ಅಂಕಣ

ಇಲ್ಲೇ ಇದೆ ಸುಂದರ ಸಾಗರ ಕಿನಾರೆ

Webdesk - Manjunatha B
ಅಂತಾರಾಷ್ಟ್ರೀಯ ರಾಜಕಾರಣವೇ ಹಾಗೆ. ಅಲ್ಲಿ ಧನಬಲದ ಜತೆಗೆ ಬುದ್ಧಿ ಚಾತುರ್ಯ ಸಹ ಬೇಕು. ಜಾಗತಿಕ ರಂಗವೇದಿಕೆಯಲ್ಲಿ ಒಂದು ಸಣ್ಣ ಕದಲಿಕೆ ಕೂಡ ದೊಡ್ಡ ದೊಡ್ಡ ಅಲೆಗಳನ್ನೇ ಎಬ್ಬಿಸಬಹುದು. ದಾಳಕ್ಕೆ ಪ್ರತಿ ದಾಳ, ತಂತ್ರ-ಪ್ರತಿತಂತ್ರ-ಕಾರ್ಯತಂತ್ರಗಳ ಮೆರೆದಾಟ, ನಾನಾ ನೀನಾ ಎಂಬ ಮೇಲಾಟ...

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಕೆಲ ದಿನಗಳ ಹಿಂದೆ ಲಕ್ಷದ್ವೀಪಕ್ಕೆ ಹೋಗಿ ಅಲ್ಲಿ ವಿಹರಿಸಿ ಫೋಟೋಗಳನ್ನು ಹಂಚಿಕೊಂಡರು. ಸಾಮಾಜಿಕ ಜಾಲತಾಣಗಳಲ್ಲಿ ಭರ್ಜರಿ ವೀಕ್ಷಣೆ ಮತ್ತು ಪ್ರತಿಕ್ರಿಯೆಗಳು ಬಂದವು. ಆ ದ್ವೀಪ ಸಮೂಹವನ್ನು ಈವರೆಗೆ ನೋಡದವರು ಅಲ್ಲಿಗೆ ಹೋಗುವ ಪ್ಲಾನ್ ಮಾಡತೊಡಗಿದರೆ, ನೋಡಿದವರು ಆ ನೆನಪುಗಳನ್ನು ಮತ್ತಷ್ಟು ತಾಜಾ ಆಗಿಸಿಕೊಂಡರು. ಇಲ್ಲಿ ಇಷ್ಟೆಲ್ಲ ಆಗುವಾಗ ಅತ್ತ ಮಾಲ್ದೀವ್ಸ್ ಎಂಬ ದ್ವೀಪ ರಾಷ್ಟ್ರದಲ್ಲಿ ಕೂಡ ಈ ಫೋಟೋಗಳು ಸಂಚಲನ ಮೂಡಿಸಿದವು. ಅಷ್ಟೇ ಆಗಿದ್ದರೆ ಸಮಸ್ಯೆ ಏನೂ ಆಗುತ್ತಿರಲಿಲ್ಲವೇನೊ. ಅಲ್ಲಿನ ಮೂವರು ಸಚಿವರು ಮೋದಿ ವಿರುದ್ಧ ಆಕ್ಷೇಪಾರ್ಹ ಪೋಸ್ಟ್ಗಳನ್ನು ಹಾಕಿದರು. ಮುಂದಿನ ಪರಿಣಾಮದ ಅರಿವಿಲ್ಲದೆ ಮಾಡಿದ ಟೀಕೆ ಟಿಪ್ಪಣಿಗಳು ದೊಡ್ಡ ಅನಾಹುತವನ್ನೇ ತಂದಿಟ್ಟವು. ಮೋದಿ ವಿರುದ್ಧದ ಹೇಳಿಕೆಗಳನ್ನು ಗಮನಿಸಿ ಭಾರತದಲ್ಲಿ ಮಾಲ್ದೀವ್ಸ್ ವಿರುದ್ಧ ಆಕ್ರೋಶದ ಅಲೆಗಳೇ ಉಂಟಾದವು. ಬಾಯ್ಕಾಟ್ ಮಾಲ್ದೀವ್ಸ್ ಅಭಿಯಾನ ಜೋರು ಪಡೆಯಿತು. ಸಾವಿರಾರು ಜನರು ಅಲ್ಲಿನ ಬುಕಿಂಗ್ ರದ್ದುಪಡಿಸಿದರು. ನೋಡನೋಡುತ್ತಿದ್ದಂತೆ ಆ ದೇಶಕ್ಕೆ ಕೋಟ್ಯಂತರ ರೂಪಾಯಿ ಹಾನಿಯ ಅಪಾಯ ಕಾಣಿಸತೊಡಗಿತು. ಪ್ರವಾಸೋದ್ಯಮವನ್ನು ಮಾತ್ರ ನಂಬಿಕೊಂಡ ದೇಶಗಳ ಫಜೀತಿಯೇ ಇದು. ಪ್ರವಾಸಿಗರು ದಂಡಿಯಾಗಿ ಬರುತ್ತಿದ್ದರೆ ಅಲ್ಲಿನ ಸರ್ಕಾರ ಮತ್ತು ಜನರ ಮುಖದಲ್ಲಿ ನಗು. ಒಂದು ವೇಳೆ ಟೂರಿಸ್ಟ್ಗಳು ಮುಖ ತಿರುಗಿಸಿದರೋ ಇವರ ಮುಖದಲ್ಲಿ ವಿಷಾದದ ಕಳೆ. ಹೇಳಿಕೇಳಿ ಮಾಲ್ದೀವ್ಸ್ ಪ್ರವಾಸೋದ್ಯಮವನ್ನೇ ಮುಖ್ಯ ಆದಾಯ ಮೂಲವನ್ನಾಗಿ ಹೊಂದಿದ ದೇಶ. ಅಲ್ಲಿಗೆ ಹೋಗುವ ಪ್ರವಾಸಿಗರ ಪ್ರಮಾಣ ತೆಗೆದುಕೊಂಡರೆ ಭಾರತದ್ದು ದೊಡ್ಡ ಪಾಲು. ಯಾವಾಗ ದೊಡ್ಡ ಸಂಖ್ಯೆಯ ಜನರು ಮಾಲ್ದೀವ್ಸ್-ವಿರೋಧಿ ಅಭಿಯಾನಕ್ಕೆ ಬೆಂಬಲ ನೀಡಲು ಮುಂದಾದರೋ ಅಲ್ಲಿನ ಆಡಳಿತಗಾರರು ಆತಂಕಕ್ಕೆ ಒಳಗಾಗಿದ್ದು ಸಹಜವೇ ಆಗಿತ್ತು ಬಿಡಿ. ಆದಾಯ ನಷ್ಟ ಅನುಭವಿಸಿ ಅನಂತರದಲ್ಲಿ ಪಡಿಪಾಟಲು ಪಡುವುದನ್ನು ಯಾರು ತಾನೇ ಬಯಸುತ್ತಾರೆ? ಹೀಗಾಗಿ ಮೊದಲಿಗೆ, ಮೋದಿ ವಿರುದ್ಧ ಆಕ್ಷೇಪಾರ್ಹ ಹೇಳಿಕೆ ನೀಡಿದ ಮೂವರು ಸಚಿವರ ತಲೆದಂಡ ಆಯಿತು. ಮಾಲ್ದೀವ್ಸ್ ಪ್ರವಾಸ ರದ್ದು ಮಾಡ್ಬೇಡಿ ಎಂದು ಅಲ್ಲಿನ ಸರ್ಕಾರ ವಿನಂತಿ ಮಾಡಿಕೊಂಡಿತು. ಆದರೂ ವಿವಾದದ ಬಿಸಿ ಆರಲಿಲ್ಲ. ಆಗ ಅಲ್ಲಿನ ಅಧ್ಯಕ್ಷರು ನೋಡಿದ್ದು ಚೀನದತ್ತ. ಖುದ್ದು ಅಲ್ಲಿಗೆ ದೌಡಾಯಿಸಿ ತರಾತುರಿಯಲ್ಲಿ ಹಲವು ಒಪ್ಪಂದ ಮಾಡಿಕೊಂಡು ಭಾರತಕ್ಕೆ ಎಚ್ಚರಿಕೆ ನೀಡಲು ಯತ್ನಿಸಿದರು. ಹಾಗೆ ನೋಡಿದರೆ ಹಾಲಿ ಅಧ್ಯಕ್ಷ ಮಹಮ್ಮದ್ ಮುಯಿಜು ಅವರು ಚೀನಾ ಪಕ್ಷಪಾತಿ ಎಂಬುದು ಬಹಿರಂಗ ಗುಟ್ಟು. ಚೀನಾ ಅಧ್ಯಕ್ಷ ಷಿ ಜಿನ್ ಪಿಂಗ್ ಅವರು ಭಾರತವನ್ನು ಹಣಿಯಲು ಆವಕಾಶ ಹುಡುಕುವ ಆಸಾಮಿ. ಇಂಥ ಸಂದರ್ಭ ಬಿಟ್ಟಾರೆಯೇ? ಮಾಲ್ದೀವ್ಸ್ ಮತ್ತು ಚೀನಾ ನಡುವೆ 20 ಮಹತ್ವದ ಒಪ್ಪಂದಗಳಿಗೆ ಸಹಿ ಬಿತ್ತು. ಮಲಕ್ಕ ಜಲಸಂಧಿಗುಂಟ ಪ್ರಾಬಲ್ಯ ಮೆರೆಯಲು ಚೀನಾ ಮುತ್ತಿನ ಮಾಲೆ (ಟಛಿಚ್ಟ್ಝ ಟ್ಛ ಠಠ್ಟಿಜ್ಞಿಜ) ಯೋಜನೆ ರೂಪಿಸಿ ಕಾರ್ಯಗತ ಮಾಡುತ್ತಿರುವುದು ಗೊತ್ತಿರುವ ಸಂಗತಿಯೇ ಸರಿ. ಪಾಕಿಸ್ತಾನದ ಗ್ವಾದರ್ ಬಂದರು, ಲಂಕೆಯ ಹಂಬನತೋಟ ಬಂದರು, ಬಾಂಗ್ಲಾದ ಬಂದರು ಇತ್ಯಾದಿ ಮೇಲೆ ಈಗಾಗಲೇ ಹಿಡಿತ ಸಾಧಿಸಿ, ಮಾಲ್ದೀವ್ಸ್ ಮೇಲೂ ಕಣ್ಣು ಕೀಲಿಸಿರುವ ಚೀನಾಗೆ ಈ ಸನ್ನಿವೇಶ ಬಲು ಸೊಗಸಾಗಿ ಕಂಡಿತು. ಭಾರತದ ಸುತ್ತ ಬಲೆ ಹೆಣೆಯುವುದು ಚೀನಾ ಯೋಜನೆ. ಇತ್ತ ಭಾರತ ಏನೂ ಸುಮ್ಮನೆ ಕೂತಿರಲಿಲ್ಲ. ಲಕ್ಷದ್ವೀಪದಲ್ಲಿ ಮೂಲಸೌಕರ್ಯ ಅಭಿವೃದ್ಧಿಗೆ ತ್ವರಿತದಲ್ಲಿ ಯೋಜನೆ ರೂಪಿಸಿತು. ಇನ್ನಷ್ಟು ಪ್ರವಾಸಿಗರನ್ನು ಸೆಳೆಯಲು ಮುಂದಾಯಿತು. ಇದೆಲ್ಲ ಎಲ್ಲಿಗೆ ಹೋಗಿ ತಲುಪುತ್ತದೆ ನೋಡೋಣ...

ಲಕ್ಷದ್ವೀಪ ಮತ್ತು ಮಾಲ್ದೀವ್ಸ್ ಸಮುದ್ರ ತೀರಗಳ ಚಿತ್ರಗಳನ್ನು ನೋಡುತ್ತಿರುವಂತೆ ಯಾಕೋ ಅಯಾಚಿತವಾಗಿ ಉತ್ತರ ಕನ್ನಡದ ಸಾಗರ ತೀರಗಳ ಸುಂದರ ದೃಶ್ಯಾವಳಿಗಳು ಭಿತ್ತಿಯಲ್ಲಿ ಮೈದಾಳತೊಡಗಿದವು. ಕಾರವಾರ, ಅಂಕೋಲಾ, ಗೋಕರ್ಣ, ಮುರ್ಡೆಶ್ವರ ಮುಂತಾದ ಪ್ರದೇಶಗಳ ಸೌಂದರ್ಯ ಪಟಲದಲ್ಲಿ ಮೂಡತೊಡಗಿತು. ಹೀಗಾಗಿಯೇ ಕವಿವರ್ಯ ರವೀಂದ್ರನಾಥ್ ಟಾಗೋರರು ಕಾರವಾರ ಕಡಲ ಚೆಲುವಿಗೆ ಮಾರುಹೋದದ್ದು. ಅವರ ಹಿರಿಯ ಸೋದರ ಸತ್ಯೇಂದ್ರನಾಥ್ ಟಾಗೋರ್ ಅವರು 1882ರಲ್ಲಿ ಕಾರವಾರದಲ್ಲಿ ಜಿಲ್ಲಾ ನ್ಯಾಯಾಧೀಶರಾಗಿ ನಿಯುಕ್ತಿಯಾಗಿದ್ದರು. ಆಗ ಇಲ್ಲಿಗೆ ಬಂದ ರವೀಂದ್ರನಾಥರನ್ನು ಇಲ್ಲಿನ ಶಾಂತ ವಾತಾವರಣ ಹಾಗೂ ಸಮುದ್ರ ಸೆಳೆದಿದ್ದವು. ಅವರಲ್ಲಿನ ಬರಹಗಾರನಿಗೆ ಇಲ್ಲಿ ಸಹಜಪ್ರೇರಣೆ ದೊರಕಿತ್ತು.

ಸಮುದ್ರ ಮಾತ್ರವಲ್ಲ, ನಿಸರ್ಗಮಾತೆ ಎಲ್ಲ ರೀತಿಯಲ್ಲಿಯೂ ನೆಲೆಸಿರುವ ತಾಣ ಉತ್ತರ ಕನ್ನಡ ಎಂದರೆ ಅತಿಶಯೋಕ್ತಿಯಾಗಲಾರದು. ಈ ಜಿಲ್ಲೆಯ ಯಾವ ಭಾಗಕ್ಕೆ ಹೋದರೂ ಒಂದಲ್ಲ ಒಂದು ಬಗೆಯಲ್ಲಿ ಪ್ರಕೃತಿಯ ವಿಶೇಷ ದರ್ಶನ ಭಾಗ್ಯ ಲಭಿಸುತ್ತದೆ. ಕರಾವಳಿ, ಮಲೆನಾಡು, ಬಯಲುಸೀಮೆ- ಹೀಗೆ ಎಲ್ಲ ಬಗೆಯ ವಾತಾವರಣ ಹೊಂದಿದ ವಿಶಿಷ್ಟ ಜಿಲ್ಲೆ ಇದು. ನಿಸರ್ಗದ ಜತೆಗೆ ಭಾಷೆ, ಸಮುದಾಯ, ಆಚರಣೆ, ಕಲೆ, ಸಂಸ್ಕೃತಿ, ಪರಂಪರೆಗಳ ಸಮೃದ್ಧ ಫಸಲು ಇಲ್ಲಿದೆ. ಉಂಚಳ್ಳಿ ಜಲಪಾತ, ಮಾಗೋಡು ಜಲಪಾತ, ಜೋಗ, ದೇವಕಾರು, ಸಾತೊಡ್ಡಿ ಇತ್ಯಾದಿ ಜಲಧಾರೆಗಳು ಒಂದೆಡೆ. ಶರಾವತಿ ಕಣಿವೆ, ಅಘನಾಶಿನಿ ಕಣಿವೆ, ಕಾಳಿ ಹಿನ್ನೀರು ಪ್ರದೇಶ, ದಾಂಡೇಲಿ ಅಭಯಾರಣ್ಯ ಇತ್ಯಾದಿ ಸಸ್ಯ-ಜೀವ ವೈವಿಧ್ಯದ ತವರು ಮತ್ತೊಂದೆಡೆ. ಕಾಡ ನಡುವಲ್ಲಿ ಶಿಲೆಯ ಮಹಾಕೃತಿ ಇರುವ ಯಾಣ, ಆತ್ಮಲಿಂಗ ಐತಿಹ್ಯದ ಗೋಕರ್ಣ, ಮುರುಡೇಶ್ವರದಂತಹ ಪುರಾಣ ಪ್ರಸಿದ್ಧವಾದ ತಾಣಗಳು, ಶಾಲ್ಮಲಾ ನದಿಯಲ್ಲಿ ಸಾವಿರ ಲಿಂಗಗಳನ್ನು ಹೊಂದಿದ ಸಹಸ್ರಲಿಂಗ ಮುಂತಾದ ಸ್ಥಳಗಳು ಮತ್ತೊಂದೆಡೆ. ಕನ್ನಡದ ಪ್ರಥಮ ರಾಜವಂಶ ಕದಂಬರ ಬನವಾಸಿ, ಅಲ್ಲಿನ ಮಧುಕೇಶ್ವರ ದೇವಾಲಯ, ಶಿರಸಿಯ ಮಾರಿಕಾಂಬೆ, ಇಡಗುಂಜಿ ಮಹಾಗಣಪತಿ... ಹೀಗೆ ಭಕ್ತರ ಹೃದಯ ತುಂಬುವ ಸ್ಥಳಗಳು. ಗೇರುಸೊಪ್ಪ ಬಸದಿ, ಮಿರ್ಜಾನ್ ಕೋಟೆ ಇತ್ಯಾದಿಗಳ ವಿಶೇಷ. ಇನ್ನು, ಅರಬ್ಬಿ ಸಮುದ್ರದ ತಟದಲ್ಲಿ ನೆಲೆಗೊಂಡ, ಕಾಳಿ ನದಿ ಮತ್ತು ಸಮುದ್ರದ ಸಂಗಮ ಸ್ಥಳವಾದ ಜಿಲ್ಲಾ ಕೇಂದ್ರ ಕಾರವಾರದ ವೈವಿಧ್ಯಮಯ ಪರಿಸರ... ಕರಾವಳಿಗುಂಟ ಕಾಣಬರುವ ಬೀಚುಗಳು... ಓಹ್! ಹೇಳುತ್ತ ಹೋದರೆ ಯಾದಿ ಬಹಳ ಉದ್ದ.

ಒಂದು ಬದಿ ಸಹ್ಯಾದ್ರಿ ಒಂದು ಬದಿ ಕಡಲು
ನಡುಮಧ್ಯದಲಿ ಅಡಿಕೆ ತೆಂಗುಗಳ ಮಡಿಲು
ಸಿರಿಗನ್ನಡದ ಚಪ್ಪರವೇ ನನ್ನ ಜಿಲ್ಲೆ
ಇನ್ನೊಮ್ಮೆ ಇಲ್ಲಿಯೇ ಹುಟ್ಟುವೆನು ನಲ್ಲೆ

‘ಚುಟುಕು ಬ್ರಹ್ಮ’ ದಿನಕರ ದೇಸಾಯಿ ಅವರ ಈ ಚೌಪದಿ ಉತ್ತರ ಕನ್ನಡದ ಸಾರ ಸರ್ವಸ್ವವನ್ನೂ ಹಿಡಿದಿಡುವಂತಿದೆ. ಎಷ್ಟು ಎಂದರೆ, ಮತ್ತೆ ಇಲ್ಲಿಯೇ ಜನ್ಮ ತಳೆಯುವ ಬಯಕೆ ಮೂಡಿಸುವಷ್ಟು. ಕಡಲ ತೀರ ಪ್ರವಾಸೋದ್ಯಮ ಅಭಿವೃದ್ಧಿಗೆ ಇನ್ನೂ ಸಾಕಷ್ಟು ಆವಕಾಶಗಳು ಇವೆ ಎಂಬ ಅಭಿಪ್ರಾಯ ಇದೆ. ಸ್ವಚ್ಛತೆ, ಮೂಲ ಸೌಕರ್ಯ ಕೊರತೆ ನೀಗಿಸುವತ್ತ ಹರಿಯಬೇಕಿದೆ ಆಳುಗರ ಚಿತ್ತ.

‘ಉತ್ತರ ಕನ್ನಡದ ಭಟ್ಕಳದಿಂದ ಕಾರವಾರವರೆಗೆ 140 ಕಿಮೀ ದೂರದ ಸಮುದ್ರ ತೀರ ಇದೆ. ಇಂತಹ ವಾತಾವರಣ ಬೇರೆ ಕಡೆ ಇಲ್ಲ. ವಿದೇಶಿ ತಾಣಗಳ ಹಲವು ಪಟ್ಟು ಸೌಂದರ್ಯ ಇಲ್ಲಿದೆ. ಇಲ್ಲಿನ ಸಮುದ್ರ ಅಲೆಗಳು ಅತಿಯಾದ ರಭಸ ಹೊಂದಿಲ್ಲ. ಆದ್ದರಿಂದ ಪ್ರವಾಸೋದ್ಯಮಕ್ಕೆ ಹೇಳಿಮಾಡಿಸಿದ ಹಾಗಿದೆ. ಭೌಗೋಳಿಕ ಕಾರಣದಿಂದಾಗಿ ಉತ್ತರ ಕನ್ನಡದಲ್ಲಿ ಕೈಗಾರಿಕೆ ಬೆಳವಣಿಗೆಗೆ ಅವಕಾಶ ಕಡಿಮೆ. ಪ್ರವಾಸೋದ್ಯಮ ಹಾಗೂ ಶೈಕ್ಷಣಿಕವಾಗಿ ಮಾತ್ರ ಅಭಿವೃದ್ಧಿ ಮಾಡಲು ಅವಕಾಶ ಇದೆ. ನೈಸರ್ಗಿಕ ವಾತಾವರಣಕ್ಕೆ ಧಕ್ಕೆ ಆಗದಂತೆ ಮೂಲಸೌಕರ್ಯ ಅಭಿವೃದ್ಧಿಗೆ ಸರ್ಕಾರಗಳು ಗಮನ ಕೊಡಬೇಕು. ಪ್ರವಾಸೋದ್ಯಮ ಹೆಸರಿನಲ್ಲಿ ಮೋಜು ಮಸ್ತಿ, ಮಾದಕ ವಸ್ತು ಸೇವನೆ ಇತ್ಯಾದಿಗೆ ಅವಕಾಶ ಕೊಡಬಾರದು’ ಎಂದು ಪ್ರಮೋದ ಹೆಗಡೆ ಹೇಳುತ್ತಾರೆ.

ಮಾಲ್ದೀವ್ಸ್ ಮತ್ತು ಲಕ್ಷದ್ವೀಪ ಜಟಾಪಟಿ ಹಿನ್ನೆಲೆಯಲ್ಲಿ, ಉತ್ತರ ಕನ್ನಡದ ಕರಾವಳಿ ಪ್ರವಾಸೋದ್ಯಮ ಸಾಮಾಜಿಕ ಜಾಲತಾಣಗಳಲ್ಲಿ ಟ್ರೆಂಡಿಂಗ್ ಆಗಿದೆ. ‘ಬೇರೆ ಕಡೆ ಏಕೆ ಬೇಕು, ಉತ್ತರ ಕನ್ನಡ ಸಾಕು’ ಎಂಬ ಧ್ವನಿ ಕೇಳಿಬಂದಿದೆ. ಕರೊನಾ ನಂತರದಲ್ಲಿ ಜಿಲ್ಲೆಗೆ ವಿದೇಶಿ ಪ್ರವಾಸಿಗರ ಸಂಖ್ಯೆ ಸ್ವಲ್ಪ ಕಡಿಮೆಯಾಗುತ್ತ ಬಂದಿದೆ. ಅದೇ ವೇಳೆ ದೇಶೀ ಪ್ರವಾಸಿಗರ ಪ್ರಮಾಣ ಹೆಚ್ಚಿದೆ. 2022ರಲ್ಲಿ ಜಿಲ್ಲೆಗೆ 1.03 ಕೋಟಿ ಜನರು ಭೇಟಿ ನೀಡಿದ್ದರು. 2023ರಲ್ಲಿ 1.15 ಕೋಟಿ ಪ್ರವಾಸಿಗರು ಜಿಲ್ಲೆಯ ಸೊಬಗು ಸವಿಯಲು ಬಂದಿದ್ದರು.

ಈ ನಿಸರ್ಗ ಸ್ವರ್ಗದಲ್ಲಿ ಬದುಕು ಸಾರ್ಥಕತೆ ಕಾಣುವ ಬಗೆಯನ್ನು ದಿನಕರ ದೇಸಾಯಿ ಅವರು ಒಂದೆಡೆ ಹೀಗೆ ಕಟ್ಟಿಕೊಟ್ಟಿದ್ದಾರೆ-

ನನ್ನ ದೇಹದ ಬೂದಿ ಗಾಳಿಯಲಿ ತೂರಿಬಿಡಿ
ಹೋಗಿ ಬೀಳಲಿ ಬತ್ತ ಬೆಳೆಯುವಲ್ಲಿ
ಬೂದಿ ಗೊಬ್ಬರದಿಂದ ತೆನೆಯೊಂದು ನೆಗೆದು ಬರೆ
ಧನ್ಯವಾಯಿತು ಹುಟ್ಟು ಸಾವಿನಲ್ಲಿ

ಕೊನೇ ಮಾತು: ಒಮ್ಮೊಮ್ಮೆ ವರವೇ ಶಾಪವಾಗುವ ವಿಪರ್ಯಾಸವೂ ಘಟಿಸುತ್ತದೆ. ಈ ಮಾತಿಗೆ ಸಮರ್ಥ ಉದಾಹರಣೆ ಉತ್ತರ ಕನ್ನಡ. ಇಲ್ಲಿ ಕಾಡು, ನದಿಗಳ ಸಿರಿವಂತಿಕೆಯಿಂದಾಗಿ ಹಲವು ಯೋಜನೆಗಳು ಜಾರಿಯಾಗಿವೆ. ಜಲ ವಿದ್ಯುತ್ ಉತ್ಪಾದನೆಗಾಗಿ ಕಾಳಿ ನದಿಯೊಂದಕ್ಕೇ ಆರು ಅಣೆಕಟ್ಟುಗಳನ್ನು ನಿರ್ವಿುಸಲಾಗಿದೆ. ಇದಕ್ಕಾಗಿ ಅರಣ್ಯ ನಾಶದ ಜತೆಗೆ ಕೆಲವೆಡೆ ಜನರ ಸ್ಥಳಾಂತರ ಮಾಡಲಾಗಿದೆ. ಇದಲ್ಲದೆ ಬೇರೆ ಬೇರೆ ಯೋಜನೆಗಳಿಗಾಗಿ ಜನರು ಭೂಮಿ ಕಳೆದುಕೊಂಡಿದ್ದಾರೆ. ಯೋಜನಾ ನಿರಾಶ್ರಿತರಿಗೆ ಸರ್ಕಾರಗಳು ಪರಿಹಾರ ಕೊಡಬಹುದಾದರೂ ಮೂಲವನ್ನು ತೊರೆಯುವುದು, ಮರೆಯುವುದು ಅಷ್ಟು ಸುಲಭವಲ್ಲ. ಈ ನಿಸರ್ಗದ ಮಡಿಲಿನಲ್ಲಿ ಇಂತಹ ವ್ಯಥೆಯ ಕಥೆಗಳು ಸಹ ಇವೆ...

ಪ್ರವಾಸೋದ್ಯಮ ಅಭಿವೃದ್ಧಿಗೆ ಸಪ್ತ ಸೂತ್ರ: ಯಲ್ಲಾಪುರದ ಪ್ರಮೋದ ಹೆಗಡೆ ಅವರು ಉತ್ತರ ಕನ್ನಡ ಜಿಲ್ಲೆಯ ಆಳ ಅಗಲವನ್ನು ಚೆನ್ನಾಗಿ ಬಲ್ಲವರು. ರಾಜಕೀಯ- ಸಾಮಾಜಿಕ ಮುಂದಾಳುವಾದ ಅವರು ಜಿಲ್ಲೆಯ ಪ್ರವಾಸೋದ್ಯಮ ಅಭಿವೃದ್ಧಿ ಕುರಿತು ತಮ್ಮದೇ ಆದ ದೃಷ್ಟಿಕೋನ ಹಾಗೂ ಖಚಿತ ನಿಲುವು ಹೊಂದಿದ್ದಾರೆ. ್ಝ ಶಿಲ್ಪಶಾಸ್ತ್ರ - (ಕೋಟೆ ಕೊತ್ತಲಗಳು)

ಚಾರಣ - (ಯಾಣ ಇತ್ಯಾದಿ ತಾಣಗಳು), ಪಕ್ಷಿಧಾಮ - (ಅತ್ತಿವೇರಿ ಇತ್ಯಾದಿ), ದೇಗುಲಗಳು, ಸಾಗರ ತೀರಗಳು, ಬುಡಕಟ್ಟು ಜನರ ಕಲಾ ವೈವಿಧ್ಯ, ಜಲಪಾತಗಳು - ಈ ಏಳು ಬಗೆಯಲ್ಲಿ ಪ್ರವಾಸೋದ್ಯಮವನ್ನು ಇನ್ನಷ್ಟು ಬೆಳೆಸಲು ಅವಕಾಶ ಇದೆ ಎಂಬುದು ಅವರ ಅಭಿಪ್ರಾಯ.