ಅಂಕಣ

ಸ್ಥಿತಿವಂತರಾಗಿದ್ದರೂ ಕಳವು ಮಾಡುವ ಚಾಳಿ; ಇದೊಂದು ಮನೋರೋಗ

Webdesk - Ravikanth
ಆ ಮಹಿಳೆಗೆ ಸುಮಾರು 42 ವರ್ಷ. ಮಧ್ಯವಯಸ್ಕ ಗೃಹಿಣಿ. ಪತಿಯೊಂದಿಗೆ ವಿದೇಶದಿಂದ ಭಾರತಕ್ಕೆ ಬಂದಿದ್ದಳು. ಸರಿ ಏನು ಸಮಸ್ಯೆ ಎಂದು ಕೇಳಿದೆ. ಅದೇಕೋ ತಡವರಿಸಲು ಶುರು ಮಾಡಿದರು. ಕೊನೆಗೂ ಸುಧಾರಿಸಿಕೊಂಡು ‘ಡಾಕ್ಟ್ರೇ ಈಕೆ ಅಂಥ ಕೆಲಸ ಮಾಡುವ ಜಾಯಮಾನದವಳಲ್ಲ. ಆದರೆ ಈ ಕೆಟ್ಟ ಚಾಳಿ ಬಂದು ಬಿಟ್ಟಿದೆ. ಎಲ್ಲಾದರೂ ಹೋದಾಗ ಕೆಲ ವಸ್ತುಗಳನ್ನು ನೋಡಿದಾಕ್ಷಣ ತನ್ನದೋ ಇನ್ನೊಬ್ಬರದೋ ಎಂದು ಯೋಚಿಸದೇ ಎತ್ತಿ ಇಟ್ಟುಕೊಳ್ಳುವ ಹೊಲಸು ಚಾಳಿ ಬಂದಿದೆ. ಇದರಿಂದ ಅನೇಕ ಕಡೆ ಅವಮಾನ, ಮುಜುಗರ ಎದುರಿಸುವಂತಾಗಿದೆ’ ಎಂದು ವಿವರಿಸಿದರು.

ಪತಿ ತನ್ನ ಚಾಳಿ ಬಗ್ಗೆ ಹೇಳಿದ ತಕ್ಷಣವೇ ಮಾತಿಗಿಳಿದ ಆ ಮಹಿಳೆ ‘ಅಯ್ಯೋ ಡಾಕ್ಟ್ರೇ ನಾನೇನು ಬೇಕು ಅಂತಲೇ ಮತ್ತೊಬ್ಬರ ವಸ್ತು ಕದಿಯೋಲ್ಲ. ಅದೇನೋ ನೋಡಿದಾಕ್ಷಣ ಎತ್ತಿಟ್ಟುಕೊಳ್ಳಬೇಕು ಅನಿಸುತ್ತೆ. ಹೀಗಾಗಿ ನಾ ಹಿಂದೆ ಮುಂದೆ ಯೋಚಿಸದೇ ಎತ್ತಿಟ್ಟುಕೊಳ್ಳುತ್ತೇನೆ. ಇದರಿಂದ ನನಗೆ ಖುಷಿಯಾಗುತ್ತದೆ’ ಎಂದು ವಿವರಿಸಿದಳು. ಮನೋವೈದ್ಯಕೀಯ ಪರಿಭಾಷೆಯಲ್ಲಿ ಇದಕ್ಕೆ ಕ್ಲೆಪ್ಟೊಮೇನಿಯಾ ಅಂತ ಕರೆಯುತ್ತಾರೆ. ಇದೊಂದು ಮಾನಸಿಕ ಕಾಯಿಲೆ. ಆದರೆ ನೈತಿಕ ದೃಷ್ಟಿಯಿಂದ ಅಪರಾಧ. ವಿಶೇಷ ಎಂದರೆ ಇಂತಹ ಚಾಳಿ ಪ್ರತಿಷ್ಠಿತ ಹಾಗೂ ಅನುಕೂಲಸ್ಥರಲ್ಲೇ ಕಂಡು ಬರುವುದು ಹೆಚ್ಚು.

‘ನಾನು ಪ್ರಪ್ರಥಮವಾಗಿ 5ನೇ ತರಗತಿಯಲ್ಲಿ ಓದುತ್ತಿರುವಾಗ ಈ ರೀತಿ ಮಾಡಿದ್ದು. ನನ್ನ ಗೆಳತಿಯ ಹುಟ್ಟುಹಬ್ಬಕ್ಕೆ ಹೋಗಿ ಬರುವಾಗ ಅಲ್ಲಿಯ ಒಂದು ಚಮಚ ನನ್ನ ಜೇಬಿನಲ್ಲಿ ಇಟ್ಟುಕೊಂಡು ಬರುವಾಗ ಅವರ ಸಾಕು ನಾಯಿಯೊಂದು ಜೋರಾಗಿ ಕೂಗಿದ್ದರಿಂದ ಆ ಚಮಚವನ್ನು ನಾನು ಅವರ ಕಂಪೌಂಡಿನಲ್ಲಿ ಎಸೆದು ಬಂದಿದ್ದೆ. ಆ ಘಟನೆ ಇವತ್ತಿಗೂ ಕಾಡುತ್ತದೆ.’

ತಾವು ಕದ್ದ ಅಥವಾ ಎತ್ತಿಟ್ಟುಕೊಂಡ ವಸ್ತುಗಳನ್ನು ಮಾರಿ ಆರ್ಥಿಕ ಲಾಭ ಪಡೆಯಬೇಕೆನ್ನುವ ಉದ್ದೇಶ ಅವರದ್ದಾಗಿರುವುದಿಲ್ಲ. ಹೀಗೆ ಮಾಡಬೇಕು ಎಂದು ಯೋಚನೆ ಕೂಡ ಮಾಡಿರುವುದಿಲ್ಲ. ವಸ್ತು ಕದ್ದ ನಂತರ ಕೆಲ ಕ್ಷಣಗಳ ನಂತರ ಅದನ್ನು ಮೂಲೆಗೆ ಎಸೆದ ಪ್ರಕರಣಗಳೂ ಹಲವಿವೆ. ಕೆಲವರಲ್ಲಿ ಇಂತಹ ಕೆಲಸ ಮಾಡಿದ ನಂತರ ಒಂಥರಾ ಸಾಧನೆ ಮಾಡಿದ ಹೆಮ್ಮೆಯ ಭಾವನೆ ಕೂಡ ವ್ಯಕ್ತವಾಗುತ್ತದೆ. ಸಾಮಾನ್ಯವಾಗಿ ಈ ತರಹದ ಗೀಳು ಅಥವಾ ಚಾಳಿ ಮಹಿಳೆಯರಲ್ಲಿ ಹೆಚ್ಚು ಎಂಬ ಮಾಹಿತಿ ಸಂಶೋಧನೆ ಹಾಗೂ ಸಮೀಕ್ಷೆಯಿಂದ ತಿಳಿದು ಬಂದಿದೆ. ವಿಚಿತ್ರ ಎಂದರೆ ಇಂತಹ ಕೆಲಸ ಮಾಡಬಾರದು ಎನ್ನುವ ಆಲೋಚನೆ ಮಾಡಲಾರದಷ್ಟು ಅಂತಹವರು ಅಶಕ್ತರಾಗಿರುತ್ತಾರೆ. ಮುಂದೆ ಇದು ತಪ್ಪು ಎಂದು ಗೊತ್ತಾದಾಗ ಪಶ್ಚಾತ್ತಾಪದ ಭಾವನೆ ಮೂಡುತ್ತದೆ. ಆದರೆ ಅಷ್ಟರಲ್ಲಿ ಕಾಲ ಮಿಂಚಿ ಹೋಗಿರುತ್ತದೆ. ಈ ಗೀಳು ರೋಗ ಸಾಮಾನ್ಯವಾಗಿ 5 ವರ್ಷದಿಂದ ಆರಂಭವಾಗಬಹುದು. ಇಲ್ಲವೇ ಕೆಲವರಲ್ಲಿ 17ನೇ ವಯಸ್ಸಿಗೆ ಶುರುವಾಗಬಹುದು. ಮಾಜಿ ಮಿಸ್ ಅಮೆರಿಕಾ ಬೆಸ್ ಮೆಯರಸನ್ ನಂತಹ ಖ್ಯಾತನಾಮರು ಕೂಡ ಇಂತಹ ಗೀಳುರೋಗಕ್ಕೆ ತುತ್ತಾಗಿದ್ದರು ಎನ್ನುವುದು ವಿಶೇಷ. ಅಮೆರಿಕಾದ 1000 ಜನರ ಪೈಕಿ 6 ಜನರಲ್ಲಿ ಈ ಕಾಯಿಲೆ ಕಂಡು ಬಂದಿದೆ.

ಬಹು ದಿನಗಳ ಹಿಂದೆ ನಡೆಸಿದ ವಿಶ್ಲೇಷಣೆ ಪ್ರಕಾರ ಈ ತರಹದ ಕಾಯಿಲೆಗೆ ಅದುಮಿಟ್ಟ ಅತೃಪ್ತ ಭಾವನೆಗಳು ಪ್ರಮುಖ ಕಾರಣ. ಮಿದುಳಿನಲ್ಲಿನ ಸಿರೋಟಾನಿನ್ ಎಂಬ ಹಾಮೋನ್ ವ್ಯಕ್ತಿಗೆ ಹೀಗೆ ವಸ್ತುಗಳನ್ನು ಕದಿಯಲು ಪ್ರೇರಣೆ ನೀಡುತ್ತದೆ. ಇನ್ನು ಕೆಲ ತಜ್ಞರ ಪ್ರಕಾರ ಇದು ದುಶ್ಚಟಗಳ ಗುಂಪಿಗೆ ಸೇರಿದ ಕಾಯಿಲೆ. ಡೋಪಾಮಿನ್ ಎಂಬ ಹಾಮೋನ್​ನಿಂದ ಈ ತರಹದ ವಿಕೃತ ಸಂತಸ ಪಡುವ ಮನಸ್ಥಿತಿ ಎದುರಾಗುತ್ತದೆ. ಇವರಲ್ಲಿ ಉನ್ಮಾದ, ಆತಂಕ ಮತ್ತು ಕೆಲ ದುಶ್ಚಟಗಳು ಇರುತ್ತವೆ. ಈ ಮಾದರಿ ಕಳ್ಳತನದ ಗೀಳು ಕೆಲವೊಮ್ಮೆ ಜೈಲಿಗೂ ಹೋಗಬೇಕಾಗುವ ಸ್ಥಿತಿ ಸೃಷ್ಟಿಸುತ್ತದೆ. ಕೊನೆಗೆ ಮನನೊಂದು ಖಿನ್ನತೆಗೆ ಒಳಗಾಗಿ ಆತ್ಮಹತ್ಯೆಗೂ ಮುಂದಾಗಬಹುದು.

ಚಿಕಿತ್ಸೆ, ಪರಿಹಾರವೇನು?: ಖಿನ್ನತೆ ನಿವಾರಿಸುವ ಔಷಧಿಗಳು ಸಾಮಾನ್ಯವಾಗಿ ಇದಕ್ಕೆ ಸೂಕ್ತ. ಇದರ ಜತೆಗೆ ನಡವಳಿಕೆ ಅರಿವು ಮೂಡಿಸುವುದು (cognitive behavior therapy) ಕೂಡ ಪ್ರಯೋಜನಕಾರಿ. ಅವರು ಮಾಡುವ ಕೃತ್ಯದಿಂದ ಆಗುವ ದುಷ್ಪರಿಣಾಮಗಳ ಬಗ್ಗೆ ಅವರಿಗೆ ತಿಳಿಸಿಕೊಡಬೇಕು. ಕುಟುಂಬ ಸದಸ್ಯರು ಎದುರಿಸಬೇಕಾಗುವ ಸ್ಥಿತಿಯ ಬಗ್ಗೆಯೂ ಹೇಳಿಕೊಡಬೇಕು. ಅದಮ್ಯ ಒತ್ತಡ ಉಂಟಾದಾಗ ಸಕಾರಾತ್ಮಕ ಯೋಚನೆಗಳತ್ತ ಗಮನಹರಿಸುವುದರ ಬಗ್ಗೆಯೂ ಹೇಳಬೇಕು. ಸಕಾಲಕ್ಕೆ ಮನೋವೈದ್ಯರ ಬಳಿ ಕರೆದುಕೊಂಡು ಹೋಗಿ ಆಪ್ತ ಸಮಾಲೋಚನೆ ಕೊಡಿಸಬೇಕು.