ಈ ಬಾರಿಯ ದಾಳಿಯಲ್ಲಿ ಕೇವಲ ಒಂದೆರಡು ತಾಸುಗಳಲ್ಲಿ ಏಳುನೂರಕ್ಕೂ ಹೆಚ್ಚಿನ ನಾಗರಿಕರೇ ಬರ್ಬರವಾಗಿ ಹತ್ಯೆಗೊಳಗಾದರು, ದೇಶವಿದೇಶಗಳ ಇನ್ನೂರರಷ್ಟು ನಾಗರಿಕರು ಬಂಧನಕ್ಕೊಳಗಾಗಿ ಗಾಝಾಗೆ ಎಳೆದೊಯ್ಯಲ್ಪಟ್ಟರು. ಇಸ್ರೇಲ್ ಅನ್ನು ಈ ಬಗೆಯಾಗಿ ಕೆಣಕಿ ತನ್ನ ಗೋರಿಯನ್ನು ತಾನೇ ತೋಡಿಕೊಳ್ಳುವುದೂ ಹಮಾಸ್ಗೆ ಬೇಕಾಗಿರಲಿಲ್ಲ. ಹೀಗೆ ಮಾಡುವುದರ ಮೂಲಕ ತಾನು ಪ್ಯಾಲೆಸೆôನ್ ರಾಷ್ಟ್ರನಿರ್ವತೃವಾಗುತ್ತೇನೆಂದು ಅದೂ ನಂಬಿರಲೂ ಸಾಧ್ಯವಿಲ್ಲ. ಇದರರ್ಥ ಅದು ಇಷ್ಟೆಲ್ಲ ಮಾಡಿದ್ದು ಸಾಮಾನ್ಯ ಪ್ಯಾಲೆಸ್ತೀನಿಯನ್ನರನ್ನು ಬಲಿಗೊಡುತ್ತಿರುವುದು ಮತ್ತಾರದೋ ಹಿತಾಸಕ್ತಿಗಳನ್ನು ಕಾಪಾಡುವುದಕ್ಕೋಸ್ಕರ. 2006ರ ಚುನಾವಣೆಗಳಲ್ಲಿ ತನಗೆ ಮತ ನೀಡಿ ಅಧಿಕಾರಕ್ಕೇರಿಸಿದ ಗಾಝಾದಲ್ಲಿನ ಪ್ಯಾಲೆಸ್ತೀನಿಯನ್ನರಿಗಿಂತಲೂ ಮತ್ತಾರದೋ ಹಿತ ಹಮಾಸ್ಗೆ ಮುಖ್ಯವೆನಿಸಿದ್ದು ಹೇಗೆ? ಆ ಮತ್ಯಾರೋ ಯಾರು? ಈ ಪ್ರಶ್ನೆಗಳಿಗೆ ಉತ್ತರ ಹುಡುಕಲು ನಾವು ಕನಿಷ್ಟ ಮೂರು ವರ್ಷಗಳ ಹಿಂದಕ್ಕೆ ಹೋಗಬೇಕಾಗುತ್ತದೆ.
ಪ್ಯಾಲೆಸ್ತೀನಿಯರ ಪರವಾಗಿ ಇಸ್ರೇಲ್ ಜತೆ ಬೇಕೆಂದಾಗ ಕಾಲು ಕೆರೆದು ಜಗಳಕ್ಕೆ ನಿಲ್ಲುತ್ತಿದ್ದ ಅರಬ್ ರಾಷ್ಟ್ರಗಳ ನೀತಿಗಳು ಹೊಸ ಶತಮಾನದಲ್ಲಿ ನಿಧಾನವಾಗಿ ಬದಲಾಗುತ್ತ ಸಾಗಿ ಮೂರು ವರ್ಷಗಳ ಹಿಂದೆ ನಿರ್ಣಾಯಕ ತಿರುವು ಪಡೆದವು. ಅಮೆರಿಕ ಅಧ್ಯಕ್ಷರಾಗಿದ್ದ ಡೊನಾಲ್ಡ್ ಟ್ರಂಪ್ ಯೆಹೂದಿ ರಾಷ್ಟ್ರ ಇಸ್ರೇಲ್ ಜತೆಗೆ ಅರಬ್ ರಾಷ್ಟ್ರಗಳಾದ ಯುಎಇ ಮತ್ತು ಬಹರೀನ್ಗಳನ್ನು ಒಟ್ಟುಗೂಡಿಸಿ 2020 ಸೆಪ್ಟೆಂಬರ್ 15ರಂದು ಸಂಬಂಧ ಸುಧಾರಣೆಯ ಒಪ್ಪಂದಗಳಿಗೆ ಸಹಿ ಹಾಕಿಸಿದರು. ಅರಬ್ಬರು ತಮ್ಮ ಮೂಲಪುರುಷ ಎಂದು ಬಗೆಯುವ ಇಸ್ಮಾಯಿಲ್ ಮತ್ತು ಯೆಹೂದಿಗಳು ತಮ್ಮ ಮೂಲಪುರುಷ ಎಂದು ಗುರುತಿಸುವ ಜೇಕಬ್ನ ಅಜ್ಜ (ಇಸಾಕ್ನ ತಂದೆ) ಇಬ್ಬರೂ ಒಬ್ಬನೇ ವ್ಯಕ್ತಿ, ಅದು ಅಬ್ರಹಾಂ ಆದ ಕಾರಣ ಯೆಹೂದಿ ಇಸ್ರೇಲ್ ಮತ್ತು ಅರಬರ್ ಯುಎಇ ಹಾಗೂ ಬಹರೀನ್ ಮಾಡಿಕೊಂಡ ಆ ಒಪ್ಪಂದಗಳು ‘ಅಬ್ರಹಾಂ ಒಪ್ಪಂದಗಳು’ ಹೆಸರಿನಲ್ಲಿ ಜನಜನಿತವಾಗಿ ಪಶ್ಚಿಮ ಏಷ್ಯಾದಲ್ಲಿ ಅರಬ್-ಇಸ್ರೇಲಿ ಸ್ನೇಹ-ಸಹಕಾರದ ಹೊಸದೊಂದು ಶಕೆ ಆರಂಭವಾಯಿತು. ಈ ಒಪ್ಪಂದಗಳಿಗೆ ಮುಸ್ಲಿಂ ಮತ್ತು ಅರಬ್ ಜಗತ್ತಿನ ನಾಯಕ ಸೌದಿ ಅರೇಬಿಯಾದ ಸಮ್ಮತಿ ಇದ್ದದ್ದು ಮುಖ್ಯ ಅಂಶ.
ಅರಬ್ಬರು ಮತ್ತು ಇಸ್ರೇಲಿಗಳ ನಡುವಿನ ಈ ಬಗೆಯ ಹಿತಕರ ಬೆಳವಣಿಗೆಗಳನ್ನು ತನ್ನ ಹಿತಕ್ಕೆ ಮಾರಕ ಎಂದು ಬಗೆದದ್ದು ಇರಾನ್. ಅದಕ್ಕೆ ಕಾರಣ ತೆಹರಾನ್ನ ಮೂಲಭೂತವಾದಿ ಸರ್ಕಾರದ ಪ್ರಳಯಾಂತಕ ಬುದ್ಧಿ. ಅರಸೊತ್ತಿಗೆಯ ಕಾಲದಲ್ಲಿ ಇರಾನ್ ಅಮೆರಿಕದ ಜತೆ ಘನಿಷ್ಟ ಸಂಬಂಧ ಹೊಂದಿತ್ತು ಮತ್ತು ಇಸ್ರೇಲ್ ಜತೆಗೂ ಹೊಕ್ಕುಬಳಕೆ ಸಾಧಿಸಿತ್ತು. ಅದನ್ನು ಅರಸ ರೆಜಾ ಶಾ ಪಹ್ಲವಿ ಬಣ್ಣಿಸಿದ್ದು ‘ರಹಸ್ಯ ಪ್ರಣಯ’ ಎಂದು. ಆದರೆ ಫೆಬ್ರವರಿ 1979ರ ಇಸ್ಲಾಮಿಕ್ ಕ್ರಾಂತಿ ಮೂಲಕ ಅಧಿಕಾರ ಹಿಡಿದ ಆಯತೊಲ್ಲಾ ಖೊಮೇನಿ ನೇತೃತ್ವದ ಇಸ್ಲಾಮಿಕ್ ಮೂಲಭೂತವಾದಿ ಸರ್ಕಾರ ಮುಸ್ಲಿಂ ಜಗತ್ತಿನ ನಾಯಕತ್ವಕ್ಕಾಗಿ ಸೌದಿ ಅರೇಬಿಯಾದೊಂದಿಗೆ ಸ್ಪರ್ಧೆಗಿಳಿಯಿತು. ಈ ಸ್ಪರ್ಧೆಯ ಚಿಂತನೆಯೇ ಅರ್ಥಹೀನ. ಇರಾನ್ ಶಿಯಾ ಮುಸ್ಲಿಂ ದೇಶ. ಆ ಕಾರಣದಿಂದಾಗಿ ಅದು ಮುಸ್ಲಿಂ ಜಗತ್ತಿನಲ್ಲೇ ಒಂಟಿ. ಇರಾಕ್ ಮತ್ತು ಬಹರೀನ್ಗಳಲ್ಲಿ ಶಿಯಾಗಳು ಅಧಿಕ ಸಂಖ್ಯೆಯಲ್ಲಿದ್ದರೂ ಅಲ್ಲಿನ ಸರ್ಕಾರಗಳು ಮಾತ್ರ ಸುನ್ನಿಗಳ ಕೈಯಲ್ಲಿ. ಇರಾನ್ ಹೊರತಾಗಿ ಅತಿ ಹೆಚ್ಚು ಶಿಯಾಗಳಿರುವುದು (ಸುಮಾರು ಎರಡು ಕೋಟಿ) ಭಾರತದಲ್ಲಿ. ಆದರೆ ಭಾರತ ಇಸ್ಲಾಮಿಕ್ ರಾಷ್ಟ್ರ ಅಲ್ಲ. ಈ ಕಾರಣಗಳಿಂದಾಗಿ ಮುಸ್ಲಿಂ ದೇಶಗಳ ನಾಯಕತ್ವ ಬಯಸುವುದು ಇಂದಿನ ಇರಾನ್ ಸರ್ಕಾರದ ಅವಾಸ್ತವಿಕ ಕನಸೇ ಸರಿ. ಹೀಗಾಗಿ ಇಸ್ರೇಲ್ ಅನ್ನು ವಿರೋಧಿಸಿದರೆ, ಪ್ಯಾಲೆಸ್ತೀನಿಯನ್ನರ ಬಗ್ಗೆ ಕಡುಮೋಹ ತೋರಿದರೆ ಜಗತ್ತಿನ ಮುಸ್ಲಿಮರು ತನ್ನ ಬೆನ್ನ ಹಿಂದೆ ನಿಲ್ಲುತ್ತಾರೆ, ನಿಂತು ತಂತಮ್ಮ ಸರ್ಕಾರಗಳನ್ನು ಪ್ರಭಾವಿಸುತ್ತಾರೆ ಎಂದು ಬಗೆದು ತೆಹರಾನ್ ಆ ಹಾದಿಗಿಳಿಯಿತು, ಅರಸ ಷಾ ಬಣ್ಣಿಸಿದ್ದ ‘ರಹಸ್ಯ ಪ್ರಣಯ’ ಖೊಮೇನಿ ಕೈಯಲ್ಲಿ ಬಹಿರಂಗ ದ್ವೇಷವಾಗಿ ಹೊತ್ತಿ ಉರಿಯತೊಡಗಿತು. ಅದೂ ಪ್ರಯೋಜನಕ್ಕೆ ಬರಲಿಲ್ಲ. ಸುನ್ನಿಗಳು ಇರಾನ್ ಅನ್ನು ಆರಾಧಿಸುವುದು ಕನಸಿನ ಮಾತು. ಅಲ್ಲದೆ ಪ್ಯಾಲೆಸ್ತೀನಿಯನ್ನರೂ ಸೇರಿ ಪಶ್ಚಿಮ ಏಷ್ಯಾ ಮತ್ತು ಉತ್ತರ ಆಫ್ರಿಕಾದ ಅರಬ್ ರಾಷ್ಟ್ರಗಳಿಗೆ ಅರಬ್ ಅಲ್ಲದ ಪರ್ಷಿಯಾ ಅಂದರೆ ಇರಾನ್ ಪರಕೀಯವೇ ಸರಿ. ಆದಾಗ್ಯೂ, ಕಾರ್ಲ್ವಾರ್ಕ್ಸ್ ಹೇಳುವ ಧರ್ಮವೆಂಬ ಅಫೀಮು ಅನ್ನು ಅತಿಯಾಗಿ ಸೇವಿಸಿ ನಶೆಗೀಡಾದ ಇರಾನ್ಗೆ ವಾಸ್ತವ ಅರ್ಥ ಮಾಡಿಕೊಳ್ಳಲಾಗಲೇ ಇಲ್ಲ. ಖೊಮೇನಿಯ ಶಿಷ್ಯ ಖಮೇನಿ ತಮ್ಮ ಅವಾಸ್ತವಿಕ ಬಯಕೆಯನ್ನು ಮತ್ತೊಂದು ಮಜಲಿಗೊಯ್ದು ಟರ್ಕಿ, ಪಾಕಿಸ್ತಾನ ಮತ್ತು ಮಲೇಷ್ಯಾಗಳನ್ನು ಕಟ್ಟಿಕೊಂಡು ಮುಸ್ಲಿಂ ರಾಷ್ಟ್ರಗಳ ಒಕ್ಕೂಟ ಓಐಸಿಯನ್ನು ಒಡೆಯಲು 2019ರಲ್ಲಿ ಸಂಚು ಹೂಡಿದರು. ಪರಿಣಾಮವಾಗಿ ಅಷ್ಟೂ ದೇಶಗಳು ಸೌದಿ ಅರೇಬಿಯಾ ಮತ್ತು ಯುಎಇಗಳ ಉಗ್ರ ಸಿಟ್ಟಿಗೆ ಪಾತ್ರವಾದವು. ಇತರ ಅರಬ್ ದೇಶಗಳೂ ಅರಬ್ ಅಲ್ಲದ ಈ ನಾಲ್ಕು ದೇಶಗಳ ಪರವಾಗಿ ನಿಲ್ಲುವ ಕಿಂಚಿತ್ ಸೂಚನೆಯನ್ನೂ ನೀಡದ ಕಾರಣ ಓಐಸಿಯನ್ನು ಒಡೆದು ಒಂದು ಗುಂಪಿನ ನಾಯಕತ್ವ ಗಿಟ್ಟಿಸಿಕೊಳ್ಳುವ ಇರಾನ್ನ ಪ್ರಯತ್ನ ಹೀಗೆ ನಿಷ್ಪಲವಾಯಿತು.
ಇಷ್ಟಾಗಿಯೂ, ಅಲ್ಲಲ್ಲಿನ ಶಿಯಾಗಳನ್ನು ತನ್ನ ಬುಟ್ಟಿಗೆ ಕೆಡವಿಕೊಳ್ಳುವ ಇರಾನ್ನ ಪ್ರಯತ್ನ ತುಸುಮಟ್ಟಿಗೆ ಯಶಸ್ವಿಯಾಯಿತು. ಲೆಬನಾನ್ನಲ್ಲಿನ ಇಸ್ರೇಲ್-ವಿರೋಧಿ ಶಿಯಾ ಭಯೋತ್ಪಾದಕ ಸಂಘಟನೆ, ಯೆಮೆನ್ನ ಹೂತಿ ಬುಡಕಟ್ಟು ಸೇನೆ ಸೇರಿ ಹಲವಾರು ಶಿಯಾ ಭಯೋತ್ಪಾದಕ ಹಾಗೂ ಸಾಮಾಜಿಕ ಸಂಘಟನೆಗಳು ಇರಾನ್ ಪರವಾಗಿ ಕೆಲಸ ಮಾಡಲು, ಆ ಮೂಲಕ ತಮಗೆ ಬೇಕಾದ ಹಣ ಮತ್ತು ಶಸ್ತ್ರಗಳನ್ನು ಪಡೆದುಕೊಂಡು ತಮ್ಮ ಅಸ್ತಿತ್ವ ಉಳಿಸಿಕೊಳ್ಳಲು ನೋಡುತ್ತಿವೆ. ಸುನ್ನಿ ಅರಬ್ ಜಗತ್ತಿನಲ್ಲಿ ಈ ಶಿಯಾ ಸಂಘಟನೆಗಳು ಬೇಡದ ಕೂಸುಗಳು. ಆದಾಗ್ಯೂ, ಅವುಗಳಿಂದ ತಮ್ಮ ಹಿತಾಸಕ್ತಿಗಳಿಗೆ ಗಂಭೀರ ಅಪಾಯ ಬಾರದ ಕಾರಣ ಅರಬ್ ಆಡಳಿತಗಳು ಇವನ್ನು ಸಹಿಸಿಕೊಂಡಿವೆ. ಸೌದಿ ಅರೇಬಿಯಾ ಮತ್ತು ಯುಎಇಗಳ ಮೇಲೆ ರಾಕೆಟ್ ದಾಳಿ ಎಸಗಲು ಹೋದ ಹೂತಿಗಳು ಪೆಟ್ಟು ತಿಂದು ಹಿಂದೆ ಸರಿದಿದ್ದಾರೆ. ಹೂತಿಗಳ ಗತಿ ನೋಡಿದ ಇತರ ಶಿಯಾ ಸಂಘಟನೆಗಳು ಅರಬ್ ಆಡಳಿತಗಳ ವಿರುದ್ಧ ಯಾವುದೇ ದುಸ್ಸಾಹಸಕ್ಕೆ ಕೈಹಾಕುತ್ತಿಲ್ಲ. 40 ವರ್ಷಗಳ ಹೆಣಗಾಟದ ನಂತರ ಇರಾನ್ ಗಳಿಸಿದ್ದು ಇಷ್ಟು. ಈ ನಡುವೆ ಶಾಂತಿಯುತ ಮಾರ್ಗಗಳಿಂದ ಪ್ಯಾಲೆಸೆôನ್ ರಾಷ್ಟ್ರದ ನಿರ್ವಣದ ಗುರಿ ಹೊತ್ತ ಫತಾ ಅರಬ್ ರಾಷ್ಟ್ರಗಳ ಮಾನ್ಯತೆ ಹಾಗೂ ಬೆಂಬಲ ಗಳಿಸಿಕೊಂಡದ್ದು ಹಿಂಸಾತ್ಮಕ ಮಾರ್ಗಕ್ಕೇ ಅಂಟಿಕೊಂಡ ಹಮಾಸ್ ಅನ್ನು ಅನಿವಾರ್ಯವಾಗಿ ಇರಾನ್ನ ಮಗ್ಗುಲಿಗೆ ತಳ್ಳಿತು. ಇಷ್ಟಾದರೂ ದಕ್ಕಿತಲ್ಲ ಎಂದು ಇರಾನ್ ಆ ಭಯೋತ್ಪಾದಕ ಸಂಘಟನೆಯನ್ನು ತೆಕ್ಕೆಗೆ ತೆಗೆದುಕೊಂಡಿತು.
ಇಂಥ ಸನ್ನಿವೇಶದಲ್ಲಿ ಸೌದಿ ಅರೇಬಿಯಾದ ಸಮ್ಮತಿಯೊಂದಿಗೆ ಅರಬ್ ಮುಸ್ಲಿಂ ದೇಶಗಳಾದ ಯುಎಇ ಮತ್ತು ಬಹರೀನ್ ಯೆಹೂದಿ ಇಸ್ರೇಲ್ ಜತೆ ತನ್ನ ಪರಮವಿರೋಧಿ ಅಮೆರಿಕದ ಮಧ್ಯಸ್ತಿಕೆಯಲ್ಲಿ ‘ಅಬ್ರಹಾಂ ಒಪ್ಪಂದ’ಗಳನ್ನು ಮಾಡಿಕೊಂಡು ಸ್ನೇಹವರ್ಧನೆಗೆ ಮುಂದಾದರೆ ಇರಾನ್ಗೆ ಹೇಗನಿಸಬಹುದು? ಈ ಬೆಳವಣಿಗೆಯನ್ನು ತನಗಾದ ಅಂತಿಮ ಸೋಲು ಎಂದು ತಿಳಿದ ಇರಾನ್ನ ಮೂಲಭೂತವಾದಿ ಸರ್ಕಾರ ಹಮಾಸ್ ಮತ್ತು ಹೆಜ್ಬೊಲ್ಲಾಗಳೆರಡನ್ನೂ ಇಸ್ರೇಲ್ ವಿರುದ್ಧ ಛೂ ಬಿಟ್ಟು ಆ ಮೂಲಕ ಅರಬ್ ರಾಷ್ಟ್ರಗಳು ಇಸ್ರೇಲ್ ಜತೆಗಿನ ತಮ್ಮ ಸ್ನೇಹವರ್ಧನಾ ಕಸರತ್ತನ್ನು ನಿಲುಗಡೆಗೆ ತರುವಂತೆ ಮಾಡಲು 2021ರ ಬೇಸಿಗೆಯಲ್ಲಿ ಪ್ರಯತ್ನಿಸಿತು. ಆದರೆ ಆಗ ಹಮಾಸ್ ದಾಳಿ ಮತ್ತು ಇಸ್ರೇಲ್ ಪ್ರತಿಕ್ರಿಯೆಗಳೆರಡೂ ಸೀಮಿತವಾಗಿದ್ದ ಕಾರಣ ವೈಮನಸ್ಯ ಒಂದು ಮಿತಿ ದಾಟಿ ಹೋಗಲಿಲ್ಲ. ಶೀಘ್ರದಲ್ಲೇ ಶಾಂತಿಯೂ ನೆಲೆಸಿ ಇರಾನ್ನ ಸಂಚು ಮತ್ತೊಮ್ಮೆ ವಿಫಲವಾಯಿತು. ಆಗ ಆರಂಭವಾದದ್ದೇ ಪ್ರಸಕ್ತ ಭೀಕರ ದಾಳಿಯ ತಯಾರಿ.
ಇರಾನ್ ಹಣವನ್ನೂ, ಶಸ್ತ್ರಾಸ್ತ್ರಗಳನ್ನೂ ಹಮಾಸ್ಗೆ ತಲುಪಿಸತೊಡಗಿದ್ದು ಈಜಿಪ್ಟ್ -ಗಾಝಾ ನಡುವಿನ ರಫಾ ಗಡಿಯಲ್ಲಿನ ದೀರ್ಘ ಸುರಂಗಗಳ ಮೂಲಕ. ಜತೆಗೆ ಅಫ್ಘಾನಿಸ್ತಾನದಲ್ಲಿ ಅಮೆರಿಕನ್ನರು ತೊರೆದುಹೋಗಿದ್ದ ಸಣ್ಣ ಶಸ್ತ್ರಾಸ್ತ್ರಗಳು ಇರಾನ್ ಮೂಲಕವೇ ಹಮಾಸ್ ಕೈ ಸೇರಿದವು. ಈ ನಡುವೆ ರಷ್ಯಾ ವಿರುದ್ಧ ಹೋರಾಡಲು ಯೂಕ್ರೇನ್ಗೆ ಪಶ್ಚಿಮದ ರಾಷ್ಟ್ರಗಳು ಕಳುಹಿಸಿದ ಶಸ್ತ್ರಗಳೂ ಹಮಾಸ್ ಬತ್ತಳಿಕೆಗೆ ಬಿದ್ದಿವೆಯಂತೆ. ಅಂದರೆ ಇಸ್ರೇಲ್ ಅನ್ನು ಪ್ರಚೋದಿಸಲು, ಆ ಪ್ರತಿಕ್ರಿಯೆಯನ್ನೇ ಅಸ್ತ್ರವಾಗಿ ಬಳಸಿ ಅರಬ್ ರಾಷ್ಟ್ರಗಳನ್ನು ಇಸ್ರೇಲ್ನಿಂದ ದೂರ ಇರಿಸಲು ತೆಹರಾನ್ ಗಂಭೀರ ಪ್ರಯತ್ನವನ್ನೇ ಮಾಡಿದೆ. ಈ ಪ್ರಯತ್ನ ವೇಗ ಪಡೆದುಕೊಂಡದ್ದು ಈ ವರ್ಷವೇ ಇಸ್ರೇಲ್ ಜತೆ ಸಂಬಂಧ ಸುಧಾರಿಸಿಕೊಳ್ಳಲು ಸೌದಿ ಅರೇಬಿಯಾ ಸ್ಪಷ್ಟ ಹೆಜ್ಜೆಗಳನ್ನಿಡತೊಡಗಿದಾಗ.
ಈಗ ಹಮಾಸ್ ದಾಳಿಗೆ ಸಮಯ ಕೂಡಿಬಂದದ್ದು ಹೇಗೆ ಎನ್ನುವುದರತ್ತ ಗಮನ ಹೊರಳಿಸೋಣ. ಇದೇ ಸೆಪ್ಟೆಂಬರ್ 9-10ರಂದು ನವದೆಹಲಿಯಲ್ಲಿ ಜಿ-20 ಸಮ್ಮೇಳನ ಜರುಗಿತಷ್ಟೇ. ಅದರ ಅಂಚಿನಲ್ಲೇ ಭಾರತ, ಮಧ್ಯಪ್ರಾಚ್ಯ ಮತ್ತು ಯುರೋಪ್ಗಳನ್ನು ಜಲಮಾರ್ಗ ಮತ್ತು ರೈಲುಮಾರ್ಗಗಳಿಂದ ಸಂರ್ಪಸುವ ಇಂಡಿಯಾ ಮಿಡ್ಲ್ ಈಸ್ಟ್ -ಯುರೋಪ್ ಇಕನಾಮಿಕ್ ಕಾರಿಡಾರ್ (ಐಎಂಇಸಿ) ಅನ್ನು ನಿರ್ವಿುಸಲು ಭಾರತ, ಸೌದಿ ಅರೇಬಿಯಾ ಮತ್ತು ಅಮೆರಿಕ ನಡುವೆ ಒಮ್ಮತ ಏರ್ಪಟ್ಟಿತು. ಇದಕ್ಕೆ ಯುಎಇ, ಜೋರ್ಡಾನ್ ಮತ್ತು ಇಸ್ರೇಲ್ಗಳ ಸಹಮತಿ ಇತ್ತು. ಇದು ಅನುಷ್ಠಾನಗೊಂಡರೆ ಎಮಿರೇಟ್ಸ್ನ ದುಬೈನಿಂದ ಇಸ್ರೇಲ್ನ ಹೈಫಾ ಬಂದರಿನವರೆಗೆ ಯುಎಇ, ಸೌದಿ ಅರೇಬಿಯಾ, ಜೋರ್ಡಾನ್ ಮತ್ತು ಇಸ್ರೇಲ್ ನೆಲದ ಮೂಲಕ ರೈಲುಮಾರ್ಗ ನಿರ್ವಣವಾಗುತ್ತದೆ ಅಂದರೆ ಅಷ್ಟೂ ದೇಶಗಳು ಒಂದು ಬಿಗಿಯಾದ ಆರ್ಥಿಕ ಬಂಧನದಲ್ಲಿ ಒಂದುಗೂಡುತ್ತವೆ. ಅವುಗಳ ಜತೆಗೆ ಪೂರ್ವದಲ್ಲಿ ಭಾರತ ಮತ್ತು ಪಶ್ಚಿಮದಲ್ಲಿ ಯುರೋಪಿಯನ್ ಯೂನಿಯನ್ ನೌಕಾಮಾರ್ಗಗಳ ಮೂಲಕ ಒಂದುಗೂಡುತ್ತವೆ. ಹೀಗೆ ಒಮ್ಮೆ ಈ ಬಗೆಯ ಘನಿಷ್ಟ ಆರ್ಥಿಕ ಸಂಬಂಧಗಳು ಸ್ಥಾಪಿತವಾದ ಮೇಲೆ ಈ ದೇಶಗಳು ಪರಸ್ಪರ ಕಾದಾಡಹೋಗುವುದಿಲ್ಲ! ಎನ್ನುವುದು ಇದುವರೆಗಿನ ಜಾಗತಿಕ ಇತಿಹಾಸದಲ್ಲಿ ಸ್ಥಾಪಿತವಾಗಿರುವ ಸತ್ಯ. ಅಂದರೆ ಅರಬ್ ದೇಶಗಳು ಮತ್ತು ಇಸ್ರೇಲ್ ನಡುವೆ ಶಾಶ್ವತಮೈತ್ರಿ ಸ್ಥಾಪಿತವಾದಂತೆ. ಮುಸ್ಲಿಂ ಜಗತ್ತಿನಲ್ಲಿ ತನ್ನ ಬೇಳೆ ಬೇಯಿಸಿಕೊಳ್ಳಲು ಇದು ಕೊನೆಯ ಅವಕಾಶ ಎಂದು ಇರಾನ್ ತೀರ್ವನಿಸಿತು. ಜತೆಗೆ, ಈ ಐಎಂಇಸಿ ಯೋಜನೆ ಚೀನಾದ ಸಾಲಸಂಕೋಲೆಯ ಬಿಆರ್ಐ ಯೋಜನೆಯ ದುಷ್ಪರಿಣಾಮಗಳನ್ನು ಹೋಗಲಾಡಿಸಿ ಎಲ್ಲ ಸಂಬಂಧಿತ ದೇಶಗಳ ಹಿತ ಕಾಯುತ್ತದೆ ಎನ್ನುವ ಮಾತುಗಳೂ ಅಮೆರಿಕ ಅಧಿಕೃತವಾಗಿ ಹೇಳಿದ್ದರಿಂದ ಚೀನಾ ಸಹ ಇದನ್ನು ವಿರೋಧಿಸಲು ತೆರೆಯ ಹಿಂದೆಯೇ ಸಂಚು ಹೂಡಿತು. ಭಾರತ ಮತ್ತು ಯುರೋಪ್ ಅನ್ನು ಸಂರ್ಪಸುವ ಯಾವುದೇ ಮಾರ್ಗ ಇತಿಹಾಸದುದ್ದಕ್ಕೂ ಟರ್ಕಿ ಮೂಲಕವೇ ಹಾದುಹೋಗಿದೆ, ಆ ಕಾರಣದಿಂದ ಈ ಯೋಜನೆ ತನಗೆ ಸಮ್ಮತವಿಲ್ಲ ಎಂದು ಟರ್ಕಿಯ ಅಧ್ಯಕ್ಷ ರೆಸೆಪ್ ತಯ್ಯಬ್ ಎರ್ದ್ ವಾನ್ ಹೇಳಿದರು. ಮೂರೂ ದೇಶಗಳು ಕತಾರ್ನಲ್ಲಿ ಭದ್ರವಾಗಿ ನೆಲೆಯೂರಿರುವ ಹಮಾಸ್ ನಾಯಕತ್ವಕ್ಕೆ ನಿರ್ದೇಶನ ನೀಡಿದವು, ಇಸ್ರೇಲ್ ಮೇಲೆ ಏಳು ಸಾವಿರದಷ್ಟು ಕ್ಷಿಪಣಿಗಳು ಹಾರಿದವು. ನಿರೀಕ್ಷೆಯಂತೆ ಇಸ್ರೇಲ್ ಉಗ್ರವಾಗಿ ಪ್ರತಿಕ್ರಿಯಿಸಿತು, ಚೀನಾ, ಇರಾನ್, ಟರ್ಕಿ ಮತ್ತವುಗಳ ಪರವಾದ, ಇಸ್ರೇಲ್-ವಿರೋಧಿಯಾದ ಜಾಗತಿಕ ಎಡಪಂಥೀಯ ಸಂಘಟನೆಗಳು ತಯಾರಾಗಿಯೇ ಇದ್ದ ಟೂಲ್ಕಿಟ್ಗೆ
ಅನುಗುಣವಾಗಿ ಹಮಾಸ್ ಪೈಶಾಚಿಕ ಕೃತ್ಯಗಳನ್ನು ಮರೆಗೆ ತಳ್ಳಿ ಇಸ್ರೇಲ್ನ ಪ್ರತಿಕ್ರಿಯೆಯನ್ನೇ ದೊಡ್ಡದಾಗಿ ಬಿಂಬಿಸಿ, ಪ್ಯಾಲೆಸ್ತೀನಿಯನ್ನರ ಜೀವಹಾನಿಯಾಗುತ್ತಿದೆ ಎಂಬ ಕೂಗನ್ನು ಜಾಗತಿಕವಾಗಿ ಎಬ್ಬಿಸತೊಡಗಿದವು. ಈಗ ಯುಎಇ, ಸೌದಿ ಅರೇಬಿಯಾ ಮತ್ತು ಜೋರ್ಡಾನ್ ಬಯಸಿದರೂ ಇಎಂಇಸಿ ಯೋಜನೆಯಿರಲಿ, ಇಸ್ರೇಲ್ ಬಗ್ಗೆ ಸ್ನೇಹಸಂಬಂಧ ಸ್ಥಾಪಿಸುವ ಮಾತನ್ನೇ ಎತ್ತದ ಒತ್ತಡಕ್ಕೊಳಗಾದವು. ಮೂವರು ಮಾಟಗಾತಿಯರ ಹುನ್ನಾರ ಹೀಗೆ ಸದ್ಯಕ್ಕೆ ಯಶಸ್ವಿಯಾಗಿದೆ.
(ಲೇಖಕರು ರಾಜಕೀಯ ವಿಶ್ಲೇಷಕರು, ಕನ್ನಡ ಕತೆಗಾರರು)