| ಉಮಾ ಗುರುರಾಜ್ ಬೆಂಗಳೂರು
ಒಮ್ಮೆ ಯತಿವರೇಣ್ಯರು ಶಿಷ್ಯರೊಂದಿಗೆ ಸಂಚಾರ ಮಾಡುತ್ತಾ ಒಂದು ಹಳ್ಳಿಯಲ್ಲಿ ಕೆಲಕಾಲ ತಂಗಲು ಇಚ್ಛಿಸಿದರು. ದಾರಿಹೋಕರು, ರೈತರು ಯತಿಗಳಿಗೆ ನಮಸ್ಕರಿಸಿ ಆಶೀರ್ವಾದ ಪಡೆದು ಮುಂದೆ ಸಾಗುತ್ತಿದ್ದರು. ಅನೇಕರು ತಮ್ಮ ಕಷ್ಟ ಕಾರ್ಪಣ್ಯಗಳಿಗೆ ಪರಿಹಾರ ಪಡೆದು ಸಮಾಧಾನಗೊಳ್ಳುತ್ತಿದ್ದರು. ಯತಿಗಳ ಮುಂದೆ ಒಬ್ಬ ರೈತ ಮನಸೋಇಚ್ಛೆ ಬೈಯಲಾರಂಭಿಸಿದ. ದೇವರನ್ನು ಹೀಯಾಳಿಸಿದ. ಏಕವಚನದಿಂದ ಗುರುಗಳಿಳನ್ನು ಅವಮಾನಿಸಿದ. ಶಿಷ್ಯರಿಗೆ ಸಹಿಸಲು ಕಷ್ಟವಾಗಿ ಅವನನ್ನು ತಡೆಯಲು ಹೋದರು. ಯತಿಗಳು ಶಾಂತಚಿತ್ತದಿಂದ, ‘ಬಿಡಿ ಅವನ ಮನಸಿನ ಭಾರ ಕಡಿಮೆ ಮಾಡಿಕೊಳ್ಳಲಿ, ಅವನು ಅವಮಾನಿಸಿದ್ದು ನನಗೆ ನೋವುಂಟು ಮಾಡಿಲ್ಲ. ನಾನು ಅವನ ಮಾತನ್ನು ಸ್ವೀಕರಿಸಿಯೆ ಇಲ್ಲ’ ಎಂದರು.
ರೈತ ಕೂಗಾಡಿ ಸಾಕಾಗಿ, ಸುಸ್ತಾಗಿ ಮರದ ಅಡಿಯಲ್ಲಿ ಕುಳಿತ. ಅವನಿಗೆ ನೀರು ಕೊಟ್ಟು ಸುಧಾರಿಸಿಕೊಳ್ಳಲು ಯತಿಗಳು ಹೇಳಿದರು. ರೈತನಿಗೆ ತನ್ನ ತಪ್ಪಿನ ಅರಿವಾಗಿ ನಾಚಿಕೆ ಆಯ್ತು. ಶಿಷ್ಯರನ್ನೆಲ್ಲ ಕರೆದು ಗುರುಗಳು ಹೀಗೆ ಹೇಳಿದರು-‘ಅವರವರ ಯೋಗ್ಯತೆಗೆ ತಕ್ಕಂತೆ ಯೋಚನೆಗಳು ಬರುತ್ತವೆ. ಅವಮಾನಿಸುವುದು, ಅನುಮಾನಿಸುವುದು, ನಿಂದಿಸುವುದು ಅವರವರ ಸಂಸ್ಕಾರ. ಕ್ಷಮೆ ಸಜ್ಜನರ ಸಂಸ್ಕಾರ. ಕ್ಷಮೆಯಲ್ಲಿ ಸಿಗುವ ನೆಮ್ಮದಿ, ಶಾಂತಿ ಬೇರೆಲ್ಲೂ ಸಿಗಲಾರದು. ಕ್ಷಮೆ ಪಡೆಯಲು ಬೇರೆಯವರಿಗೆ ಅರ್ಹತೆ ಇದೆಯೋ ಇಲ್ಲವೋ, ಆದರೆ ಕ್ಷಮಿಸುವ ಔದಾರ್ಯ ಹಾಗೂ ಘನತೆ ರೂಢಿಸಿಕೊಳ್ಳಿ. ಶಿಕ್ಷಿಸುವುದಕ್ಕಿಂತ ಹೆಚ್ಚಿನ ಸಾಮರ್ಥ್ಯ ಕ್ಷಮಿಸುವುದಕ್ಕೆ ಬೇಕು. ನಮ್ಮನ್ನು ಅವಮಾನಿಸುವವರನ್ನು, ನೋವು ಕೊಟ್ಟವರನ್ನೆಲ್ಲ ಕ್ಷಮಿಸಿಬಿಡಬೇಕು’ ಎಂದರು.
ರೈತ ಈ ಎಲ್ಲ ಮಾತು ಕೇಳಿಸಿಕೊಂಡು ಮೆಲ್ಲಗೆ ಎದ್ದುಬಂದು ಗುರುಗಳ ಕಾಲಿಗೆ ಎರಗಿ, ‘ತಪ್ಪಾಯಿತು ಗುರುಗಳೆ, ಮನೆಯಲ್ಲಿ ಹೆಂಡತಿ ಮಕ್ಕಳು, ತಂದೆ ತಾಯಿ ಎಲ್ಲರೂ ಜಗಳವಾಡುತ್ತಾರೆ. ದುಡಿಮೆ ಕಡಿಮೆ, ಮಳೆಯಿಲ್ಲದೆ ಬರಗಾಲ. ಅದೇ ಕೋಪ ತಾಪ. ನಾನು ಎಲ್ಲರಿಗೂ ಸಹಾಯ ಮಾಡಿದ್ದೇನೆ. ನನಗೆ ಯಾರೂ ಸಹಾಯ ಮಾಡುತ್ತಿಲ್ಲ. ದೇವರೆಲ್ಲಿದ್ದಾನೆ ಸ್ವಾಮಿ? ಮೋಸಗಾರರೆಲ್ಲ ಚೆನ್ನಾಗಿದ್ದಾರೆ, ನನಗೇ ಕಷ್ಟ. ನೀವು ಶಾಂತವಾಗಿ ನಗುತ್ತಾ ಮಾತಾಡುವುದು ನನ್ನಲ್ಲಿ ಅಸೂಯೆ ಹುಟ್ಟಿಸಿತು. ನೀವೆಷ್ಟು ನೆಮ್ಮದಿಯಾಗಿದ್ದೀರಿ, ನನಗೆಷ್ಟು ನೋವು ಎನಿಸಿತು. ನೀವು ನನ್ನನ್ನು ಕ್ಷಮಿಸಿ ದೇವರಾಗಿಬಿಟ್ಟಿರಿ’ ಎಂದು ಕೈ ಮುಗಿದು ನಿಂತ.
‘ನೀನೊಬ್ಬನೇ ಕಷ್ಟಪಡುತ್ತಿಲ್ಲ ಜಗದೊಳಗೆ, ಪ್ರತಿ ಜೀವಿಯೂ ಬದುಕಲು ಹೋರಾಟ ಮಾಡುತ್ತದೆ. ಅವರವರ ಕರ್ಮಕ್ಕನುಸಾರ ಫಲ. ನಿನ್ನ ಕರ್ತವ್ಯ ನೀನು ಮಾಡು, ಫಲಾಫಲ ದೇವರಿಗೆ ಬಿಡು. ಯಾರು ಏನೇ ತೊಂದರೆ ಕೊಟ್ಟು ಅವಮಾನಿಸಿದರೂ ಅವರನ್ನೆಲ್ಲ ಕ್ಷಮಿಸಿ ನಗುಮೊಗದಿಂದ ಮುಂದೆ ಸಾಗು’ ಎಂದರು ಯತಿಗಳು. ನಿಜ ಯಾವುದೋ ಕಹಿ ಘಟನೆಯನ್ನು ಮನದಲ್ಲಿ ತುಂಬಿಕೊಂಡು ಮೆಲುಕುಹಾಕುತ್ತಾ ನೊಂದು ಕೂಗಾಡುವುದಕ್ಕಿಂತ ಕ್ಷಮಿಸಿ ನಿರಾಳವಾಗಿರುವುದೇ ಉತ್ತಮ. ಗೌತಮ ಬುದ್ಧ ಹೇಳುವಂತೆ, ‘ಮಾಡಿದ ತಪ್ಪಿಗೆ ಕ್ಷಮೆ ಕೇಳಿದರೆ ಸಾಹಸಿಗಳಾಗುತ್ತಾರೆ, ಬೇರೆಯವರ ತಪ್ಪನ್ನು ಕ್ಷಮಿಸಿದರೆ ಬಲಿಷ್ಠರಾಗುತ್ತಾರೆ’.
(ಲೇಖಕರು ಹವ್ಯಾಸಿ ಬರಹಗಾರರು)