ಅಂಕಣ

ಕುತೂಹಲ ಕೆರಳಿಸಿದ ಸಾವು: ಆ ಕ್ಷಣ ಅಂಕಣ..

ಮಹಾನಗರವೊಂದರ ದೊಡ್ಡ ಅಪಾರ್ಟ್​ವೆುಂಟ್ ಸಂಕೀರ್ಣ ಅದಾಗಿದ್ದು ಅದರಲ್ಲಿ ಹತ್ತು ವಸತಿ ಬ್ಲಾಕ್​ಗಳಿದ್ದು 3000 ಮನೆಗಳಿದ್ದವು. ಈ ಸಂಕೀರ್ಣದ ಎ ಬ್ಲಾಕ್​ನ 6ನೇ ಮಹಡಿಯಲ್ಲಿ ಪ್ರಹ್ಲಾದ್ ಮತ್ತು ಶಾಂತಾ ದಂಪತಿ ವಾಸಿಸುತ್ತಿದ್ದರು. ಅವರಿಬ್ಬರೂ ಸಾಫ್ಟ್್ಟೇರ್ ಉದ್ಯೋಗಿಗಳಾಗಿದ್ದು, ಅವರ ಮೂರೂವರೆ ವರ್ಷದ ಮಗ ನರ್ಸರಿ ಶಾಲೆಯಲ್ಲಿ ಓದುತ್ತಿದ್ದ. ಶಾಂತಳ ಮಾತಾಪಿತರೂ ಅದೇ ಸಂಕೀರ್ಣದ ಜಿ ಬ್ಲಾಕಿನಲ್ಲಿ ವಾಸಿಸುತ್ತಿದ್ದರು. ಅವರು ಶಾಂತಾ ಇಲ್ಲದಾಗ ಅವಳ ಮಗನನ್ನು ಸಂಭಾಳಿಸುತ್ತಿದ್ದರು. ವರ್ಷಾರಂಭದಲ್ಲಿ ಶಾಂತಾಳ ಎದುರಿನ ಅಪಾರ್ಟ್​ವೆುಂಟ್​ಗೆ ಉತ್ತರ ಭಾರತದ ಸಂದೀಪ್ ಎನ್ನುವ ವೈದ್ಯ ಬಾಡಿಗೆಗೆ ಬಂದ. ಆತ ಸೂಪರ್ ಸ್ಪೆಷಾಲಿಟಿ ಪದವಿಗಾಗಿ ಮೆಡಿಕಲ್ ಕಾಲೇಜೊಂದಕ್ಕೆ ಸೇರಿದ್ದ. ಆತನ 26 ವರ್ಷ ವಯಸ್ಸಿನ ಪತ್ನಿ ಸ್ಮಿತಾ ಗೃಹಿಣಿಯಾಗಿದ್ದಳು. ಊರಿಗೆ ಹೊಸಬಳಾಗಿದ್ದ ಕಾರಣ ಸ್ಮಿತಾ ತನ್ನ ಅವಶ್ಯಕತೆಗಳಿಗಾಗಿ ಶಾಂತಾಳನ್ನು ಹೆಚ್ಚಾಗಿ ಅವಲಂಬಿಸುತ್ತಿದ್ದಳು.

ಆ ವರ್ಷದ ಗೌರಿ ವ್ರತವನ್ನು ತನ್ನ ಮನೆಯಲ್ಲಿ ಆಚರಿಸಿದ ಶಾಂತಾ, ಸಂಬಂಧಿಕರನ್ನೂ ಹಾಗೂ ಅಕ್ಕಪಕ್ಕದವರನ್ನೂ ಸಂಜೆಯ ಅರಿಶಿನ ಕುಂಕುಮಕ್ಕೆ ತನ್ನ ಮನೆಗೆ ಆಹ್ವಾನಿಸಿದಳು. ಸ್ಮಿತಾ ಬೇರೆ ಆಹ್ವಾನಿತರಿಗಿಂತ ಅರ್ಧ ಗಂಟೆ ಮುಂಚೆಯೇ ಶಾಂತಾಳ ಮನೆಗೆ ಬಂದು ಅತಿಥಿಗಳೆಲ್ಲ ಹೋದ ನಂತರವೇ ತನ್ನ ಮನೆಗೆ ಮರಳಿದಳು. ಮಾರನೆಯ ದಿನ ಗಣಪತಿ ಹಬ್ಬವಾಗಿದ್ದು ಬೆಳಗ್ಗೆ ಪೂಜಾ ಸಾಮಗ್ರಿಗಳನ್ನು ತರಲು ಪ್ರಹ್ಲಾದ್ ಹೊರಟಾಗ ಮನೆಯ ಮುಂಬಾಗಿಲಿನ ಕೀಲಿ ಕೈ ಸಿಗಲಿಲ್ಲ. ಕಡೆಗೆ ಡೂಪ್ಲಿಕೇಟ್ ಕೀಲಿಕೈ ತೆಗೆದುಕೊಂಡ ಆತ ಶಾಂತಾಳಿಗೆ ಕೀಲಿಕೈ ಬಗ್ಗೆ ತಿಳಿಸಿದ. ಅವಳು ಹುಡುಕಿದರೂ ಸಿಗಲಿಲ್ಲ. ಆಕೆ ಅಪಾರ್ಟ್​ವೆುಂಟ್ ನಿವಾಸಿಗಳ ವಾಟ್ಸಪ್ ಗ್ರೂಪ್​ನಲ್ಲಿ ತನ್ನ ಕೀಲಿಕೈ ಕಳೆದಿರುವುದಾಗಿ ಮಾಹಿತಿಯಿತ್ತು ಯಾರಿಗಾದರೂ ಸಿಕ್ಕರೆ ಮರಳಿಸಲು ವಿನಂತಿಸಿದಳು.

ಗಣಪತಿ ಹಬ್ಬವನ್ನು ಸಾಮೂಹಿಕವಾಗಿ ಆಚರಿಸಿದ ಅಪಾರ್ಟ್​ವೆುಂಟ್ ನಿವಾಸಿಗಳು ಏಳನೆಯ ದಿನ ಗಣಪತಿ ವಿಸರ್ಜನೆಯ ಸಂಬಂಧ ಮದ್ಯಾಹ್ನದ ಭೋಜನವನ್ನೇರ್ಪಡಿಸಿದ್ದರು. ಶಾಂತಾಳ ಕುಟುಂಬವಲ್ಲದೆ ಅಪಾರ್ಟ್​ವೆುಂಟ್ ಸಂಕೀರ್ಣದ ನೂರಾರು ನಿವಾಸಿಗಳು ಊಟಕ್ಕೆ ಹೋದರು. ಬೇಗಬೇಗನೇ ಊಟ ಮುಗಿಸಿದ ಶಾಂತಾಳ ತಂದೆ ರಾಘವೇಂದ್ರರಾವ್ ತಮ್ಮ ಮನೆಗೆ ಹೋಗಲು ಸಿದ್ಧರಾದಾಗ ಶಾಂತಾ ಅವರನ್ನು ತನ್ನ ಫ್ಲ್ಯಾಟಿಗೆ ಹೋಗಿ ವಿರಮಿಸಲು ಸೂಚಿಸಿ ಅವರಿಗೆ ತನ್ನ ಮನೆಯ ಕೀಲಿಕೈ ಕೊಟ್ಟಳು. ರಾವ್ ಅವರು ಶಾಂತಾಳ ಮನೆಗೆ ಹೋಗಿ ಹಾಲ್​ನಲ್ಲಿ ಆಸೀನರಾಗಿ ಟೀವಿ ಕಾರ್ಯಕ್ರಮವೊಂದನ್ನು ನೋಡುವುದರಲ್ಲಿ ತಲ್ಲೀನರಾದರು.

ಇನ್ನೇನು ಊಟ ಮುಗಿಯುವ ಹೊತ್ತಿಗೆ ಅಪಾರ್ಟ್​ವೆುಂಟ್ ನಿವಾಸಿಗಳ ಸಮಿತಿಯ ಅಧ್ಯಕ್ಷರ ಬಳಿಗೆ ಒಬ್ಬ ಸೆಕ್ಯುರಿಟಿ ಗಾರ್ಡ್ ಬಂದ. ಈಗಷ್ಟೇ ಮಹಡಿಯ ಮೇಲಿಂದ ಯಾವುದೋ ಭಾರಿ ವಸ್ತು ಬಿದ್ದ ಸದ್ದಾಯಿತು. ನಾನು ಅಲ್ಲಿ ಹೋಗಿ ನೋಡಿದೆ. ಎ ಮತ್ತು ಬಿ ಬ್ಲಾಕಿನ ನಡುವಿನ ರಸ್ತೆಯ ಮೇಲೆ ಹೆಣ್ಣುಮಗಳೊಬ್ಬಳ ದೇಹ ಬಿದ್ದಿದೆ ಎಂದು ಗಾಬರಿಯಿಂದ ಹೇಳಿದ. ಊಟ ಮಾಡುತ್ತಿದ್ದ ಬಹಳಷ್ಟು ಜನರು ಕೈಯನ್ನೂ ತೊಳೆಯದೆ ಅವನ ಹಿಂದೆ ಓಡಿದರು.

ಸಿಮೆಂಟಿನ ರಸ್ತೆಯ ಮೇಲೆ ಒಂದು ಹೆಣ್ಣುಮಗಳ ದೇಹ ಬೋರಲಾಗಿ ಬಿದ್ದಿತ್ತು. ಮೃತಳು ಹಳದಿ ಬಣ್ಣದ ಸಲ್ವಾರ್ ಮತ್ತು ನೀಲಿ ಬಣ್ಣದ ಕುರ್ತಾ ತೊಟ್ಟಿದ್ದಳು. ತಲೆಗೆ ಪೆಟ್ಟು ಬಿದ್ದಿದ್ದು ಧಾರಾಕಾರವಾಗಿ ರಕ್ತವು ಸೋರಿ ತಲೆಯ ಪಕ್ಕದಲ್ಲಿಯೇ ರಕ್ತದ ಮಡುವಾಗಿತ್ತು. ಕ್ಷಣಾರ್ಧದಲ್ಲಿ ಈ ಸುದ್ದಿ ಹರಡಿ ಸುತ್ತಲೂ ಜನ ನೆರೆದರು. ಶವವನ್ನು ನೋಡಿದ ಶಾಂತಾ ಅದು ತನ್ನ ಎದುರುಮನೆಯ ಸ್ಮಿತಾಳಂತೆ ಕಾಣುತ್ತಿದೆ ಎನ್ನುತ್ತಿರುವಂತೆಯೇ ಅಲ್ಲಿಗೆ ಡಾ. ಸಂದೀಪ್ ಸಹಾ ಬಂದ. ಶವದ ಬಳಿಗೆ ಹೋಗಿ ಮೃತಳು ಸ್ಮಿತಾಳೆಂದೇ ಖಾತ್ರಿಪಡಿಸಿದ. ನನ್ನ ಪತ್ನಿಯನ್ನು ಯಾರೋ ಮರ್ಡರ್ ಮಾಡಿದ್ದಾರೆ ಎಂದು ಜೋರಾಗಿ ಕಿರಚುತ್ತಾ ತನ್ನ ಎದೆ ಬಡಿದುಕೊಳ್ಳತೊಡಗಿದ.

ಸ್ಮಿತಾ ಕೊಲೆಯಾಗಿರುವಳೆಂದು ಡಾ. ಸಂದೀಪ್ ಹೇಳುತ್ತಿರುವುದೇಕೆಂದು ಅಚ್ಚರಿಗೊಂಡ ಕೆಲವು ನಿವಾಸಿಗಳು ಅವನನ್ನು ಸಮಾಧಾನ ಮಾಡಿ ಆ ಬಗ್ಗೆ ವಿಚಾರಿಸಿದರು. ‘ನಾನು ಮನೆಯನ್ನು ಬಿಟ್ಟಾಗ ಸ್ಮಿತಾ ಲವಲವಿಕೆಯಿಂದಲೇ ಇದ್ದಳು. ಅವಳಿಗೆ ಯಾವ ಚಿಂತೆಯೂ ಇರಲಿಲ್ಲ. ಖಿನ್ನತೆಯೂ ಇರದಿದ್ದರಿಂದ ಆಕೆ ಆತ್ಮಹತ್ಯೆ ಮಾಡಿಕೊಳ್ಳಲು ಸಾಧ್ಯವೇ ಇಲ್ಲ. ಅವಳು ಮನೆಯ ಬಾಲ್ಕನಿಯಿಂದ ಆಕಸ್ಮಿಕವಾಗಿ ಕೆಳಗೆ ಬೀಳಲೂ ಸಾಧ್ಯವಿಲ್ಲ ಎನ್ನುವುದು ನಿಮಗೂ ಗೊತ್ತು. ಹೀಗಾಗಿ, ಅವಳ ಸಾವು ಕೊಲೆಯಾಗಿರಬೇಕಲ್ಲವೇ’ ಎಂದ. ‘ನೀವು ಈ ಊರಿಗೆ ಹೊಸಬರು, ನಿಮಗೆ ಇಲ್ಲಿ ಯಾವ ವೈರಿಯೂ ಇಲ್ಲ. ಯಾರು ತಾನೇ ಆಕೆಯನ್ನು ಕೊಲೆ ಮಾಡುತ್ತಾರೆ?’ ಎಂದು ಕೆಲವರು ಕೇಳಿದಾಗ ಸಂದೀಪ್, ‘ಯಾರೋ ಕಳ್ಳರು ನಮ್ಮ ಮನೆಗೆ ನುಗ್ಗಿ ಅವಳನ್ನು ಕೊಲೆ ಮಾಡಿ ಕೆಳಗೆಸೆದಿರಬಹುದಲ್ಲವೇ’ ಎಂದ. ಅಗವನನ್ನು ಅಲ್ಲಿದ್ದ ಕೆಲವರು ಪೊಲೀಸ್ ಠಾಣೆಗೆ ಕರೆದುಕೊಂಡು ಹೋದರು.

ತನ್ನ ಪತ್ನಿ ಸ್ಮಿತಾಳನ್ನು ಯಾರೋ ಕೊಲೆ ಮಾಡಿದ್ದಾರೆ ಎಂದು ಸಂದೀಪ್ ಲಿಖಿತ ದೂರನ್ನು ಕೊಟ್ಟ. ಎಫ್​ಐಆರ್ ದಾಖಲಿಸಿದ ಪೊಲೀಸರು ಸ್ಥಳಕ್ಕೆ ಬಂದರು. ಸ್ಥಳ ಪಂಚನಾಮೆಯನ್ನು ಮಾಡಿ, ಶವದ ಸುತ್ತ ಪರದೆಗಳನ್ನು ಹಾಕಿ ಹೆಣ್ಣು ಮಕ್ಕಳ ಸಮ್ಮುಖದಲ್ಲಿ ಶವದ ಮಹಜರ್ ಮಾಡಿದರು. ಮೃತಳ ತಲೆ ಒಡೆದಿದ್ದು ತೀವ್ರ ರಕ್ತಸ್ರಾವವಾಗಿತ್ತು. ಶವದ ಭುಜ, ಸೊಂಟ, ಹಾಗೂ ಕಾಲಿನ ಮೇಲೆ ಗಾಯಗಳಾಗಿದ್ದವು. ಮೃತಳ ಬ್ರಾದ ಒಳಗೆ ಒಂದು ಕೀ ಗೊಂಚಲು ಮತ್ತು ನಾಲ್ಕು ಪುಟ್ಟ ಆಭರಣಗಳ ಪೆಟ್ಟಿಗೆಗಳಿದ್ದವು. ಮೃತಳ ಪ್ಯಾಂಟಿಯೊಳಗೆ ಐದು ಆಭರಣ ಡಬ್ಬಿಗಳು ಮತ್ತು ಒಂದು ಸಣ್ಣ ಪಾಲಿಥೀನ್ ಕವರ್ ಇದ್ದವು. ಕವರ್​ನಲ್ಲಿ ವಿವಿಧ ಮುಖಬೆಲೆಯ ಒಟ್ಟು 430 ಡಾಲರ್ ನೋಟುಗಳಿದ್ದವು. ಆಭರಣ ಡಬ್ಬಿಗಳಲ್ಲಿ ಎರಡು ವಜ್ರದ ಉಂಗುರಗಳು, ಎರಡು ಜತೆ ವಜ್ರದ ಬೆಂಡೋಲೆಗಳು, ಒಂದು ವಜ್ರದ ಮೂಗುತಿ, ಒಂದು ಕೆಂಪಿನ ನೆಕ್​ಲೇಸ್, ಒಂದು ಜತೆ ಕೆಂಪಿನ ಬಳೆ ಮತ್ತು ಕೆಲವು ಬಂಗಾರದ ಸರಗಳಿದ್ದವು. ಪೊಲೀಸರು ಅಲ್ಲಿದ್ದ ಸಂದೀಪ್​ನನ್ನು ಆ ಆಭರಣಗಳ ಬಗ್ಗೆ ಕೇಳಿದಾಗ ತನಗೇನೂ ಗೊತ್ತಿಲ್ಲವೆಂದ. ಕೀಲಿಕೈ ಬಗ್ಗೆ ಕೇಳಿದಾಗ ಅದು ತನ್ನ ಮನೆಯದ್ದೇ ಇರಬಹುದೇನೋ, ಗೊತ್ತಿಲ್ಲ ಎಂದ.

ಪೊಲೀಸರು ಸಂದೀಪನ ಮನೆಯನ್ನು ಪರಿಶೀಲಿಸಲು ಅಲ್ಲಿಗೆ ಹೋದರು. ಫ್ಲ್ಯಾಟಿಗೆ ಬೀಗ ಹಾಕಿತ್ತು. ಶವದ ಮೈಮೇಲೆ ಸಿಕ್ಕ ಕೀಲಿಕೈನಿಂದ ಅದನ್ನು ತೆರೆಯಲು ಆಗಲಿಲ್ಲ. ಆಗ ಸಂದೀಪನ ಕೀಲಿಕೈ ಬಳಸಿ ಫ್ಲ್ಯಾಟಿನ ಒಳಗೆ ಹೋದಾಗ ಅಲ್ಲಿ ಯಾರೇ ಹೊರಗಿನವರು ಬಂದ, ಇಲ್ಲವೇ ಹೋರಾಟ ನಡೆದ ಒಂದೂ ಕುರುಹುಗಳಿರಲಿಲ್ಲ. ಸಂದೀಪನ ಮನೆಯ ಬಾಲ್ಕನಿಯಿಂದ ಕೆಳಗೆ ನೋಡಿದಾಗ ಕೆಳಗಿದ್ದ ರಸ್ತೆಯ ಮೇಲೆ ಸ್ಮಿತಾಳ ಶವವಿರಲಿಲ್ಲ.

ಸ್ಮಿತಾ ತಾರಸಿಯನ್ನೇರಿ ಅಲ್ಲಿಂದ ಕೆಳಗೆ ಬಿದ್ದಿರಬಹುದೇ ಎಂದು ನೋಡಲು ಪೊಲೀಸರು ಹೋಗುತ್ತಿರುವಾಗ ಅವರನ್ನು ಎದುರು ಮನೆಯ ಶಾಂತಾ ಅಡ್ಡಗಟ್ಟಿದಳು. ಗಾಬರಿಯಿಂದ, ‘ಸಾರ್, ಇಲ್ಲಿ ಬಂದು ನೋಡಿ, ನಮ್ಮ ಮನೆಗೆ ಕಳ್ಳರು ನುಗ್ಗಿ ನಮ್ಮ ವಸ್ತುಗಳನ್ನು ದೋಚಿದ್ದಾರೆ’ ಎಂದಳು. ಪೊಲಿಸರು ಅವಳ ಫ್ಲ್ಯಾ್ಲಗೆ ಹೋದರು. ಅವಳ ಬೆಡ್​ರೂಂನಲ್ಲಿದ್ದ ಗೋದ್ರೆಜ್ ಅಲ್ಮೇರಾ ದೊಡ್ಡದಾಗಿ ತೆರೆದಿತ್ತು. ಅಲ್ಲಿದ್ದ ವಸ್ತುಗಳು ಚೆಲ್ಲಾಪಿಲ್ಲಿಯಾಗಿ ಕೆಳಗೆ ಬಿದ್ದಿದ್ದವು. ಅಲ್ಮೆರಾದ ಸೇಫಿನಲ್ಲಿದ್ದ ಆಭರಣಗಳು ಮತ್ತು ನಗದು ಕಾಣುತ್ತಿಲ್ಲ ಎಂದಳು ಶಾಂತಾ. ಅವಳ ರೂಮಿನಿಂದ ಬಾಲ್ಕನಿಗೆ ಹೋಗುವ ಬಾಗಿಲು ತೆರೆದಿತ್ತು. ಪೊಲಿಸರು ಬಾಲ್ಕನಿಗೆ ಹೋಗಿ ಕೆಳಗೆ ನೋಡಿದಾಗ ಅದರ ಕೆಳಗಡೆಯ ರಸ್ತೆಯ ಮೇಲೆಯೇ ಸ್ಮಿತಾಳ ದೇಹ ಬಿದ್ದಿತ್ತು.

ಪೊಲೀಸರು ಬೆರಳಚ್ಚು ತಜ್ಞರನ್ನು ಕರೆಸಿ ಶಾಂತಾಳ ಅಲ್ಮೆರಾ, ಬಾಲ್ಕನಿ, ಬಾಗಿಲು ಮುಂತಾದೆಡೆಯಿದ್ದ ಬೆರಳು ಗುರುತುಗಳನ್ನು ಪಡೆಯಲು ಸೂಚಿಸಿದರು. ನಂತರ ಸ್ಮಿತಾಳ ಒಳ ಉಡುಪಿನಲ್ಲಿ ಸಿಕ್ಕ ವಸ್ತುಗಳನ್ನು ಗುರುತಿಸಲು ಶಾಂತಾಳನ್ನು ಕೋರಿದರು. ಆಗ ಶಾಂತ ಅವಳ ಬಳಿಯಿದ್ದ ಕೀಲಿಕೈಯನ್ನು ತನ್ನದೇ ಎಂದು ಗುರುತಿಸಿದಳು. ಇದಲ್ಲದೆ, ಶವದ ಮೈಮೇಲೆ ಸಿಕ್ಕ ಅಷ್ಟೂ ಆಭರಣಗಳು ಮತ್ತು ಡಾಲರ್​ಗಳು ತಮ್ಮದೆಂದೇ ಶಾಂತಾ ಮತ್ತು ಪ್ರಹ್ಲಾದ್ ಗುರುತಿಸಿ ಆ ಆಭರಣಗಳನ್ನು ಖರೀದಿಸಿದ್ದ ರಸೀತಿಗಳನ್ನೂ ಪೊಲೀಸರಿಗೆ ತೋರಿಸಿದರು. ಶಾಂತಾಳ ಮನೆಯ ಮುಂಬಾಗಿಲನ್ನು ಸ್ಮಿತಾಳ ದೇಹದ ಮೇಲೆ ಸಿಕ್ಕ ಕೀಲಿಕೈನಿಂದ ತೆಗೆದಾಗ ಮರಣದ ಕಾರಣ ಏನೆಂದು ಊಹಿಸುವುದು ಪೊಲೀಸರಿಗೆ ಸುಲಭವಾಯಿತು. ಅವರು ಶಾಂತಾಳಿಂದ ಮನೆಗಳ್ಳತನದ ದೂರೊಂದನ್ನು ಬರೆಸಿಕೊಂಡರು.

ಗೌರಿ ಹಬ್ಬದ ದಿನವೇ ಸ್ಮಿತಾ ಶಾಂತಾಳ ಮನೆಯ ಟೇಬಲ್ಲಿನ ಮೇಲಿದ್ದ ಮುಂಬಾಗಿಲಿನ ಕೀಲಿಕೈಯನ್ನು ಕದ್ದಿದ್ದಳು. ಮಧ್ಯಾಹ್ನ ಅಪಾರ್ಟ್​ವೆುಂಟ್ ಸಮುಚ್ಚಯದ ಬಹುತೇಕ ನಿವಾಸಿಗಳು ಭೋಜನಕ್ಕೆಂದು ಹೋದಾಗ ಆಕೆ ಶಾಂತಾಳ ಮನೆಯನ್ನು ಕದ್ದ ಕೀಲಿಕೈ ಮೂಲಕ ಪ್ರವೇಶಿಸಿದಳು. ಶಾಂತಾಳ ಬೆಡ್​ರೂಮಿಗೆ ಹೋಗಿ ಅಲ್ಮೆರಾದಲ್ಲಿಯೇ ಇದ್ದ ಬೀಗದಕೈ ಮೂಲಕ ಅದನ್ನು ತೆರೆದು ಶಾಂತಾಳ ಆಭರಣಗಳನ್ನು ದೋಚಿ ತನ್ನ ಒಳ ಉಡುಪಿನಲ್ಲಿ ಅಡಗಿಸಿಕೊಂಡಿದ್ದಳು. ಆದರೆ, ಆಕೆ ರೂಮಿನಲ್ಲಿರುವಾಗಲೇ ಯಾರೋ ಶಾಂತಾಳ ಫ್ಲ್ಯಾಟಿನ ಬಾಗಿಲನ್ನು ತೆರೆದು ಒಳಗೆ ಬಂದ ಶಬ್ದವನ್ನು ಕೇಳಿ ಹೆದರಿದ ಸ್ಮಿತಾ ತಾನು ಸಿಕ್ಕಿಬೀಳುವೆ ಎಂದು ಬಾಲ್ಕನಿಯಿಂದ ಕೆಳಗೆ ಧುಮುಕಿದ್ದಳು.

ಮುಂದೆ ಶವದ ಬೆರಳಚ್ಚು ಗುರುತುಗಳನ್ನು ಪಡೆದ ಪೊಲೀಸರು ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದರು. ಒಂದು ವಾರದ ನಂತರ ವರದಿ ನೀಡಿದ ತಜ್ಞರು ಅಂದಾಜು 50 ಅಡಿಗಳಷ್ಟು ಎತ್ತರದಿಂದ ಧುಮುಕಿದ ಪರಿಣಾಮವಾಗಿ ಸ್ಮಿತಾಳ ತಲೆಯೊಡೆದು ಆಕೆ ಸತ್ತಿದ್ದಾಳೆ ಎಂಬ ಅಭಿಪ್ರಾಯವನ್ನು ನೀಡಿದರು. ಶಾಂತಾಳ ಮನೆಯ ಅಲ್ಮೆರಾ ಮತ್ತು ಬಾಲ್ಕನಿ ಬಾಗಿಲಿನ ಮೇಲೆ ಸಿಕ್ಕ ಕೆಲವು ಬೆರಳಚ್ಚು ಗುರುತುಗಳು ಸ್ಮಿತಾಳ ಬೆರಳಚ್ಚುಗಳೊಂದಿಗೆ ಹೋಲಿಕೆಯಾದವು.

ಪೊಲೀಸರು ಸಂದೀಪ್ ಕೊಟ್ಟ ದೂರನ್ನು ಸುಳ್ಳೆಂದು ಪರಿಗಣಿಸಿದರು. ಶಾಂತಾಳ ದೂರಿನಲ್ಲಿ ಆರೋಪಿಯೇ ಸತ್ತ ಕಾರಣ ಪ್ರಕರಣವನ್ನು ಮುಕ್ತಾಯ ಮಾಡುತ್ತಿರುವುದಾಗಿ ನ್ಯಾಯಾಲಯಕ್ಕೆ ತಿಳಿಸಿದರು. ತಪ್ಪಿತಸ್ಥ ಮನೋಭಾವವೇ ಸಾವಿನ ಅತಿ ನೋವಿನ ಒಡನಾಡಿ ಎಂದಿದ್ದಾಳೆ ಫ್ರೆಂಚ್ ಫ್ಯಾಷನ್ ಸಾಮ್ರಾಜ್ಞಿ ಕೋಕೋ ಛಾನೆಲ್. ತನ್ನ ಅಪರಾಧ ಬಯಲಾಗಿ ಮಾನ ಹೋಗುವ ನೋವಿನಿಂದ ಪ್ರಾಣ ತ್ಯಜಿಸಿದ ಸ್ಮಿತಾಳ ಜೀವನ ದುಃಖಾಂತ್ಯವಾದದ್ದು ವಿಷಾದಕರ.