ಅಂಕಣ

ತಿರುಗುಬಾಣವಾದ ಹನಿ ಟ್ರಾಪ್​: ಆ ಕ್ಷಣ ಅಂಕಣ

42 ವರ್ಷದ ಚೌಧರಿ ಮಹಾನಗರವೊಂದರಲ್ಲಿ ಶ್ರೀಮಂತ ವ್ಯಾಪಾರಿಯಾಗಿದ್ದು ಮಡದಿ ಮತ್ತು ಇಬ್ಬರು ಮಕ್ಕಳೊಂದಿಗೆ ಸುಖೀ ಜೀವನವನ್ನು ನಡೆಸುತ್ತಿದ್ದ. ಒಮ್ಮೆ ಮೋಜು ಮಾಡಲು ತನ್ನ ಗೆಳೆಯರೊಡನೆ ಗೋವಾದ ಕ್ಯಾಸಿನೋ ಒಂದಕ್ಕೆ ಹೋದ. ಅಲ್ಲಿ ಅವನಿಗೆ ಅನಿಲ್​ ಎಂಬ 35 ವರ್ಷದ ವ್ಯಕ್ತಿ ಪರಿಚಯವಾದ. ತಾನು ಮುಂಬೈನಲ್ಲಿ ಆಭರಣಗಳ ಅಂಗಡಿಯೊಂದರ ಮಾಲೀಕ ಎಂದು ಹೇಳಿಕೊಂಡ ಅನಿಲ್​, ವಿವಿಧ ಜೂಜಾಟಗಳನ್ನು ಆಡುವುದು ಹೇಗೆಂದು ಚೌಧರಿಗೆ ಹೇಳಿಕೊಟ್ಟ. ಅದರ ಫಲವಾಗಿ ಚೌಧರಿ ಸ್ವಲ್ಪ ಹಣವನ್ನೂ ಗೆದ್ದ. ಇಬ್ಬರೂ ತಮ್ಮ ಸೆಲ್​ಫೋನ್​ ನಂಬರ್​ಗಳನ್ನು ಹಂಚಿಕೊಂಡರು.

ಗೋವಾದಿಂದ ವಾಪಸ್ಸಾದ ಬಳಿಕ ಚೌಧರಿಯನ್ನು ಫೋನ್​ ಮೂಲಕ ಕಾಲಕಾಲಕ್ಕೆ ಸಂಪರ್ಕಿಸುತ್ತಿದ್ದ ಅನಿಲ್​, ಮುಂಬೈಗೆ ಬಂದಾಗ ತನ್ನನ್ನು ಭೇಟಿಯಾಗಬೇಕೆಂದು ಹೇಳುತ್ತಿದ್ದ. ಮುಂದೊಂದು ದಿನ ಮುಂಬೈಗೆ ಕೆಲಸಕ್ಕಾಗಿ ಚೌಧರಿ ಹೋಗಿ ಪಂಚತಾರಾ ಹೊಟೇಲ್​ ಒಂದರಲ್ಲಿ ತಂಗಿದ. ತಾನು ಮುಂಬೈಗೆ ಬಂದಿರುವುದಾಗಿ ಅನಿಲ್​ಗೆ ಕರೆ ಮಾಡಿ ತಿಳಿಸಿದ. ನಾನು ಒಂದು ಗಂಟೆಯಲ್ಲಿ ನಿನ್ನ ಹೋಟೆಲ್ಲಿಗೆ ಬರುವೆ ಎಂದ ಅನಿಲ್​.
8 ಗಂಟೆಗೆ ಅನಿಲ್​ ಹೋಟೆಲ್ಲಿನ ಲಾಬಿಗೆ ಬಂದು ಚೌಧರಿಯ ರೂಮಿಗೆ ಕರೆಮಾಡಿದ. ತನ್ನ ಜೊತೆ ಇಬ್ಬರು ಗೆಳತಿಯರಿದ್ದಾರೆಂದು ಹೇಳಿ ಅವರನ್ನು ಪರಿಚಯಿಸುವುದಾಗಿ ಹೇಳಿದ. ಮೂರೂ ಜನರು ನನ್ನ ರೂಮಿಗೇ ಬನ್ನಿ, ಎಂದ ಚೌಧರಿ. ಅಲ್ಲಿಗೆ ಬಂದ ಅನಿಲ್​, ತನ್ನ ಜೊತೆಯಿದ್ದ ಇಬ್ಬರು ಸಿಯರನ್ನು ಸಪ್ನಾ ಮತ್ತು ಮೋನಿಕಾ ಎಂದು ಪರಿಚಯಿಸಿದ. ಸಪ್ನಾ ಒಬ್ಬ ಫ್ಯಾಷನ್ ಡಿಸೈನರ್​ ಎಂದೂ ಮೋನಿಕಾ ಟೆಲಿವಿಷನ್​ ಧಾರಾವಾಹಿಗಳ ಡೈರೆಕ್ಟರ್​ ಎಂದು ಮಾಹಿತಿಯಿತ್ತ. ವಿಸ್ಕಿ ಬಾಟಲೊಂದನ್ನು ತನ್ನೊಡನೆ ತಂದಿದ್ದ ಅನಿಲ್​, ಅದನ್ನು ಎಲ್ಲರೂ ಸೇವಿಸೋಣವೆಂದ. ಎಲ್ಲರೂ ಮಧ್ಯಪಾನ ಮಾಡತೊಡಗಿದರು. ಒಂದು ಡ್ರಿಂಕ್​ ಸೇವಿಸಿದ ನಂತರ, ಅನಿಲ್​ನಿಗೆ ಟೆಲಿಫೋನ್​ ಕರೆಯೊಂದು ಬಂದಿತು. ಅದನ್ನು ಉತ್ತರಿಸಿದ ಅನಿಲ್​, ತನಗೊಂದು ತುರ್ತು ಕೆಲಸ ಬಂದಿದ್ದು ತಾನು ಇನ್ನರ್ಧ ಗಂಟೆಯಲ್ಲಿ ಮರಳುವೆನೆಂದು ಹೇಳಿ ಕೋಣೆಯಿಂದ ಹೊರಟು ಹೋದ. ಚೌದರಿ, ಸಪ್ನ ಮತ್ತು ಮೋನಿಕಾ ಮದ್ಯಪಾನವನ್ನು ಮುಂದುವರೆಸಿದರು. ಹತ್ತು ನಿಮಿಷಗಳ ಬಳಿಕ ತನ್ನ ಕಾರಿನಲ್ಲಿ ಏನನ್ನೋ ಮರೆತಿರುವುದಾಗಿ ಹೇಳಿದ ಸಪ್ನಾ ಅದನ್ನು ತರಲು ಹೊರಗೆ ಹೋದಳು. ಆಕೆ ಹೋದ ನಂತರ ತಾನು ವಾಷ್​ರೂಮ್​ಗೆ ಹೋಗುತ್ತೇನೆಂದು ಮೋನಿಕಾ ಕೋಣೆಯಲ್ಲಿದ್ದ ಶೌಚಾಲಯಕ್ಕೆ ಹೋದಳು. ಆಕೆ ಬಹಳ ಹೊತ್ತಾದರೂ ಹೊರಗೆ ಬರಲಿಲ್ಲ. ಅಷ್ಟರಲ್ಲಿ ಕೋಣೆಗೆ ಮರಳಿದ ಸಪ್ನಾ ಕರೆಗಂಟೆಯನ್ನು ಬಾರಿಸಿದಳು. ಒಳಗೆ ಬಂದ ಕೂಡಲೇ ಮೋನಿಕಾ ಎಲ್ಲಿ? ಎಂದಳು. ಅವಳು ಬಾತ್​ರೂಂಗೆ ಹೋಗಿದ್ದಾಳೆ ಎಂದು ಚೌಧರಿ ಹೇಳುವಷ್ಟರಲ್ಲಿ ಮೊನಿಕಾ ಬಾತ್​ರೂಂನಿಂದ ಹೊರಬಂದಳು. ಅವಳು ಸಂಪೂರ್ಣ ನಗ್ನಳಾಗಿದ್ದು. ಅವಳ ಕಾಲುಗಳು ಮತ್ತು ತೊಡೆಯ ಮೇಲೆ ರಕ್ತವಿತ್ತು.

ಸಪ್ನಾಳನ್ನು ಕಂಡ ಕೂಡಲೇ ಜೋರಾಗಿ ಅಳಲಾರಂಭಿಸಿದ ಮೋನಿಕಾ, ನೀನು ಹೊರಗೆ ಹೋದ ಕೂಡಲೇ ಚೌಧರಿ ನನ್ನ ಬಟ್ಟೆಗಳನ್ನು ಬಿಚ್ಚಿ ನನ್ನ ಮೇಲೆ ಅತ್ಯಾಚಾರ ಮಾಡಿದ ಎಂದಳು. ಕ್ಷಣಾರ್ಧದಲ್ಲಿ ಸಪ್ನಾ ತನ್ನ ಕೈಯಲ್ಲಿದ್ದ ಮೊಬೈಲ್​ ಫೋನನ್ನು ಅವಳತ್ತ ಗುರಿಮಾಡಿ ಆಕೆ ಹೇಳುತ್ತಿದ್ದುದನ್ನು ವಿಡಿಯೋ ರೆಕಾರ್ಡಿಂಗ್​ ಮಾಡತೊಡಗಿದಳು. ರಕ್ತಸಿಕ್ತವಾಗಿದ್ದ ತನ್ನ ತೊಡೆಗಳು ಮತ್ತು ಕಾಲುಗಳನ್ನು ಕ್ಯಾಮರಾಗೆ ತೋರಿಸಿದ ಮೋನಿಕಾ, ಗಾಬರಿಯಾಗಿ ನಿಂತಿದ್ದ ಚೌಧರಿಯ ಬಳಿಗೆ ಬಂದು ಅವನನ್ನು ಅಪ್ಪಿಕೊಂಡಳು. ಇದರ ಫೋಟೋ ಹಾಗೂ ವೀಡಿಯೋವನ್ನೂ ಸಪ್ನಾ ಚಿತ್ರೀಕರಿಸಿದಳು. ಅದೇ ಸಮಯಕ್ಕೇ ಹೊರಗೆ ಹೋಗಿದ್ದ ಅನಿಲ್​ ಕೋಣೆಗೆ ಮರಳಿದ. ಆತ ಬಂದ ಕೂಡಲೇ ಆ ಲಲನೆಯರು, ಮೋನಿಕಾಳನ್ನು ಚೌಧರಿ ಅತ್ಯಾಚಾರ ಮಾಡಿದನೆಂದು ದೂರಿದರು. ತನ್ನ ಮುಖದಲ್ಲಿ ಗಾಬರಿಯನ್ನು ವ್ಯಕ್ತಪಡಿಸಿದ ಅನಿಲ್​, ಇದೇನಿದು ಗೆಳೆಯಾ, ಏಕೆ ಹೀಗೆ ಮಾಡಿದೆ? ಕುಡಿತದ ಅಮಲು ಜಾಸ್ತಿಯಾಗಿತ್ತೇ? ಎಂದ. ನಾನು ಇವಳನ್ನು ಮುಟ್ಟಲೂ ಇಲ್ಲ. ಈಕೆ ಸುಳ್ಳು ಹೇಳುತ್ತಿದ್ದಾಳೆ ಎಂದು ಚೌಧರಿ ಹೇಳಿದಾಗ, ಹಾಗಾದರೆ ಮೋನಿಕಾ ಇನ್ನೂ ನಗ್ನಾವಸ್ಥೆಯಲ್ಲಿಯೇ ಏಕಿದ್ದಾಳೆ? ಅವಳ ಮೈಮೇಲೆ ರಕ್ತವೇಕಿದೆ? ಎಂದು ಪ್ರಶ್ನಿಸಿದ ಅನಿಲ್​. ಆ ಪ್ರಶ್ನೆಗೆ ಉತ್ತರವೆಂಬಂತೆ ಸಪ್ನಾ ತನ್ನ ಮೊಬೈಲ್​ನಲ್ಲಿ ತೆಗೆದಿದ್ದ ವಿಡಿಯೋವನ್ನು ಅನಿಲ್​ಗೆ ತೋರಿಸಿದಳು. ಇದೊಂದು ಬಹಳ ಸೀರಿಯಸ್​ ಕೇಸು. ಮೋನಿಕಾ ಟಿ.ವಿ ಧಾರಾವಾಹಿಗಳಲ್ಲಿದ್ದು ಅವಳಿಗೆ ಮುಂಬೈನ ಹಿರಿಕಿರಿಯ ಪೊಲೀಸ್​ ಅಧಿಕಾರಿಗಳ ಪರಿಚಯವಿದೆ. ಆಕೆ ಒಂದು ಫೋನ್​ ಮಾಡಿದರೆ ಈಗಿಂದೀಗಲೇ ಪೊಲೀಸರು ಬಂದು ನಿನ್ನನ್ನು ಬಂಧಿಸುತ್ತಾರೆ. ಇದು ಬೇರೆ ಊರಾದ ಕಾರಣ ನಿನಗೆ ಜಾಮೀನು ಕೊಡಲೂ ಯಾರೂ ಬರುವುದಿಲ್ಲ. ಏಳು ವರ್ಷ ನೀನು ಈ ಊರಿನ ಜೈಲಿನಲ್ಲಿಯೇ ಇರಬೇಕಾಗುತ್ತದೆ, ಎಂತಹ ಕೆಲಸ ಮಾಡಿಬಿಟ್ಟೆ ಗೆಳೆಯಾ? ಎಂದ ಅನಿಲ್​.

ಚೌದರಿ ಬೆವೆತು ಹೋದ. ಮುಂದೇನು ಮಾಡಬೇಕೆಂದು ಅವನಿಗೆ ತೋಚಲಿಲ್ಲ. ತನ್ನ ತಲೆಯ ಮೇಲೆ ಕೈಟಿಟ್ಟುಕೊಂಡು ಮಂಚದ ಮೇಲೆ ಕುಳಿತ. ಅವನ ಪಕ್ಕದಲ್ಲಿ ಬಂದು ಕುಳಿತ ಅನಿಲ್​, ಕೋಣೆಯಲ್ಲಿದ್ದ ಮೋನಿಕಾಗೆ ಬೇಗನೇ ತನ್ನ ಬಟ್ಟೆಗಳನ್ನು ಧರಿಸಿ ಸಪ್ನಾಳೊಂದಿಗೆ ಹೋಟೆಲ್ಲಿನ ಲಾಬಿಗೆ ಹೋಗಿ ತನಗಾಗಿ ಕಾಯಲು ಹೇಳಿದ. ಅವರು ಹೋದ ನಂತರ ಚೌಧರಿಯನ್ನುದ್ದೇಶಿಸಿ, ಗೆಳೆಯಾ, ನೀನು ನನ್ನ ಆಪ್ತಮಿತ್ರನಾದ ಕಾರಣ ನಾನು ಏನಾದರೂ ಉಪಾಯ ಮಾಡಿ ನಿನ್ನ ವಿರುದ್ಧ ದೂರುಕೊಡದಂತೆ ಮೋನಿಕಾಳಿಗೆ ತಾಕೀತು ಮಾಡುವೆ. ಆದರೆ ಸಂತ್ರಸ್ತೆಯಾದ ಆಕೆ ಪರಿಹಾರವನ್ನು ಕೇಳುತ್ತಾಳೆ. ಇದಲ್ಲದೆ ಸಪ್ನಾ ಈ ಸನ್ನಿವೇಶವನ್ನು ವೀಡಿಯೋ ಮಾಡಿಕೊಂಡಿರುವುದರಿಂದ ಅದನ್ನು ಜಾಹೀರು ಮಾಡದಿರಲು ಅವಳೂ ಹಣ ಕೇಳಬಹುದು. ನೀನು ಅವರು ಕೇಳಿದ ಹಣವನ್ನು ಕೊಡಲು ತಯಾರಾದರೆ ಎಲ್ಲವನ್ನೂ ಇಲ್ಲಿಯೇ ಮುಗಿಸಿಬಿಡುತ್ತೇನೆ, ಎಂದ. ಎಷ್ಟು ಹಣ ಕೊಡಬೇಕೆಂದು ಚೌಧರಿ ಕೇಳಿದಾಗ ತಾನು ಆ ಇಬ್ಬರನ್ನೂ ಮಾತನಾಡಿಸಿಕೊಂಡು ತಿಳಿಸುವೆ ಎನ್ನುತ್ತಾ ಆತ ರೂಮಿನಿಂದ ಹೊರಟುಹೋದ.

ಹತ್ತು ನಿಮಿಷಗಳ ನಂತರ ಕೋಣೆಗೆ ವಾಪಸ್ಸಾದ ಅನಿಲ್​, ನೀನು ಮೂರು ಕೋಟಿ ರೂ ಕೊಟ್ಟರೆ ಎಲ್ಲವೂ ಬಗೆಹರಿಯತ್ತದೆ ಎಂದ. ಗಾಬರಿಗೊಂಡ ಚೌಧರಿ, ಏಕಿಷ್ಟು ಭಾರೀ ಮೊತ್ತ? ಎಂದ. ಮೋನಿಕಾ ಒಂದು ಜನಪ್ರಿಯ ವೃತ್ತಿಯಲ್ಲಿದ್ದಾಳೆ. ಪೊಲೀಸರಿಗೆ ದೂರನ್ನು ಕೊಡುವೆನೆಂದು ಹಠ ಹಿಡಿದಿದ್ದಾಳೆ. ನಾನು ಬಹಳ ಹೆಣಗಾಡಿ ಅವಳಿಗೆ ತಾಳ್ಮೆಯಿಂದಿರಲು ಸೂಚಿಸಿದ್ದೇನೆ. ಇದಲ್ಲದೆ ಸಪ್ನಾಳಿಗೆ ಹಣ ಕೊಡದಿದ್ದರೆ ಆಕೆ ನಿಸ್ಸಂದೇಹವಾಗಿ ವೀಡಿಯೋ ಮತ್ತು ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಡುತ್ತಾಳೆ ಹಾಗೂ ನಿನ್ನ ಕುಟುಂಬಕ್ಕೆ ಕಳುಹಿಸುತ್ತಾಳೆ. ಯೋಚಿಸಿ ನೋಡು, ಎಂದ. ಮೂಲತಃ ವ್ಯಾಪಾರಿಯೇ ಆಗಿದ್ದ ಚೌಧರಿ ಕೊಡಬೇಕಾದ ಹಣದ ವಿಚಾರವಾಗಿ ಮಾತುಕತೆ ನಡೆಸಿ 75 ಲಕ್ಷ ರೂಗಳನ್ನು ಕೊಡುವುದಾಗಿ ಹೇಳಿ, ಅಡ್ವಾನ್ಸ್​ ಎಂದು ತನ್ನ ಅಕೌಂಟಿನಿಂದ ಹತ್ತು ಲಕ್ಷರೂಗಳನ್ನು ಮೋನಿಕಾಳ ಅಕೌಂಟಿಗೆ ಸ್ಥಳದಲ್ಲಿಯೇ ವರ್ಗಾಯಿಸಿದ. ಆನಂತರ ಅನಿಲ್​ ಹೊರಟುಹೋದ. ಮಾರನೆಯ ಬೆಳಗಿನ ಫ್ಲೆಟಿನಲ್ಲಿ ಚೌಧರಿ ತನ್ನೂರಿಗೆ ಹಿಂದಿರುಗಿದ. ನಂತರ ಉಳಿದ 65 ಲಕ್ಷ ರೂಗಳನ್ನೂ ಮೋನಿಕಾಳ ಅಕೌಂಟಿಗೆ ವರ್ಗಾಯಿಸಿದ.
ಒಂದು ತಿಂಗಳ ತರುವಾಯ ಚೌಧರಿಗೆ ಕರೆ ಮಾಡಿದ ಅನಿಲ್​ ಇನ್ನಷ್ಟು ಹಣವನ್ನು ಕಳುಹಿಸಲು ಸೂಚಿಸಿದ. ಆಗ ಚೌಧರಿ ಅವನ ಹೆಸರಿನಲ್ಲಿ 10 ಲಕ್ಷ ರೂಗಳನ್ನು ಚೆಕ್​ ಮೂಲಕ ಸಂದಾಯ ಮಾಡಿದ. ಇಷ್ಟಾದರೂ ತೃಪ್ತಿಯಾಗದ ಅನಿಲ್​, ಚೌಧರಿಯಿದ್ದ ಊರಿಗೇ ಬಂದ. ಕೂಡಲೇ ನನಗೆ 50 ಲಕ್ಷರೂ ಕೊಡದಿದ್ದರೆ ವೀಡಿಯೋವನ್ನು ಜಾಹೀರು ಮಾಡುವುದಾಗಿ ಬೆದರಿಸಿದ. ಆಗ ಚೌಧರಿ ತನ್ನಲ್ಲಿದ್ದ ಬಂಗಾರದ ಚೈನ್​ ಮತ್ತು 10 ಲಕ್ಷ ನಗದು ಹಣವನ್ನು ಅವನಿಗೆ ಕೊಟ್ಟ. ವಾರವೊಂದರ ನಂತರ ಮೋನಿಕಾ ಚೌಧರಿಗೆ ಫೋನ್​ ಮಾಡಿ ಕೂಡಲೇ 25 ಲಕ್ಷರೂ ಕಳಿಸಲು ಕೋರಿದಾಗ ಚೌಧರಿಯ ಸಹನೆಯ ಕಟ್ಟೆ ಒಡೆಯಿತು. ಅದನ್ನು ತೋರಗೊಡದೆ ತಾನು ಎರಡು ದಿನಗಳಲ್ಲಿ ಮುಂಬೈಗೆ ಬರುತ್ತಿರುವುದಾಗಿ ಅವಳಿಗೆ ತಿಳಿಸಿ ಅಲ್ಲಿ ಹಣ ಕೊಡುವೆನೆಂದ. ಮಾರನೆಯ ದಿನವೇ ಮುಂಬೈಗೆ ಹೋದ ಚೌಧರಿ, ಅಲ್ಲಿನ ಪೊಲೀಸ್​ ಠಾಣೆಗೆ ಹೋಗಿ ಅನಿಲ್​ ಮತ್ತಿತರರು ತನಗೆ ಬ್ಲಾಕ್​ಮೇಲ್​ ಮಾಡುತ್ತಿರುವರೆಂದು ದೂರಿತ್ತ. ದೂರು ದಾಖಲಿಸಿದ ಪೊಲೀಸರು ಅನಿಲ್​ ಮತ್ತವನ ಗೆಳತಿಯರಿಗೆ ತಾನು ಉಳಿದಿದ್ದ ಪಂಚತಾರಾ ಹೋಟೆಲ್ಲಿಗೆ ಬರಹೇಳುವಂತೆ ಚೌಧರಿಗೆ ಸೂಚಿಸಿದರು. ಅವರು ಹೇಳಿದಂತೆ ಆತ ಮಾಡಿದ.

ಅದೇ ಸಂಜೆ ಚೌಧರಿಯ ಕೋಣೆಗೆ ಅನಿಲ್​ ಸಪ್ನಾಳ ಜೊತೆ ಬಂದ. ಆಗ ರೂಮಿನಲ್ಲಿ ಅಡಗಿದ್ದ ಪೊಲೀಸರು ಅವರಿಬ್ಬರನ್ನೂ ಬಂಧಿಸಿ ಅವರ ಮೊಬೈಲ್​ ಫೋನುಗಳನ್ನು ವಶಪಡಿಸಿಕೊಂಡರು. ಸಪ್ನಾಳ ಮೊಬೈಲ್​ ಫೋನಿನಲ್ಲಿ ಚೌಧರಿಯ ಫೋಟೋ ಹಾಗೂ ವೀಡಿಯೋಗಳು ಇದ್ದವು. ಪೊಲೀಸರ ಮುಂದೆ ಅವರಿಬ್ಬರೂ ತಮ್ಮ ತಪ್ಪನ್ನೊಪ್ಪಿಕೊಂಡು ಚೌಧರಿಯಿಂದ ಹಣವನ್ನು ಕಸಿಯಲು ತಾವು ಹಲವಾರು ದಿನಗಳಿಂದಲೇ ಯೋಜನೆಯನ್ನು ಹಾಕಿದ್ದಾಗಿ ತಿಳಿಸಿದರು. ಮೋನಿಕಾ ನೇಪಾಳಕ್ಕೆ ಹೋಗಿರುವುದಾಗಿ ಹೇಳಿದರು. ಆಕೆ ಮರಳಿದ ಬಳಿಕ ಅವಳನ್ನು ಪೊಲೀಸರು ಬಂಧಿಸಿ ಪ್ರಶ್ನಿಸಿದಾಗ, ಚೌಧರಿ ತನ್ನ ಮೇಲೆ ಅತ್ಯಾಚಾರವನ್ನು ಮಾಡಿದ ಎಂದು ದೂರಲು ತಾನು ಒಂದು ಬಾಟಲಿನಲ್ಲಿ ಕೋಳಿಯ ರಕ್ತವನ್ನು ತೆಗೆದುಕೊಂಡು ಹೋಗಿದ್ದೆ. ಬಾತ್​ರೂಮಿನಲ್ಲಿ ವಿವಸಳಾಗಿ ಅದೇ ರಕ್ತವನ್ನೇ ತನ್ನ ಮೈಗೆ ಮೆತ್ತಿಕೊಂಡೆ ಎಂದಳು. ಮುಂದಿನ ತನಿಖೆಯಲ್ಲಿ ಈ ಮೂರೂ ಜನರು ಇದೇ ರೀತಿಯೇ ಹಲವಾರು ಜನರಿಗೆ ಬ್ಲಾಕ್​ಮೇಲ್​ ಮಾಡಿದ್ದಾಗಿ ತಿಳಿಯಿತು. ಚೌಧರಿಯಿಂದ ಪಡೆದಿದ್ದ 15 ಲಕ್ಷ ರೂ ಹಣವನ್ನು ಅವರಿಂದ ವಶಪಡಿಸಿಕೊಳ್ಳಲಾಯಿತು. ತನಿಖೆಯನ್ನು ಬೇಗನೆ ಮುಗಿಸಿ ನ್ಯಾಯಾಲಯಕ್ಕೆ ಆರೋಪಪಟ್ಟಿ ಸಲ್ಲಿಸಲಾಯಿತು. ನ್ಯಾಯಾಲಯವು ಮೂರೂ ಜನರಿಗೆ ತಲಾ ಐದು ವರ್ಷಗಳ ಕಠಿಣ ಶಿಕ್ಷೆಯನ್ನು ನೀಡಿತು.
ಅದ್ಧೂರಿ ಬಯಕೆಗಳಿಗಿಂತ ದೊಡ್ಡ ಪ್ರಮಾದವಿಲ್ಲ, ಅತೃಪ್ತಿಗಿಂತ ದೊಡ್ಡ ಪಾಪಪ್ರೆಯಿಲ್ಲ, ದುರಾಸೆಗಿಂತ ದೊಡ್ಡ ಆಪತ್ತಿಲ್ಲ ಎಂದ ಚೀನೀ ತತ್ವಶಾಸ ಲಾವೋಜಿ. ಈ ಮೂರೂ ಗುಣಗಳನ್ನು ಹೊಂದಿದ್ದ ಆರೋಪಿತರು ಜೈಲು ಸೇರಿದ್ದು ಸಹಜವೇ ಅಲ್ಲವೇ?

(ಲೇಖಕರು ನಿವೃತ್ತ ಪೊಲೀಸ್​ ಅಧಿಕಾರಿ)