ಜೀವನದಲ್ಲಿ ಯಾವೆಲ್ಲ ತಿರುವು ಬರುತ್ತವೆ ಎಂದು ಊಹಿಸಲು ಸಾಧ್ಯವೇ ಇಲ್ಲ. ಅದರಲ್ಲೂ ಆಘಾತಗಳು ಹಠಾತ್ತನೇ ಎದುರಾದಾಗ ಬದುಕು ಅಸ್ತವ್ಯಸ್ತವಾಗಿ ಬಿಡುತ್ತದೆ. ಆದರೆ, ಅಂಥ ಕ್ಷಣಗಳನ್ನೇ ಧೈರ್ಯದಿಂದ ಎದುರಿಸಿ, ನಮ್ಮೊಳಗಿನ ಅಂತಃಶಕ್ತಿಯನ್ನು ಜಾಗೃತಗೊಳಿಸಿದರೆ ಖಂಡಿತವಾಗಿಯೂ ಬದುಕನ್ನು ಬದಲಿಸಬಹುದು ಎಂಬುದಕ್ಕೆ ಡಾ.ಜಿ.ಎನ್.ಸಂಗೀತಾ ಅವರಂಥ ಸಾಧಕರು ಸಾಕ್ಷಿ.
‘ದೃಷ್ಟಿ (ಕಣ್ಣು) ಇಲ್ಲದ ಈ ಮಹಿಳೆ ಹೇಗೆ ಜೀವನ ರೂಪಿಸಿಕೊಳ್ಳುತ್ತಾರೆ’ ಎಂಬ ಕಳವಳ, ಚಿಂತೆ ಅವರ ಸುತ್ತಲಿನವರಿಗೆ. ಹೊರಗಣ್ಣು ಇಲ್ಲದಿದ್ದರೇನಂತೆ... ಇವರ ಆಂತರ್ಯದ ಪ್ರಕಾಶ ಎಷ್ಟು ಪ್ರಖರವೆಂದರೆ ಸ್ವಂತ ಜೀವನ ರೂಪಿಸಿಕೊಂಡಿದ್ದಷ್ಟೇ ಅಲ್ಲ, ಈಗ ಜನರು ತಮ್ಮ ಸಮಸ್ಯೆಗಳನ್ನು ಹೊತ್ತುಕೊಂಡು ಬರ್ತಾರೆ, ಆಪ್ತಸಮಾಲೋಚಕಿಯಾಗಿ ಇವರು, ಜೀವನದಲ್ಲಿನ ಸವಾಲುಗಳನ್ನು ಎದುರಿಸುವುದು ಹೇಗೆ ಎಂದು ತಿಳಿಸುತ್ತ ಸಾಂತ್ವನದ ನುಡಿಗಳ ಮೂಲಕ ನೋಂದವರ ಆತ್ಮಸ್ಥೈರ್ಯವನ್ನು ಹೆಚ್ಚಿಸುತ್ತಾರೆ. ಈ ಎಲ್ಲ ಕ್ಷಣಗಳಿಗೆ ಸಾಕ್ಷಿಯಾಗಿರುವ ತಂದೆ-ತಾಯಿ ಭಾವುಕರಾಗುತ್ತಾರೆ, ಮಗಳ ಸಾಧನೆ ಕಂಡು ಆನಂದಭಾಷ್ಪ ಸುರಿಸುತ್ತಾರೆ.
ಹೌದು, ಇದು ಬೆಂಗಳೂರಿನ ಡಾ.ಜಿ.ಎನ್.ಸಂಗೀತಾ ಅವರ ಪ್ರೇರಣಾದಾಯಿ ಪಯಣ. ಇವರ ಮಾತೇ ಸಂಗೀತದಂತೆ. ಎಲ್ಲೂ ಬದುಕನ್ನು ದೂರುವುದಿಲ್ಲ, ವಿಧಿಯನ್ನು ಹಳಿಯುವುದಿಲ್ಲ. ಅಂದಹಾಗೆ, ಇವರು ಪಿ.ಎಚ್.ಡಿ ಪಡೆದ ಕರ್ನಾಟಕದ ಮೊದಲ ದೃಷ್ಟಿಹೀನ ಮಹಿಳೆ. ಅಂತಾರಾಷ್ಟ್ರೀಯ ವೇದಿಕೆಗಳಲ್ಲಿ ಮಹಿಳಾ ಸಬಲೀಕರಣದ ಪ್ರಖರ ವಿಚಾರಗಳನ್ನು ಮಂಡಿಸಿರುವ ಇವರಿಗೆ, ಡಾ.ಎ.ಪಿ.ಜೆ. ಅಬ್ದುಲ್ ಕಲಾಂ ‘ಶಭಾಷ್ ’ ಎಂದಾಗ ಆದ ಖುಷಿ ಅಷ್ಟಿಷ್ಟಲ್ಲ. ಕಲಾಂ ಪ್ರೇರಣೆಯಿಂದಲೇ ಸಂಶೋಧನೆಯಲ್ಲಿ ತೊಡಗಿಸಿಕೊಂಡು, ಮೂರು ಸಾವಿರಕ್ಕೂ ಅಧಿಕ ಸಾಧಕಿಯರನ್ನು ಸಂದರ್ಶಿಸಿ, ಅದನ್ನು ಆಡಿಯೋ ರೂಪದಲ್ಲಿ ಸಂಗ್ರಹಿಸಿರುವ ಸಂಗೀತಾ ಲೇಖಕಿಯೂ ಹೌದು. ಇಂಗ್ಲಿಷಿನಲ್ಲಿ ನಾಲ್ಕು, ಕನ್ನಡದಲ್ಲಿ ಒಂದು ಪುಸ್ತಕ ಬರೆದದ್ದಲ್ಲದೆ, ದೂರದ ಪಾಕಿಸ್ತಾನದಲ್ಲೂ ತಮ್ಮ ಮಾತಿನ ಮಿಂಚಿನಿಂದ ಬೆರಗು ಮೂಡಿಸಿ ಬಂದಿದ್ದಾರೆ.
ದೃಷ್ಟಿಹೀನರು ಜೀವನಪೂರ್ತಿ ಇತರರ ಮೇಲೆ ಅವಲಂಬಿತರಾಗುತ್ತಾರೆ, ದುಡಿಮೆ ಮಾಡಿ ಬದುಕು ರೂಪಿಸಿಕೊಳ್ಳುವುದು ಕಷ್ಟ ಎಂಬೆಲ್ಲ ತಪು್ಪಧೋರಣೆಗಳನ್ನೇ ಇಂದಿಗೂ ಸಮಾಜ ಹೊಂದಿದ್ದು, ಸಂಗೀತಾ ಅಂಥವರ ಬದುಕನ್ನು ಒಮ್ಮೆ ಕಣ್ಣು ತೆರೆದು ನೋಡಬೇಕು. ಸಂಗೀತಾ ಅವರ ಜೀವನಹೋರಾಟವನ್ನು ಅರಿಯುವ ಮುನ್ನ ಅವರ ತಾಯಿ ಲಲಿತಾ ಅವರ ಮಾತೊಮ್ಮೆ ಕೇಳಿ, ‘ಸಂಗೀತಾಳನ್ನು ಹೊರಗಡೆ ಫೀಲ್ಡ್ವರ್ಕ್ಗಾಗಿ ಕರೆದುಕೊಂಡು ಹೋದಾಗ ಜನರು ನಿಮಗೆ ಮಾಡಲು ಕೆಲಸ ಇಲ್ಲವೇ? ಅಂಧ ಮಗಳನ್ನು ಹೇಗೆ ಸಲಹುತ್ತೀರಿ ಎಂದೆಲ್ಲ ಮೂದಲಿಸಿದರು. ಆದರೆ, ಜೀವನದಲ್ಲಿ ಏನೇ ಆಗಲಿ ಕಲಿಯುವುದನ್ನು ನಿಲ್ಲಿಸಬೇಡ ಎಂದು ಹೇಳಿದ್ದ ನನ್ನ ಮೇಷ್ಟ್ರ ಮಾತು ನನಗೆ ಪ್ರೇರಣೆಯಾಯಿತು. ಹೊಸ ಪರಿಸ್ಥಿತಿಗೆ ಹೊಂದಿಕೊಳ್ಳುವುದನ್ನು ಕಲಿತೆ. ಈಗ ಸಂಗೀತಾ ಸಾಧನೆಯೇ ಎಲ್ಲ ಮಾತನಾಡುತ್ತಿದೆ’ ಎಂದರು. ಅವರ ಮಾತುಗಳನ್ನು ಮತ್ತೆ ಮತ್ತೆ ಅವಲೋಕಿಸಿ ನೋಡಿದರೆ, ಬದುಕಿನ ಎಷ್ಟೋ ಪಾಠಗಳು ನಮಗೆ ಸುಲಭವಾಗಿ ದಕ್ಕಬಹುದು.
ಅಷ್ಟಕ್ಕೂ ಸಂಗೀತಾ ಹುಟ್ಟಿನಿಂದ ದೃಷ್ಟಿಹೀನರಲ್ಲ. 1973 ಆಗಸ್ಟ್ 15ರಂದು ಜನಿಸಿದ ಇವರು ಎಲ್ಲರಂತೆ ಬಾಲ್ಯದ ಖುಷಿಯ ಕ್ಷಣಗಳನ್ನು ಅನುಭವಿಸುತ್ತ, ಶಾಲೆಗೆ ಹೋಗುತ್ತಿದ್ದರು. ತಂದೆ ಜಿ.ಕೆ.ನಟರಾಜ್ ಲೋಕೋಪಯೋಗಿ ಇಲಾಖೆಯಲ್ಲಿ ಇಂಜಿನಿಯರ್ ಆಗಿ ಕಾರ್ಯನಿರ್ವಹಿಸಿ ನಿವೃತ್ತರಾಗಿದ್ದಾರೆ. ತಾಯಿ ಲಲಿತಾ ಗೃಹಿಣಿ ಜತೆಗೆ ಸಂಗೀತಾರ ಶಕ್ತಿಯೂ ಹೌದು. ಅಕ್ಕ ಕವಿತಾ, ತಂಗಿ ರಂಜಿತಾ ಎಂಬಿಎ ವ್ಯಾಸಂಗ ಪೂರ್ಣಗೊಳಿಸಿ, ಸಂಗೀತಾ ಅವರ ಕನಸುಗಳನ್ನು ಸಾಕಾರಗೊಳಿಸಲು ಜತೆಯಾಗಿದ್ದಾರೆ, ಎರಡನೇ ತರಗತಿಯ ಬೇಸಿಗೆ ರಜೆಯಲ್ಲಿ ಸಂಗೀತಾ ಕುಟುಂಬದೊಂದಿಗೆ ಕೆಮ್ಮಣ್ಣಗುಂಡಿಗೆ ಪ್ರವಾಸಕ್ಕೆ ಹೋಗಿದ್ದರು. ಸಂಜೆಯ ಹೊತ್ತು ಮೆಟ್ಟಿಲು ಇಳಿಯುವಾಗ ಸಂಗೀತಾ ಅಕ್ಕನ ಕೈ ಹಿಡಿದುಕೊಂಡು ಇಳಿಯುತ್ತಿರುವುದನ್ನು ಗಮನಿಸಿದ ತಂದೆ-ತಾಯಿಗೆ ಮಗಳು ಯಾಕೋ ತಡವರಿಸುತ್ತಿದ್ದಾಳೆ ಎಂಬ ಅನುಮಾನ ಮೂಡಿತು. ವೈದ್ಯರನ್ನು ಸಂರ್ಪಸಿದಾಗ ತಿಳಿದದ್ದು ಬ್ರೇನ್ ಟ್ಯೂಮರ್ ಆಗಿದೆ ಎಂದು. ಆಪ್ಟಿಕ್ ನರ್ವ್ ಮೇಲೆ ಗಡ್ಡೆಯಾಗಿದೆ, ಶಸ್ತ್ರಚಿಕಿತ್ಸೆ ಮಾಡಿಸದಿದ್ದರೆ ಮಗುವಿನ ಪ್ರಾಣ ಉಳಿಯುವುದೇ ಕಷ್ಟ ಎಂದರು. ಕೂಡಲೇ ಶಸ್ತ್ರಚಿಕಿತ್ಸೆ ಮಾಡಿಯಾಯಿತು. ಪ್ರಾಣವೇನೋ ಉಳಿಯಿತು, ಕಣ್ಣು ಹೊರಟುಹೋಯಿತು. ಇದೆಲ್ಲ ಆದಾಗ ಸಂಗೀತಾಗೆ ಕೇವಲ ಏಳು ವರ್ಷ. ಆ ಬಳಿಕ ತಂದೆ-ತಾಯಿ ಎಷ್ಟೋ ವೈದ್ಯರ ಕಡೆ ತೋರಿಸಿದರು. ದೇವಸ್ಥಾನಗಳಿಗೆ ಸುತ್ತಿದರು, ಹರಕೆ ಕಟ್ಟಿಕೊಂಡರು. ಮಗಳಿಗೆ ದೃಷ್ಟಿ ಮರಳಿದರಾಯಿತು ಎಂಬ ಆಶಾಭಾವದಿಂದ ಎಲ್ಲ ಪ್ರಯತ್ನ ಮಾಡಿದರು.
ಕೊನೆಗೆ ಚೆನ್ನೈನ ಖ್ಯಾತ ನೇತ್ರತಜ್ಞ ಡಾ.ರಾಮಮೂರ್ತಿ ಬಳಿಗೆ ಹೋದಾಗ ಅವರು ವಾಸ್ತವಸ್ಥಿತಿಯನ್ನು ಮನದಟ್ಟು ಮಾಡಿಕೊಟ್ಟರು. ಸಂಗೀತಾ ಮತ್ತು ಅವರ ತಂದೆಯನ್ನು ಹೊರಗಡೆ ಕಳುಹಿಸಿ ತಾಯಿ ಲಲಿತಾ ಅವರನ್ನು ಕೂರಿಸಿಕೊಂಡು, ‘ನೋಡಿ ಅಮ್ಮ ಇದೇ ಕ್ಷಣ ಎಷ್ಟು ಅಳಬೇಕೋ ಅಷ್ಟು ಅತ್ತುಬಿಡಿ. ಏಕೆಂದರೆ, ನಿಮ್ಮ ಮಗಳಿಗೆ ಮತ್ತೆ ಕಣ್ಣು ಬರುವುದಿಲ್ಲ. ನೀವು ಈ ಸ್ಥಿತಿಯನ್ನು ಒಪ್ಪಿಕೊಂಡು ಮುಂದಿನದಕ್ಕೆ ಸಜ್ಜಾಗಬೇಕು. ಈ ಮುಂದೆ ಒಂದು ಹನಿಯೂ ಕಣ್ಣೀರು ಹಾಕುವಂತಿಲ್ಲ. ಹಾಗಾಗಿ, ಕೊನೆಯಬಾರಿ ಅತ್ತು, ಮನಸ್ಸು ಹಗುರ ಮಾಡಿಕೊಳ್ಳಿ, ವಾಸ್ತವವನ್ನು ಸ್ವೀಕರಿಸಿ’ ಎಂದರು. ಅದರಂತೆ, ಲಲಿತಾ ಮಗಳಿಗೆ ಬೆಂಬಲವಾಗಿ ನಿಂತರು.
ನ್ಯಾಶನಲ್ ಅಸೋಸಿಯೇಷನ್ ಫಾರ್ ಬ್ಲೈಂಡ್ (ಎನ್ಎಬಿ)ನ ಕರ್ನಾಟಕ ಶಾಖೆಯ ಸಲಹೆ, ಮಾರ್ಗದರ್ಶನದ ಅನುಸಾರ ಶಿಕ್ಷಣ ಮುಂದುವರಿಸಿದರು. ಶಬ್ದವನ್ನು ಗುರುತಿಸುವುದು, ಆ ಮುಖೇನ ವ್ಯಕ್ತಿಗಳ ಗುರುತಿಸುವಿಕೆ, ದೈನಂದಿನ ಕೆಲಸಕಾರ್ಯ ಮಾಡಿಕೊಳ್ಳುವ ಬಗೆ ಹೀಗೆ ಒಂದೊಂದೇ ಹಂತಗಳನ್ನು ಸಂಗೀತಾ ಕಲಿಯತೊಡಗಿದರು. ಇಂದಿರಾ ನಗರದ ಎನ್ಪಿಎಸ್ ಶಾಲೆಯಲ್ಲಿ ವ್ಯಾಸಂಗ. ಮೊದಲಿಗೆ ಅಮ್ಮ ನೋಟ್ಸ್ ಬರೆದುಕೊಡುತ್ತಿದ್ದರು, ಆ ಮೇಲೆ ಸ್ನೇಹಿತರು ನೋಟ್ಸ್ ಬರೆದುಕೊಡಲು ಆರಂಭಿಸಿದರು. ಸಂಜೆ ಶಾಲೆಯಿಂದ ಮರಳಿದ ಮೇಲೆ ಅಪ್ಪ, ಅಮ್ಮ ಪುಸ್ತಕ ಓದಿ ಹೇಳುತ್ತಿದ್ದರು. ಸ್ಕೈ ್ರ್ ನೆರವಿನಿಂದ 7ನೇ ತರಗತಿ ಪರೀಕ್ಷೆ ಬರೆದು, ಉತ್ತಮ ಅಂಕ ಗಳಿಸಿದಾಗ, ಇವರ ಚುರುಕುತನ ಕಂಡು ರೋಟರಿ ಕ್ಲಬ್ ಸನ್ಮಾನಿಸಿ, ಗೌರವಿಸಿತು. ಸಂಗೀತಾ ಸಾಮಾನ್ಯ ಶಾಲೆಯಲ್ಲಿ (ವಿಶೇಷ ಮಕ್ಕಳ ಶಾಲೆಯಲ್ಲ) ಓದಿ, ಶೈಕ್ಷಣಿಕವಾಗಿ ಒಳ್ಳೆಯ ಪ್ರಗತಿ ತೋರಿದ್ದು, ಇತರ ಪಾಲಕರ ಕಣ್ಣು ತೆರೆಸಿತು. ಆಗಷ್ಟೇ ಇಂಟಿಗ್ರೇಟೆಡ್ ಎಜ್ಯುಕೇಶನ್ ಸಿಸ್ಟಮ್ ಜಾರಿಗೆ ಬಂದಿದ್ದರಿಂದ ದೃಷ್ಟಿಹೀನತೆ ಸೇರಿದಂತೆ ವಿವಿಧ ಅಂಗವೈಕಲ್ಯ ಹೊಂದಿದ್ದ ಮಕ್ಕಳನ್ನು ಪಾಲಕರು ಸಾಮಾನ್ಯ ಶಾಲೆಗೆ ಸೇರಿಸಲು ಆರಂಭಿಸಿದರು. 1985ರಲ್ಲಿ ಎವಿ ಶಿಕ್ಷಣ ಸಂಸ್ಥೆಗೆ ಸೇರಿ, ಹೈಸ್ಕೂಲ್ ಶಿಕ್ಷಣ ಪೂರ್ಣ ಗೊಳಿಸಿದರು. 1989ರಲ್ಲಿ ಜಯನಗರದ ಎನ್ಎಂಕೆಆರ್ವಿ ಕಾಲೇಜಿಗೆ ಸೇರಿ ಪಿಯು ಮತ್ತು ಬಿಎ, ಆ ಬಳಿಕ ಮಹಿಳಾ ಅಧ್ಯಯನದಲ್ಲಿ ಎಂಎ ಶಿಕ್ಷಣ ಪೂರ್ಣಗೊಳಿಸಿದರು. ಈ ಸಂದರ್ಭದಲ್ಲಿ ಆರ್ವಿ ಟ್ರಸ್ಟ್ ಮತ್ತು ಕಾಲೇಜ್ ಸಿಬ್ಬಂದಿ ನೆರವಿಗೆ ನಂತರು. ಅಷ್ಟು ಮಾತ್ರವಲ್ಲ ಇವರ ಎಂಎ ಶಿಕ್ಷಣ ಪೂರ್ಣಗೊಳ್ಳುತ್ತಿದ್ದಂತೆಯೇ, ಎನ್ಎಂಕೆಆರ್ವಿ ಕಾಲೇಜಿನ ಮಹಿಳಾ ಅಧ್ಯಯನ ವಿಭಾಗದಲ್ಲಿ ಮಹಿಳಾ ದಾಖಲಾತಿ ವಿಭಾಗವನ್ನು ಆರಂಭಿಸಿ ಸಂಗೀತಾ ಅವರನ್ನು ಡಾಕ್ಯುಮೆಂಟರಿಸ್ಟ್ ಆಗಿ ನೇಮಿಸಿದರು (1996).
ಕಳೆದ 28 ವರ್ಷಗಳಿಂದ ಎನ್ಎಂಕೆಆರ್ವಿ ಕಾಲೇಜಿನಲ್ಲಿ ಡಾಕ್ಯುಮೆಂಟರಿಸ್ಟ್ ಆಗಿ ಕಾರ್ಯನಿರ್ವಹಿಸುತ್ತಿರುವ ಸಂಗೀತಾ ವಿವಿಧ ಕ್ಷೇತ್ರಗಳ ಸಾವಿರಾರು ಸಾಧಕಿಯರ ಮಾಹಿತಿಯನ್ನು ದಾಖಲಿಸಿದ್ದಾರೆ. ನ್ಯಾನೋ ತಂತ್ರಜ್ಞಾನವನ್ನು ಉಪಯೋಗಿಸಿ ಈ ಮಾಹಿತಿಯನ್ನು ಡಿವಿಡಿಯಲ್ಲಿ ಸಂಗ್ರಹಿಸಲಾಗಿದ್ದು, 100 ವರ್ಷ ಹಾಳಾಗದಂತೆ ನಿಗಾ ವಹಿಸಲಾಗಿದೆ. ಸಂಶೋಧನೆ ಕೈಗೊಳ್ಳುವ ವಿದ್ಯಾರ್ಥಿಗಳಿಗೆ ಇದರಿಂದ ಅನುಕೂಲವಾಗಲಿದೆ. ಮಹಿಳೆಯರ ಸಂದರ್ಶನ, ಭೇಟಿಯಿಂದ ಸಂಗೀತಾರ ಒಲವು ಸಂಶೋಧನೆಯತ್ತ ಹೊರಳಿತು. ಹಂಪಿ ಕನ್ನಡ ವಿಶ್ವವಿದ್ಯಾಲಯದಲ್ಲಿ 1999ರಲ್ಲಿ ‘ನೊಂದ ಮಹಿಳೆಯರ ಸಬಲೀಕರಣದಲ್ಲಿ ಮಹಿಳಾ ಸಂಸ್ಥೆಗಳು ವಹಿಸುವ ಪಾತ್ರ’ದ ಬಗ್ಗೆ ಪಿಎಚ್ಡಿ ನೋಂದಣಿ ಮಾಡಿಸಿ, ಇದರ ಅಧ್ಯಯನಕ್ಕೆ ರಾಜ್ಯಾದ್ಯಂತ ಪ್ರವಾಸ ಮಾಡಿ, ಹತ್ತಾರು ಸಂಘಸಂಸ್ಥೆಗಳಿಗೆ ಭೇಟಿ ನೀಡಿದರು. 2004ರಲ್ಲಿ ಪಿಎಚ್ಡಿ ಪಡೆದ ಮೊದಲ ದೃಷ್ಟಿಹೀನ ಮಹಿಳೆ ಎಂಬ ಗೌರವಕ್ಕೂ ಪಾತ್ರರಾದರು. 2005ರಲ್ಲಿ ರಾಜ್ಯಪಾಲರಿಂದ ರಾಜ್ಯ ಪ್ರಶಸ್ತಿ ಸ್ವೀಕರಿಸಿದ ಸಂದರ್ಭದಲ್ಲೇ, ಡಾ.ಎ.ಪಿ.ಜೆ ಅಬ್ದುಲ್ ಕಲಾಂ ಅವರನ್ನು ಭೇಟಿ ಮಾಡುವ ಆಸೆ ವ್ಯಕ್ತಪಡಿಸಿದ್ದರು. 2005ರ ಆಗಸ್ಟ್ನಲ್ಲಿ ಅದೊಂದು ದಿನ ವಿಧಾನಸೌಧದಿಂದ ಕರೆ ಮಾಡಿ, ‘ಕಲಾಂ ಸರ್ ಬಂದಿದ್ದಾರೆ, ಬನ್ನಿ’ ಎಂದರು. ತಂದೆಯೊಡನೆ ಕಲಾಂರನ್ನು ಭೇಟಿಯಾದಾಗ ಅವರು ಸಂಗೀತಾರ ಸಾಧನೆಯ ಬಗ್ಗೆ ಸಂತೋಷ ವ್ಯಕ್ತಪಡಿಸಿದರಲ್ಲದೆ ಯಾವುದೇ ಕಾರಣಕ್ಕೂ ಸಂಶೋಧನೆಯ ಕೆಲಸವನ್ನು ನಿಲ್ಲಿಸಬೇಡಿ ಎಂದು ಮುಂದಿನ ಸಾಧನೆಗೆ ಹುರಿದುಂಬಿಸಿದರು.
ಇದಕ್ಕೂ ಮುನ್ನ, 1992ರಲ್ಲಿ 40ನೇ ಕಾಮನ್ವೆಲ್ತ್ ಡೇ ಸೆಲೆಬ್ರೇಷನ್ಗೆ ಇಂಗ್ಲೆಂಡ್ಗೆ ಎಲಿಜಬೆತ್ ರಾಣಿಯ ಜತೆ ಒಂದು ತಿಂಗಳು ರಾಯಲ್ ಗೇಸ್ಟ್ ಆಗಿ ಸಂಗೀತಾರನ್ನು ಬ್ರಿಟನ್ಗೆ ಕರೆಸಿಕೊಂಡಿದ್ದರು. ಇಂಟಿಗ್ರೇಟೆಡ್ ಎಜುಕೇಶನ್ ಪದ್ಧತಿ ಯಾವ ರೀತಿ ಕೆಲಸ ಮಾಡುತ್ತಿದೆ ಎಂದು ಅರಿಯಲು ಸಂಗೀತಾ ಸೇರಿದಂತೆ ಇತರ ಐದು ದೇಶಗಳ ಅಂಗವಿಕಲ ಮಕ್ಕಳನ್ನು ಆಹ್ವಾನಿಸಲಾಗಿತ್ತು. ಈ ಮೊದಲ ವಿದೇಶ ಪ್ರವಾಸ ಸಂಗೀತಾರ ಆತ್ಮವಿಶ್ವಾಸವನ್ನು ಹೆಚ್ಚಿಸಿತು. ಆ ಬಳಿಕ 2003ರಲ್ಲಿ ಪಾಕಿಸ್ತಾನದಲ್ಲಿ ಏಷಿಯನ್ ಬ್ಲೈಂಡ್ ಯೂನಿಯನ್ನಿಂದ ಆಯೋಜಿಸಲಾಗಿದ್ದ ನಾಲ್ಕು ದಿನಗಳ ಯೂತ್ ಕಾನ್ಪರೆನ್ಸ್ನಲ್ಲಿ ಭಾಗವಹಿಸಿ, ಪ್ರೇರಣಾದಾಯಿಯಾಗಿ ಮಾತನಾಡಿದರು. 2008ರಲ್ಲಿ ಭಾರತದ ಉಪರಾಷ್ಟ್ರಪತಿಗಳಿಂದ ರಾಷ್ಟ್ರಪ್ರಶಸ್ತಿ ಸ್ವೀಕರಿಸಿದರು. ಸಂಗೀತಾರ ಜೀವನ ಸಾಧನೆ ಸಿಬಿಎಸ್ಇ 4ನೇ ತರಗತಿಯ ಮಕ್ಕಳಿಗೆ ಪಠ್ಯವಾಗಿದ್ದು, ಮತ್ತೊಂದು ಹೆಮ್ಮೆಯ ಕ್ಷಣ. ‘ಗಟಞಛ್ಞಿ’ಠ ಣ್ಟಜಚ್ಞಜಿಠಚಠಿಜಿಟ್ಞಠ ಜ್ಞಿ Mಟಛಛ್ಟಿ್ಞ ಛ್ಟಿಚ’, ’ಖಜಛಿ ಉಞಟಟಡಿಛ್ಟಿಞಛ್ಞಿಠಿ ಟ್ಛ ್ಖಠ್ಠಚ್ಝ್ಝ ಜಿಞಟಚಜ್ಟಿಛಿಛ ಡಿಟಞಛ್ಞಿ ಠಿಜ್ಟಟ್ಠಜಜ ಠಟ್ಝ್ಠಜಿಟ್ಞ ಟ್ಛ ಠಿಜಛಿಜ್ಟಿ ಠಟ್ಚಜಿಟಟಠಢ್ಚಜಟ್ಝಟಜಜ್ಚಿಚ್ಝ ಟ್ಟಟಚ್ಝಿಛಿಞಠ’, ’ಉಟ್ಞಟಞಜ್ಚಿ ಉಞಟಟಡಿಛ್ಟಿಞಛ್ಞಿಠಿ ಟ್ಛ ್ಖಠ್ಠಚ್ಝ್ಝ ಐಞಟಚಜ್ಟಿಛಿಛ ಗಟಞಛ್ಞಿ’, ‘ಏಚ್ಞಛಠ ಆಛಿಢಟ್ಞಛ ಏಟ್ಟಜ್ಢಿಟ್ಞ’ ಹಾಗೂ ‘ಹೊಸ ಮೈಲಿಗಲ್ಲು ದಾಟುತ್ತಿರುವ ನಾರಿಯರು’- ಇವು ಸಂಗೀತಾ ಅವರು ಬರೆದ ಪುಸ್ತಕಗಳು.
ಮಹಿಳೆ ಮತ್ತು ಮಕ್ಕಳ ಸಮಸ್ಯೆಯನ್ನು ಹತ್ತಿರದಿಂದ ಬಲ್ಲ ಸಂಗೀತಾ ಆ ಸಮಸ್ಯೆಗಳಿಗೆ ಸ್ಪಂದಿಸಲು ತಮ್ಮ ಮನೆಯಲ್ಲೇ ಸಂಜೆಯ ಸಮಯದಲ್ಲಿ ಉಚಿತವಾಗಿ ಆಪ್ತಸಮಾಲೋಚನೆ ಮಾಡಿ, ಸ್ಪಂದಿಸುತ್ತಿದ್ದಾರೆ. ಅಷ್ಟೇ ಅಲ್ಲದೆ, ಅಂಗವಿಕಲರಿಗೆ ಸಿಗಬೇಕಾದ ಹಕ್ಕುಗಳಿಗಾಗಿ ಹೋರಾಡುತ್ತಿದ್ದಾರೆ, ಆ ಬಗ್ಗೆ ಜನರಲ್ಲಿ ಅರಿವನ್ನು ಮೂಡಿಸುತ್ತಿದ್ದಾರೆ. ‘ಇಷ್ಟೆಲ್ಲ ಸಾಧನೆ ಮಾಡಿರುವ ನೀವು ಜೀವನವನ್ನು ಹೇಗೆ ವ್ಯಾಖ್ಯಾನಿಸುತ್ತೀರಿ?’ ಎಂದು ಕೇಳಿದಾಗ- ‘ಎಲ್ಲರ ಜೀವನದಲ್ಲೂ ಸವಾಲುಗಳು ಬರುತ್ತವೆ. ಅವುಗಳ ಸ್ವರೂಪ ಬೇರೆ. ಆದರೆ, ಆ ಸವಾಲುಗಳನ್ನು ಧೈರ್ಯದಿಂದ ಎದುರಿಸಬೇಕು. ಪರಿಸ್ಥಿತಿಯನ್ನು ಸ್ವೀಕರಿಸಿ, ಮನೋಸ್ಥೈರ್ಯದಿಂದ ಮುಂದೆ ಸಾಗಿದಾಗ ಏನಾದರೂ ಸಾಧನೆ ಮಾಡಲು ಸಾಧ್ಯ (080-26596658)’ ಎನ್ನುವ ಸಂಗೀತಾ ‘ಮೊದಲಿನ ಪರಿಸ್ಥಿತಿಗಿಂತ ಈಗ ಸಾಕಷ್ಟು ಸುಧಾರಣೆಯಾಗಿದೆ. ಅಂಗವಿಕಲರಿಗೆ ಅವಕಾಶಗಳು ಹೆಚ್ಚುತ್ತಿವೆ’ ಎಂದು ಸಮಾಧಾನ ವ್ಯಕ್ತಪಡಿಸಿದರು.
ಇದುವೆ ತಾನೇ ಬದುಕಿನ ಸೊಬಗು, ಸೌಂದರ್ಯ ಮತ್ತು ಆಂತರ್ಯದ ಶಕ್ತಿಯ ಅನಾವರಣ! ಜೀವನ ಸಾಧನೆಯ ಸಂಗೀತವಾಗಲಿ, ವಿಷಾದದ ಗೂಡಲ್ಲ!
(ಲೇಖಕರು ‘ವಿಜಯವಾಣಿ’ ಸಹಾಯಕ ಸುದ್ದಿ ಸಂಪಾದಕರು)