ಅಂಕಣ

ಮುಟ್ಟಿನ ಮೇಲೂ ಕರೊನಾ ಎಫೆಕ್ಟ್!; ಕರೊನಾ ಸಮಯದಲ್ಲೇಕೆ ಋತುಸ್ರಾವ ಬದಲಾವಣೆ?

Webdesk - Ravikanth

ಮುಟ್ಟಿನ ಅವಧಿಯಲ್ಲಿ ಅನುಭವಿಸುವ ದೈಹಿಕ, ಮಾನಸಿಕ ಕಿರಿಕಿರಿಗಳು ಅಷ್ಟಿಷ್ಟಲ್ಲ. ಪ್ರತಿ ತಿಂಗಳು ಋತುಸ್ರಾವ ಸರಿಯಾಗಿ ಆಗಿಲ್ಲವೆಂದರೂ ಹಿಂಸೆಯೇ. ಒಟ್ಟಿನಲ್ಲಿ ಮುಟ್ಟು ಬಂದರೂ ಬೇಸರ, ಬರದಿದ್ದರೂ ಬೇಸರ ಎಂಬ ಮನಸ್ಥಿತಿ. ಆದರೆ ಕರೊನಾದ ಈ ದಿನಗಳಲ್ಲಿ ಮಾಸಿಕ ಋತುಸ್ರಾವದ ಮೇಲೂ ಅಗಾಧ ಪರಿಣಾಮ ಬೀರಿದೆ. ಅದರಲ್ಲಿಯೂ ಸೋಂಕಿನಿಂದ ಗುಣಮುಖರಾಗಿರುವ ಅನೇಕ ಮಹಿಳೆಯರಲ್ಲಿ ಮುಟ್ಟು ಎನ್ನುವುದು ಸಮಸ್ಯೆಯನ್ನು ತಂದೊಡ್ಡಿದೆ.

| ಡಾ. ಅನುರಾಧಾ ಶ್ರೀಧರ್

ಮಮತಾಗೆ ಮುಟ್ಟಾದ ದಿನದಿಂದಲೂ ಅದರ ಬಗ್ಗೆ ತಾತ್ಸಾರ. ವಯಸ್ಸು 30 ಆಗಿದ್ದರೂ ಮುಟ್ಟಿನ ಬಗ್ಗೆ ಏನೋ ಅಸಡ್ಡೆ. ಗಂಡಿಗಿಲ್ಲದ ಬೇಲಿ ನಮಗೇಕೆ ಎಂಬ ಪ್ರಶ್ನೆ ಅವಳದ್ದು. ಅವಳಿಗೆ ಉತ್ತರ ಸಿಗುವಷ್ಟರಲ್ಲಿಯೇ ಬಂದಪ್ಪಳಿಸಿದ್ದು ಕೋವಿಡ್ ಎಂಬ ಮಹಾಮಾರಿ. ಮೊದಲೇ ಬೇಸರದಲ್ಲಿದ್ದ ಮನಕ್ಕೆ ಈಗ ಇನ್ನಷ್ಟು ಸಂಕಟ. ತಿಂಗಳ ಮುಟ್ಟಿನ ಏರುಪೇರು, ಅಸಹನೀಯ ಎನ್ನುವಷ್ಟು ಹೊಟ್ಟೆನೋವು, ಗಡ್ಡೆಗಡ್ಡೆ ರಕ್ತ ಹೋಗುವಿಕೆ... ಮತ್ತಷ್ಟು ಹಿಂಸೆ...

ಸುಜಾತಾಗೆ ಇಷ್ಟು ವರ್ಷ ಮಾಸಿಕ ಋತುಸ್ರಾವ ಸರಿಯಾಗಿಯೇ ನಡೆಯುತ್ತಿತ್ತು. ಈ ದಿನಗಳಲ್ಲಿ ಸಾಮಾನ್ಯವಾಗಿ ಬರುವ ಹೊಟ್ಟೆನೋವು, ತಲೆನೋವು ಮಾಮೂಲಾಗಿತ್ತು. ಆದರೆ ಕರೊನಾ ಸೋಂಕು ಆಕೆಯನ್ನು ಯಾವಾಗ ಬಾಧಿಸಿತೋ ಅಲ್ಲಿಂದ ಶುರುವಾಯ್ತು ಸಮಸ್ಯೆ. ಸೋಂಕಿನಿಂದ ಗುಣಮುಖವಾದರೂ ಮಾಸಿಕ ಋತುಸ್ರಾವದಲ್ಲಿ ಏರುಪೇರು. ಹಿಂದೆಂದೂ ಬರದಷ್ಟು ಸಹಿಸಲಾರದ ನೋವು, ತಿಂಗಳಿಗೆ ಸರಿಯಾಗಿ ಆಗುತ್ತಿದ್ದ ಮುಟ್ಟಿನಲ್ಲಿ ಭಾರಿ ವ್ಯತ್ಯಾಸ. ಏನೆಂದು ತಿಳಿಯದೇ ಒದ್ದಾಟ. ಬೇರೆಯವರಿಗೆ ಹೇಳಿಕೊಳ್ಳಲೂ ಮುಜುಗರ ಪಡುವ ಸ್ಥಿತಿ.

ಇಂಥ ಮಮತಾ, ಸುಜಾತರು ಇಂದು ಬಹುತೇಕ ಮನೆಗಳಲ್ಲಿ ಕಾಣಸಿಗುತ್ತಾರೆ. ಕೋವಿಡ್ ಬಿಕ್ಕಟ್ಟಿನ ಈ ದಿನಗಳಲ್ಲಿ ಬಹಳಷ್ಟು ಹೆಣ್ಣುಮಕ್ಕಳ ಋತುಸ್ರಾವದಲ್ಲಿಯೂ ಏರುಪೇರಾಗಿದೆ. ಅದರಲ್ಲಿಯೂ ಸೋಂಕಿನಿಂದ ಗುಣಮುಖರಾಗಿರುವ ಹೆಣ್ಣುಮಕ್ಕಳ ಮೇಲೆ ಮುಟ್ಟಿನಲ್ಲಿಯೂ ಭಾರಿ ಬದಲಾವಣೆ ಆಗಿಬಿಟ್ಟಿದೆ. ಅನಿಯಮಿತ ಋತುಸ್ರಾವ, ದೀರ್ಘಕಾಲ ರಕ್ತ ಸ್ರವಿಸುತ್ತಲೇ ಇರುವುದು, ಗಡ್ಡೆ ಹೋಗುವುದು, ವಿಪರೀತ ಹೊಟ್ಟೆ ನೋವು, ತಲೆನೋವು, ಸೊಂಟನೋವು, ಕಾಲ್ಗಳಲ್ಲಿ ಸೆಳೆತ, ಮಲಬದ್ಧತೆ, ಸುಸ್ತು ಇವೆಲ್ಲವೂ ಇದೀಗ ಹೆಚ್ಚಿನ ಹೆಣ್ಣುಮಕ್ಕಳಲ್ಲಿ ಮಾಮೂಲು ಎನ್ನುವಂತಾಗಿದೆ. ಇದು ಅಂತಾರಾಷ್ಟ್ರೀಯ ಮಟ್ಟದಲ್ಲಿಯೂ ಸಾಕಷ್ಟು ಚರ್ಚೆಯಾಗುತ್ತಿದೆ. ಆದರೆ ನಮ್ಮ ಹೆಣ್ಣುಮಕ್ಕಳಿಗೆ ಮುಟ್ಟಿನ ಬಗ್ಗೆ ಮುಕ್ತವಾಗಿ ಮಾತನಾಡಲು ಏನೋ ಮುಜುಗರ. ತೀರಾ ವೈಯಕ್ತಿಕ ಎನಿಸಿಕೊಂಡಿರುವ ಇಂಥ ವಿಷಯಗಳ ಕುರಿತು ಮುಕ್ತ ಮಾತುಕತೆಗೆ ಅವಕಾಶ ಇರುವುದೂ ನಮ್ಮಲ್ಲಿ ಕಡಿಮೆಯೇ.

ತಣ್ಣೀರ ಪಟ್ಟಿ ಸಹಾಯಕ: ಋತುಸ್ರಾವದಲ್ಲಾಗುತ್ತಿರುವ ಸಮಸ್ಯೆಗಳ ನಿವಾರಣೆಗೆ ಮುಟ್ಟಿನ 1 ವಾರ ಮೊದಲು ಹೊಟ್ಟೆ ಮೇಲೆ ತಣ್ಣೀರಿನ ಪಟ್ಟಿ, ನಂತರ ಬಿಸಿನೀರಿನ ಪಟ್ಟಿ ಹಾಕಿ. ಮುಟ್ಟಿಲ್ಲದ ಸಮಯದಲ್ಲಿ ಹೊಟ್ಟೆಗೆ ಮಾಡಿಸಿಕೊಳ್ಳುವ ಮಸಾಜ್ ಮುಟ್ಟಿನ ವೇಳೆ ನೋವುಗಳನ್ನು ನಿವಾರಿಸುತ್ತದೆ. ‘ನನ್ನ ಶರೀರ ಮತ್ತು ಮನಸ್ಸು ಚೆನ್ನಾಗಿದ್ದರೆ ಆರೋಗ್ಯವಂತ ಗರ್ಭಾಶಯ, ಅಂಡಾಶಯ ಹೊಂದಿ ಮುಂದೆ ಆರಾಮವಾಗಿ ಇರಬಹುದು’ ಎಂದು ಪ್ರತಿದಿನ ಮನಸ್ಸಿನಲ್ಲಿಯೇ ಅಂದುಕೊಳ್ಳುತ್ತಿರಿ. ಇನ್ನು ಮಕ್ಕಳನ್ನು ಪಡೆಯಬಯಸುವವರಾದರೆ ಈ ಆರೋಗ್ಯದ ಗರ್ಭಾಶಯವೇ ಮುಂದೆ ಆರೋಗ್ಯವಂತ ಪ್ರಜೆಯ ಸೃಷ್ಟಿಗೆ ಕಾರಣವಾಗುತ್ತದೆ ಎಂಬುದಾಗಿ ನೆನೆಯುತ್ತಿರಿ.

ಇದೇನು ಮಹಾ ಸಮಸ್ಯೆ ಅನ್ನಬೇಡಿ: ಕರೊನಾ ಜೀವ ಹಿಂಡುತ್ತಿರುವಾಗ ಈ ಮುಟ್ಟಿನದ್ದು ದೊಡ್ಡ ಸಮಸ್ಯೆಯೇ ಅಲ್ಲ ಬಿಡಿ, ಇದರ ಬಗ್ಗೆ ತಲೆ ಕೆಡಿಸಿಕೊಳ್ಳುವುದು ಏಕೆ ಎಂದೂ ಪ್ರಶ್ನಿಸುವವರೂ ಇದ್ದಾರೆ. ಆದರೆ ನೆನಪಿಡಿ. ಮುಟ್ಟಿನಲ್ಲಿ ಈ ರೀತಿ ದೋಷಗಳು ಆಗುತ್ತಿದ್ದರೆ ಅದು ಭವಿಷ್ಯದಲ್ಲಿ ಭಾರಿ ಅನಾಹುತಗಳನ್ನೇ ಸೃಷ್ಟಿಸಬಹುದು. ಹೆಣ್ಣುಮಕ್ಕಳಿಗೆ ಮಾತ್ರವಲ್ಲದೇ, ಇಡೀ ಕುಟುಂಬದ ಮೇಲೂ ಇದು ಪ್ರಭಾವ ಬೀರಬಹುದು. ಕಾರಣ ಗೊತ್ತಲ್ಲ? ಮುಟ್ಟು ಸರಿಯಾದರಲ್ಲವೇ ವಂಶ ಬೆಳೆಯುವುದು?

ಹಾಗಿದ್ದರೆ ನಾವೇನು ಮಾಡಬೇಕು?

  • ಕರೊನಾದ ಜತೆ ಹೇಗಿದ್ದರೂ ಬದುಕಲೇಬೇಕು. ಅದನ್ನೇ ಅರ್ಥ ಮಾಡಿಕೊಂಡು ಮನಸ್ಸನ್ನು ನಿರಾಳ ವಾಗಿಟ್ಟು ಕೊಳ್ಳಿ. ಮನಸ್ಸಿಗೆ ಶಾಂತಿ ಸಿಗಲು ಪ್ರಾಣಾಯಾಮ ತುಂಬಾ ಅನುಕೂಲವಾಗಿದೆ. ಹೊಸ ಹೊಸ ವಿಷಯಗಳನ್ನು ಕಲಿಯಲು ಮನಸ್ಸನ್ನು ಪ್ರೇರೇಪಿಸಿದರೆ ಜೀವನ ಪ್ರೀತಿಯನ್ನು ಹೆಚ್ಚಿಸಿಕೊಳ್ಳಬಹುದು, ಕಷ್ಟಪಟ್ಟು ಮೇಲೆ ಬಂದ ಸಾಧಕಿಯರ ಜೀವನಗಾಥೆ ಓದಿ. ಇದರಿಂದ ಮನಸ್ಸು ಇನ್ನಷ್ಟು ಹುರುಪುಗೊಳ್ಳುತ್ತದೆ.
  • ಆಹಾರದತ್ತ ಗಮನವಿರಲಿ. ನೈಸರ್ಗಿಕ ಆಹಾರಗಳನ್ನು ಆದಷ್ಟು ಹಾಗೆಯೇ ಉಪಯೋಗಿಸೋಣ. ಹಣ್ಣು, ತರಕಾರಿಗಳ ಆಕಾರ, ರೂಪ, ರುಚಿ ಕೆಡಿಸದೇ ಬಳಸೋಣ. ಒಳ್ಳೆಯ ಆಹಾರ ಮುಟ್ಟಿನ ತೊಂದರೆಯನ್ನು ಸಾಕಷ್ಟು ಕಡಿಮೆ ಮಾಡುತ್ತದೆ.
  • ಹೆಚ್ಚಿನ ಮಂದಿಗೆ ವರ್ಕ್ ಫ್ರಂ ಹೋಂ ಕೆಲಸ ಆಗಿರುವ ಕಾರಣ, ಸಾಕಷ್ಟು ಸಮಯ ಉಳಿತಾಯವಾಗುತ್ತಿದೆ. ಇಷ್ಟು ದಿನ ಸಮಯಾಭಾವದ ನೆಪ ಹೇಳುತ್ತಿದ್ದ ಹೆಣ್ಣುಮಕ್ಕಳು ಇದೀಗ ಒಂದು ಗಂಟೆಯನ್ನಾದರೂ ವ್ಯಾಯಾಮಕ್ಕೆ ವ್ಯಯಿಸಬಹುದು. ಇದರಿಂದ ಮುಟ್ಟಿನ ತೊಂದರೆ ಗಣನೀಯವಾಗಿ ಕಡಿಮೆಯಾಗುತ್ತದೆ.
  • ಲಾಕ್​ಡೌನ್​ನಿಂದಾಗಿ ವಾಹನ ದಟ್ಟಣೆ ಕಡಿಮೆಯಾಗಿ ವಾತಾವರಣ ಬಹಳಷ್ಟು ಸುಧಾರಿಸಿದೆ. ಹೀಗಾಗಿ ಆಮ್ಲಜನಕ ಗುಣಮಟ್ಟ ಹೆಚ್ಚಿದೆ. ಪ್ರತಿದಿನ ಯೋಗ, ಪ್ರಾಣಾಯಾಮ ಮಾಡಿದರೆ ತುಂಬಾ ಅನುಕೂಲ.
  • ವಿಶ್ರಾಂತಿ ಇಲ್ಲದೇ ದುಡಿಯುವ ಪರಿಸ್ಥಿತಿ ಇದ್ದರೂ ಮಧ್ಯೆ ಮಧ್ಯೆ ನಿಮಗಾಗಿ 10-10 ನಿಮಿಷ ವಿಶ್ರಾಂತಿಗಾಗಿ ವೇಳೆ ಮೀಸಲಿಡಿ. ಇದರಿಂದ ಶರೀರ ಬಳಲದೇ ಕ್ಷಮತೆ ಹೆಚ್ಚಾಗುತ್ತದೆ.
  • ಮುಟ್ಟೆಂಬುದು ತೊಂದರೆಯಲ್ಲ, ಬದಲಿಗೆ ಪ್ರಕೃತಿ ಕೊಟ್ಟಿರುವ ವಿಶೇಷ ವರ. ಇದರ ನಿರ್ವಹಣೆಯನ್ನು ಸಮರ್ಥವಾಗಿ ನಿಭಾಯಿಸಬಲ್ಲೆ ಎನ್ನುವ ತಾಳ್ಮೆ, ಛಲ ನಿಮ್ಮಲ್ಲಿರಲಿ.

(ಲೇಖಕರು ಮನೋವೈದ್ಯರು ಹಾಗೂ ಆಪ್ತ ಸಮಾಲೋಚಕರು)