‘ಸ್ವಸ್ಥತೆಯ ಕದಲಿಸದ ಜಗದಾಸ್ಥೆಯೊಂದು ಗುಣ’ ಎಂದು ಪ್ರಾರಂಭವಾಗುವ ಕಗ್ಗದಲ್ಲಿ ಶರೀರ ಮನಸ್ಸುಗಳ ಕ್ಷೇಮವನ್ನು ಕದಲಿಸದಂತೆ ಜಗತ್ತಿನ ಬಗ್ಗೆ ಆಸಕ್ತಿಯನ್ನು ಹೊಂದಿರುವುದು ಪ್ರತಿಯೊಬ್ಬರಲ್ಲಿರಬೇಕಾದ ಒಳ್ಳೆಯ ಗುಣ ಎನ್ನಲಾಗಿದೆ. ಜೀವನದಲ್ಲಿ ಸುಖದುಃಖಗಳನ್ನು ಸಮಚಿತ್ತದಿಂದ ಸ್ವೀಕರಿಸಿ ಮನಸ್ಸಿನ ಆಸಕ್ತಿಯನ್ನು ಕುಂದಿಸದೆ ಜೀವನೋತ್ಸಾಹ ತುಂಬುವ ತಟಸ್ಥ ಸ್ವಭಾವವೂ ನಮ್ಮದಾಗಿರಬೇಕು. ತಿಳಿಹಾಸ್ಯದ ಲೇಪನದೊಂದಿಗೆ ಎಲ್ಲವನ್ನೂ ಕಾಣುತ್ತಾ ಬದುಕನ್ನು ಸವೆಸುವ ನಯವಾದ ಕಲೆಯೂ ನಮ್ಮಲ್ಲಿರಬೇಕು. ಈ ಗುಣಗಳು ಬದುಕಿನ ಒಳಿತಿಗೆ ಅವಶ್ಯಕ ಎಂಬ ಸರಳ ಹೇರಳ ಜ್ಞಾನದ ತಿರುಳನ್ನು ವಿವರಿಸಿದೆ.
‘ಶೀತಾಳೆ ಸಿಡುಬು ಶಿಶುಗಳ ಕುಲುಕಿ ತೆರಳುವುದು’ ಎಂಬ ಪದ್ಯದಲ್ಲಿ ಎಳೆಯ ಶಿಶುಗಳಿಗೆ ಬರುವ ಶೀತಾಳೆ, ಸಿಡುಬು ಕಾಯಿಲೆಗಳು ಮಕ್ಕಳನ್ನು ಕೆಲಕಾಲ ನರಳಿಸಿ ತೆರಳಿ ಹೋಗುತ್ತವೆ. ಇದರಂತೆ ಹದಿಹರೆಯದವರನ್ನು ಪ್ರೀತಿ ಕಾಮನೆಗಳು ಒಂದಷ್ಟು ಯಾತನೆಗಳಿಂದ ಕುದಿಸಿ ದೇಹವನ್ನು ಮಿಸುಕಾಡಿಸಿ, ಮನಸ್ಸನ್ನು ಅಲುಗಾಡಿಸಿ ಸಮಯ ಕಳೆದಂತೆ ಆರಿ ಹೋಗುತ್ತವೆ. ನಿಜವಾದ ಸುಖವಿರುವುದು ಕಾತರತೆ ಇದ್ದಾಗ ಅಲ್ಲ. ಶಿಶುಗಳಲ್ಲಿ ಆತುರತೆ ಹೋಗಬೇಕು, ಹರೆಯದವರಲ್ಲಿ ಕಾತರತೆ ತಣಿಯಬೇಕು. ಆಗಲೇ ಜೀವನ ಸುಖದ ದರ್ಶನವಾಗುವುದು. ‘ಇದು ಸುಖದ ಸೂತ್ರ ಹೇಳಿದರೆ ಜ್ವರಬಂದು ತನುಬೆಂದ ಯಾತನೆಯ ಮಾತೇನು?’ ಎಂಬ ಕಗ್ಗವು ನೆಮ್ಮದಿಯ ಸೂತ್ರವನ್ನು ಬಿಡಿಸಿಟ್ಟಿದೆ. ಜ್ವರಬಂದು ಉರಿ ಏರಿದಾಗ ದೇಹವು ಬೆಂದಂತೆ ಯಾತನೆ ಪಡುತ್ತೇವೆ. ಜ್ವರವು ಬಿಟ್ಟು ತಾಪ ಇಳಿದು ಹೋದಾಗ ಮಾನವನು ಹೊಸಬನಾಗುತ್ತಾನೆ, ಮತ್ತೆ ಉತ್ಸಾಹ ಭರಿತನಾಗುತ್ತಾನೆ. ಇಂದ್ರಿಯಗಳಿಗೆ ಯಾತನೆಗಳು ಕಡಿಮೆಯಾಗಬೇಕು. ಆತ್ಮವೂ ತಿಳಿಯಾಗಬೇಕು. ಮತ್ತೆ ಪ್ರಸನ್ನವಾದ ಆತ್ಮ ಇಂದ್ರಿಯಗಳನ್ನು ಹೊಂದಿದರೆ ಮರುಜನ್ಮ ಪಡೆದವರಂತೆ ಜೀವನದಲ್ಲಿ ಲವಲವಿಕೆ ತುಂಬಿ ನೆಮ್ಮದಿ ಪ್ರಾಪ್ತಿಯಾಗುತ್ತದೆ. ಆಯುರ್ವೆದ ಹೇಳಿದ ಶಾಶ್ವತ ವಿಚಾರಗಳು ಕಗ್ಗಗಳ ಮೂಲಕವೂ ಮನಸ್ಸನ್ನು ನಿರಾಳಗೊಳಿಸುತ್ತವೆ.
‘ತನುರುಜೆಗೆ ಪಥ್ಯಾನ್ನ ಬಾಯ ಚಪಲಕ್ಕಲ್ಲ’ ಎಂಬ ಕಗ್ಗವು ಮತ್ತಷ್ಟು ಸೊಗಸಾಗಿದೆ. ರೋಗಿಯ ಆಹಾರ ಸೇವನೆಗೆ ವೈದ್ಯರು ಹಾಕುವ ಷರತ್ತುಗಳಿಗೆ ಪಥ್ಯಾಪಥ್ಯ ಹೇರಿಕೆ ಎನ್ನಬಹುದು! ಪಥ್ಯವೆಂದರೆ ದೇಹಕ್ಕೆ ತುಂಬಾ ಒಳ್ಳೆಯ ದ್ರವ್ಯಗಳು, ಅಪಥ್ಯವೆಂದರೆ ರೋಗಿಗೆ ಕೆಡುಕನ್ನು ಉಂಟುಮಾಡುವ ಪದಾರ್ಥಗಳು. ಪಥ್ಯ ಆಹಾರ ಸೇವಿಸಬೇಕು, ಅಪಥ್ಯ ಆಹಾರ ಬಿಡಬೇಕು ಎಂಬುದು ತಾತ್ಪರ್ಯ. ಪಥ್ಯ- ಅಪಥ್ಯಗಳ ಅಳವಡಿಕೆ ರೋಗ ಗುಣಮುಖವಾಗಲೆಂದು ಬೇಕೇ ಹೊರತು ನಾಲಗೆಯ ಚಪಲಕ್ಕಾಗಿ ಅಲ್ಲ, ಅದರಂತೆ ಮನಸ್ಸನ್ನು ತಿದ್ದಿತೀಡಿ ಸರಿದಾರಿಗೆ ತರಲು ಜೀವನದ ಅನುಭವಗಳು ಬೇಕೇ ಹೊರತು ಮನಸ್ಸಿನ ಮಮಕಾರ ಹೆಚ್ಚಿಸಿಕೊಳ್ಳುವ ಸಲುವಾಗಿ ಇರುವುದಲ್ಲ. ಇದುವೇ ಋಷಿಮಾರ್ಗ ಎಂದು ಸಾರುತ್ತಾ ಪಥ್ಯದ ಅಂತರಾಳವನ್ನು ಕವಿ ಬಹಿರಂಗಗೊಳಿಸಿದ್ದಾರೆ. ‘ತಿಳಿವಾವುದಿಳೆಗೆ ಯುಗ ಯುಗದ ಬೆಳಕಾಗಿತ್ತೊ’ ಪದ್ಯವು ಹಳತೆಂದು ಯಾವುದನ್ನಾದರೂ ಹಳಿದು ಕಳೆದುಕೊಳ್ಳಲು ನಿನಗೆ ಮರುಳೇ? ಹಳೆಬೇರಿನಿಂದಲೇ ಹೊಸ ತಳಿರು ಎಂಬುದನ್ನು ಮಾರ್ವಿುಕವಾಗಿ ಹೇಳಿದ್ದು ಆಯುರ್ವೆದ ಹಳತೆಂದು ಹಳಿಯುವವರಿಗೆ ಸರಿಯುತ್ತರ ನೀಡಿದಂತಿದೆ. ಸುಪ್ರಸಿದ್ಧವಾದ ಹೊಸಚಿಗುರು ಹಳೆಬೇರು ಕೂಡಿರಲು ಮರಸೊಬಗು ಕಗ್ಗವು ಋಷಿವಾಕ್ಯವಾದ ಹಳೆಯ ತತ್ತ್ವಗಳೊಡನೆ ಹೊಸಯುಕ್ತಿ ವಿಜ್ಞಾನ ಕಲೆಗಳೆಲ್ಲ ಸೇರಿಕೊಂಡರೆ ಜನರ ಜೀವನ ಯಶಸ್ಸನ್ನು ಕಾಣುವುದು ನಿಶ್ಚಿತ ಎಂದಿದ್ದು ಆಯುರ್ವೆದದ ಪಾಲನೆ ಪೋಷಣೆಗೆ ಅಕ್ಷರಶಃ ಅನ್ವಯವಾಗುತ್ತದೆ.