ಹೌದು, ಯಾವುದೇ ಕೆಲಸವಾಗಲಿ ಯಶಸ್ಸು ನೀಡಬೇಕೆಂದರೆ ಶ್ರದ್ಧೆ ಮುಖ್ಯ. ಜೀವನದಲ್ಲಿ ಎದುರಾಗುವ ಸಂದರ್ಭಗಳೇ ಹಾಗೆ. ಆಯ್ಕೆಯೋ, ಅನಿವಾರ್ಯತೆಯೋ, ಅದೃಷ್ಟದಾಟವೋ ಗೊತ್ತಿಲ್ಲ. ಒಟ್ಟು ಮುನ್ನುಗ್ಗಬೇಕು. ಸೋಲು-ಗೆಲುವು ನಂತರ. ಶ್ರದ್ಧೆ, ಸ್ಪಷ್ಟ ಗುರಿ ಮತ್ತು ಜವಾಬ್ದಾರಿಯ ಭಾರ ಇದ್ದಲ್ಲಿ ಅದು ತನಗರಿವಿಲ್ಲದಂತೆ ಎಲ್ಲವನ್ನೂ ಕಲಿಸುತ್ತದೆ. ಹೊಸ ದಾರಿ ಸಿಗುತ್ತದೆ. ಆತ ಓದಿದ್ದು ಇಂಜಿನಿಯರಿಂಗ್. ಬೆಂಗಳೂರಿನಂತಹ ಮೆಟ್ರೊ ಸಿಟಿಗೆೆ ಹೋಗಿ ಸಾಫ್ಟವೇರ್ ಕಂಪನಿಯಲ್ಲಿ ಕೆಲಸ ಮಾಡುವ ಮಹದಾಸೆ ಹೊಂದಿದ್ದ. ಅದಕ್ಕೆ ಪೂರಕ ಸಿದ್ಧತೆಯೂ ಅವನಲ್ಲಿತ್ತು. ಆದರೆ ಅನಾರೋಗ್ಯ್ಕಡಾಗಿದ್ದ ಆತನ ತಂದೆ ಇಹಲೋಕ ತ್ಯಜಿಸಿದರು. ಮನೆಯಲ್ಲಿ ತಾಯಿಯೊಬ್ಬಳೇ. ಮನೆಗೆ ಈತನೇ ಆಸರೆ. ಇದ್ದ ಊರು ಬಿಟ್ಟು ಹೋಗಲಾಗದ ಅನಿವಾರ್ಯತೆಯೂ ಆತನಿಗಿತ್ತು. ಈ ವೇಳೆ ಆತ ತಾಯಿಯ ಅಪೇಕ್ಷೆ ಮೇರೆಗೆ ಸ್ಥಳೀಯವಾಗಿ ಒಂದು ಹಾರ್ಡವೇರ್ ಶಾಪ್ ತೆರೆದ. ಹಂತ ಹಂತವಾಗಿ ಆ ವ್ಯವಹಾರದ ಎಲ್ಲ ಪಟ್ಟುಗಳನ್ನು ರೂಢಿಸಿಕೊಳ್ಳುತ್ತಾ ಹೋದ. ಶ್ರದ್ಧೆ ಹಾಗೂ ಪ್ರಾಮಾಣಿಕತೆಯಿಂದ ಶ್ರಮ ಹಾಕಿದ. ವ್ಯಾಪಾರ ಚಿಗುರಿತು. ದೂರದ ಊರಿಗೆ ಹೋಗಿ ಸಂಪಾದಿಸುವ ಹಣಕ್ಕಿಂತ ಹೆಚ್ಚು ಹಣ ಇದ್ದ ಊರಲ್ಲೇ ಬರಲಾರಂಭಿಸಿತು. ಮೇಲಾಗಿ ತಾಯಿಗೆ ಆಸರೆಯಾದ. ಈ ಪ್ರಕರಣ ಒಂದು ಉದಾಹರಣೆಯಷ್ಟೇ. ಇಂದಿಗೂ ನಮ್ಮ ಮಧ್ಯೆ ಇಂತಹ ಅಪರಿಚಿತ ವ್ಯಾಪಾರ ಮಾಡಿ ಯಶಸ್ಸು ಕಂಡವರು ಅನೇಕರಿದ್ದಾರೆ. ಅವರ ಕೈ ಹಿಡಿದಿದ್ದು ಕಾಯಕಶ್ರದ್ಧೆ ಮತ್ತು ಪ್ರಾಮಾಣಿಕ ಪ್ರಯತ್ನ.
ಜೀವನದಲ್ಲಿ ಎಲ್ಲವೂ ನಾವಂದುಕೊಂಡಂತೆ ಆಗುವುದಿಲ್ಲ. ಕಷ್ಟಗಳು, ಸಮಸ್ಯೆಗಳು ಕೆಲವೊಮ್ಮೆ ದಿಢೀರ್ ಎದುರಾಗುತ್ತವೆ. ಅನಿರೀಕ್ಷಿತ ಜವಾಬ್ದಾರಿ ಹೆಗಲೇರುತ್ತದೆೆ. ಆಗ ಧೃತಿಗೆಡದೇ ಎದುರಿಸುವ ಸಾಮರ್ಥ್ಯ, ಚಾಕಚಕ್ಯತೆ ಮತ್ತು ಮನೋಬಲ ನಮ್ಮಲ್ಲಿರಬೇಕು. ದೃಢ ಸಂಕಲ್ಪವೂ ಬೇಕು. ಆರಂಭದಲ್ಲಿ ಸೋಲಾಗಬಹುದು. ಆದರೆ ಅದುವೇ ಅಂತಿಮವಲ್ಲ. ಸತತ ಯತ್ನ, ಪ್ರಾಮಾಣಿಕ ಶ್ರಮ ಹಾಕಿದಲ್ಲಿ ಗೆಲುವು ನಮ್ಮದು. ನಮ್ಮ ನಾಡಿನ ಅನೇಕ ಸಾಧಕರ ಯಶೋಗಾಥೆಯನ್ನು ಒಮ್ಮೆ ಅವಲೋಕನ ಮಾಡಿ. ಯಾರೂ ದಿಢೀರನೆ ಯಶಸ್ಸಿನ ಮೆಟ್ಟಿಲು ಏರಿದವರಲ್ಲ. ಹಂತ ಹಂತವಾಗಿ ಪ್ರಾಮಾಣಿಕವಾಗಿ ಸವೆಸಿದ ದಾರಿ ಅವರನ್ನು ಸಾಧಕರನ್ನಾಗಿಸಿದೆ. ಇದು ಮಾದರಿಯಾಗಬೇಕು.
ಗುರಿಯನ್ನು ನೀವು ವಿಚಲಿತಗೊಳಿಸಿದರೆ ಸಾಧಿಸಲು ಸಾಧ್ಯವಿಲ್ಲ. ಯಶಸ್ಸಿಗೆ, ಜೀವನದ ಪ್ರತಿಯೊಂದು ನಿಮಿಷವೂ ಬಹಳ ಮುಖ್ಯವಾಗಿದೆ. ಶಿಸ್ತುಬದ್ಧ ಯೋಜನೆ, ಕಾರ್ಯತಂತ್ರ, ನಿರ್ಣಯ, ಸ್ಥಿರತೆ, ಸ್ವಯಂ ಮೌಲ್ಯಮಾಪನ ಮತ್ತು ಸಹಜವಾಗಿ ತಯಾರಿ ಸಾಧನೆಗೆ ಅಗತ್ಯವಿರುತ್ತದೆ. ಸಾಧನೆಯ ಕ್ಷೇತ್ರ ಹೊಸದಿರುವಾಗ ಒಂದಿಷ್ಟು ಹಿರಿಯರ ಅನುಭವ, ಮಾರ್ಗದರ್ಶನ ಮತ್ತು ಸ್ವಲ್ಪ ಅಧ್ಯಯನದ ಅಗತ್ಯವೂ ಇರುತ್ತದೆ. ನಮ್ಮ ಕಣ್ಣ ಮುಂದೆಯೇ ಎಷ್ಟೋ ಮಕ್ಕಳನ್ನ ನೋಡುತ್ತೇವೆ, ತಾವು ಇಚ್ಛೆಪಟ್ಟ ಶೈಕ್ಷಣಿಕ ಆಯ್ಕೆ ಸಿಗದೇ ಇದ್ದರೆ, ತಾವಂದುಕೊಂಡ ಹಾಗೇ ಶಿಕ್ಷಣ ಸಿಗದೇ ಇದ್ದಾಗ ಒಂದೆರಡು ವರ್ಷ ಕಾಲೇಜಿಗೆ ಹಾಜರಾದರೂ ಒಮ್ಮಿಂದೊಮ್ಮೆಲೇ ಕಾಲೇಜಿಗೂ ಹೊಗದೇ, ಇದ್ದ ಗುರಿ ಮುಟ್ಟದೇ, ಜೀವನದ ದಿಕ್ಕಿಗೆ ತಿಲಾಂಜಲಿ ಎಸೆಯುವ ಯುವಕರನ್ನು ನಾವು ಕಾಣುತ್ತೇವೆ. ಬೇಡಿದ್ದು ಎಲ್ಲರಿಗೂ ಸಿಕ್ಕೇ ಸಿಗುತ್ತದೆ ಎಂಬ ಭ್ರಮೆ ಬಿಡುವವರೆಗೂ ಮನುಷ್ಯನ ಪ್ರಯತ್ನ ಸಾಧನೆ ಶೂನ್ಯ. ಒಳ್ಳೆಯ ಮಾರ್ಗ ಮತ್ತು ಮಾರ್ಗದರ್ಶನ ಇದ್ದಾಗ ಮಾತ್ರ ಪಾಲಿಗೆ ಬಂದದ್ದು ಪಂಚಾಮೃತ ಆಗುತ್ತದೆ. ರುಚಿ ಮೊದಲೇ ಗೊತ್ತಿರದಿದ್ದರೆ, ರುಚಿಬೆಳೆಸಿಕೊಳ್ಳುವುದೇ ಜಾಣತನ. ಅದುವೇ ಬದುಕಲು ಕಲಿಯುವ ಜೀವನದ ಸಾರ!