ಆದರೆ, ಭಾರತದಲ್ಲಿ ನಡೆಯುತ್ತಿರುವ ಹಾಲಿ ಏಕದಿನ ವಿಶ್ವಕಪ್ ಆಸ್ಟ್ರೇಲಿಯಾ ಪಾಲಿಗೆ ತುಸು ಭಿನ್ನ ಅನುಭವವಾಗಿತ್ತು. ಆರಂಭಿಕ ಎರಡು ಪಂದ್ಯಗಳಲ್ಲಿ ಆತಿಥೇಯ ಭಾರತ ಮತ್ತು ಸಾಂಪ್ರದಾಯಿಕ ಎದುರಾಳಿ ದಕ್ಷಿಣ ಆಫ್ರಿಕಾ ವಿರುದ್ಧ ಹೀನಾಯ ಸೋಲು ಅನುಭವಿಸಿ ವಿಶ್ವಕಪ್ಗಳಲ್ಲೇ ನಿಕೃಷ್ಟ ಆರಂಭವನ್ನು ತಂಡ ಕಂಡುಕೊಂಡಿತ್ತು. ತತ್ಪರಿಣಾಮವಾಗಿ ಮೊದಲ ಎರಡು ವಾರ ಕಾಲ ಅಂಕಪಟ್ಟಿಯ ತಳಭಾಗದಲ್ಲಿ ಸ್ಥಾನೀಕನಾಗಿ ಮುಜುಗರ ಅನುಭವಿಸುವಂತಾಗಿತ್ತು. ಇದರ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ತರಹೇವಾರಿ ತಮಾಷೆಗಳೂ ವೈರಲ್ ಆಗಿ ಆಸೀಸ್ನ ಸ್ವಾಭಿಮಾನಕ್ಕೆ ದೊಡ್ಡ ಪೆಟ್ಟು ಬಿದ್ದಿತ್ತು. ಅದರಲ್ಲೂ ಆರಂಭದಲ್ಲೇ ಭಾರತದ ಬೌಲರ್ಗಳು ಮತ್ತು ದಕ್ಷಿಣ ಆಫ್ರಿಕಾದ ಬ್ಯಾಟ್ಸ್ಮನ್ಗಳು ಆಸೀಸ್ ತಂಡ ಸರ್ವೆಸಾಧಾರಣ ಎಂಬಂತೆ ಹೊಸಕಿಹಾಕಿದ್ದು ಉಳಿದ ತಂಡಗಳಿಗೂ ದಿಕ್ಸೂಚಿಯಂತಿತ್ತು.
ಆದರೆ, ಅಂಕಪಟ್ಟಿಯ ತಳಭಾಗದಲ್ಲಿರಲಿ, ಗಾಯಗೊಂಡಿರಲಿ, ಸಿಂಹ ಯಾವತ್ತಿಗೂ ಸಿಂಹವೇ. ಬೋನಿನಲ್ಲಿ ಸಿಲುಕಿದಾಗಲೂ ಸಿಂಹ ತನ್ನ ಹುಟ್ಟುಗುಣವನ್ನು ಮರೆಯುವುದಿಲ್ಲ. 3ನೇ ಪಂದ್ಯದಿಂದ ಆಸ್ಟ್ರೇಲಿಯಾದ ನಿಜಸತ್ವ ಆಚೆಗೆ ಬಂದೇ ಬಿಟ್ಟಿತು. ಶ್ರೀಲಂಕಾ ವಿರುದ್ಧ ಪಂದ್ಯದಿಂದ ಗೆಲುವಿನ ಹಳಿಗೆ ಮರಳಿದ ಆಸ್ಟ್ರೇಲಿಯನ್ನರು ಮುಂದೆ ಸತತ ಮೂರು ಪಂದ್ಯಗಳಲ್ಲಿ ಪಾಕಿಸ್ತಾನ, ನೆದರ್ಲ್ಯಾಂಡ್, ನ್ಯೂಜಿಲೆಂಡ್ ವಿರುದ್ಧ 367, 399, 388 ರನ್ ಚಚ್ಚಿ ಬೊಬ್ಬಿರಿದರು. ಇಂಗ್ಲೆಂಡ್ ವಿರುದ್ಧ ಬೌಲರ್ಗಳ ನೆರವಿನಿಂದ ಗೆದ್ದು ಸತತ 5ನೇ ಗೆಲುವು ದಾಖಲಿಸಿದ್ದ ಕಾಂಗರೂಗಳು ಅಂಕಪಟ್ಟಿಯಲ್ಲಿ ಹೈಜಂಪ್ ಮಾಡಿಕೊಂಡು 3ನೇ ಸ್ಥಾನಕ್ಕೆ ಸುಳಿದಾಗಿತ್ತು. ಇಂಥ ಸನ್ನಿವೇಶದಲ್ಲಿ ಆಸೀಸ್ಗಳ ಆತ್ಮಾಭಿಮಾನಕ್ಕೆ ಪೆಟ್ಟು ಕೊಡಲು ಯತ್ನಿಸಿ ಕೆರಳಿಸಿದ್ದು ಅಫ್ಘಾನಿಸ್ತಾನದ ಪ್ರಮಾದವಾಗಿತ್ತು.
ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ಆಸ್ಟ್ರೇಲಿಯಾ- ಅಫ್ಘಾನಿಸ್ತಾನ ಪಂದ್ಯದ ಬಗ್ಗೆ ಪ್ರೇಕ್ಷಕರಿಗಾಗಲೀ, ಪಂಡಿತರಿಗಾಗಲೀ ಅಂಥ ಅತಿಶಯ ನಿರೀಕ್ಷೆಗಳೇನೂ ಇರಲಿಲ್ಲ. ಅಫ್ಘಾನಿಸ್ತಾನ ಅದಕ್ಕೆ ಮುನ್ನ ಪಾಕಿಸ್ತಾನ, ಇಂಗ್ಲೆಂಡ್, ಶ್ರೀಲಂಕಾ ಮತ್ತು ನೆದರ್ಲೆಂಡ್ ವಿರುದ್ಧ ಗೆದ್ದಿದ್ದರೂ, ಆಸ್ಟ್ರೇಲಿಯಾ ವಿರುದ್ಧ ‘ಏನೋ ನಡೆದುಬಿಡುತ್ತದೆ’ ಎಂಬ ಮುನ್ಸೂಚನೆ ಇರಲಿಲ್ಲ. ಆದರೂ, 5 ಬಾರಿಯ ಚಾಂಪಿಯನ್ ತಂಡದ ವೇಗಿಗಳ ವಿರುದ್ಧ ಅಫ್ಘನ್ನರು ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿ 291 ರನ್ ಗಳಿಸಿದ್ದು ಅಚ್ಚರಿ ಮೂಡಿಸಿತ್ತು. ತದನಂತರ ಆಸ್ಟ್ರೇಲಿಯಾ ಬ್ಯಾಟರ್ಗಳು 43ಕ್ಕೆ2, 49ಕ್ಕೆ3, 49ಕ್ಕೆ4, 69ಕ್ಕೆ5, 87ಕ್ಕೆ6, 91ಕ್ಕೆ7 ವಿಕೆಟ್ ಕಳೆದುಕೊಳ್ಳುತ್ತಿದ್ದಂತೆಯೇ ಅಯ್ಯಯ್ಯೋ, ಅನಾಹುತ.. ಎಂಬ ಭಾವನೆ. ದಿಢೀರನೆ ಬರುವ ಯಶಸ್ಸು ಸಾಮಾನ್ಯರನ್ನು ಮೈಮರೆಸಿಬಿಡುತ್ತದೆ. ಅಫ್ಘಾನಿಸ್ತಾನಕ್ಕೆ ಆಗಿದ್ದೂ ಅದೇ. 7 ವಿಕೆಟ್ ಬಿದ್ದಮೇಲೆ, ಗೆಲುವಿಗೆ ಮೂರೇ ಗೇಣು ಎಂಬ ಉನ್ಮಾದದಲ್ಲಿ ತಂಡ ಮೈಮರೆಯಿತು. 91ರಿಂದ 291ರ ನಡುವೆ 200 ರನ್ಗಳ ಅಂತರವಿದ್ದಿದ್ದು, ಗೆಲುವು ಇನ್ನೇನಿದ್ದರೂ ನಮ್ಮದೇ ಎಂಬ ಭ್ರಮೆಯ ಖೆಡ್ಡಾದೊಳಗೆ ಅಫ್ಘನ್ನರನ್ನು ಬೀಳಿಸಿತು. ತಾವು ಆಡುತ್ತಿರುವುದು ಆಸ್ಟ್ರೇಲಿಯನ್ನರ ವಿರುದ್ಧ ಎನ್ನುವುದು ಆ ಹುಡುಗರಿಗೆ ಆ ಕ್ಷಣ ಮರೆತುಹೋಯಿತು.
ಸಾವು ಮತ್ತು ಸೋಲಿನ ಕೊಟ್ಟಕೊನೆಯ ಮೆಟ್ಟಿಲ ಮೇಲೆ ನಿಂತ ವ್ಯಕ್ತಿಗೆ ಭಯವೆನ್ನುವುದು ಇರುವುದಿಲ್ಲ. ಕಳೆದುಕೊಳ್ಳುವ ಭೀತಿಯೇ ಇಲ್ಲದ ಮನುಷ್ಯ ನಿಂತ ಕಾಲಿನ ಮೇಲೆ ಆಗಸಕ್ಕೆ ಏಣಿ ಹಾಕಲು ಹಿಂಜರಿಕೆ ಪಡುವುದಿಲ್ಲ. ಆಸ್ಟ್ರೇಲಿಯಾ ಹಾಗೂ ಹೆಚ್ಚಿನ ಇತರ ತಂಡಗಳ ನಡುವೆ ಇರುವ ವ್ಯತ್ಯಾಸ ಅದೇ. ಇದೇ ಅಫ್ಘನ್ನರ ವಿರುದ್ಧ 285 ರನ್ ಗುರಿ ಬೆನ್ನಟ್ಟಿದ್ದ ಇಂಗ್ಲೆಂಡ್ 91ಕ್ಕೆ4, 160ಕ್ಕೆ7 ವಿಕೆಟ್ ಕಳೆದುಕೊಂಡು ಕೊನೆಗೆ 215 ರನ್ಗೆ ಕುಸಿದು ದಯನೀಯ ಸೋಲನ್ನಪ್ಪಿತ್ತು. ಪಾಕಿಸ್ತಾನ, ಶ್ರೀಲಂಕಾ ತಂಡಗಳನ್ನೂ ಸಾಧಾರಣ ಮೊತ್ತಕ್ಕೆ ಕಟ್ಟಿ ಹಾಕಿದ್ದ ಅಫ್ಘನ್ನರು ಕೇವಲ 2 ಹಾಗೂ 3 ವಿಕೆಟ್ ಮಾತ್ರ ಕಳೆದುಕೊಂಡು ಗೆಲುವಿನ ಗುರಿ ತಲುಪಿದ್ದರು. ಆದರೆ, ಆಸ್ಟ್ರೇಲಿಯಾ ವಿರುದ್ಧ ಗೆಲ್ಲುವುದೆಂದರೆ, ಉಳಿದ ತಂಡಗಳನ್ನು ಸೋಲಿಸಿದಂತಲ್ಲ!
ಅಷ್ಟಕ್ಕೂ ಕ್ರೀಡೆಯಲ್ಲಿ ಕೊಟ್ಟಕೊನೆಯ ವಿಕೆಟ್ ಕಬಳಿಸುವವರೆಗೂ, ಕೊಟ್ಟ ಕೊನೆಯ ಹೆಜ್ಜೆ ಓಡುವವರೆಗೂ ಗೆಲುವು ನಮ್ಮದಲ್ಲವೇ ಅಲ್ಲ. 400 ಮೀ. ಓಟದಲ್ಲಿ ಗೆಲುವಿನ ರೇಖೆಗೆ ಎರಡೇ ಹೆಜ್ಜೆ ಇದೆ; ಇನ್ನೇನು ನಾನೇ ಗೆದ್ದೆ ಎಂದು ಖುಷಿಯಿಂದ ಕೈ ಎತ್ತುವ ಹೊತ್ತಲ್ಲಿ ಹಿಂದಿದ್ದವನು ದೈತ್ಯಹೆಜ್ಜೆಯಿಂದ ಮುಂದೆ ಸಾಗಿ ಗೆಲುವು ಕಿತ್ತುಕೊಂಡ ಉದಾಹರಣೆಗಳಿವೆ. ಟೆನಿಸ್ನಲ್ಲಿ ಎರಡು ಸೆಟ್ ಗೆದ್ದು, 3ನೇ ಸೆಟ್ನಲ್ಲೂ ಮ್ಯಾಚ್ಪಾಯಿಂಟ್ವರೆಗೆ ಸಾಗಿದ ಮೇಲೂ ಆ ಒಂದು ಅಂಕ ಗೆದ್ದುಕೊಳ್ಳಲು ಸಾಧ್ಯವಾಗದೆ ಪಂದ್ಯ ಸೋತ ಉದಾಹರಣೆಗಳಿವೆ. ಕ್ರೀಡೆ ಯಾವುದೇ ಇರಲಿ, ಗೆಲುವೆನ್ನುವುದು ಪೋಸ್ಟ್ ಡೇಟೆಡ್ ಚೆಕ್ನಂತೆ. ಚೆಕ್ ಕೈಗೆ ಬಂದ ಮಾತ್ರಕ್ಕೆ ಹಣ ಕೈಸೇರಿದಂತಲ್ಲ. ಚೆಕ್ ಬೌನ್ಸ್ ಆಗುವ ಸಾಧ್ಯತೆ ಇದ್ದೇ ಇರುತ್ತದೆ. ಗೆಲುವಿಗಾಗಿ ಕೊನೆಯ ಹೆಜ್ಜೆ ಕ್ರಮಿಸುವುದು ಬಹಳ ಮುಖ್ಯ. ನಡುವೆ ವಿಚಲಿತಗೊಂಡರೆ ಗುರಿ ತಪ್ಪಿದಂತೆಯೇ.
ಅಫ್ಘಾನಿಸ್ತಾನಕ್ಕೆ ಆಸ್ಟ್ರೇಲಿಯಾ ಅಂಥ ಮಹತ್ವದ ಪಾಠವನ್ನೇ ಕಲಿಸಿತು. ಆ ತಂಡದ ಮುಕ್ಕಾಲುಪಾಲು ಬ್ಯಾಟ್ಸ್ಮನ್ಗಳೆಲ್ಲ ಔಟಾಗಿದ್ದರು. ಆದರೆ, ಗ್ಲೆನ್ ಮ್ಯಾಕ್ಸ್ವೆಲ್ ಮತ್ತು ನಾಯಕ ಪ್ಯಾಟ್ ಕಮಿನ್ಸ್ ಇನ್ನೂ ಬಾಕಿ ಉಳಿದಿದ್ದರು. ಆನೆಯನ್ನೇ ನುಂಗಿದ್ದ ಆಫ್ಘನ್ನರಿಗೆ ಬಾಲ ಗಂಟಲಲ್ಲಿ ಸಿಲುಕಿಕೊಂಡಿತ್ತು! ಆಸ್ಟ್ರೇಲಿಯಾ ಆಟದ ಕೌಶಲದಲ್ಲಿ ಮಾತ್ರವಲ್ಲದೆ, ಮಾನಸಿಕ ಗಟ್ಟಿತನದಲ್ಲೂ ವಿಶೇಷವಾಗಿ ಪಳಗಿರುವ ತಂಡ. ಎಂಥ ಪ್ರತಿಕೂಲ ಸನ್ನಿವೇಶದಲ್ಲೂ ಧೃತಿಗೆಡುವುದು ಆ ತಂಡಕ್ಕೆ ಗೊತ್ತಿಲ್ಲ. ಸೋಲಿನ ಸಾಧ್ಯತೆ ಹೆದರಿಸುತ್ತದೆ, ಹೆದರಿಕೆಯಿಂದ ಸೋಲಾಗುತ್ತದೆ. ಪ್ರವಾಹದಲ್ಲಿ ಮುಳುಗುವವನಿಗೆ ಒಂದು ಹುಲ್ಲುಕಡ್ಡಿಯ ಆಸರೆ ಸಿಕ್ಕಿದರೂ ಬದುಕುವ ಪ್ರಯತ್ನ ನಡೆಸುತ್ತಾನೆ. ಮ್ಯಾಕ್ಸ್ವೆಲ್ಗೂ ಮುಜೀಬ್ ಉರ್ ರೆಹಮಾನ್ ಕ್ಯಾಚ್ ನೆಲಕ್ಕೆ ಹಾಕಿ ಅಂಥ ಒಂದು ಜೀವದಾನ ನೀಡಿದ್ದೇ ಸಾಕಾಯಿತು. ಪ್ರತಿಕೂಲ ಸನ್ನಿವೇಶ, ಅಫ್ಘನ್ನರ ಆತ್ಮವಿಶ್ವಾಸ, ದೈಹಿಕ ಆಯಾಸ, ಸ್ನಾಯುಸೆಳೆತ ಇದ್ಯಾವುದಕ್ಕೂ ಮ್ಯಾಕ್ಸ್ವೆಲ್ ಕಂಗೆಡಲಿಲ್ಲ. ಗೆಲುವಿಗೆ ಅಗತ್ಯವಿದ್ದ ಇನ್ನೂರಕ್ಕೆ ಇನ್ನೂರೂ ರನ್ಗಳನ್ನೂ ತಾನೊಬ್ಬನೇ ಗಳಿಸಬಲ್ಲೆ ಎಂಬ ನಂಬುಗೆ ಅವರಲ್ಲಿತ್ತು. ಅವರಿಗೆ ಆ ಕ್ಷಣದಲ್ಲಿ ವಿಕೆಟ್ ಕಾಪಾಡಿಕೊಂಡು ತಮ್ಮ ಜತೆ ನಿಲ್ಲುವ ಜತೆಗಾರನೊಬ್ಬನ ಅವಶ್ಯಕತೆ ಮಾತ್ರ ಇತ್ತು. ಆ ಪಾತ್ರಕ್ಕೆ ನಾಯಕ
ಕಮಿನ್ಸ್ಗಿಂತ ಮತ್ತೋರ್ವ ವ್ಯಕ್ತಿ ಸಿಗುವುದು ಸಾಧ್ಯವಿರಲಿಲ್ಲ. ಕ್ರಿಕೆಟ್ ಇತಿಹಾಸದಲ್ಲಿ ಮ್ಯಾಕ್ಸ್ವೆಲ್ ಆಟ ಮತ್ತು ಕಮಿನ್ಸ್ರೊಂದಿಗಿನ ಅವರ ಜತೆಯಾಟ ವಿರಳಾತಿವಿರಳ. ಕ್ರಿಕೆಟ್ ವಿದ್ಯಾರ್ಥಿಗಳಿಗೆ ಅಧ್ಯಯನಕ್ಕೆ ವಸ್ತು.
18.3ನೇ ಓವರ್ನಲ್ಲಿ ಮಿಚೆಲ್ ಸ್ಟಾರ್ಕ್ 7ನೆಯವರಾಗಿ ಔಟಾದಾಗ ಮ್ಯಾಕ್ಸ್ ವೆಲ್ 26 ಎಸೆತಗಳಲ್ಲಿ 22 ರನ್ ಗಳಿಸಿದ್ದರು. ಮ್ಯಾಕ್ಸ್ವೆಲ್ 27 ರನ್ ಗಳಿಸಿದ್ದಾಗ ನೂರ್ ಅಹ್ಮದ್ ಬೌಲಿಂಗ್ನಲ್ಲಿ ಎಲ್ಬಿಡಬ್ಲ್ಯು ಆತಂಕಕ್ಕೆ ಸಿಲುಕಿದ್ದರು. ಔಟ್ ಎಂದು ಅಂಪೈರ್ ತೀರ್ಪು ಕೊಟ್ಟಾಗಿತ್ತು. ಡಿಆರ್ಎಸ್ನಲ್ಲಿ ಎಲ್ಲವೂ ಸರಿ ಇತ್ತು. ಪೆವಿಲಿಯನ್ ದಿಕ್ಕಿನಲ್ಲಿ ಮ್ಯಾಕ್ಸಿ ಹೆಜ್ಜೆ ಇಟ್ಟಾಗಿತ್ತು. ಆದರೆ, ಇಂಪ್ಯಾಕ್ಟ್ನಲ್ಲಿ ಚೆಂಡು ಸ್ಟಂಪ್ಸ್ಗಿಂತ ತುಸು ಮೇಲೆ ಟ್ರಾ್ಯಕ್ ಆಗಿತ್ತು. ತಂತ್ರಜ್ಞಾನ ಅವರನ್ನು ಕಾಪಾಡಿತ್ತು. ಇದಾದ ಮೂರು ಎಸೆತಗಳ ಬಳಿಕ ಸುಲಭವಾಗಿ ಹಿಡಿಯಬಹುದಾಗಿದ್ದ ಕ್ಯಾಚ್ ಅನ್ನು ಮುಜೀಬ್ ನೆಲಕ್ಕೆ ಹಾಕಿದ್ದರು. ಅದೃಷ್ಟ ಮ್ಯಾಕ್ಸ್ವೆಲ್ ಜತೆಗಿತ್ತು. ಹೋರಾಟ ಬಾಕಿ ಇತ್ತು.
ಮ್ಯಾಕ್ಸ್ವೆಲ್-ಕಮಿನ್ಸ್ಗೆ ಹೋರಾಡುವುದಕ್ಕೆ 30 ಓವರ್ಗಳು ಎದುರಿಗಿದ್ದವು. ಕಮಿನ್ಸ್ ಒಂದು ಬದಿಯಲ್ಲಿ ಗಟ್ಟಿಯಾಗಿ ನಿಂತರೆ, ರನ್ ಹೊಡೆಯುವ ಕೆಲಸವನ್ನು ಮ್ಯಾಕ್ಸ್ವೆಲ್ ಮಾಡಿದರು. 76 ಎಸೆತಗಳಲ್ಲಿ 10 ಬೌಂಡರಿ, 3 ಸಿಕ್ಸರ್ ನೆರವಿನಿಂದ ಅವರು ಈ ವಿಶ್ವಕಪ್ನ 2ನೇ ಶತಕ ಸಿಡಿಸಿಯಾಗಿತ್ತು. ಇನ್ನೂ ಗುರಿ ಬೆಟ್ಟದಂತೆಯೇ ಇತ್ತು. ಅಷ್ಟರಲ್ಲಿ ಎಡಗಾಲಿನ ಸ್ನಾಯುಸೆಳೆತಕ್ಕೆ ಸಿಲುಕಿ ತೊಡೆಸಂಧು ನೋವಿನಿಂದ ಅವರು ಬಳಲುತ್ತಿದ್ದರು. ಸನ್ನಿವೇಶ ಬೇರೆ ಇದ್ದಿದ್ದರೆ ಅವರು ಆಟದಿಂದ ನಿವೃತ್ತರಾಗಬೇಕಿತ್ತು. ಆದರೆ, ಅವರೊಳಗಿನ ಅಸಾಧ್ಯ ಛಲ ಅದಕ್ಕೆ ಒಪ್ಪಲಿಲ್ಲ. ಒಂಟಿಗಾಲಿನ ಸೈನಿಕನಂತೆ ಅವರು ಒಂದೇಕಾಲಿನ ಮೇಲೆ ಭಾರ ಹಾಕಿ ನಿಂತು ಬ್ಯಾಟಿಂಗ್ ಮಾಡಲು ಮುಂದಾದರು. ಆನಂತರದ ಓವರ್ಗಳಲ್ಲಿ ಅವರು ರನ್ಗಾಗಿ ಓಡಲೇ ಇಲ್ಲ. ಒಂದು ತುದಿಯಲ್ಲಿ ಕಮಿನ್ಸ್ ರನ್ಗಾಗಿ ಯತ್ನಿಸದೆ ಮೇಡನ್ ಓವರ್ಗಳನ್ನು ಆಡಿಕೊಂಡರೆ, ಇನ್ನೊಂದು ತುದಿಯಲ್ಲಿ ಕೇವಲ ಬೌಂಡರಿ, ಸಿಕ್ಸರ್ಗಳ ರೂಪದಲ್ಲೇ ಮ್ಯಾಕ್ಸಿ ರನ್ಗಳನ್ನು ಚಚ್ಚಿದರು. ಮೊದಲ 76 ಎಸೆತಗಳಲ್ಲಿ 100 ರನ್ ಗಳಿಸಿದ್ದ ಮ್ಯಾಕ್ವೆಲ್, ನಂತರದ 52 ಎಸೆತಗಳಲ್ಲಿ ದ್ವಿಶತಕ ಗಡಿ ದಾಟಿದ್ದರು. ಇದರಲ್ಲಿ 44 ರನ್ ಬೌಂಡರಿ ಮೂಲಕ, 42 ರನ್ ಸಿಕ್ಸರ್ಗಳಿಂದ ಬಂದಿದ್ದವು. ಮ್ಯಾಕ್ಸ್ವೆಲ್ 128 ಎಸೆತಗಳಲ್ಲಿ ಗಳಿಸಿದ 201 ರನ್ಗಳಷ್ಟೇ, ಕಮಿನ್ಸ್ 68 ಎಸೆತ ಎದುರಿಸಿ ಗಳಿಸಿದ 12 ರನ್ಗಳೂ ಚಿನ್ನದ ತೂಕ ಹೊಂದಿದ್ದವು. ಕಮಿನ್ಸ್ರ ’ನಿನ್ನೊಂದಿಗೆ ನಾನಿದ್ದೇನೆ’ ಎಂಬ ಭರವಸೆಯೇ ಮ್ಯಾಕ್ಸಿಯ ಆ ಆಟಕ್ಕೆ ಬಲ ತುಂಬಿತ್ತು.
ಆ ದಿನ ಮ್ಯಾಕ್ಸ್ವೆಲ್- ಕಮಿನ್ಸ್ರನ್ನು ಔಟ್ ಮಾಡುವುದಕ್ಕೆ ಆಫ್ಘನ್ನರಿಂದಲೂ ಪವಾಡಸದೃಶ ಪ್ರಯತ್ನವೇ ಬೇಕಾಗಿತ್ತು. ಅಲ್ಲಿ ಬೌಲರ್ಗಳಷ್ಟೇ ನಾಯಕನ ಪಾತ್ರವೂ ಮಹತ್ವದ್ದಾಗಿತ್ತು. ಆದರೆ, ಅಂಥ ಅನುಭವ ಅವರಿಗಿರಲಿಲ್ಲ. ಬಹುಶಃ ಅಫ್ಘನ್ನರ ಜಾಗದಲ್ಲಿ ರೋಹಿತ್ ಶರ್ಮ, ಕೇನ್ ವಿಲಿಯಮ್ಸನ್ರಂಥ ನಾಯಕರು ಇದ್ದಿದ್ದರೆ, ಪಂದ್ಯ ಯಾವಾಗಲೋ ಮುಗಿದುಹೋಗಿರುತ್ತಿತ್ತು. ಚೆಂಡು ಎಡ್ಜ್ಗಳಾದಾಗ ಸ್ಲಿಪ್ನಲ್ಲಿ ಫೀಲ್ಡರ್ಗಳಿರಲಿಲ್ಲ. ಬ್ಯಾಟರ್ಗಳ ಮೇಲೆ ಒತ್ತಡ ಹೇರುವ ರೀತಿಯಲ್ಲಿ ಎಸೆತಗಾರಿಕೆ, ಬೌಲಿಂಗ್ ಬದಲಾವಣೆ, ಫೀಲ್ಡರ್ಗಳ ನಿಯೋಜನೆ, ತಂತ್ರ ಹೆಣೆಯುವುದರಲ್ಲಿ ಅಫ್ಘನ್ನರಿಗೆ ಅನನುಭವ ಕಾಡಿತು. ಮ್ಯಾಕ್ಸ್ವೆಲ್ ಹೋಗಲಿ, ಕಮಿನ್ಸ್ರನ್ನು ಔಟ್ ಮಾಡುವುದಕ್ಕೂ ಅಫ್ಘನ್ನರ ಬಳಿ ಅಸ್ತ್ರಗಳಿರಲಿಲ್ಲ. ಒಟ್ಟಿನಲ್ಲಿ ಆ ದಿನ ಕಾಂಗರೂಗಳ ಕೆಚ್ಚು ಗೆದ್ದಿತ್ತು. ಅಫ್ಘನ್ನರ ಅನನುಭವಕ್ಕೆ ಸೋಲಾಗಿತ್ತು. ಭಾರತದ ಈ ವಿಶ್ವಕಪ್ ಬ್ಯಾಟರ್ಗಳಿಗೆ ಕೀರ್ತಿದಾಯಕವಾಗಿದೆ. ಅತೀ ಹೆಚ್ಚಿನ ಶತಕಗಳು, ಅತೀ ಹೆಚ್ಚಿನ ರನ್ಗಳು, ಬೌಂಡರಿ, ಸಿಕ್ಸರ್ಗಳು ಅಭಿಮಾನಿಗಳಲ್ಲಿ ಕಿಚ್ಚೇರಿಸಿವೆ. ಇಂಥ ಸಪಾಟೆ ಪಿಚ್ಗಳಲ್ಲಿ ಬ್ಯಾಟರ್ಗಳ ಮೆರೆದಾಟದ ನಡುವೆಯೂ ಬುಮ್ರಾ, ಶಮಿ, ಜಂಪಾ, ಸ್ಯಾಂಟ್ನರ್, ಮಧುಶಂಕ, ಮಾರ್ಕೆ ಜಾನ್ಸನ್, ಕುಲ್ದೀಪ್ರಂಥ ಬೌಲರ್ಗಳು ತಮ್ಮ ಛಾಪು ಮೆರೆದು ಪಂದ್ಯಗಳ ರೋಚಕತೆ ಹೆಚ್ಚಿಸುತ್ತಿದ್ದಾರೆ. ಅದರಲ್ಲೂ ಆತಿಥೇಯ ಭಾರತ ಎಂಟಕ್ಕೆ ಎಂಟೂ ಪಂದ್ಯಗಳನ್ನು ಗೆದ್ದ ಬಗೆ ಇಡೀ ಟೂರ್ನಿಯ ವಾಣಿಜ್ಯಾತ್ಮಕ ಯಶಸ್ಸನ್ನು ದುಪ್ಪಟ್ಟುಗೊಳಿಸಿದೆ. ಟೂರ್ನಿ ಕೊನೆಯ ಘಟ್ಟ ತಲುಪಿರುವಂತೆಯೇ ಅತ್ಯುತ್ತಮ 4 ತಂಡಗಳ ಉಪಾಂತ್ಯ ಹಣಾಹಣಿಗೆ ವೇದಿಕೆ ಸಜ್ಜುಗೊಳ್ಳುತ್ತಿದೆ.
ಸುದೀರ್ಘ ಟೂರ್ನಿ ಸಾಗಿ ಬಂದ ಹಾದಿ ಗಮನಿಸುವಾಗ ಛಲಗಾರರು ಗೆಲ್ಲುವುದು ಮತ್ತೆಮತ್ತೆ ಸಾಬೀತಾಗುತ್ತಿದೆ. ಭಾರತ ತನ್ನ ಮೊದಲ ಪಂದ್ಯದಲ್ಲೇ ಆಸ್ಟ್ರೇಲಿಯಾ ವಿರುದ್ಧ 2 ರನ್ಗೆ 3 ವಿಕೆಟ್ ಕಳೆದುಕೊಂಡಿದ್ದರೂ, ವಿರಾಟ್ ಕೊಹ್ಲಿ ಮತ್ತು ಕೆಎಲ್ ರಾಹುಲ್ ಕೆಚ್ಚಿನ ಆಟವಾಡಿ ಟೂರ್ನಿಗೊಂದು ಛಲದ ಗೆಲುವಿನ ಮಾದರಿ ಹಾಕಿಕೊಟ್ಟಿದ್ದರು. ಬೆಂಗಳೂರಿನಲ್ಲಿ ನ್ಯೂಜಿಲೆಂಡ್ 401 ರನ್ಗಳ ಅತ್ಯಧಿಕ ಮೊತ್ತ ಪೇರಿಸಿ ಸವಾಲೊಡ್ಡಿದಾಗ ಪಾಕಿಸ್ತಾನದ ಆರಂಭಿಕ ಫಖರ್ ಜಮಾನ್ ವಿಸ್ಪೋಟಕ ಶತಕ ಸಿಡಿಸಿ ಮಳೆ ಅಡ್ಡಿ ಪಡಿಸಿದ ಪಂದ್ಯದಲ್ಲಿ ಡಕ್ವರ್ತ್ ಲೂಯಿಸ್ ನಿಯಮದ ಪ್ರಕಾದ ಪಾಕ್ ಗೆಲ್ಲುವಂತೆ ನೋಡಿಕೊಂಡರು. ಅಂದರೆ, ಬೌಲರ್ಗಳ ಆಸೀಮ ಸಾಹಸದ ನಡುವೆಯೂ ಇದು ಬ್ಯಾಟರ್ಗಳ ವಿಶ್ವಕಪ್ ಆಗಿದೆ. ವಿರಾಟ್ ಕೊಹ್ಲಿ, ರೋಹಿತ್ ಶರ್ಮ, ಡೇವಿಡ್ ವಾರ್ನರ್, ಮ್ಯಾಕ್ಸ್ವೆಲ್, ಕ್ವಿಂಟನ್ ಡಿಕಾಕ್, ಹೆನ್ರಿಚ್ ಕ್ಲಾಸೆನ್, ರಚಿನ್ ರವೀಂದ್ರ, ಡೆವಾನ್ ಕಾನ್ವೆ, ಫಖರ್ ಜಮಾನ್, ಮೊಹಮದ್ ರಿಜ್ವಾನ್ ಮೊದಲಾದವರ ಆಟ ಈ ವಿಶ್ವಕಪ್ನ ವಿಜೇತರನ್ನು ನಿರ್ಣಯಿಸಲಿದೆ.
ಛಲದೊಳ್ ದುರ್ಯೋಧನಂ.. ಸಾಹಸದ ಮಹಿಮೆಯೊಳ್ ಫಲ್ಗುಣಂ... (ಪಂಪ)
(ಲೇಖಕರು ‘ವಿಜಯವಾಣಿ’ ಡೆಪ್ಯೂಟಿ ಎಡಿಟರ್)