ್ತದೆ!

(ಲೇಖಕರು ಸಾಮಾಜಿಕ ಹಾಗೂ ಆಧ್ಯಾತ್ಮಿಕ ಗುರುಗಳು)