| ಭಾರತಿ ಎ. ಕೊಪ್ಪ
ರಶ್ಮಿ ತರಗತಿಯ ಓದಿನಲ್ಲಿ ಮಧ್ಯಮ ಶ್ರೇಣಿಯ ವಿದ್ಯಾರ್ಥಿನಿ.10 ನೇ ತರಗತಿ ವೇಳೆಗೆ ಓದಿನಲ್ಲಿ ಆಸಕ್ತಿ ಕಡಿಮೆಯಾಗುತ್ತಾ ಬಂದು, ಪರೀಕ್ಷೆಯಲ್ಲಿ ಅನುತ್ತೀರ್ಣಳಾದಳು. ಮನೆಯ ಆರ್ಥಿಕ ಸಮಸ್ಯೆಯ ಕಾರಣದಿಂದ ಸಮೀಪದ ಬಟ್ಟೆ ಅಂಗಡಿಯಲ್ಲಿ ಕೆಲಸಕ್ಕೆ ಸೇರಿಕೊಂಡು ಓದಿಗೆ ತಿಲಾಂಜಲಿ ಇತ್ತಳು. ಒಬ್ಬ ಯುವಕನ ಜತೆಗೆ ಪ್ರೀತಿಯ ಸುಳಿಗೆ ಸಿಲುಕಿ ವರ್ಷ 18ಕ್ಕೆ ಬರುತ್ತಿದ್ದಂತೆ ವಿವಾಹವೂ ಆಯಿತು. 21 ನೇ ವಯಸ್ಸಿನ ಒಳಗೇ ಎರಡು ಮಕ್ಕಳ ತಾಯಿಯಾಗಿದ್ದ ರಶ್ಮಿ ಆಗಲೇ ಕೌಟುಂಬಿಕ ಕಲಹದಲ್ಲಿ ನೋವು ಅನುಭವಿಸುತ್ತಿದ್ದಳು.ತನ್ನ ಸಮಸ್ಯೆಗಳಿಗೆ ಆತ್ಮಹತ್ಯೆಯೇ ಪರಿಹಾರ ಎಂಬ ತೀರ್ವನಕ್ಕೆ ಬಂದು ಕೇವಲ 21 ನೇ ವಯಸ್ಸಿನಲ್ಲಿ ಎರಡು ಪುಟ್ಟ ಮಕ್ಕಳನ್ನು ಬಿಟ್ಟು ಜೀವನದ ಪಯಣ ನಿಲ್ಲಿಸಿದಳು. ರಶ್ಮಿಯಂತೆ ಅದೆಷ್ಟೋ ಹೆಣ್ಣು ಮಕ್ಕಳು ತಮ್ಮ ಬಾಲ್ಯ ಮತ್ತು ಶಿಕ್ಷಣವನ್ನು ಪೂರ್ಣಗೊಳಿಸುವ ಮೊದಲೇ ಬಾಲ್ಯ ವಿವಾಹಕ್ಕೆ ಕೊರಳೊಡ್ಡಿ ತಮ್ಮ ಬದುಕನ್ನು ಕತ್ತಲಾಗಿಸಿಕೊಂಡಿದ್ದಾರೆ. ಒಂದು ಉತ್ತಮ ಶಿಕ್ಷಣ ಪಡೆದು, ಆತ್ಮವಿಶ್ವಾಸದಿಂದ ಜೀವನ ನಡೆಸಬಲ್ಲೆ ಎಂಬ ವಯಸ್ಸಿನಲ್ಲಿ ಮದುವೆಯಾಗಬೇಕು.ಆಗ ಸಂಸಾರದಲ್ಲಿ ಕಠಿಣ ಪರಿಸ್ಥಿತಿಗಳು ಎದುರಾದರೆ ಧೈರ್ಯದಿಂದ ಎದುರಿಸಬಹುದು. ಹೆಣ್ಣು ಮಕ್ಕಳಿಗೆ 18 ವರ್ಷ, ಗಂಡು ಮಕ್ಕಳಿಗೆ 21 ವರ್ಷ ವಯಸ್ಸು ಕಡ್ಡಾಯವಾಗಿ ತುಂಬಿರಲೇಬೇಕು ಎಂಬುದು ನಮ್ಮ ದೇಶದಲ್ಲಿ ಮದುವೆಯ ಕಾನೂನು ಸಮ್ಮತ ವಯಸ್ಸಾಗಿದೆ.ಈ ನಿಗದಿತ ವಯಸ್ಸಿಗಿಂತ ಕಡಿಮೆ ವಯಸ್ಸಿನಲ್ಲಿ ವಿವಾಹ ನಡೆದರೆ ಅದು ಬಾಲ್ಯ ವಿವಾಹ ಎಂದು ಪರಿಗಣಿಸಲ್ಪಡುತ್ತದೆ. ಬಾಲ್ಯ ವಿವಾಹವು ಭವಿಷ್ಯದ ಜೀವನದಲ್ಲಿ ಸಾಕಷ್ಟು ಸಮಸ್ಯೆಗಳಿಗೆ ಕಾರಣವಾಗುತ್ತದೆ.
ಹದಿಹರೆಯದಲ್ಲಿ ವಿವಾಹ ಮಾಡುವುದರಿಂದ ಲೈಂಗಿಕತೆ, ಗರ್ಭಧಾರಣೆ ಮತ್ತು ತಾಯ್ತನದ ವಿಷಯದಲ್ಲಿ ಅನಾರೋಗ್ಯಕರ ಪರಿಣಾಮ ಬೀರುವ ಸಾಧ್ಯತೆ ಇದೆ. ಕೆಲವೊಮ್ಮೆ ಇದು ಮಾರಣಾಂತಿಕವೂ ಆಗಬಹುದು ಎಂದು ಅನೇಕ ಅಧ್ಯಯನಗಳು ಹೇಳುತ್ತವೆ.ಗರ್ಭಧಾರಣೆ ಮತ್ತು ಹೆರಿಗೆಗೆ ದೇಹ ಮತ್ತು ಮನಸ್ಸು ಎರಡೂ ಸಿದ್ಧವಾಗಿಲ್ಲದಿರುವುದು ಇದಕ್ಕೆ ಪ್ರಮುಖ ಕಾರಣವಾಗಿದೆ. ಅಪೌಷ್ಠಿಕತೆ ಕೂಡ ಇಲ್ಲಿ ಪ್ರಮುಖವಾಗಿರುತ್ತದೆ.ಹದಿಹರಯದ ತಾಯಂದಿರಿಗೆ ಜನಿಸುವ ಮಕ್ಕಳು ಕಡಿಮೆ ಜನನ ತೂಕ ಮತ್ತು ಅಕಾಲಿಕವಾಗಿ ಜನಿಸುವ ಸಾಧ್ಯತೆಯೂ ಇದೆ. 15-19 ವರ್ಷ ವಯಸ್ಸಿನ ಹದಿಹರೆಯದ ತಾಯಂದಿರು,20-24 ವರ್ಷಗಳ ನಡುವಿನ ತಾಯಂದಿರಿಗಿಂತ ರಕ್ತಹೀನತೆ ಸಮಸ್ಯೆಗಳನ್ನು ಅನುಭವಿಸುವ ಸಾಧ್ಯತೆ ಹೆಚ್ಚು. ವಿಶ್ವ ಆರೋಗ್ಯ ಸಂಸ್ಥೆಯು ಗರ್ಭಾವಸ್ಥೆಯ ನಂತರ ಸಾವಿನ ಅಪಾಯವು 20-24 ವರ್ಷ ವಯಸ್ಸಿನ ಮಹಿಳೆಯರಿಗಿಂತ 15-19 ವಯಸ್ಸಿನ ಹುಡುಗಿಯರಲ್ಲಿ ಎರಡು ಪಟ್ಟು ಹೆಚ್ಚು ಎಂದು ಅಂದಾಜಿಸಿದೆ.
ಭಾರತ ಸರ್ಕಾರ ಜಾರಿಗೊಳಿಸಿದ 2006 ರ ಬಾಲ್ಯ ವಿವಾಹ ತಡೆ ಕಾಯಿದೆಯಂತೆ ಪುರುಷರಿಗೆ 21 ವರ್ಷಗಳು ಮತ್ತು ಮಹಿಳೆಗೆ 18 ವರ್ಷಗಳು ಪೂರ್ಣಗೊಳ್ಳದೇ ಇದ್ದಲ್ಲಿ, ಆ ವ್ಯಕ್ತಿಯನ್ನು ಮಗು ಎಂದೇ ಪರಿಗಣಿಸಲಾಗುತ್ತದೆ. ಬಾಲ್ಯ ವಿವಾಹ ನಿಷೇಧ (ತಿದ್ದುಪಡಿ) ಮಸೂದೆ 2021ನ್ನು, ಡಿಸೆಂಬರ್ 2021ರ ಸಂಸತ್ತಿನ ಚಳಿಗಾಲದ ಅಧಿವೇಶನದಲ್ಲಿ ಕೇಂದ್ರ ಸಚಿವ ಸಂಪುಟವು ಪರಿಚಯಿಸಿತು. ಇದರಲ್ಲಿ ಹೆಣ್ಣು ಮಕ್ಕಳು ವಿವಾಹವಾಗುವ ಕಾನೂನುಬದ್ಧ ವಯಸ್ಸನ್ನು 18 ವರ್ಷದಿಂದ 21 ವರ್ಷಕ್ಕೆ ಏರಿಸುವ ಉದ್ದೇಶ ಹೊಂದಲಾಗಿದೆ. ಈ ಮಸೂದೆಯ ವಿವರವಾದ ಪರಿಶೀಲನೆಗಾಗಿ ಸಂಸದೀಯ ಸ್ಥಾಯಿ ಸಮಿತಿಗೆ ಕಳುಹಿಸಲಾಗಿದೆ.
ಇದನ್ನೂ ಓದಿ: ಎಂಎಲ್ಸಿ ಸ್ಥಾನಕ್ಕೆ ಬಾಬುರಾವ್ ಚಿಂಚನಸೂರ್ ರಾಜೀನಾಮೆ; ಮುಂದಿನ ನಡೆ?ಆರ್ಥಿಕ ಅಭದ್ರತೆ: ಕಡಿಮೆ ವಿದ್ಯಾರ್ಹತೆ ಪಡೆದು ಬಾಲ್ಯ ವಿವಾಹವಾದ ಹೆಣ್ಣು ಮಕ್ಕಳು ಕೌಟುಂಬಿಕ ಜೀವನದಲ್ಲಿ ಆರ್ಥಿಕ ಸಮಸ್ಯೆ ಉಂಟಾದಾಗ ಔದ್ಯೋಗಿಕ ನೆಲೆ ಕಂಡುಕೊಳ್ಳುವಲ್ಲಿ ಕಷ್ಟಪಡುವಂತಾಗುತ್ತದೆ.ಇನ್ನು 15-16 ನೇ ವಯಸ್ಸಿನಲ್ಲಿಯೇ ವಿವಾಹಿತರಾಗಿ ಆರ್ಥಿಕ ಅಗತ್ಯತೆಗಾಗಿ ದುಡಿಮೆಯಲ್ಲಿ ತೊಡಗಿದರೆ ಅವರು ಬಾಲ ಕಾರ್ವಿುಕರಾಗಿಯೇ ದುಡಿಯಬೇಕಾಗುತ್ತದೆ.ಕಾನೂನಿನ ದೃಷ್ಟಿಯಿಂದ ಬಾಲ ಕಾರ್ವಿುಕ ಮತ್ತು ಬಾಲ್ಯ ವಿವಾಹ ಎರಡೂ ತಪ್ಪುಗಳಿಗೆ ಸಿಲುಕಿದಂತಾಗುತ್ತದೆ.ಉದ್ಯೋಗದ ಭದ್ರತೆ ನೀಡುವ ಶಿಕ್ಷಣ ಪಡೆದ ಮೇಲಷ್ಟೇ ವಿವಾಹ ನಡೆದರೆ ಆರ್ಥಿಕವಾಗಿ ಚೈತನ್ಯ ಮೂಡುತ್ತದೆ.
ಇದನ್ನೂ ಓದಿ: ಫಾಕ್ಸ್‌ಕಾನ್ ಸೇರಿದಂತೆ 18 ಹೂಡಿಕೆ ಪ್ರಸ್ತಾವನೆಗಳಿಗೆ ಅನುಮೋದನೆ; 77,606 ಉದ್ಯೋಗಾವಕಾಶ ನಿರೀಕ್ಷೆಸಹಾಯವಾಣಿ: ಬಾಲ್ಯ ವಿವಾಹಗಳು ನಡೆಯುತ್ತಿರುವುದು ಗಮನಕ್ಕೆ ಬಂದರೆ ಸಾರ್ವಜನಿಕರು 1098ಗೆ ಕರೆ ಮಾಡಿ ಮಕ್ಕಳ ರಕ್ಷಣೆ ಮಾಡಬಹುದು. ಅಥವಾ ಒತ್ತಾಯದಿಂದ ವಿವಾಹದ ಸುಳಿಗೆ ಸಿಲುಕಿದ ಮಕ್ಕಳೇ ಸಹಾಯವಾಣಿಗೆ ಕರೆ ಮಾಡಿ ರಕ್ಷಣೆ ಕೋರಬಹುದು.ಸಾರ್ವಜನಿಕರು ನೆರೆಹೊರೆಯಲ್ಲಿ ನಡೆಯುತ್ತಿರುವ ಬಾಲ್ಯವಿವಾಹದ ಬಗ್ಗೆ ವಿಚಾರ ತಿಳಿದರೆ, ಸಮೀಪದ ಯಾವುದೇ ಪಂಚಾಯತ್ ಕಚೇರಿ, ಪೊಲೀಸ್ ಠಾಣೆ, ತಹಶಿಲ್ದಾರರು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಧಿಕಾರಿಗಳು,ತಾಲ್ಲೂಕು ವೈದ್ಯಾಧಿಕಾರಿ ಗಳು, ಶಿಕ್ಷಣಾಧಿಕಾರಿಗಳು, ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳು, ಜನ ಪ್ರತಿನಿಧಿಗಳು, ಇವರಿಗೆ ತಿಳಿಸಬಹುದು.
ಕನ್ಯೆಯರಿಗೆ ವಿದ್ಯೆಯ ಸೌಂದರ್ಯ ಸಜೀವ ಸೌಂದರ್ಯ, ಚಿನ್ನದ ಚೆಲುವು ಹೆಣದಂತೆ! ಬಣ್ಣ ಬಣ್ಣದ ಮಾರಂಚಿನ ಜರತಾರಿ ಸೀರೆಗಳು,ಸೇರು ಸೇರು ಚಿನ್ನ ಹೇರಿರುವ ನಯ ನಾಜೂಕಗಳಿಲ್ಲದ ತೊಡಕಾದ ತೊಡವುಗಳು! ಇವುಗಳೆಲ್ಲಾ ಏಕೆ? ಎಂದು ಕವಿ ಕುವೆಂಪು ಒಂದೆಡೆ ಹೇಳುತ್ತಾರೆ.ಹೆಣ್ಣು ಮಕ್ಕಳಿಗೆ ವಿದ್ಯೆಯ ಸೌಂದರ್ಯ ನೀಡಿದಾಗ ಮಾತ್ರ ಅವರ ಬಾಳು ಚಿನ್ನದಂತೆ ಹೊಳೆಯುತ್ತದೆ.ಅದರ ಬದಲಾಗಿ ಬೆಲೆ ಬಾಳುವ ಆಭರಣ, ಬಟ್ಟೆ ಎಲ್ಲವನ್ನೂ ತೊಡಿಸಿ ಚಿಕ್ಕ ವಯಸ್ಸಿನಲ್ಲೇ ವಿವಾಹ ಮಾಡಿ ಸಂಭ್ರಮಿಸಿದರೆ ಅದು ಬಾಳಿಗೆ ಬೆಳಕಾಗದೆ, ಬಾಳನ್ನು ಸಮಸ್ಯೆಗಳ ಕತ್ತಲೆಗೆ ತಳ್ಳುತ್ತದೆ. ಬಾಲ್ಯವಿವಾಹವು ಹೆಣ್ಣು ಮಕ್ಕಳ ಶಿಕ್ಷಣಕ್ಕೆ ತಡೆಗೋಡೆಯಂತೆ ನಿಲ್ಲುತ್ತದೆ. ಹೆಣ್ಣು ಮಕ್ಕಳು ಶಾಲೆಯಿಂದ ಹೊರಗುಳಿದಾಗ ಪಾಲಕರಲ್ಲಿ ವಿವಾಹದ ಯೋಚನೆ ಬರುವುದು ಹೆಚ್ಚು. ಶಿಕ್ಷಣವನ್ನು ಮೊಟಕುಗೊಳಿಸಿ ವಿವಾಹ ಬಂಧನಕ್ಕೆ ಒಳಗಾದಾಗ ಭವಿಷ್ಯದಲ್ಲಿ ಶಿಕ್ಷಣವನ್ನು ಮುಂದುವರೆಸುವ ಅವಕಾಶ ಕಡಿಮೆ ಆಗುತ್ತದೆ.ತಮ್ಮ ಕಡಿಮೆ ವಿದ್ಯಾರ್ಹತೆಯಿಂದ ಮುಂದೆ ತಮ್ಮ ಮಕ್ಕಳಿಗೆ ಶಿಕ್ಷಣ ಕೊಡಿಸುವಲ್ಲಿ ಕೂಡ ಈ ತಾಯಂದಿರು ಕಷ್ಟಪಡುವಂತಾಗುತ್ತದೆ.ಶಿಕ್ಷಣವನ್ನು ಅರ್ಧಕ್ಕೆ ನಿಲ್ಲಿಸಿ ಮದುವೆಯಾದಾಗ ಕೌಟುಂಬಿಕ ಜೀವನದಲ್ಲಿ ಮನೆಯ ಜವಾಬ್ದಾರಿ, ಮಕ್ಕಳ ಪಾಲನೆ-ಪೋಷಣೆಯ ಕೆಲಸಗಳ ನಡುವೆ ದೂರ ಶಿಕ್ಷಣದ ಮೂಲಕವಾದರೂ ಪದವಿ ಪೂರ್ಣಗೊಳಿಸುವ ಅವಕಾಶವನ್ನು ಕೂಡ ಕೆಲವು ಹೆಣ್ಣು ಮಕ್ಕಳು ಕಳೆದುಕೊಳ್ಳುತ್ತಾರೆ.
ಶೈಕ್ಷಣಿಕ ವ್ಯವಸ್ಥೆಯಲ್ಲಿ ಕರೊನ ಸಂದರ್ಭದಲ್ಲಿ ಶಾಲೆಗಳು ಮುಚ್ಚಿದ ಕಾರಣದಿಂದ ಹೆಚ್ಚು ಬಾಲ್ಯ ವಿವಾಹಗಳು ನಡೆದವು. ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ (ಘಇಆ)ದ 2020 ರ ಅಂಕಿ - ಅಂಶಗಳ ಪ್ರಕಾರ ಕರ್ನಾಟಕದಲ್ಲಿ ಆ ವರ್ಷದಲ್ಲಿ 184 ಬಾಲ್ಯ ವಿವಾಹ ಪ್ರಕರಣಗಳನ್ನು ದಾಖಲಿಸಲಾಗಿದೆ.ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ 2022 ರ ಅಂಕಿ - ಅಂಶಗಳ ಪ್ರಕಾರ್ ಕರ್ನಾಟಕದಲ್ಲಿ ಕಳೆದ 5 ವರ್ಷಗಳಲ್ಲಿ 8998 ಬಾಲ್ಯ ವಿವಾಹಗಳಿಗೆ ತಡೆ ಮಾಡಲಾಗಿದೆ.ಅದಲ್ಲದೇ ಕಳೆದ 5 ವರ್ಷಗಳಲ್ಲಿ ಬಾಲ್ಯವಿವಾಹಕ್ಕೆ ಒಳಪಟ್ಟ 278 ಮಕ್ಕಳನ್ನು ರಕ್ಷಣೆ ಮಾಡಿ ಮರಳಿ ಶಾಲೆಗೆ ಕಳುಹಿಸಲಾಗಿದೆ.
ಇದನ್ನೂ ಓದಿ: ವಿಮಾನದಲ್ಲೇ ಹೃದಯಾಘಾತ; ಆಕಾಶದಲ್ಲೇ ಹಾರಿಹೋದ ಪ್ರಾಣಪಕ್ಷಿಭಾವನಾತ್ಮಕ ದೃಢತೆಯ ಕೊರತೆ: ಬಾಲ್ಯ ವಿವಾಹದ ಸುಳಿಗೆ ಸಿಲುಕಿದ ಮಕ್ಕಳಲ್ಲಿ ಜವಾಬ್ದಾರಿ ತೆಗೆದುಕೊಳ್ಳುವಲ್ಲಿ ಭಾವನಾತ್ಮಕ ದೃಢತೆ ಕಡಿಮೆ ಇರುತ್ತದೆ.ಕುಟುಂಬದ ಆರ್ಥಿಕ ಪರಿಸ್ಥಿತಿ ಹದಗೆಟ್ಟರೆ,ಕೌಟುಂಬಿಕ ಭಿನ್ನಾಭಿಪ್ರಾಯಗಳು ಉಂಟಾದರೆ,ತಮ್ಮ ಮಕ್ಕಳು ಅನಾರೋಗ್ಯ ಪೀಡಿತರಾದರೆ ಅಂತಹ ಸಮಸ್ಯೆಗಳನ್ನು ಸಮರ್ಥವಾಗಿ ಎದುರಿಸುವಲ್ಲಿ ಹಿಂಜರಿಯುತ್ತಾರೆ. ಕೌಟುಂಬಿಕ ಹಿಂಸೆ ನಡೆದಾಗ ಕಡಿಮೆ ವಯಸ್ಸಿನ ಮಹಿಳೆಯರು ಖಿನ್ನತೆಗೆ ಒಳಗಾಗಿ ಆತ್ಮಹತ್ಯೆಯಂತಹ ಯೋಚನೆಗೆ ಬರುವುದು ಸಾಮಾನ್ಯವಾಗಿದೆ.
ಭಾರತೀಯ ಸಂಸ್ಕೃತಿಯಲ್ಲಿ ವಿವಾಹವು ತನ್ನದೇ ಆದ ಮಹತ್ವವನ್ನು ಪಡೆದಿದೆ.ವಿವಾಹದ ನಂತರದ ಕೌಟುಂಬಿಕ ಜೀವನ,ತಾಯ್ತನ,ಪಾಲಕರಾಗಿ ಜವಾಬ್ದಾರಿ ನಿರ್ವಹಣೆ ಇವೆಲ್ಲದಕ್ಕೂ ಮಾನಸಿಕ ಪರಿಪಕ್ವತೆ ಮತ್ತು ದೃಢತೆ ಬಹಳ ಮುಖ್ಯವಾಗುತ್ತದೆ.ಉತ್ತಮ ಸಮಾಜದ ನಿರ್ವಣದಲ್ಲಿ ಪ್ರತಿ ಕುಟುಂಬವೂ ತನ್ನದೇ ಆದ ಕೊಡುಗೆಗಳನ್ನು ನೀಡುತ್ತದೆ.ಬಾಲ್ಯ ವಿವಾಹದಂತಹ ಯೋಚನೆಗಳು ಪ್ರಬುದ್ಧ ಸಮಾಜದ ನಿರ್ವಣಕ್ಕೆ ಕಂಟಕವಾಗುತ್ತವೆ.ವಿವಾಹವು ಕಾನೂನು ಸಮ್ಮತವಾಗಿಯೂ,ಹೆಣ್ಣು ಮಕ್ಕಳ ಮುಂದಿನ ಬಾಳಿಗೆ ಹಿತಕರವಾಗಿಯೂ ಇರುವಂತೆ ನಡೆಸಬೇಕಾದುದು ಹಿರಿಯರ ಕರ್ತವ್ಯವಾಗಿದೆ.