ಅಂಕಣ

ಕುಸಿದ ಇಳುವರಿ, ತೊಗರಿ ದುಬಾರಿ: ಕಗ್ಗಂಟು ಸೃಷ್ಟಿಸಿದ ಮಳೆ, ನೆಟೆರೋಗದ ಅಂಟು

ನೆಟೆರೋಗ, ಮಳೆಯಿಂದಾಗಿ ತೊಗರಿ ಇಳುವರಿಯಲ್ಲಿ ಭಾರಿ ಕುಸಿತ ಕಂಡಿದ್ದು, ಬೆಲೆ ದಿನೇದಿನೆ ಹೆಚ್ಚುತ್ತಿದೆ. ದೇಶದಲ್ಲಿ 18 ಲಕ್ಷ ಮೆಟ್ರಿಕ್ ಟನ್ ಉತ್ಪಾದನೆಯಾಗುತ್ತಿದ್ದು, 23 ಲಕ್ಷ ಮೆಟ್ರಿಕ್ ಟನ್​ಗೆ ಬೇಡಿಕೆ ಇದೆ. ಇದನ್ನು ಸರಿದೂಗಿಸಲು ದಕ್ಷಿಣ ಆಫ್ರಿಕಾ ಇತರ ರಾಷ್ಟ್ರಗಳಿಂದ ಆಮದು ಮಾಡಿಕೊಳ್ಳಲಾಗುತ್ತಿದೆ.

| ಜಯತೀರ್ಥ ಪಾಟೀಲ ಕಲಬುರಗಿ

ತೊಗರಿ ಬೆಳೆಯುವ ಕಲ್ಯಾಣ ನಾಡಿನ ಕಲಬುರಗಿ ಜಿಲ್ಲೆಯಲ್ಲಿ ನೆಟೆರೋಗ, ಮಳೆಯಿಂದಾಗಿ ಇಳುವರಿಯಲ್ಲಿ ಭಾರಿ ಕುಸಿತ ಕಂಡಿದೆ. ಹೀಗಾಗಿ ತೊಗರಿ ಬೇಳೆ ಬೆಲೆ ದಿನೇದಿನೆ ಗಗನಕ್ಕೇರುತ್ತಿದೆ. ದೇಶದಲ್ಲಿ ಸುಮಾರು 18 ಲಕ್ಷ ಮೆಟ್ರಿಕ್ ಟನ್ ತೊಗರಿ ಉತ್ಪಾದನೆಯಾದರೆ, 23 ಲಕ್ಷ ಮೆಟ್ರಿಕ್ ಟನ್​ಗೆ ಬೇಡಿಕೆ ಇದೆ. ಉತ್ಪಾದನೆ ಮತ್ತು ಸರಬರಾಜಿನಲ್ಲಿ ಭಾರಿ ಅಂತರವಿದ್ದು, ಇದನ್ನು ಸರಿದೂಗಿಸಲು ದಕ್ಷಿಣ ಆಫ್ರಿಕಾ ಇತರ ರಾಷ್ಟ್ರಗಳಿಂದ ಆಮದು ಮಾಡಿಕೊಳ್ಳಲಾಗುತ್ತಿದೆ. ದೇಶದ 18 ಲಕ್ಷ ಮೆಟ್ರಿಕ್ ಟನ್ ಉತ್ಪಾದನೆಯಲ್ಲಿ ಕಲಬುರಗಿ ಜಿಲ್ಲೆ 10 ಲಕ್ಷ ಮೆಟ್ರಿಕ್ ಟನ್ ಉತ್ಪಾದನೆ ಮಾಡುತ್ತಿದೆ ಎಂಬುದು ವಿಶೇಷ. ಕಲಬುರಗಿ ಜಿಲ್ಲೆಯಲ್ಲಿ ಮೊದಲು 7.50 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಮಾಡಲಾಗುತ್ತಿತ್ತು. ಆದರೀಗ ಗಣನೀಯ ಇಳಿಕೆಯಾಗಿ ಕಳೆದ ಸಲ 5.50-4.50 ಲಕ್ಷ ಹೆಕ್ಟೇರ್​ಗೆ ಕುಸಿದಿದೆ. ತೊಗರಿ ಬೆಳೆಗಾರರು ಹತ್ತಾರು ಸಮಸ್ಯೆಗಳನ್ನು ಎದುರಿಸಿ ಹತ್ತಿ, ಕಬ್ಬು, ಸೋಯಾಬೀನ್ ಬೆಳೆಗಳತ್ತ ವಾಲುತ್ತಿದ್ದಾರೆ. ಪರಿಸ್ಥಿತಿ ಹೀಗೇ ಮುಂದುವರಿದರೆ ತೊಗರಿ ಬೆಳೆಯುವ ಪ್ರದೇಶ ಭಾರಿ ಪ್ರಮಾಣದಲ್ಲಿ ಕಡಿಮೆಯಾಗಿ ಪೂರೈಕೆ ಮೇಲೆ ಗಂಭೀರ ಪರಿಣಾಮ ಬೀರುವ ಕಾಲ ಸನ್ನಿಹಿತವಾಗಲಿದೆ.

ಕುಗ್ಗಿದ ಉತ್ಪನ್ನ: ರಾಜ್ಯ ಮಟ್ಟದ ಅಂಕಿ-ಅಂಶ ಗಮನಿಸಿದಾಗ ತೊಗರಿ ಉತ್ಪಾದನೆ ಮತ್ತು ಏರಿಯಾದಲ್ಲಿ ಗಣನೀಯ ಕುಂಠಿತ ಕಂಡಿದೆ. 2020-21ರಲ್ಲಿ 5.81 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಉತ್ಪಾದನೆ 6.22 ಲಕ್ಷ ಟನ್ ಇತ್ತು. ಆದರೆ 2022-23ರಲ್ಲಿ 12.20 ಲಕ್ಷ ಹೆಕ್ಟೇರ್​ನಲ್ಲಿ ಕೇವಲ 9.37 ಲಕ್ಷ ಟನ್ ಉತ್ಪಾದನೆಯಾಗಿದೆ. ಇದು ರಾಜ್ಯದ ತೊಗರಿ ಉತ್ಪಾದನೆಯಲ್ಲಿ ಭಾರಿ ಕುಂಠಿತವಾಗಿರುವುದನ್ನು ಸ್ಪಷ್ಟಪಡಿಸುತ್ತದೆ. ಕಲಬುರಗಿ ಜಿಲ್ಲೆಯ ಅಂಕಿ-ಅಂಶ ಗಮನಿಸಿದಾಗ 2021-22ರಲ್ಲಿ 6.21 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ 5.68 ಲಕ್ಷ ಟನ್ ಉತ್ಪಾದನೆ ಮಾಡಲಾಗಿತ್ತು. ಕಳೆದ ವರ್ಷದ ಉತ್ಪಾದನೆಯಲ್ಲಿ ಇನ್ನೂ ಹೆಚ್ಚು ಕುಸಿತ ಕಂಡುಬಂದಿದೆ.

ಅತಿಯಾದ ಮಳೆ ಅವಾಂತರ: ಆಗಸ್ಟ್, ಸೆಪ್ಟೆಂಬರ್ ಮತ್ತು ಅಕ್ಟೋಬರ್​ಗಳಲ್ಲಿ ಸುರಿದ ಅತಿಯಾದ ಮಳೆಯಿಂದಾಗಿ ಕಲಬುರಗಿ ಜಿಲ್ಲೆಯಲ್ಲಿ 1.29 ಲಕ್ಷ ಹೆಕ್ಟೇರ್ ತೊಗರಿ ಜತೆಗೆ ಹೆಸರು 11 ಸಾವಿರ, ಉದ್ದು 7 ಸಾವಿರ, ಹತ್ತಿ 24 ಸಾವಿರ, ಮೆಕ್ಕೆಜೋಳ 300, ಸೂರ್ಯಕಾಂತಿ 621, ಸೋಯಾಬಿನ್ 8 ಸಾವಿರ ಸೇರಿ 1.80 ಲಕ್ಷ ಹೆಕ್ಟೇರ್ ಬೆಳೆ ಹಾನಿಗೊಳಗಾಗಿದೆ. ಅತಿವೃಷ್ಟಿಯಿಂದ 1.76 ಲಕ್ಷ ಹೆಕ್ಟೇರ್ ನಷ್ಟಕ್ಕೀಡಾಗಿದ್ದು, 2.59 ಲಕ್ಷ ರೈತರಿಗೆ 239.91 ಕೋಟಿ ರೂ. ಪರಿಹಾರ ನೀಡಲಾಗಿದೆ. ಇದರಲ್ಲಿ 208 ಕೋಟಿ ರೂ. ತೊಗರಿ ಹಾನಿ ಪರಿಹಾರ ಸೇರಿದೆ.

ದೇಶದಲ್ಲಿ ತೊಗರಿ ಬೇಳೆಗೆ ಬೇಡಿಕೆ ಹೆಚ್ಚಿದ್ದು, ಉತ್ಪಾದನೆ ಕಡಿಮೆ ಆಗಿದೆ. ಇದನ್ನು ಸರಿದೂಗಿಸಲು ಉತ್ಪಾದನೆ ಹೆಚ್ಚಳಕ್ಕೆ ಒತ್ತು ನೀಡಲು ಪ್ರೋತ್ಸಾಹಧನದ ಮೂಲಕ ಉತ್ತೇಜಿಸಲು ಯೋಜಿಸಲಾಗುತ್ತಿದೆ. ಸದ್ಯದ ಸ್ಥಿತಿಯಲ್ಲಿ ಇತರ ರಾಷ್ಟ್ರಗಳಿಂದ ಆಮದು ಮಾಡಿಕೊಳ್ಳಬೇಕಾದ ಅನಿವಾರ್ಯತೆ ಇದೆ. | ನಿರ್ಮಲಾ ಸೀತಾರಾಮನ್, ಕೇಂದ್ರ ಹಣಕಾಸು ಸಚಿವೆ ಸರ್ಕಾರ ವಿಶೇಷ ಪ್ಯಾಕೇಜ್ ಮೂಲಕ ತೊಗರಿ ಹೆಚ್ಚು ಉತ್ಪಾದನೆಗೆ ಆದ್ಯತೆ ನೀಡಬೇಕು. ಹೊಸ ಬೀಜ ಉತ್ಪಾದನೆ ಮಾಡುವ ರೈತರಿಗೆ ಉತ್ತೇಜನ ನೀಡಬೇಕು. ಕ್ವಿಂಟಾಲ್​ಗೆ ಮೂರು ಸಾವಿರ ರೂ. ಪ್ರೋತ್ಸಾಹಧನ, ಮಾರುಕಟ್ಟೆ ದರಕ್ಕಿಂತ ಶೇ.20 ಹೆಚ್ಚು ನೀಡಿ ರೈತರ ಬೀಜ ಖರೀದಿಸಬೇಕು. | ಬಸವರಾಜ ಇಂಗಿನ್, ಅಧ್ಯಕ್ಷ, ಕರ್ನಾಟಕ ತೊಗರಿ ಬೆಳೆಗಾರರ ಸಂಘ

ಪೆಟ್ಟು ಕೊಟ್ಟ ನೆಟೆ

2022-23ರ ಮುಂಗಾರು ಹಂಗಾಮಿನಲ್ಲಿ ಕಲಬುರಗಿ ಜಿಲ್ಲೆಯಲ್ಲಿ 4.87 ಲಕ್ಷ ಹೆಕ್ಟೇರ್ ತೊಗರಿ ಬಿತ್ತನೆ ಮಾಡಲಾಗಿತ್ತು. ಫ್ಯೂಸೇರಿಯಂ ನೆಟೆ ಮತ್ತು ಸಂಕೀರ್ಣ ನೆಟೆ ರೋಗದಿಂದ 1.98 ಲಕ್ಷ ಹೆಕ್ಟೇರ್ ಬೆಳೆ ಹಾನಿಗೊಳಗಾಗಿದ್ದು, ಶೇ.40-60 ಇಳುವರಿ ಕುಗ್ಗಿದೆ. ಆಗಸ್ಟ್, ಸೆಪ್ಟೆಂಬರ್ ಮತ್ತು ಅಕ್ಟೋಬರ್​ನಲ್ಲಿ ಅತಿವೃಷ್ಟಿಯಿಂದಾಗಿ 1.29 ಲಕ್ಷ ಹೆಕ್ಟೇರ್ ತೊಗರಿ ಹಾನಿಯಾಗಿದೆ. ಹೀಗಾಗಿ ಹಾನಿಗೊಳಗಾದ 2.27 ಲಕ್ಷ ರೈತರಿಗೆ 208.24 ಕೋಟಿ ರೂ. ಪರಿಹಾರ ವಿತರಿಸಲಾಗಿದೆ. ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆ ಅಡಿ ಸ್ಥಳೀಯ ನಿರ್ದಿಷ್ಟ ವಿಕೋಪದಡಿ (72,336 ಹೆಕ್ಟೇರ್ ಹಾನಿ) 40,057 ರೈತರು ನೀಡಿದ ದೂರಿಗೆ ಸ್ಪಂದಿಸಿ 26.85 ಕೋಟಿ ರೂ. ಪರಿಹಾರ ನೀಡಲಾಗಿದೆ. ನೆಟೆರೋಗ ಬಾಧಿತ ತೊಗರಿ ಬೆಳೆಯಲ್ಲಿ ಇಳುವರಿ ಗಣನೀಯವಾಗಿ ಕಡಿಮೆಯಾಗಿ ಕಾಳುಗಳ ಸಂಖ್ಯೆ, ಗಾತ್ರ ಮತ್ತು ತೂಕದಲ್ಲೂ ಇಳಿಕೆಯಾಗಿದೆ.

ಎಲ್ಲೆಲ್ಲಿ ಬೆಳೆಯುತ್ತಾರೆ?

ಕರ್ನಾಟಕ, ಮಧ್ಯಪ್ರದೇಶ, ಉತ್ತರ ಪ್ರದೇಶ, ಮಹಾರಾಷ್ಟ್ರ, ತೆಲಂಗಾಣದಲ್ಲಿ ಹೆಚ್ಚು ತೊಗರಿ ಬೆಳೆಯಲಾಗುತ್ತಿದೆ. ದೇಶದ ಒಟ್ಟಾರೆ ತೊಗರಿ ಉತ್ಪಾದನೆಯಲ್ಲಿ ಶೇ.50ಕ್ಕೂ ಹೆಚ್ಚು ಪಾಲು ಕಲಬುರಗಿ ಜಿಲ್ಲೆಯದ್ದಾಗಿದೆ. ಒಂದು ಹಂತದಲ್ಲಿ 5 ಲಕ್ಷ ಮೆ.ಟನ್ ತೊಗರಿ ರಫ್ತು ಮಾಡಲಾಗುತ್ತಿತ್ತು. ಇಂಗ್ಲೆಂಡ್, ಆಸ್ಟ್ರೇಲಿಯಾ, ಅಮೆರಿಕ ಸೇರಿ ಅನೇಕ ದೇಶಗಳಲ್ಲಿ ಕಲಬುರಗಿಯ ಜಿಐ-ಟ್ಯಾಗ್ ಹೊಂದಿರುವ ತೊಗರಿ ಬೇಳೆ ಡಬಲ್ ರೇಟ್​ಗೆ ಮಾರಾಟವಾಗಿರುವ ಉದಾಹರಣೆಗಳೂ ಇವೆ.

ದರ ಗಗನಮುಖಿ: ಕ್ವಿಂಟಾಲ್​ಗೆ 6-8 ಸಾವಿರ ರೂ. ದರದಲ್ಲಿ ಮಾರಾಟವಾಗುತ್ತಿದ್ದ ತೊಗರಿ ಪ್ರಸಕ್ತ 9-10 ಸಾವಿರ ರೂ.ಗೆ ಮಾರಾಟವಾಗುತ್ತಿದೆ. ತೊಗರಿ ಬೇಳೆ ಕೆಜಿಗೆ 90-120 ರೂ. ಆಸುಪಾಸಿನಲ್ಲಿತ್ತು. ಆದರೀಗ 150-160 ರೂ. ತಲುಪಿದೆ. ಪರಿಸ್ಥಿತಿ ಹೀಗೇ ಮುಂದುವರಿದರೆ ಕೆಜಿಗೆ 200 ರೂ. ತಲುಪಿದರೂ ಅಚ್ಚರಿ ಪಡಬೇಕಿಲ್ಲ.

ಅಕಾಲಿಕ ಮಳೆ, ಆವಕ ಕೊರತೆ

| ಶರಣು ಪಾಟೀಲ ವಿಜಯಪುರ

ಅಕಾಲಿಕ ಮಳೆಯಿಂದ ತೊಗರಿ ಆವಕದ ಕೊರತೆ ಹಾಗೂ ನಿರೀಕ್ಷಿತ ಪ್ರಮಾಣದಲ್ಲಿ ತೊಗರಿ ಮಾರುಕಟ್ಟೆಗೆ ಬಾರದ ಹಿನ್ನೆಲೆ ವಿಜಯಪುರ ಎಪಿಎಂಸಿ ಮಾರುಕಟ್ಟೆಯಲ್ಲಿ ಕಳೆದ ವಾರ ತೊಗರಿ ಬೆಲೆ ಏಕಾಏಕಿ ಕ್ವಿಂಟಾಲ್​ಗೆ 4 ಸಾವಿರ ರೂ.ನಿಂದ 10 ಸಾವಿರ ರೂ.ಗೆ ಏರಿಕೆಯಾಗಿತ್ತು. ವಿಜಯಪುರ ಜಿಲ್ಲೆಯಲ್ಲಿ 7 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ವಿವಿಧ ಬೆಳೆಗಳನ್ನು ಬೆಳೆಯಲಾಗುತ್ತಿದ್ದು, ಅದರಲ್ಲೀಗ 4-5 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ತೊಗರಿ ಬೆಳೆ ಬೆಳೆಯುತ್ತಿದ್ದಾರೆ. ಆದರೆ, ಈ ಬಾರಿ ಮುಂಗಾರು ಹಂಗಾಮಿನ ಮುನ್ನವೇ ತೊಗರಿಯನ್ನು ಮಾರುಕಟ್ಟೆಗೆ ತರಬೇಕಿತ್ತು. ಅಕಾಲಿಕ ಮಳೆಯಿಂದ ತೊಗರಿ ಗಿಡದಲ್ಲಿ ಹೂ ಸರಿಯಾಗಿ ಬಿಡದ ಕಾರಣ, ಅದನ್ನು ಕಟಾವು ಮಾಡಲು ಅನ್ನದಾತರು ಹಿಂದೇಟು ಹಾಕುತ್ತಿರುವುದರಿಂದ ಆವಕ ಪ್ರಮಾಣ ಕಡಿಮೆಯಾಗಿದೆ. ಇನ್ನೊಂದು ವಾರದಲ್ಲಿ ತೊಗರಿ ಬೆಳೆ ಆವಕ ಪ್ರಮಾಣ ಅಧಿಕವಾಗುವ ಸಾಧ್ಯತೆಯೂ ಇದೆ. ಆಗ ಬೆಲೆ ನಿಯಂತ್ರಣಕ್ಕೆ ಬರಬಹುದು ಎನ್ನುತ್ತಾರೆ ಇಲ್ಲಿನ ಎಪಿಎಂಸಿ ಅಧಿಕಾರಿಗಳು.

ತೊಗರಿ ಬೆಳೆ ಮಾರುಕಟ್ಟೆಗೆ ನಿರೀಕ್ಷಿತ ಮಟ್ಟದಲ್ಲಿ ಬಂದಿಲ್ಲ. ಹೀಗಾಗಿ ಬೆಲೆ ಏರಿಕೆಯಾಗಿದೆ. ಮಳೆ ಪ್ರಮಾಣ ಕಡಿಮೆಯಾದ ಕಾರಣ ತೊಗರಿ ಹೂ ಬಿಟ್ಟಿಲ್ಲ. ಇನ್ನೂ ಸಾಕಷ್ಟು ರೈತರು ತೊಗರಿ ಕಟಾವು ಮಾಡಿಲ್ಲ. ಇನ್ನೊಂದು ವಾರದಲ್ಲಿ ತೊಗರಿ ಎಪಿಎಂಸಿ ಮಾರುಕಟ್ಟೆಗೆ ಬರುವ ಕಾರಣ ಬೆಲೆ ನಿಯಂತ್ರಣಕ್ಕೆ ಬರಲಿದೆ. | ಎಂ.ವಿ. ಶೈಲಜಾ, ಎಪಿಎಂಸಿ ಆಯುಕ್ತೆ