ಅಂಕಣ

ಗುರುಮನೆ ದಸರಾ: ಲಿಂಗಸುಗೂರಿನಲ್ಲಿ ಶ್ರೀ ರಂಭಾಪುರಿ ಜಗದ್ಗುರುಗಳ ಶರನ್ನವರಾತ್ರಿ ಮಹೋತ್ಸವ

ಶಕ್ತಿವಿಶಿಷ್ಟಾದ್ವೈತ ಸಿದ್ಧಾಂತ ಪ್ರತಿಪಾದಿಸುವ ವೀರಶೈವ ಧರ್ಮದಲ್ಲಿ ಶಿವನಂತೆ ಶಕ್ತಿಯನ್ನೂ ಆರಾಧಿಸಲಾಗುತ್ತದೆ. ಅಂತಹ ಶಕ್ತಿ ಆರಾಧನೆಯ ಪರ್ವಕಾಲವಾದ ನವರಾತ್ರಿಯಲ್ಲಿ ಶ್ರೀ ರಂಭಾಪುರಿ ಜಗದ್ಗುರುಗಳ ದಸರಾ ದರ್ಬಾರ್ ಕಾರ್ಯಕ್ರಮ ನಡೆಯುತ್ತದೆ. ಈ ಸಲದ ವಿಶೇಷಗಳೇನು ಎಂಬುದರ ವಿವರ ಇಲ್ಲಿದೆ.

| ಪ್ರಶಾಂತ ರಿಪ್ಪನ್​ಪೇಟೆ  
ಕರ್ನಾಟಕದ ಸಾಂಸ್ಕೃತಿಕ ಹಿರಿಮೆಯು ಜಾಗತಿಕವಾಗಿ ಪರಿಚಯಗೊಂಡಿರುವುದು ನಾಡಹಬ್ಬ ದಸರಾ ಮಹೋತ್ಸವದಿಂದ. ವಿಶ್ವವಿಖ್ಯಾತ ಜಂಬೂಸವಾರಿಯನ್ನು ವೀಕ್ಷಿಸಲು ಜಗತ್ತಿನ ಮೂಲೆ ಮೂಲೆಗಳಿಂದ ಪ್ರವಾಸಿಗರು ಆಗಮಿಸುತ್ತಾರೆ. ಇಂತಹ ದಸರಾ ಮಹೋತ್ಸವಗಳಲ್ಲಿ ಎರಡು ಪ್ರಮುಖ ಭಾಗಗಳಿದ್ದು, ಒಂದು ಅರಮನೆ ದಸರಾ, ಇನ್ನೊಂದು ಗುರುಮನೆ ದಸರಾ. ‘ಅರಮನೆ ದಸರಾ’ ಸಾಂಸ್ಕೃತಿಕ ಪರಂಪರೆಯನ್ನು ಸಾರಿದರೆ, ‘ಗುರುಮನೆ ದಸರಾ’ ಧಾರ್ವಿುಕ ಪರಂಪರೆಯನ್ನು ಪ್ರತಿನಿಧಿಸುತ್ತದೆ. ಶಕ್ತಿ ಆರಾಧನೆಗೆ ಮೀಸಲಾಗಿರುವ ನವರಾತ್ರಿ ಆಚರಣೆಯನ್ನು ನಾಡಿನ ಗುರುಪೀಠಗಳು ಅನೂಚಾನವಾಗಿ ನಡೆಸಿಕೊಂಡು ಬಂದಿವೆ. ಆ ನಿಟ್ಟಿನಲ್ಲಿ ಬಾಳೆಹೊನ್ನೂರಿನ ಶ್ರೀಮದ್ ರಂಭಾಪುರಿ ವೀರಸಿಂಹಾಸನ ಮಹಾಪೀಠದ ಶರನ್ನವರಾತ್ರಿ ದಸರಾ ಮಹೋತ್ಸವವು ಪ್ರಮುಖವಾಗಿದೆ.

ಅರಮನೆ ದಸರಾ ಉತ್ಸವವು ಪ್ರತಿವರ್ಷ ಮೈಸೂರಿನಲ್ಲಿ ಜರುಗಿದರೆ, ಗುರುಮನೆ ದಸರಾ ಮಹೋತ್ಸವವು ನಾಡಿನ ವಿವಿಧ ನಗರಗಳಲ್ಲಿ ನಡೆಯುತ್ತದೆ. ಈ ಬಾರಿ ಶ್ರೀ ಜಗದ್ಗುರು ರಂಭಾಪುರಿ ಪೀಠದ ಡಾ. ವೀರಸೋಮೇಶ್ವರ ಜಗದ್ಗುರುಗಳ 32ನೇ ವರ್ಷದ ಶರನ್ನವರಾತ್ರಿ ದಸರಾ ಧರ್ಮ ಸಮ್ಮೇಳನವು ಬಿಸಿಲನಾಡು ರಾಯಚೂರು ಜಿಲ್ಲೆಯ ಲಿಂಗಸುಗೂರಿನಲ್ಲಿ ನಡೆಯಲಿದೆ. ಅ. 15ರಿಂದ 24ರವರೆಗೆ 10 ದಿನ ನಡೆಯುವ ಕಾರ್ಯಕ್ರಮದಲ್ಲಿ ಪೀಠದ ಧಾರ್ವಿುಕ ಪರಂಪರೆಯ ಜತೆಗೆ ನಾಡಿನ ಕಲೆ, ಸಾಹಿತ್ಯ, ಸಂಸ್ಕೃತಿ, ಸಂಗೀತ, ಸಂಸ್ಕಾರಗಳು ಅನಾವರಣಗೊಳ್ಳಲಿವೆ.

ಪರಶಿವನ ಪಂಚಮುಖಗಳಿಂದ ಆವಿರ್ಭವಿಸಿದ ಜಗದ್ಗುರು ಪಂಚಾಚಾರ್ಯರು ದೇಶದ ವಿವಿಧ ಪ್ರಾಂತ್ಯಗಳಲ್ಲಿ ಪಂಚಪೀಠಗಳನ್ನು ಸ್ಥಾಪಿಸಿ ಮಾನವಕುಲಕೋಟಿಗೆ ಧರ್ಮ-ಸಂಸ್ಕಾರವನ್ನು ಬೋಧಿಸುತ್ತಾ ಬಂದಿದ್ದಾರೆ. ಅಂತೆಯೇ ಶಿವನ ಸದ್ಯೋಜಾತ ಮುಖದಿಂದುದಿಸಿದ ಜಗದ್ಗುರು ರೇಣುಕಾಚಾರ್ಯರು ತೆಲಂಗಾಣದ ಕೊಲ್ಲಿ್ಲಾಕಿ ಸ್ವಯಂಭು ಸೋಮೇಶ್ವರ ಲಿಂಗದಿಂದ ಪ್ರಕಟಗೊಂಡು, ಮಲಯಾಚಲದ ಭದ್ರಾನದಿ ತೀರದಲ್ಲಿ ಶ್ರೀ ವೀರಸಿಂಹಾಸನ ಮಹಾಪೀಠವನ್ನು ಸ್ಥಾಪಿಸಿದ್ದಾರೆ. 121 ಜಗದ್ಗುರುಗಳು ಈವರೆಗೆ ಪೀಠಾರೋಹಣ ಮಾಡಿರುವ ಸುದೀರ್ಘ ಪರಂಪರೆಯಲ್ಲಿ ಶರನ್ನವರಾತ್ರಿ ದಸರಾ ಮಹೋತ್ಸವಕ್ಕೆ ವಿಶೇಷ ಮಹತ್ವವಿದೆ. ಪೀಠದ ಪರಿಸರಕ್ಕೆ ಮೀಸಲಾಗಿದ್ದ ಶರನ್ನವರಾತ್ರಿ ದಸರಾ ಮಹೋತ್ಸವವನ್ನು ಮೈಸೂರು ಮಹಾರಾಜರ ಕೋರಿಕೆಯಂತೆ ನಾಡಿನ ವಿವಿಧ ಪ್ರಾಂತ್ಯಗಳಿಗೆ ಕೊಂಡೊಯ್ದ ಕೀರ್ತಿ 118ನೇ ಶ್ರೀಗಳಾದ ಶಿವಾನಂದ ರಾಜೇಂದ್ರ ಜಗದ್ಗುರುಗಳಿಗೆ ಸಲ್ಲುತ್ತದೆ. ಆನಂತರ ಪೀಠವನ್ನೇರಿದ ಜಗದ್ಗುರು ವೀರಗಂಗಾಧರ ಭಗವತ್ಪಾದರು ಹಾಗೂ ಜಗದ್ಗುರು ವೀರರುದ್ರಮುನಿ ಭಗವತ್ಪಾದರ ಕಾಲದಲ್ಲಿ ದಸರಾ ಮಹೋತ್ಸವವು ಮತ್ತಷ್ಟು ವಿಸ್ತಾರವಾಯಿತು. ಪ್ರಸ್ತುತ ಜಗದ್ಗುರು ಡಾ. ವೀರಸೋಮೇಶ್ವರ ರಾಜದೇಶೀಕೇಂದ್ರ ಶಿವಾಚಾರ್ಯ ಭಗವತ್ಪಾದರು ವೀರಸಿಂಹಾಸನವನ್ನು ಆರೋಹಣ ಮಾಡಿದ ನಂತರ, ಶರನ್ನವರಾತ್ರಿ ದಸರಾ ಧರ್ಮ ಸಮ್ಮೇಳನವು ಪ್ರಮುಖ ಉತ್ಸವವಾಗಿ ನಾಡಿನಲ್ಲಿ ಮನೆಮಾತಾಗಿದೆ.

ಸಾಹಿತ್ಯ, ಸಂಸ್ಕೃತಿಯ ಸಂವರ್ಧನೆ: ಶಾಂತಿ ಸಾಮರಸ್ಯದ ಬದುಕಿಗೆ ಧರ್ಮ ಬುನಾದಿಯಾಗಿದ್ದು, ಸುಸಂಸ್ಕೃತ ಸಮಾಜ ನಿರ್ವಣಕ್ಕೆ ಶಿಕ್ಷಣ ಮತ್ತು ಅಧ್ಯಾತ್ಮದ ಅರಿವು ಅವಶ್ಯಕವಾಗಿದೆ. ಅಧ್ಯಾತ್ಮದ ಸಂಪತ್ತನ್ನು ಸಮಾಜಕ್ಕೆ ಹಂಚುವುದಕ್ಕಾಗಿ ನಮ್ಮೆಲ್ಲ ಗುರುಪೀಠಗಳು ಒಂದಿಲ್ಲೊಂದು ಧಾರ್ವಿುಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತವೆ. ಆ ನಿಟ್ಟಿನಲ್ಲಿ ಶ್ರೀ ರಂಭಾಪುರಿ ಪೀಠದ ಶರನ್ನವರಾತ್ರಿ ದಸರಾ ಮಹೋತ್ಸವ ಪ್ರಮುಖವಾಗಿದೆ.

ನಮ್ಮ ಅಸ್ತಿತ್ವದ ಅನಾವರಣಕ್ಕೆ ಸಂಸ್ಕೃತಿ ತಳಹದಿಯಾಗಿರುತ್ತದೆ. ಈ ಉದಾತ್ತ ಚಿಂತನೆಯನ್ನು ಇರಿಸಿಕೊಂಡು ಶ್ರೀ ರಂಭಾಪುರಿ ಜಗದ್ಗುರುಗಳು ‘ಸಾಹಿತ್ಯ ಸಂಸ್ಕೃತಿ ಸಂವರ್ಧಿಸಲಿ, ಶಾಂತಿ ಸಮೃದ್ಧಿ ಸರ್ವರಿಗಾಗಲಿ’ ಎಂಬ ಉದಾತ್ತ ಸಂದೇಶ ನೀಡಿದ್ದಾರೆ. ಅದು ಸಾಕಾರಗೊಳ್ಳುವ ಸುಸಂದರ್ಭವೇ ಪೀಠದ ದಸರಾ ಮಹೋತ್ಸವ. ಧರ್ಮ-ಸಂಸ್ಕಾರವನ್ನು ಉದ್ದೀಪನಗೊಳಿಸುವ ಉಪದೇಶಾಮೃತಗಳು, ಆಯಾ ಭಾಗದ ಜ್ವಲಂತ ಸಮಸ್ಯೆಗಳ ಕುರಿತ ತಜ್ಞರ ಉಪನ್ಯಾಸ, ಸಾಹಿತ್ಯವನ್ನು ಉತ್ತೇಜಿಸುವ ಕೃತಿಗಳ ಲೋಕಾರ್ಪಣೆ, ಸಂಗೀತ, ನೃತ್ಯ, ಜನಪದ ಕಲೆಯನ್ನು ಪೋ›ತ್ಸಾಹಿಸುವ ಪ್ರದರ್ಶನಗಳು ಈ ವೇದಿಕೆಯಲ್ಲಿ ಅನಾವರಣಗೊಳ್ಳಲಿವೆ. ಸಮಾಜದಲ್ಲಿ ನಿಸ್ವಾರ್ಥವಾಗಿ ಸೇವೆ ಸಲ್ಲಿಸುವ ಸಾಧಕರನ್ನು ಗುರುತಿಸಿ ಪ್ರಶಸ್ತಿ ನೀಡಲಾಗುತ್ತದೆ. ಅಂತೆಯೇ ಈ ಬಾರಿಯೂ ವಿವಿಧ ಸಾಧಕರಿಗೆ ಸಾಹಿತ್ಯ ಸಿರಿ, ಸಾಧನಾ ಸಿರಿ, ಶಿವಾಚಾರ್ಯ ರತ್ನ, ವೀರಶೈವ ಸಿರಿ, ಶ್ರೀ ರಂಭಾಪುರಿ ಯುವಸಿರಿ ಪ್ರಶಸ್ತಿಗಳನ್ನು ನೀಡಿ ಗೌರವಿಸಲಾಗುತ್ತದೆ.

ಧರ್ಮದ ತೇರು ಸಾಗಿದ ದಾರಿ...

ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಮಾದರಿಯಲ್ಲಿ ವರ್ಷಕ್ಕೊಂದು ಊರಿನಲ್ಲಿ ನಡೆಯುವ ಶ್ರೀ ರಂಭಾಪುರಿ ಜಗದ್ಗುರುಗಳ ಶರನ್ನವರಾತ್ರಿ ದಸರಾ ಸಮ್ಮೇಳನದ ಧರ್ಮದ ತೇರು ನಾಡಿನ ತುಂಬೆಲ್ಲಾ ಸಂಚರಿಸಿದೆ. ಮಾತ್ರವಲ್ಲ ನೆರೆಯ ಮಹಾರಾಷ್ಟ್ರದ ಸೊಲ್ಲಾಪುರ ನಗರದಲ್ಲಿಯೂ ಅದ್ಧೂರಿಯಾಗಿ ನಡೆದ ಇತಿಹಾಸವಿದೆ. ಪ್ರಸ್ತುತ ಡಾ. ವೀರಸೋಮೇಶ್ವರ ಜಗದ್ಗುರುಗಳು ಕಳೆದ ಮೂರು ದಶಕಗಳ ಹಿಂದೆ 1992ರಲ್ಲಿ ವಿಜಯಪುರ ಜಿಲ್ಲೆಯ ನಿಡಗುಂದಿ ಪಟ್ಟಣದಿಂದ ಆರಂಭಿಸಿದ ದಸರಾ ಮಹೋತ್ಸವವು ಈ ಬಾರಿ ರಾಯಚೂರು ಜಿಲ್ಲೆಯ ಲಿಂಗಸುಗೂರುವರೆಗೆ ಸಾಗಿ ಬಂದಿದೆ. ಅ. 14ರಂದು ಜಗದ್ಗುರುಗಳು ಸಾರೋಟು ಉತ್ಸವದ ಮೂಲಕ ಪುರಪ್ರವೇಶ ಮಾಡಲಿದ್ದು, ಅ. 15ರಂದು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಅ. 24ರವರೆಗೆ ನಡೆಯಲಿರುವ 10 ದಿನಗಳ ಧರ್ಮಯಜ್ಞದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ವಿವಿಧ ಮಂತ್ರಿಗಳು, ಶಾಸಕರು, ಸಂಸದರು, ಸಾಹಿತಿಗಳು, ಕಲಾವಿದರು, ನಾನಾ ಕ್ಷೇತ್ರಗಳ ಗಣ್ಯರು ಪಾಲ್ಗೊಳ್ಳಲಿದ್ದಾರೆ. ಲಿಂಗಸುಗೂರಿನ ಈಶ್ವರ ದೇವಸ್ಥಾನದ ಆವರಣದಲ್ಲಿರುವ ಶ್ರೀ ವೀರಭದ್ರೇಶ್ವರ ಸಮುದಾಯ ಭವನದಲ್ಲಿ ನಿತ್ಯ ಬೆಳಗ್ಗೆ 8 ಗಂಟೆಯಿಂದ ಜಗದ್ಗುರುಗಳ ಸಾಮೂಹಿಕ ಇಷ್ಟಲಿಂಗ ಮಹಾಪೂಜೆ ನೆರವೇರಲಿದ್ದು, ಸಂಜೆ 7 ಗಂಟೆಗೆ ಸರ್ಕಾರಿ ಜೂನಿಯರ್ ಕಾಲೇಜು ಆವರಣದಲ್ಲಿ ನಿರ್ವಿುಸಿರುವ ಮಾನವ ಧರ್ಮ ಮಹಾಮಂಟಪದಲ್ಲಿ ಸಮ್ಮೇಳನ ನಡೆಯಲಿದೆ. ಪೀಠದ ಬಿರುದು, ಭಿನ್ನಾವಳಿಗಳ ಸಹಿತ ಪ್ರತ್ಯೇಕ ರಾಜಪೋಷಾಕಿನಲ್ಲಿ ಜಗದ್ಗುರುಗಳು ಸಾನ್ನಿಧ್ಯ ವಹಿಸಲಿದ್ದು, ಸಮಾರಂಭದ ನಂತರ ಶಿವಾಚಾರ್ಯರು, ಪೀಠದ ಸಿಬ್ಬಂದಿ ಹಾಗೂ ಅಭಿಮಾನಿಗಳು ಜಗದ್ಗುರುಗಳಿಗೆ ನಜರ್ (ಗೌರವ) ಸಮರ್ಪಿಸಲಿದ್ದಾರೆ. ಅ. 24 ವಿಜಯದಶಮಿಯಂದು ವಿಶೇಷವಾಗಿ ಲಿಂಗಸುಗೂರಿನ ರಾಘವೇಂದ್ರಸ್ವಾಮಿ ಮಠದಿಂದ ಸ್ವತಃ ಜಗದ್ಗುರುಗಳು ಅಗ್ರೋದಕವನ್ನು ತಂದು ಮಹಾಪೂಜೆ ನೆರವೇರಿಸಲಿದ್ದಾರೆ. ಅಂದು ಸಂಜೆ ಬಸವಸಾಗರ ವೃತ್ತದಿಂದ ಪರಂಪರಾನುಗತ ಅಡ್ಡಪಲ್ಲಕ್ಕಿ ಮಹೋತ್ಸವ ನಡೆಯಲಿದೆ. ಶಮೀ ಪೂಜೆಯ ನಂತರ ಸೀಮೋಲ್ಲಂಘನ ಮಾಡಿ ವೀರಸಿಂಹಾಸನ ಪೀಠಾರೋಹಣ ಮಾಡುವ ಜಗದ್ಗುರುಗಳು ವಿಜಯದಶಮಿಯ ಶಾಂತಿ ಸಂದೇಶವನ್ನು ನೀಡಲಿದ್ದಾರೆ. ಆ ಮೂಲಕ 10 ದಿನಗಳ ದಸರಾ ಸಮ್ಮೇಳನಕ್ಕೆ ತೆರೆ ಬೀಳಲಿದೆ.