| ವೀರೇಶ ಅಂಗಡಿ ಕೂಡ್ಲಿಗಿ
ಸಮಾಜದಲ್ಲಿ ಗೌರವಯುತ ಬದುಕು ಸಾಗಿಸಲು ಮುಂದಾದ ವಿಮುಕ್ತ ದೇವದಾಸಿಯರಿಗೆ ಶೇಂಗಾ ಚಿಕ್ಕಿ (ಸಿಹಿ ಬರ್ಫಿ) ಕೈಹಿಡಿದಿದೆ. ತಮ್ಮದೆ ಟ್ರಸ್ಟ್ ಮಾಡಿಕೊಂಡು, ಆ ಮೂಲಕ ಚಿಕ್ಕದೊಂದು ತಯಾರಿಕಾ ಘಟಕ ಸ್ಥಾಪಿಸಿ, ಆ ಮೂಲಕ ವಿಮುಕ್ತ ದೇವದಾಸಿಯರು ಯಶಸ್ವಿಯಾಗಿ ಸ್ವಾವಲಂಬಿ ಜೀವನ ನಡೆಸುತ್ತಿದ್ದಾರೆ.
ಸ್ವಾಭಿಮಾನಿ ಮತ್ತು ಸ್ವಾವಲಂಬಿ ಜೀವನ ನಡೆಸುವ ತುಡಿತವೇ ಸಾಧನೆಗೆ ಕಾರಣ. ಕೇವಲ ಸರ್ಕಾರದ ಮಾಸಾಶನ, ದೇವದಾಸಿ ಪುನರ್ವಸತಿ ಯೋಜನೆಡಿ ಸಬ್ಸಿಡಿ ಸಾಲದಿಂದ ಉದ್ದೇಶ ಈಡೇರುವುದಿಲ್ಲ ಎಂದರಿತಿರುವ ಮಹಿಳೆಯರೀಗ ಟ್ರಸ್ಟ್ ಮೂಲಕ ಜೀವನ ಕಟ್ಟಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.
ಬಹುತೇಕ ಎಲ್ಲರೂ ಮಾಸಾಶನ, ವೈಯುಕ್ತಿಕ ಸಬ್ಸಿಡಿ ಸಾಲ ಪಡೆದಿದ್ದಾರೆ. ಇದರಲ್ಲಿ ಊರಮ್ಮದೇವಿ ಮಾಜಿ ದೇವದಾಸಿ ಮಹಿಳೆಯರ ಸೇವಾ ಟ್ರಸ್ಟ್ ಹೆಸರಿನಡಿ 15 ಜನ ಸಮಾನ ಮನಸ್ಕರು ವಿಭಿನ್ನವಾಗಿ ಯೋಚಿಸಿದ್ದಾರೆ. ಇದರ ಪರಿಣಾಮ ಶೇಂಗಾ ಚಿಕ್ಕಿ (ಬರ್ಫಿ) ತಯಾರಿಕ ಘಟಕ ಆರಂಭಕ್ಕೆ ಕಾರಣವಾಗಿದೆ. ಸರ್ಕಾರದ ನೆರವಿನೊಂದಿಗೆ ಇದು ಸ್ವಯಂ ಉದ್ಯಮವಾಗಿ ರೂಪುಗೊಂಡಿದೆ.
ಸ್ವಂತ ಹೂಡಿಕೆ ಮಾಡಿದರು: ವಿಜಯನಗರ ಜಿಲ್ಲೆಯ ಹಿಂದಿನ ಡಿಸಿ ಅನಿರುದ್ಧ್ ಶ್ರವಣ್ ಮುತುವರ್ಜಿಯಿಂದ ಈ ಟ್ರಸ್ಟ್ ಅಸ್ತಿತ್ವಕ್ಕೆ ಬಂದಿದೆ. ಆದರೆ, ತಾಂತ್ರಿಕ ಕಾರಣಗಳಿಂದಾಗಿ ಈ ಟ್ರಸ್ಟ್ಗೆ ಸಹಾಯಧನ ಒದಗಿ ಬರಲಿಲ್ಲ. ಆದರೂ, ವಿಚಲಿತರಾಗದ ಈ ಮಹಿಳೆಯರು ಸ್ವಂತ ಹಣ ಹೂಡುವ ಮೂಲ ಛಲದಿಂದ ಮುನ್ನಡೆದಿದ್ದಾರೆ. ಬಹುತೇಕರ ಸಹಕಾರದಿಂದ ಒಂದು ಹಂತದ ಯಶಸ್ಸನ್ನು ಇವರು ಕಂಡಿದ್ದಾರೆ. ನಂತರದಲ್ಲಿ ತರಬೇತಿ ಪಡೆದು ಬಂದಿದ್ದ ಮಹಿಳೆಯರಿಗೆ ನಿರಂತರ ದುಡಿಮೆಗೆ ಅವಕಾಶ ಸಿಕ್ಕಿದೆ. ಚಿಕ್ಕಿ ಘಟಕ ಪ್ರಾರಂಭಿಸಿ ವರ್ಷವೂ ಪೂರ್ಣಗೊಂಡಿಲ್ಲ, ಆಗಲೇ ಲಾಭದತ್ತ ಮುಖಮಾಡಿದೆ.
ಬೆಲ್ಲದ ಪಾನಕ ಮಾಡುವುದು, ಶೇಂಗಾ ಹುರಿಯುವುದು, ಚಿಕ್ಕಿ ತಯಾರಿಸುವುದು, ಪ್ಯಾಕಿಂಗ್.. ಹೀಗೆ ಒಬ್ಬೊಬ್ಬರು ಒಂದೊಂದು ಕೆಲಸ ನಿರ್ವಹಿಸುತ್ತಾರೆ. ತಲಾ ಅರ್ಧ ಕ್ವಿಂಟಾಲ್ ಬೆಲ್ಲ ಮತ್ತು ಶೇಂಗಾದಿಂದ ಅಂದಾಜು 145 ಪ್ಯಾಕ್ ಶೇಂಗಾ ಚಿಕ್ಕಿ ಸಿದ್ಧಪಡಿಸುತ್ತಾರೆ. ದಿನವೊಂದಕ್ಕೆ ಸರಾಸರಿ 350 (45 ಪೀಸ್ಗೆ ಒಂದು ಪ್ಯಾಕ್) ಪ್ಯಾಕ್ ರೆಡಿ ಮಾಡಲಾಗುತ್ತದೆ. ಒಂದು ಚಿಕ್ಕಿ ಪೀಸ್ಗೆ ಬೆಲೆ 2.50 ರೂ., ಒಂದು ಪ್ಯಾಕ್ಗೆ 62.50 ರೂ. ಬೆಲೆ ನಿಗದಿ ಮಾಡಲಾಗಿದೆ. ಈ ದರವನ್ನು ಜಿಲ್ಲಾಡಳಿತ ನಿಗದಿಪಡಿಸಿದೆ.
ಬದುಕು ರೂಪಿಸಿಕೊಳ್ಳಲು ವಿಮುಕ್ತ ದೇವದಾಸಿಯರು ಚಿಕ್ಕಿ ಘಟಕ ಸ್ಥಾಪಿಸಿ ಯಶಸ್ವಿಯಾಗಿದ್ದಾರೆ. ಚಿಕ್ಕಿಗಳನ್ನು ಅಂಗನ ವಾಡಿ ಕೇಂದ್ರಗಳಿಗೆ ಪೂರೈಕೆ ಮಾಡಲಾಗುತ್ತಿದೆ. ಇಲಾಖೆಯಿಂದ ಸಂಪೂರ್ಣ ಸಹಕಾರವಿದೆ. | ನಾಗನಗೌಡ ಪಾಟೀಲ್ ಸಿಡಿಪಿಒ ಕೂಡ್ಲಿಗಿ ಉದ್ಯಮ ಉತ್ತಮವಾಗಿ ಸಾಗಲು ಬಂಡವಾಳ ಅಗತ್ಯ. ಲಭ್ಯವಿದ್ದ ಪರಿಕರಗಳಲ್ಲೇ ಆರಂಭಿಸಲಾದ ಉತ್ಪಾದನಾ ಘಟಕ ಇಲ್ಲಿಯವರೆಗೆ ಬಂದಿದೆ. ಸ್ವಂತ ಹಣದಿಂದ ಘಟಕ ಪ್ರಾರಂಭಿಸಿದ್ದರಿಂದ ಸಾಲದ ಹೊರೆ ಇದೆ. ನವೀನ ಮಾದರಿಯ ಘಟಕದ ನಿರ್ವಣಕ್ಕೆ ಪ್ರೋತ್ಸಾಹವನ್ನು ಸಂಬಂಧಪಟ್ಟ ಇಲಾಖೆ ನೀಡಬೇಕಿದೆ. | ಗಂಗಮ್ಮ ಊರಮ್ಮದೇವಿ ಟ್ರಸ್ಟ್ ಸದಸ್ಯೆ
ಶೇಂಗಾ, ಬೆಲ್ಲ, ಗ್ಯಾಸ್ ಸಿಲಿಂಡರ್ ದರ ಏರಿಕೆಯಾಗಿದ್ದರೂ ಹಳೆಯ ದರ ಮುಂದುವರಿಸಿಕೊಂಡು ಹೋಗಲಾಗುತ್ತಿದೆ. ಇದರಿಂದಾಗಿ ಲಾಭ ಅಷ್ಟಕಷ್ಟೇ ಎಂಬಂತಾಗಿದೆ. ಆರು ತಿಂಗಳಲ್ಲಿ ಅಂದಾಜು ಐದು ಲಕ್ಷ ಚಿಕ್ಕಿ ಪೀಸ್ಗಳನ್ನು ತಯಾರಿಸಲಾಗಿದೆ. ಬದುಕಿನ ಬಂಡಿ ಸಾಗಿಸವಷ್ಟು ಈಗಾಗಲೇ ಆದಾಯ ಬಂದಿದೆ. ಚಿಕ್ಕಿ ತಯಾರಿಕಾ ಘಟಕಕ್ಕೆ ಹೊಸ ಯಂತ್ರೋಪಕರಣಗಳ ಅಗತ್ಯ ಇದೆ. ಬಹುತೇಕ ಲಾಭಾಂಶ ಘಟಕದ ಬಲವರ್ಧನೆಗೆ ಮೀಸಲಾಗಿದೆ. ಒಟ್ಟಿನಲ್ಲಿ, ಚಿಕ್ಕಿಯಿಂದ ಗ್ರಾಹಕರ ಬಾಯಿಗೆ ಮತ್ತು ಮಹಿಳೆಯರ ಬದುಕಿಗೂ ಸಿಹಿ ತಂದಿದೆ.