ಶಾಲಾ- ಕಾಲೇಜು ಹಂತದ ಪರೀಕ್ಷೆ ಫಲಿತಾಂಶ ಬಂದಾಗ ಬಾಲಕಿಯರ ಮೇಲುಗೈ ಎಂದು ಪ್ರತಿ ಬಾರಿ ನೋಡುತ್ತೇವೆ. ಆದರೆ ನಂತರದ ಹಂತಗಳಲ್ಲಿ ಅವರೆಲ್ಲ ಎಲ್ಲಿ ಕಣ್ಮರೆ ಆಗುತ್ತಾರೆ...! ಆ ಹೆಣ್ಣು ಮಕ್ಕಳೆಲ್ಲ ಹೆಚ್ಚಿನ ಅಧ್ಯಯನಕ್ಕಾಗಿ ಹಪಹಪಿಸಿದರೂ ಕುಟುಂಬದ ಸಮಸ್ಯೆ, ಆರ್ಥಿಕ ಸಮಸ್ಯೆ ಇತ್ಯಾದಿಗಳಿಂದ ತಮ್ಮ ಆಸೆಗಳನ್ನು ಚಿವುಟಿಬಿಡುತ್ತಾರೆ. ಆದರೆ ಇನ್ನೂ ಕೆಲವರು, ತಮ್ಮ ಗುರಿ ಮುಟ್ಟುವ ಸದುದ್ದೇಶದಿಂದ ಸಾಕಷ್ಟು ತ್ಯಾಗಗಳನ್ನು ಮಾಡಿ ಜಯಶೀಲರಾಗುತ್ತಾರೆ. ಇವರು ಸಮಸ್ಯೆ ಎದುರಿಸಿರುವುದಿಲ್ಲ ಎಂದೇನು ಇಲ್ಲ... ಆದರೆ ಅವರಿಗೆ ಅದನ್ನು ನಿಭಾಯಿಸುವ ಜಾಣ್ಮೆ ಇರುತ್ತದೆ ಎನ್ನಬಹುದು. ಇಂದು ಪ್ರತಿ ಹೆಣ್ಣು ಇಂತಹ ಜಾಣ್ಮೆ, ಕೌಶಲ ಬೆಳೆಸಿಕೊಳ್ಳಬೇಕಿದೆ. ಆಡಳಿತ, ವಿಜ್ಞಾನ, ರಾಜಕೀಯ ಕ್ಷೇತ್ರದಲ್ಲಿ ಮಹಿಳೆಯರು ಸಕ್ರಿಯರಾಗುತ್ತಿದ್ದಾರೆ. ಆದರೆ ಇದರ ಪ್ರಗತಿ ನಮ್ಮ ನಿರೀಕ್ಷಿತ ಮಟ್ಟದಲ್ಲಿಲ್ಲ... ಇದರ ವೇಗ ಇನ್ನಷ್ಟು ಹೆಚ್ಚಬೇಕಿದೆ... ಎನ್ನುವುದು ಶಿಲ್ಪಾನಾಗ್ ಅವರ ಮನದಾಳದ ಮಾತು.
ಸಾಮಾನ್ಯವಾಗಿ ಮಹಿಳೆಯರಿಗೆ ಪುರುಷರಿಗಿಂತ ಜಾಸ್ತಿ ಜವಾಬ್ದಾರಿಗಳಿರುತ್ತವೆ. ಮನೆ ನಿರ್ವಹಣೆ, ಮಕ್ಕಳ ಲಾಲನೆ, ಪಾಲನೆ, ಕುಟುಂಬದ ನಿರ್ವಹಣೆ ಜತೆಗೆ ಕಚೇರಿ ಕೆಲಸಗಳ ಜವಾಬ್ದಾರಿಯನ್ನು ಆಕೆ ಯಶಸ್ವಿಯಾಗಿ ನಿರ್ವಹಿಸುತ್ತಾಳೆ. ಇಂತಹ ಸಂದರ್ಭದಲ್ಲಿ ಸ್ಪರ್ಧಾತ್ಮಕ ಪರೀಕ್ಷೆ ಎದುರಿಸುವುದು ಆಕೆಗೇನು ಅಷ್ಟು ಕಷ್ಟವಲ್ಲ. ಹಾಗಂತ ಸ್ಪರ್ಧಾತ್ಮಕ ಪರೀಕ್ಷೆಯು ಸರಳವಾಗಿರುತ್ತದೆ ಎಂದೆಣಿಸುವುದು ಬೇಡ. ಕೆಪಿಎಸ್ಸಿ ಪರೀಕ್ಷೆ ಯಲ್ಲಿ ಮಹಿಳಾ ಅಭ್ಯರ್ಥಿಗಳಿಗೆ ಶೇ.33 ಮೀಸಲಾತಿ ಇದೆ, ಆದರೆ ಯುಪಿಎಸ್ಸಿ ಪರೀಕ್ಷೆಯಲ್ಲಿ ಎಲ್ಲರೂ ಒಂದೇ. ಅಲ್ಲಿ ನಿಮ್ಮ ಜ್ಞಾನ, ವ್ಯಕ್ತಿತ್ವಕ್ಕೆ ಅಷ್ಟೇ ಮಹತ್ವ ಇರುತ್ತದೆ. ಈಗ ಕಾಲ ಬದಲಾಗುತ್ತಾ ಇರುವುದರಿಂದ ಮಹಿಳೆಯರೂ ತಮ್ಮ ಮದುವೆಯ ವಯಸ್ಸನ್ನು ಮುಂದೂಡಿ, ಅಧ್ಯಯನಕ್ಕೆ ಹೆಚ್ಚು ಪ್ರಾಶಸ್ಱ ನೀಡುತ್ತಿದ್ದಾರೆ. ಇನ್ನು ಕೆಲವರು ಮದುವೆ ನಂತರವೂ ಯುಪಿಎಸ್ಸಿ ಉತ್ತೀರ್ಣರಾದ ಉದಾಹರಣೆಗಳಿವೆ. ಅವರಲ್ಲಿ ನಾನೂ ಒಬ್ಬಳು. ಮಗು ಜನಿಸಿದ ಮೇಲೆ ಸಿವಿಲ್ ಸರ್ವಿಸ್ ಪರೀಕ್ಷೆ ಉತ್ತೀರ್ಣಳಾಗಿದ್ದೇನೆ. ನನ್ನಂತೆ ಸಾಕಷ್ಟು ಸ್ತ್ರೀಶಕ್ತಿ ಇದ್ದಾರೆ ಎನ್ನುತ್ತಾರೆ ಶಿಲ್ಪಾ.
ಕುಟುಂಬದ ಸಹಕಾರ ಅತ್ಯಗತ್ಯ: ಯಾವುದೇ ಕೆಲಸ ಅಥವಾ ಅಧ್ಯಯನ ಇರಲಿ ಅಲ್ಲಿ ಆಕೆಗೆ ಕುಟುಂಬದ ಸಹಕಾರ ಅತ್ಯಗತ್ಯವಾಗಿಬೇಕಿದೆ. ಯುಪಿಎಸ್ಸಿ ಪರೀಕ್ಷೆ ಸಾಕಷ್ಟು ಪರಿಶ್ರಮ ಬೇಡುವುದರಿಂದ ಮಹಿಳೆಯರು ತಮ್ಮ ಜವಾಬ್ದಾರಿಗಳ ನಡುವೆ ಪ್ರಿಲಿಮ್್ಸ, ಮುಖ್ಯಪರೀಕ್ಷೆ ಹಾಗೂ ವ್ಯಕ್ತಿತ್ವ ಪರೀಕ್ಷೆಗಳನ್ನು ಒಂದೇ ಬಾರಿಗೆ ಎದುರಿಸಿ ಗುರಿ ಮುಟ್ಟುವುದು ಸ್ವಲ್ಪ ಕಷ್ಟ ಎನಿಸಬಹುದು. ಇಂತಹ ಸಮಯದಲ್ಲಿ ಆಕೆಯ ಜಬಾಬ್ದಾರಿಗಳನ್ನು ಕಡಿಮೆ ಮಾಡಿ, ಆಕೆಯ ಅಧ್ಯಯನಕ್ಕೆ ಪ್ರೋತ್ಸಾಹ ನೀಡಿ, ಧೈರ್ಯ ನೀಡುವ ಕುಟುಂಬ ಅಗತ್ಯವಿರುತ್ತದೆ.