ಮಾನಸಿಕ ಒತ್ತಡದ ಕಾರಣದಿಂದ ಕಾರ್ಟಿಸೋಲ್ ಎಂಬ ಹಾರ್ವೇನು ಹೆಚ್ಚಾಗಿ ಬಿಡುಗಡೆಯಾಗಿ ಇದು ಕೂಡ ಹೊಟ್ಟೆಯ ಬೊಜ್ಜು ಹೆಚ್ಚಾಗಲು ಕಾರಣವಾಗುತ್ತದೆ. ಇನ್ನು ನಾವು ಹಲವಾರು ವಿಧಗಳಲ್ಲಿ ಸಕ್ಕರೆಯನ್ನು ಸೇವಿಸುತ್ತೇವೆ; ಅತಿ ಅಪಾಯಕಾರಿಯಾದ ಇದನ್ನು ಪೂರ್ತಿಯಾಗಿ ತ್ಯಜಿಸಲೇಬೇಕಾಗುತ್ತದೆ. ಇಡೀ ದಿನ ಕುಳಿತೇ ಕೆಲಸ ಮಾಡುವವರಿಗೆ ಹೊಟ್ಟೆಯ ಬೊಜ್ಜು ಹೆಚ್ಚು. ಆ ರೀತಿಯ ಕೆಲಸ ಇರುವವರು ಪ್ರತಿದಿನ ಕನಿಷ್ಠ ಅರ್ಧ ಘಂಟೆಯಾದರೂ ವ್ಯಾಯಾಮಗಳನ್ನು ಮಾಡಲೇಬೇಕು. ಸೂರ್ಯ ನಮಸ್ಕಾರ, ಕೆಲವು ಆಸನಗಳು, ಏರೋಬಿಕ್ ವ್ಯಾಯಾಮಗಳು ತುಂಬಾ ಪರಿಣಾಮಕಾರಿ. ಸರಿಯಾದ ಪ್ರಮಾಣದಲ್ಲಿ ನಿದ್ದೆ ಮಾಡದೇ ಹೋದರೆ ಅಂದರೆ ಕನಿಷ್ಠ ಆರೇಳು ತಾಸು ನಿದ್ದೆ ಮಾಡದೇ ಇರುವವರಿಗೆ ಆಗಲೇ ಇರುವ ಹೊಟ್ಟೆಯ ಬೊಜ್ಜು ಹೆಚ್ಚುತ್ತಾ ಹೋಗುತ್ತದೆ ಎಂಬುದನ್ನು ಹಲವು ಸಂಶೋಧನೆಗಳು ಸಾಬೀತುಪಡಿಸಿವೆ. ಹಾಗೆಯೇ ಹಗಲು ನಿದ್ದೆಯಿಂದ ಈ ಸಮಸ್ಯೆ ಇನ್ನೂ ಹೆಚ್ಚಾಗುತ್ತದೆ. ಪೊ›ಬಯೋಟಿಕ್ ಗಳು, ಒಮೆಗಾ ತ್ರಿ, ವೇ ಪೊ›ಟೀನ್ಗಳಂತಹ ಪೂರಕ ಆಹಾರೌಷಧಗಳನ್ನು ಮತ್ತು ಗ್ರೀನ್ ಟೀ ಯಂತಹ ಪಾನೀಯಗಳನ್ನು ಸೇವಿಸುವುದರಿಂದಲೂ ಬೊಜ್ಜು ಕಡಿಮೆಯಾಗಲು ಸಹಾಯವಾಗುತ್ತದೆ. ಮಧ್ಯಂತರ ಉಪವಾಸ ಹೊಟ್ಟೆಯ ಬೊಜ್ಜನ್ನು ಕರಗಿಸಲು ಅದ್ಭುತವಾಗಿ ಕೆಲಸ ಮಾಡುತ್ತದೆ. 24 ಗಂಟೆಗಳಲ್ಲಿ ಎಂಟು ತಾಸು ಆಹಾರವನ್ನು ಸೇವಿಸಿದರೆ ಇನ್ನು 16 ತಾಸು ನೀರಿನ ಹೊರತಾಗಿ ಬೇರೆ ಏನನ್ನೂ ಸೇವಿಸದೇ ಉಪವಾಸ ಮಾಡಬೇಕು. ಪ್ರಾರಂಭದಲ್ಲಿ 12 ರಿಂದ 14 ತಾಸು ಉಪವಾಸ ಮಾಡುತ್ತಾ ನಿಧಾನವಾಗಿ ಪ್ರತಿದಿನ 16 ತಾಸು ಉಪವಾಸ ಮಾಡುವ ರೂಢಿ ಮಾಡಿಕೊಳ್ಳಬೇಕು. ಎಂಟು ತಾಸುಗಳ ಅವಧಿಯಲ್ಲಿ ಆಹಾರ ಸೇವಿಸಬಹುದಾದರೂ ಮೇಲೆ ಹೇಳಿದ ಎಲ್ಲ ನಿಯಮಗಳನ್ನು ನೆನಪಿನಲ್ಲಿಟ್ಟುಕೊಂಡು ಬೊಜ್ಜನ್ನು ಕರಗಿಸಲು ಸಹಾಯ ಮಾಡುವ ಆಹಾರಗಳನ್ನು ಮಾತ್ರ ಸೇವಿಸಬೇಕು.
ಈ ಸಮಸ್ಯೆ ಅತಿಯಾಗಿ ಕಾಡುತ್ತಿರುವವರು ಇವುಗಳ ಜೊತೆಗೆ ಹೊಟ್ಟೆಯ ಬೊಜ್ಜನ್ನು ಕರಗಿಸಲೆಂದೇ ಇರುವ ಪ್ರಕೃತಿ ಚಿಕಿತ್ಸೆಗಳು, ಆಯುರ್ವೆದ ಚಿಕಿತ್ಸೆಗಳನ್ನು ಕನಿಷ್ಠ 10 ದಿನ ತೆಗೆದುಕೊಳ್ಳುವುದರಿಂದ ಈ ಸಮಸ್ಯೆ ನಿವಾರಣೆಗೆ ಭದ್ರ ಬುನಾದಿ ಹಾಕಿದಂತಾಗುತ್ತದೆ. ಒಟ್ಟಿನಲ್ಲಿ ಹೊಟ್ಟೆಯ ಬೊಜ್ಜು ಹೆಚ್ಚಾಗಲು ಬಿಡಬಾರದು; ಹೆಚ್ಚಾದರೆ ಆದಷ್ಟು ಬೇಗ ಅದನ್ನು ನಿವಾರಿಸಿಕೊಳ್ಳಲೇಬೇಕು.